

ದೇವಸೃಷ್ಟಿಯು ನಮಗೆ ನೀಡಿದ ಅಪೂರ್ವ ಅಂಗವೆಂದರೆ ನಿಸ್ಸಂದೇಹವಾಗಿ, ಕಣ್ಣು. ಕಣ್ಣು ನೋಡಿದ್ದೆಲ್ಲವೂ ಸತ್ಯ ಮತ್ತು ನೋಡಿದ್ದು ಮಾತ್ರ ಸತ್ಯ. ಹಾಗೆಯೇ, ಕ್ಯಾಮರಾ ಕಣ್ಣು ಕ್ಲಿಕ್ಕಿಸಿದ್ದೆಲ್ಲವೂ ಸತ್ಯ. ಅದುವೇ ನೈಜತೆ. ಜೀವನದ ಅಸಂಖ್ಯ ಸತ್ಯಗಳನ್ನು ಚಿತ್ರಗಳಲ್ಲಿಯೇ ಹಿಡಿದಿಡುವ ಹಠಕ್ಕೆ ಬಿದ್ದು, ಕ್ಯಾಮರಾ ಹೆಗಲಿಗೇರಿಸಿ ಫೀಲ್ಡಿಗಿಳಿದವರು ರಘುನಾಥ ರೈ ಚೌಧರಿ. ರಘು ರೈ ಎಂದು ವಿಖ್ಯಾತಿ ಪಡೆದವರು.
ನಾವು ಬದುಕಿರುವ ಕಾಲವನ್ನು, ಛಾಯಾಚಿತ್ರಗಳಲ್ಲಿ ದಾಖಲಿಸಿಡುವುದೇ ರಘು ಅವರ ಆಶಯ. ಮತ್ತು ಅದು ನಾಳಿನ ಇತಿಹಾಸವೂ ಹೌದು. ಇತಿಹಾಸದ ಪುಟಗಳನ್ನು ನಂತರದ ದಿನಗಳಲ್ಲಿ ಅಳಿಸಿ, ಮತ್ತೆ ಬರೆಯಬಹುದು. ಆದರೆ ಛಾಯಾಚಿತ್ರ ಸುಲಭವಾಗಿ ಅಳಿಸಲಾಗದ ದಾಖಲೆ. ಅಂಥ ಐತಿಹಾಸಿಕ ರೋಚಕ ಘಟನೆಗಳನ್ನು ಸಾವಿರಾರು ಚಿತ್ರಗಳಲ್ಲಿ ತುಂಬಿಸಿದ್ದಾರೆ ರಘು.
ಇವರ ಕ್ಯಾಮರಾ ಹೆಚ್ಚಾಗಿ ರಾಜಕಾರಣಿಗಳನ್ನೇ ಗುರಿಯಾಗಿಸಿ ಕ್ಲಿಕ್ಕಿಸುತ್ತಿತ್ತು. ಒಬ್ಬ ಮಹಿಳಾ ಪ್ರಧಾನಿಯ ಶಕ್ತಿಯನ್ನು ಬಿಂಬಿಸುವ ರಘು ಅವರ ಚಿತ್ರವೊಂದು ದೇಶದಾದ್ಯಂತ ಖ್ಯಾತಿಗೊಳಗಾಯಿತು. 1967ನೇ ಇಸ್ವಿಯ ಒಂದು ದಿನ, ಪ್ರಧಾನಿ ಇಂದಿರಾ ಗಾಂಧಿ ಕಚೇರಿಯಲ್ಲಿ ಕಡತಗಳಿಗೆ ಸಹಿ ಹಾಕುತ್ತ ಕುಳಿತಿದ್ದಾಗ ಹಿರಿಯ ಸಹೋದ್ಯೋಗಿಗಳ ತಂಡ ಇಂದಿರಾರ ಭೇಟಿಗೆಂದು ಆಗಮಿಸಿತು. ಆಗ ಅಲ್ಲಿಯೇ ಇದ್ದ ರಘು ಥಟ್ಟನೇ ಇಂದಿರಾರ ಕುರ್ಚಿಯ ಹಿಂದೆ ಹೋಗಿ, ಆ ಕಾಂಗ್ರೆಸಿಗರ ಚಿತ್ರವನ್ನು ತೆಗೆದರು. "THE LONE MAN IN THE CABINET' ಎಂಬ ಶೀರ್ಷಿಕೆ ಹೊತ್ತ ಆ ಚಿತ್ರವು ರಘು ಖ್ಯಾತಿಯನ್ನು ಉತ್ತುಂಗಕ್ಕೇರಿಸಿತು. ಪ್ರಧಾನಿ ಡಾ.ಮನಮೋಹನ ಸಿಂಗ್ ನಿಷ್ಕ್ರಿಯತೆ ರಘು ಅವರನ್ನು ಕೆರಳಿಸುತ್ತಿತ್ತು. 2014ರ ಲೋಕಸಭಾ ಚುನಾವಣಾ ಪೂರ್ವದಲ್ಲಿ ಒಂದು ದಿನ ನಿಗದಿಯಾದ ಕಾಂಗ್ರೆಸ್ ಪಕ್ಷದ ಮಹಾಸಭೆಯೊಂದರಲ್ಲಿ ಮನಮೋಹನ ಸಿಂಗ್ ಏಕಾಂಗಿಯಾಗಿ ಕುಳಿತಿದ್ದರು. ಆಗ ಅಲ್ಲಿಗೆ ಬಂದ ಸೋನಿಯಾ ಗಾಂಧಿ, ರಾಹುಲ್ ಗಾಂದಿ ಸಿಂಗ್ರನ್ನು ಮಾತನಾಡಿಸುವ ಗೊಡವೆಗೆ ಹೋಗಲಿಲ್ಲ. ಇದನ್ನು ಗಮನಿಸುತ್ತಿದ್ದ ರಘು, "LONELY, A TORTURED MAN' ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಕ್ಲಿಕ್ಕಿಸಿದರು. ತದನಂತರದಿಂದ, ರಾಜಕಾರಣಿಗಳೊಂದಿಗೆ ರಘು ಬೆಳಸಿಕೊಂಡ ಸಣ್ಣದಾದ ಮೋಹವೊಂದು ಜರ್ರನೇ ಇಳಿದು ಹೋಯಿತು.
‘ಛಾಯಾಚಿತ್ರ ಮಾತ್ರ, ಸಾವಿರ ಸತ್ಯಗಳನ್ನು ಹೇಳುತ್ತದೆ’-ಇಂಥ ಸತ್ಯಗಳನ್ನು ಸಾವಿರ ಸಾವಿರ ಅಕ್ಷರಗಳಲ್ಲಿ ಪೋಣಿಸಿ ಅನೇಕ ಚಿತ್ರಪ್ರಬಂಧಗಳನ್ನು ಬರೆದು ಪ್ರಕಟಿಸಿದರು. ಇವರ ಪ್ರಬಂಧಗಳು ಮತ್ತು ಛಾಯಾಚಿತ್ರಗಳು "MAGUM PHOTOS' ಎಂಬ, ಜಗತ್ತಿನ ಪ್ರತಿಭಾವಂತ ಛಾಯಾಗ್ರಾಹಕರ ವೇದಿಕೆಯಲ್ಲಿ ಮಾತ್ರವಲ್ಲದೆ, ವಿಶ್ವದಾದ್ಯಂತ ಜನಮನ್ನಣೆ ಗಳಿಸಿದವು. ಲಂಡನ್, ಪ್ಯಾರಿಸ್, ಸಿಡ್ನಿ, ನ್ಯೂಯಾರ್ಕ್, ಹ್ಯಾಂಬರ್ಗ್ ನಗರಗಳಲ್ಲಿನ ಫೋಟೋ ಅಕಾಡೆಮಿಗಳಿಂದ ರಘು ಸನ್ಮಾನಿತರಾಗಿದ್ದಾರೆ. ಮತ್ತು ಫ್ರಾನ್ಸ್ನ
‘ಫ್ರೆಂಚ್ ಅಕಾಡೆಮಿ ಆಫ್ ಫೋಟೋಗ್ರಫಿ’ ಸಂಸ್ಥೆ ರಘು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವಿಶ್ವದ ಪ್ರಮುಖ ಪತ್ರಿಕೆಗಳಾದ ಟೈಮ್ ಲೈಫ್, ನ್ಯೂಯಾರ್ಕ್ ಟೈಮ್್ಸ, ನ್ಯೂಸ್ ವೀಕ್ಗಳು ರಘು ಅವರ ಚಿತ್ರಗಳು ಮತ್ತು ಚಿತ್ರಪ್ರಬಂಧಗಳನ್ನು ಪ್ರಕಟಿಸಿವೆ. ಅವರು ಯುನೆಸ್ಕೋ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಚಿತ್ರ ಪ್ರದರ್ಶನಕ್ಕೆ ಜ್ಯೂರಿ ಯಾಗಿಯೂ ನೇಮಕಗೊಂಡಿದ್ದರು.
1971ರ ಬಾಂಗ್ಲಾಯುದ್ಧ ಮತ್ತು ಶರಣಾಗತಿಯ ಚಿತ್ರಸರಣಿ ಮತ್ತು ತದನಂತರದ ಬಾಂಗ್ಲಾ ನಿರಾಶ್ರಿತರ ಬವಣೆಗಳ ಚಿತ್ರಗಳಿಗಾಗಿ ಕೇಂದ್ರ ಸರ್ಕಾರವು 1972ರಲ್ಲಿ, ರಘು ರೈ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತು. 75 ವರ್ಷದ ರಘು, ಸದ್ಯ ದೆಹಲಿ ಮೆಹರೋಲಿಯ ನಿವಾಸದಲ್ಲಿ ತಮ್ಮ 57ನೇ ಚಿತ್ರಪ್ರಬಂಧದ ತಯಾರಿಯಲ್ಲಿ ತೊಡಗಿದ್ದಾರೆ.
(ಲೇಖಕರು ಹಿರಿಯ ಫೋಟೋಗ್ರಾಫರ್)