ಊರವರ ಒಗ್ಗೂಡುವಿಕೆ ಅಭಿವೃದ್ಧಿಗೆ ಮೆಟ್ಟಿಲು

Column
Published on
ಎಲ್ಲರ ಒಗ್ಗೂಡುವಿಕೆ, ಶ್ರಮವಿದ್ದರೆ ಮಾತ್ರ ಕಾರ್ಯಗಳು ಯಶಸ್ವಿಯಾಗಲು ಸಾಧ್ಯ. ಹೂವು ಎಷ್ಟೇ ಪರಿಮಳ ಭರಿತವಾಗಿರಲಿ, ಹೂವನ್ನು ಪೋಣಿಸಲು ದಾರ ಬೇಕೇ ಬೇಕು. ಗಾಳಿಪಟ ಎಷ್ಟೇ ಮೇಲೆ ಹಾರಲಿ, ಅದು ಹಾರುವುದು ನೂಲಿನ ಸಹಾಯದಿಂದ. ಹಾಗಾಗಿ ಉತ್ಸವಗಳಲ್ಲಿ ಪ್ರತಿಯೊಬ್ಬರ ಭೂಮಿಕೆಯೂ ಮಹತ್ವವಾಗಿರುತ್ತದೆ.

ಕಳೆದೊಂದು ದಶಕದಿಂದ ನಮ್ಮಲ್ಲಿ ಸಾಕಷ್ಟು ದೇವಸ್ಥಾನಗಳು, ದೈವಸ್ಥಾನಗಳು ಜೀಣೋದ್ಧಾರಗೊಂಡಿವೆ. ಸಂತೋಷದ ಸಂಗತಿಯೆಂದರೆ ಹೊಸ ಶ್ರದ್ಧಾಕೇಂದ್ರಗಳ ನಿರ್ವಣಕ್ಕಿಂತ ಹೆಚ್ಚಾಗಿ ಇರುವ ಶ್ರದ್ಧಾಕೇಂದ್ರಗಳನ್ನು ಉಳಿಸಿ, ಅಭಿವೃದ್ಧಿಗೊಳಿಸಲು ಜನರೇ ಸ್ವಯಂಪ್ರೇರಿತವಾಗಿ ಮುಂದೆ ಬರುತ್ತಿದ್ದಾರೆ. ಅದಕ್ಕಾಗಿ ಜೀಣೋದ್ಧಾರ ಸಮಿತಿಯನ್ನು ರಚಿಸಿಕೊಂಡು ಊರ-ಪರವೂರ ಭಕ್ತರು, ದಾನಿಗಳ ಹಾಗೂ ಸಜ್ಜನ ಬಂಧುಗಳ ಸಹಕಾರದಿಂದ ದೇವಸ್ಥಾನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅನೇಕರು ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ನಮ್ಮ ಕ್ಷೇತ್ರಕ್ಕೆ ಬರುತ್ತಿರುತ್ತಾರೆ. ಅವರ ಕಾರ್ಯಚಟುವಟಿಕೆ, ಯೋಜನೆಗಳನ್ನು ಪರಿಶೀಲಿಸಿ ಅರ್ಹರಿಗೆ ಆರ್ಥಿಕ ನೆರವನ್ನು ಶ್ರೀ ಕ್ಷೇತ್ರದಿಂದ ನೀಡಲಾಗುತ್ತಿದೆ. ಜೀಣೋದ್ಧಾರದ ಕೆಲಸಗಳೆಲ್ಲ ಮುಗಿದ ಬಳಿಕ ಧಾರ್ವಿುಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನ್ನನ್ನು ಆಹ್ವಾನಿಸುವುದೂ ಉಂಟು; ಸಮಯಾವಕಾಶವಿದ್ದಾಗ ಭಾಗವಹಿಸುತ್ತೇನೆ.

ಯಾವುದೇ ಕ್ಷೇತ್ರವನ್ನು ಪುನರ್​ನಿರ್ವಣ, ಜೀಣೋದ್ಧಾರ ಮಾಡುವವರಿಗೆ ಸಹಕಾರದ ಜೊತೆಗೆ ದುಂದುವೆಚ್ಚ ಮಾಡದಿರಿ, ಊರಿನ ಸರ್ವಜನರ ವಿಶ್ವಾಸದೊಡನೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿರಿ. ಧಾರ್ವಿುಕ ಕಾರ್ಯಕ್ರಮಗಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡುತ್ತೇನೆ. ಇಂತಹ ಕಾರ್ಯಕ್ರಮಗಳಿಗೆ ಹೋದಾಗ ಅಲ್ಲಿನ ಆಯೋಜಕರು, ವಿವಿಧ ಸಮಿತಿಯ ಸದಸ್ಯರು, ಕಾರ್ಯರ್ತರ ಕೆಲಸ ಕಾರ್ಯಗಳನ್ನು ವೀಕ್ಷಿಸುತ್ತೇನೆ.

ಕಾರ್ಯಕ್ರಮ ಸಣ್ಣದಿರಲಿ, ದೊಡ್ಡದಿರಲಿ ಅದು ಯಶಸ್ವಿಯಾಗುವುದು ಭಕ್ತರು, ಅತಿಥಿಗಳು ಸಂತೋಷ, ನಗುಮುಖದಿಂದ ತೆರಳಿದಾಗಲೇ. ಶಿಲ್ಪಿಗಳು, ಬಡಗಿಗಳು, ವೈದಿಕರು, ಸ್ವಯಂಸೇವಕ ಶ್ರಮದಾನಿಗಳು, ಆರ್ಥಿಕ ದಾನಿಗಳು, ಚಪ್ಪರ ಹಾಕುವವರು, ಅಡುಗೆಯವರು ಹೀಗೆ ಪ್ರತಿಯೊಬ್ಬರ ಕೆಲಸವೂ ಬಹು ಮುಖ್ಯವಾಗುತ್ತದೆ. ಇವರೆಲ್ಲರು ಒಟ್ಟಾಗಿ ಕಾರ್ಯನಿರ್ವಹಿಸುವಾಗ ಊರಿನಲ್ಲಿ ಒಗ್ಗಟ್ಟು ಮೂಡಿ ಸಹಬಾಳ್ವೆಯ ಜೀವನ ಇನ್ನಷ್ಟು ಸುಗಮವಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಧಾರ್ವಿುಕ ಕಾರ್ಯಕ್ರಮ, ಪೂಜೆ ಮುಂತಾದ ಕಾರ್ಯಕ್ರಮಗಳನ್ನು ಬಹಳ ವಿಶೇಷವಾಗಿ ನಡೆಸುತ್ತಾರೆ. ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ತಂಡಗಳು ಊರವರ ಸಹಕಾರದೊಂದಿಗೆ ಸತ್ಯನಾರಾಯಣ ಪೂಜೆ ಮುಂತಾದ ಧಾರ್ವಿುಕ ಕಾರ್ಯಕ್ರಮಗಳನ್ನು ವರ್ಷಕ್ಕೊಮ್ಮೆ ಹಮ್ಮಿಕೊಳ್ಳುತ್ತವೆ. ಇಲ್ಲಿ ಸ್ವ ಸಹಾಯ ಸಂಘದ ಪದಾಧಿಕಾರಿಗಳೇ ಕಾರ್ಯಕ್ರಮದ ಎಲ್ಲ ಜವಾಬ್ದಾರಿಗಳನ್ನು ಹಂಚಿಕೊಂಡು ಮಾಡುತ್ತಾರೆ. ಹಳ್ಳಿಗಳಲ್ಲೇ ದೊರೆಯುವ ಪ್ರಾಕೃತಿಕ ವಸ್ತುಗಳನ್ನು ಉಪಯೋಗಿಸಿಕೊಂಡು ಚಪ್ಪರ, ಸಭಾಂಗಣ ಅಲಂಕಾರ ಮಾಡುತ್ತಾರೆ. ಉದಾಹರಣೆಗೆ ಕರಾವಳಿಯಲ್ಲಿ ಅಡಕೆ ಮರದ ಕಂಬಗಳನ್ನು ನೆಟ್ಟು ಅಡಕೆ ಸೋಗೆ, ತೆಂಗಿನ ಗರಿಗಳನ್ನು ಉಪಯೋಗಿಸಿ ಸುಂದರವಾದ ಚಪ್ಪರ ಮಾಡುತ್ತಾರೆ. ಇದನ್ನು ನಿರ್ವಿುಸಲು ಊರವರೆಲ್ಲರೂ ಸೇರಿಕೊಂಡು ಶ್ರಮದಾನದ ಮೂಲಕ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಮಹಿಳೆಯರು, ಮಕ್ಕಳೆಲ್ಲ ಭಾಗಿಯಾಗಿಮನೆಯ ಕಾರ್ಯಕ್ರಮವೆಂಬಂತೆ ಶ್ರಮದಾನ ಮಾಡುತ್ತಾರೆ. ಈ ಪೂಜಾ ದಿನ ನಿಗದಿಯಾದ ಕೂಡಲೇ ಮಾಂಸಾಹಾರ ಸೇವನೆಯನ್ನೂ ನಿಲ್ಲಿಸಿ ಶ್ರದ್ಧೆ-ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.

ಕೆಲವೆಡೆಗಳಲ್ಲಿ ಜೀಣೋದ್ಧಾರ ಕಾರ್ಯಗಳ ಆರಂಭಿಕ ಹುಮ್ಮಸ್ಸು ಕಡೆಯ ತನಕ ಉಳಿಯದೆ ಅಯೋಜನೆ ಅಸ್ತವ್ಯಸ್ತವಾದದನ್ನೂ ಗಮನಿಸಿದ್ದೇನೆ. ಎಲ್ಲರನ್ನೂ ಒಟ್ಟಾಗಿ ಮುನ್ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಎಡವಿ ನಾಯಕತ್ವ, ಮಾರ್ಗದರ್ಶನದ ಕೊರತೆಯಿಂದ ಬ್ರಹ್ಮಕಲಶಾಭಿಷೇಕ, ಉತ್ಸವದ ಸಂದರ್ಭದಲ್ಲಿ ವ್ಯವಸ್ಥೆಗಳಲ್ಲಿ ಲೋಪಗಳು ಆಗುತ್ತವೆ.

ರಾಮಾಯಣದಲ್ಲಿ ರಾಮಸೇತು ನಿರ್ವಣದ ಸಂದರ್ಭ ಅಳಿಲಿನ ಸೇವೆಯ ಅಗತ್ಯವನ್ನು ರಾಮನು ಹೇಗೆ ಗುರುತಿಸಿದನೋ ಅಂತೆಯೇ ಎಲ್ಲರ ಒಗ್ಗೂಡುವಿಕೆ, ಶ್ರಮವಿದ್ದರೆ ಮಾತ್ರ ಕಾರ್ಯಗಳು ಯಶಸ್ವಿಯಾಗಿ ಸಂಪನ್ನಗೊಳ್ಳಲು ಸಾಧ್ಯ. ಒಂದು ಚಕ್ರ ಚಲಿಸಲು ಸಣ್ಣ ಸ್ಪ್ರಿಂಗ್​ನ ಅವಶ್ಯಕತೆಯೂ ಇದೆ. ಹೂವು ಎಷ್ಟೇ ಪರಿಮಳ ಭರಿತವಾಗಿರಲಿ, ಹೂವನ್ನು ಪೋಣಿಸಲು ದಾರ ಬೇಕೇ ಬೇಕು. ಗಾಳಿಪಟ ಎಷ್ಟೇ ಮೇಲೆ ಹಾರಲಿ, ಅದು ಹಾರುವುದು ನೂಲಿನ ಸಹಾಯದಿಂದ. ಹಾಗಾಗಿ ಉತ್ಸವಗಳು ನಡೆಯುವ ಸಂದರ್ಭದಲ್ಲಿ ಪ್ರತಿಯೊಬ್ಬರ ಭೂಮಿಕೆಯೂ ಮಹತ್ವವಾಗಿರುತ್ತದೆ. ನಮ್ಮ ಊರಿನ ಉತ್ಸವ, ನಮ್ಮ ದೇವಸ್ಥಾನ ಎನ್ನುವ ಭಾವನೆ ಇದ್ದರೆ ಮಾತ್ರ ದೇವರೂ ಒಲಿದು ಬರುತ್ತಾನೆ.

ಆರ್ಥಿಕ ಶಿಸ್ತು ಪಾಲಿಸದಿದ್ದರೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದರೂ ಬಳಿಕ ಖರ್ಚು ವೆಚ್ಚಗಳ ಚರ್ಚೆಯಾದಾಗ ಗೊಂದಲ, ವಾದ-ವಿವಾದ ಪ್ರಾರಂಭಗೊಳ್ಳುತ್ತದೆ. ಹಾಗಾಗಿ, ಎಲ್ಲದಕ್ಕೂ ನೀಲಿನಕ್ಷೆಯನ್ನು ಹಾಕಿಟ್ಟುಕೊಳ್ಳಬೇಕು. ಒಂದು ಇತಿಮಿತಿ, ಲಕ್ಷ್ಮಣಗೆರೆಯನ್ನು ಎಳೆಯಬೇಕು. ಹಾಗಾಗಿ ನಾನು ಸಂಗ್ರಹದ ಹಣವನ್ನು ಕೇವಲ ಜೀಣೋದ್ಧಾರ, ಬ್ರಹ್ಮಕಲಶಕ್ಕೆ ಮಾತ್ರ ಸೀಮಿತಗೊಳಿಸಿ ಖರ್ಚು ಮಾಡದಿರಿ, ನಿತ್ಯ ಪೂಜಾ ಕೈಂಕರ್ಯಗಳಿಗೆ, ಆಡಳಿತ ವ್ಯವಸ್ಥೆಗೆ ಹಣ ಬೇಕಾಗುವುದರಿಂದ ಆದಷ್ಟು ಉಳಿತಾಯದ ಕಡೆ ಗಮನ ಕೊಡಿ ಎಂದು ಹೇಳುತ್ತೇನೆ.

ಶಿಸ್ತು ಎನ್ನುವುದು ಪ್ರತಿಯೊಂದು ವಿಚಾರದಲ್ಲಿ ಬರಬೇಕು. ನಮ್ಮ ನಾಡಿನ ಬಹುತೇಕ ಕ್ಷೇತ್ರಗಳಲ್ಲಿ ಅನ್ನದಾಸೋಹ ಅಥವಾ ಅನ್ನ ಪ್ರಸಾದ ವಿತರಣೆ ಇದ್ದೇ ಇರುತ್ತದೆ. ಭಕ್ತರು, ಪ್ರವಾಸಿಗರು ಎಷ್ಟು ಬೇಕೋ ಅಷ್ಟನ್ನು ಹಾಕಿಸಿಕೊಂಡು ಅನ್ನ ಪ್ರಸಾದ ಸೇವಿಸಿದರೆ ಎಲ್ಲರಿಗೂ ಸಂತೋಷ. ಬದಲಾಗಿ ತಟ್ಟೆ ತುಂಬಾ ಹಾಕಿಸಿಕೊಂಡು ಉಳಿದುದನ್ನು ಚೆಲ್ಲಿದರೆ ಅದು ಒಂದು ರೀತಿಯಲ್ಲಿ ದ್ರೋಹ ಬಗೆದಂತೆ ಅಲ್ಲವೇ? ಬೀಡಿನಲ್ಲಿ ಕೂತು ಮಾತನಾಡುತ್ತಿದ್ದಾಗ ಒಬ್ಬರು, ‘ಇಂದು ಒಂದು ಗೃಹಪ್ರವೇಶ ಇತ್ತು. ಸಿಂಪಲ್ಲಾಗಿ ಅದ್ದೂರಿಯಾಗಿ ಮಾಡಿದರು’ ಅಂದರು. ನನಗೂ ಅವರ ಮಾತಿನ ಅರ್ಥ ಅರಿವಾಯಿತು. ಅದ್ದೂರಿ ಎಂದರೆ ಆಡಂಬರ ಅಲ್ಲ. ಚಿಕ್ಕದಾಗಿ ಚೊಕ್ಕದಾಗಿ ಮಾಡಿದರೂ ಶಿಸ್ತುಬದ್ಧವಾಗಿ ಮಾಡುವುದೇ ಅದ್ದೂರಿತನ.

ಊರಿನ ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಸ್ಥಳೀಯರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ನೀಡುವುದು, ಭಜನಾ ಸೇವೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವುದು, ದೇಸಿ ಕಲೆ, ಕಲಾವಿದರನ್ನು ಬೆಳೆಸುವುದು, ಪರಂಪರೆಯನ್ನು ಉಳಿಸುವುದು ನಮ್ಮ ಆದ್ಯಕರ್ತವ್ಯವಾಗಬೇಕು. ಇತ್ತೀಚಿನ ದಿನಗಳಲ್ಲಿ ಭಜನಾ ಸಂಸ್ಕೃತಿ ನಮ್ಮಲ್ಲಿ ಹೆಚ್ಚಿರುವುದು ಸಂತಸದ ಸಂಗತಿ. ಈ ಭಜನಾ ಮಂಡಳಿಗಳು ಗ್ರಾಮವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಹಿಂದೆಲ್ಲ ಜಾತ್ರೆ ಎಂದರೆ ಊರೆಲ್ಲ ತಳಿರು ತೋರಣಗಳಿಂದ ಸಿಂಗರಿಸಲಾಗುತ್ತಿತ್ತು. ನನಗೂ ನನ್ನ ಸಹೋದರರಿಗೂ ಧರ್ಮಸ್ಥಳ ಲಕ್ಷದೀಪೋತ್ಸವ ಮತ್ತು ವಿಷು ಜಾತ್ರೆಯ ಆಕರ್ಷಣೆಯೇ ಹೆಚ್ಚು. ಜಾತ್ರೆಗೆಂದು ದೂರದ ಊರಿನಲ್ಲಿದ್ದ ಊರವರು ಕುಟುಂಬ ಸಮೇತರಾಗಿ, ಮದುವೆಯಾದ ಹೆಣ್ಣುಮಕ್ಕಳೆಲ್ಲ ತವರೂರಿಗೆ ಜಾತ್ರೆಗೆ ಆಗಮಿಸುತ್ತಿದ್ದರು. ಹಳೇ ನೆನಪು ಹಂಚಿಕೊಂಡು ಎಲ್ಲ ಮನೆಯಲ್ಲಿ ಹಬ್ಬದ ವಾತಾವರಣ ಉಂಟಾಗುತ್ತಿತ್ತು. ಆದರೆ, ಇಂದು ಬದಲಾಗಿದೆ. ಊರಿನ ಜಾತ್ರೆ ಉತ್ಸವ ಹಬ್ಬಗಳಿಗೆ ಪ್ರಾಧಾನ್ಯ ಕೊಡಲೇಬೇಕು ಮತ್ತು ಈ ಮೂಲಕ ಸರ್ವಧರ್ಮದ ಭಾವೈಕ್ಯತೆಯ ಜೊತೆಗೆ ಸನಾತನ ಧರ್ಮದ ಎಲ್ಲ ಜಾತಿ ಸಮುದಾಯಗಳಲ್ಲಿ ಸಮಾನತೆ ಏಕತೆ, ಒಗ್ಗಟ್ಟು ಉಂಟಾಗಲು ಎಲ್ಲರೂ ಏಕಸ್ತರಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಶ್ಯಕತೆ ಇದೆ.

ಪಾರಂಪರಿಕ ಶ್ರದ್ಧಾ ಕೇಂದ್ರಗಳು ವಾಸ್ತು ಶಿಲ್ಪ ಕಲಾವೈವಿಧ್ಯತೆಯಿಂದ ಸಂಪದ್ಭರಿತವಾಗಿದ್ದವು. ದೇಗುಲಗಳು ಶಿಥಿಲವಾದಾಗ ಹಳೆಯ ವಾಸ್ತುಶಿಲ್ಪವನ್ನೇ ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಿ ಜೀಣೋದ್ಧಾರ ಮಾಡಬೇಕು. ನಮ್ಮ ಪ್ರಾಚೀನ ಸಂಸ್ಕೃತಿ ಇದರಿಂದ ಉಳಿಸಿದಂತಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧಮೋತ್ಥಾನ ಟ್ರಸ್ಟ್ ಮೂಲಕ ಸರಕಾರದ ಸಹಯೋಗದಲ್ಲಿ ದೇವಳದ ಕಲೆ ಸಂಸ್ಕೃತಿಯನ್ನು ಉಳಿಸಿ, ವಾಸ್ತುಶಿಲ್ಪದ ಮೂಲ ಸ್ವರೂಪದಲ್ಲೇ ದೇವಾಲಯದ ಜೀಣೋದ್ಧಾರ ಮಾಡಲಾಗುತ್ತಿದೆ.

ಸ್ವಚ್ಛತೆಗೆ ಆದ್ಯತೆ ನೀಡುವುದು ಅತ್ಯಂತ ಅಗತ್ಯ. 2016ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಶ್ರದ್ಧಾಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಆರಂಭಿಸಲಾಗಿತ್ತು. ಅಂದಿನಿಂದ ಪ್ರತಿ ವರ್ಷ ಜನವರಿ 14ರ ಮಕರ ಸಂಕ್ರಾಂತಿಯಂದು ಮತ್ತು ಆಗಸ್ಟ್ 15 ಸ್ವಾತಂತ್ರೊ್ಯೕತ್ಸವದಂದು ವರ್ಷದಲ್ಲಿ ಎರಡು ಬಾರಿಯಂತೆ 10 ಸಾವಿರಕ್ಕೂ ಹೆಚ್ಚು ಶ್ರದ್ಧಾಕೇಂದ್ರಗಳ ಸ್ವಚ್ಛತೆ ಕಾರ್ಯವನ್ನು ಊರವರ ಸಹಕಾರದೊಂದಿಗೆ ಮಾಡಿಕೊಂಡು ಬರಲಾಗುತ್ತಿದೆ. ಇದರಿಂದ ಪ್ರೇರಿತರಾದ ಅನೇಕರು ವಾರಕ್ಕೊಮ್ಮೆ, ತಿಂಗಳಿಗೊಮ್ಮೆಯಂತೆ ಊರಿನ ಧಾರ್ವಿುಕ ಕೇಂದ್ರಗಳನ್ನು ಸ್ವಯಂಪ್ರೇರಿತರಾಗಿ ಸ್ವಚ್ಛಗೊಳಿಸುತ್ತಾರೆ. ಸಮಿತಿಗಳನ್ನು ರಚಿಸಿಕೊಂಡು ಧಾರ್ವಿುಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯುವಂತೆ ಗಮನವಹಿಸುತ್ತಾರೆ. ಮದ್ಯವ್ಯಸನಿಗಳ, ಪುಂಡು-ಪೋಕರಿಗಳ ತಾಣವಾಗಿ ಪಾಳು ಬಿದ್ದ ಸ್ಥಿತಿಯಲ್ಲಿದ್ದ ಸಾಕಷ್ಟು ದೇಗುಲಗಳು ಇಂದು ಊರವರ ಶ್ರದ್ಧೆ-ಭಕ್ತಿಯಿಂದ ಶಕ್ತಿಕೇಂದ್ರಗಳಾಗಿ, ಭಕ್ತಿಕೇಂದ್ರವಾಗಿ ಮಾರ್ಪಟ್ಟಿದೆ.

ಇಂದಿನ ದಿನಗಳಲ್ಲಿ ಮದುವೆ ಕಾರ್ಯಕ್ರಮವಿರಲಿ, ಗೃಹಪ್ರವೇಶ ಇರಲಿ ಆರ್ಥಿಕ ಸ್ಥಿತಿ ಉತ್ತಮವಿದ್ದರೆ ಎಲ್ಲವೂ ಸಾಂಗವಾಗಿ ನೆರವೇರುತ್ತದೆ. ಮದುವೆ ಮನೆಯಲ್ಲಿ ಶಾಮಿಯಾನದವರು ಶಾಮಿಯಾನ, ಕುರ್ಚಿ, ಅಲಂಕಾರ ಮಾಡಿ ಹೋಗುತ್ತಾರೆ. ಅಡುಗೆಯವರು ಫಲಾಹಾರ, ಊಟ ಬಡಿಸುತ್ತಾರೆ. ಬಂಧುಗಳು, ಗೆಳೆಯರೂ ಅಷ್ಟೇ. ಧಾರಾ ಮುಹೂರ್ತದ ಸಮಯಕ್ಕೆ ಬಂದು ಮದುಮಕ್ಕಳನ್ನು ಆರ್ಶೀವದಿಸಿ, ಊಟ ಮಾಡಿ ತೆರಳುತ್ತಾರೆ. ಒಂದೇ ದಿನದಲ್ಲಿ ಎಲ್ಲವೂ ನಡೆಯುತ್ತದೆ. ಆದರೆ, ಈಗ ಹತ್ತು ಹದಿನೈದು ವರುಷಗಳ ಹಿಂದೆ ಮದುವೆಯೆಂದರೆ 2-3 ತಿಂಗಳಿನಿಂದ ಪ್ರಾರಂಭವಾಗುತ್ತಿತ್ತು. ಚಪ್ಪರ ಹಾಕುವುದು, ಅಡುಗೆ ಸಿದ್ಧತೆ, ಆಮಂತ್ರಣ ಹೀಗೆ ವ್ಯವಸ್ಥೆಗಳಿದ್ದರೆ ನೆಂಟರಿಷ್ಟರು ಒಂದು ವಾರ ಮೊದಲೇ ಬಂದು, ಕಣ್ಣಿಗೆ ತೋಚುವ ಕೆಲಸವನ್ನೆಲ್ಲ ತಮ್ಮ ಮನೆಯ ಕಾರ್ಯಕ್ರಮದಂತೆ ನಿಂತು ಮಾಡುವ ಕಾಲವಿತ್ತು.

ಮಹಾನಗರಗಳಲ್ಲಿ ಮದುವೆ, ಉಪನಯನ ನಿಶ್ಚಿತಾರ್ಥ ಮುಂತಾದ ಕಾರ್ಯಕ್ರಮಗಳನ್ನು ಕಲ್ಯಾಣಮಂಟಪ, ಹೊಟೇಲ್​ಗಳಲ್ಲಿ ನಡೆಸುವ ಪರಿಪಾಠ ಇದ್ದು ಇದೀಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ. ಎಲ್ಲಾ ಕಾರ್ಯಕ್ರಮಗಳನ್ನು ಕಾಂಟ್ರಾ್ಯಕ್ಟ್ ಕೊಡುವ ವ್ಯವಸ್ಥೆ ಹೆಚ್ಚಾಗಿದ್ದು, ಇದರಿಂದ ಸಂಬಂಧಿಕರು ಬಂಧು ಬಳಗವೆಲ್ಲ ಕಾರ್ಯಕ್ರಮದಲ್ಲಿ ಪ್ರೇಕ್ಷಕರಂತೆ ಭಾಗವಹಿಸುತ್ತಾರೆ ಹೊರತು ತಮ್ಮ ಮನೆಯ, ತಮ್ಮವರ ಕಾರ್ಯಕ್ರಮ ಎಂಬ ಭಾವನೆ ಉಂಟಾಗಲು ಅವಕಾಶ ಇರುವುದಿಲ್ಲ.

ಕೆಲವು ಕಡೆ ನಾನು ಕಂಡ ಹಾಗೆ ಮದುವೆ ಮುಹೂರ್ತಕ್ಕೆ ಸರಿಯಾಗಿ ಹೋದಲ್ಲಿ ಜನಜಂಗುಳಿಯಾಗುತ್ತದೆ ಎಂದು ವಿಳಂಬವಾಗಿ ಹೋಗುತ್ತಾರೆ. ಇಲ್ಲವೇ ಬೇಗ ಹೋಗುತ್ತಾರೆ. ಮದುವೆ ಎನ್ನುವಂತಹದ್ದು ಕುಟುಂಬದ ಒಗ್ಗಟ್ಟು ಮತ್ತು ಕೂಡುವಿಕೆಯ ಕಾರ್ಯಕ್ರಮವಾಗುವ ಬದಲು ತೋರಿಕೆಗೆ ನಡೆಸುವಂತೆ ಅನಿಸುತ್ತದೆ. ಇದೇ ವಿಚಾರ ನಮ್ಮ ಊರಿನ ಉತ್ಸವ ಜಾತ್ರೆಗಳಿಗೂ ಅನ್ವಯಿಸುತ್ತದೆ.

ದೇಗುಲಗಳ ಜೀಣೋದ್ಧಾರ ಕಾರ್ಯಕ್ರಮಗಳಲ್ಲೂ ಊರಿನವರೆಲ್ಲ ಒಗ್ಗೂಡಿಕೊಂಡು ಕಾರ್ಯಕ್ರಮ ನಿರ್ವಹಣೆ ಮಾಡಿದಾಗ ಎಲ್ಲರಲ್ಲಿ ಆತ್ಮೀಯತೆ ಮೂಡಿ ಬಾಂಧವ್ಯ ವೃದ್ಧಿಸುವುದು. ನಮ್ಮ ಊರು, ನಮ್ಮ ದೇವಸ್ಥಾನ ಎಂಬ ಪ್ರೀತಿ ಮೂಡುತ್ತದೆ. ಜಾತಿ, ಧರ್ಮ, ಲಿಂಗ, ವಯಸ್ಸು ಭೇದವಿಲ್ಲದೆ ಎಲ್ಲರೂ ಒಮ್ಮನಸ್ಸಿನಿಂದ ಶ್ರಮಿಸಿದಾಗ ಸಾರ್ಥಕತೆ ಜೊತೆಗೆ ಧನ್ಯತಾಭಾವ ಮೂಡುತ್ತದೆ. ಇದು ಊರಿನ ಅಭಿವೃದ್ಧಿಗೆ ಮೆಟ್ಟಿಲಾಗುತ್ತದೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net