ಸಂತೃಪ್ತಿ ಎಂಬ ದೋಣಿಯಲ್ಲಿ ಆನಂದದ ದಡದತ್ತ ಪಯಣ...

Deshmukh
ಚಿತ್ರ: ಪವನ್ ಗೋಪಾಲ್
Published on
ಎರಡು ಬಗೆಯ ಸನ್ನಿವೇಶಗಳಲ್ಲಿ ಮನುಷ್ಯ ತುಂಬ ಹೆಣಗಾಡುತ್ತಾನೆ!

ಒಂದು, ತನಗೆ ಬೇಕಾಗಿರುವುದನ್ನು ಪಡೆದುಕೊಳ್ಳಲೇಬೇಕು ಎಂಬ ಹೋರಾಟದಲ್ಲಿ! ಈ ಹಾದಿಯಲ್ಲಿ ಎಡವುತ್ತಾನೆ, ಬೀಳುತ್ತಾನೆ, ಮೇಲೇಳುತ್ತಾನೆ, ಸಾವರಿಸಿಕೊಳ್ಳುತ್ತಾನೆ. ಮತ್ತೆ ನಡೆಯುತ್ತಾನೆ. ಕೆಲವೊಮ್ಮೆ ಸಣ್ಣ ಅಥವಾ ದೊಡ್ಡ ಸೋಲುಗಳು ಮಕಾಡೆ ಮಲಗಿಸಿದಾಗ ನೈರಾಶ್ಯದ ಕೂಪಕ್ಕೆ ಜಾರುತ್ತಾನೆ. ಎರಡನೆಯದು, ಪಡೆದುಕೊಂಡಿದ್ದನ್ನು ಕಳೆದುಕೊಂಡಾಗ ಆಗುವ ದುಃಖ! ಇದು ತೀವ್ರ ಸಮಯ ಕಾಡುತ್ತದೆ. ಎಷ್ಟೋ ಜನರಂತೂ ಜೀವನವೇ ಮುಗಿದು ಹೋಯ್ತು ಅಂದುಕೊಳ್ಳುತ್ತಾರೆ. ಇದರಿಂದ ಹೊರಬಂದು ಹೊಸಬದುಕು ಆರಂಭಿಸಿ, ಮುಂಚೆಗಿಂತ ಹೆಚ್ಚು ಸಾರ್ಥಕವಾಗಿ ಬಾಳಿದವರೂ ಇದ್ದಾರೆ. ಆಸಕ್ತಿದಾಯಕ ವಿಚಾರವೆಂದರೆ, ಮನುಷ್ಯನ ಈ ಪಡೆದುಕೊಳ್ಳುವ ಮತ್ತು ಕಳೆದುಕೊಳ್ಳುವ ಪಯಣದಲ್ಲಿ ತುಂಬ ಅಂತರವಿಲ್ಲ. ಸಣ್ಣ ಜೀವಿತಾವಧಿಯಲ್ಲೇ ಎರಡನ್ನೂ ಅನುಭವಿಸುವುದರಿಂದಲೇ ‘ಜೀವನದರ್ಶನ’ವಾಗುತ್ತದೆ ಎನ್ನುವುದು ದಾರ್ಶನಿಕರ ಅಂಬೋಣ. ಈ ಎರಡು ಸಂಗತಿಗಳು ಜೀವನದ ವೈರುದ್ಧ್ಯ ಮುಖಗಳಂತೆ ಕಂಡರೂ, ಬದುಕಿನ ಪಾಠ ಕಲಿಸುವುದಂತೂ ಹೌದು.

ನಮಗೆ ಬೇಕಾದ್ದನ್ನು ಪಡೆದುಕೊಳ್ಳಬೇಕು ಎಂದರೆ ಅದಕ್ಕೆ ಛಲ ಬೇಕು, ಪ್ರಬಲ ಇಚ್ಛಾಶಕ್ತಿ, ಸೋಲಿಗೆ ಕುಗ್ಗದ ಮನೋಬಲ, ಸಾಧನೆಯ ಹಂತ ತಲುಪುವವರೆಗೂ ಅವಿಶ್ರಾಂತ ಪ್ರಯತ್ನ. ಜತೆಗೆ ಪ್ರತಿಭೆಯ ಬಲ ಇದ್ದರೆ ಸಾಧನೆಯ ಶೃಂಗದಲ್ಲಿ ನಾವಿರುತ್ತೇವೆ. ಒಂದಂತೂ ಸತ್ಯ. ನಮಗೆ ಪ್ರಿಯವಾದ ವಸ್ತು/ಸಂಗತಿಗಳನ್ನು ನಮ್ಮಿಂದ ಕಿತ್ತುಕೊಳ್ಳಲು ಈ ಪ್ರಪಂಚ ಸದಾ ಪ್ರಯತ್ನಿಸುತ್ತಿರುತ್ತದೆ. ಆದರೆ, ಅದನ್ನು ಉಳಿಸಿಕೊಳ್ಳಲು ಮಾಡುವ ಹೋರಾಟ, ಪರಿಸ್ಥಿತಿಗಳಿಗೆ ಕೊಡುವ ಎದುರೇಟಿನಲ್ಲೇ ಬದುಕಿನ ನಿಜವಾದ ಮಜಾ ಇದೆ ಅಂದೆನಿಸುವುದಿಲ್ಲವೇ? ಯಾರದೇ ಸಾಧಕರ ಬದುಕನ್ನು ತಾಳ್ಮೆಯಿಂದ ಅವಲೋಕಿಸಿದರೂ ಕಂಡುಬರುವುದು ಅವರ ಅಪಾರ ಪರಿಶ್ರಮ, ಸೋತರೂ ಕುಗ್ಗದೆ ಮತ್ತೆ ಮುಂದುವರಿಯುವ ಛಲ, ವಿಶಿಷ್ಟವಾದದ್ದನ್ನು, ಹೊಸದನ್ನು ಮಾಡುವ ತುಡಿತ, ಒಂದೇ ಗೆಲುವಿಗೆ ತೃಪ್ತಿಗೊಳ್ಳದೆ ಗೆಲುವಿನ ಪಯಣವನ್ನು ಮುಂದುವರಿಸುವ ಬದ್ಧತೆ, ಯಶಸ್ಸು ಸಿಕ್ಕ ಮೇಲೂ ಅಹಂ ಆವರಿಸಿಕೊಳ್ಳಲು ಬಿಡದೆ ಕಾಯ್ದುಕೊಳ್ಳುವ ವಿನಯತೆ. ಆದರೆ, ಇದೆಲ್ಲವನ್ನು ಸಮಗ್ರವಾಗಿ ನೋಡದೆ ಗೆದ್ದವರ, ಸಾಧಕರ ಜನಪ್ರಿಯತೆ, ಅವರು ಗಳಿಸುವ ಸಂಪತ್ತನ್ನಷ್ಟೇ ಗಮನಿಸುತ್ತ, ವಿಧಿಯನ್ನು ಹಳಿಯುವವರಿದ್ದಾರೆ. ಇನ್ನು ಯುವಕರಿಗಂತೂ ರಾತ್ರಿ ಕಳೆದು ಬೆಳಗಾಗುವುದರೊಳಗೆ ಯಶಸ್ಸು, ಪ್ರತಿಷ್ಠೆ ಸಿಗಬೇಕು ಎಂಬ ಧಾವಂತ. ಇದೆಲ್ಲವೂ ‘ಪಡೆದುಕೊಳ್ಳುವ’ ಪ್ರಕ್ರಿಯೆಯಲ್ಲಿನ ಎಡರುತೊಡರುಗಳು ಅಥವಾ ಜೀವನಪಾಠಗಳು.

ಹಲವು ವರ್ಷಗಳ ನಂತರ...

ತುಂಬ ಕಷ್ಟಪಟ್ಟು ಗಳಿಸಿದ ಖ್ಯಾತಿ, ಪ್ರತಿಷ್ಠೆ, ಹಣ, ಸಂಬಂಧಗಳು ಒಂದೊಂದಾಗಿ ಕೈಬಿಡುತ್ತ ಹೋಗುತ್ತವೆ. ನಾವು ಹೀಗೆ ಸಂಭವಿಸಬಾರದೆಂದು ಎಷ್ಟೇ ಪ್ರಯತ್ನಿಸಿದರೂ, ಊಹುಂ ಅದನ್ನು ತಡೆಯಲು ಸಾಧ್ಯವಿಲ್ಲ. ಪಡೆದುದ್ದೆಲ್ಲ ಒಂದಿಲ್ಲ ಒಂದಿನ ಮರಳಿಸಲೇಬೇಕು! ಹಾಗಾದರೆ, ಈ ಪಡೆಯುವ-ಕಳೆದುಕೊಳ್ಳುವ ಧಾವಂತದಲ್ಲೇ ಜೀವನ ಕಳೆದುಹೋಗಬೇಕಾ? ಇದಕ್ಕೇನು ಅರ್ಥವಿದೆ? ಯಾವುದೂ ಶಾಶ್ವತವಲ್ಲ ಎಂದ ಮೇಲೆ ಯಾವುದಕ್ಕಾಗಿ ಪರಿತಾಪ? ಎಂಬೆಲ್ಲ ಪ್ರಶ್ನೆಗಳು ಮೂಡುತ್ತವೆ. ಪಡೆದುಕೊಂಡಿದ್ದನ್ನು ಕಳೆದುಕೊಂಡ ಮೇಲೆ ಉಳಿಯುವುದು ಹಳಹಳಿಕೆಯೇ, ನೆನಪುಗಳೇ, ದುಃಖವೇ ಅಥವಾ ಸಾರ್ಥಕತೆಯೇ ಎಂಬುದು ನಮ್ಮ ನಮ್ಮ ವ್ಯಕ್ತಿತ್ವಗಳ ಮೇಲೆ ಅವಲಂಬಿತವಾಗುತ್ತದೆ.

ಹಾಗಿದ್ದರೆ ಮನಸ್ಸನ್ನು ಯಾವುದಕ್ಕಾಗಿ, ಹೇಗೆ ಸಿದ್ಧ ಮಾಡಬೇಕು? ಹಣ, ಪ್ರತಿಷ್ಠೆ, ವರ್ಚಸ್ಸು ಕರಗಿ ಹೋಗುತ್ತವೆ ಅಂದರೆ ಶಾಶ್ವತವಾದದ್ದು ಯಾವುದು ಎಂಬ ಜಿಜ್ಞಾಸೆಗೆ ಭಾರತೀಯ ಸಂಸ್ಕೃತಿ, ಮೌಲ್ಯಗಳಲ್ಲಿ ಉತ್ತರವೇನೋ ಇದೆ. ಆದರೆ, ಆ ಬಗ್ಗೆ ನಮ್ಮದು ಜಾಣಕುರುಡು ಅಷ್ಟೇ. ಈ ಸ್ಥಿತಿಗಳಿಗೆ ಅಥವಾ ಜೀವನದ ಮುಂದಿನ ಹಂತಕ್ಕೆ ಮನಸ್ಸನ್ನು ಅಣಿಗೊಳಿಸುವುದು ಇಲ್ಲವೆ ವಾಸ್ತವವನ್ನು ಒಪ್ಪಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕೆ ಕವಿಯೊಬ್ಬ ಹೇಳುತ್ತಾನೆ: ‘ನನಗೆ ನಾಳೆಯ ಬಗ್ಗೆ ಯೋಚನೆಯಿಲ್ಲ. ಏಕೆಂದರೆ, ಪ್ರತಿದಿನವೂ ಇಂದೇ ಕೊನೆಯ ದಿನ ಎಂಬಂತೆ ಬದುಕಿ ಬಿಡುತ್ತೇನೆ’.

‘ಸಾಮ್ರಾಜ್ಯವೂ ನಿನ್ನದಲ್ಲ. ಸನ್ಮಾನವೂ ನಿನಗಲ್ಲ.

ಸೃಷ್ಟಿಕರ್ತನ ಸೃಷ್ಟಿಯು ನಿನ್ನೊಬ್ಬನದೇ ಅಲ್ಲ.

ಸಮ್ಮತಿಸಿ ಸಲುಹಿತನು ಸಕಲವೆಲ್ಲವನೂ ಬಲ್ಲ.

ಸಹಮತದಿ ಬಾಳಿ ಬದುಕಬೇಕು ಒಂದಾಗಿ ಎಲ್ಲ.

ಆಗುವುದೆಲ್ಲವೂ ಆಗಲಿ, ಬರುವುದೆಲ್ಲವೂ ಬರಲಿ.

ಅಂದವರು ಅರಿತಿಲ್ಲ. ಅನುಮಾನಕ್ಕೆ ಔಷಧವಿಲ್ಲ.

ಅಲ್ಪರ ಅರಿವಿರದ ಅನಿಸಿಕೆಗಳಿಗೆ ಅರ್ಥವಿಲ್ಲ.

ಅಜರಾಮರವಾಗಿ ಉಳಿಯಲು ನಾವು ಇಲ್ಲಿ ಬಂದಿಲ್ಲ’ ಎಂಬ ಅರಿವಿನ ಬೆಳಕು ನೀಡುತ್ತಲೇ, ಸಂಜಾತನು ಒಳಗೆ ಇರುವುದು ಅರಿಯುವುದೇ ಸಂಯೋಗ ಎನ್ನುತ್ತ ನೈಜಾನಂದ ತಲುಪುವ ಸ್ಥಿತಿಯನ್ನು ವಿವರಿಸಿದ್ದಾರೆ ಆಧ್ಯಾತ್ಮಿಕ ಚಿಂತಕ ರಾಮಣ್ಣ ಪಾಟೀಲ್.

ಇದೇನೋ ನಿಜವೇ. ಆದರೆ, ಲೌಕಿಕದ, ಬಯಕೆಗಳ, ಬೇಕುಗಳ ವ್ಯಾಮೋಹದಲ್ಲಿ ಮುಳುಗಿ, ಕಳೆದುಹೋದದ್ದರ ಶೋಕಾಗ್ನಿ ಯಲ್ಲಿ ಬೇಯುತ್ತಿರುವ ಮನಸ್ಸುಗಳು ಈ ನೈಜಾನಂದ ತಲುಪುವುದು ಹೇಗೆ? ಆನಂದದ ಗಮ್ಯ ಸ್ವಲ್ಪ ದೂರ ಎನಿಸಿದರೂ, ಆ ನಿಟ್ಟಿನಲ್ಲಿ ಸಾಗಬೇಕಾದ ಹಾದಿ ತುಂಬ ಸುಂದರವಾಗಿದೆ. ಅದರ ಹೆಸರೇ ‘ಸಂತೃಪ್ತಿ.’ ಅದನ್ನು ಕೃತಜ್ಞತೆ ಎಂಬ ಮೌಲ್ಯದಿಂದಲೂ ಕರೆಯಬಹುದು. ಬದುಕಿನ ದಯನೀಯ ಸ್ಥಿತಿಯಲ್ಲೂ ಸಂತೃಪ್ತಿಯನ್ನು ಹೊಂದುವುದಿದೆಯಲ್ಲ, ಅದು ನೈಜ ಉತ್ಕರ್ಷ. ವಾಸ್ತವಗಳನ್ನು ಅಪ್ಪಿಕೊಳ್ಳುವ ಸರಿಯಾದ ಕ್ರಮವೂ ಹೌದು. ಸಂತೃಪ್ತಿ ಕಂಡುಕೊಳ್ಳದ ಮನ ಸದಾ ಶೋಕಿಸುತ್ತಿರುತ್ತದೆ. ಅಂದರೆ ಸುಖ-ದುಃಖಗಳ ಭಾವ ನಿರ್ವಣವಾಗುವುದು ಮನಸ್ಸಿನ ಆಟದಿಂದಲೇ.

ಈ ದೃಷ್ಟಾಂತ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ. ಅದು ಪ್ರಸಿದ್ಧ ತೀರ್ಥಕ್ಷೇತ್ರದ ದೇವಸ್ಥಾನ. ಅದಕ್ಕೆ ತಲುಪುವ ದಾರಿಯ ಬದಿಯಲ್ಲಿ ಓರ್ವ ವಯೋವೃದ್ಧ. ಶರೀರ, ವಸ್ತ್ರಗಳೆಲ್ಲ ಜೀರ್ಣವಾಗಿದ್ದವು. ದೇವಸ್ಥಾನಕ್ಕೆ ಹೊರಟಿದ್ದ ಭಕ್ತನೊಬ್ಬ ಆ ವೃದ್ಧನ ಬಳಿ ಬಂದು ಅವನ ಕೈಗೆ ಹತ್ತು ರೂಪಾಯಿ ಇರಿಸಿ, ‘ಕಾಫಿಯೋ, ಚಹಾವೋ ಕುಡಿದು ಸಂತೋಷದಿಂದ ಇರಪ್ಪ’ ಎಂದ. ಆ ವೃದ್ಧ ಅಷ್ಟೇ ವಿನಯದಿಂದ, ‘ನಿಮ್ಮ ಮೇಲೆ ದೇವರ ಅನುಗ್ರಹವಿರಲಿ. ನನಗಂತೂ ದುಃಖವೆಂದರೆ ಏನೆಂದೇ ತಿಳಿಯದು’ ಎಂದು ಉತ್ತರಿಸಿದ. ಭಕ್ತನಿಗೆ ಆಶ್ಚರ್ಯ. ‘ಅದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ. ‘‘ತುಂಬ ಬಿಸಿಲಿದ್ದಾಗ ನಾನು ‘ಸದ್ಯ ಕೊರೆಯುವ ಚಳಿ ಇಲ್ಲವಲ್ಲ’ ಎಂದುಕೊಳ್ಳುತ್ತೇನೆ. ಮಳೆ ಸುರಿಯುತ್ತಿದ್ದಾಗ ‘ಸದ್ಯ ಬಿಸಿಲಿನ ಬೇಗೆ ಇಲ್ಲ’ ಎಂದು ಆನಂದಪಡುತ್ತೇನೆ. ಹಸಿವಾದಾಗ ‘ಇಷ್ಟು ಸಮಯ ಭಗವಂತ ನನಗೆ ಅನ್ನವನ್ನಿತ್ತು ಕಾಪಾಡಿದನಲ್ಲ!’ ಎಂದು ವಂದಿಸುತ್ತೇನೆ. ದೇವರು ನನಗೆ ಏನೇನನ್ನು ಅನುಗ್ರಹಿಸಿದರೂ ಅದೆಲ್ಲವೂ ನನ್ನ ಆನಂದಕ್ಕಾಗಿಯೇ-ಎಂದು ನಂಬಿರುವ ನನ್ನ ಹತ್ತಿರ ದುಃಖ ಹೇಗೆ ಸುಳಿದೀತು?’

ಇನ್ನಷ್ಟು ಅಚ್ಚರಿಗೊಂಡ ಭಕ್ತ, ‘ನೀವು ಯಾರು?’ ಎಂದು ಕೇಳಿದ.

‘ನಾನು ಮಹಾರಾಜ’ ಎಂದು, ಮುಗುಳ್ನಕ್ಕ ವೃದ್ಧ.

‘ನಿಮ್ಮ ರಾಜ್ಯ ಎಲ್ಲಿದೆ?’ ಎಂದು ಕೇಳಿದಾಗ, ‘ನನ್ನ ಹೃದಯದಲ್ಲಿ’ ಎಂದ, ಆತ!

(ಸೂಕ್ತಿ ಸಂಚಯ ಸುಭಾಷಿತ ಸಂಗ್ರಹ- ಲೇಖಕರು ಹಿರಿಯ ವಿದ್ವಾಂಸ, ನಾಡೋಜ ಎಸ್.ಆರ್.ರಾಮಸ್ವಾಮಿ)

ನಮ್ಮ ಹೃದಯದಲ್ಲಿ ಇಂಥ ಸಂತೃಪ್ತಿಯ ರಾಜ್ಯ ಸ್ಥಾಪಿಸಿಕೊಳ್ಳುವವರೆಗೂ ‘ಬೇಕು’ಗಳ ಮಾಯಾಜಾಲದಲ್ಲಿ, ಕಳೆದುಹೋಗಿರುವ ವಸ್ತುಗಳ ಶೋಕಸಾಗರದಲ್ಲಿ ಮುಳುಗಿರುತ್ತೇವೆ. ಅದಕ್ಕೆಂದೆ ಭಾಗವತದಲ್ಲಿ ಹೇಳಲಾಗಿದೆ: ‘ಎಲ್ಲ ದೇವತೆಗಳಿಗೂ ಒಡೆಯನಾಗಿದ್ದರೂ ಅತೃಪ್ತಸ್ವಭಾವದವನಾದರೆ ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಬಡತನವಿದ್ದರೂ ಸಂತೃಪ್ತಿಯನ್ನು ಅಭ್ಯಾಸ ಮಾಡಿಕೊಂಡವನಾದರೆ ಅಂಥವನು ಎಲ್ಲ ರೀತಿಯಲ್ಲಿಯೂ ಪ್ರಶಾಂತವಾಗಿ, ನೆಮ್ಮದಿಯಿಂದ ಇರುತ್ತಾನೆ’. ಇಂಥ ಮನೋನಿಗ್ರಹ ಸಾಧ್ಯವಾದಾಗಲೇ ಜೀವನದಲ್ಲಿ ಯಾವುದನ್ನು ಎಷ್ಟು ಪಡೆದುಕೊಳ್ಳಬೇಕು, ಸಮಾಜಕ್ಕೆ ಎಷ್ಟು ಮರಳಿ ಕೊಡಬೇಕು ಎಂಬುದರ ಅರಿವು ಸಾಧ್ಯ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ತೆಗೆದುಕೊಳ್ಳುವುದಕ್ಕಿಂತ, ಕೊಡುವುದರಲ್ಲೇ ಹೆಚ್ಚು ಆನಂದವಿದೆ ಎಂದು ಸ್ಪಷ್ಟವಾಗಿ ಸಾರಲಾಗಿದೆ. ಕೆಲವರು ಕೊಡುವುದೆಂದರೆ ಬರೀ ದುಡ್ಡು, ಸಂಪತ್ತಿನ ದಾನ ಎಂದಷ್ಟೇ ಅಂದುಕೊಂಡಿದ್ದಾರೆ. ಆದರೆ, ಸಂತ ಮೀರಾಬಾಯಿ, ಮುಕ್ತಾಬಾಯಿ, ಶಾರದಾದೇವಿ, ಚೈತನ್ಯ ಮಹಾಪ್ರಭುಗಳು, ಶಿರಡಿಯ ಸಾಯಿಬಾಬಾ, ಶ್ರೀಧರ ಸ್ವಾಮಿಗಳು, ಈಗಿನ ಮಾತಾ ಅಮೃತಾನಂದಮಯಿ, ಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ಅಸಂಖ್ಯ ಸಂತ-ಮಹಂತರು ಹಂಚಿದ್ದು ಶುದ್ಧ ಪ್ರೇಮವನ್ನೇ. ಇಂದು ಕೂಡ ಹೃದಯವಂತಿಕೆಯ ಬಡತನವಿದೆ, ಪ್ರೇಮದ ಅಭಾವವಿದೆ. ಇದನ್ನೆಲ್ಲ ನಿವಾರಿಸಲು ಭೌತಿಕ ಸಂಪತ್ತು ಬೇಕಿಲ್ಲ; ಶುದ್ಧಪ್ರೇಮದ ನಿರ್ಮಲ ಹರಿವೇ ಸಾಕು. ಸುಖ-ದುಃಖದ ಜಿಜ್ಞಾಸೆಯಲ್ಲಿ ದಾರಿ ಕಾಣದಿದ್ದಾಗ ಸಂತೃಪ್ತಿಯೆಂಬ ದೋಣಿ ಏರಿ, ಆನಂದದ ದಡ ತಲುಪುವುದು ಸಾರ್ಥಕ ಪಯಣ ಎನಿಸಬಲ್ಲದು.

‘ಈ ಬದುಕಿನಿಂದ ತುಂಬ ತುಂಬ ಸಿಗುತ್ತದೆ ಎಂಬುದೇನೋ ನಿಜ. ಆದರೆ, ನಾವು ಬದುಕಿನಿಂದ ಏನು ಸಿಕ್ಕಿಲ್ಲ ಎಂಬುದರ ಬಗ್ಗೆಯಷ್ಟೇ ಲೆಕ್ಕ ಇಡುತ್ತೇವೆ’ ಎಂಬ ಗುಲ್ಜಾರರ ಸಾಲುಗಳು ಬಹುತೇಕರ ಸ್ವಭಾವಗಳಿಗೆ ಕನ್ನಡಿ. ಕರೊನಾ ನಂತರದ ದಿನಗಳಲ್ಲಿ ಬದುಕು ಭಿನ್ನ ತಿರುವಿಗೆ ಬಂದು ನಿಂತಿದೆ. ಈ ಹಂತದಲ್ಲಿ ಬಿಗುಮಾನ, ಸ್ವಾರ್ಥದ ಬೇಲಿಗಳನ್ನು ಮುರಿದು ಪರಸ್ಪರ ಗೌರವ, ಸಹಕಾರ, ಸಾಂತ್ವನದ ಸುಂದರ ಮೌಲ್ಯಗಳನ್ನು ಹಂಚಬೇಕಿದೆ. ಪಡೆದುಕೊಂಡಿದ್ದೂ ಆಯ್ತು, ಕಳೆದುಕೊಂಡಿದ್ದೂ ಆಯ್ತು... ಮುಂದೇನು ಎಂದು ಉತ್ತರ ಶೋಧಿಸುತ್ತಿರುವವರಿಗೆ ನೈಜ ಜೀವನಧರ್ಮದ ದರ್ಶನವಾಗಬೇಕಿದೆ. ಕೊರಗು ಕಾಡದಂತೆ ಬದುಕಿಬಿಟ್ಟರೆ ಆಯ್ತಲ್ಲ; ಹೃದಯದಲ್ಲೂ ಸಂತೋಷದ ಸಾಮ್ರಾಜ್ಯ! ಅದುವೇ ನೆಮ್ಮದಿಯ ನಿಲ್ದಾಣ!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net