

ರಾಜ್ಯದಲ್ಲಿ ಉಪ ಚುನಾವಣೆಗಳ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದೆ. ಆದರೆ, ರಾಜಕೀಯ ಪಕ್ಷಗಳ ನಾಯಕರುಗಳು ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಯಕರ್ತರ, ಪಕ್ಷದ ಸಭೆ, ಸಮಾರಂಭ, ರ್ಯಾಲಿಗಳನ್ನು ಆಯೋಜಿಸುತ್ತಿರುವುದು ವಿಪರ್ಯಾಸ. ಕರೊನಾ ಎರಡನೇ ಅಲೆಯ ಅಬ್ಬರದ ಪರಿಣಾಮ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಿಗೆ ರಜೆ ನೀಡಲಾಗಿದ್ದು, ಕೆಲವೆಡೆ ಮತ್ತೆ ಆನ್ಲೈನ್ ತರಗತಿಗಳು ಆರಂಭವಾಗಿವೆ. ಆಯಾ ಜಿಲ್ಲೆಗಳ ಸ್ಥಳೀಯ ಜಾತ್ರಾ ಮಹೋತ್ಸವ, ಧಾರ್ವಿುಕ ಚಟುವಟಿಕೆ, ಸಾರ್ವಜನಿಕ ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಮಾಸ್ಕ್ ಹಾಕದವರಿಗೆ ದಂಡ ವಿಧಿಸಲಾಗುತ್ತಿರುವುದು ಸರಿಯಷ್ಟೇ.
ಉಪ ಚುನಾವಣೆ ನಿಮಿತ್ತ ಆಯಾ ಪಕ್ಷದ ರಾಜಕಾರಣಿಗಳು, ಜನಪ್ರತಿನಿಧಿಗಳು ಬಹಿರಂಗ ಸಮಾವೇಶ, ಸಮಾರಂಭಗಳನ್ನು ಏರ್ಪಡಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಇವುಗಳ ಮೇಲೆ ನಿರ್ಬಂಧ ಹಾಕುವಲ್ಲಿ ಅಲ್ಲಿನ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಪ್ರಚಾರಕ್ಕೆ ಇಳಿದಿರುವ ರಾಜಕಾರಣಿಗಳು, ಮುಖಂಡರು, ಕಾರ್ಯಕರ್ತರು ನಿತ್ಯ ಪ್ರತಿ ಮನೆಗಳಿಗೆ ಭೇಟಿ ನೀಡುವಾಗ ಮಾಸ್ಕ್ ಹಾಕಿಕೊಳ್ಳದೆ, ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಸರಿಯಾದ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ಸಂಚಾರ ಮಾಡುತ್ತಿರುವುದರಿಂದ ಗ್ರಾಮಗಳಿಗೂ ಕರೊನಾ ಪ್ರವೇಶಿಸುವ ಭೀತಿ ತಲೆದೋರಿದೆ. ಕರೊನಾ ಎರಡನೇ ಅಲೆಯ ಭೀತಿ ಎಲ್ಲರಲ್ಲೂ ಕಾಡುತ್ತಿದ್ದರೂ, ಜನರಿಗೆ ಒಂದು ನ್ಯಾಯ, ನಿಯಮ, ನಾಯಕರುಗಳಿಗೆ ಮತ್ತೊಂದು ನ್ಯಾಯ ಎನ್ನುವಂತಾಗಿದೆ. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು, ಎಲ್ಲರೂ ನಿಯಮಗಳನ್ನು ಪಾಲಿಸುವುದು ಅಗತ್ಯ.
| ಮಹಾಂತೇಶ ರಾಜಗೋಳಿ ಬೈಲಹೊಂಗಲ (ಬೆಳಗಾವಿ ಜಿಲ್ಲೆ)