

ಭಾರತದ ಮೇಲೆ ಮತ್ತಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಬೆದರಿಕೆ ಹಾಕಿದ್ದಾರೆ. ‘ಭಾರತವು ಅಮೆರಿಕದ ಉತ್ತಮ ವ್ಯಾಪಾರ ಪಾಲುದಾರ ರಾಷ್ಟ್ರವಲ್ಲ. ಮುಂದಿನ 24 ಗಂಟೆಯೊಳಗೆ ಭಾರತದ ಸರಕುಗಳ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇವೆ. ಏಕೆಂದರೆ ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿದೆ’ ಎಂದಿದ್ದಾರೆ. ಮಾತ್ರವಲ್ಲ, ಅಮೆರಿಕಕ್ಕೆ ಶೇಕಡ 40ರಷ್ಟು ಔಷಧಗಳು ಭಾರತದಿಂದ ಬರುತ್ತಿದ್ದು, ಭಾರತದ ಔಷಧ ಉತ್ಪನ್ನಗಳ ಮೇಲೆ ಶೇಕಡ 150ರಿಂದ 250ರಷ್ಟು ಸುಂಕ ಹೇರಲಾಗುವುದು. ಅಮೆರಿಕದಲ್ಲೇ ಔಷಧಗಳು ತಯಾರಾಗಬೇಕು ಎಂದು ತಾವು ಬಯಸುತ್ತಿರುವುದಾಗಿ ಹೇಳಿದ್ದಾರೆ.
ಭಾರತವು ಅಮೆರಿಕಕ್ಕೆ ವರ್ಷಕ್ಕೆ ಸರಾಸರಿ 94 ಸಾವಿರ ಕೋಟಿ ರೂ. ಮೌಲ್ಯದ ಔಷಧ ರಫ್ತು ಮಾಡುತ್ತಿದೆ. ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ ಹಲವು ಸುತ್ತಿನ ಮಾತುಕತೆ ನಡೆದಿದೆ. ಈ ತಿಂಗಳು ಕೂಡ ಅಮೆರಿಕ ಹಿರಿಯ ಅಧಿಕಾರಿಗಳ ತಂಡ ಭಾರತಕ್ಕೆ ಭೇಟಿ ನೀಡುವುದಿತ್ತು. ಆದರೆ, ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಟ್ರಂಪ್ ತರಾತುರಿಯಲ್ಲಿ ವಿವೇಚನಾರಹಿತ ಮತ್ತು ಅವಾಸ್ತವಿಕ ನಿರ್ಣಯಗಳನ್ನು ತಳೆಯುತ್ತಿರುವುದು ದುರದೃಷ್ಟಕರ. ‘ಸುಂಕ ಹೆಚ್ಚಿಸುವುದರಿಂದ ಭಾರತ ನಲುಗಲಿದೆ’ ಎಂಬಂತೆ ಬಿಂಬಿಸಲು ಟ್ರಂಪ್ ಮೇಲ್ನೋಟಕ್ಕೆ ಯತ್ನಿಸುತ್ತಿದ್ದಾರೆ. ಸುಂಕ ಹೆಚ್ಚಳದಿಂದ ಅಲ್ಪಕಾಲೀನ ಪರಿಣಾಮಗಳು ಆಗಬಹುದಾದರೂ, ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಭಾರತದ ಬಳಿ ಸಾಕಷ್ಟು ಆಯ್ಕೆ ಮತ್ತು ಅವಕಾಶಗಳಿವೆ ಎಂಬುದನ್ನು ಮರೆಯುವಂತಿಲ್ಲ.
ಟ್ರಂಪ್ ನಡೆಯನ್ನು ರಷ್ಯಾ ಕೂಡ ಬಲವಾಗಿ ಖಂಡಿಸಿದೆ. ಭಾರತದ ವಿದೇಶಾಂಗ ಇಲಾಖೆ ಕೂಡ ತೀಕ್ಷ ್ಣ ಪ್ರತಿಕ್ರಿಯೆ ನೀಡಿರುವುದು ಸೂಕ್ತವೇ ಆಗಿದೆ. ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿಸುತ್ತಿರುವುದನ್ನು ವಿರೋಧಿಸುತ್ತಿರುವ ಅಮೆರಿಕ ಅದೇ ರಷ್ಯಾದಿಂದ ಯೂರೇನಿಯಂ ಖರೀದಿಸುತ್ತಿದೆ, ಇವಿ ಕ್ಷೇತ್ರದಲ್ಲಿ ಒಪ್ಪಂದ ಹೊಂದಿದೆ. ಹೀಗಾಗಿ ಟ್ರಂಪ್ ಮೊದಲು ದ್ವಂದ್ವ ನೀತಿಗಳನ್ನು ಕೈಬಿಡಬೇಕಿದೆ. ಅಷ್ಟಕ್ಕೂ, ತನ್ನ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಅಮೆರಿಕ ಭಾರತದ ಮೇಲೆ ಒತ್ತಡ ಹೇರುವ ತಂತ್ರ ಹೊಸದೇನಲ್ಲ.
ಆದರೆ, ಭಾರತ ಈಗ ಬದಲಾಗಿದೆ, ಜಾಗತಿಕ ಶಕ್ತಿಯಾಗಿದೆ. ತನ್ನ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವಲ್ಲಿ ಭಾರತ ಬದ್ಧವಾಗಿದೆ. ಆದರೆ, ಟ್ರಂಪ್ ಇದೇ ರೀತಿ ಮೊಂಡಾಟ ಮುಂದುವರಿಸಿದಲ್ಲಿ, ಉಭಯ ದೇಶಗಳ ಸಂಬಂಧಕ್ಕೆ ಹಾನಿಯಾಗುವುದು ನಿಶ್ಚಿತ. ಎರಡೂ ರಾಷ್ಟ್ರಗಳ ಸ್ನೇಹಕ್ಕೆ, ರಾಜತಾಂತ್ರಿಕ ಸಹಕಾರಕ್ಕೆ ದೀರ್ಘಕಾಲಿನ ಇತಿಹಾಸವಿದೆ. ಅದನ್ನು ಹಾಳು ಮಾಡುವ ದುಸ್ಸಾಹಸ ಟ್ರಂಪ್ ಮಾಡದಿರಲಿ. ಸುಂಕ ನೀತಿಯ ಬಗ್ಗೆ ಮಾತುಕತೆಯ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳುವುದು ಒಳಿತು.