

ನಿನ್ನ ವಯಸ್ಸೆಷ್ಟೆಂದು ನಿರ್ಮಲಾ ಕೇಳಿದಾಗ, ಭಾರ್ಗವಿ 17 ಎಂದಳು. ‘ನಿನಗೆ ಇನ್ನೂ 18 ವರ್ಷ ತುಂಬದ ಕಾರಣ ಲಗ್ನವೇ ಕಾನೂನುಬಾಹಿರವಾಗುತ್ತದೆ, ನಿನಗೆ ಸಹಾಯ ಮಾಡಲಾಗುವುದಿಲ್ಲ’ ಎಂದಳು ನಿರ್ಮಲಾ. ‘ನಿಮ್ಮ ಕಾರ್ಯಕ್ರಮದ ಮೂಲಕ ನನ್ನ ತಂದೆತಾಯಿಯನ್ನು ಒಪ್ಪಿಸಿದರೆ, ನಾನು 18 ವರ್ಷಗಳಾದ ನಂತರವೇ ಲಗ್ನವಾಗುತ್ತೇನೆ’ ಎಂದು ಭಾರ್ಗವಿ ದುಂಬಾಲು ಬಿದ್ದಳು. ನಿರ್ಮಲಾ ಒಪ್ಪದಿದ್ದಾಗ, ನಿಮ್ಮ ಟಿವಿ ಕಾರ್ಯಕ್ರಮದಲ್ಲಿ ನನ್ನ ತಂದೆ ತಾಯಿಯರನ್ನು ಕರೆಸುವ ತನಕ ಇಲ್ಲಿಂದ ಕಾಲ್ದೆಗೆಯುವುದಿಲ್ಲ ಎಂದು ಹಠ ಮಾಡಿದಳು. ಕೆಲ ಸಮಯದ ನಂತರ ಭಾರ್ಗವಿ, ನಿರ್ಮಲಾಳ ಕಿವಿಯಲ್ಲಿ ಗುಟ್ಟಾಗಿ ತಂದೆ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆಂದು ದೂರಿ ಈ ಕಾರಣದಿಂದಲೇ ಲಗ್ನವಾಗಿ ಮನೆಯಿಂದ ಹೊರಟುಹೋಗಲು ಉದ್ದೇಶಿಸಿರುವುದಾಗಿ ಹೇಳಿ ಸಹಾಯ ಕೋರಿದಳು.
ಅವಳ ಮಾತುಗಳನ್ನು ಕೇಳಿ ಮರುಗಿದ ನಿರ್ಮಲಾ, ಟಿವಿ ಕಾರ್ಯಕ್ರಮದಲ್ಲಿ ಭಾರ್ಗವಿ ಮತ್ತವಳ ಮಾತಾಪಿತರನ್ನು ಅತಿಥಿಗಳಾಗಿ ಕರೆಯಲು ವಾಹಿನಿಯ ಹಿರಿಯ ಅಧಿಕಾರಿಗಳ ಅನುಮತಿ ಕೋರಿದಳು. ಇದಕ್ಕೊಪ್ಪಿದ ವಾಹಿನಿಯು ಭಾರ್ಗವಿಯ ಮಾತಾಪಿತರನ್ನು ಕರೆತರಲು ತನ್ನ ಸಿಬ್ಬಂದಿಯನ್ನು ಅವರಿದ್ದ ಗ್ರಾಮಕ್ಕೆ ಕಳುಹಿಸಿತು. ಭಾರ್ಗವಿಯ ತಂದೆ ಮುರುಗನ್ ಬಡಗಿಯ ಕೆಲಸ ಮಾಡುತ್ತಿದ್ದು ಸೋಫಾಸೆಟ್ಗಳನ್ನು ತಯಾರಿಸುತ್ತಿದ್ದ. ಆಕೆಯ ತಾಯಿ ರಾಜೇಶ್ವರಿ ಗೃಹಿಣಿಯಾಗಿದ್ದಳು. ಮೇ 17ರಂದು ಕಾರ್ಯಕ್ರಮದ ಶೂಟಿಂಗ್ ನಡೆಯಿತು. ವೇದಿಕೆಯ ಒಂದು ಬದಿಯಲ್ಲಿ ಭಾರ್ಗವಿ ಮತ್ತು ಸತೀಶ್ ಕುಳಿತರೆ ಅವರೆದುರು ಭಾರ್ಗವಿಯ ಮಾತಾಪಿತರು ಕುಳಿತರು.
ಮಧ್ಯಭಾಗದಲ್ಲಿ ನ್ಯಾಯಪಾಲಕಿಯಾಗಿ ನಿರೂಪಕಿ ನಿರ್ಮಲಾ ಕುಳಿತಳು. ಆರಂಭದಲ್ಲಿ ಭಾರ್ಗವಿಗೆ ತನ್ನ ಸಮಸ್ಯೆ ಯನ್ನು ತಿಳಿಸಲು ಸೂಚಿಸಲಾಯಿತು. ತಾನು ಪಿಯುಸಿ ಯನ್ನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಎಂಜಿನಿಯರಿಂಗ್ ಕಾಲೇಜಿಗೆ ಸೇರಲು ಉದ್ದೇಶಿಸಿದ್ದೇನೆ ಎಂದು ಆಕೆ ತಿಳಿಸಿದಾಗ, ನಿರೂಪಕಿ ‘ಹಾಗಾದರೆ ನಿನಗೆ ಮದುವೆಯ ಯೋಚನೆ ಈಗಲೇ ಏಕೆ ಬಂದಿದೆ’ ಎಂದು ಪ್ರಶ್ನಿಸಿದಳು. ಆಗ ಭಾರ್ಗವಿ ‘ಬಾಲಕಿಯಾಗಿದ್ದಾಗಿನಿಂದಲೂ ತಂದೆ ನನ್ನ ಮೇಲೆ ಲೈಂಗಿಕ ಶೋಷಣೆ ನಡೆಸುತ್ತಿದ್ದಾನೆ. ಆರಂಭದಲ್ಲಿ ಹೆದರಿ ಯಾರಿಗೂ ಹೇಳಲಿಲ್ಲ. ಆದರೆ ಅತ್ಯಾಚಾರ ಮುಂದುವರಿದಾಗ ತಾಯಿಗೆ ದೂರಿದೆ. ಆಕೆ ಸುಮ್ಮನಿರಲು ಹೇಳಿ ನೀನೇನಾದರೂ ಬಾಯ್ಬಿಟ್ಟರೆ ತಂದೆ ನಿನ್ನನ್ನು ಮುಗಿಸಿಯೇ ಬಿಡುತ್ತಾನೆ ಎಂದಳು. ಆತನ ಹಿಂಸೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ನಾನು ಮದುವೆಯಾಗಲು ತೀರ್ವನಿಸಿರುವೆ’ ಎಂಬ ಗಂಭೀರ ಆರೋಪ ಮಾಡಿದಳು.
ಮುರುಗನ್ ಅದನ್ನು ತೀವ್ರವಾಗಿ ಅಲ್ಲಗಳೆದು ಮಗಳು ಸುಳ್ಳು ಹೇಳುತ್ತಿದ್ದಾಳೆಂದ. ಸ್ಟೂಡಿಯೋದಲ್ಲಿದ್ದ ಸಭಿಕರೆಲ್ಲಾ ಬೆರಗಾಗಿ ಗುಸುಗುಸು ಮಾತನಾಡತೊಡಗಿದರು. ಆದರೆ ಈ ವಿಷಯದ ಬಗ್ಗೆ ಚರ್ಚೆ ಮಾಡಲು ಇಚ್ಛಿಸದ ನಿರ್ಮಲಾ ‘ಕುಟುಂಬದ ಸಂಬಂಧಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಅತಿ ಮುಖ್ಯ ಪಾತ್ರ ವಹಿಸುತ್ತವೆ, ನೀನು ಲಗ್ನಕ್ಕೆ ಆಗುತ್ತಿರುವ ವಿಘ್ನದ ಬಗ್ಗೆ ಮಾತನಾಡಬೇಕೇ ಹೊರತು ಬೇರೆ ವಿಷಯಗಳನ್ನಲ್ಲ’ ಎಂದಳು. ಮುರುಗನ್ನನ್ನುದ್ದೇಶಿಸಿ. ‘ಭಾರ್ಗವಿಯ ಪ್ರಿಯಕರ ಬೇರೆ ಜಾತಿಯವನಾದ ಕಾರಣ ನೀನು ಈ ಮದುವೆಗೆ ಒಪ್ಪುತ್ತಿಲ್ಲ ಅಲ್ಲವೇ?’ ಎಂದು ಕೇಳಿದಳು. ಆತ, ‘ಹಾಗೇನಿಲ್ಲ, ನಾನು ಭಾರ್ಗವಿಯ ಸುಖಸಂತೋಷಕ್ಕೆ ಅಡ್ಡಿಪಡಿಸುವುದಿಲ್ಲ, ನಾನು ಇವರನ್ನು ಊರಿಗೆ ಕರೆದುಕೊಂಡು ಹೋಗಿ ಲಗ್ನ ಮಾಡಿಸುತ್ತೇನೆ’ ಎಂದ. ಆನಂತರ ನಿರೂಪಕಿಯ ಸೂಚನೆಯ ಮೇರೆಗೆ ಆತ ಸತೀಶ್ನನ್ನು ಅಪ್ಪಿಕೊಂಡ.
‘ಕಡೆಗೂ ನಮ್ಮ ವಾಹಿನಿಯ ಮೂಲಕ ಭಾರ್ಗವಿಯ ಸಮಸ್ಯೆಗೆ ಪರಿಹಾರ ದೊರಕಿತು. ಈಗ ಭಾರ್ಗವಿ ತಂದೆ ತಾಯಿಯರ ಜತೆಗೆ ತನ್ನ ಮನೆಗೆ ಹೋಗುತ್ತಾಳೆ, ನಾವೆಲ್ಲರೂ ಅವಳಿಗೆ ಶುಭ ಕೋರೋಣ’ ಎನ್ನುತ್ತಾ ನಿರ್ಮಲಾ ಷೋ ಮುಗಿಸಲು ಹೊರಟಾಗ ಭಾರ್ಗವಿ ಇದಕ್ಕಿದ್ದಂತೆ ‘ತಂದೆಯ ಜೊತೆ ನಾನು ಹೋಗುವುದಿಲ್ಲ, ಆತ ನನ್ನನ್ನು ಕೊಲೆ ಮಾಡುತ್ತಾನೆ’ ಎಂದಳು.
‘ಇದೇನಮ್ಮಾ ನಿನ್ನ ತಂದೆ ಲಗ್ನಕ್ಕೆ ಒಪ್ಪಿಕೊಂಡಿದ್ದಾರಲ್ಲಾ?’ ಎಂದು ನಿರ್ಮಲಾ ಕೇಳಿದಾಗ, ‘ಅವನು ಇಲ್ಲಿ ಒಪ್ಪಿದ್ದಾನೆ, ಆದರೆ ಊರಿಗೆ ವಾಪಸಾದ ಕೂಡಲೇ ನಮ್ಮನ್ನು ಕೊಲೆ ಮಾಡುತ್ತಾನೆ’ ಎಂದಳು. ಇದನ್ನು ಕೇಳಿ ಟಿವಿ ಸ್ಟುಡಿಯೋದಲ್ಲಿದ್ದ ಎಲ್ಲರೂ ನಿಬ್ಬೆರಗಾದರು. ನಿರ್ಮಲಾ, ‘ನೀನೇನು ಹೇಳಿದೆ ಎಂದು ಮತ್ತೊಮ್ಮೆ ಹೇಳು’ ಎಂದು ಭಾರ್ಗವಿಗೆ ಹೇಳಿದಳು. ಆಗ ಭಾರ್ಗವಿ, ‘ನನ್ನ ತಂದೆ ಒಬ್ಬ ಕೊಲೆಗಾರ, ನಾಲ್ಕು ವರ್ಷಗಳ ಹಿಂದೆ ಆತ ತನ್ನ ಸ್ನೇಹಿತ ಶೇಖರ್, ಆತನ ಮಗಳು ಮತ್ತು ಅಳಿಯನನ್ನು ಕೊಂದು ಶವಗಳನ್ನು ಹೂತಿದ್ದಾನೆ. ಅದೇ ರೀತಿ ನನ್ನ ಕೊಲೆಯನ್ನೂ ಮಾಡುತ್ತಾನೆ’ ಎಂದು ಅಳತೊಡಗಿದಳು. ಮುರುಗನ್, ‘ನನ್ನ ಮಗಳು ಹಸಿಸುಳ್ಳನ್ನು ಹೇಳುತ್ತಿದ್ದಾಳೆ, ಅವಳ ಮಾತುಗಳನ್ನು ನಂಬಬೇಡಿ’ ಎಂದು ಕೋಪದಿಂದ ಅರಚಿದ. ಟಿ.ವಿ ಶೂಟಿಂಗನ್ನು ಅಲ್ಲಿಗೇ ಮುಕ್ತಾಯಗೊಳಿಸಲಾಯಿತು. ಆ ನಂತರ ಆ ವಾಹಿನಿಯು ಕೊಲೆಯಾದ ಶೇಖರ್ ಬಗ್ಗೆ ಭಾರ್ಗವಿಯಿಂದ ಮಾಹಿತಿ ಸಂಗ್ರಹಿಸಿ ತನ್ನ ಸಿಬ್ಬಂದಿಯನ್ನು ಶೇಖರ್ ವಾಸವಾಗಿದ್ದ ಗ್ರಾಮಕ್ಕೆ ಕಳುಹಿಸಿತು. ನಾಲ್ಕು ವರ್ಷಗಳಿಂದ ತನ್ನ ಗಂಡ, ಮಗಳು ಮತ್ತು ಅಳಿಯ ಕಾಣೆಯಾಗಿದ್ದಾರೆಂದು ಶೇಖರ್ನ ಪತ್ನಿ ತಿಳಿಸಿದಳು. ತನ್ನ ಮಗಳು ಲಾವಣ್ಯ ಶಿಲಾಂಬರಸನ್ ಎಂಬ ಅನ್ಯಜಾತಿಯ ವ್ಯಕ್ತಿಯೊಂದಿಗೆ ವಿವಾಹವಾಗಿ ಮನೆಯನ್ನು ಬಿಟ್ಟು ಓಡಿ ಹೋಗಿದ್ದು, ಅವಳನ್ನು ಹುಡುಕಿಕೊಂಡು ಹೋದ ತನ್ನ ಗಂಡ ಶೇಖರ್ ಈವರೆಗೂ ಮನೆಗೆ ವಾಪಸಾಗಿಲ್ಲ. ಕಾಣೆಯಾದ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವುದಾಗಿ ಆಕೆ ತಿಳಿಸಿದಳು. ಭಾರ್ಗವಿಯ ಆರೋಪದಲ್ಲಿ ಹುರುಳಿದೆ ಎಂದು ಮನಗಂಡ ಟಿ.ವಿ ವಾಹಿನಿ ಮುಂದಿನ ವಾರವೇ ಭಾರ್ಗವಿ ಭಾಗವಹಿಸಿದ್ದ ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಇದನ್ನು ವೀಕ್ಷಿಸಿದ ಶೇಖರ್ನ ಪತ್ನಿ ಮತ್ತೊಮ್ಮೆ ಪೊಲೀಸ್ ಠಾಣೆಗೆ ಹೋಗಿ ತನಿಖೆ ನಡೆಸಲು ಕೋರಿದಳು. ಏತನ್ಮಧ್ಯೆ ಹಿರಿಯ ಪೊಲೀಸ್ ಅಧಿಕಾರಿಗಳೂ ಟಿ.ವಿ. ಕಾರ್ಯಕ್ರಮವನ್ನು ನೋಡಿದ್ದ ಕಾರಣ ತನಿಖೆಗೆ ವೇಗ ದೊರೆಯಿತು.
ಟಿವಿ ಧಾರಾವಾಹಿಯ ರೆಕಾರ್ಡಿಂಗ್ ಮುಗಿದ ಕೂಡಲೇ ಮುರುಗನ್ ಪರಾರಿಯಾಗಿದ್ದ. ಅವನ ಮನೆಗೆ ಹೋದ ಪೊಲೀಸರು ಪತ್ನಿ ರಾಜೇಶ್ವರಿಯನ್ನು ತೀವ್ರವಾಗಿ ಪ್ರಶ್ನಿಸಿದಾಗ ಆಕೆ ಹೀಗೆಂದಳು:‘ನನ್ನ ಪತಿ ಹತ್ತಿರದ ಗ್ರಾಮದ ಶೇಖರ್ ಎನ್ನುವವನ ಜತೆಗೆ ಸೋಫಾ ಸೆಟ್ ಮಾರಾಟದ ವ್ಯವಹಾರ ಮಾಡುತ್ತಿದ್ದ. ಶೇಖರ್ನ ಮಗಳು ಮಾತಾಪಿತರ ವಿರೋಧವಿದ್ದರೂ ಒಬ್ಬನ ಜತೆ ಓಡಿಹೋಗಿ ಅವನನ್ನು ಮದುವೆಯಾದಳು. ಆನಂತರ ಆ ದಂಪತಿ ನಮ್ಮ ಮನೆಗೆ ಬಂದು ಆಶ್ರಯ ಕೋರಿದರು. ಆಗ ಮುರುಗನ್ ಮತ್ತು ಲಾವಣ್ಯ ಮಧ್ಯೆ ಜೋರಾದ ವಾದವಿವಾದ ನಡೆಯಿತು. ಕೋಪಗೊಂಡ ಮುರುಗನ್ ಅವರಿಬ್ಬರನ್ನೂ ಕೊಲೆ ಮಾಡಿದ. ನಂತರ ತನ್ನ ಸೇವಕ ಮೂರ್ತಿಯ ಸಹಾಯದಿಂದ ಶವಗಳನ್ನು ನಮ್ಮ ಮನೆಯ ಹಿಂದಿರುವ ಹಾಳುಬಾವಿಯಲ್ಲೆಸೆದ. ಹತ್ತು ದಿನಗಳ ನಂತರ ಮಗಳನ್ನು ಹುಡುಕಿಕೊಂಡು ಶೇಖರ್ ಬಂದಾಗ ಅವನನ್ನು ನನ್ನ ಮೈದುನ ಮತಿಯರಸನ್ ಸಹಾಯದಿಂದ ಕೊಲೆಮಾಡಿ ಅವನ ದೇಹವನ್ನು ನಮ್ಮ ಮನೆಯ ಹಿತ್ತಲಲ್ಲೇ ಹೂತಿದ್ದಾನೆ.’
ಆಕೆ ತೋರಿಸಿದ ಜಾಗದಲ್ಲಿ ಹುಡುಕಿದಾಗ ಮೂರು ಅಸ್ಥಿಪಂಜರಗಳು ಸಿಕ್ಕವು. ಅವನ್ನು ವಿಧಿವಿಜ್ಞಾನ ಪ್ರಯೋಗಶಾಲೆಗೆ ಕಳುಹಿಸಲಾಯಿತು. ಆ ಮೂರು ಶವಗಳು ಶೇಖರ್, ಲಾವಣ್ಯ ಮತ್ತು ಅವಳ ಗಂಡನದ್ದೆಂದು ಸಾಬೀತಾಯಿತು. ಆನಂತರ ಮುರುಗನ್, ರಾಜೇಶ್ವರಿ, ಮೂರ್ತಿ ಮತ್ತು ಮತಿಯರಸನ್ ಇವರನ್ನು ಬಂಧಿಸಿ ಕೊಲೆ ಮತ್ತು ಸಾಕ್ಷ್ತ್ರ್ಯ ನಾಶದ ಆರೋಪದ ಮೇಲೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಮುರುಗನ್ ಮತ್ತವನ ಸೋದರನಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ವಿಚಾರಣೆಯ ಸಮಯದಲ್ಲಿ ಮೂರ್ತಿ ಅಸುನೀಗಿದ. ರಾಜೇಶ್ವರಿಯ ಬಿಡುಗಡೆಯಾಯಿತು. ಕಡೆಗೂ ಟಿ.ವಿ. ಕಾರ್ಯಕ್ರಮದ ಮೂಲಕ ತ್ರಿವಳಿ ಕೊಲೆ ಬಯಲಾಯಿತು. ‘ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ, ಪಾಶವಾಗಲ್ಬಹುದು ನಿನಗೆ ಮೈಮರೆಸಿ, ವಾಸನೆಗಳುರುಬಿ ಚಿತ್ತ ಜ್ವರಂಗಳ ಬಿತ್ತಿ ಮೋಸದಲಿ ಕೊಲ್ಲುವುವೋ ಮಂಕುತಿಮ್ಮ’ ಎಂದಂತೆ ಮುರುಗನ್ಗೆ ಮಗಳೇ ಮುಳುವಾದಳು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)