

ಕೆಲವು ಗುಣಗಳೇ ಹಾಗೆ, ನಮ್ಮನ್ನು ಅಂಟಿಕೊಂಡಿರು ತ್ತವೆ. ಇವನ್ನೇ ಹುಟ್ಟುಗುಣಗಳೆಂದೂ ಕರೆಯಬಹುದು. ಇವು ದುರ್ಗಣಗಳೆಂದು ನಮಗೆ ಗೊತ್ತಿದ್ದರೂ ಹಾಗೂ ಅವುಗಳಿಂದ ದೂರವಿರಬೇಕೆಂದು ಬಯಸಿದರೂ, ಅಷ್ಟು ಸುಲಭದಲ್ಲಿ ಅವು ನಮ್ಮನ್ನು ಬಿಟ್ಟು ಹೋಗಲಾರವು.
ಸಾಮಾನ್ಯವಾಗಿ ಜೀವಿತಕಾಲದಲ್ಲಿ ಒಮ್ಮೆಯಾದರೂ ಕಾಶಿಗೆ ಹೋಗಿ, ಅಲ್ಲಿಯ ಗಂಗಾನದಿಯಲ್ಲಿ ಸ್ನಾನಮಾಡಿ, ಕಾಶೀ ವಿಶ್ವನಾಥನ ದರ್ಶನ ಪಡೆದು ಬರಬೇಕೆಂಬುದು ಬಹುತೇಕರ ಅಭಿಲಾಷೆ. ಹೀಗೆ ಮಾಡೋದರಿಂದ ಪಾಪಗಳ ಪರಿಹಾರವಾದೀತೆಂಬುದು ನಂಬಿಕೆ. ಹೀಗೆ ಕಾಶಿಗೆ ಹೋದ ಸ್ಮರಣಾರ್ಥ ಅಲ್ಲಿಂದ ಹಿಂದಿರುಗುವ ವೇಳೆ, ತಮಗೆ ಪ್ರಿಯವಾದ ಯಾವುದಾದರೊಂದು ವಸ್ತು ವಿಷಯ, ಇಲ್ಲವೆ ತಾವು ಬಿಟ್ಟಿರಲಾಗದ ಯಾವುದಾದರೊಂದು ಚಾಳಿಯನ್ನು ಅಲ್ಲಿಯೇ ಬಿಟ್ಟು ಬರುವುದು ವಾಡಿಕೆ.
ಒಂದೂರಿನಲ್ಲಿ ಒಬ್ಬರು ಮೇಷ್ಟ್ರು ಇದ್ದರು. ಅವರು ಭಾರಿ ಮುಂಗೋಪಿ ಸ್ವಭಾವದವರಾಗಿದ್ದರು. ಸಣ್ಣಪುಟ್ಟ ವಿಚಾರಗಳಿಗೂ ಸಿಡಿಮಿಡಿಗೊಳ್ಳುತ್ತಿದ್ದರು. ಶಾಲೆ ಮಕ್ಕಳಿಗೆ ಮಾತ್ರವಲ್ಲ; ಮನೆಯಲ್ಲೂ ಅವರನ್ನು ಕಂಡರೆ ಎಲ್ಲರಿಗೂ ಭಯ. ಒಮ್ಮೆ ಕಾಶಿಯಾತ್ರೆಗೆ ಹೊರಟ ಇವರು ‘ಏನನ್ನು ಬಿಟ್ಟು ಬರಲಿ?’ ಎಂದು ಮಡದಿಯನ್ನು ಕೇಳಿದಾಗ ‘ಬೇರೇನೂ ಬೇಡ, ಸಿಟ್ಟನ್ನು ಬಿಟ್ಟು ಬನ್ನಿ’ ಎಂದಳು. ಅಂತೆಯೇ ಆ ಮೇಷ್ಟ್ರು ಕಾಶಿಯಲ್ಲಿ ನಿಂತು, ‘ಇನ್ನು ಮುಂದೆ ನಾನು ಸಿಟ್ಟಿಗೇಳುವುದಿಲ್ಲ, ಸಿಟ್ಟನ್ನು ಇಲ್ಲೇ ಬಿಟ್ಟು ಬಿಟ್ಟಿದ್ದೇನೆ’ ಎಂದು ಸಂಕಲ್ಪ ಮಾಡಿದರು.
ಕಾಶಿಯಿಂದ ಹಿಂತಿರುಗಿದ ಇವರನ್ನು ಶಾಲಾಮಕ್ಕಳು ಒಬ್ಬೊಬ್ಬರಾಗಿಯೇ ಕೇಳಲಾರಂಭಿಸಿದರು. ‘ಕಾಶಿಗೆ ಹೋಗಿ ಏನನ್ನು ಬಿಟ್ಟು ಬಂದಿರಿ ಸರ್?’ ‘ಸಿಟ್ಟನ್ನು ಬಿಟ್ಟು ಬಂದಿರುವೆನಪ್ಪಾ’ ಎಂದು ಒಬ್ಬನಿಗೆ ಹೇಳಿದರು. ಅಷ್ಟರಲ್ಲಿ ಇನ್ನೊಬ್ಬ ಹುಡುಗ ಇದೇ ಪ್ರಶ್ನೆ ಕೇಳಲು ಅವನಿಗೂ ಇದೇ ಉತ್ತರ ನೀಡಿದರು. ಈ ಸುದ್ದಿ ಶಾಲೆಯಲ್ಲಿ ಹರಡುತ್ತಲೇ ಇನ್ನಷ್ಟು ಸಹೋದ್ಯೋಗಿಗಳು, ಮಕ್ಕಳು ಮತ್ತೆಮತ್ತೆ ಇದೇ ಪ್ರಶ್ನೆಯನ್ನು ಕೇಳಲಾರಂಭಿಸಿದರು. ಕೆಲವರಂತೂ ‘ನಿಮಗೆ ಇದು ಹೇಗೆ ಸಾಧ್ಯ?’ ಎಂದು ಕೇಳುತ್ತ ಇವರನ್ನು ಚುಡಾಯಿಸಿದರೆ, ಕೆಲವರು ‘ನಿಜವಾಗಿಯೂ ನೀವು ಸಿಟ್ಟು ಮಾಡೋದನ್ನು ಬಿಟ್ಟು ಬಿಟ್ಟರೇನು?’ ಎಂದು ಕೇಳಲು ತಾಳ್ಮೆ ತಪ್ಪಿದ ಮೇಷ್ಟ್ರು ಹಾಗೆ ಕೇಳಿದ ಹುಡುಗನಿಗೆ ಕಣ್ಣು ಕೆಂಪಗೆ ಮಾಡಿಕೊಂಡು, ‘ಎಷ್ಟು ಸಲ ಇದೇ ಪ್ರಶ್ನೆ ಕೇಳ್ತಾ ಇದ್ದೀಯಾ, ನಿನಗೆ ಬುದ್ಧಿ ಇಲ್ವಾ?’ ಎಂದೆನ್ನುತ್ತ ಕಪಾಳಕ್ಕೆ ಎರಡು ಬಿಗಿದು ಕಳುಹಿಸಿದರು.
ತಾತ್ಪರ್ಯ ಇಷ್ಟೆ. ಇವರು ಸಿಟ್ಟನ್ನು ಗೆದ್ದವರಾಗಿರಲಿಲ್ಲ. ಸಿಟ್ಟಿಗೆದ್ದವರಾಗಿದ್ದರು. ಅಧಿಕಾರದ ವ್ಯಾಮೋಹ, ಭ್ರಷ್ಟಾಚಾರ, ಜಾತೀಯತೆ, ಮತಾಂಧತೆ,
ಕುಡಿತ, ಜೂಜು, ಕಳ್ಳತನ, ವೇಶ್ಯಾವಾಟಿಕೆ, ಮೋಹ, ಅಸೂಯೆ, ಅತಿಆಸೆ, ಸ್ವಪ್ರಶಂಸೆ, ಪರನಿಂದನೆ, ತುಲನೆ, ಮೇಲರಿಮೆ, ಕೀಳರಿಮೆ, ಹೊಟ್ಟೆಕಿಚ್ಚು, ಹಠ-ಚರ್ಚೆ, ಪ್ರಚಾರಪ್ರಿಯತೆ, ಮತ್ಸರ, ಮೂಢನಂಬಿಕೆ, ಮುಂತಾದ ಯಾವುದೇ ದುರ್ಬುದ್ಧಿ, ದುರ್ಗಣಗಳಿಂದ ಬಿಡುಗಡೆ ಹೊಂದಲು ಬರೀ ಸಂಕಲ್ಪವೊಂದೇ ಸಾಲದು. ಆಚರಣೆಯೂ ಬೇಕು. ದೃಢ ನಿರ್ಧಾರವೂ ಬೇಕು; ಇಚ್ಛಾಶಕ್ತಿಯೂ ಬೇಕು.
(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)