ಸಾಯತೊಡಗಿವೆ ಸಾಲುಮರಗಳು: ಮುಂದೊಂದು ದಿನ ಚಿತ್ರಗಳಲ್ಲಿ ಮಾತ್ರ ನೋಡಬೇಕಾಗುತ್ತದೆ!

Salumarada Timmakka 5 jan 20
Published on

ಸಾಲುಮರದ ತಿಮ್ಮಕ್ಕನ ಹೆಸರು ಕೇಳದವರು ಯಾರಿದ್ದಾರೆ? ಕಡು ಬಡತನದ ನಡುವೆಯೂ ತಿಮ್ಮಕ್ಕ ಮತ್ತವರ ಪತಿ ಬಿಕ್ಕಲಚಿಕ್ಕಯ್ಯ ಅವರು ರಾಮನಗರ ಜಿಲ್ಲೆಯ ಹುಲಿಕಲ್​ನಿಂದ ಕುದೂರುವರೆಗೆ ಬೆಳೆಸಿದ 400 ಸಾಲುಮರಗಳು ಜಗತ್ಪ್ರಸಿದ್ಧ. ಅವು ರಾಷ್ಟ್ರೀಯ ಸಂಪತ್ತು ಎನ್ನುವುದನ್ನೇ ಸರ್ಕಾರ ಮರೆತಂತಿದೆ. ರಕ್ಷಣೆಯೇ ಇಲ್ಲದ ಈ ಮರಗಳು ಒಂದೊಂದಾಗಿ ಕಣ್ಮರೆಯಾಗುತ್ತಿದ್ದು, ಅವುಗಳ ಸಂಖ್ಯೆ ಈಗ 312ಕ್ಕೆ ತಲುಪಿದೆ. ಹೀಗೇ ಮುಂದುವರಿದರೆ ಮುಂದೊಂದು ದಿನ ತಿಮ್ಮಕ್ಕನ ಸಾಲುಮರಗಳನ್ನು ಚಿತ್ರಗಳಲ್ಲಿ ಮಾತ್ರ ನೋಡಬೇಕಾಗುತ್ತದೆ.

ಸಾಲು ಮರದ ತಿಮ್ಮಕ್ಕ... ಈ ಹೆಸರು ಪರಿಸರ ಪ್ರೇಮಿಗಳ ಪಾಲಿನ ಆಕ್ಸಿಜನ್. ಆ..ಹಾ.. ಎಂತಹ ಅದ್ಬುತ ಸಾಧನೆ, ನಾವು ಇವರಂತೆ ಅಲ್ಲದಿದ್ದರೂ ಕನಿಷ್ಠ, ಇವರ ಸನಿಹಕ್ಕಾದರೂ ಬಂದು ನಿಲ್ಲಬೇಕು ಎನ್ನುವ ಆಸೆ ಮೂಡಿಸುವಂತಹ ಚೈತನ್ಯ ಶಕ್ತಿ.

ಎಲ್ಲೋ, ಕುಗ್ರಾಮವೊಂದರಲ್ಲಿ ಇದ್ದ ಅನಕ್ಷರಸ್ಥ ಮಹಿಳೆ, ಇಂದು ವಿಶ್ವ ವ್ಯಾಪಿ ಹೆಸರು ಮಾಡಿರುವುದೇ ತಮ್ಮ ಪರಿಸರ ಕಾಳಜಿಯಿಂದ, ಇವರೇ ನೆಟ್ಟು ಪೋಷಿಸಿದ ಮರಗಳಿಂದ. ಹಲವು ದಶಕಗಳ ಹಿಂದೆ ತಮ್ಮ ನೋವನ್ನು ಮರೆಯಲು ಕೈಗೊಂಡ ಕಾರ್ಯ ಇಂದು ವಿಶ್ವದ ಮನೆ ಮಾತಾಗುವಂತೆ ಮಾಡಿದೆ. ಮಾಗಡಿಯ ಹುಲಿಕಲ್ ಗ್ರಾಮದ ಬಿಕ್ಕಲಚಿಕ್ಕಯ್ಯ ಎಂಬುವರ ಪತ್ನಿ ತಿಮ್ಮಕ್ಕ, ಪರಿಸರ ಕಾಳಜಿಯಿಂದಾಗಿ ಸಾಲು ಮರದ ತಿಮ್ಮಕ್ಕನಾಗಿ ವಿಶ್ವದಲ್ಲೇ ಐಕಾನ್ ಆಗಿದ್ದಾರೆ.

ಹೀಗೆ, ತಿಮ್ಮಕ್ಕನನ್ನು ಸಾಲು ಮರದ ತಿಮ್ಮಕ್ಕನಾಗಿ ಗುರುತಿಸುವಂತೆ ಮಾಡಿದ ಸಾಲು ಮರಗಳಿಗೆ ಈಗ ‘ಸಂಚಕಾರ’ ಬಂದೊದಗಿದೆಯೇ? ಸ್ಥಳೀಯ ಸ್ಥಿತಿಗತಿಯನ್ನು ಅವಲೋಕಿಸಿದಾಗ, ಹೌದು ಎನ್ನುವ ಉತ್ತರಗಳು ನಮ್ಮ ಕಣ್ಮುಂದೆ ನಿಲ್ಲುತ್ತವೆ. ರಸ್ತೆ ಇಕ್ಕೆಲಗಳಲ್ಲಿ ನೆರಳಿನ ಜತೆಗೆ, ಆಹ್ಲಾದಕರವಾದ ಗಾಳಿ, ವಾತಾವರಣವನ್ನು ನೀಡುತ್ತಿದ್ದ ಸಾಲುಮರಗಳಲ್ಲಿ, ಒಂದೊಂದೇ ಮರಗಳು ಕಣ್ಮರೆಯಾಗುತ್ತಿವೆ. ಮುಂದೊಂದು ದಿನ ಸದ್ದಿಲ್ಲದೇ ಈ ಸಾಲುಮರಗಳೆಲ್ಲ ಮಾಯವಾಗಿ, ಇಲ್ಲಿ ಬಿಕ್ಕಲಚಿಕ್ಕಯ್ಯ ಮತ್ತು ತಿಮ್ಮಕ್ಕ ನೆಟ್ಟ ಮರಗಳು ಇದ್ದವು ಎನ್ನುವ ಕುರುಹೂ ಇಲ್ಲದಂತೆ ಆಗಿ ಬಿಡುವಂತಿದೆ.

ಮರಗಳೇ ಮಾಯ...!: ಮಕ್ಕಳಿಲ್ಲದ ನೋವನ್ನು ಮರೆಯುವ ಸಲುವಾಗಿ, ಗಿಡಗಳನ್ನು ನೆಟ್ಟು ತಮ್ಮ ಮಕ್ಕಳಂತೆ ಪೋಷಿಸಿ ಬೆಳೆಸಿದವರು ಚಿಕ್ಕಯ್ಯ ಮತ್ತು ತಿಮ್ಮಕ್ಕ ದಂಪತಿ. ಮಾಗಡಿಯ ಹುಲಿಕಲ್​ನಿಂದ ಕುದೂರುವರೆಗೂ ಸುಮಾರು 400 ಆಲದ ಗಿಡಗಳನ್ನು ನೆಟ್ಟು ಹೆಮ್ಮರವಾಗಿಸಿದ್ದಾರೆ. ನೀರಿನ ಅಭಾವ ಎದುರಾದಾಗ ಮೂರ್ನಾಲ್ಕು ಕಿಲೋ ಮೀಟರ್ ದೂರದಿಂದ ನೀರನ್ನು ಬಿಂದಿಗೆಯಲ್ಲಿ ಹೊತ್ತು ತಂದು, ಗಿಡಗಳನ್ನು ಬದುಕಿಸಿದ್ದಾರೆ. ದನ ಕರುಗಳು ಹಾಗೂ ದಾರಿಹೋಕರಿಂದಲೂ ಗಿಡಗಳಿಗೆ ಯಾವುದೇ ಹಾನಿಯಾಗಬಾರದು ಎಂದು ಪ್ರತಿನಿತ್ಯ ಅವುಗಳ ಮೇಲೆ ನಿಗಾ ಇಡುತ್ತಿದ್ದ ಈ ದಂಪತಿಯ ಪರಿಶ್ರಮದ ಫಲವಾಗಿ ಹೆಮ್ಮರಗಳು ಈ ದಾರಿಯಲ್ಲಿ ತಂಪು ನೀಡುತ್ತಿವೆ. ಆದರೆ, ನೋವಿನ ಸಂಗತಿ ಎಂದರೆ ಈ ಮರಗಳು ಸದ್ದಿಲ್ಲದೆ ಒಂದೊಂದೇ ಮಾಯವಾಗುತ್ತಿವೆ! ಪ್ರಸ್ತುತ ಕೇವಲ 312 ಮರಗಳು ಮಾತ್ರವೇ ಉಳಿದಿವೆ. ವಿವಿಧ ಕಾರಣಗಳಿಗಾಗಿ ಅವುಗಳ ರೆಂಬೆ ಕೊಂಬೆಗಳನ್ನೂ ಕಡಿದು ಹಾಕುತ್ತಿರುವುದರಿಂದ ಇಡೀ ಮರವೇ ಒಣಗಿ ಹೋಗುವ ಸ್ಥಿತಿ ಇದೆ.

ತುಮಕೂರು ರಸ್ತೆಯಲ್ಲಿ ಹುಲಿಕಲ್ ಗ್ರಾಮದಲ್ಲಿರುವ ಸಾಲುಮರದ ತಿಮ್ಮಕ್ಕನವರ ಮನೆಯಿಂದ ಲಕ್ಕೇನಹಳ್ಳಿವರೆಗೂ ಸಾಲು ಮರಗಳು ಕಣ್ಣಿಗೆ ಕಾಣುತ್ತವೆ. ನಂತರ ಲಕ್ಕೇನಹಳ್ಳಿಯಿಂದ ಕುದೂರುವರೆಗೆ ಅಲ್ಲಲ್ಲಿ ಕೆಲವು ಮರಗಳು ನಶಿಸಿದ್ದು ರಸ್ತೆಯಲ್ಲಿ ಸಾಲು ಮರದ ಅಂತರವನ್ನೇ ಕಳೆದುಕೊಂಡಿವೆ.

ರಕ್ಷಣೆಯೂ ಇಲ್ಲ: ತಿಮ್ಮಕ್ಕ ಬೆಳೆಸಿರುವ ಸಾಲು ಮರಗಳಿಗೆ ರಕ್ಷಣೆಯೂ ಇಲ್ಲವಾಗಿದೆ. ಒಂದೆಡೆ ಮೇಕೆಗಳಿಗೆ ಬೇಕಾದ ಸೊಪ್ಪನ್ನು ಈ ಮರಗಳಿಂದಲೇ ಕಡಿದುಕೊಂಡು ಹೋಗುವ ಕೆಲಸ ನಡೆಯುತ್ತಿದ್ದರೆ, ಮತ್ತೊಂದೆಡೆ ರೆಂಬೆ ಕೊಂಬೆಗಳನ್ನು ಸಹ ಕಡಿದು ಉರುವಲಾಗಿ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಒಮ್ಮೆ ಇದೇ ವಿಚಾರಕ್ಕೆ ಸಾಲು ಮರದ ತಿಮ್ಮಕ್ಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಿಷ್ಟೇ ಆಗಿದ್ದರೆ ಪರವಾಗಿಲ್ಲ ಎನ್ನಬಹುದಿತ್ತೇನೋ. ಆದರೆ ಸಾಲುಮರಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ, ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಸಂಪೂರ್ಣ ನಿರ್ಲಕ್ಷ್ಯ ವಹಿಸಿದಂತೆ ಕಾಣುತ್ತಿದೆ. ಮಳೆನೀರಿನ ಕೊರೆತಕ್ಕೆ ಮಣ್ಣು ಸವೆದು, ಸಾಲು ಮರಗಳ ಬುಡಗಳು ಬಹುತೇಕ ಮೇಲಕ್ಕೆ ಬಂದಿವೆ. ಮರದ ನೆರಳಿನಲ್ಲಿ ವ್ಯಾಪಾರ ಮಾಡುವ ಸಣ್ಣಪುಟ್ಟ ವ್ಯಾಪಾರಿಗಳು, ತಮ್ಮ ಕೆಲಸ ಮುಗಿದ ನಂತರ ಈ ಮರಗಳ ಬುಡಗಳನ್ನು ತಿಪ್ಪೆಗುಂಡಿಯನ್ನಾಗಿ ಮಾಡುತ್ತಾರೆ. ಅಲ್ಲೇ ಆ ತ್ಯಾಜ್ಯಕ್ಕೆ ಬೆಂಕಿ ಇಡುವುದರಿಂದ ಮರಗಳ ಬುಡಕ್ಕೂ ಧಕ್ಕೆಯಾಗುತ್ತಿದೆ. ಆದರೆ, ಇವುಗಳ ಬಗ್ಗೆ ನಿಗಾ ವಹಿಸಬೇಕಿದ್ದ ಅರಣ್ಯ ಇಲಾಖೆ ಮೌನಕ್ಕೆ ಶರಣಾಗಿದೆ.

ತಪ್ಪಿದ ಆತಂಕ: ಹಲಗೂರಿನಿಂದ ಬಾಗೇಪಲ್ಲಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ವಿಸ್ತರಣೆಗೆ ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ಯೋಜನೆ ರೂಪಿಸಿದ್ದು, ಈ ಸಾಲುಮರಗಳಿಗೇ ಸಂಚಕಾರ ತಂದೊಡ್ಡಿತ್ತು. ಈ ವಿಚಾರ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದ್ದಂತೆ ಪರಿಸರ ಪ್ರೇಮಿಗಳು ದನಿ ಎತ್ತಿದರು. ಆಗ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ತಿಮ್ಮಕ್ಕ, ಮರಗಳನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಕುಮಾರಸ್ವಾಮಿ, ಮರಗಳನ್ನು ರಕ್ಷಿಸುವ ಸಲುವಾಗಿ ಹೆದ್ದಾರಿ ವಿಸ್ತರಣೆಯ ಪಥವನ್ನೇ ಬದಲಿಸುವಂತೆ ಸೂಚನೆ ನೀಡಿದರು. ಆ ಮೂಲಕ ಮರಗಳನ್ನು ಕೊಡಲಿ ಏಟಿನಿಂದ ಪಾರು ಮಾಡಿದರು.

ನಾನು ಮತ್ತು ನನ್ನ ಪತಿ ಎಷ್ಟು ಮರಗಳನ್ನು ಬೆಳೆಸಿದೆವು ಎಂಬುದರ ಸ್ಪಷ್ಟ ನೆನಪು ಈಗ ಇಲ್ಲ. ಆದರೆ ಹುಲಿಕಲ್​ನಿಂದ ಕುದೂರುವರೆಗೂ ಗಿಡಗಳನ್ನು ನೆಟ್ಟು ಪೋಷಿಸಿದ್ದು ನಿಜ. ಅವುಗಳಿಗೆ ಈಗ ತೊಂದರೆ ಎದುರಾಗಿರುವುದು ಸತ್ಯ. ಈ ಸಾಲು ಮರಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಸರ್ಕಾರ ಘೊಷಣೆ ಮಾಡಿ, ಪ್ರತಿ ಮರಕ್ಕೆ ನಾಮಫಲಕ ಹಾಕಬೇಕು. ನನ್ನ ಜೀವಿತಾವಧಿಯಲ್ಲಿಯೇ ಮರಗಳಿಗೆ ಒಂದು ಸೂಕ್ತ ರಕ್ಷಣೆ ಒದಗಿಸಿಕೊಡಬೇಕು. | ಸಾಲುಮರದ ತಿಮ್ಮಕ್ಕ

ಪತಿಯ ಕೊಡುಗೆ ದೊಡ್ಡದು

ಸಾಲುಮರಗಳನ್ನು ಬೆಳೆಸಿದ್ದು ತಿಮ್ಮಕ್ಕ ಮಾತ್ರ ಅಲ್ಲ; ಈ ಶ್ರಮದ ಹಿಂದೆ ಅವರ ಪತಿ, ಬಿಕ್ಕಲಚಿಕ್ಕಯ್ಯ ಅವರ ಕೊಡುಗೆ ಅಪಾರವಾಗಿದೆ. ದನ ಕಾಯುವ ಕೆಲಸ ಮಾಡುತ್ತಿದ್ದ ಬಿಕ್ಕಲಚಿಕ್ಕಯ್ಯ ರಸ್ತೆ ಬದಿ ಆಲದ ಮರಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾದರು. ನಂತರ ಪತಿಯ ನೆರಳಿನಲ್ಲಿಯೇ ಸಾಗಿದ ತಿಮ್ಮಕ್ಕ, ಗಿಡಗಳ ಪೋಷಣೆಯಲ್ಲಿ ಪತಿಯೊಂದಿಗೆ ಕೈಜೋಡಿಸಿದರು. ಬಿಕ್ಕಲ ಚಿಕ್ಕಯ್ಯ ನಿಧನಾನಂತರ ಮರಗಳನ್ನು ಕಾಪಾಡುವ ಜವಾಬ್ದಾರಿಯನ್ನು ತಿಮ್ಮಕ್ಕ ತೆಗೆದುಕೊಂಡರು.

ಈಗ ತಿಮ್ಮಕ್ಕನೂ ಇಲ್ಲಿಲ್ಲ

ಪ್ರತಿ ಬಾರಿ ಈ ಸಾಲುಮರಗಳಿಗೆ ತೊಂದರೆ ಎದುರಾದಾಗ ಓಡೋಡಿ ಬಂದು ರಕ್ಷಣೆ ಮಾಡಲು ಮುಂದಾಗುತ್ತಿದ್ದ ತಿಮ್ಮಕ್ಕನೇ ಈಗ ಹುಲಿಕಲ್​ನಲ್ಲಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಬೆಂಗಳೂರು ಸೇರಿ ಬಹಳ ವರ್ಷಗಳೇ ಕಳೆದಿವೆ. ಅಪರೂಪಕ್ಕೊಮ್ಮೆ ಹುಲಿಕಲ್​ಗೆ ಬರುತ್ತಾರೆ. ಹೀಗಾಗಿ ಸಾಲುಮರಗಳು ಅನಾಥವಾಗಿವೆ. ಮರಗಳಿಗೆ ಏನೇ ಸಂಭವಿಸಿದರೂ, ಯಾರೂ ಕೇಳದಂಥ ಸ್ಥಿತಿ ಇದೆ.

ಈ ಸಾಲು ಮರಗಳನ್ನು ನೆಟ್ಟು ಪೋಷಿಸಿದವರು ಬಿಕ್ಕಲಚಿಕ್ಕಯ್ಯ. ಈ ಕಾರ್ಯಕ್ಕೆ ಅವರ ಪತ್ನಿ ತಿಮ್ಮಕ್ಕ ಕೈಜೋಡಿಸಿದ್ದರು. ಬಿಕ್ಕಲಚಿಕ್ಕಯ್ಯ ಕಾಲವಾದ ಮೇಲೆ ತಿಮ್ಮಕ್ಕ ಈ ಮರಗಳನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಅವರಿಗೆ ‘ಸಾಲುಮರದ ತಿಮ್ಮಕ್ಕ’ ಎಂದು ಹೆಸರು ಬಂದಿದೆ. ಆದರೆ ಆ ಹೆಗ್ಗಳಿಕೆ ಸಿಕ್ಕ ನಂತರ ಅವರು ಹುಲಿಕಲ್ ಗ್ರಾಮವನ್ನೇ ತೊರೆದಿದ್ದಾರೆ. | ಗಂಗಣ್ಣ ಮಾಜಿ ಅಧ್ಯಕ್ಷ, ಹುಲಿಕಲ್ ಗ್ರಾಪಂ

ಸಾಲುಮರಗಳ ರಕ್ಷಣೆ ಯಾರ ಹೊಣೆ?

ಒಂದೆಡೆ ಸ್ಥಳೀಯರ ನಿರ್ಲಕ್ಷ್ಯ ತಿಮ್ಮಕ್ಕನ ಅನುಪಸ್ಥಿತಿ, ಸರ್ಕಾರದ ಅವಗಣನೆ ಹೀಗೆ ಸಾಲು ಸಾಲು ಕಾರಣಗಳಿಂದ ಸಾಲುಮರಗಳು ನಶಿಸುತ್ತಿವೆ. ರಾಜ್ಯ ಸರ್ಕಾರವೇ ನೇರವಾಗಿ ಜವಾಬ್ದಾರಿ ತೆಗೆದುಕೊಂಡು, ಈ ಜಗತ್ಪ್ರಸಿದ್ಧ ಸಾಲುಮರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ. ಮರಗಳ ರಕ್ಷಣೆ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಘ ಸಂಸ್ಥೆಗಳು ಹೊರಬೇಕಿದೆ. ಇಲ್ಲವಾದರೆ 400ರಿಂದ 312ಕ್ಕೆ ಇಳಿದಿರುವ ಸಾಲು ಮರಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾದರೂ ಆಶ್ಚರ್ಯವಿಲ್ಲ.

ಕೆಲವರು ಈ ಸಾಲುಮರಗಳ ಬಳಿ ಅಡಿಕೆ ಸಿಪ್ಪೆ, ಕಬ್ಬಿನ ತ್ಯಾಜ್ಯವನ್ನು ತಂದು ಸುರಿದು ಬೆಂಕಿ ಇಡುತ್ತಿದ್ದಾರೆ. ಈ ಸಂಬಂಧ ತಿಮ್ಮಕ್ಕನ ದತ್ತು ಪುತ್ರ ಉಮೇಶ್ ಸರ್ಕಾರಕ್ಕೆ ದೂರು ನೀಡಿದ್ದಾರೆ. ಕುದೂರು ವಲಯದ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸಾಲುಮರಗಳ ಬಳಿ ಬೀಟ್ ವ್ಯವಸ್ಥೆ ಮಾಡಲಾಗಿದೆ. | ಪುಷ್ಪಲತಾ ವಲಯ ಅರಣ್ಯ ಅಧಿಕಾರಿ, ಮಾಗಡಿ

ನನಸಾಗದ ಕನಸು

ಹುಲಿಕಲ್​ನಲ್ಲಿ ತಿಮ್ಮಕ್ಕ ವಾಸ ಮಾಡುತ್ತಿದ್ದ ಮನೆಯೂ ಪಾಳು ಬಿದ್ದಿದೆ. ಮರಗಳ ಬೇರುಗಳು ಮನೆಯ ಆವರಣವನ್ನು ಸೀಳಿವೆ. ಹುಲಿಕಲ್​ನಲ್ಲಿ ಆಸ್ಪತ್ರೆ ಕಟ್ಟಿಸಬೇಕು ಎನ್ನುವುದು ತಿಮ್ಮಕ್ಕನ ಬಹುವರ್ಷಗಳ ಬೇಡಿಕೆ. ಇದಕ್ಕಾಗಿ ಜಾಗವೂ ಮಂಜೂರಾಗಿದೆ. ಆದರೆ, ಆ ಜಾಗದ ವಿಚಾರದಲ್ಲಿ ತಿಮ್ಮಕ್ಕನಿಗೆ ಬೇಸರವಿರುವುದರಿಂದ ಅದೂ ಪಾಳು ಬಿದ್ದಿದೆ. ಈಗ ಅದನ್ನು ನಿರ್ವಸಿತರಿಗೆ ಮಂಜೂರು ಮಾಡಿಕೊಡಲು ಸ್ಥಳೀಯ ಗ್ರಾಮ ಪಂಚಾಯಿತಿ ಯೋಚಿಸುತ್ತಿದೆ. ಇದರಿಂದಾಗಿ ತಿಮ್ಮಕ್ಕನ ಆಸ್ಪತ್ರೆ ಕನಸೂ ಕನಸಾಗಿಯೇ ಉಳಿದುಬಿಡುತ್ತದೆ.

| ಗಂಗಾಧರ್ ಬೈರಾಪಟ್ಟಣ

ಪ್ರತಿಕ್ರಿಯಿಸಿ: sundayvijayavani@gmail.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net