

ಶಿವಾನಂದ ತಗಡೂರು ಅಲ್ಲಿನ ವಿಶೇಷಗಳನ್ನು ‘ವಿಜಯವಿಹಾರ’ದ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ.
ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಸಣ್ಣ ಪಟ್ಟಣವೊಂದು ಸ್ವಾತಂತ್ರ್ಯ ಪಡೆದ ನಂತರ ಇಡೀ ಜಗತ್ತಿನ ಆಕರ್ಷಣೆ ಕೇಂದ್ರವಾಗಿ ಬೆಳೆದಿದ್ದೇ ಒಂದು ಅಚ್ಚರಿ. ಪ್ರವಾಸೋದ್ಯಮವೇ ಅದರ ಜೀವಾಳ. ಅದನ್ನೇ ಬಂಡವಾಳವಾಗಿಸಿಕೊಂಡು ಇತರ ದೇಶಗಳು ಅಸೂಯೆಪಡುವಂತೆ ಬದುಕುತ್ತಿರುವ ಸಿಂಗಾಪುರ ಒಂದು ಅದ್ಭುತವೇ ಸರಿ. ಇತ್ತೀಚೆಗೆ ಸಿಂಗಾಪುರಕ್ಕೆ ಭೇಟಿ ನೀಡಿದ್ದ ವಿಜಯವಾಣಿಯ ಹಿರಿಯ ವಿಶೇಷ ವರದಿಗಾರ
ಸಿಂಗಾಪುರಕ್ಕೆ ಸಿಂಗಾಪುರವೇ ಸಾಟಿ.
ಏಕೆಂದರೆ, ಅಲ್ಲಿ ಉಳಲು ಭೂಮಿ ಇಲ್ಲ. ಅಂದ ಮೇಲೆ ಹೊಲ, ಗದ್ದೆ, ತೋಟಗಳನ್ನು ಕಾಣಲು ಸಾಧ್ಯವೇ ಇಲ್ಲ. ಇಡೀ ದೇಶ ಸುತ್ತಿದರೂ ರೈತ ಕಾಣುವುದಿಲ್ಲ. ಹಳ್ಳಿಗಳೇ ಇಲ್ಲದ ಈ ಪುಟ್ಟ ದೇಶ ಜಗತ್ತಿನಲ್ಲಿ ತನ್ನ ಸ್ವಂತ ಶಕ್ತಿಯಿಂದ ಪುಟಿದೆದ್ದು ನಿಂತಿದ್ದು ಮಾತ್ರ ನಿಜಕ್ಕೂ ಎಲ್ಲರೂ ನಿಬ್ಬೆರಗಾಗುವಂತಾದ್ದು.
ಮೀನುಗಾರಿಕೆಯನ್ನಷ್ಟೆ ಅವಲಂಬಿಸಿ ಬೆಸ್ತರ ಹಳ್ಳಿಯಾಗಿದ್ದ ಸಿಂಗಾಪುರ ಕ್ರಮೇಣ ದ್ವೀಪ ರಾಷ್ಟ್ರವಾಗಿ ರೂಪುಗೊಂಡಿದ್ದೇ ನಿಜಕ್ಕೂ ಕೌತುಕದ ಸಂಗತಿ. ಮನಸ್ಸು ಮಾಡಿದರೆ ಇಡೀ ದೇಶವನ್ನು ಒಂದೇ ದಿನದಲ್ಲಿ ಸುತ್ತಾಡಿ ಬಂದು ಬಿಡಬಹುದು. ಅಷ್ಟು ಪುಟ್ಟದಾದ, ಬೆಂಗಳೂರಿಗಿಂತಲೂ ಚಿಕ್ಕದಾದ ಸಿಂಗಾಪುರ ಇವತ್ತು ಜಗತ್ತಿಗೆ ಕನ್ನಡಿ ಹಿಡಿದು ತನ್ನೆಡೆ ಸೆಳೆಯುತ್ತಿದೆ. ಅಭಿವೃದ್ಧಿಗೆ ಸಿಂಗಾಪುರ ಮಾದರಿ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಜನಸಂಖ್ಯೆ 50 ಲಕ್ಷ ಆಜುಬಾಜಿನಲ್ಲಿದೆ. 719.9 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಈ ಪುಟ್ಟ ದೇಶದೊಳಗೆ ಅಂತಾರಾಷ್ಟ್ರೀಯ ಮಟ್ಟದ ಚಾಂಗಿ ವಿಮಾನ ನಿಲ್ದಾಣವೇ ಮತ್ತೊಂದು ರೀತಿಯ ಆಕರ್ಷಣೆ.
ಬೌದ್ಧ, ಇಸ್ಲಾಂ, ಕ್ರಿಶ್ಚಿಯನ್, ಹಿಂದೂ, ಜೈನ, ಸಿಖ್ ಸೇರಿದಂತೆ ಹಲವು ಧರ್ಮಗಳ ಸಮನ್ವಯ ಈ ದೇಶದಲ್ಲಿದೆ. ಅಧಿಕೃತ ಭಾಷೆಗಳಾಗಿ ಇಂಗ್ಲಿಷ್, ಮ್ಯಾಂಡರಿನ್, ಚೈನೀಸ್, ಮಲಯ ಮತ್ತು ತಮಿಳು ಭಾಷೆಗಳು ಇಲ್ಲಿ ಚಾಲ್ತಿಯಲ್ಲಿವೆ. 1819ರಲ್ಲಿ ಬ್ರಿಟಿಷ್ ಟ್ರೇಡಿಂಗ್ ಕಾಲನಿಯಾಗಿದ್ದ ಸಿಂಗಾಪುರ, ಸ್ವಾತಂತ್ರ್ಯದ ನಂತರ ವಿಶ್ವದ ಅತ್ಯಂತ ಸಿರಿವಂತ ತೆರಿಗೆಸ್ನೇಹಿ ರಾಷ್ಟ್ರಗಳಲ್ಲಿ ಒಂದಾಗಿದ್ದು, ಇಡೀ ಜಗತ್ತಿನಲ್ಲೇ ಅತ್ಯಂತ ಜನನಿಬಿಡವಾದ ಬಂದರನ್ನು ಹೊಂದಿದೆ. ಸಿಂಗಾಪುರ ಅಗಲವಾಗಿ ಬೆಳೆಯಲು ಭೂಮಿ ಇಲ್ಲ.
ಆ ಕಾರಣಕ್ಕೆ ಆಕಾಶದೆತ್ತರಕ್ಕೆ ಗಗನಚುಂಬಿ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಸುರಂಗ ಮಾರ್ಗಗಳಿಂದ ಹಿಡಿದು ನಗರದೊಳಗಿನ ಎಲ್ಲ ರಸ್ತೆಗಳು ಅಷ್ಟು ಅಚ್ಚುಕಟ್ಟು. ಟ್ರಾಫಿಕ್ ಸಮಸ್ಯೆಗಳಿಲ್ಲದ, ಹೆಚ್ಚು ಅಪರಾಧಗಳು ನಡೆಯದ, ಪ್ರವಾಸಿಗರನ್ನೇ ತಮ್ಮ ಅನ್ನದಾತರೆಂದು ಭಾವಿಸುವ ಸ್ನೇಹಮಯಿಯಾದ ವಿಭಿನ್ನ ಮನೋಧೋರಣೆಯ ದೇಶವಿದು.
ಲಿಟಲ್ ಇಂಡಿಯಾ: ಇಂಥ ಸಿಂಗಾಪುರದೊಳಗೊಂದು ಲಿಟಲ್ ಇಂಡಿಯಾ ಇದೆ ಎನ್ನುವುದೇ ಅಚ್ಚರಿ. ನಗರದ ಮಧ್ಯಭಾಗದಲ್ಲಿ ಭಾರತೀಯ ಹೋಟೆಲ್ಗಳು, ಮುಸ್ತಾಫ ಷಾಪಿಂಗ್ ಮಾಲ್, ಮರಿಯಮ್ಮ ದೇವಸ್ಥಾನ, ಹಲವು ಹಿಂದೂ ದೇಗುಲಗಳು ಗಮನ ಸೆಳೆಯುತ್ತವೆ. ಇಲ್ಲಿ ದೀಪಾವಳಿ ಹಬ್ಬ ವಿಶೇಷ. ಹೊಸ ವರ್ಷ, ಕ್ರಿಸ್ವುಸ್ ಆಚರಣೆಯ ವೇಳೆ ಇಡೀ ದೇಶ ಝುಗಮಗಿಸುತ್ತದೆ. ಸಂಗೀತ ಉತ್ಸವವು ಸಿಂಗಾಪುರದ ಮತ್ತೊಂದು ಜನಪ್ರಿಯ ಆಕರ್ಷಣೆ.
ಪ್ರಮುಖ ಆರ್ಚರ್ಡ್ ರಸ್ತೆ: ವಸ್ತುಸಂಗ್ರಹಾಲಯಗಳು, ಪ್ರತಿಮೆಗಳು ಮತ್ತು ಚಿತ್ರಮಂದಿರಗಳನ್ನು ಹೊಂದಿರುವ ಸಿಂಗಾಪುರದ ವಸಾಹತುಶಾಹಿ ಕೇಂದ್ರ, ರೆಸ್ಟೋರೆಂಟ್ಗಳು, ಬಾರ್ ಮತ್ತು ಕ್ಲಬ್ಗಳನ್ನು ಇಲ್ಲಿ ನೋಡಬಹುದು. 2.2 ಕಿ.ಮೀ. ಉದ್ದವಿರುವ ಆರ್ಚರ್ಡ್ ರಸ್ತೆಯಲ್ಲಿ ಶಾಪಿಂಗ್ ಮಾಲ್ಗಳದ್ದೇ ಕಾರುಬಾರು.
ಸೆಂಟೋಸಾ ಜರ್ನಿ: ಮಿಲಿಟರಿ ಕೋಟೆಯನ್ನೇ ರೆಸಾರ್ಟ್ ಆಗಿ ಅಭಿವೃದ್ಧಿಪಡಿಸಿರುವುದು ವಿಶೇಷ. ಪ್ರತ್ಯೇಕ ದ್ವೀಪದಂತಿರುವ ಸೆಂಟೋಸಾ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತದೆ. ಕೇಬಲ್ ಕಾರು, ಸ್ಕೈವಾಕ್, ಡಿಸ್ನಿ ಲ್ಯಾಂಡ್, ಯೂನಿವರ್ಸಲ್ ಸ್ಟುಡಿಯೋದ ಒಳಹೊಕ್ಕರೆ ಸಮಯ ಸರಿದಿದ್ದು ಗೊತ್ತೇ ಆಗುವುದಿಲ್ಲ. ಕೇಬಲ್ ಕಾರು ಸೆಂಟೋಸಾದ ಹೆಬ್ಬಾಗಿಲಾಗಿದೆ. ಸೆಂಟೋಸಾ ದ್ವೀಪಕ್ಕೆ ಕಾಲಿಟ್ಟರೆ ಅಲ್ಲಿ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ.
ಸೆಂಟೋಸಾ ಡೆವಲಪ್ವೆುಂಟ್ ಕಾರ್ಪೆರೇಶನ್ನ ಸ್ವಾಯತ್ತ ಅಂಗಸಂಸ್ಥೆಯಾದ ಒನ್ ಫೇಬರ್ ಗ್ರೂಪ್, ವರ್ಷಕ್ಕೆ 19 ದಶಲಕ್ಷ ಜನರನ್ನು ಆಕರ್ಷಿಸಿರುವುದು ದಾಖಲೆ. ಅದರಲ್ಲಿಯೂ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ. ಕೇಬಲ್ ಕಾರು ಮೂಲಕ ಅತ್ತ ಪ್ರಯಾಣಿಸಿದರೆ, ಸಿಂಗಾಪುರವನ್ನು ಪರಿಚಯಿಸಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಕಲಾವಿದರು ಪುಟ್ಟದಾಗಿ ಇಡೀ ದೇಶದ ವೈಶಿಷ್ಟ್ಯನ್ನು ದೃಶ್ಯ, ಧ್ವನಿ ಮತ್ತು ಬೆಳಕಿನ ಮೂಲಕ ಕಟ್ಟಿಕೊಡುವುದು ಮರೆಯಲಾಗದ ಸಂಗತಿ.
ಝುಗಮಗಿಸುವ ರಾತ್ರಿ: ವಿದ್ಯುತ್ ದೀಪಗಳಿಂದ ಝುಗಮಗಿಸುವ ಸಿಂಗಾಪುರದಲ್ಲಿ ರಾತ್ರಿ ಕಳೆಯುವುದೆಂದರೆ ಅದೊಂದು ಬಗೆಯ ಮೋಜು. ವಿಶ್ವ ವ್ಯಾಪಾರಿ ಕೇಂದ್ರವಾದ ಇಲ್ಲಿ ಭಾರತೀಯ, ಮಲೇಶಿಯಾ, ಚೈನಾ ಸೇರಿದಂತೆ ಎಲ್ಲಾ ಬಗೆಯ ಟೇಸ್ಟಿ ಆಹಾರ, ಸಾಕಷ್ಟು ಶಾಪಿಂಗ್ ಮಾಲ್ಗಳು ಗಮನ ಸೆಳೆಯುತ್ತವೆ.
ಪ್ರವಾಸಿಗರಿಗೆ ಒನ್ಫೇಬರ್ ಉತ್ತೇಜನ: ಸಿಂಗಾಪುರ ಮೂಲದ ಜೀವನಶೈಲಿ ಬ್ರಾಂಡ್ ಒನ್ ಫೇಬರ್ ಗ್ರೂಪ್ ತನ್ನ ಗ್ರಾಹಕ ನೆಲೆಯನ್ನು ದೇಶದಿಂದ ವಿಸ್ತರಿಸಲು ಯೋಜಿಸುತ್ತಿದ್ದು, ವಿಶೇಷವಾಗಿ ಭಾರತಕ್ಕೆ ಹೆಚ್ಚು ಒತ್ತು ನೀಡಿದೆ. ಸ್ಕೈ ವಾಕ್, ಕೇಬಲ್ ಕಾರ್ ಪರಿಚಯಿಸುವ ಮೂಲಕ ಪ್ರವಾಸಿಗರಷ್ಟೇ ಅಲ್ಲ, ಮಧುಚಂದ್ರಕ್ಕೆ ನೂತನ ದಂಪತಿಗಳನ್ನೂ ಆಕರ್ಷಿಸುತ್ತಿದೆ.
ದೇಶದಲ್ಲಿ ತನ್ನ ಹಿಡಿತ ಬಲಪಡಿಸಲು ಮತ್ತು ತನ್ನ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು, ಈ ಗುಂಪು ನವದೆಹಲಿ ಪ್ರಧಾನ ಕಚೇರಿಯ ಐಎಸ್ಎ ಪ್ರವಾಸೋದ್ಯಮದೊಂದಿಗೆ ಪಾಲುದಾರಿಕೆ ಹೊಂದಿದೆ. ಆ ಮೂಲಕ, ತನ್ನ ಕೊಡುಗೆಗಳನ್ನು ಉತ್ತೇಜಿಸಲು ಭಾರತೀಯ ಬ್ಯಾಂಕುಗಳು, ವಿಮಾನಯಾನ ಸಂಸ್ಥೆಗಳು, ಟೆಲಿಕಾಂ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಗುರಿ ಹೊಂದಿದೆ. ನಾವು ಸಾಕಷ್ಟು ಪ್ಯಾಕೇಜ್ಗಳನ್ನು ಮಾರುತ್ತಿದ್ದು, ಹೆಚ್ಚು ಭಾರತೀಯ ಪ್ರವಾಸಿಗರನ್ನು ಸೆಳೆದಿದ್ದೇವೆ. ಸೆಂಟೋಸಾದಲ್ಲಿ ಎಲ್ಲಾ ರಜಾದಿನಗಳನ್ನು ಯೋಜಿಸುತ್ತೇವೆ ಎಂದು ಒನ್ ಫೇಬರ್ ಗ್ರೂಪ್ನ ಮಾರಾಟ ಮತ್ತು ವ್ಯವಹಾರ ಅಭಿವೃದ್ಧಿಯ ನಿರ್ದೇಶಕ ಪ್ಯಾಟ್ರಿಕ್ ಲೀ ಹೇಳುತ್ತಾರೆ.
ಫಾರ್ ಈಸ್ಟ್ ಹಾಸ್ಪಿಟಾಲಿಟಿ ಗ್ರೂಪ್ ಮೂರು ಹೋಟೆಲ್ಗಳನ್ನು ನಡೆಸುತ್ತಿದೆ. ದ್ವೀಪದ ಔಟ್ಪೋಸ್ಟ್, ವಿಲೇಜ್ ಹೋಟೆಲ್ ಸೆಂಟೋಸಾ ಮತ್ತು ದಿ ಬ್ಯಾರಕ್ಸ ಹೋಟೆಲ್ಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಟ್ರಾವೆಲ್ ಏಜೆಂಟ್ಗಳ ಮೂಲಕ ವಿಂಗ್ಸ್್ಸ ಆಫ್ ಟೈಮ್ ಪ್ರದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸುವ ಗ್ರಾಹಕರು ಸಾಮಾನ್ಯ ಆಸನಗಳನ್ನು ಪಡೆಯುತ್ತಾರೆ, ಆದರೆ ಗುಂಪಿನ ವೆಬ್ಸೈಟ್ ಮೂಲಕ ಬುಕಿಂಗ್ ಮಾಡುವವರು ಪ್ರೀಮಿಯಂ ಸೀಟುಗಳನ್ನು ಪಡೆಯಬಹುದು ಎನ್ನುತ್ತಾರೆ ಪ್ಯಾಟ್ರಿಕ್ ಲೀ.
ತಾರೆಯರ ದಂಡು!
ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಕಾಜೋಲ್, ಅಕ್ಷಯ್ ಕುಮಾರ್, ಶಾರುಖ್ಖಾನ್ ಸೇರಿದಂತೆ ಹಲವಾರು ಪ್ರಖ್ಯಾತ ಸಿನಿಮಾ ನಟ ನಟಿಯರನ್ನು ಮೇಣದಲ್ಲಿ ಕಡೆದು ನಿಲ್ಲಿಸಿರುವುದು ಅತ್ಯಾಕರ್ಷಣೀಯವಾಗಿದೆ. ಸಿನಿಮಾದವರ ಸಾಲು ಮುಗಿಯುತ್ತಿದ್ದಂತೆ ಅಲ್ಲಿ ಕ್ರೀಡಾಪಟುಗಳಿಂದ ಹಿಡಿದು, ಪ್ರಧಾನಿ ನರೇಂದ್ರ ಮೋದಿಯವರ ತನಕ ಎಲ್ಲ ನಾಯಕರ ಮೇಣದ ಪ್ರತಿಮೆಗಳು ಕಾಣ ಸಿಗುತ್ತವೆ. ಅವರ ಜತೆಗೊಂದು ಸೆಲ್ಪಿ ಇಲ್ಲದಿದ್ದರೆ ಪ್ರವಾಸಿಗರಿಗೆ ಸಮಾಧಾನವೇ ಆಗದು.
ಭಾರತೀಯ ಪ್ರವಾಸಿಗರ ಪ್ರವಾಹ
ಸಿಂಗಾಪುರ ಪ್ರವಾಸೋದ್ಯಮ ಮಂಡಳಿ ಅಂಕಿ ಅಂಶಗಳ ಪ್ರಕಾರ, 2019ರ ಜನವರಿಯಿಂದ ನವೆಂಬರ್ವರೆಗಿನ ಅವಧಿಯಲ್ಲಿ ಭಾರತದಿಂದ 13,02,636 ಪ್ರವಾಸಿಗರು ಬಂದಿದ್ದರೆ, 2018ರಲ್ಲಿ 14,42,277 ಪ್ರವಾಸಿಗರು ಭೇಟಿ ನೀಡಿದ್ದರು. ಇದು 2017ಕ್ಕೆ ಹೋಲಿಸಿದರೆ ಶೇಕಡ 13.37ರಷ್ಟು ಏರಿಕೆ. ಸಿಂಗಾಪುರಕ್ಕೆ ಭೇಟಿ ಕೊಡುವವರಲ್ಲಿ ಚೀನಾ, ಇಂಡೊನೇಷ್ಯಾ ಪ್ರಜೆಗಳ ನಂತರದ ಸ್ಥಾನದಲ್ಲಿ ಭಾರತೀಯರಿದ್ದಾರೆ.
ಥರಾವರಿ ಮೀನುಗಳ ಜಗತ್ತು
ನಾನಾ ಥರದ ಮೀನುಗಳ ಜಗತ್ತೆ ಇಲ್ಲಿದೆ. ಒಮ್ಮೆ ಮೀನುಗಳ ಗ್ಯಾಲರಿಗೆ ಎಂಟ್ರಿ ಕೊಟ್ಟು ಮೀನು ದರ್ಶನ ಪ್ರಾರಂಭ ಮಾಡಿದರೆ ಅದು ಮುಗಿಯುವುದರೊಳಗಾಗಿ ದಿನವೇ ಕಳೆದು ಹೋಗಿರುತ್ತದೆ. ಅಷ್ಟೊಂದು ಥರಾವರಿ ಮೀನುಗಳನ್ನು ಇಲ್ಲಿ ಇಡಲಾಗಿದೆ. ಇನ್ನೂ ವಿಶೇಷ ಎಂದರೆ ದೊಡ್ಡ ಮೀನುಗಳ ಜತೆಗೆ ಯುವಕನೊಬ್ಬ ಯುದ್ಧ ಮಾಡುವ ದೃಶ್ಯ ರೋಮಾಂಚನ ನೀಡುತ್ತದೆ.