ಬನಾರಸ್​ನಲ್ಲಿ ಟ್ರೋಲ್ ಸಾಂಗ್; ಸಿಂಗಾಪುರದಲ್ಲಿ ಕೊರೊನಾ, ಶ್ರೀಲಂಕಾದಲ್ಲಿ ಚಿತ್ರೀಕರಣ

2 March 20
Published on

ಬೆಂಗಳೂರು: ಲವ್ ಸಾಂಗ್, ಎಣ್ಣೆ ಸಾಂಗ್, ಪ್ಯಾಥೊ ಸಾಂಗ್, ರೊಮ್ಯಾಂಟಿಕ್ ಸಾಂಗ್, ಲವ್ ಫೇಲ್ಯೂರ್ ಹಾಡು, ಟಪ್ಪಾಂಗುಚ್ಚಿ ಸಾಂಗ್, ಐಟಂ ಸಾಂಗ್.. ಹೀಗೆ ಸಿನಿಮಾಗಳಲ್ಲಿ ಬಗೆಬಗೆಯ ಹಾಡುಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ಇಷ್ಟಪಟ್ಟಿದ್ದೇವೆ. ಈಗ ಟ್ರೋಲ್ ಗೀತೆ ಕೇಳುವ ಸಮಯ! ಅರೇ.. ಇದೆಂಥ ಹಾಡು ಎಂದು ಹುಬ್ಬೇರಿಸಬೇಡಿ.

ಜೈದ್ ಖಾನ್, ಸೋನಲ್ ಮೊಂತೆರೋ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಬನಾರಸ್’ ಚಿತ್ರದಲ್ಲಿ ಅಂಥದ್ದೊಂದು ಹಾಡನ್ನು ಸೃಷ್ಟಿಸಲು ನಿರ್ದೇಶಕ ಜಯತೀರ್ಥ ಪ್ಲಾ್ಯನ್ ಮಾಡಿದ್ದಾರೆ. ಈಗಾಗಲೇ ಸಾಹಿತ್ಯ ರಚನೆ ಬಹುತೇಕ ಪೂರ್ಣಗೊಂಡಿದೆ. ಹಾಗಾದರೆ ಹೇಗಿರಲಿದೆ ಟ್ರೋಲ್ ಗೀತೆ? ಆ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಎಂದರೆ ಕಾಲೆಳೆಯುವ ಕೆಲಸ ಹೆಚ್ಚೇ ಆಗುತ್ತಿದೆ. ಆ ಪ್ರಕ್ರಿಯೆಯನ್ನೇ ‘ಬನಾರಸ್’ ಸಿನಿಮಾದಲ್ಲಿ ಆಯ್ದುಕೊಂಡಿದ್ದೇವೆ. ಹಾಗಂತ ಯಾವುದೋ ಗಂಭೀರ ವಿಷಯವನ್ನು ನಾವಿಲ್ಲಿ ಹೇಳುತ್ತಿಲ್ಲ. ಬದಲಿಗೆ ಅದಕ್ಕೆ ಕಾಮಿಡಿಯ ಸ್ಪರ್ಶ ನೀಡಿ, ಫನ್ನಿಯಾಗಿಯೇ ಹಾಡಿನ ಮೂಲಕ ಅದನ್ನು ಹೇಳುವ ಪ್ರಯತ್ನ ಮಾಡಲಿದ್ದೇವೆ’ ಎನ್ನುತ್ತಾರೆ ಜಯತೀರ್ಥ.

ಕೊರೊನಾ ಭೀತಿಯಿಂದ ಶೂಟಿಂಗ್ ಶಿಫ್ಟ್: ಈಗಾಗಲೇ ಶೇ. 80 ಶೂಟಿಂಗ್ ಮುಗಿಸಿರುವ ನಿರ್ದೇಶಕರು, ಎರಡು ಹಾಡು ಮತ್ತು ಕೆಲ ಮಾತಿನ ಭಾಗದ ದೃಶ್ಯಾವಳಿಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದ್ದಾರೆ. ಆ ಎರಡು ಹಾಡುಗಳ ಚಿತ್ರೀಕರಣವನ್ನು ಸಿಂಗಾಪುರದಲ್ಲಿ ಮಾಡಿಕೊಳ್ಳಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಈಗ ಅದರಲ್ಲಿ ಬದಲಾವಣೆ ಮಾಡಲಾಗಿದೆ. ಸಿಂಗಾಪುರ ಸೇರಿ ಆ ಭಾಗದಲ್ಲಿ ಕೊರೊನಾ ಭೀತಿ ಹೆಚ್ಚಾಗಿರುವುದರಿಂದ ಆ ಹಾಡುಗಳನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಎಲ್ಲ ಅಂದುಕೊಂಡಂತೆ ಆದರೆ, ಕೆಲವೇ ದಿನಗಳಲ್ಲಿ ಲಂಕಾ ಕಡೆ ಚಿತ್ರತಂಡ ಪ್ರಯಾಣಿಸಲಿದೆ. ‘ರಾಬರ್ಟ್’ ಚಿತ್ರದ ಶೂಟಿಂಗ್​ಗೂ ಕರೊನಾ ಅಡ್ಡಿಯುಂಟು ಮಾಡಿದೆ. ವಿದೇಶಿ ಚಿತ್ರೀಕರಣ ಕೈಬಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net