

ದೇಶದ ವೈಮಾನಿಕ ಕ್ಷೇತ್ರದಲ್ಲಿ ಅಕ್ಟೋಬರ್ 31ರಂದು ಹೊಸ ಅಧ್ಯಾಯವೊಂದು ಆರಂಭವಾಯಿತು. ಸರ್ದಾರ್ ವಲ್ಲಭ್ಭಾಯ್ ಪಟೇಲರ ಏಕತೆ ಪ್ರತಿಮೆಯಿರುವ ಕೇವಡಿಯಾದಿಂದ ಅಹಮದಾಬಾದ್ ನರ್ಮದಾ ನದಿಯ
ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ‘ಹವಾಯಿ ಚಪ್ಪಲಿಯಿಂದ ಹವಾಯಿ ಜಹಾಜ್’ವರಗೆ ಎಂದು ಬಣ್ಣಿಸಿದ್ದಾರೆ. ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೂ ವಿಮಾನ ಪ್ರಯಾಣ ಸಾಕಾರಗೊಳಿಸಿದ ಯೋಜನೆಯೇ ‘ಉಡಾನ್’. ದೇಶದ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೆ ವಿಮಾನಸಂಪರ್ಕ ಒದಗಿಸವುದು ಇದರ ಪ್ರಮುಖ ಉದ್ದೇಶ. ವೈಮಾನಿಕ ಕ್ಷೇತ್ರದಲ್ಲಿ ಬೆಳವಣಿಗೆಗೆ ವಿಪುಲ ಅವಕಾಶಗಳು ಇದ್ದರೂ ಅದನ್ನು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಲು ಯಾವುದೇ ಯೋಜನೆ ರೂಪಿಸದ ಕಾರಣ ಬಹುತೇಕ ವಿಮಾನ ನಿಲ್ದಾಣಗಳು ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿ ಇದ್ದವು.
ಉಡಾನ್ ಯೋಜನೆಯನ್ನು ಕೇಂದ್ರ, ರಾಜ್ಯ ಸರ್ಕಾರಗಳ ಮತ್ತು ಖಾಸಗಿ ವಿಮಾನಯಾನ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಭಾಗಿಯಾಗುವ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ವಿಮಾನ ಪ್ರಯಾಣದರಕ್ಕೆ ಸಹಾಯಧನವನ್ನು ನೀಡುತ್ತಿದೆ. ಟಿಕೆಟ್ ಮೇಲಿನ ಸೇವಾತೆರಿಗೆಯಲ್ಲಿ ರಿಯಾಯಿತಿ, ಲ್ಯಾಂಡಿಂಗ್ ಶುಲ್ಕ ವಿನಾಯತಿ, ಹಾಗೆಯೇ ರಾಜ್ಯ ಸರ್ಕಾರಗಳು ವಿಮಾನ ನಿಲ್ದಾಣ ನಿರ್ವಣಕ್ಕೆ ಉಚಿತ ಭೂಮಿ, ನೀರು ಮತ್ತು ವಿದ್ಯುತ್ ದರದಲ್ಲಿ ರಿಯಾಯಿತಿ ಸೇರಿ ಹಲವು ಸೌಕರ್ಯ ಒದಗಿಸುತ್ತಿವೆ.
ಈಗಾಗಲೇ 4 ಹಂತದಲ್ಲಿ ವಿವಿಧ ಮಾರ್ಗಗಳನ್ನು ಬಿಡ್ ಮೂಲಕ ವಿಮಾನಯಾನ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಹಂಚಿಕೆಯಾಗಿರುವ ಒಟ್ಟು 748 ಮಾರ್ಗಗಳ ಪೈಕಿ 293 ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭವಾಗಿದೆ. ಮೊದಲ ಒಂದು ಗಂಟೆ ಪ್ರಯಾಣದ ಅವಧಿಗೆ -ಠಿ; 2,500 ನಿಗದಿಯಾಗಿದೆ ಮತ್ತು ಶೇಕಡ 50 ಸೀಟುಗಳು ಇದಕ್ಕಾಗಿ ಮೀಸಲು. ಉಳಿದ ಶೇ.50 ಸೀಟುಗಳನ್ನು ವಾಣಿಜ್ಯ ದರದಲ್ಲಿ ಮಾರಾಟ ಮಾಡಲಾಗುತ್ತದೆ. ವಿಶೇಷವಾಗಿ ಈಶಾನ್ಯ ರಾಜ್ಯಗಳಿಗೆ ಪ್ರಾಧಾನ್ಯ ನೀಡಲಾಗಿದೆ.
ಉಡಾನ್ ಯೋಜನೆ ವ್ಯಾಪ್ತಿಯನ್ನು ಪ್ರಾದೇಶಿಕ ಸಂರ್ಪಕಕ್ಕೆ ಸೀಮಿತಗೊಳಿಸದೆ ನೆರೆಯ ದೇಶಗಳ ಪ್ರಯಾಣಕ್ಕೂ ವಿಸ್ತರಿಸಲಾಗಿದೆ. ಕಠ್ಮಂಡು, ಢಾಕಾ, ಸಿಂಗಾಪುರ, ಬ್ಯಾಂಕಾಕ್ ಮತ್ತು ಕೌಲಾಲಂಪುರ್ಗಳಿಗೂ ವಿಮಾನ ಸೇವೆ ಈ ಯೋಜನೆಯಡಿಯಲ್ಲಿ ಸೇರ್ಪಡೆ ಮಾಡಲಾಗಿದೆ.
ದೇಶದಲ್ಲಿ 486 ವಿಮಾನ ನಿಲ್ದಾಣಗಳಿವೆ. ಅದರಲ್ಲಿ 34 ಅಂತಾರಾಷ್ಟ್ರೀಯ ಮತ್ತು 123 ವಾಣಿಜ್ಯ ಬಳಕೆಯ ನಿಲ್ದಾಣಗಳು. 384 ನಿಲ್ದಾಣಗಳು ಯಾವುದೇ ವಿಮಾನ ಹಾರಾಟವಿಲ್ಲದೆ ಅನುಪಯುಕ್ತವಾಗಿವೆ. 16 ವಿಮಾನ ನಿಲ್ದಾಣಗಳು ಸಾಮರ್ಥ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ.
ಉಡಾನ್ ಯೋಜನೆ ಜಾರಿಗೊಳ್ಳುವ ಮುನ್ನ ದೇಶದಲ್ಲಿ 380 ವಿಮಾನಗಳು ಸಂಚರಿಸುತ್ತಿದ್ದವು. ಕಳೆದ 3 ವರ್ಷದಲ್ಲಿ ಇದರ ಸಂಖ್ಯೆ 700 ದಾಟಿದೆ. ಅಲ್ಲದೆ ಇಲ್ಲಿಯತನಕ ಬಳಕೆಯಾಗದ ವಿಮಾನ ನಿಲ್ದಾಣಗಳ ಪೈಕಿ 100 ನಿಲ್ದಾಣಗಳು ಸಕ್ರಿಯವಾಗಿವೆ. ಹತ್ತಾರು ವಿಮಾನ ಸಂಸ್ಥೆಗಳು ಹೊಸದಾಗಿ ಆರಂಭವಾಗಿ ಈವರೆಗೆ ಸಂಪರ್ಕವೇ ಇಲ್ಲದ ಸ್ಥಳಗಳಿಗೆ ವಿಮಾನ ಸಂಪರ್ಕ ಸೇವೆ ನೀಡುತ್ತಿವೆ. ತನ್ಮೂಲಕ ಈ ಪ್ರದೇಶಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಹಕಾರಿಯಾಗಿದೆ. ವ್ಯಾಪಾರ ವೃದ್ಧಿಯಾಗಿ, ಉದ್ಯೋಗಸೃಷ್ಟಿಗೆ ಪೂರಕವಾಗಿದೆ ಮತ್ತು ವಿಶೇಷವಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಲಾಭವಾಗಿದೆ.
ಕರ್ನಾಟಕದಲ್ಲಿ ಕೇವಲ ಬೆಂಗಳೂರು ಮತ್ತು ಮಂಗಳೂರಿಗೆ ವಿಮಾನ ಸೇವೆ ಲಭ್ಯವಿತ್ತು. ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ವಿಮಾನ ನಿಲ್ದಾಣಗಳು ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿ ಇದ್ದವು. ಉಡಾನ್ ಯೋಜನೆಯಡಿಯಲ್ಲಿ ಈ ನಗರಗಳನ್ನು ಸೇರ್ಪಡೆಗೊಳಿಸಿದ ಬಳಿಕ ಇದೀಗ ಈ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. 3ನೇ ಹಂತದಲ್ಲಿ ಕಲುಬುರಗಿ ಮತ್ತು ಬೀದರ್ ನಗರಗಳು ಸೇರ್ಪಡೆಯಾದ ಕಾರಣ ಈಗ ಕಲ್ಯಾಣ ಕರ್ನಾಟಕ ಭಾಗವೂ ವಿಮಾನ ಸಂಪರ್ಕ ಪಡೆದಿದೆ.
1998ರಲ್ಲಿ ಅಂದಿನ ವಿಮಾನಯಾನ ಸಚಿವ ಅನಂತಕುಮಾರ್ ಪ್ರಯತ್ನದಿಂದ ‘ಗುಜರಾತ್ ಏರ್ಲೈನ್ಸ್’ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸೇವೆಯನ್ನು ಆರಂಭಿಸಿತ್ತು. ಆದರೆ ಹೆಚ್ಚು ಕಾಲ ನಡೆಯಲಿಲ್ಲ. ನಂತರ ಹಲವು ಬಾರಿ ಹುಬ್ಬಳ್ಳಿ ಮತ್ತು ಮೈಸೂರು ವಿಮಾನ ನಿಲ್ದಾಣಗಳಿಂದ ವಿಮಾನ ಸೇವೆ ಒದಗಿಸುವ ಪ್ರಯತ್ನ ನಡೆದರೂ ಪ್ರಯಾಣಿಕರ ಕೊರತೆಯಿಂದ ಯಶಸ್ವಿಯಾಗಲಿಲ್ಲ.
ಬದಲಾದ ಪರಿಸ್ಥಿತಿಯಲ್ಲಿ ಪ್ರಸಕ್ತ ದೇಶದ 5 ದಟ್ಟಣೆಯ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿ ಸ್ಥಾನ ಪಡೆದಿವೆ. ಉಡಾನ್ ಯೋಜನೆಯಿಂದ ಹೇಗೆ ವಿಮಾನ ಸಂಚಾರ/ಸೇವೆಯಲ್ಲಿ ಸಕಾರಾತ್ಮಕ ಬದಲಾವಣೆ ಆಗಿದೆ ಎನ್ನುವುದಕ್ಕೆ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳ ಪ್ರಗತಿಯೇ ಸಾಕ್ಷಿ. ವಿಮಾನಯಾನವಲ್ಲದೆ ಹೆಲಿಕಾಪ್ಟರ್ ಮತ್ತು ಸೀಪ್ಲೇನ್ ಸೇವೆಗಳಿಗೂ ಮಾರ್ಗಗಳನ್ನು ಗುರುತಿಸಿ ಅನುಮೋದಿಸಲಾಗಿದೆ. ಇದರ ಪರಿಣಾಮವಾಗಿಯೇ ಕೇವಡಿಯಾ-ಅಹಮದಾಬಾದ್ ನಡುವೆ ದೇಶದ ಮೊದಲ ಸೀಪ್ಲೇನ್ ಸೇವೆ ಆರಂಭವಾಗಿದೆ.
ಉಡಾನ್ ಯೋಜನೆಯಿಂದ ಭಾರತದ ವೈಮಾನಿಕ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಿದೆ. ಭಾರತ ಪ್ರಸಕ್ತ 1000ಕ್ಕೂ ಹೆಚ್ಚು ವಿಮಾನ ಖರೀದಿಸಲು ಮುಂದಾಗಿದೆ. ಅಮೆರಿಕ ಮತ್ತು ಚೀನಾ ನಂತರ ವಿಮಾನಗಳ ಬೇಡಿಕೆಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಉಡಾನ್ ಯೋಜನೆಯ ಫಲವಾಗಿ ಭಾರತ ವಿಶ್ವದಲ್ಲೇ ಅತಿ ಹೆಚ್ಚು ವೇಗವಾಗಿ ವಿಮಾನಯಾನ ಕ್ಷೇತ್ರದಲ್ಲಿ ಬೆಳೆಯುತ್ತಿದೆ. ಹಿಂದೆ ನಮ್ಮ ರಾಜ್ಯದವರಾದ ಕ್ಯಾ.ಗೋಪಿನಾಥ್ರವರ ಡೆಕ್ಕನ್ ಏರವೇಸ್ ಮೊಟ್ಟಮೊದಲು ಅಗ್ಗದ ದರದಲ್ಲಿ ವಿಮಾನ ಸೇವೆಯನ್ನು ಆರಂಭಿಸಿತು. ಆದರೆ ಸರ್ಕಾರದ ಬೆಂಬಲವಿಲ್ಲದೆ ಸಂಸ್ಥೆ ಸೊರಗಿ, ಅಂತಿಮವಾಗಿ ಕಿಂಗ್ಫಿಶರ್ ಏರ್ಲೈನ್ಸ್ನಲ್ಲಿ ವಿಲೀನವಾಯಿತು. 20 ವರ್ಷಗಳ ತರುವಾಯ ಮೋದಿ ಅದೇ ಪ್ರಯೋಗವನ್ನು ವ್ಯಾವಹಾರಿಕವಾಗಿ ಮಾಡುವ ಮೂಲಕ, ವಿಮಾನಯಾನ ಸಂಸ್ಥೆಗಳಿಗೆ ಲಾಭದಾಯಕ ಹಾಗೂ ರಾಜ್ಯಗಳಿಗೆ ವಿಮಾನಸೇವೆಯ ಸೌಲಭ್ಯ ಸಿಗುವಂತೆ ಮಾಡಿದ್ದಾರೆ.
ವಿಮಾನ ಹಾರಾಟ ಆರಂಭವಾಗುವುದರಿಂದ ಅದರಿಂದ ಉಂಟಾಗುವ ಪ್ರಯೋಜನ ಎಲ್ಲ ರಾಜ್ಯಗಳಿಗೂ ಅರಿವಾಗಿದೆ. ಹೀಗಾಗಿ ರಾಜ್ಯಗಳು ಪೈಪೋಟಿ ಮೇಲೆ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಗಮನ ಹರಿಸಿವೆ. ಕರ್ನಾಟಕದಲ್ಲಿ ಕೊಪ್ಪಳ, ಚಿಕ್ಕಮಗಳೂರು, ವಿಜಯಪುರ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಗಳ ಯೋಜನೆಗೆ ಚಾಲನೆ ದೊರತಿದೆ. ರಾಜ್ಯದ ಪ್ರವಾಸೋದ್ಯಮಕ್ಕೆ ಇದರಿಂದ ಹೆಚ್ಚು ಪ್ರಯೋಜನವಾಗುವುದು ಮತ್ತು ಅಕ್ಕಪಕ್ಕದ ಜಿಲ್ಲೆಗಳ ಅಭಿವೃದ್ಧಿಗೂ ಸಹಾಯವಾಗುವುದು.
ವಿಮಾನಯಾನ ಕೇವಲ ಶ್ರೀಮಂತರ ಸ್ವತ್ತಾಗದೆ ಅದು ಜನಸಾಮಾನ್ಯರಿಗೂ ದೊರೆಯುವ ಸೇವೆಯಾಗಿ ಮಾರ್ಪಟ್ಟಿದೆ. ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಘೊಷಣೆಗೆ ಸೀಮಿತವಾಗದೆ ಫಲಾನುಭವಿಗಳಿಗೆ ತಲುಪಿಸುವ ಕಾರ್ಯದಲ್ಲಿ ಗಣನೀಯ ಯಶಸ್ಸನ್ನು ಕಂಡಿವೆ ಎಂಬುದಕ್ಕೆ ಉಡಾನ್ ಸಮರ್ಥ ನಿದರ್ಶನ.
(ಲೇಖಕರು ಸಾಮಾಜಿಕ ಕಾರ್ಯಕರ್ತರು, ಹವ್ಯಾಸಿ ಬರಹಗಾರರು)