ಯದ್ವಾತದ್ವಾ ಉಬ್ಬಿದ್ದ ಚೀನಿ ಗುಳ್ಳೆಗೆ ಟ್ರಂಪ್ ದಬ್ಬಣ

3-680a81d0e615f
Published on
ವ್ಯವಹಾರಸ್ಥ ಡೊನಾಲ್ಡ್ ಟ್ರಂಪ್ 2017ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗುತ್ತಿದ್ದಂತೆಯೇ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯೂಟಿಓ) ವಿಧಿಸುವ ನಿಯಮಗಳು ಮತ್ತು ನೀಡುವ ರಿಯಾಯಿತಿಗಳು ಅಮೆರಿಕಾಗೆ ಅನುಕೂಲಕರವಲ್ಲ ಎಂದು ರ್ತಸಿ ತಮ್ಮ ದೇಶವನ್ನು ಆ ಸಂಘಟನೆಯಿಂದ ಹೊರಗೊಯ್ಯುವ ಮಾತುಗಳನ್ನಾಡಿದಾಗ ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್ ಪ್ರತಿಕ್ರಿಯಿಸಿದ್ದು ಅಮೆರಿಕಾ ತೆರವು ಮಾಡುವ ಸ್ಥಾನವನ್ನು ತುಂಬಲು ತಮ್ಮ ದೇಶ ತಯಾರಿದೆ ಎಂದು. ಅಂತಾರಾಷ್ಟ್ರೀಯ ರಾಜಕಾರಣ, ಜಾಗತಿಕ ಅರ್ಥವ್ಯವಸ್ಥೆ ಮತ್ತು ಅವೆರಡರ ನಡುವಿನ ಸಂಬಧಗಳು, ಅವುಗಳಲ್ಲಿ ಅಮೆರಿಕಾದ ಸ್ಥಾನದ ಬಗ್ಗೆ ಗಂಭೀರವಾಗಿ ಆಲೋಚಿಸಲು ಟ್ರಂಪ್​ರನ್ನು ಪ್ರೇರೇಪಿಸಿದ ಪ್ರಕರಣ ಇದು.

1995ರಲ್ಲಿ ಜಗತ್ತಿನ ಬಹುತೇಕ ಎಲ್ಲ ದೇಶಗಳ ಪ್ರಮುಖ ವ್ಯಾಪಾರ ಸಹಯೋಗಿ ಅಮೆರಿಕಾ ಆಗಿತ್ತು. ಇಪ್ಪತ್ತು ವರ್ಷಗಳ ನಂತರ 2015ರಲ್ಲಿ ಪರಿಸ್ಥಿತಿ ಬದಲಾಗಿ ಆ ಸ್ಥಾನಕ್ಕೆ ಚೀನಾ ಬಂದು ಕೂತಿತ್ತು. 1973ರಲ್ಲಿ ಅಮೆರಿಕಾಗೆ ರಫ್ತು ಮಾಡಲು ತನ್ನಲ್ಲಿರುವುದು ಯುವತಿಯರು ಮಾತ್ರ ಎಂದು ಹೇಳುತ್ತಿದ್ದ ಚೀನಾ 2010ರ ಹೊತ್ತಿಗೇ ಜಗತ್ತಿನ ಕಾರ್ಖಾನೆಯಾಗಿ ಮಾರ್ಪಾಡುಗೊಂಡು ಬಹುತೇಕ ಎಲ್ಲ ಬಳಕೆ ವಸ್ತುಗಳನ್ನು ಉತ್ಪಾದಿಸಿ ಇಡೀ ಜಗತ್ತಿಗೆ ರಫ್ತು ಮಾಡುತ್ತಿತ್ತು! ಆ ಮೂಲಕ ಅದು 2017ರಲ್ಲಿ ಗಳಿಸಿಟ್ಟುಕೊಂಡಿದ್ದ ವಿದೇಶಿ ವಿನಿಮಯ ಮೂರು ಟ್ರಿಲಿಯನ್ ಡಾಲರ್​ಗಳು! ಅಷ್ಟ್ಟ್ಲೇ ಅದು ಒಂದು ಟ್ರಿಲಿಯನ್ ಡಾಲರ್​ಗಳನ್ನು 70-80 ದೇಶಗಳಿಗೆ ಸಾಲವಾಗಿ ನೀಡಿ ಅವುಗಳಲ್ಲಿ ತನ್ನ ವರ್ಚಸ್ಸು ಬೆಳೆಸಿಕೊಂಡಿತು.

ಈ ವಿಷಯದಲ್ಲಿ ಅಮೆರಿಕಾ ಮತ್ತು ಇತರ ಪಶ್ಚಿಮದ ದೇಶಗಳಿಗೂ ಚೀನಾಗೂ ಇದ್ದ ವ್ಯತ್ಯಾಸವೆಂದರೆ ಅಮೆರಿಕಾ ಮತ್ತದರ ಪಶ್ಚಿಮದ ಸಹಯೋಗಿಗಳು ಹಾಗೂ ಅವುಗಳ ಪ್ರಭಾವದಲ್ಲಿರುವ ವಿಶ್ವಬ್ಯಾಂಕ್, ಐಎಂಎಫ್ ಮುಂತಾದುವು ಸಾಲ ನೀಡುತ್ತಿದ್ದುದು ಸಾಲ ಪಡೆದ ದೇಶಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತಿದ್ದ ಯೋಜನೆಗಳಿಗೆ ಮಾತ್ರ. ಬಡ್ಡಿದರವೂ ಕಡಿಮೆ, ಒಂದರಿಂದ ಒಂದೂವರೆ ಪರ್ಸೆಂಟ್ ಅಷ್ಟೇ.

ಆದರೆ ಚೀನಾ ತನ್ನ ಅಧ್ಯಕ್ಷ ಜಿನ್​ಪಿಂಗ್​ರ ಪ್ರಿಯ ಯೋಜನೆ ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್ (ಬಿಆರ್​ಐ) ಮೂಲಕ ಸಾಲ ನೀಡುತ್ತಿದ್ದುದು ವ್ಯರ್ಥ ಯೋಜನೆಗಳಿಗೆ. ಬಡ್ಡಿದರವೂ ಅಧಿಕ, ನಾಲ್ಕೂವರೆಯಿಂದ ಎಂಟು ಪರ್ಸೆಂಟ್! ಇದರಿಂದಾಗಿ ಸಾಲ ಪಡೆದ ದೇಶಗಳು ಮರುಪಾವತಿಸಲಾಗದೆ ಹೋದಾಗ ಅವುಗಳ ಬಂದರುಗಳು, ವಿಮಾನನಿಲ್ದಾಣಗಳು, ಗಣಿಗಳು, ಹೆದ್ದಾರಿಗಳ ಮೇಲೆ ತನ್ನ ಅಧಿಕಾರ ಸ್ಥಾಪಿಸಿಕೊಳ್ಳುವ ನಿಯಮವನ್ನೂ ಚೀನಾ ಸಾಲ ಒಪ್ಪಂದ ಪತ್ರದಲ್ಲಿ ಸೇರಿಸುತ್ತಿತ್ತು!

ಶ್ರೀಲಂಕಾದ ಹಂಬನ್​ತೋಟ, ಪಾಕಿಸ್ತಾನದ ದ್ವಾದಾರ್ ಬಂದರು, ಝಾಂಬಿಯಾದ ತಾಮ್ರದ ಗಣಿಗಳು, ಮ್ಯಾನ್ಮಾರ್​ನ Rare Earth Materials (ಆರ್​ಇಎಂ) ಅದಿರುಗಳು ಸೇರಿ ಜಗತ್ತಿನ ಹಲವೆಡೆ ಚೀನಾ ತನ್ನ ಅಧಿಕಾರ ಸ್ಥಾಪಿಸಿದ್ದು ಹೀಗೆ. ಇದೊಂದು ನವವಸಾಹತುಶಾಹಿ ತಂತ್ರವೇ ಸರಿ. ಚೀನಾದ ಇನ್ನೂ ಒಂದು ಕುಟಿಲತನವೆಂದರೆ, ಸಾಲ ಪತ್ರದಲ್ಲಿನ ನಿಯಮಗಳನ್ನು ಬಹಿರಂಗಪಡಿಸಕೂಡದೆಂಬ ಷರತ್ತನ್ನೂ ಸಾಲಗಾರ ದೇಶಗಳ ಮೇಲೆ ವಿಧಿಸುತ್ತಿತ್ತು! ಇದಕ್ಕೆ ವಿರುದ್ಧವಾಗಿ ನಡೆದು ಚೀನಾದ ಈ ನೀತಿಗೆಟ್ಟ ವ್ಯವಹಾರವನ್ನು ಬಹಿರಂಗಗೊಳಿಸಿದ್ದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್.

ಹೀಗೆ ವ್ಯರ್ಥ ಯೋಜನೆಗಳಿಗೆ ಅಧಿಕ ಬಡ್ಡಿದರದಲ್ಲಿ ಸಾಲ ನೀಡಿ, ಮರುಪಾವತಿಸಲಾಗದ ದೇಶಗಳ ನೆಲವನ್ನೇ ಕಬಳಿಸುವ ಚೀನಾ ಡಬ್ಲೂ್ಯಟಿಓದಲ್ಲಿ ಅಮೆರಿಕಾ ತೆರವು ಮಾಡುವ ಸ್ಥಾನವನ್ನು ತುಂಬಿದರೆ ಏನಾಗಬಹುದು? ಟ್ರಂಪ್​ರನ್ನು ಕಾಡಿದ್ದು ಈ ಪ್ರಶ್ನೆ. ಪರಿಣಾಮವಾಗಿ ಟ್ರಂಪ್ ಅಮೆರಿಕಾವನ್ನು ಡಬ್ಲೂ್ಯಟಿಓದಿಂದ ಹೊರಗೊಯ್ಯಲಿಲ್ಲ. ಜತೆಗೆ, ಚೀನಾದ ಈ ಕುಟಿಲ ನೀತಿಗಳಿಗೆ ಸಹಕಾರಿಯಾಗುತ್ತಿದ್ದ ಅದರ ಆದಾಯವನ್ನೇ ಕುಗ್ಗಿಸಲು ಯೋಜನೆ ರೂಪಿಸಿದರು. ಚೀನಾದಿಂದ ರಫ್ತಾಗುತ್ತಿದ್ದ ವಸ್ತುಗಳ ಮೇಲೆ ಅಧಿಕ ಸುಂಕ ವಿಧಿಸಿ ಸುಮಾರು 300 ಬಿಲಿಯನ್ ಡಾಲರ್ ಮೌಲ್ಯದ ಚೀನೀ ಸರಕುಗಳು ಅಮೆರಿಕಾದ ಮಾರುಕಟ್ಟೆಯನ್ನು ಪ್ರವೇಶಿಸದಂತೆ ತಡೆಯೊಡ್ಡಿದರು. ಬಹುಮಟ್ಟಿಗೆ ಅಮೆರಿಕಾದ ಮಾರುಕಟ್ಟೆಯನ್ನೇ ನೆಚ್ಚಿಕೊಂಡಿದ್ದ ಚೀನೀ ಕಬ್ಬಿಣ, ಉಕ್ಕು ಕಾರ್ಖಾನೆಗಳು ಮುಚ್ಚಿಹೋದದ್ದು ಆಗ. ಅಷ್ಟರಮಟ್ಟಿಗೆ ಚೀನೀ ಆದಾಯ ಕುಗ್ಗಿ, ಅದರ ತಂತ್ರಕ್ಕೂ ಕಡಿವಾಣ ಬಿತ್ತು. ಈ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಿದ್ದು ಕರೊನಾ ಸಂಕ್ರಮಣ.

ಆದರೆ ತಮ್ಮ ಈ ಕೆಲಸಗಳಿಗಾಗಿ ಟ್ರಂಪ್ ಬೆಲೆ ತೆರಬೇಕಾಯಿತು. ಚೀನಾ ಮತ್ತು ಅಮೆರಿಕಾದ್ದೇ ಡೆಮೋಕ್ರಾಟಿಕ್ ಪಕ್ಷದ ಜತೆಗೆ ಪಶ್ಚಿಮ ಯೂರೋಪಿಯನ್ ಎಡಪಂಥೀಯ ಶಕ್ತಿಗಳು ಒಟ್ಟುಗೂಡಿ 2020ರ ಚುನಾವಣೆಯಲ್ಲಿ ಟ್ರಂಪ್ ಸೋಲುವಂತೆ ಮಾಡಿದವು. ನೆರೆಯ ಕೆನಡಾದಲ್ಲಿ ಲಿಬರಲ್ ಪಕ್ಷ ಅಧಿಕಾರದಲ್ಲಿರುವಂತೆ ನೋಡಿಕೊಂಡವು. ನಂತರದ 4 ವರ್ಷಗಳಲ್ಲಿ ಅಮೆರಿಕಾದ ಮಾರುಕಟ್ಟೆ ಪ್ರವೇಶಿಸಲು ಚೀನಾ ಕಳ್ಳದಾರಿಗಳನ್ನು ಹುಡುಕಿಕೊಂಡಿತ್ತು. North America Free Trade Area (ನ್ಯಾಫ್ತಾ) ಸದಸ್ಯರಾಗಿದ್ದ ಕಾರಣ ಸುಂಕವಿಲ್ಲದೆ ಅಮೆರಿಕಾಗೆ ಸರಕುಗಳನ್ನು ರಫ್ತು ಮಾಡುವ ಸೌಲಭ್ಯ ಹೊಂದಿರುವ ಮೆಕ್ಸಿಕೋ, ಕೆನಡಾಗಳಿಗೆ ಬಿಡಿಭಾಗಗಳನ್ನು ಹೇರಳವಾಗಿ ಕಳಿಸುವುದು, ಅವು ಅಲ್ಲಿ ಜೋಡಣೆಗೊಂಡು ‘ಸಿದ್ಧವಸ್ತು’(?)ಗಳಾಗಿ Made in Mexico, Made in Canada ಹಣೆಪಟ್ಟಿ ಹಚ್ಚಿಕೊಂಡು ಸುಂಕವಿಲ್ಲದೆ ಗಡಿ ದಾಟಿ ಅಮೆರಿಕಾದ ಮಾರುಕಟ್ಟೆಗೆ ನುಗ್ಗುವುದು! ಇದು ಚೀನಾ ಕಂಡುಕೊಂಡ ಅತಿ ದೊಡ್ಡ ಕಳ್ಳದಾರಿ.

ಇದೇ ವಿಧಾನವನ್ನು ಅದು ವಿಯೆಟ್ನಾಂ, ಕಾಂಬೋಡಿಯಾ, ಮಲೇಷ್ಯಾಗಳ ವಿಷಯದಲ್ಲೂ ಅನುಸರಿಸಿತು. ಇದೆಲ್ಲವನ್ನೂ ಗಮನಿಸುತ್ತಿದ್ದ ಟ್ರಂಪ್ ತಕ್ಕ ತಯಾರಿ ಮಾಡಿಕೊಂಡೇ ಈ ಬಾರಿ ಶ್ವೇತಭವನ ಪ್ರವೇಶಿಸಿದರು. 2017ರಲ್ಲಿ ಅವರು ಅನನುಭವಿ. ಮುಂದಿನ 8 ವರ್ಷಗಳಲ್ಲಿ ಅವರ ಅನುಭವ, ಕಲಿತ ಪಾಠಗಳು ದೊಡ್ಡವೇ ಆಗಿವೆ. ಜತೆಗೆ ಅವರಲ್ಲಿಂದು ಅಗಾಧ ಪ್ರತೀಕಾರಭಾವವೂ ಮನೆಮಾಡಿದೆ. ಚೀನಾದ ದುಷ್ಟ ಯೋಜನೆಗಳಿಗೆ ಸಹಕಾರಿಯಾಗುವ ಅದರ ಆರ್ಥಿಕ ಶಕ್ತಿಯನ್ನು ನೇರವಾಗಿ, ಪೂರ್ಣವಾಗಿ ಕುಗ್ಗಿಸುವ ಮತ್ತು ಅದರ ಕಳ್ಳದಾರಿಗಳನ್ನು ಬಂದ್ ಮಾಡುವ ನಿಖರ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ. ಮೆಕ್ಸಿಕೋ, ಕೆನಡಾ ಮೇಲೆ ಶೇಕಡ 25 ಸುಂಕ ವಿಧಿಸುವ ಬೆದರಿಕೆ ಒಡ್ಡುವುದು, ಅದನ್ನು ಮತ್ತೆಮತ್ತೆ ಮುಂದೂಡುವುದು; ಜಗತ್ತಿನ ಎಲ್ಲ ದೇಶಗಳ ಮೇಲೆ ಪಾರಸ್ಪರಿಕ ಸುಂಕ ವಿಧಿಸುವ ಬೆದರಿಕೆಯೊಡ್ಡುವುದು, ಅದನ್ನೂ ಮುಂದೂಡಿ ತೆರೆಯ ಹಿಂದೆ ಮಾತುಕತೆೆಗೆ ಬಾಗಿಲು ತೆರೆಯುವುದು, ಚೀನಾದ ಮೇಲೆ ಮಾತ್ರ ಪಟ್ಟು ಸಡಿಲಿಸದಿರುವುದು ಟ್ರಂಪ್ ಮತ್ತವರಿಗೆ ಸೂಕ್ತ ಸಹಾಯಕರಾಗಿರುವ ವಾಣಿಜ್ಯ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರ ಚಾಣಾಕ್ಷ ಯೋಜನೆ.

ಟ್ರಂಪ್​ರ ಯೋಜನೆಗಳಿಗೆ ಚೀನಾ ತನಗರಿವಿಲ್ಲದೆ ಸಹಕರಿಸಿದ್ದನ್ನು ಕಳೆದ ಮೂರು ವಾರಗಳಲ್ಲಿ ನೋಡಿದ್ದೇವೆ. ಪಾರಸ್ಪರಿಕ ಸುಂಕಕ್ಕೆ ಪ್ರತಿಯಾಗಿ ಅಧಿಕ ಸುಂಕ ವಿಧಿಸಲು ಯಾವುದೇ ದೇಶ ಮುಂದಾದರೆ ಅದರ ವಿರುದ್ಧ ಸುಂಕವನ್ನು ಮತ್ತೂ ಹೆಚ್ಚಿಸುವುದಾಗಿ ಟ್ರಂಪ್ ಘೊಷಿಸಿಯೇ ಇದ್ದರು. ಇದನ್ನು ಬೇರೆ ದೇಶಗಳು ಅರ್ಥ ಮಾಡಿಕೊಂಡವು. ತಾವಾಗಿಯೇ ಮಾಡಿಕೊಂಡವೋ ಅಥವಾ ತೆರೆಯ ಹಿಂದೆ ಸೂಚನೆ ಸಿಕ್ಕಿತ್ತೋ ಹೇಳಲಾಗುವುದಿಲ್ಲ. ‘ಅಮೆರಿಕಾದ ವಸ್ತುಗಳ ಮೇಲೆ ನಾವೂ ಸುಂಕ ವಿಧಿಸುತ್ತೇವೆ’ ಎಂದು ಯೂರೋಪಿಯನ್ ಯೂನಿಯನ್ ಕೂಗಿತಷ್ಟೇ, ಏನೂ ವಿಧಿಸಲು ಹೋಗಲಿಲ್ಲ. ಇತರ ದೇಶಗಳು ಕೂಗಲೂ ಇಲ್ಲ. ಭಾರತವಂತೂ ಮೀಸೆಯಡಿಯಲ್ಲೇ ನಕ್ಕು ತಮಾಷೆ ನೋಡುತ್ತ ಕುಳಿತಿತು. ನವದೆಹಲಿಯ ಈ ನಡೆ ತೆರೆಯ ಹಿಂದೆ ‘ನಿಜವಾಗಿಯೂ’ ಏನೋ ನಡೆಯುತ್ತಿದೆ ಎಂಬ ಸುಳಿವು ನೀಡುತ್ತದೆ. ಮೋದಿ ಮತ್ತು ಟ್ರಂಪ್ ಒಬ್ಬರನ್ನೊಬ್ಬರು Good friend, Great friend ಎಂದು ಬಣ್ಣಿಸುವುದು ಸುಮ್ನೇ ಅಲ್ಲ.

1973ರಂತೆ 2025 ಅಲ್ಲ. ಜಾಗತಿಕವಾಗಿ ಆರ್ಥಿಕ, ರಾಜತಾಂತ್ರಿಕ, ಸಾಮರಿಕ ಪ್ರಭಾವಗಳ ಹಮ್ಮಿನಲ್ಲಿ ಬೀಗುತ್ತಿರುವ ನಕಲಿ ಕಮ್ಯೂನಿಸ್ಟ್ ಷಿ ಜಿನ್​ಪಿಂಗ್ ಎಲ್ಲ ನಕಲಿಗಳ ಹಾಗೇ ದೊಡ್ಡ ದನಿಯಲ್ಲಿ ಶಬ್ದ ಹೊರಡಿಸಲಾರಂಭಿಸಿದರು. ವ್ಯಾಪಾರಿ ಸಮರವಷ್ಟೇ ಅಲ್ಲ, ಯಾವ ಬಗೆಯ ಸಮರಕ್ಕಾದರೂ ಚೀನಾ ಸಿದ್ಧ ಎಂದು ಹೇಳಿ ಅಮೆರಿಕಾದ ವಸ್ತುಗಳ ಮೇಲೆ ಶೇ. 34 ಸುಂಕ ವಿಧಿಸಿದರು. ಟ್ರಂಪ್ ಹೂಡಿದ್ದ ಬಲೆಯೊಳಗೆ ಕಾಲಿಟ್ಟರು. ಅದಕ್ಕೇ ಕಾದಿದ್ದ ಟ್ರಂಪ್ ಚೀನಾದ ಮೇಲಿನ ಸುಂಕವನ್ನು ಶೇ. 104ಕ್ಕೇರಿಸಿದರು. ಬಲೆಯೊಳಗೆ ಇನ್ನೂ ಒಂದು ಹೆಜ್ಜೆಯಿಟ್ಟ ಷಿ ಅಮೆರಿಕಾದ ಮೇಲಿನ ಸುಂಕವನ್ನು ಶೇ. 84ಕ್ಕೇರಿಸಿದರು.

ಕಳೆದ ಎರಡು ವಾರಗಳಲ್ಲಿ ನಾವೇನು ನೋಡುತ್ತಿದ್ದೇವೆ! ಟ್ರಂಪ್ ವಿಧಿಸಹೊರಟ ಪಾರಸ್ಪರಿಕ ಸುಂಕಕ್ಕೆ ಕೃತ್ಯದ ಮೂಲಕ ಪ್ರತಿಕ್ರಿಯಿಸದ ಎಲ್ಲ ದೇಶಗಳ ಮೇಲೆ ಸುಂಕ ವಿಧಿಸುವುದನ್ನು 90 ದಿನಗಳಿಗೆ ಮುಂದೂಡಿದರು. ಲೆಕ್ಕಾಚಾರದಂತೇ 70-80 ದೇಶಗಳು ಟ್ರಂಪ್ ಆಡಳಿತದೊಂದಿಗೆ ತೆರೆಯ ಹಿಂದೆ ಮಾತುಕತೆ ಆರಂಭಿಸಿದವು. ಶ್ವೇತಭವನ ಪ್ರಮುಖವಾಗಿ ಗಮನ ನೀಡುತ್ತಿರುವುದು ಅಮೆರಿಕಾದ 15 ಪ್ರಮುಖ ವ್ಯಾಪಾರ ಸಹಯೋಗಿಗಳ ಬಗ್ಗೆ. ಅದರಲ್ಲೂ ಜಪಾನ್, ದಕ್ಷಿಣ ಕೊರಿಯಾ, ಭಾರತ, ಆಸ್ಟ್ರೇಲಿಯಾ, ಬ್ರಿಟನ್ ಮುಂಚೂಣಿಯಲ್ಲಿವೆ.

ಚೀನಾದ್ದು ಬೇರೆಯೇ ದಾರಿ. ಮೊದಲಿಗೆ ಅದು ಎರಡು ನಾಲಿಗೆಗಳಲ್ಲಿ ಮಾತಾಡತೊಡಗಿತು. ‘ಎಂಥ ಸಮರಕ್ಕಾದರೂ ನಾವು ಸಿದ್ಧ, ಯಾರಿಗೂ ತಲೆಬಾಗುವುದಿಲ್ಲ’ ಎಂದು ಷಿ ಮತ್ತವರ ಸಹಯೋಗಿಗಳು ಹೇಳುತ್ತ ಹೋದರೆ, ವಾಣಿಜ್ಯ ಮಂತ್ರಾಲಯದ ಹಿರಿಯ ಅಧಿಕಾರಿಗಳು ಹಾಡತೊಡಗಿದ ರಾಗವೇ ಬೇರೆ. ಚೀನಾ, ಅಮೆರಿಕಾ ಜಗತ್ತಿನ ದೊಡ್ಡ ಅರ್ಥವ್ಯವಸ್ಥೆಗಳು; ಇವುಗಳ ನಡುವೆ ವಿಶ್ವಾಸ, ಸಹಕಾರ, ಪರಸ್ಪರ ಲಾಭದಾಯಕ ಅವಲಂಬನೆ ಆರೋಗ್ಯಕರ ಜಾಗತಿಕ ಅರ್ಥವ್ಯವಸ್ಥೆಗೆ ಅಗತ್ಯ ಎಂಬ ಜೇನುಮಾತುಗಳು.

ಆದರೆ ತಮ್ಮೊಂದಿಗೆ ತೆರೆಯ ಹಿಂದೆ ಮಾತುಕತೆ ಆರಂಭಿಸಿರುವ ದೇಶಗಳಿಗೆ ಚೀನಾದ ಜತೆ ವ್ಯಾಪಾರ ಸಂಬಂಧಗಳನ್ನು ಕನಿಷ್ಠಗೊಳಿಸುವಂತೆ, ತಮ್ಮ ದೇಶವನ್ನು ಅಮೆರಿಕಾದೆಡೆಗೆ ಕಳ್ಳದಾರಿಯಾಗಿ ಚೀನಾ ಬಳಸಿಕೊಳ್ಳುವುದನ್ನು ತಡೆಯುವಂತೆ ಟ್ರಂಪ್ ಆಡಳಿತ ಹೇಳುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬರೆಯುತ್ತಿದ್ದಂತೆ ಚೀನಾ ತನ್ನ ನಿಜವಾದ ಬಣ್ಣ ತೋರಿಸತೊಡಗಿದೆ. ಮೃದು ಮಾತುಗಳು ನಿಂತುಹೋಗಿ ಚೀನೀ ಡ್ರಾ್ಯಗನ್ ಬೆಂಕಿಯುಗುಳತೊಡಗಿದೆ. ಚೀನಾಕ್ಕೆ ಹಿತಕರವಲ್ಲದ ಒಪ್ಪಂದಗಳನ್ನು ಯಾವುದೇ ದೇಶ ಅಮೆರಿಕಾದೊಂದಿಗೆ ಮಾಡಿಕೊಂಡರೆ ಆ ದೇಶದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಚೀನೀ ವಾಣಿಜ್ಯ ಮಂತ್ರಾಲಯ ತಿಳಿಸಿದೆ. ಇದು ಆರ್ಥಿಕ ಸಮರಕ್ಕೆ ತಾನು ಸಿದ್ಧ ಎಂದು ಚೀನಾ ನೇರವಾಗಿ ಹೇಳುವ ಬಗೆ. ಇನ್ನು ಶಸ್ತ್ರಾಸ್ತ್ರಗಳನ್ನು ಹಿಡಿದು ಯುದ್ಧಕ್ಕಿಳಿಯುತ್ತೇನೆ ಎಂದು ಚೀನಾ ಸೂಚನೆ ನೀಡುತ್ತಿರುವುದು ಹೇಗೆ? ಅದು ಕುತೂಹಲಕರ.

ಅಣುವಿಕಿರಣ ಉಂಟುಮಾಡದ ಹೈಡ್ರೋಜನ್ ಬಾಂಬ್​ಗಳನ್ನು ಚೀನಾ ಅಭಿವೃದ್ಧಿಪಡಿಸಿರುವುದಾಗಿ ಹಾಂಕಾಂಗ್​ನ ‘ಸೌತ್ ಚೈನಾ ಮಾರ್ನಿಂಗ್’ ಪೋಸ್ಟ್ ಇದೇ ಭಾನುವಾರ ವರದಿ ಮಾಡಿದೆ. ಈ ಬಾಂಬ್​ಗಳು ಅಣುವಿಕಿರಣ ಉಂಟುಮಾಡದ ಕಾರಣ ಅಣ್ವಸ್ತ್ರ ಬಳಕೆಯ ಕುರಿತಾಗಿ ಇರುವ ನಿಷೇಧ ಇದಕ್ಕೆ ಅನ್ವಯವಾಗುವುದಿಲ್ಲವಂತೆ. ಎರಡು ಸೆಕೆಂಡ್​ಗಳ ಕಾಲ 1,001 ಡಿಗ್ರಿ ಸೆಲ್ಷಿಯಸ್ ಉಷ್ಣತೆ ಉಂಟುಮಾಡುವ ಇದು ಎಲ್ಲವನ್ನೂ ಸುಟ್ಟುಬಿಡುತ್ತದಂತೆ, ಲೋಹಗಳನ್ನು ಕರಗಿಸಿಬಿಡುತ್ತದಂತೆ. ಅಷ್ಟೇ ಅಲ್ಲ, ಎರಡು ಕೇಜಿಗಳಷ್ಟು ಕಡಿಮೆ ತೂಕದ್ದೂ ಆಗಿರಬಹುದಾದ ಇದನ್ನು ಡ್ರೋನ್​ಗಳ ಮೂಲಕವೂ ವೈರಿ ನೆಲದ ಮೇಲೆ ಪ್ರಯೋಗಿಸಬಹುದಂತೆ. ಇದೆಲ್ಲ ಅಂತೆಕಂತೆಗಳು. ಚೀನೀ ಕಮ್ಯೂನಿಸ್ಟ್ ಪಕ್ಷದ ಮುಖವಾಣಿ ‘ಗ್ಲೋಬಲ್ ಟೈಮ್್ಸ’ನಲ್ಲಿ ಈ ವರದಿ ಬಂದಿದ್ದರೆ ಅದೆಲ್ಲ ಪ್ರಚಾರ ಅಷ್ಟೇ ಎಂದು ತಿಳಿದು ಎಲ್ಲರೂ ನಕ್ಕುಬಿಡುತ್ತಿದ್ದರು. ತನ್ನ ಬಳಿ ಇಂತಹ ಬಾಂಬ್ ಇದೆ ಎಂದು ಅಮೆರಿಕಾ (ಮತ್ತು ಭಾರತ ಸಹ!) ನಂಬಲಿ ಎಂದೇ ಚೀನಾ ಈ ವಿಷಯವನ್ನು ಹಾಂಕಾಂಗ್​ನ ಪತ್ರಿಕೆಯಲ್ಲಿ ಪ್ರಕಟಿಸಿದೆ. ಆದರೆ ಚೀನಾ ಲೇಸರ್ ಗನ್​ಗಳನ್ನು (ಲೇಸರ್ ಎಕೆ-47!) ತಯಾರಿಸಿದೆಯೆಂದು ಇದೇ ಪತ್ರಿಕೆ 2016ರಲ್ಲಿ ವರದಿ ಮಾಡಿತ್ತು. ಆದರೆ ಅಂತಹ ಗನ್ ಹಿಡಿದ ಯಾವುದೇ ಚೀನಿ ಸೈನಿಕ ಇದುವರೆಗೆ ಎಲ್ಲಿಯೂ ಕಾಣಿಸಿಲ್ಲ.

ಸರ್ವಾಧಿಕಾರಿ ಸತ್ತೆಯ ಉಸಿರೇ ಸುಳ್ಳು ಪ್ರಚಾರ ಎಂದು ಅರಿತಿರುವ ಟ್ರಂಪ್ ಚೀನಾ ವಿರುದ್ಧ ತನ್ನ ಪಟ್ಟನ್ನು ಸಡಿಲಿಸುತ್ತಿಲ್ಲ. ಚೀನೀ ಸರಕುಗಳ ಮೇಲಿನ ಸುಂಕವನ್ನು ಶೇ. 245ಕ್ಕೇರಿಸಿರುವ ಟ್ರಂಪ್ ಜಗತ್ತಿನ ಬಹುತೇಕ ದೇಶಗಳನ್ನು ತಮ್ಮ ಕಡೆ ಇರಿಸಿಕೊಂಡು ಚೀನೀ ಸರಕುಗಳನ್ನು ಅವುಗಳಿಂದ ಹೊರಗಿಡುವ, ಆ ಮೂಲಕ ಚೀನಿ ಅರ್ಥವ್ಯವಸ್ಥೆಯನ್ನು ಅನರ್ಥಗೊಳಿಸುವ ತಮ್ಮ ಕಾರ್ಯಯೋಜನೆಯಲ್ಲಿ ಮುಂದೆ ಸಾಗುತ್ತಿದ್ದಾರೆ. ಪರಿಣಾಮವಾಗಿ ಹಿಂದೆ ಸೈದ್ಧಾಂತಿಕವಾಗಿ ಜಗತ್ತು ಅಮೆರಿಕಾ, ಸೋವಿಯತ್ ಯೂನಿಯನ್ ನಡುವೆ ಹಂಚಿಹೋಗಿದ್ದಂತೆ ಈಗ ಆರ್ಥಿಕವಾಗಿ ಅಮೆರಿಕಾ, ಚೀನಾಗಳ ನಡುವೆ ಹಂಚಿಹೋಗುವ ಸನ್ನಿವೇಶ ಉಂಟಾಗುತ್ತಿದೆ.

ಆದರೆ ಚೀನಾ ಪರವಾಗಿ ಉತ್ತರ ಕೊರಿಯಾ ಮಾತ್ರ ಇರುವ ಸಾಧ್ಯತೆ ಇದೆ. ರಷ್ಯಾ ಸಹ ಅತ್ತ ಹೋಗದು. ಇರಾನ್ ಅನ್ನೂ ತನ್ನ ಕಡೆಗೆ ಸೆಳೆದುಕೊಳ್ಳುವಲ್ಲಿ ಅಮೆರಿಕಾ ಯಶಸ್ವಿಯಾಗುತ್ತಿರುವ ಸೂಚನೆ ಇರಾನಿ ವಿದೇಶ ಮಂತ್ರಿ ಅಬ್ಬಾಸ್ ಅರಾಘಿ ಅವರಿಂದ ಬಂದಿದೆ! ಅಮೆರಿಕಾ ಬಳಕೆದಾರ ದೇಶ, ಚೀನಾ ಉತ್ಪಾದಕ ದೇಶ, ಹೀಗಾಗಿ ತಾವು ಸರಕು ಮಾರಿ ಆದಾಯ ಗಳಿಸಬೇಕಾದರೆ ಅಮೆರಿಕಾದ ಜತೆಗೇ ಇರಬೇಕು ಎಂಬ ವಾಸ್ತವವನ್ನು ಎಲ್ಲ ದೇಶಗಳೂ ಅರಿತಿವೆ. ಹೀಗಿದ್ದೂ ಬಾಂಗ್ಲಾದೇಶದ ಅರ್ಥಶಾಸ್ತ್ರಜ್ಞ ನೇತಾರ ಚೀನಾವನ್ನು ನಂಬಿಕೊಂಡು ಭಾರತದ ವಿರುದ್ಧ ಕ್ಯಾತೆ ತೆಗೆಯುತ್ತಿರುವುದು ಏಕೆ? ಈ ಹುಚ್ಚಾಟಕ್ಕೆ ಭಾರತ ಯಾವ ಮದ್ದು ಅರೆಯುತ್ತದೆ? (ಮುಂದುವರಿಯುವುದು) (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net