

‘ನಮ್ಮ ಬಳಿ ಇರುವುದು ಯಾವುದಕ್ಕೂ ಸಾಕಾಗಲ್ಲ, ಕಷ್ಟದಲ್ಲೇ ದಿನಗಳನ್ನು ಕಳೆಯಬೇಕು. ಇನ್ನೊಬ್ಬರ ಹತ್ತಿರ ನಮಗಿಂತ ಹೆಚ್ಚು ಸಂಪತ್ತು ಮತ್ತು ಸಮೃದ್ಧಿ ಇದೆ’ ಎಂಬ ಭಾವನೆ ನಮ್ಮಲ್ಲಿ ನೆಲೆಸಿರುವವರೆಗೆ ಅಸೂಯೆ ತಪ್ಪಿದ್ದಲ್ಲ. ಸುಮ್ಮನೇ ಗಮನಿಸಿ ನೋಡಿ, ತುಂಬ ಸಂತೋಷದಲ್ಲಿ ಇರುವಾಗ, ನಿಮ್ಮಲ್ಲಿ ಅಸೂಯೆ ಇದೆಯೇ? ಇಲ್ಲ. ನೀವು ಅಸಂತುಷ್ಟರಾಗಿರುವಾಗ ಮಾತ್ರ ಅಸೂಯೆ ಉಂಟಾಗುತ್ತದೆ. ಅಸೂಯೆಯ ಬಗ್ಗೆ ಚಿಂತಿಸಬೇಡಿ, ಕೊರಗಬೇಡಿ. ಅಸೂಯೆ ಮನದಲ್ಲಿ ಆವರಿಸಿಕೊಳ್ಳಲು ಜಾಗ ಕೊಡಬೇಡಿ. ಜೀವನದ ಪ್ರತಿ ಕ್ಷಣವೂ ನಿಮ್ಮ ‘ಶಕ್ತಿ’ಯಾದ ಪರಮಾನಂದದಿಂದ ಉಕ್ಕಿಹರಿದರೆ, ಅಸೂಯೆ ಹೇಗೆ ಉಂಟಾಗುತ್ತದೆ? ಅಸೂಯೆಯೊಂದಿಗೆ ಹೋರಾಡುವ ಬದಲು, ಜೀವನಾನುಭವವನ್ನು ಪರಿಪೂರ್ಣಗೊಳಿಸಲು ಪ್ರಯತ್ನ ಪಡುವುದು ಉತ್ತಮ ಮತ್ತು ಶ್ರೇಯಸ್ಕರ.
ಯಾವುದನ್ನಾದರೂ ತ್ಯಜಿಸುವುದರಿಂದ ಸ್ವಾತಂತ್ರ್ಯ ಸಿಗುವುದಿಲ್ಲ, ಏಕೆಂದರೆ ತ್ಯಜಿಸಲು ಏನಿದೆ? ಈಗ ನಿಮ್ಮಲ್ಲಿ ಯಾವುದೇ ಅಸೂಯೆ ಇಲ್ಲ. ಅಸೂಯೆ ನಿಮ್ಮ ಸ್ವಭಾವವಲ್ಲ. ಯಾವಾಗಲಾದರೂ ಒಮ್ಮೊಮ್ಮೆ ಅದನ್ನು ಹುಟ್ಟುಹಾಕುತ್ತೀರಿ. ಇಚ್ಛೆಪಟ್ಟು ತಂದುಕೊಂಡರೆ, ಅದು ನಿಮ್ಮ ಸಂತೋಷ. ಕೋಪ, ಭಯ ಮತ್ತು ಅಸೂಯೆಯಲ್ಲಿ ಸಂತೋಷವಾಗಿದ್ದರೆ, ಅವುಗಳನ್ನು ತಂದುಕೊಳ್ಳಿ. ಆದರೆ ಅದು ಹಾಗಿಲ್ಲ, ಅವು ಸಂತೋಷದಾಯಕ ಅನುಭವಗಳಲ್ಲ. ಹಾಗಾದರೆ, ಅವುಗಳನ್ನು ಏಕೆ ಸೃಷ್ಟಿಸಿದ್ದೀರಿ? ನಿಮ್ಮೊಳಗೆ ಅಗತ್ಯವಾದ ಅರಿವಿಲ್ಲದ ಕಾರಣ ಅವುಗಳನ್ನು ಸೃಷ್ಟಿಸುತ್ತೀರಿ.
ನಿಜವಾಗಿಯೂ ಮುಕ್ತರಾಗಬೇಕೆಂದರೆ, ಮೊದಲು ಬಂಧನ ಎಲ್ಲಿದೆ, ಯಾವುದರೊಂದಿಗೆ ಗುರುತಿಸಿಕೊಂಡಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಗುರುತಿಸಿಕೊಂಡ ಕ್ಷಣದಿಂದಲೇ, ಅಸ್ತಿತ್ವದೊಂದಿಗೆ ಸಂಘರ್ಷದಲ್ಲಿ ಇರುತ್ತೀರಿ. ಇಡೀ ಆಧ್ಯಾತ್ಮಿಕ ಪ್ರಕ್ರಿಯೆ ನಿಮ್ಮನ್ನು ಗುರುತಿಸಿಕೊಳ್ಳದಂತೆ ಮಾಡುವುದು, ಹೀಗಾದಾಗ ಅಸ್ತಿತ್ವದೊಂದಿಗೆ ಸಂಘರ್ಷದಲ್ಲಿ ಇರುವುದಿಲ್ಲ. ಪ್ರತಿಯೊಂದನ್ನೂ ಇರುವ ರೀತಿಯಲ್ಲಿಯೇ ಅನುಭವಿಸುತ್ತಿರುತ್ತೀರಿ, ಅದನ್ನು ಈ ರೀತಿ ಅಥವಾ ಆ ರೀತಿ ಎಂದು ಹೆಸರಿಸಲು ಪ್ರಯತ್ನಿಸುವುದಿಲ್ಲ.
ತ್ಯಾಜ್ಯವನ್ನು ಸುವಾಸನೆಯಾಗಿ ಪರಿವರ್ತಿಸುವುದು: ನೀವು ಯಾರಾಗಿದ್ದೀರಿ ಎಂಬುದರ ಭಯವನ್ನು ಗೊಬ್ಬರವಾಗಿ ಬಳಸಿದರೆ, ನೀವು ಯಾರಾಗಬಹುದು ಎಂಬುದರ ಸೌಂದರ್ಯವೂ ಅರಳಬಹುದು. ಈ ಭಯ ಏನು ಮತ್ತು ಅದರ ಅರ್ಥವೇನು? ಒಬ್ಬ ವ್ಯಕ್ತಿಯನ್ನು ಪೂರ್ವಗ್ರಹಪೀಡಿತ ಮತ್ತು ಅಸೂಯೆವುಳ್ಳವನಾಗಿ, ಕೋಪಿಷ್ಠ, ದ್ವೇಷಪೂರಿತ ಮತ್ತು ಭಯಭೀತನನ್ನಾಗಿ ಕಂಡಾಗ, ಅದು ಒಬ್ಬ ಮನುಷ್ಯ ಏನಾಗಬಹುದು ಎಂಬುದರ ‘ಭಯಾನಕ’ ರೂಪವೇ ಹೌದು. ಅಲ್ಲಿ ವ್ಯಕ್ತಿತ್ವದ ಸೌಂದರ್ಯ ಇರುವುದಿಲ್ಲ. ಏಕೆಂದರೆ, ಕೋಪ, ಅಸೂಯೆ, ಭಯವೇ ಆವರಿಸಿಕೊಂಡಿರುತ್ತದೆ.
ಈ ದಿನಗಳಲ್ಲಿ ಜನರು ಜೈವಿಕ ತರಕಾರಿಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಅದರ ಅರ್ಥವೇನೆಂದರೆ ರಾಸಾಯನಿಕ ಗೊಬ್ಬರಗಳಿಂದಲ್ಲದೆ, ಹೊಲಸಿನಿಂದ ಪೋಷಿತವಾದ ತರಕಾರಿಗಳನ್ನು ಇಷ್ಟಪಡುತ್ತೀರಿ! ಮನಸ್ಸಲ್ಲಿ ಎಲ್ಲೋ ಒಂದು ಕಡೆ ಇದು ‘ಅತ್ಯುತ್ತಮವಾದ ಹೂವು, ಹಣ್ಣು ಮತ್ತು ತರಕಾರಿಗಳನ್ನು ಉತ್ಪಾದಿಸುವ ವಿಧಾನ’ ಮತ್ತು ಇದು ‘ಅತ್ಯುತ್ತಮ ಗೊಬ್ಬರ’ ಎಂದು ಅರ್ಥವಾಗಿದೆ. ಇದು ಜೀವನದ ತರ್ಕ. ಇದನ್ನು ಒಂದು ಸಂಕೇತವಾಗಿ ಮತ್ತು ಮನೋವೈಜ್ಞಾನಿಕ ಸಾಧನವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಅರ್ಥಮಾಡಿಕೊಳ್ಳಬೇಕಾದ ವಿಷಯ. ಮನಸ್ಸಿನ ಸರಳ ತರ್ಕವು ಹೇಳುವುದೇನೆಂದರೆ, ತೋಟದಲ್ಲಿ ಉತ್ತಮ ಹೂವುಗಳನ್ನು ಉತ್ಪಾದಿಸಲು ಬಯಸಿದರೆ, ಮಣ್ಣಿನಲ್ಲಿ ಹೆಚ್ಚು ಹೂವುಗಳನ್ನು ಹಾಕಿ, ಮತ್ತಷ್ಟು ಸುಂದರವಾದ ಹೂವುಗಳು ಬರುತ್ತವೆ. ಆದರೆ ಅಸ್ತಿತ್ವ ಕಾರ್ಯನಿರ್ವಹಿಸುವ ರೀತಿ ಇದಲ್ಲ. ಅದು ರ್ತಾಕವಾಗಿದೆ, ಆದರೆ ಅಸ್ತಿತ್ವವು ರ್ತಾಕವಲ್ಲ. ಮಣ್ಣು ದುರ್ವಾಸನೆಯುಳ್ಳ ತ್ಯಾಜ್ಯವನ್ನು ಬೇಡುತ್ತದೆ, ಸುವಾಸನೆಯುಳ್ಳ ಹೂವುಗಳನ್ನಲ್ಲ. ದುರ್ವಾಸನೆಯುಳ್ಳ ಕೊಳಕು ಕೇವಲ ಸರಿಯಷ್ಟೇ ಅಲ್ಲ, ಅದೇ ಮಣ್ಣು ಬೇಡುವಂಥದ್ದು. ಅದನ್ನು ಬೇರಿಗೆ ಹಾಕಿದರೆ, ಅದ್ಭುತವಾಗಿ ಸುವಾಸನೆಯುಳ್ಳ ಹೂವುಗಳು ಅದರಿಂದ ಬರುತ್ತವೆ. ಅಸ್ತಿತ್ವ ಕಾರ್ಯನಿರ್ವಹಿಸುವ ರೀತಿಯೇ ಇದು.
ಮೂಲ ಸ್ವಭಾವದೊಂದಿಗೆ ಸಾಮರಸ್ಯದಲ್ಲಿರುವುದು: ಭಯಗ್ರಸ್ತರನ್ನಾಗಿ ಮಾಡುವ ಕೋಪ, ದ್ವೇಷ, ಅಸೂಯೆ, ಪೂರ್ವಗ್ರಹಗಳು, ಎಷ್ಟು ತೀವ್ರತೆಯಿಂದ ನಿಮ್ಮೊಳಗೆ ಸಂಭವಿಸುತ್ತವೆ ಎಂಬುದನ್ನು ದಯವಿಟ್ಟು ನೋಡಿ. ಧ್ಯಾನವು ಅಷ್ಟೇ ತೀವ್ರತೆಯಿಂದ ಸಂಭವಿಸಿದರೆ, ಅದು ಅದ್ಭುತವಾಗಿರುವುದಿಲ್ಲವೇ? ಹಾಗೆಯೇ ಸಂಭವಿಸಿದ್ದರೆ ನಿಮಗಿಷ್ಟ ಬಂದ ರೀತಿಯಲ್ಲಿ ಇರುತ್ತಿರಲಿಲ್ಲವೇ? ಖಂಡಿತವಾಗಿ ಇರುತ್ತಿದ್ದಿರಿ. ಮಾನವರನ್ನು ಭಯಗ್ರಸ್ತರನ್ನಾಗಿ ಮಾಡುವ ಎಲ್ಲ ವಿಷಯಗಳು ‘ತೀವ್ರತೆ’ಯೆಂಬ ವಾಹನದಲ್ಲಿ ಪಯಣಿಸುತ್ತವೆ. ಕೋಪ, ಭಯ ಅಥವಾ ಅಸೂಯೆ ದುರ್ಬಲವಾಗಿದ್ದರೆ, ಅದರಿಂದ ಏನೂ ಹಾನಿಯಿರುವುದಿಲ್ಲ. ಆದರೆ ಅವು ನಿಮ್ಮೊಳಗೆ ಉರಿಯುವಾಗ, ಆಗ ಅವು ಏನೋ ಆಗಿರುತ್ತವೆ. ಮತ್ತು ಅವು ಯಾವಾಗಲೂ ನಿಮ್ಮೊಳಗೆ ತೀವ್ರತೆಯಿಂದ ಉರಿಯುತ್ತವೆ.
ಆಧ್ಯಾತ್ಮಿಕತೆಯ ಒಂದು ಅಂಶ ನಿಮ್ಮೊಂದಿಗೆ ಇದೆ, ಏಕೈಕ ಪ್ರಶ್ನೆಯೆಂದರೆ ಅದನ್ನು ಹೇಗೆ ಬಳಸಿಕೊಳ್ಳುವುದು ಎಂಬುದನ್ನು ಕಲಿಯುವುದು. ತ್ಯಾಜ್ಯವನ್ನು ಬೇರಿಗೆ ಹಾಕಿದರೆ, ಅದು ಒಳ್ಳೆಯದು. ಆದರೆ ಅದನ್ನು ಮುಖಕ್ಕೆ ಬಳಿದುಕೊಂಡರೆ, ಅದು ಒಳ್ಳೆಯದಲ್ಲ. ಈ ಅರಿವು ಇಲ್ಲದಿದ್ದರೆ, ಸುವಾಸನೆಯನ್ನು ಬೇರುಗಳಿಗೆ ಹಾಕಲು ಪ್ರಯತ್ನಿಸಿ ಸಸ್ಯವನ್ನು ಕೊಲ್ಲಲು ಯತ್ನಿಸುತ್ತೀರಿ. ಹಾಗಾಗಿ, ಸುವಾಸನೆಯನ್ನಲ್ಲ, ತ್ಯಾಜ್ಯವನ್ನು, ಗೊಬ್ಬರವನ್ನು ಹಾಕಬೇಕು. ಇಡೀ ಜಗತ್ತು ಕಾರ್ಯನಿರ್ವಹಿಸುವುದು ಹೀಗೆಯೇ. ಮತ್ತು ನೀವೂ ಹಾಗೆಯೇ ಕಾರ್ಯನಿರ್ವಹಿಸಬೇಕು.
ಹೊಗೆಯಲ್ಲ, ಬೆಂಕಿ: ಉಪ-ಉತ್ಪನ್ನಗಳ ಮೇಲೆ ಕೆಲಸ ಮಾಡಲು ಪ್ರಯತ್ನಿಸಬೇಡಿ. ನಿಮ್ಮೊಳಗೆ (ಆಂತರ್ಯದಲ್ಲಿ) ಚೆನ್ನಾಗಿಲ್ಲದ ಕಾರಣ ನೀವು ‘ಅಪೂರ್ಣ’ ಎಂದು ಭಾವಿಸುತ್ತೀರಿ. ಆನಂದಮಯವಾಗಿ ಅನುಭವಿಸದ ಯಾರೇ ಆಗಲಿ ವಾಸ್ತವವಾಗಿ ಅನಾರೋಗ್ಯದಲ್ಲಿದ್ದಾರೆ. ಬಹುಶಃ ನೀವು ಸಾಮಾಜಿಕವಾಗಿ ಸ್ವೀಕೃತವಾದ ಒಳಿತಿನ ಸ್ಥಿತಿಯಲ್ಲಿರಬಹುದು- ಏಕೆಂದರೆ ಅಧಿಕ ಸಂಖ್ಯೆಯ ಜನರು ನಿಮ್ಮೊಂದಿಗಿದ್ದಾರೆ ಮತ್ತು ಇದು ಪ್ರಜಾಪ್ರಭುತ್ವ- ಆದರೆ ಜೀವನದ ದೃಷ್ಟಿಯಿಂದ ಅನಾರೋಗ್ಯದಲ್ಲಿದ್ದೀರಿ. ನಿಮ್ಮನ್ನು ಎಚ್ಚರಿಕೆಯಿಂದ ನೋಡಿಕೊಂಡು ಅನುಭವದ ಮೂಲವು ನಿಮ್ಮೊಳಗೇ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಯಾವುದೇ ಪ್ರಯತ್ನ ಮಾಡಿಲ್ಲ. ಅನುಭವದ ಮೂಲವು ನಿಮ್ಮೊಳಗಿದ್ದರೆ ಮತ್ತು ಇಲ್ಲಿ ಹೇಗೆ ಚೆನ್ನಾಗಿ ಜೀವಿಸುತ್ತೀರಿ ಎಂಬುದನ್ನು ನಿರ್ಧರಿಸಿ ನಿರ್ವಹಿಸಬೇಕಾದರೆ, ಮೊದಲ ವಿಷಯವೆಂದರೆ ನಿಮ್ಮ ಒಳಹೊಕ್ಕು ನೀವು ಯಾರು ಎಂಬುದರ ಸ್ವಭಾವವನ್ನು ಕಂಡುಕೊಳ್ಳಬೇಕು.
ಅದು ಸಂಭವಿಸದಿದ್ದರೆ, ಒಳಿತು ಆಕಸ್ಮಿಕವಷ್ಟೇ. ಒಳಿತು ಆಕಸ್ಮಿಕವಾಗಿರುವಾಗ, ಅಸೂಯೆ, ದ್ವೇಷ ಮತ್ತು ಅಸುರಕ್ಷತೆ ಬದುಕಿನ ಸಹಜ ಭಾಗವಾಗಿರುತ್ತವೆ. ಇದು ಹೇಗೆಂದರೆ ಏನನ್ನಾದರೂ ಉರಿಸುತ್ತಿದ್ದರೆ ಹೊಗೆ ಏಳುತ್ತದೆ. ಹೊಗೆಯೊಂದಿಗೆ ಹೋರಾಡಬೇಡಿ. ಬೆಂಕಿಯೊಂದಿಗೆ ಹೋರಾಡಿ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)