

ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆ ಎಂಬ ಹೆದ್ದೆರೆಯೊಂದು ಬಂದು ಇದೀಗ ಎಲ್ಲವೂ ಶಾಂತವಾಗುತ್ತಿವೆ. ಆದರೆ ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಂಟಾಗಿರುವ ಕಂಪನದ ಅಲೆಗಳು ತೇಲಿ ಬರುತ್ತಲೇ ಇವೆ. ಎಂ.ಕೆ. ಗಾಂಧಿ ಅವರು ಹೇಳಿದ ಸಾರ್ವಕಾಲಿಕ ಮಾತು ನೆನಪಾಗುತ್ತಿದೆ. ‘ನೀತಿರಹಿತ ರಾಜಕಾರಣ ಮತ್ತು ಮೌಲ್ಯರಹಿತ ಶಿಕ್ಷಣ ಎರಡೂ ಅರ್ಥಹೀನ ಮತ್ತು ಅಪಾಯಕಾರಿ’ ಎಂಬುದು ಅವರ ಖಚಿತ ನಿಲುವು. ನ್ಯಾಯ, ನೀತಿ, ಧರ್ಮ, ಅಧರ್ಮದ ಕುರಿತಾದ ಚರ್ಚೆ ಈಗಿನ ರಾಜಕಾರಣದ ಸಂದರ್ಭದಲ್ಲಿ ಅರ್ಥಹೀನ ಎನ್ನುವವರಿದ್ದಾರೆ. ಆದರೆ ರಾಷ್ಟ್ರ ರಾಜಕಾರಣದಲ್ಲಿ ಅರವಿಂದ್ ಕೇಜ್ರಿವಾಲ್ ಎಂಬ ನೀರ್ಗಳ್ಳೆಯ ಅವಸಾನದ ಕಾರಣಕ್ಕೆ ಗಾಂಧಿ ಹೇಳಿಕೆಯ ಹಿನ್ನೆಲೆಯಲ್ಲಿ ಒಂದು ಚರ್ಚೆ ಸಮಂಜಸ ಮತ್ತು ಸಮಯೋಚಿತ.
ಭಾರತ ಮಾತ್ರವಲ್ಲ, ಪಕ್ಷ ವ್ಯವಸ್ಥೆ ರೂಢಿಗತವಾಗಿರುವ ಯಾವುದೇ ದೇಶವನ್ನು ತೆಗೆದುಕೊಂಡರೂ, ಅಲ್ಲಿ ಎಲ್ಲ ಪಕ್ಷಗಳಿಗೂ ಅದರದ್ದೇ ಆದ ರೀತಿ ನೀತಿ, ರಿವಾಜು, ನಂಬಿಕೆ, ಸಿದ್ಧಾಂತಗಳಿವೆ. ಉದಾಹರಣೆಗೆ ಬ್ರಿಟಿಷ್ ಲೇಬರ್ ಪಾರ್ಟಿ, ಕನ್ಸರ್ವೆಟಿವ್ ಪಾರ್ಟಿ, ಅಮೆರಿಕದ ರಿಪಬ್ಲಿಕನ್ ಪಕ್ಷ, ಡೆಮಾಕ್ರೆಟಿಕ್ ಪಕ್ಷ, ಚೀನಾದ ಕಮ್ಯೂನಿಸ್ಟ್ ಪಾರ್ಟಿ, ದಕ್ಷಿಣ ಕೊರಿಯಾದ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ, ನ್ಯಾಷನಲಿಸ್ಟ್ ಪಾರ್ಟಿ ಆಫ್ ತೈವಾನ್, ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ದಕ್ಷಿಣ ಆಫ್ರಿಕಾ), ಜಪಾನಿನ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಮುಂತಾದವು ಈ ಹೇಳಿಕೆಗೆ ಸೂಕ್ತ ಉದಾಹರಣೆ ಎನಿಸಿಕೊಳ್ಳುತ್ತವೆ.
ಭಾರತದ ಸಂದರ್ಭಕ್ಕೆ ಬಂದರೆ ರಾಜಕೀಯ ಪಕ್ಷಗಳಿಗೆ ವೈಚಾರಿಕ ಬದ್ಧತೆ, ಸಿದ್ಧಾಂತದ ಬದ್ಧತೆ, ರಾಜಕೀಯ ಪ್ರಬುದ್ಧತೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಆ ಹಿನ್ನೆಲೆಯಲ್ಲೇ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ನಾವು ನೋಡಬೇಕಿದೆ.ಆಮ್ ಆದ್ಮಿ ಪಕ್ಷದ ಸೋಲಿಗೆ ಹಲವು ರೀತಿಯಿಂದ ಕಾರಣವಾದ ಕಾಂಗ್ರೆಸ್ ಪಕ್ಷದ ಕುರಿತು ಕೆಲ ಸಂಗತಿಗಳನ್ನು ಅವಲೋಕನ ಮಾಡೋಣ.
ಕಾಂಗ್ರೆಸ್ ಹುಟ್ಟು ಮತ್ತು ಬೆಳವಣಿಗೆಗೆ ಸಂಬಂಧಿಸಿ ಎರಡು ಮಜಲುಗಳಿವೆ. ಬ್ರಿಟಿಷ್ ಭಾರತದಲ್ಲಿ ಎ.ಒ.ಹ್ಯೂಂ ಸ್ಥಾಪಿಸಿದ ಕಾಂಗ್ರೆಸ್ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಂ.ಕೆ. ಗಾಂಧಿ ಮುನ್ನಡೆಸಿದ ಕಾಂಗ್ರೆಸ್ ಎಂಬುದು ಆ ಎರಡು ಘಟ್ಟಗಳು. ಎ.ಒ. ಹ್ಯೂಂ ಸ್ಥಾಪಿಸಿದ ಕಾಂಗ್ರೆಸ್ ಥಿಯರಿ ಗೊತ್ತೇ ಇದೆ.
ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಸರ್ಕಾರದ ವಿರುದ್ಧ ಭಾರತದ ಕ್ರಾಂತಿಕಾರಿಗಳ ಹೋರಾಟ ತೀವ್ರಗೊಂಡಾಗ, ಆ ಶಕ್ತಿಯನ್ನು ಕುಂದಿಸಲು ಮತ್ತು ಬ್ರಿಟಿಷರ ಸೂಚನೆಯಂತೆ ಕೆಲಸ ಮಾಡುವ ಪರ್ಯಾಯ ಗುಂಪು ಇರಲಿ ಎಂಬ ಕಾರಣಕ್ಕೆ ಹ್ಯೂಮ್ ಕಾಂಗ್ರೆಸ್ನ್ನು ಹುಟ್ಟುಹಾಕಿದರು. ತದನಂತರ ಗಾಂಧೀಜಿಯವರ ಸಾಂಗತ್ಯದಲ್ಲಿ ಸಾಗಿದ ಕಾಂಗ್ರೆಸ್ ಮತ್ತೆ ಎರಡು ತೆರನಾದ ನಿಲುವುಗಳಿಂದ ಗೊಂದಲ, ಗೋಜಲಿಗೆ ಸಿಲುಕಿತು. ಕಾಂಗ್ರೆಸ್ನಲ್ಲಿ ಗಾಂಧಿ ಪ್ರಣೀತ ರಾಷ್ಟ್ರವಾದವು ದುರ್ಬಲಗೊಂಡು, ನೆಹರು ಕುಟುಂಬದ ಪಾರುಪತ್ಯದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗುವ ಹೊತ್ತಿಗೆ ಕಾಂಗ್ರೆಸ್ ವೈಚಾರಿಕವಾಗಿ ಖಾಲಿ ಆಗಿತ್ತು.
ಇದನ್ನು ಬಹುಹಿಂದೆಯೇ ಮನಗಂಡಿದ್ದ ಗಾಂಧಿ, ಕಾಂಗ್ರೆಸ್ಸಿನ ಸದಸ್ಯತ್ವ ತೆಗೆದುಕೊಳ್ಳುವುದನ್ನು ಆಗಲೇ ನಿಲ್ಲಿಸಿದರು. ಮಾತ್ರವಲ್ಲ, ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಎಂದು ಸಲಹೆ ನೀಡಿದ್ದರು. ಗಾಂಧಿ ಅವರ ಆ ನಿಲುವಿಗೆ ಕಾರಣವಾದದ್ದು, ಅವರು ಯಾವುದು ಮೌಲ್ಯ ಎಂದು ಭಾವಿಸಿದ್ದರೋ ಅವೆಲ್ಲವೂ ಕಾಂಗ್ರೆಸ್ಸಿಗೆ ವರ್ಜ್ಯವಾಗಿತ್ತು. ಉದಾಹರಣೆಗೆ, ರಾಜಕೀಯಕ್ಕೆ ಧರ್ಮ, ಅಧ್ಯಾತ್ಮದ ತಳಹದಿ ಬೇಕು, ಮದ್ಯ ನಿಷೇಧ ಆಗಬೇಕು, ಗೋ ಸಂರಕ್ಷಣೆಗೆ ಆದ್ಯತೆ ಬೇಕು. ಆದರೆ ಆ ರೀತಿಯ ಗಾಂಧಿ ಚಿಂತನೆಗಳು ನೆಹರು ಕಾಂಗ್ರೆಸ್ಸಿಗೆ ಕಿಂಚಿತ್ತೂ ಬೇಕಿರಲಿಲ್ಲ.
ಏಕೆಂದರೆ ಗಾಂಧಿ ಆಲೋಚನೆ ಅಪ್ಪಟ ಸ್ವದೇಶಿ ಚಿಂತನೆ, ನೆಹರು ಅವರದ್ದು ಅಪ್ಪಟ ವಿದೇಶಿ ಒಲವು. ಗಾಂಧಿಯವರು ‘ದೀನ ದೇವೋ ಭವ, ದರಿದ್ರ ದೇವೋ ಭವ’ ಎಂದು ದೀನ ದಲಿತರ ಅಪ್ಪಿಕೊಳ್ಳುವ ಮಾರ್ಗವನ್ನು ತೋರಿದರು. ಗ್ರಾಮ ಸ್ವರಾಜ್ಯ, ರಾಮರಾಜ್ಯ ಎರಡೂ ಗಾಂಧಿ ಕಂಡ ಕನಸು. ಗಾಂಧಿ ತತ್ವಗಳು ನೆಹರುಗೆ ಸುತಾರಾಂ ಇಷ್ಟವಿರಲಿಲ್ಲ. ಒಟ್ಟು ಪರಿಣಾಮ ಗಾಂಧಿ ಸಲಹೆಯಂತೆ ಕಾಂಗ್ರೆಸ್ ವಿಸರ್ಜನೆ ಆಗುವ ಬದಲು ಮುಂದೆ ನೆಹರು ಮಾತ್ರವಲ್ಲ ಕಾಂಗ್ರೆಸ್ಸಿನ ಯಾವ ನಾಯಕತ್ವವೂ ಗಾಂಧಿ ತತ್ವಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ.
ಸ್ವಾತಂತ್ರ್ಯ ಬಂದ ಮರು ಘಳಿಗೆಯಿಂದ ಇಂದಿನವರೆಗೆ ನೆಹರು ಸಂತತಿಯ ವೈಭವೀಕರಣ, ಮುಸ್ಲಿಂ ತುಷ್ಟೀಕರಣ ನಿರಾತಂಕವಾಗಿ ಅಂಕೆ ಮೀರಿ ನಡೆದುಕೊಂಡು ಬಂದಿತು. ಇಂದಿರಾ, ರಾಜೀವ್ ಆಡಳಿತದಿಂದ ಹಿಡಿದು ಮನಮೋಹನ ಸಿಂಗ್ ಸರ್ಕಾರದವರೆಗೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಎಲ್ಲೆ ಮೀರಿತು. ಮನಮೋಹನ ಸಿಂಗ್ ಸರ್ಕಾರದ ಭ್ರಷ್ಟಾಚಾರದ ಹಗರಣಗಳ ವಿರುದ್ಧ ಸಮಾಜಸೇವಕ ಅಣ್ಣಾ ಹಜಾರೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಲ್ಲಿ ತೂರಿಕೊಂಡವರು ಅವಕಾಶವಾದಿ ಅರವಿಂದ್ ಕೇಜ್ರಿವಾಲ್. ಕೇಜ್ರಿವಾಲ್ ಪಕ್ಷ ಸ್ಥಾಪನೆ ಮಾಡುವುದು ಅಣ್ಣಾಗೆ ಒಂದಿಷ್ಟೂ ಒಪ್ಪಿಗೆ ಇರಲಿಲ್ಲ.
ಆದರೆ ಕೇಜ್ರಿವಾಲ್ ಅಣ್ಣಾ ಹಜಾರೆ ಅವರ ಇಂಗಿತಕ್ಕೆ ವಿರುದ್ಧವಾಗಿ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದರು. ಅಷ್ಟೇ ಅಲ್ಲ, ಅಣ್ಣಾ ಹಜಾರೆ ಭ್ರಷ್ಟಾಚಾರದ ಕಾರಣಕ್ಕೆ ಯಾವ ಕಾಂಗ್ರೆಸ್ ಪಕ್ಷದ ವಿರುದ್ಧ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರೋ ಅದೇ ಕಾಂಗ್ರೆಸ್ ಜೊತೆಗೆ ಕೇಜ್ರಿವಾಲ್ ರಾಜಕೀಯ ಸಖ್ಯ ಬೆಳೆಸಿದರು. ನಿಜ ಹೇಳಬೇಕೆಂದರೆ ಕೇಜ್ರಿವಾಲ್ ರಾಜಕೀಯವಾಗಿ ಸೋತದ್ದು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಲ್ಲ, ಅವರು ಎಂದು ಕೇವಲ ಅಧಿಕಾರಕ್ಕಾಗಿ ಕಾಂಗ್ರೆಸ್ ದೋಸ್ತಿ ಮಾಡಿದರೋ ಅಂದೇ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಕುಸಿದು ಸೋತುಹೋಗಿತ್ತು. ಈಗ ಅದು ಸೋತಿರುವುದು ಕೇವಲ ಸಂಖ್ಯಾಬಲದ ದೃಷ್ಟಿಯಿಂದ ಅಷ್ಟೆ.
ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಸಾಲು ಸಾಲು ಕಾಂಗ್ರೆಸ್ ನಾಯಕರು ಸನಾತನ ಧರ್ಮದ ಟೀಕೆ ಮಾಡುವುದರಿಂದ ಆರಂಭಿಸಿ ಪ್ರಸಕ್ತ ಮಹಾ ಕುಂಭಮೇಳದ ಕುರಿತು ಕುಚೋದ್ಯ ಮಾಡುವುದರವರೆಗೆ ಎಲ್ಲದಕ್ಕೂ ಒಂದೇ ಮೂಲ, ಒಂದೇ ಕಾರಣ. ನೇರವಾಗಿ ಹೇಳಬೇಕೆಂದರೆ ಇದೆಲ್ಲ ಅಲ್ಪಸಂಖ್ಯಾತರ ತುಷ್ಟೀಕರಣದ ನಾನಾ ವಿಕಾರ ಅಷ್ಟೇ. ಕಾಂಗ್ರೆಸ್ ದೋಸ್ತಿ ಮಾಡಿದ ಆಪ್ ಅಷ್ಟಕ್ಕೇ ನಿಲ್ಲಲಿಲ್ಲ. ಮುಸ್ಲಿಂ ತುಷ್ಟೀಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನೂ ಅದು ಮೀರಿಸಿದೆ.
ಪುಲ್ವಾಮಾ ದಾಳಿಗೆ ಪ್ರತಿಯಾಗಿ ನಡೆಸಿದ ಬಾಲಾಕೋಟ ಸರ್ಜಿಕಲ್ ದಾಳಿಯನ್ನು ಟೀಕಿಸಿ ಕೇಜ್ರಿವಾಲ್ ಹಗುರವಾಗಿ ಮಾತನಾಡಿದರು. ‘ಕಾಶ್ಮೀರ ಫೈಲ್ಸ್’ ಸಿನಿಮಾ ಕುರಿತು ಗೇಲಿ ಮಾಡಿದರು. ‘ಭಾರತ್ ತೆರೆ ತುಕ್ಡೆ ಹೋಂಗೆ’ ಎಂದು ನಿರ್ಲಜ್ಜವಾಗಿ ಘೊಷಣೆ ಕೂಗುವ ಶಹೀನ್ ಬಾಗ್ ಹೋರಾಟಗಾರರ ಜೊತೆ ಖುಲ್ಲಂಕುಲ್ಲಾ ಕೈ ಜೋಡಿಸಿದರು. ದೆಹಲಿಯ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಮೌಲ್ವಿಗಳೊಂದಿಗೆ ಗೌಪ್ಯ ಸಭೆಗಳಲ್ಲಿ ಪಾಲ್ಗೊಂಡು, ‘ನೀವು ಮತ ಹಾಕಿದರೆ ಸಾಕು. ನೀವು ಕೇಳಿದ್ದಕ್ಕೆಲ್ಲ, ಹೇಳಿದ್ದಕ್ಕೆಲ್ಲ ಷರಾ ಒತ್ತುತ್ತೇನೆ’ ಎಂದು ಪ್ರಮಾಣ ಮಾಡಿದರು. ಅದು ಯಾವ ಪರಿ ಎಂದರೆ ಮೊನ್ನೆ (ಫೆ.8) ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದಾಗ, ಆಪ್ ಹಿನ್ನಡೆ ಅನುಭವಿಸುತ್ತಿದ್ದರೂ ಆಪ್ ನಾಯಕರು ಮಾತ್ರ, ಇನ್ನೂ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಮತ ಎಣಿಕೆ ಆಗಿಲ್ಲ, ಅದಾದರೆ ನಮ್ಮ ಪಕ್ಷವೇ ಗೆಲ್ಲುವುದೆಂದು ಹೇಳುತ್ತಿದ್ದರು.
ವಿದೇಶಿ ಗಣ್ಯರು ಭಾರತ ಭೇಟಿಗೆ ಬಂದಾಗ ದೆಹಲಿಯಲ್ಲಿ ನೇರವಾಗಿ/ಪರೋಕ್ಷವಾಗಿ ದಂಗೆ ಎಬ್ಬಿಸಿ ಭಾರತದ ಮಾನ ಹರಾಜು ಹಾಕಿದರು. ಇನ್ನು ರಾಜಕೀಯವಾಗಿ ಎಂಥ ಭಂಡತನಕ್ಕೆ ಆಪ್ ನಾಯಕರು ಇಳಿದರು ಎಂದರೆ, ‘ಸರ್ಕಾರಿ ಕಾರು ಬೇಡ’ ಎಂದ ಕೇಜ್ರಿವಾಲ್ ಐಷಾರಾಮಿ ಕಾರಿಗೆ ಒಗ್ಗಿಕೊಂಡರು, ‘ಐಷಾರಾಮಿ ಬಂಗಲೆ ಬೇಡ’ ಎಂದವರು ಸಿಎಂ ಅಧಿಕೃತ ನಿವಾಸ ಶೀಷಮಹಲನ್ನು 35 ಕೋಟಿ ರೂಪಾಯಿಗೂ ಹೆಚ್ಚು ವ್ಯಯ ಮಾಡಿ ನವೀಕರಣ ಮಾಡಿದರು, ಅದರಲ್ಲಿಯೂ ಭ್ರಷ್ಟಾಚಾರ! ಆಪ ಸರ್ಕಾರದ ಮಂತ್ರಿಗಳು ಸಾಲಾಗಿ ಭ್ರಷ್ಟಾಚಾರದಲ್ಲಿ ಸಿಲುಕಿ ಜೈಲು ಸೇರಿದರು. ಆದರೂ, ನಾವೇ ಇಲ್ಲಿ ಶಾಶ್ವತ ಎಂಬ ಅಹಂಕಾರವನ್ನು ಮೆರೆದರು.
ಹಾಗಾದರೆ ಈ ಪಕ್ಷದ ಪುರುಷಾರ್ಥ ಎಂಥದ್ದು? ನೀವೇ ಹೇಳಿ. ಇಷ್ಟಾಗಿಯೂ ದೆಹಲಿಯಲ್ಲಿ ಆಪ್ ಪಕ್ಷದ ಬೇರುಗಳು ಸಡಿಲವಾಗಿದೆ ಎಂದುಕೊಳ್ಳಬೇಡಿ. ಶೇಕಡ 43ರಷ್ಟು ಮತಗಳಿಕೆ ಆ ಪಕ್ಷದ್ದು. ಬಿಜೆಪಿ ಅದಕ್ಕಿಂತ 2% ಮಾತ್ರ ಹೆಚ್ಚುವರಿ ಮತಗಳಿಸಿದ್ದು. ಆದರೆ ದೆಹಲಿ ಮತ್ತು ದೇಶದ ಇತರ ಭಾಗಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ, ಒಂದೇ ಒಂದು ವೋಟು ಅಥವಾ ಒಂದೇ ಒಂದು ಸೀಟು ಅಂತರದಲ್ಲಿ ಈ ಪ್ರಳಯಾಂತಕರು ತೊಲಗಿದರೆ ಸಾಕು ಎಂಬುದು ಲಕ್ಷಾಂತರ, ಕೊಟ್ಯಂತರ ಜನಸಾಮಾನ್ಯರ ಆಸೆಯಾಗಿತ್ತು. ಅದು ಸಾಕಾರವಾಗಿದೆ. ಮುಂದಿನದ್ದು ಮುಂದೆ ಅಧಿಕಾರ ಹಿಡಿಯುವವರ ಕೈಲಿದೆ. ಅಧಿಕಾರಕ್ಕೆ ಬರುವವರು ಈರುಳ್ಳಿಯಲ್ಲಿ ಹೋದ ಮಾನಕ್ಕೆ, ಹರ್ಷವರ್ಧನ್ರಂಥ ಓರ್ವ ಸಂಭಾವಿತ ನಾಯಕನನ್ನು ತೆರೆಮರೆಗೆ ಸರಿಸಿದ್ದಕ್ಕೆ ಅನುಭವಿಸಿದ 27 ವರ್ಷಗಳ ವನವಾಸ, ಅಜ್ಞಾತವಾಸವನ್ನು ಮರೆಯಬಾರದು ಅಷ್ಟೇ!.