

ಮೂರು ದಿನಗಳ ಬಳಿಕ ಪಿಎಸ್ಐ ಶ್ರೀನಿವಾಸ ಅವರು ಹೆಡ್ ಕಾನ್ಸ್ಟೇಬಲ್ ಸುರೇಶ್ ಹಾಗೂ ಕಾನ್ಸ್ಟೆಬಲ್ಗಳಾದ ಜಯಪ್ರಕಾಶ್ ಮತ್ತು ಮಹೇಶ್ ಜತೆಗೆ ಮತ್ತೊಮ್ಮೆ ಸ್ಥಳಕ್ಕೆ ಹೋದರು. ಸುರೇಶ್ ಕಾರಿನ ಡಿಕ್ಕಿಯನ್ನು ಒಂದು ಹಾರೆಯಿಂದ ತೆರೆದಾಗ, ಅದರಲ್ಲಿ ಸುಟ್ಟ ಚೀಲ ಕಂಡಿತು. ಆ ಚೀಲ ಗೊಬ್ಬರ ತುಂಬಲು ಉಪಯೋಗಿಸುವಂಥ ಪಾಲಿಥೀನ್ ಚೀಲವಾಗಿತ್ತು. ಚೀಲದಲ್ಲಿ ಮೂಳೆಗಳಿದ್ದು ಅವನ್ನು ಹೊರತೆಗೆದಾಗ ಅವು ಮಾನವನ ಮೂಳೆಗಳಂತೆ ಕಂಡವು. ಒಂದು ತಲೆಬುರುಡೆಯೂ ದೊರಕಿತು. ಯಾರನ್ನೋ ಕೊಲೆಮಾಡಿ ಗುರುತು ಸಿಗದಂತೆ ಸಾಕ್ಷ್ಯ ನಾಶ ಮಾಡುವ ಪ್ರಯತ್ನ ನಡೆದಿದೆ ಎನ್ನುವುದು ಮೇಲ್ನೋಟಕ್ಕೇ ವಿದಿತವಾಗುತ್ತಿತ್ತು. ಒಂದೊಂದಾಗಿ ಎಲ್ಲ ಮೂಳೆಗಳನ್ನೂ ಹೊರತೆಗೆದಾಗ ಆ ಚೀಲದಲ್ಲಿಯೇ ಅರೆಬರೆಯಾಗಿ ಕರಗಿದ್ದ ಲೋಹದ ತುಂಡು ಸಿಕ್ಕಿತು. ಅದು ಬೆಲ್ಟ್ಗೆ ಹಾಕುವ ಬಕಲ್ ಎಂದು ತಿಳಿಯಿತು. ಬೆಲ್ಟ್ ಹಾಕಿಕೊಂಡಿದ್ದ ವ್ಯಕ್ತಿಯನ್ನು ಕೊಲೆಮಾಡಿ ನಂತರ ದೇಹವನ್ನು ಚೀಲದಲ್ಲಿ ತುಂಬಿ ಸುಟ್ಟಿರಬೇಕು ಎಂದು ಪೊಲೀಸರು ಭಾವಿಸಿದರು. ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲಾಯಿತು.
ಮೂಳೆಗಳು ಮತ್ತು ತಲೆಬುರುಡೆಯನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದಾಗ ಅವನ್ನು ಪರೀಕ್ಷಿಸಿದ ವಿಧಿವಿಜ್ಞಾನ ತಜ್ಞರು ಅವುಗಳು ನಿಸ್ಸಂದೇಹವಾಗಿ ಪುರುಷನ ದೇಹಕ್ಕೆ ಸೇರಿದ್ದು; ಮೃತನಿಗೆ 30- 35 ವರ್ಷವಾಗಿರಬಹುದು; ಕೊಲೆಯಾಗಿ ಒಂದು ವಾರವಾಗಿರಬಹುದೆಂದು ತಿಳಿಸಿದರು. ಪೊಲೀಸರು ಮತ್ತೊಮ್ಮೆ ಕಾರನ್ನು ಪರಿಶೀಲಿಸಿದರು. ಕಾರಿನ ನೋಂದಣಿ ಸಂಖ್ಯೆಯ ಎರಡೂ ಪ್ಲೇಟ್ಗಳು ಸುಟ್ಟು ಹೋಗಿದ್ದವು. ಕಾರಿನ ಇಂಜಿನ್ ನಂಬರ್ ಮತ್ತು ಚಾಸೀ ನಂಬರ್ಗಳಿಗಾಗಿ ಹುಡುಕತೊಡಗಿದಾಗ ಚಾಸಿ ನಂಬರ್ ಸುಟ್ಟಿತ್ತು. ಇಂಜಿನ್ ಕರಕಲಾಗಿದ್ದು ಅದರ ನಂಬರ್ ಅಸ್ಪಷ್ಟವಾಗಿತ್ತು. ಪ್ರಯಾಸದಿಂದ ಆ ನಂಬರಿನ ಕಡೆಯ ಎರಡು ಅಂಕಿಗಳನ್ನು ಇಬ್ಬರೂ ಪಿ.ಸಿ.ಗಳು ಹೊರತೆಗೆದರು. ಟೊಯೋಟಾ ಕಂಪನಿಯ ಜನರನ್ನು ಕರೆಸಿ ಅವರ ಸಹಕಾರ ಕೋರಲಾಯಿತು. ಅದೇ ಜಿಲ್ಲೆಯ ಆರ್ಟಿಒ ಅಧಿಕಾರಿಗಳು, ಸುಟ್ಟುಹೋಗಿದ್ದ ಟೊಯೋಟಾ ಇಟಿಯೋಸ್ ವಾಹನವನ್ನು ಮೈಸೂರಿನಲ್ಲಿ ನೋಂದಣಿ ಮಾಡಿಸಿದ್ದು ಏಳೆಂಟು ವರ್ಷಗಳ ಹಿಂದೆ ಅದೇ ಜಿಲ್ಲೆಯ ಒಬ್ಬ ವ್ಯಕ್ತಿ ಖರೀದಿ ಮಾಡಿರುವುದಾಗಿ ತಿಳಿಸಿ ಆ ವ್ಯಕ್ತಿಯ ವಿವರಗಳನ್ನು ನೀಡಿದರು. ಪೊಲೀಸರು ಜಿಲ್ಲಾ ಕೇಂದ್ರದಲ್ಲಿದ್ದ ಆ ಕಾರಿನ ಮಾಲೀಕನ ಮನೆಗೆ ಹೋದರು.
ಮನೆಯಲ್ಲಿದ್ದ ಮಂಜುಳಾ ಎಂಬ ಮಹಿಳೆ ತಾನು 30 ವರ್ಷದ ರಾಜಗೋಪಾಲ್ ಎನ್ನುವವನ ಜತೆಗೆ ಕಳೆದ ಎರಡು ವರ್ಷಗಳಿಂದ ಸಹಬಾಳ್ವೆ ಮಾಡುತ್ತಿರುವುದಾಗಿ ತಿಳಿಸಿದಳು. ರಾಜಗೋಪಾಲ್ ಇಟಿಯೋಸ್ ಕಾರನ್ನು ಹೊಂದಿದ್ದು ಅದನ್ನು ಟ್ಯಾಕ್ಸಿಯೆಂದು ಓಡಿಸುತ್ತಿರುವುದಾಗಿ ತಿಳಿಸಿದಳು. ಆತ ಬೇರೆ-ಬೇರೆ ಊರುಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಕಾರಣ ಒಮ್ಮೆ ಮನೆಯಿಂದ ಹೊರಟರೆ ವಾರಗಟ್ಟಲೆ ಮನೆಗೆ ವಾಪಸಾಗುವುದಿಲ್ಲ, ಈಗ 15 ದಿನಗಳಿಂದ ಅವನು ಮನೆಗೆ ಬಂದಿಲ್ಲ ಎಂದಳು. ಪೊಲೀಸರು ಅವಳಿಂದ ರಾಜಗೋಪಾಲ್ನ ಮೊಬೈಲ್ ನಂಬರ್ ಪಡೆದು ಅದನ್ನು ಲೊಕೇಷನ್ ಸರ್ಚ್ಗೆ ಹಾಕಿದರು. ಆ ಟೆಲಿಫೋನ್ ಅಪಘಾತವಾದ ದಿನ ಬೆಂಗಳೂರಿನ ಬಡಾವಣೆಯೊಂದರಲ್ಲಿ ಇದ್ದ ಮಾಹಿತಿ ತಿಳಿಯಿತು. ಮತ್ತೆ ಮಂಜುಳಾಳ ಮನೆಗೆ ಹೋಗಿ, ‘ರಾಜಗೋಪಾಲ್ನಿಗೆ ಬೆಂಗಳೂರಿನಲ್ಲಿ ಯಾರಾದರೂ ಸಂಬಂಧಿಕರಿದ್ದಾರೆಯೇ?’ ಎಂದು ಪ್ರಶ್ನಿಸಲಾಯಿತು. ‘ಹೌದು’ ಎಂದು ಹೇಳಿದ ಮಂಜುಳಾ, ‘ರಾಜಗೋಪಾಲ್, ಅನುರಾಧಾ ಎನ್ನುವವಳನ್ನು ಲಗ್ನವಾಗಿದ್ದು ನನ್ನ ಜತೆ ಬಾಳ್ವೆ ಮಾಡಿದಾಗಿನಿಂದ ಆಕೆ ಮತ್ತು ಇಬ್ಬರು ಮಕ್ಕಳನ್ನು ಬೆಂಗಳೂರಿನಲ್ಲಿ ಅವಳ ತಂದೆ ಮನೆಯಲ್ಲಿ ಬಿಟ್ಟಿದ್ದಾನೆ’ ಎಂದಳು. ಅನುರಾಧಾಳ ಮನೆಯ ವಿಳಾಸವನ್ನು ಕೊಟ್ಟಳು. ಆ ವಿಳಾಸ ರಾಜಗೋಪಾಲ್ ಕಟ್ಟಕಡೆಯಲ್ಲಿ ಕಂಡಿದ್ದ ಟವರ್ ಲೊಕೇಷನ್ಗೆ ಹೋಲಿಕೆಯಾಯಿತು.
ಪೊಲೀಸರು ಅನುರಾಧಾಳ ಮನೆಗೆ ಹೋದರು. ಆಕೆ ಮಂಜುಳಾ ಹೇಳಿದ್ದನ್ನೇ ತಿಳಿಸಿ, ‘ನನ್ನ ಗಂಡ ನನ್ನನ್ನು ಬಿಟ್ಟು ಬಹಳ ದಿನಗಳಾಗಿವೆ. ಈ ಕಾರಣ ನನಗೂ ಅವನಿಗೂ ಜಗಳವಾಗಿದೆ. ಅವನು ಇಲ್ಲಿಗೆ ಬರುವುದಿಲ್ಲ, ನನ್ನ ಹಾಗೂ ಮಕ್ಕಳ ಜೀವನಾಧಾರಕ್ಕೆಂದು ಪ್ರತಿ ತಿಂಗಳು ಹಣ ಕಳುಹಿಸುತ್ತಾನೆ’ ಎಂದಳು. ‘ಹದಿನೈದು ದಿನಗಳ ಹಿಂದೆ ಆತ ಇಲ್ಲಿಗೆ ಬಂದಿದ್ದನೇ?’ ಎಂದು ಕೇಳಿದಾಗ, ಆಕೆ ಸಾರಾಸಗಟಾಗಿ ಆತ ಇಲ್ಲಿಗೆ ಬಂದೇ ಇಲ್ಲ ಎಂದಳು. ಇದರಿಂದ ಅನುಮಾನಗೊಂಡ ಪೊಲೀಸರು ಏನಾದರೂ ಕುರುಹು ಸಿಗಬಹುದೇನೋ ಎಂದು ಮಂಜುಳಾಳ ಮನೆಯನ್ನು ಶೋಧಿಸಿದರು, ಮನೆಯ ಹಜಾರದ ಗೋಡೆಯ ಮೇಲೆ ರಕ್ತದ ಕಲೆಗಳನ್ನು ಅಳಿಸಿ ಹಾಕಿರುವ ಕುರುಹು ಕಂಡುಬಂದಿತು. ‘ಇದೇನು’ ಎಂದು ಪ್ರಶ್ನಿಸಿದಾಗ ಸೂಕ್ತ ಉತ್ತರ ದೊರೆಯಲಿಲ್ಲ. ಅಷ್ಟರಲ್ಲಿ ಅನುರಾಧಾಳ ತಂದೆ ವಿಶ್ವನಾಥ್ ಮತ್ತು ಅವಳ ಸೋದರ ಸುಂದರರಾಜ್ ಅಲ್ಲಿಗೆ ಬಂದರು.
ಅವರೆಲ್ಲರನ್ನೂ ಟೆಲಿಫೋನ್ ಲೊಕೇಷನ್ ಮತ್ತು ರಕ್ತದ ಕಲೆಯ ಬಗ್ಗೆ ಬೇರೆ ಬೇರೆಯಾಗಿ ತೀವ್ರವಾಗಿ ಪ್ರಶ್ನಿಸಿದಾಗ ರಾಜಗೋಪಾಲ್ನನ್ನು ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರು. ಆ ಮೂವರು ನೀಡಿದ ಮಾಹಿತಿಯಂತೆ ರಾಜಗೋಪಾಲ್ ಮದ್ಯವ್ಯಸನಿಯಾಗಿದ್ದು ಮಂಜುಳಾಳ ಜೊತೆ ಸಹಬಾಳ್ವೆ ಮಾಡುತ್ತಿದ್ದುದು ಅವರಿಗೆ ಹೇಸಿಗೆ ತರಿಸಿತ್ತು. ಅನುರಾಧಾಳ ಸಂಸಾರಕ್ಕೆಂದು ಪ್ರತಿತಿಂಗಳು ಕೊಡುತ್ತಿದ್ದ ಹಣವನ್ನೂ ಕಳೆದ ಆರು ತಿಂಗಳಿಂದ ನಿಲ್ಲಿಸಿದ್ದ. ತನ್ನ ಆಸ್ತಿಯ ಪಾಲನ್ನೂ ಮಂಜುಳಾಗೆ ಕೊಡಲು ತೀರ್ವನಿಸಿದ್ದ ಎಂದು ಅನುರಾಧಾಳಿಗೆ ತಿಳಿದು ಬಂದ ಕಾರಣ ಅವನನ್ನು ಮುಗಿಸಬೇಕೆಂದು ಮೂವರೂ ಯೋಜನೆ ಹಾಕಿದರು.
‘ನಿನ್ನ ಜತೆ ಗಹನ ವಿಷಯ ಚರ್ಚಿಸಬೇಕು’ ಎಂದು ಹೇಳಿ ಅನುರಾಧಾ ಗಂಡನನ್ನು ಬೆಂಗಳೂರಿನ ಮನೆಗೆ ಕರೆಸಿದಳು. ಆಗ ಆಕೆ ಮಕ್ಕಳನ್ನು ತನ್ನ ಸೋದರಿಯ ಮನೆಯಲ್ಲಿ ಬಿಟ್ಟಿದ್ದಳು. ಮನೆಯಲ್ಲಿ ಗಂಡನಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿದಳು. ಮದ್ಯದಲ್ಲಿ ನಿದ್ರೆಮಾತ್ರೆಗಳನ್ನು ಪುಡಿಮಾಡಿ ಬೆರೆಸಿದ್ದ ಕಾರಣ ರಾಜಗೋಪಾಲ್ ಶೀಘ್ರವೇ ನಿದ್ರೆಗೆ ಜಾರಿದ. ಆಗ ಸುಂದರ್ರಾಜ್ ಅವನ ಕುತ್ತಿಗೆಗೆ ತಂತಿ ಬಿಗಿದು ಅವನ ಕೊಲೆ ಮಾಡಿದ. ರಾಜಗೋಪಾಲ್ನ ಮೊಬೈಲ್ ಫೋನ್, ಉಂಗುರ, ಡ್ರೖೆವಿಂಗ್ ಲೈಸನ್ಸ್ ಇತ್ಯಾದಿಗಳನ್ನು ಹೊರತೆಗೆದು ಅನುರಾಧಾ ಮತ್ತು ವಿಶ್ವನಾಥ್ ಮಚ್ಚಿನಿಂದ ಅವನ ದೇಹವನ್ನು ತುಂಡುಗಳನ್ನಾಗಿ ಮಾಡಿ, ಒಂದು ಚೀಲದಲ್ಲಿ ಹಾಕಿದರು. ದೇಹವಿದ್ದ ಚೀಲವನ್ನು ಅದೇ ಕಾರಿನ ಡಿಕ್ಕಿಯಲ್ಲಿ ಹಾಕಿದರು. ಆ ಮೂರೂ ಜನರಿಗೆ ಹೈವೇನಲ್ಲಿ ಕಾರನ್ನು ಚಾಲನೆ ಮಾಡಲು ಹೆದರಿಕೆಯಾದ ಕಾರಣ ತಮಗೆ ಪರಿಚಯವಿದ್ದ ಸುನೀಲ್ ಎನ್ನುವವನನ್ನು ಕಾರಿನ ಚಾಲಕನನ್ನಾಗಿ ಗೊತ್ತುಮಾಡಿಕೊಂಡರು. ರಾತ್ರೋರಾತ್ರಿ ಅದೇ ಕಾರಿನಲ್ಲಿ ಪ್ರಯಾಣಿಸಿ ಟೋಲ್ಗೇಟಿನ ಬಳಿ ಸುನೀಲ್ನನ್ನು ಕಾರಿನಿಂದಿಳಿಸಿ ಊರಿಗೆ ವಾಪಸಾಗಲು ತಿಳಿಸಿದರು. ವಿಶ್ವನಾಥ್ ಕಾರನ್ನು ಡ್ರೖೆವ್ ಮಾಡಿಕೊಂಡು ಅಲ್ಲಿಂದ 3 ಕಿ.ಮೀ. ದೂರದ ನಿರ್ಜನ ರಸ್ತೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ. ಅಲ್ಲಿ ಎಲ್ಲರೂ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ನಂತರ ಬೇರೊಂದು ವಾಹನದಲ್ಲಿ ಹಿಂತಿರುಗಿ ಬಂದರು.
ರಾಜಗೋಪಾಲ್ನ ಮೊಬೈಲ್ ಫೋನನ್ನು ಚರಂಡಿಯಲ್ಲಿ ಎಸೆದಿದ್ದಾಗಿ ತಿಳಿಸಿದ ಆರೋಪಿಗಳು ಅಡಗಿಸಿಟ್ಟಿದ್ದ ರಕ್ತಸಿಕ್ತ ಮಚ್ಚನ್ನು ಪೊಲೀಸರಿಗೊಪ್ಪಿಸಿದರು. ಚಾಲಕ ಸುನೀಲ್ನನ್ನು ಪತ್ತೆ ಮಾಡಿ ಪ್ರಶ್ನಿಸಿದಾಗ ಆತ ತಾನೇ ಸುಟ್ಟ ಕಾರಿನ ಚಾಲಕನಾಗಿದ್ದೆ ಎಂದು ಒಪ್ಪಿಕೊಂಡ. ಅವರೆಲ್ಲರನ್ನೂ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ಇನ್ನೂ ಮುಗಿದಿಲ್ಲ. ‘ಇಪ್ಪಳವ ಕಂಡು ತನಗೊಪ್ಪವಳ ಮರೆದರೆ ಇಪ್ಪುರಿಯ ನುಲಿದ ಹುರಿಯಂತೆ ಆತ ತನ್ನಿಪ್ಪಳಿಂ ಕೆಡುಗು ಸರ್ವಜ್ಞ’ ಎಂಬ ನುಡಿಯನ್ನು ರಾಜಗೋಪಾಲ್ ಮನಗಾಣಬೇಕಾಗಿತ್ತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)