ಅಧಿಕಾರದ ಎರಡು ದಶಕ, ಸಾಧನೆಯ ಶತಕ...: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಂಕಣ ಬರಹ

Modi
Published on

ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರಿ ಮುಖ್ಯಸ್ಥರ ಹುದ್ದೆಯನ್ನು ನಿಭಾಯಿಸುತ್ತಿರುವುದಕ್ಕೆ ಎರಡು ದಶಕ ತುಂಬಿದೆ. 2001ರ ಅಕ್ಟೋಬರ್ 7ರಂದು ಅವರು ಮೊದಲ ಬಾರಿಗೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನ ಸೇವಕನ ವರೆಗಿನ ಹುದ್ದೆ ನಿಭಾಯಿಸಿದ ಈ 20 ವರ್ಷಗಳ ಸಾರ್ವಜನಿಕ ಸೇವೆಯ ಪಯಣದಲ್ಲಿ ಮೋದಿಯವರು ಭಾರತವನ್ನು ಸಮೃದ್ಧ ಹಾಗೂ ಬಲಿಷ್ಠ; ಅಂದರೆ ವಿಶ್ವಗುರುವನ್ನಾಗಿ ಮಾಡಲು ಸಮರ್ಪಣಾ ಭಾವದಿಂದ ದುಡಿದಿದ್ದಾರೆ. ಅಪ್ಪಟ ಕರ್ಮಯೋಗಿಯಾದ ಮೋದಿ, ನವಭಾರತದ ನಮ್ಮ ಕನಸನ್ನು ನನಸು ಮಾಡುವಲ್ಲಿ ದೇಶಕ್ಕೆ ಆತ್ಮವಿಶ್ವಾಸ ತುಂಬಿದ್ದಾರೆ.

ಭುಜ್​ನಲ್ಲಿ ಮಹಾ ಭೂಕಂಪದಿಂದ ರಾಜ್ಯ ನಲುಗುತ್ತಿದ್ದಾಗ ಮೋದಿ ಗುಜರಾತ್​ನ ಸಿಎಂ ಆಗಿ ಅಧಿಕಾರಕ್ಕೆ ಬಂದಿದ್ದರು. ಭುಜ್​ನ ಮರುನಿರ್ವಣದಿಂದ ಹಿಡಿದು ಗುಜರಾತ್​ನ ಆರ್ಥಿಕತೆ ಮತ್ತು ಮೂಲಸೌಕರ್ಯ ಬಲವರ್ಧನೆ ವರೆಗೆ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್​ನ ಸವಾಲನ್ನು ಬಿಜೆಪಿ ಸಮರ್ಥವಾಗಿ ಎದುರಿಸಲು ಮುಂಚೂಣಿಯಲ್ಲಿ ಕೆಲಸ ಮಾಡುವವರೆಗೆ; ಹಾಗೂ ಈಗ ಭಾರತವನ್ನು ಆಮೂಲಾಗ್ರವಾಗಿ ಪರಿವರ್ತಿಸಲು ಕೆಲಸ ಮಾಡುವವರೆಗೆ ಅವರ ಕಳೆದೆರಡು ದಶಕಗಳ ಕೆಲಸಕಾರ್ಯಗಳು ಬಿಜೆಪಿಗೆ, ಗುಜರಾತ್​ಗೆ ಹಾಗೂ ಈಗ ಇಡೀ ದೇಶಕ್ಕೆ ಅಪಾರ ಲಾಭ ತಂದುಕೊಟ್ಟಿವೆ.

ಬಡವರು ಮತ್ತು ಹಿಂದುಳಿದವರ ಕಲ್ಯಾಣ, ದೇಶದ ಪ್ರಗತಿ ಮತ್ತು ಸಮೃದ್ಧಿ -ಇದು ಬದ್ಧತೆ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯ ಹಾದಿ ಸವೆಸುತ್ತಿರುವ ಮೋದಿಯವರ ಆಡಳಿತ ಮಂತ್ರವಾಗಿದೆ. ಇಂದು ಇಡೀ ಜಗತ್ತಿನ ಪ್ರಮುಖ ಶಕ್ತಿರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಸೇವೆಯೇ ಸಂಘಟನೆ ಎಂಬ ಧ್ಯೇಯವನ್ನು ಸಾಕಾರಗೊಳಿಸುತ್ತಿರುವುದಕ್ಕಾಗಿ ಬಿಜೆಪಿ ಜಾಗತಿಕ ಮನ್ನಣೆ ಪಡೆಯುತ್ತಿದೆ.

ಜಾಗತಿಕ ಮಾದರಿ: ಮೋದಿಯವರು ಗುಜರಾತ್ ಸಿಎಂ ಆಗಿ ಸಾಮಾಜಿಕ ಕಲ್ಯಾಣವನ್ನು ತಳಪಾಯವಾಗಿ ಹೊಂದಿರುವ ಸಮಗ್ರ ಅಭಿವೃದ್ಧಿಯ ಧೋರಣೆಯ ಹೊಸ ಮಾದರಿಯನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತಿಗೆ ನೀಡಿದ್ದರು. ಸಾಮಾಜಿಕ ಕ್ಷೇತ್ರದಲ್ಲಿ ಕನ್ಯಾ ಕೇಲವ್ನಿ ಯೋಜನೆ, ಶಾಲಾ ಪ್ರವೇಶೋತ್ಸವ್, ಬೇಟಿ ಬಚಾವೋ-ಬೇಟಿ ಪಢಾವೋ ಮುಂತಾದ ಯೋಜನೆಗಳು ಶಾಲಾ ದಾಖಲಾತಿ ಮತ್ತು ಮಹಿಳಾ ಸಾಕ್ಷರತೆ ಹೆಚ್ಚಲು ಕಾರಣವಾಗಿದ್ದವು. ಜ್ಯೋತಿಗ್ರಾಮ ಯೋಜನೆ, ಇ-ಗ್ರಾಮ ವಿಶ್ವಗ್ರಾಮ, ಜಲಸಂರಕ್ಷಣೆ, ಅಂತರ್ಜಲ ವೃದ್ಧಿ ಯೋಜನೆ ಮೊದಲಾದ ಯೋಜನೆಗಳಿಂದ ಗ್ರಾಮೀಣ ಅಭಿವೃದ್ಧಿಯ ಗುಜರಾತ್ ಮಾದರಿ ಇಡೀ ಜಗತ್ತಿಗೆ ಅಧ್ಯಯನ ವಿಷಯವಾಗಿತ್ತು.

ಮಹತ್ವದ ಕ್ಷಣ: ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ದಶಕದಷ್ಟು ದೀರ್ಘಯುಗಕ್ಕೆ 2014ರಲ್ಲಿ ಅಂತ್ಯ ಹಾಡುವ ಮೂಲಕ ಮಹತ್ವದ ಕ್ಷಣ ಭಾರತದಲ್ಲಿ ದಾಖಲಾಯಿತು. ಮೋದಿಯವರ ಪರವಾಗಿ ಭಾರಿ ಜನಮತ ವ್ಯಕ್ತವಾಯಿತು. ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಬಡವಾತಿ ಬಡವರ ಏಳಿಗೆಗಾಗಿ ಮರು-ಸಮರ್ಪಿಸಿಕೊಂಡರು. ಈ ರೀತಿಯಾಗಿ ನವಭಾರತ ನಿರ್ವಣದತ್ತ ಪ್ರಯಾಣ ಆರಂಭಿಸಿದರು.

ಮೋದಿ ಒಬ್ಬ ಸಾಮೂಹಿಕ ನಾಯಕ. ಅವರು ಜಗತ್ತಿನ ಅತಿ ಜನಪ್ರಿಯ ನೇತಾರನೂ ಹೌದು. ಸಿಎಂ ಆಗಿ ಮೊದಲ ಅವಧಿಯಲ್ಲಿ ಹಾಗೂ ಪ್ರಧಾನಿಯಾಗಿಯೂ ಮೊದಲ ಅವಧಿಯಲ್ಲಿ ಅವರು ಜನಸಮೂಹವನ್ನು ಮುಟ್ಟಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದರು. ಗುಜರಾತ್ ಸಿಎಂ ಆಗಿದ್ದಾಗ, ಪ್ರಕೃತಿ ವಿಕೋಪಗಳ ಸಂದರ್ಭ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಖುದ್ದು ಮೇಲ್ವಿಚಾರಣೆ ನಡೆಸುತ್ತಿದ್ದರು. ದುರಂತ ಸ್ಥಳಗಳಿಗೇ ಸ್ವತಃ ಹೋಗಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದರು.

ಎರಡು ಘಟನೆಗಳನ್ನು ನಾನಿಲ್ಲಿ ನೆನಪಿಸಿಕೊಳ್ಳ ಬಯಸುತ್ತೇನೆ. ಛತ್ತೀಸ್​ಗಢದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಅವರು ವೃದ್ಧ ಮಹಿಳೆಯೊಬ್ಬರ ಕಾಲು ಮುಟ್ಟಿ ನಮಸ್ಕರಿಸಿದ್ದರು. ಸ್ವಚ್ಛ ಭಾರತ ಅಭಿಯಾನಕ್ಕೆ ನೈರ್ಮಲ್ಯ ಕಾರ್ವಿುಕರ ಕೊಡುಗೆಯನ್ನು ಗೌರವಿಸಲು ಪೌರಕಾರ್ವಿುಕರ ಪಾದಗಳನ್ನು ತೊಳೆದಿದ್ದರು. ಫ್ರಧಾನಿಯವರು ಉತ್ತಮ ಸಂವಹನಕಾರ ಕೂಡಾ. ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ನಿಸ್ಸೀಮರು. ಉದಾಹರಣೆಗೆ, ಮಾಮಲ್ಲಪುರಂ ಬೀಚ್​ನಲ್ಲಿ ಅವರು ಕಸ ತೆಗೆದಿದ್ದು ಇಡೀ ದೇಶದಲ್ಲಿ ಸ್ವಚ್ಛ ಭಾರತ ಆಂದೋಲನಕ್ಕೆ ಕಾರಣವಾಯಿತು.

ಭಾರತ ಇಂದು ಮೋದಿ ನಾಯಕತ್ವದಲ್ಲಿ ವಿಶ್ವಾಸಭರಿತ ಹಾಗೂ ಸ್ವಾವಲಂಬಿ ದೇಶವಾಗಿ ಹೊರಹೊಮ್ಮಿದೆ. ಮೋದಿ ಸರ್ಕಾರದ ಪರಿಣಾಮಕಾರಿ ನೀತಿಗಳು ಮತ್ತು ಕಾರ್ಯಕ್ರಮಗಳ ಫಲವಾಗಿ ದೇಶ ಸಾಮಾಜಿಕ ಮತ್ತು ಆರ್ಥಿಕ ರಂಗಗಳಲ್ಲಿ ಉತ್ತಮ ಕಾರ್ಯ ನಿರ್ವಹಣೆ ತೋರುತ್ತಿದೆ. ಜನ ಧನ್ ಯೋಜನೆ, ಮುದ್ರಾ ಯೋಜನೆ, ಡಿಜಿಟಲ್ ಇಂಡಿಯಾ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಆತ್ಮನಿರ್ಭರ ಭಾರತ, ವೋಕಲ್ ಫಾರ್ ಲೋಕಲ್, ಮೇಕ್ ಇನ್ ಇಂಡಿಯಾ ಮೊದಲಾದವು ಅವುಗಳಲ್ಲಿ ಸೇರಿವೆ. ಬಗೆಹರಿಸುವುದು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದ್ದ

ಹಳೆಯ ಹಾಗೂ ಸುದೀರ್ಘವಾದ ಕೆಲವು ವಿವಾದಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದು ನಮ್ಮ ಪ್ರಧಾನ ಸೇವಕರ ದೊಡ್ಡ ಸಾಧನೆಯಾಗಿದೆ. ಸಂವಿಧಾನದ 370ನೇ ವಿಧಿ ರದ್ದು ಮಾಡಿ ಒಂದು ದೇಶ, ಒಂದು ಸಂವಿಧಾನ ಮತ್ತು ಒಂದು ಚಿಹ್ನೆ ಎಂಬ ದೇಶದ ಬದ್ಧತೆಯನ್ನು ಪೂರೈಸಿದ್ದು, ತ್ರಿವಳಿ ತಲಾಕ್​ನ ಅಂತ್ಯ, ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ವಣಕ್ಕೆ ಶಿಲಾನ್ಯಾಸ, ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿಕೆ, ಪೌರತ್ವ ತಿದ್ದುಪಡಿ ಕಾನೂನು, ಮೇಲ್ವರ್ಗದ ಆರ್ಥಿಕ ದುರ್ಬಲರಿಗೂ ಶೇಕಡ 10 ಮೀಸಲಾತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಇವೇ ಮೊದಲಾದವು ನರೇಂದ್ರ ಮೋದಿ ಸರ್ಕಾರ ದಾಟಿದ ಹಲವು ಪ್ರಮುಖ ಮೈಲಿಗಲ್ಲುಗಳಾಗಿವೆ.

ಸ್ಪಷ್ಟ ಸಂದೇಶ ರವಾನೆ: ದೇಶದ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿ ಹೇಳುವುದಾದರೆ, ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಲು ಮೋದಿ ಅನುಮತಿ ನೀಡುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದರು. ಹಿಂದಿನ ಸರ್ಕಾರಗಳ ಅಸ್ಪಷ್ಟ ವಿದೇಶಾಂಗ ನೀತಿ ಕೈ ಬಿಟ್ಟ ಮೋದಿ, ಹಳೆಯ ಗೆಳೆಯರೊಂದಿಗೆ ಬಾಂಧವ್ಯ ವೃದ್ಧಿಗೆ ಹೊಸ ಹೆಜ್ಜೆ ಇಟ್ಟರು. ಹೊಸ ಮಿತ್ರರನ್ನು ಮಾಡಿಕೊಳ್ಳಲು ಮುಂದಾದರು. ಯೋಗಕ್ಕೆ ನಿಜವಾದ ಜಾಗತಿಕ ಮನ್ನಣೆ ದೊರಕಿಸಿದ ಶ್ರೇಯಸ್ಸು ಮೋದಿಯದ್ದಾಗಿದೆ.

ಕರೊನಾ ಸಾಂಕ್ರಾಮಿಕತೆ ವೇಳೆ ನಮ್ಮ ಪ್ರಧಾನಿಯವರೇ ಖುದ್ದು ಮುಂಚೂಣಿಯಲ್ಲಿ ನಿಲ್ಲದಿದ್ದರೆ ಏನಾಗಬಹುದಿತ್ತು ಎನ್ನುವುದನ್ನು ನಾನು ಯೋಚಿಸುತ್ತೇನೆ. ಸಕಾಲದಲ್ಲಿ ಲಾಕ್​ಡೌನ್ ಹೇರಿದ್ದರಿಂದ ಹಿಡಿದು ವ್ಯಾಕ್ಸಿನ್ ಅಭಿವೃದ್ಧಿ ಹಾಗೂ ಲಸಿಕೆ ಅಭಿಯಾನದವರೆಗೆ ಮೋದಿಯವರು ದೇಶದ ಕೋವಿಡ್-ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಜಗತ್ತಿನ ಬಹುತೇಕ ಅಭಿವೃದ್ಧಿ ಹೊಂದಿದ ದೇಶಗಳು ಸಾಂಕ್ರಾಮಿಕತೆಯ ಬಿಕ್ಕಟ್ಟನ್ನು ಎದುರಿಸಲು ಪರದಾಡುತ್ತಿದ್ದಾಗ ಮೋದಿ ಭಾರತಕ್ಕೆ ಪರಿಣಾಮಕಾರಿ ನಾಯಕತ್ವ ನೀಡಿದರು. ಪ್ರತಿಪಕ್ಷಗಳ ಪ್ರತಿಕೂಲ ಪ್ರಚಾರದ ನಡುವೆಯೂ ನಮ್ಮ ವಿಜ್ಞಾನಿಗಳು ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಗತ್ತಿನ ಅತಿ ದೊಡ್ಡ ಲಸಿಕೆ ಅಭಿಯಾನ ಭಾರತದಲ್ಲಿ ನಡೆಯುತ್ತಿದ್ದು ಇದುವರೆಗೆ 97 ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದೆ. ಡಿಸೆಂಬರ್ ಹೊತ್ತಿಗೆ ಎಲ್ಲ ಅರ್ಹ ನಾಗರಿಕರಿಗೆ ಲಸಿಕೆ ಹಾಕುವ ಗುರಿ ಇದೆ.

ಮೋದಿಯವರು ನಮ್ಮ ಪ್ರಧಾನ ಸೇವಕರಾಗಿರುವುದು ನಮ್ಮ ಅದೃಷ್ಟ. ಅವರು ಪ್ರತಿ ಭಾರತೀಯರ ಜೀವನದಲ್ಲಿ ಎದು ಕಾಣುವಂಥ ಬದಲಾವಣೆ ತರುತ್ತಿದ್ದಾರೆ. ಭಾರತವನ್ನು ಮತ್ತೆ ವಿಶ್ವಗುರುವಿನ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಯತ್ನಿಸುತ್ತಿದ್ದಾರೆ. ಭಾರತದ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಪೂರೈಸಲು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘ ಆಯಸ್ಸು ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಪ್ರಸಕ್ತ ಜಾಗತಿಕ ಸನ್ನಿವೇಶದಲ್ಲಿ ಹಿಂದೆಂದಿಗಿಂತಲೂ ಮೋದಿಯವರ ಅಗತ್ಯ ಹೆಚ್ಚಾಗಿದೆ.

(ಲೇಖಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net