ಸಾಹಿತ್ಯ ಕ್ಷೇತ್ರದಲ್ಲಿ ನಾನೊಬ್ಬ ಆಗಂತುಕ ಎಂದ ಡಿ.ವಿ.ಗುಂಡಪ್ಪನವರದು ದೊಡ್ಡ ಜೀವನ, ಮಹತ್ಸಾಧನೆ

DV Gundappa 16 March 20
Published on
ಇಂದು ಡಿವಿಜಿ ಜನ್ಮದಿನ

ಪತ್ರಿಕೋದ್ಯಮ, ಸಾಹಿತ್ಯ, ರಾಜಕೀಯ, ಸಮಾಜ ಸುಧಾರಣೆ, ಸಂಘ ಸಂಸ್ಥೆಗಳ ಸ್ಥಾಪನೆ, ಶಿಕ್ಷಣ, ತತ್ತ್ವಜ್ಞಾನ, ಹೀಗೆ ಹಲವು ಕ್ಷೇತ್ರಗಳಲ್ಲಿ ದುಡಿದ ಡಿ.ವಿ.ಗುಂಡಪ್ಪ ಅವರದು ದೊಡ್ಡ ಜೀವನ, ಮಹತ್ಸಾಧನೆ. ಅವರು ಉದ್ಯೋಗವೊಂದನ್ನು ಅರಸಿಕೊಂಡು ಮುಳಬಾಗಲಿನಿಂದ ಬೆಂಗಳೂರಿಗೆ ಬಂದದ್ದು 1905ರಲ್ಲಿ. ‘ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಕುಳಿತು ಫೇಲ್ ಆಗಿದ್ದೆ- ನಾನು ಫೇಲಾದದ್ದು ಬಹುಶಃ ಎರಡು ಮೂರು ವಿಷಯಗಳಲ್ಲಿ ಎಂದು ತೋರುತ್ತದೆ. ಆ ಎರಡು ಮೂರರಲ್ಲಿ ಕನ್ನಡ ಒಂದು’ ಎಂದು ಅವರೇ ಒಂದೆಡೆ ಬರೆದುಕೊಂಡಿದ್ದಾರೆ. ಕನ್ನಡದಲ್ಲಿ ಫೇಲಾದರೇನು, ಕನ್ನಡ ಸಾಹಿತ್ಯಕ್ಕೆ ಹೊಸ ನೀರು ಹರಿಸಿದ, ಕನ್ನಡದಲ್ಲಿ ವಿಚಾರ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದ ಅಪರೂಪದ ಧೀಮಂತರಲ್ಲಿ ಅವರೊಬ್ಬರೆನ್ನುವುದನ್ನು ಬಹುಶಃ ಯಾರೂ ಅಲ್ಲಗಳೆಯಲಾರರು.

ಸಾಹಿತ್ಯ ಡಿ.ವಿ.ಜಿ.ಯವರು ಸ್ವತಃ ಆರಿಸಿಕೊಂಡ ಕ್ಷೇತ್ರವಲ್ಲ. ‘ಸಾಹಿತ್ಯ ಕ್ಷೇತ್ರದಲ್ಲಿ ನಾನೊಬ್ಬ ಆಗಂತುಕ’ ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಹಾಗೆ ನೋಡಿದರೆ ಪತ್ರಿಕೋದ್ಯಮ ಕೂಡ ಅವರ ಆಸಕ್ತಿಯ ಕ್ಷೇತ್ರವಾಗಿರಲಿಲ್ಲ. ಅವರಿಗೆ ಆ ಕಾಲದಲ್ಲಿ ಬೇಕಾಗಿದ್ದದ್ದು ತಕ್ಕಮಟ್ಟಿಗೆ ನೆಮ್ಮದಿಯಿಂದ ಬದುಕಲು ನೆರವಾಗುವಂಥ ಒಂದು ಸಣ್ಣ ಕೆಲಸ. ಅದಕ್ಕಾಗಿ ತಿರುಗುತ್ತಿದ್ದಾಗ ಅವರೊಂದು ದಿನ ಆರ್ಕಾಟ್ ಶ್ರೀನಿವಾಸಾಚಾರ್ ರಸ್ತೆಯಲ್ಲಿದ್ದ ಪೋಸ್ಟ್ ಆಫೀಸಿನ ಪಕ್ಕದ ಓಣಿಯಲ್ಲಿ ಕಾಲಿಟ್ಟರು. ಅಂದಿನಿಂದಲೇ ಶುರುವಾಯಿತು ಅವರ ಮತ್ತು ಮುದ್ರಣಶಾಲೆಗಳ, ಪತ್ರಿಕೆಗಳ ನಂಟು. ‘ಸೂರ್ಯೋದಯ ಪ್ರಕಾಶಿಕಾ’ ಅವರಿಗೆ ಮೊದಲು ಉದ್ಯೋಗ ನೀಡಿದ ಪತ್ರಿಕೆ. ಅದೇ ಸಮಯದಲ್ಲಿ ಅವರು ಕಂಟೋನ್ಮೆಂಟಿನ ‘ಈವಿನಿಂಗ್ ಮೆಯಿಲ್’ ಪತ್ರಿಕೆಗೂ ಬರೆಯುತ್ತಿದ್ದರು. 1907ರಲ್ಲಿ ‘ಸೂರ್ಯೋದಯ ಪ್ರಕಾಶಿಕಾ’ ಪತ್ರಿಕೆ ನಿಂತ ಮೇಲೆ ನವರತ್ನ ಕೃಷ್ಣಸ್ವಾಮಿ ಎಂಬುವರ ಜೊತೆ ‘ಭಾರತಿ’ ಎಂಬ ತಮ್ಮದೇ ದಿನ ಪತ್ರಿಕೆಯನ್ನು ಪ್ರಾರಂಭಿಸಿದರು. ಅದೇ ಸಮಯದಲ್ಲಿ ‘ದಿ ಮೈಸೂರ್ ಸ್ಟಾ್ಯಂಡರ್ಡ್’ ಅರ್ಧ ವಾರ ಪತ್ರಿಕೆಯನ್ನೂ ‘ನಡೆಗನ್ನಡಿ’ ವಾರಪತ್ರಿಕೆಯನ್ನೂ ನಡೆಸುತ್ತಿದ್ದವರು ಎಂ. ಶ್ರೀನಿವಾಸ ಅಯ್ಯಂಗಾರ್. ಅವರು ಡಿ.ವಿ.ಜಿ.ಯವರನ್ನು ಪೋ›ತ್ಸಾಹಿಸಿ, ಅವರಿಗೆ ಮಾರ್ಗದರ್ಶನ ಮಾಡಿದವರು.

1908ರಲ್ಲಿ ದಿವಾನ್ ವಿ.ಪಿ. ಮಾಧವರಾಯರು ‘ದಿ ಮೈಸೂರು ನ್ಯೂಸ್​ಪೇಪರ್ ರೆಗ್ಯುಲೇಷನ್ ಆಕ್ಟ್’ ಎಂಬ ಪತ್ರಿಕಾ ನಿರ್ಬಂಧದ ಕಾನೂನನ್ನು ಜಾರಿಗೆ ತಂದಾಗ ಅನೇಕರು ತಮ್ಮ ಪತ್ರಿಕೆಗಳನ್ನು ನಿಲ್ಲಿಸುವ ಮೂಲಕ ಆ ಕಾನೂನನ್ನು ಪ್ರತಿಭಟಿಸಿದರು. ಆಗ ಡಿ.ವಿ.ಜಿ. ಮದರಾಸಿಗೆ ಹೋಗಿ, ಆ ಕಾನೂನಿನ ವಿರುದ್ಧ ದೇಶದ ಬೇರೆ ಬೇರೆ ಭಾಗಗಳ ಪತ್ರಿಕೆಗಳು ಬರೆದಿದ್ದ ಲೇಖನಗಳನ್ನು ಸಂಗ್ರಹಿಸಿ ‘ಪ್ರೆಸ್ ಗ್ಯಾಗ್ ಇನ್ ಮೈಸೂರ್’ ಎಂಬ ಒಂದು ಸಂಕಲನವನ್ನು ಪ್ರಕಟಿಸಿದರು. ಆ ಸಮಯದಲ್ಲಿ ಅವರು ಬರೆಯುತ್ತಿದ್ದ ಪತ್ರಿಕೆಗಳೆಂದರೆ ‘ದಿ ಹಿಂದೂ’ ಮತ್ತು ‘ಇಂಡಿಯನ್ ಪೇಟ್ರಿಯಟ್’.

ಆಮೇಲೆ ಅವರು ‘ಮೈಸೂರ್ ಟೈಮ್ಸ್​ ’ ಪತ್ರಿಕೆಯ ಅಸಿಸ್ಟಂಟ್ ಎಡಿಟರ್ ಆದರು. ‘ದಿ ಹೀರೊ’ ಎಂಬ ವಾರಪತ್ರಿಕೆಗೂ ಅಲಹಾಬಾದಿನ ‘ದಿ ಹಿಂದೂಸ್ಥಾನ್ ರಿವ್ಯೂ’ ಪತ್ರಿಕೆಗೂ ಅವರು ಬರೆದದ್ದುಂಟು. 1912ರಲ್ಲಿ ಲಾಹೋರಿನ ‘ಪಂಜಾಬಿ’ ಪತ್ರಿಕೆಯಲ್ಲಿ ಉಪ ಸಂಪಾದಕ ಹುದ್ದೆ ದೊರೆತಾಗ ಅದನ್ನು ನಿರಾಕರಿಸಿದ ಡಿ.ವಿ.ಜಿ. ‘ದಿ ಕರ್ನಾಟಕ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅದರಲ್ಲಿನ ಬರಹಗಳನ್ನು ಮೆಚ್ಚಿಕೊಂಡು ಅವರ ಸ್ನೇಹವಲಯಕ್ಕೆ ಸೇರಿದವರಲ್ಲಿ ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ತಮಿಳು ಕವಿ ಸುಬ್ರಹ್ಮಣ್ಯ ಭಾರತಿ, ರೈಟ್ ಆನರಬಲ್ ಶ್ರೀನಿವಾಸಶಾಸ್ತ್ರಿ, ಸರ್.ಸಿ.ವಿ.ರಾಮನ್, ಸಿ.ರಾಜಗೋಪಾಲಾಚಾರಿ, ಆನಂದ ಕುಮಾರಸ್ವಾಮಿ ಮುಖ್ಯರು.

1915ರಲ್ಲಿ ಡಿ.ವಿ.ಜಿ.ಯವರ ಉಪಕ್ರಮದಿಂದಲೇ ಬೆಂಗಳೂರು ಪಬ್ಲಿಕ್ ಲೈಬ್ರರಿ ಪ್ರಾರಂಭವಾಯಿತು. ಅದೇ ವರ್ಷ ಅವರು ಪ್ರಾರಂಭಿಸಿದ ಸಂಸ್ಥೆ ‘ಮೈಸೂರು ಸೋಷಿಯಲ್ ಸರ್ವೀಸ್ ಲೀಗ್.’ ಅದೇ ಇಂದಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಮೂಲ ಸಂಸ್ಥೆ. ಗಾಂಧೀಜಿಯವರ ದಕ್ಷಿಣ ಆಫ್ರಿಕಾ ನಿಧಿಗೆ ತಮ್ಮ ಪತ್ರಿಕೆಯಿಂದ 1800 ರೂಪಾಯಿಗಳನ್ನು ಕೂಡಿಸಿಕೊಟ್ಟವರು ಡಿ.ವಿ.ಜಿ.; ಗಾಂಧೀಜಿಯವರನ್ನು ಮೊಟ್ಟಮೊದಲು ಬೆಂಗಳೂರಿಗೆ ಕರೆಸಿಕೊಂಡವರೂ ಡಿ.ವಿ.ಜಿ. 1921ರಲ್ಲಿ ಅವರು ನಡೆಸುತ್ತಿದ್ದ ‘ದಿ ಕರ್ಣಾಟಕ’ ಪತ್ರಿಕೆಯ ಆಯಸ್ಸು ಮುಗಿಯಿತು. ಅದನ್ನು ಕುರಿತು ಡಿ.ವಿ.ಜಿ. ‘ನಿರ್ದಾಕ್ಷಿಣ್ಯವೂ ಕಟುವೂ ಆದ ಟೀಕೆಯನ್ನು ಸಹಿಸಬಲ್ಲವರು ಸಮರ್ಥರಾದ ಅಧಿಕಾರಿಗಳು. ಅಸಮರ್ಥರೂ ಸಣ್ಣ ಮನಸ್ಸಿನವರೂ ಅಧಿಕಾರ ಪದವಿಗೆ ಏರಿದ ಮೇಲೆ ಪತ್ರಿಕಾವೃತ್ತಿ ಸಂತೋಷವಿಲ್ಲದ್ದಾಗುತ್ತದೆ’ ಎಂದು ಬರೆದರು.

1915ರಷ್ಟು ಹಿಂದೆಯೇ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ಯ ಕನಸು ಕಂಡಿದ್ದ ಡಿ.ವಿ.ಜಿ. ಮೈಸೂರು ಪ್ರಜಾಪ್ರತಿನಿಧಿ ಸಭೆ, ಶಾಸನ ಸಭೆಗಳ ಸದಸ್ಯರಿಗೂ ಆ ವಿಷಯಗಳಲ್ಲಿ ಆಸಕ್ತಿಯುಳ್ಳ ಇತರರಿಗೂ ರಾಜಕೀಯ ಗೋಷ್ಠಿಗಳನ್ನು ನಡೆಸಿದರು. ಹದಿನಾಲ್ಕು ವರ್ಷಗಳ ಕಾಲ ಮೈಸೂರ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದು, ಆಡಳಿತ ನಿರ್ವಹಣೆಯ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಆ ಸಭೆಗಳಲ್ಲಿ ಅವರು ಇಂಗ್ಲಿಷಿನಲ್ಲಿ ಮಾಡಿದ ಭಾಷಣಗಳು ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಅವರಿಗಿದ್ದ ಆಳವಾದ ಪರಿಣತಿಯನ್ನು ತೋರಿಸುವಂತಿದ್ದವು. 1948ರಲ್ಲಿ ಮೈಸೂರು ಸಂಸ್ಥಾನದ ಕಾನ್ಸಿಟ್ಯುಯೆಂಟ್ ಅಸೆಂಬ್ಲಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಅವರು ಬರೆದದ್ದನ್ನು ನೋಡಿ: “Congress politics is far too turbid. The like of me wanted there to provide screens to others to make places safe for them. I don’t see a single man of idealism among them.”

ಪತ್ರಿಕೋದ್ಯೋಗದಿಂದ ದೂರ ಸರಿದ ಮೇಲೆ ಡಿ.ವಿ.ಜಿ. ತಮ್ಮ ಸಮಯವನ್ನೆಲ್ಲ ವಿನಿಯೋಗಿಸಿದ್ದು ಸಾಹಿತ್ಯ ಸೃಷ್ಟಿಗಾಗಿ, ಸಾರ್ವಜನಿಕ ಸೇವೆಗಾಗಿ. ಆ ಕಾಲದಲ್ಲಿ ಅವರ ಸಂಪರ್ಕಕ್ಕೆ ಬಂದ ಮಹನೀಯರು ಒಬ್ಬಿಬ್ಬರಲ್ಲ, ಸಂಸ್ಥೆಗಳು ಒಂದೆರಡಲ್ಲ. ಆ ಬಗ್ಗೆ ಡಿ.ವಿ.ಜಿ.ಯವರೇ ತಮ್ಮ ಹಲವು ಸಂಪುಟಗಳ ‘ಜ್ಞಾಪಕಚಿತ್ರಶಾಲೆ’ಯಲ್ಲಿ ವಿಶದವಾಗಿ ಬರೆದಿದ್ದಾರೆ.

| ಎಸ್. ದಿವಾಕರ್

(ಲೇಖಕರು ಹಿರಿಯ ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net