ಆ ಕ್ಷಣ: ಮನೋದೌರ್ಬಲ್ಯದಿಂದ ದುರಂತ

Edit-3
Published on

ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಸ್ಥಾನದಲ್ಲಿದ್ದ 33 ವರ್ಷದ ಅನುರಾಧಾ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು. ಇಂಜಿನಿಯರಿಂಗ್ ನಂತರ ನೌಕರಿ ಪಡೆದಿದ್ದ ಆಕೆ ತಂದೆ ಮೂರ್ತಿ, ತಾಯಿ ಶುಭಾ ಹಾಗೂ ಕಿರಿಯ ಸೋದರ ಭಾಸ್ಕರನ ಜತೆಗೆ ಮಹಾನಗರವೊಂದರಲ್ಲಿ ವಾಸಿಸುತ್ತಿದ್ದಳು. ಮೂರ್ತಿ ಖಾಸಗಿ ಕಂಪನಿಯಲ್ಲಿ ಆಫೀಸರ್ ಆಗಿದ್ದು, ಭಾಸ್ಕರ ಇಂಜಿನಿಯರಿಂಗ್ ಓದುತ್ತಿದ್ದ. ಅನುರಾಧಾ ಕೆಲಸಕ್ಕೆ ಸೇರಿದ ಕೂಡಲೇ ಮಾತಾಪಿತರು ಮದುವೆಯಾಗಲು ಒತ್ತಾಯ ಮಾಡತೊಡಗಿದರು. ಆದರೆ ಆಕೆ ಸಬೂಬುಗಳನ್ನು ಕೊಡುತ್ತ ಲಗ್ನವನ್ನು ಮುಂದೂಡುತ್ತಾ ಬಂದಿದ್ದಳು.

ಮೂರ್ತಿ ಏಕಾಏಕಿ ಹೃದಯಾಘಾತವಾಗಿ ಅಸುನೀಗಿದ ಕಾರಣ ಮನೆಯ ಜವಾಬ್ದಾರಿ ಅನುರಾಧಾ ಮೇಲೆಯೇ ಬಿದ್ದಿತು. ತಂದೆ ಮಾಡಿದ್ದ ಸುಮಾರು 4 ಲಕ್ಷ ರೂಪಾಯಿಯ ಸಾಲದ ಹೊರೆಯೂ ಅವಳದಾಯಿತು. ಸಾಲ, ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸಲು ಆಕೆಯ ವೇತನ ಸಾಲದಾಗುತ್ತಿತ್ತು. ಹೀಗಾಗಿ ಆಕೆ ಇನ್ನಷ್ಟು ಸಾಲ ತೆಗೆದುಕೊಳ್ಳಬೇಕಾಯಿತು.

ಮದುವೆ ಮಾಡಿಕೊಳ್ಳಲು ತಾಯಿ ಬಲವಂತ ಮಾಡತೊಡಗಿದಾಗ, ‘ತಮ್ಮ ಓದು ಮುಗಿಸಿ, ಅವನಿಗೆ ಕೆಲಸ ಸಿಕ್ಕ ನಂತರವೇ ನಾನು ಲಗ್ನದ ಬಗ್ಗೆ ವಿಚಾರಮಾಡುತ್ತೇನೆ’ ಎಂದಳು. ಎರಡು ವರ್ಷಗಳಾದ ನಂತರ ಭಾಸ್ಕರನಿಗೂ ಸಾಫ್ಟ್​ವೇರ್ ಕಂಪನಿಯೊಂದರಲ್ಲಿ 30 ಸಾವಿರ ರೂ ವೇತನದ ಕೆಲಸ ಸಿಕ್ಕಿತು. ಕುಟುಂಬದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು ಎನ್ನುವಷ್ಟರಲ್ಲಿ ಅನುರಾಧಾ ಕೆಲಸ ಮಾಡುತ್ತಿದ್ದ ಕಂಪನಿ ಮುಚ್ಚಿಹೋಯಿತು. ಹೀಗಾಗಿ ಕುಟುಂಬ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಅನುರಾಧಾ ತನ್ನ ಸಂಬಳದಲ್ಲಿ ಅರ್ಧದಷ್ಟನ್ನು ಇಎಂಐಗಳ ಪಾವತಿಗೇ ವ್ಯಯಿಸುತ್ತಿದ್ದಳು. ಕೆಲಸ ಹೋದ ನಂತರ ಅಲ್ಲಿಯವರೆಗೆ ಕೂಡಿಹಾಕಿದ್ದ ಸ್ವಲ್ಪ ಹಣದಲ್ಲಿ ಮನೆಯನ್ನು ನಡೆಸಬೇಕಾಗಿತ್ತು. ಹೀಗಾಗಿ ಇಎಂಐಗಳನ್ನು ಕಾಲಕಾಲಕ್ಕೆ ಕಟ್ಟಲಾಗುತ್ತಿರಲಿಲ್ಲ. ಆದರೆ ಬಡ್ಡಿ ಬೆಳೆಯುತ್ತಾ ಹೋಗಿ ಆಕೆ ಬ್ಯಾಂಕುಗಳಿಗೆ ತೀರಿಸಬೇಕಾದ ಹಣ ಸುಮಾರು 15 ಲಕ್ಷ ರೂ.ಗಳಿಗೆ ಮುಟ್ಟಿತ್ತು. ಬ್ಯಾಂಕುಗಳು ಸಾಲದ ಮರುಪಾವತಿಗಾಗಿ ಒತ್ತಾಯಿಸತೊಡಗಿದವು.

ಅನುರಾಧಾ ಕೆಲಸಕ್ಕಾಗಿ ಅರ್ಜಿ ಹಾಕಿದರೂ ಎಲ್ಲಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಸಾಲದ ಯೋಚನೆಯಲ್ಲಿ ಆಕೆಗೆ ರಾತ್ರಿಯೆಲ್ಲಾ ನಿದ್ದೆಯೇ ಬರುತ್ತಿರಲಿಲ್ಲ. ಏತನ್ಮಧ್ಯೆ ಮಗಳು ಮಾಡಿರುವ ಸಾಲಗಳ ಬಗ್ಗೆ ತಿಳಿದ ಶುಭಾ ತರಾಟೆಗೆ ತೆಗೆದುಕೊಂಡಳು. ಈ ಕಾರಣ ಅನುರಾಧಾ ತೀವ್ರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು.

ತಾನು ಬ್ಯಾಂಕ್ ಸಾಲ ತೀರಿಸದೆಯೇ ಮರಣಹೊಂದಿದರೆ ಏನಾಗಬಹುದು ಎಂದು ಆಕೆ ಇಂಟರ್​ನೆಟ್​ನಲ್ಲಿ ಹುಡುಕಿದಾಗ ಸಾಲಗಾರರು ಅಸುನೀಗಿದರೆ, ಅವರ ಹತ್ತಿರದ ಸಂಬಂಧಿಗಳು ಸಾಲ ತೀರಿಸಬೇಕಾಗುತ್ತದೆ ಎನ್ನುವ ಮಾಹಿತಿ ದೊರಕಿತು. ತಾನು ಆತ್ಮಹತ್ಯೆ ಮಾಡಿಕೊಂಡರೆ ಸೋದರ ಮತ್ತು ತಾಯಿ ಸಾಲ ತೀರಿಸಬೇಕಾಗುತ್ತದೆ, ಅವರಿಬ್ಬರಿಗೂ ತೀವ್ರ ತೊಂದರೆಯಾಗುತ್ತದೆ ಎಂದು ಗಾಬರಿಯಾದ ಆಕೆ ಅವರಿಬ್ಬರನ್ನೂ ಕೊಲೆ ಮಾಡಿ ಆನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಿದಳು. ಏತನ್ಮಧ್ಯೆ ಬ್ಯಾಂಕ್ ಒಂದರ ಸಿಬ್ಬಂದಿ ಮನೆಗೇ ಬಂದು ಸಾಲ ತೀರಿಸದಿದ್ದರೆ ತೀವ್ರ ಪರಿಣಾಮವಾಗುತ್ತದೆ ಎಂದು ಬೆದರಿಸಿದಾಗ ಇನ್ನಷ್ಟು ಗಾಬರಿಗೊಂಡ ಅನುರಾಧಾ ಕೊಲೆ ಮಾಹಿತಿಗಾಗಿ ಗೂಗಲ್​ನಲ್ಲಿ ಹುಡುಕಾಟ ನಡೆಸಿದಳು.

ಒಂದು ದಿನ ಆಕೆ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸಹೋದ್ಯೋಗಿಯಾಗಿದ್ದ ಅನಿರುದ್ಧ ಎನ್ನುವವನನ್ನು ನೌಕರಿಗಾಗಿ ಸಂರ್ಪಸಿದಾಗ, ತನ್ನ ಪರಿಸ್ಥಿತಿ ವಿವರಿಸಿ ಆತ್ಮಹತ್ಯೆಗೆ ತೀರ್ವನಿಸಿರುವುದಾಗಿ ತಿಳಿಸಿದಳು. ಗಾಬರಿಯಾದ ಆತ ‘ಆತ್ಮಹತ್ಯೆ ಪಾಪದ ಕೆಲಸ. ಹಠಾತ್ತಾಗಿ ಏನನ್ನೂ ಮಾಡಬೇಡ, ಕೆಲವು ದಿನ ಮನೆಯಿಂದ ದೂರವಿದ್ದರೆ ನಿನ್ನ ಮನಸ್ಸು ತಿಳಿಯಾಗುತ್ತದೆ’ ಎಂದ.

‘ಆಗಲಿ, ನನ್ನ ಜತೆಗೆ ನೀನು ಪ್ರವಾಸಕ್ಕೆ ಬರುವಿಯಾ’ ಎಂದು ಅನುರಾಧಾ ಕೇಳಿದಾಗ ಆತ ಒಪ್ಪಿಕೊಂಡ. ಆಕೆಯೇ ಇಬ್ಬರಿಗೂ ವಿಮಾನದ ಟಿಕೆಟ್ ಖರೀದಿಸಿದಳು. ತನಗೆ ಹೈದರಾಬಾದಿನಲ್ಲಿ ನೌಕರಿಗಾಗಿ ಇಂಟರ್​ವ್ಯೂ ಬಂದಿದ್ದು ಅಲ್ಲಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿದಳು.

ಅದೇ ರಾತ್ರಿ ಆಕೆ ಹರಿತವಾದ ಚಾಕುವನ್ನು ತೆಗೆದುಕೊಂಡು ಸೋದರನ ಕೋಣೆಗೆ ಹೋದಾಗ ಎಚ್ಚರಗೊಂಡ ಭಾಸ್ಕರ ‘ಇಲ್ಲೇನು ಮಾಡುತ್ತಿರುವೆ’ ಎಂದ. ಯಾವುದೋ ವಸ್ತುವನ್ನು ಹುಡುಕಲು ಬಂದಿರುವೆನೆಂದು ಸಬೂಬು ಹೇಳಿ ಹೊರಟು ಹೋದಳು. ಒಂದು ಗಂಟೆಯ ತರುವಾಯ ಮತ್ತೆ ಬಂದು ನಿದ್ರಿಸುತ್ತಿದ್ದ ಆತನನ್ನು ಚಾಕುವಿನಿಂದ ತಿವಿದಳು. ಆನಂತರ ತಾಯಿ ಮಲಗಿದ್ದಲ್ಲಿಗೆ ಹೋಗಿ ಅವಳನ್ನೂ ತಿವಿದು, ಆಕೆಯ ತಲೆಗೆ ಕಬ್ಬಿಣದ ರಾಡಿನಿಂದ ಬಲವಾದ ಪೆಟ್ಟು ನೀಡಿದಳು. ಬೆಳಗಿನ ಜಾವ 4 ಗಂಟೆಗೆ ಮನೆಯ ಬಾಗಿಲನ್ನು ಮುಂದೆಳೆದುಕೊಂಡು ಮೊದಲೇ ಬುಕ್ ಮಾಡಿದ್ದ ಓಲಾ ಟ್ಯಾಕ್ಸಿಯಲ್ಲಿ ಏರ್​ಪೋರ್ಟಿಗೆ ಹೊರಟಳು. ತನ್ನ ಮೊಬೈಲನ್ನು ಮನೆಯ ಬಳಿಯ ಮೋರಿಗೆ ಎಸೆದಳು. ಅನಿರುದ್ಧ ಏರ್​ಪೋರ್ಟಿನಲ್ಲಿ ಅವಳಿಗಾಗಿ ಕಾಯುತ್ತಿದ್ದ. ಇಬ್ಬರೂ ವಿಮಾನವೇರಿ ಹೊರಟುಹೋದರು.

ಬೆಳಿಗ್ಗೆ 7 ಗಂಟೆಗೆ ಅವಳ ಮನೆಗೆ ಬಂದ ಹಾಲು ಮಾರುವವನು ಕರೆಗಂಟೆ ಬಾರಿಸಿದಾಗ ಪ್ರತಿಕ್ರಿಯೆ ಬರದ ಕಾರಣ ಸಂಶಯಗೊಂಡು ಕಿಟಕಿಯಿಂದ ಇಣುಕಿದ. ಮನೆಯೊಳಗಿಂದ ಯಾರೋ ನರಳುತ್ತಿರುವ ಶಬ್ದ ಕೇಳಿಬಂತು. ಆತ ಕೂಡಲೇ ಪೊಲೀಸರಿಗೆ ದೂರು ಮುಟ್ಟಿಸಿದ. ಪೊಲೀಸರು ಮನೆಯೊಳಗೆ ಹೋದಾಗ ಹಾಸಿಗೆಯ ಮೇಲೆ ತೀವ್ರವಾಗಿ ಗಾಯಗೊಂಡು ಬಿದ್ದಿದ್ದ ಭಾಸ್ಕರನನ್ನು ನೋಡಿ ಅವನನ್ನು ಆಸ್ಪತ್ರೆಗೆ ಸಾಗಿಸಿದರು. ಶುಭಾ ತನ್ನ ಕೋಣೆಯಲ್ಲಿ ಶವವಾಗಿ ಬಿದ್ದಿದ್ದಳು. ಕೊಲೆಗೆ ಉಪಯೋಗಿಸಿದ್ದ ಚಾಕು ಮತ್ತು ಕಬ್ಬಿಣದ ರಾಡ್ ಅಲ್ಲಿಯೇ ಬಿದ್ದಿದ್ದವು. ಮನೆಯಲ್ಲಿರುತ್ತಿದ್ದ ಮೂವರಲ್ಲಿ ಅನುರಾಧಾ ಕಾಣೆಯಾಗಿರುವುದಾಗಿ ಅಕ್ಕಪಕ್ಕದವರು ತಿಳಿಸಿದ ಮೇರೆಗೆ ಪೊಲೀಸರು ಅವಳಿಗಾಗಿ ಹುಡುಕತೊಡಗಿದರು. ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಭಾಸ್ಕರ ಮಾತನಾಡುವ ಸ್ಥಿತಿಯಲ್ಲಿ ಇರದಿದ್ದ ಕಾರಣ ಹೆಚ್ಚಿನ ವಿವರಗಳನ್ನು ತಿಳಿಯಲಾಗಲಿಲ್ಲ.

ಅನುರಾಧಳೇ ಈ ಕೃತ್ಯ ಮಾಡಿರಬಹುದು ಎಂಬ ಸಂಶಯ ಬಂದರೂ ಆಕೆ ಎಲ್ಲಿಗೆ ಹೋಗಿದ್ದಾಳೆಂದು ತಿಳಿಯುವ ತನಕ ಸತ್ಯವು ಗೊತ್ತಾಗುವಂತಿರಲಿಲ್ಲ. ಆಕೆಯ ಪಾಸ್​ಪೋರ್ಟ್ ಮತ್ತು ಆಧಾರ್ ನಂಬರ್ ಸಂಪಾದಿಸಿದ ಪೊಲೀಸರು ರೇಲ್ವೆ ಬುಕಿಂಗ್ ಹಾಗೂ ವಿಮಾನಯಾನ ಕಂಪನಿಗಳನ್ನು ಸಂರ್ಪಸಿದರು. ಏತನ್ಮಧ್ಯೆ ಭಾಸ್ಕರ ಮಾತನಾಡುವ ಹಾಗಾದಾಗ ಸೋದರಿಯೇ ತನ್ನನ್ನು ಗಾಯಗೊಳಿಸಿರಬಹುದೆಂದು ಹೇಳಿದ. ವಿಮಾನಯಾನ ಕಂಪನಿಯೊಂದು ಕೃತ್ಯ ನಡೆದ ದಿನ ಅನುರಾಧಾ ಮತ್ತು ಅನಿರುದ್ಧ ಪ್ರಯಾಣಿಸಿದ ಬಗ್ಗೆ ಮಾಹಿತಿ ನೀಡಿತು.

ತತ್​ಕ್ಷಣವೇ ಪೊಲೀಸ್ ತಂಡವೊಂದು ಅನುರಾಧ ಹೋಗಿದ್ದ ಊರಿಗೆ ಹೊರಟಿತು. ಆಕೆ ಹೋಟೆಲೊಂದರಲ್ಲಿ ಸಿಕ್ಕಿದಳು. ತನ್ನ ತಪ್ಪನ್ನು ಒಪ್ಪಿಕೊಂಡ ಆಕೆ, ‘ಸಾಲಗಾರರ ಕಾಟ ಅತಿಯಾದ ಕಾರಣ ಆತ್ಮಹತ್ಯೆಗೆ ತೀರ್ವನಿಸಿದೆ. ಆಗ ಅನಿರುದ್ಧ ಬುದ್ಧಿಹೇಳಿದ. ನಾನು ಕಾಣೆಯಾದರೆ ಬ್ಯಾಂಕುಗಳು ನಾನು ಮಾಡಿದ ಸಾಲ ಮತ್ತು ಬಡ್ಡಿಯನ್ನು ವಸೂಲಿ ಮಾಡಲು ಸಾಧ್ಯವಿಲ್ಲದೆ ಪ್ರಕರಣ ಮುಚ್ಚಬೇಕಾಗುತ್ತದೆ ಎಂದು ರ್ತಸಿದೆ. ಮುಂದೆ ಅನಿರುದ್ಧನೊಡನೆ ಜೀವನಮಾಡುವುದೆಂದು ಯೋಚಿಸಿದ್ದೆ. ಈ ಕೊಲೆಯಲ್ಲಿ ಅನಿರುದ್ಧನ ಪಾತ್ರವೇನೂ ಇಲ್ಲ. ನಾನು ಮಾಡಿದ್ದು ತಪು್ಪ. ನನಗೆ ಪಶ್ಚಾತ್ತಾಪವಾಗಿದೆ’ ಎಂದಳು.

ಅನಿರುದ್ಧನನ್ನು ಪ್ರಶ್ನಿಸಿದಾಗ, ತಾನು ಹಿಂದೊಮ್ಮೆ ಅನುರಾಧಳ ಸಹೋದ್ಯೋಗಿಯಾಗಿದ್ದು ಆಕೆ ಕೆಲಸ ಕಳೆದುಕೊಂಡ ನಂತರ ಸಂಪರ್ಕ ಇರಲಿಲ್ಲ. ಒಂದು ದಿನ ಕರೆಮಾಡಿ ತನ್ನ ಜತೆಗೆ ಪರವೂರಿಗೆ ಒಂದು ವಾರದ ಪ್ರವಾಸಕ್ಕಾಗಿ ಕರೆದಳು, ಆಕೆಯೇ ವಿಮಾನದ ಟಿಕೆಟ್ ಖರೀದಿಸಿದ್ದಳು. ನನಗೆ ಅವಳನ್ನು ಲಗ್ನವಾಗುವ ಇರಾದೆಯೇನೂ ಇರಲಿಲ’ ಎಂದ. ಅನುರಾಧಾ ವಾಪಸ್ ಟಿಕೆಟ್ ಖರೀದಿಸದ್ದು ನಿನಗೆ ತಿಳಿದಿರಲಿಲ್ಲವೇ ಎಂದಾಗ ಇಲ್ಲ ಎಂದ.

ಇಂಜನಿಯರಿಂಗ್ ಪದವೀಧರೆಯೊಬ್ಬಳು ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಸ್ವಂತ ತಾಯಿ ಹಾಗೂ ಸೋದರನ ಕೊಲೆ ಮಾಡಲು ಮುಂದಾದದ್ದು ಆಶ್ಚರ್ಯಗೊಳಿಸಿದ ಕಾರಣ ಆಕೆ ಮನೋರೋಗದಿಂದ ಬಳಲುತ್ತಿರಬಹುದೆಂದು ಊಹಿಸಿ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದರು. ಅನುರಾಧಾ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು ಆಕೆಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಮನೋವೈದ್ಯರು ಹೇಳಿದರು. ಅನುರಾಧಾ ಮತ್ತವಳ ಗೆಳೆಯನ ವಿರುದ್ಧ ನ್ಯಾಯಾಲಯದಲ್ಲಿ ಕೊಲೆ ಮತ್ತು ಒಳಸಂಚಿನ ಪ್ರಕರಣದ ಆರೋಪಪಟ್ಟಿ ದಾಖಲಿಸಲಾಯಿತು.

‘ಮಾನವನನ್ನು ಕೆಟ್ಟ ಕಾರ್ಯಗಳಿಗೆ ಪ್ರೇರೇಪಿಸುವುದು ಆತನ ಮನಸ್ಸೇ ಹೊರತು, ಆತನ ಶತ್ರುಗಳಲ್ಲ’ ಎಂದ ಭಗವಾನ್ ಬುದ್ಧನ ಮಾತು ಎಷ್ಟು ನಿಜವಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net