

ಭಾರತೀಯ ಧಾರ್ವಿುಕ ಇತಿಹಾಸ ಪರಂಪರೆಯಲ್ಲಿ ಹಬ್ಬ, ಹುಣ್ಣಿಮೆ ಉತ್ಸವಗಳು ತನ್ನದೇ ಮಹತ್ವವನ್ನು ಪಡೆದುಕೊಂಡು ನಾಡಿನ ಜನತೆಗೆ ತನ್ನ ಸಂದೇಶವನ್ನು ಸಾರುತ್ತವೆ. ಈ ದೇಶದ ಧಾರ್ವಿುಕ ಪೀಠಗಳು ಮತ್ತು ಮಠ-ಮಂದಿರಗಳು ಹಾಗೂ ದೇವಾಲಯಗಳು ಜನಮನವನ್ನು ನಿತ್ಯವೂ ಹಸನುಗೊಳಿಸುವುದರೊಂದಿಗೆ ನಿತ್ಯ ನೂತನ ಬದುಕಿಗೆ ಕಾರಣವಾಗಿವೆ. ನೀತಿ-ನಿಯಮಗಳ ಪಾಲನೆಗೆ, ಉನ್ನತ ಜೀವನದ ಮೌಲ್ಯಗಳಿಗೆ, ಸಂಸ್ಕಾರ ಸಂವರ್ಧನೆಗೆ ಸದಾ ಮಾರ್ಗದರ್ಶಕಗಳಾಗಿವೆ. ಪರಶಿವನ ಸೃಷ್ಟಿಕ್ರಿಯೆಯ ಐದು ತತ್ತ್ವಗಳ ಶಕ್ತಿಯನ್ನೊಳಗೊಂಡ ಪಂಚ ಮುಖಗಳಿಂದ ಪ್ರಾದರ್ಭವಿಸಿದವರೇ ಜಗದ್ಗುರು ಶ್ರೀ ಪಂಚಾಚಾರ್ಯರು. ಅವರ ಕಾರ್ಯಕ್ಷೇತ್ರಗಳೇ ಪಂಚಪೀಠಗಳು. ಈ ಪಂಚಪೀಠಗಳಲ್ಲಿ ಒಂದಾದ ಪೀಠವೇ ಶ್ರೀಮದುಜ್ಜಯಿನಿ ಸದ್ಧರ್ಮಪೀಠ. ಶಿವನ ವಾಮದೇವ ಮುಖ ಸಂಜಾತರಾದ ಶ್ರೀ ಜಗದ್ಗುರು ಮರುಳಾರಾಧ್ಯರು. ಮಾಳವದೇಶದ ಶ್ರೀ ಸಿದ್ಧೇಶ್ವರ ಜ್ಯೋತಿರ್ಲಿಂಗಮುಖದಿಂದ ದಿವ್ಯದೇಹಿಯಾಗಿ ಆವಿರ್ಭವಿಸಿ ಅಲ್ಲಿಯೇ ಪೀಠವನ್ನು ಸ್ಥಾಪಿಸಿ ಮಾನವಕುಲದ ಉದ್ಧಾರಕ್ಕಾಗಿ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿದ ಮಹಾಮಹಿಮರಾಗಿದ್ದಾರೆ.
ಈ ಪರಂಪರೆಯಲ್ಲಿ ಸಾಗಿಬಂದವರು ಶ್ರೀ ಮರುಳಾರಾಧ್ಯರು. ಕಾಲಾಂತರದಲ್ಲಿ ಅನ್ಯಧರ್ವಿುಯರ ಕಿರುಕುಳ ಸಹಿಸಲಾಗದೆ ಅವರು ಉಜ್ಜಯಿನಿ ಪರಿಸರವನ್ನು ತ್ಯಾಗಮಾಡಿ ತಮ್ಮ ಶಿಷ್ಯಸಮೇತರಾಗಿ ದಕ್ಷಿಣ ಭಾರತದ ಈಗಿನ ಬಳ್ಳಾರಿ ಸೀಮೆಗೆ ದಯಮಾಡಿಸಿ ಶ್ರೀ ಉಜ್ಜಯಿನಿ ಸದ್ಧರ್ಮ ಪೀಠವನ್ನು ಪುನರ್ ಪ್ರತಿಷ್ಠಾಪಿಸಿದರು. ಮಹಾರಾಜ ವಿಕ್ರಮಾದಿತ್ಯನಿಗೆ ಬಂದೊದಗಿದ ಕಷ್ಟದ ನಿವಾರಣೆಗೆ ತಮ್ಮ ಇಷ್ಟಲಿಂಗ ತೈಲಾಭಿಷೇಕದ ಮೂಲಕ ಕಷ್ಟಪರಿಹಾರ ಮಾಡಿದರು. ಇಂಥ ಉಜ್ಜಯಿನಿ ಸದ್ಧರ್ಮ ಪೀಠ ಪರಂಪರೆಯಲ್ಲಿ ನೂರಾರು ಧಾರ್ವಿುಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಲೇ ಇರುತ್ತವೆ.
ಶ್ರೀ ಉಜ್ಜಯಿನಿ ಪೀಠದ ಭಾರತ ಹುಣ್ಣಿಮೆ ಅತ್ಯಂತ ವಿಶಿಷ್ಟತೆಯಿಂದ ಕೂಡಿದೆ. ಪ್ರತಿವರ್ಷ ಮಾಘಮಾಸ ಪ್ರಾರಂಭವಾದ ಏಳು ದಿನಗಳ ನಂತರ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ವಿಜಯಯಾತ್ರೆ ಪ್ರಾರಂಭವಾಗುತ್ತದೆ. ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಆಜ್ಞೆಯ ಮೇರೆಗೆ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಉತ್ಸವಮೂರ್ತಿ ಪಲ್ಲಕ್ಕಿಯಲ್ಲಿ ಮೇಳೈಸಿ ಸಹಸ್ರಾರು ಭಕ್ತರೊಂದಿಗೆ ಪ್ರಥಮ ಪಾದಗಟ್ಟೆಯನ್ನು ಪ್ರದಕ್ಷಿಣೆ ಹಾಕಿ ನಂತರ ಶ್ರೀಪೀಠದ ಮೂಲಸ್ಥಾನ ಶ್ರೀ ಸಿದ್ಧೇಶ್ವರ ವಟಕ್ಷೇತ್ರಕ್ಕೆ ಪೂಜೆ ಸಲ್ಲಿಸಿ ಯಾತ್ರೆ ಮುಂದುವರಿಸುತ್ತದೆ. ಹೀಗೆ ಒಂಬತ್ತು ಪಾದಗಟ್ಟೆಗಳಿಗೆ ಸಾಗಿ ಅಲ್ಲಿನ ಭಕ್ತರಿಂದ ಭಕ್ತಿ ಸೇವೆಯನ್ನು ಪಡೆಯುತ್ತದೆ. ಇಂಥ ಸಂದರ್ಭದಲ್ಲಿ ಗ್ರಾಮಗಳ ಎಲ್ಲಾ ಜಾತಿ-ಮತ-ಪಂಥ-ಪಂಗಡದ ಭಕ್ತರು ವಿಶೇಷವಾಗಿ ಭಕ್ತಿ ಕಾಣಿಕೆಯನ್ನು ಸಮರ್ಪಿಸುತ್ತಾರೆ. ಅಲ್ಲಿ ಸಮನ್ವಯ, ಸೌಹಾರ್ದ, ಸಹಬಾಳ್ವೆ ಪ್ರದರ್ಶನಗೊಳ್ಳುತ್ತದೆ. ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ವಿಜಯಯಾತ್ರೆಯ ಅತ್ಯಂತ ವಿಶಿಷ್ಟ ಘಟ್ಟ ಆರಂಭವಾಗುವುದು ಹಾರಕನಾಳು ಗ್ರಾಮದಿಂದ.
ಅಲ್ಲಿನ ಹಾರಕ ರಾಕ್ಷಸನ ಸಂಹಾರದ ಸಂಕೇತವಾಗಿ ಭಕ್ತರಲ್ಲಿರುವ ಅಸುರಿಗುಣಗಳನ್ನು ನಾಶಮಾಡುವ ಮುಖೇನ ದೈವೀಗುಣಗಳನ್ನು ತುಂಬುವ ಕಾರ್ಯ ವೈವಿಧ್ಯಮಯವಾಗಿರುತ್ತದೆ. ನಂತರ ಒಂಬತ್ತು ಪಾದಗಟ್ಟೆಗಳ ದಂಡಯಾತ್ರೆ ಮುಗಿಸಿ ಉಜ್ಜಯಿನಿ ಪೀಠಕ್ಕೆ ಆಗಮಿಸಿ ಅಲ್ಲಿನ ದುಷ್ಟಕೂಟವನ್ನು ಸಂಹಾರ ಮಾಡಿ ಅವರಿಗೆ ಪರಿವರ್ತನೆಯ ಮಾರ್ಗವನ್ನು ತೋರಿ ಆಧ್ಯಾತ್ಮಿಕ ಶಕ್ತಿಯನ್ನು ತುಂಬುವ ಪರಿಕ್ರಮ ಅಷ್ಟೇ ಅರ್ಥಪೂರ್ಣವಾಗಿರುತ್ತದೆ.
ಫೆಬ್ರವರಿ ಒಂದರಿಂದ ಶ್ರೀ ಜಗದ್ಗುರು ಮರುಳಸಿದ್ಧೇಶ್ವರರ ವಿಜಯಯಾತ್ರೆಯು ಪ್ರಾರಂಭವಾಗಿದ್ದು, 8ರಂದು ಎಲ್ಲಾ ಹಳ್ಳಿಗಳ ಮೇಲೆ ಸಂಚರಿಸುವುದು. 10ರಂದು ಸ್ವಾಮಿಯು ಗುಡಿ ತುಂಬುವ ಧಾರ್ವಿುಕ ಕಾರ್ಯ ಅತ್ಯಂತ ವಿಜೃಂಭಣೆಯಿಂದ ಜರುಗಿ ಮಹಾಮಂಗಳದೊಂದಿಗೆ ಮುಕ್ತಾಯಗೊಳ್ಳುವುದು. ಹೀಗೆ ಒಂಬತ್ತು ದಿನಗಳವರೆಗೆ ಸಾಗಿ ಭಾರತ ಹುಣ್ಣಿಮೆಯ ದಿನ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಹಿಂದಿರುಗಿದ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯನ್ನು ಸ್ವಾಗತಿಸಲು ಹಾಗೂ ಪ್ರಸ್ತುತ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಗೆ ಭಕ್ತಿ ಸಲ್ಲಿಸಲು ಕಳಸ, ಆರತಿಗಳು ಸಿದ್ಧಗೊಂಡಿರುತ್ತವೆ. ಯಾತ್ರೆಯ ಆರಂಭದ ದಿನ ಕಳಶದಲ್ಲಿ ಮಣ್ಣು ನೀರು ಹಾಗೂ ದವಸಧಾನ್ಯಗಳನ್ನು ಬಿತ್ತಿದ ಬೀಜಗಳು ಮೊಳಕೆಯೊಡೆದು ಸಸಿಗಳಾಗಿ ಕಂಗೊಳಿಸುತ್ತಿರುತ್ತವೆ. ಅವುಗಳ ಮೂಲಕ ಸಮೃದ್ಧ ಮಳೆ ಬಂದು ಕೃಷಿ ಅಭಿವೃದ್ಧಿಯಾಗಿ ಬದುಕು ಸುಖಮಯವಾಗಿ ಸಾಗಲಿ ಎಂಬ ಆಶಯವನ್ನು ಹೊತ್ತು ತಾವು ತಂದ ದವಸಧಾನ್ಯಗಳನ್ನು ಸ್ವಾಮಿಯ ಸನ್ನಿಧಾನಕ್ಕೆ ಅರ್ಪಿಸುತ್ತಾರೆ. ನಂತರ ಗ್ರಾಮಸ್ಥರು ತಮ್ಮ ಆರತಿ-ಕಳಸವನ್ನು ಬೆಳಗಿ ಧನ್ಯರಾಗುತ್ತಾರೆ. ಹುಣ್ಣಿಮೆಯ ರಾತ್ರಿ ಎಲ್ಲ ಜಾತಿ-ಮತ-ಧರ್ಮಗಳ ಭಕ್ತರು ಮೆರವಣಿಗೆಯಲ್ಲಿ ಸಾಗಿ ತಮ್ಮ ಐಕ್ಯತೆಯನ್ನು ಸಾರುತ್ತಾರೆ. ನಂತರ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಉತ್ಸವ ಶ್ರೀಪೀಠವನ್ನು ಪ್ರವೇಶಿಸುತ್ತದೆ. ಈ ಅಪರೂಪದ ಭಾರತ ಹುಣ್ಣಿಮೆ ಉಜ್ಜಯಿನಿ ಪೀಠದ ಭಾವೈಕ್ಯತೆಯನ್ನು ಸಾರುವ ಮುಖೇನ ಮಾನವಧರ್ಮದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತದೆ.
ನಿರಂಜನ ದೇವರಮನೆ ಚಿತ್ರದುರ್ಗ