ಬರಗಾಲ ಗೆದ್ದ ತೊಗರಿ ಬೆಳೆ

Togari
Published on

| ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ

ಮಳೆ ಕಡಿಮೆಯಾಗಿ ಬರಗಾಲ ಉಂಟಾದರೆ ರೈತರು ಮಾನಸಿಕವಾಗಿ ಕುಗ್ಗುತ್ತಾರೆ. ಬೆಳೆ ಕೈಗೆ ಬಾರದಿದ್ದರೆ ಜೀವನ ನಿರ್ವಹಣೆ ಹೇಗೆ? ಯಾವ ಬೆಳೆ ಬೆಳೆದರೆ ಸೂಕ್ತ ಎಂದು ಆಲೋಚನೆ ಮಾಡುತ್ತಾರೆ. ಇದಕ್ಕೆ ಉತ್ತರ ಎಂಬಂತೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದ ರೈತ ವೆಂಕನಗೌಡ ಉಜ್ಜನಗೌಡ ಕೆಂಚನಗೌಡ್ರ ಬರಗಾಲದಲ್ಲೂ ತನ್ನ ಮೂರೂವರೆ ಎಕರೆ ಜಮೀನಿನಲ್ಲಿ ತೊಗರಿ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಕೃಷಿಯಲ್ಲಿ ಸದಾ ಹೊಸ ಪ್ರಯೋಗಗಳಿಗೆ ಮುಂದಾಗುವ ವೆಂಕನಗೌಡ ಮುಂಗಾರಿನಲ್ಲಿ ಶೇಂಗಾ, ಹೆಸರು ಬೀಜ ಬಿತ್ತಲು ಉದ್ದೇಶಿಸಿದ್ದರು. ಆದರೆ, ಮಳೆ ಕೈಕೊಟ್ಟಿದ್ದರಿಂದ ಪರ್ಯಾಯ ಬೆಳೆಗಳ ಬಗ್ಗೆ ತಾಲೂಕು ಮತ್ತು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳ ಬಳಿ ವಿಚಾರಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು ಮತ್ತು ವಿಜ್ಞಾನಿಗಳ ಸಲಹೆ ಮೇರೆಗೆ ನೂಲ್ವಿ ರೈತ ಸಂಪರ್ಕ ಕೇಂದ್ರದಿಂದ ಟಿಎಸ್​ಆರ್-3 ತಳಿಯ ತೊಗರಿ ಬೀಜ ಖರೀದಿಸಿ, ಜಮೀನಿನಲ್ಲಿ ಮೊದಲ ಬಾರಿಗೆ ಬಿತ್ತನೆ ಮಾಡಿದರು. ಮೂರೂವರೆ ಎಕರೆ ಹೊಲಕ್ಕೆ ತಲಾ 5 ಕೆಜಿಯ 3 ಪ್ಯಾಕೆಟ್ ಬೀಜ ಬಿತ್ತನೆ ಮಾಡಿದ್ದರು. ಜತೆಗೆ 1 ಚೀಲ (50 ಕೆಜಿ) ಡಿಎಪಿ ಗೊಬ್ಬರ ಬಳಕೆ, 4 ಬಾರಿ ಎಡೆ ಹೊಡೆದಿದ್ದರು. ಇದರ ಎಲ್ಲ ಖರ್ಚು ಸೇರಿ 25 ಸಾವಿರ ರೂಪಾಯಿ ವೆಚ್ಚ ಮಾಡಿದ್ದಾರೆ. ಇದು ನಾಲ್ಕೂವರೆಯಿಂದ 5 ತಿಂಗಳಲ್ಲಿ ಬೆಳೆ ಬರುತ್ತದೆ.

ಗೋಮೂತ್ರ ಸಿಂಪಡಣೆ: ಕಾಯಿ ಕಟ್ಟುವಾಗ ಗೋಮೂತ್ರ ಮತ್ತು ಬೇವಿನ ಎಣ್ಣಿಯ ಮಿಶ್ರಣ ಮಾಡಿ 4 ಬಾರಿ ಔಷಧೋಪಚಾರ ಮಾಡಲಾಗಿದೆ. ಅಂದಾಜು 28 ಕ್ವಿಂಟಾಲ್: ತಾಲೂಕಿನ ಅಂಕಿಸಂಖ್ಯೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಪರಿಶೀಲಿಸಿದ್ದು, ಅಂದಾಜು 25ರಿಂದ 28 ಕ್ವಿಂಟಾಲ್ ಇಳುವರಿ ಬರುವುದಾಗಿ ತಿಳಿಸಿದ್ದಾರೆ.

2.5 ಲಕ್ಷ ರೂ. ಆದಾಯ: ಸದ್ಯ ಕ್ವಿಂಟಾಲ್ ತೊಗರಿಗೆ 8-10 ಸಾವಿರ ರೂ. ದರವಿದೆ. 25 ಕ್ವಿಂಟಾಲ್​ಗೂ ಹೆಚ್ಚು ಇಳುವರಿ ಬರುವ ನಿರೀಕ್ಷೆಯಿದ್ದು, 2.5 ಲಕ್ಷ ರೂ.ಗೂ ಅಧಿಕ ಆದಾಯ ಬರಲಿದೆ.

ತಂದೆಯ ಸಾಥ್: ವೆಂಕನಗೌಡ ಅವರ ತಂದೆ ನಿವೃತ್ತ ಶಿಕ್ಷಕ, 82 ವರ್ಷದ ಉಜ್ಜನಗೌಡ ಅವರು ಹೊಲದಲ್ಲಿ ನಿತ್ಯ 4 ತಾಸು ಕೆಲಸ ಮಾಡಿ, ಮಗನಿಗೆ ಸಾಥ್ ನೀಡುತ್ತಾರೆ.

ರೈತರು ಪ್ರತಿವರ್ಷ ಒಂದೇ ಬೆಳೆ ಬೆಳೆಯಬಾರದು. ಬೆಳೆ ಬದಲಿಸಬೇಕು. ಯರೇಬೂದಿಹಾಳದ ರೈತ ವೆಂಕನಗೌಡ ಕೃಷಿಯಲ್ಲಿ ಸದಾ ಹೊಸತನ್ನು ಮಾಡುತ್ತಾರೆ. ಈ ವರ್ಷ ಅವರು ಬೆಳೆದ ತೊಗರಿ ಬೆಳೆ ತುಂಬಾ ಚೆನ್ನಾಗಿ ಬಂದಿದೆ. ಬರಗಾಲದಲ್ಲೂ ಉತ್ತಮ ಇಳುವರಿ ಬಂದಿದೆ. ಇದು ಬೇರೆ ರೈತರಿಗೆ ಮಾದರಿಯಾಗಿದೆ.

| ಮಲ್ಲೇಶಪ್ಪ ಬಿಸೇರೊಟ್ಟಿ ಹಿರೇಗುಂಜಳ ಗ್ರಾಮದ ರೈತ

ಮಿಶ್ರಬೆಳೆ

ರೈತ ವೆಂಕನಗೌಡ ಅವರದ್ದು ಒಟ್ಟು 20 ಎಕರೆ ಹೊಲವಿದ್ದು, 5 ಎಕರೆ ಗೋವಿನಜೋಳ, 3 ಎಕರೆ ಗೋಧಿ, 5 ಎಕರೆ ಕಡಲೆ, 2 ಎಕರೆ ಜೋಳ, ಒಂದೂವರೆ ಎಕರೆ ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ.

ಈ ವರ್ಷ ಉತ್ತಮ ಇಳುವರಿ ಬಂದಿದ್ದರಿಂದ ಮುಂದಿನ ವರ್ಷ 10 ಎಕರೆಯಲ್ಲಿ ತೊಗರಿ ಬೀಜ ಬಿತ್ತನೆ ಮಾಡುವ ಉದ್ದೇಶವಿದೆ. ಅಲ್ಲದೆ, ತೊಗರಿ ಬೆಳೆಯನ್ನು ವಿವಿಧ ತಾಲೂಕಿನ ರೈತರು ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅವರೂ ತೊಗರಿ ಬೆಳೆಯಲು ಮುಂದಾಗಿದ್ದಾರೆ.

| ವೆಂಕನಗೌಡ ಕೆಂಚನಗೌಡ್ರ ತೊಗರಿ ಬೆಳೆದ ರೈತ

ರೈತ ವೆಂಕನಗೌಡ ಬರಗಾಲದಲ್ಲೂ ತೊಗರಿ ಬೆಳೆಯನ್ನು ಉತ್ತಮವಾಗಿ ಬೆಳೆದಿದ್ದಾರೆ. ಹೀಗಾಗಿ, ಅವರಿಗೆ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲಾಗಿದೆ. ಇಲಾಖೆ ಸದಾ ರೈತರಿಗೆ ಬೆನ್ನೆಲುಬಾಗಿ ನಿಲ್ಲಲಿದೆ. ರೈತರು ಇಲಾಖೆಯಿಂದ ಮಾಹಿತಿ ಪಡೆದು ಹೆಚ್ಚು ಇಳುವರಿ ಬರುವ ಬೆಳೆ ಬೆಳೆಯಬೇಕು.

| ಭಾರತಿ ಮೆಣಸಿನಕಾಯಿ ಸಹಾಯಕ ಕೃಷಿ ನಿರ್ದೇಶಕಿ, ಕುಂದಗೋಳ

ಕಳೆದ ವರ್ಷ ಅಜವಾನ ಬೆಳೆ

ಕಳೆದ ವರ್ಷ ರೈತ ವೆಂಕನಗೌಡ ಮೂರೂವರೆ ಎಕರೆಯಲ್ಲಿ ಅಜವಾನ ಬೀಜ ಬಿತ್ತನೆ ಮಾಡಿದ್ದರು. 12 ಕ್ವಿಂಟಾಲ್ ಇಳುವರಿ ಬಂದಿತ್ತು. ಅದರಿಂದ 3 ಲಕ್ಷ ರೂ. ಆದಾಯ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net