ಅಮೆರಿಕದ ಭಾರತೀಯರಿಗೆ ಟ್ರಂಪಾಘಾತ

1-67967ad9442d4
Published on

ಟ್ರಂಪ್​ 2.0 ಸುವರ್ಣಯುಗವಾಗಲು ಸಾಧ್ಯವೇ? | ಆರಂಭದಲ್ಲೇ ಗೊಂದಲ

|ಬೆಂಕಿ ಬಸಣ್ಣ ನ್ಯೂಯಾರ್ಕ್​ ಡೊನಾಲ್ಡ್​ ಟ್ರಂಪ್​ ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಆವೇಶಭರಿತ ಭಾಷಣ ಮಾಡಿ "ಜೋ ಬೈಡೆನ್​ರ ದುರಾಡಳಿತ ಕೊನೆಗೊಂಡು ಅಮೆರಿಕದ ಸುವರ್ಣಯುಗ ಇಂದಿನಿಂದ ಆರಂಭವಾಗುತ್ತಿದೆ' ಎಂದು ಹೇಳಿದರು. ಅದೇ ಉಸಿರಿನಲ್ಲಿ, "ಅಮೆರಿಕವನ್ನು ಗ್ರೇಟ್​ ಮಾಡಲು ನನಗೆ ಜೀವದಾನ ಸಿಕ್ಕಿದೆ, ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇನೆ' ಎಂದೂ ತಿಳಿಸಿದರು.

ಟ್ರಂಪ್​ ಕಳೆದ ಒಂದು ವಾರದಲ್ಲಿ ತೆಗೆದುಕೊಂಡಿರುವ ಹಲವು ತೀರ್ಮಾನಗಳು ಗೊಂದಲಗಳಿಗೆ ಸಹ ಕಾರಣವಾಗಿದೆ. ಅವರು ಲಿಂಗ ವೈವಿಧ್ಯತೆ ಕುರಿತು ನಿರ್ಧಾರ ತೆಗೆದುಕೊಂಡು ಇನ್ನು ಅಮೆರಿಕದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲಾಗುವುದು ಎಂದು ಆದೇಶ ಹೊರಡಿಸಿದರು. ಇದು ಅವರ ಉತ್ತಮ ಆದೇಶಗಳಲ್ಲಿ ಒಂದೆಂದು ಹೇಳಬಹುದು.

ಜೋ ಬೈಡೆನ್​ ಸರ್ಕಾರ ಅಕ್ರಮ ವಲಸಿಗರಿಗೆ ಹಲವು ಸವಲತ್ತುಗಳನ್ನು ಒದಗಿಸಿತ್ತು. ಈ ಕುರಿತು ಜನರಲ್ಲಿ ಆಕ್ರೋಶ ಇತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್​ ಇದೇ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದ್ದರು. ಅಮೆರಿಕದಲ್ಲಿ 33 ಕೋಟಿ ಜನಸಂಖ್ಯೆ ಇದ್ದು ಇದರಲ್ಲಿ 1.2 ಕೋಟಿ ಜನರು ಅಕ್ರಮ ವಲಸಿಗರಿದ್ದಾರೆ. ಹಾಗಾಗಿ ಸಮಸ್ಯೆ ಹೆಚ್ಚಿದೆ. ಟ್ರಂಪ್​ ಈಗ ವಲಸೆ ನೀತಿಗಳನ್ನು ಕಠಿಣಗೊಳಿಸಿದ್ದು ಅಕ್ರಮ ವಲಸಿಗರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಅಧಿಕೃತ ವಲಸಿಗರ ಮೇಲೆ ಯಾವುದೇ ರ್ನಿಬಂಧ ಹೇರಿಲ್ಲ.

ಅಮೆರಿಕದಲ್ಲಿ ಒಟ್ಟು 1.2 ಕೋಟಿ ಅಕ್ರಮ ವಲಸಿಗರಿದ್ದಾರೆ, ಅವರಲ್ಲಿ ಭಾರತೀಯರ ಸಂಖ್ಯೆ ಅಮೆರಿಕ ಹೇಳುವಂತೆ 2.2 ಲಕ್ಷ ಇದೆ. ವಾಸ್ತವದಲ್ಲಿ ಅಕ್ರಮ ವಲಸಿಗ ಭಾರತೀಯರ ಸಂಖ್ಯೆ ಇನ್ನೂ ಹೆಚ್ಚಿದೆ ಎನ್ನಲಾಗುತ್ತಿದ್ದು, ಎಲ್ಲರನ್ನೂ ಗಡಿಪಾರು ಮಾಡುವುದು ಕಷ್ಟ. ಇಷ್ಟೂ ಜನರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಲು ಹಲವು ಬಿಲಿಯನ್​ ಡಾಲರ್​ ಹಣ ಬೇಕಾಗುತ್ತದೆ. ಆದರೆ ಅಮೆರಿಕಕ್ಕೆ ಬರುವ ಅಕ್ರಮ ವಲಸಿಗರಿಗೆ ಟ್ರಂಪ್​ ನಡೆ ಭಯವನ್ನಂತೂ ಹುಟ್ಟಿಸಲಿದೆ. ಆದ್ದರಿಂದ ಅಮೆರಿಕಕ್ಕೆ ಬರುವ ಅಕ್ರಮ ವಲಸಿಗರ ಪ್ರಮಾಣ ಕಡಿಮೆ ಆಗಬಹುದು.

ಪಾಲಕರು ವಾಪಸ್​: ಅಮೆರಿಕದಲ್ಲಿ ನೆಲೆಸಿರುವ ವಲಸಿಗರ ಪಾಲಕರು ಬಿ 1 ಮತ್ತು ಬಿ 2 ವೀಸಾ ಅಡಿ ಆರು ತಿಂಗಳು ಅಮೆರಿಕದಲ್ಲಿ ಇರಬಹುದು. ಆದರೆ ನೆವಾರ್ಕ್​ ವಿಮಾನ ನಿಲ್ದಾಣಕ್ಕೆ ಬಂದ ಕೆಲ ಪಾಲಕರನ್ನು ವಲಸೆ ಅಧಿಕಾರಿಗಳು ಭಾರತಕ್ಕೆ ವಾಪಸ್​ ಕಳುಹಿಸಿದ್ದಾರೆ. ರಿರ್ಟನ್​ ಟಿಕೆಟ್​ ಇಲ್ಲದ ಕಾರಣದಿಂದ ಅವರನ್ನು ವಾಪಸ್​ ಕಳುಹಿಸಲಾಗಿದೆ. ಇದು ಭಾರತೀಯರಿಗೆ ಆಘಾತದ ಸುದ್ದಿ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ ಟ್ರಂಪ್​ ಆಡಳಿತದಲ್ಲಿ ಹೊಸ ನಿಯಮಗಳು ಜಾರಿಗೆ ಬಂದಿರುವುದರಿಂದ ವಾಪಸ್​ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕೆ ಬಂದಿರುವ ವಿದ್ಯಾರ್ಥಿಗಳು ಕ್ಯಾಂಪಸ್​ ಹೊರಗೆ ಕೆಲಸ ಮಾಡಲು ಅವಕಾಶವಿದೆ. ಆದರೆ ಟ್ರಂಪ್​ ಅಧಿಕಾರಕ್ಕೆ ಬಂದ ಬಳಿಕ ವಲಸೆ ನೀತಿ ಕಠಿಣಗೊಳಿಸುತ್ತಿದ್ದಾರೆ ಹಾಗೂ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ವಿದ್ಯಾಭ್ಯಾಸದ ಭವಿಷ್ಯದ ದೃಷ್ಟಿಯಿಂದ ಹಲವು ವಿದ್ಯಾರ್ಥಿಗಳು ಪಾರ್ಟ್​ ಟೈಮ್​ ಕೆಲಸವನ್ನು ತೊರೆಯುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ದಿನನಿತ್ಯದ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಎಚ್​ 1& ಬಿ ವೀಸಾ ಹೊಂದಿರುವವರಿಗೂ ಭೀತಿ ಶುರುವಾಗಿದೆ. ಟ್ರಂಪ್​ ತಂಡದಲ್ಲಿ ಭಾರತೀಯರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ, ಹಲವರಿಗೆ ಪ್ರಮುಖ ಹುದ್ದೆಗಳು ಸಿಕ್ಕಿವೆ. ಟ್ರಂಪ್​ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತಮ ಬಾಂಧವ್ಯ ಹೊಂದಿರುವುದು ಗೊತ್ತೇ ಇದೆ. ಇದರ ಪರಿಣಾಮವನ್ನು ಕಾದುನೋಡಬೇಕಷ್ಟೆ.

ಆರ್ಥಿಕ ಸ್ಥಿತಿಗತಿ, ತೆರಿಗೆ ನೀತಿ: ಟ್ರಂಪ್​ 2017 ರಿಂದ 2021 ರವರೆಗೆ ಅಧ್ಯಕ್ಷರಾಗಿದ್ದಾಗ, ಅಮೆರಿಕದ ಆರ್ಥಿಕ ಕೊರತೆ 666 ಬಿಲಿಯನ್​ ಡಾಲರ್​ನಿಂದ 1 ಟ್ರಿಲಿಯನ್​ ಡಾಲರ್​ಗೆ ಏರಿಕೆಯಾಗಿತ್ತು. ಆ ಅವಧಿಯಲ್ಲಿ ಉದ್ದಿಮೆಗಳ ಮೇಲಿನ ತೆರಿಗೆ ಇಳಿಸಿದ್ದರು ಮತ್ತು ಕೋವಿಡ್​ 19 ಹಿನ್ನೆಲೆಯಲ್ಲಿ ಸರ್ಕಾರದ ವೆಚ್ಚ ಏರಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕದ ಸಾಲ ಶೇ. 40 ರಷ್ಟು ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಎರಡನೇ ಅವಧಿಯಲ್ಲಿ ಅವರು ಆಶ್ವಾಸನೆ ನೀಡಿದಂತೆ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆಯಿದೆ. ಕೆನಡಾ, ಮೆಕ್ಸಿಕೋ, ಚೀನಾ ಮೇಲೆ ತೆರಿಗೆ ಹೆಚ್ಚಳ ಮಾಡುವುದಾಗಿ ಟ್ರಂಪ್​ ತಿಳಿಸಿದ್ದಾರೆ. ಅದರಲ್ಲೂ ಕೆನಡಾ ಮತ್ತು ಮೆಕ್ಸಿಕೋ ಜತೆ ರಾಜತಾಂತ್ರಿಕ ಸಂಬಂಧವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಗ್ರೀನ್​ಲ್ಯಾಂಡ್​ ಮತ್ತು ಪನಾಮಾ ಕಾಲುವೆಯನ್ನು ಅಮೆರಿಕಕ್ಕೆ ಸೇರಿಸುವುದಾಗಿ ಹೇಳುತ್ತಿದ್ದಾರೆ.

ಟ್ರಂಪ್​&ಮಸ್ಕ್​ ದೋಸ್ತಿ ಎಷ್ಟು ದಿನ?: ಅಮೆರಿಕದಲ್ಲಿ ಅಪಾರ ಪ್ರಮಾಣದ ನೈಸರ್ಗಿಕ ಸಂಪನ್ಮೂಲವಿದೆ. ಈವರೆಗೆ ಹೊರದೇಶಗಳಿಂದ ಕಚ್ಚಾತೈಲವನ್ನು ತರಿಸಿಕೊಳ್ಳುತ್ತಿದೆ. ಈಗ ಟ್ರಂಪ್​ ನವೀಕರಿಸುವ ಇಂಧನ ಮೂಲಗಳನ್ನು ವಿರೋಧಿಸಿ, ದೇಶದಲ್ಲಿರುವ ಕಚ್ಚಾತೈಲವನ್ನು ಹೊರತೆಗೆದು ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದರಿಂದ ಹಣದುಬ್ಬರ ಕಡಿಮೆಯಾಗಲಿದೆ ಎಂಬುದು ಅವರ ಅಭಿಪ್ರಾಯ. ಟ್ರಂಪ್​ ರ್ನಿಣಯದಿಂದ ಜಾಗತಿಕವಾಗಿ ಕಚ್ಚಾತೈಲ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ. ಟ್ರಂಪ್​ ಸುಸ್ಥಿರ ಇಂಧನ ಮೂಲಗಳನ್ನು ವಿರೋಧಿಸುತ್ತಿರುವುದರಿಂದ ಟೆಸ್ಲಾ ಕಂಪನಿ ಮಾಲೀಕ ಎಲಾನ್​ ಮಸ್ಕ್​ ಮತ್ತು ಟ್ರಂಪ್​ ನಡುವಿನ ಸಂಬಂಧ ಎಷ್ಟು ದಿನ ಮುಂದುವರಿಯಲಿದೆ ಎಂಬ ಪ್ರಶ್ನೆ ಇದ್ದೇ ಇದೆ. ಒಟ್ಟಾರೆಯಾಗಿ ಟ್ರಂಪ್​ ಹಲವು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಟ್ರಂಪ್​ ಮೊದಲ ಅವಧಿಯ ಆಡಳಿತವನ್ನು ಗಮನಿಸಿದಾಗ ಟ್ರಂಪ್​ 2.0 ಸುವರ್ಣಯುಗವಾಗುವುದು ಕಷ್ಟವಿದೆ.

ಸದ್ಯಕ್ಕಂತೂ ನಿರಾಳ

ಚುನಾವಣೆ ವೇಳೆ ಹೆಚ್ಚಿನ ಭಾರತೀಯರು ಟ್ರಂಪ್​ಗೆ ಬೆಂಬಲ ನೀಡಿದ್ದರು. ಆದರೆ ಟ್ರಂಪ್​ ಅಧಿಕಾರಕ್ಕೆ ಬರುತ್ತಿದ್ದಂತೆ ಭಾರತೀಯರಿಗೆ ಶಾಕ್​ ಕೊಟ್ಟಿದ್ದಾರೆ. ಜನ್ಮಸಿದ್ಧ ಪೌರತ್ವದ ಕುರಿತು ಅವರು ಹೊರಡಿಸಿರುವ ಆದೇಶದಿಂದ ಅಮೆರಿಕದಲ್ಲಿರುವ ಭಾರತೀಯರಿಗೆ ನಿರಾಸೆಯಾಗಿದೆ. ಮೊದಲಿಗೆ ಅಕ್ರಮ ವಲಸಿಗರಿಗೆ ಮಾತ್ರ ಇದು ಅನ್ವಯವಾಗಲಿದೆ ಎನ್ನಲಾಗುತ್ತಿತ್ತು. ಆದರೆ ಆದೇಶದಲ್ಲಿ ತಂದೆ ಅಥವಾ ತಾಯಿ ಅಮೆರಿಕ ಪ್ರಜೆಯಾಗಿದ್ದರೆ ಮಾತ್ರ ಮಗುವಿಗೆ ಪೌರತ್ವ ದೊರೆಯಲಿದೆ ಎಂದು ತಿಳಿಸಲಾಗಿದೆ.

ಇದರಿಂದಾಗಿ ಸಕ್ರಮವಾಗಿ ಅಮೆರಿಕಕ್ಕೆ ವಲಸೆ ಬಂದಿರುವ ಹಲವು ಭಾರತೀಯರು ಅಂದರೆ ಎಚ್​&1ಬಿ ವೀಸಾ ಹೊಂದಿರುವವರಿಗೆ ಹುಟ್ಟುವ ಮಗುವಿಗೆ ಅಮೆರಿಕ ಪೌರತ್ವ ಸಿಗುವುದಿಲ್ಲ. ಹಾಗಾಗಿ ಫೆಬ್ರವರಿ 15ರೊಳಗೆ ಸಿಸೇರಿಯನ್​ ಮಾಡಿಸಿಕೊಳ್ಳಲು ಹಲವರು ಮುಂದಾಗಿದ್ದಾರೆ. ಟ್ರಂಪ್​ ಆದೇಶವನ್ನು ಪ್ರಶ್ನಿಸಿ ಹಲವು ರಾಜ್ಯಗಳು ಕೋರ್ಟ್​ ಮೊರೆ ಹೋಗಿದ್ದು ಸಿಯಾಟೆಲ್​ ಜಿಲ್ಲಾ ಕೋರ್ಟ್​ ಆದೇಶಕ್ಕೆ ತಡೆ ನೀಡಿದೆ. ಅಮೆರಿಕ ಸಂಸತ್ತಿನಲ್ಲಿ ಅನುಮೋದನೆ ಪಡೆದ ಬಳಿಕ ಮಾತ್ರ ತಿದ್ದುಪಡಿ ಮಾಡಲು ಸಾಧ್ಯವಿದೆ. ಹಾಗಾಗಿ ಭಾರತೀಯರಿಗೆ ತಾತ್ಕಾಲಿಕ ರಿಲೀಫ್​ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net