ಇಂದು ಸ್ವಾಮಿ ವಿವೇಕಾನಂದ ಜಯಂತಿ: ಚಾರಿತ್ರ್ಯವಂತರು ಮಾತ್ರ ಚರಿತ್ರೆ ರೂಪಿಸಬಲ್ಲರು...

SWAMY
Published on

ಸ್ವಾಮಿ ವಿವೇಕಾನಂದರ ಅಸೀಮ ವ್ಯಕ್ತಿತ್ವವು ಜಗತ್ತಿಗೆ ಅನುಗ್ರಹಿಸಿದ ಚಿಂತನಾ ಸಿದ್ಧಾಂತಕ್ಕೆ ಎಡ ಅಥವಾ ಬಲ ಎಂಬ ದ್ವಂದ್ವಗಳಿಲ್ಲವಾದ್ದರಿಂದ ಅವು ವರ್ತಮಾನ ಸಮಾಜದ ಅಗತ್ಯತೆಯನ್ನಷ್ಟೇ ಕೇಂದ್ರೀಕರಿಸದೆ ಭದ್ರ ಭವಿಷ್ಯಕ್ಕೂ ದಾರಿದೀಪವಾಗಿವೆ.

ಸ್ವಾಮಿ ವಿವೇಕಾನಂದರು ವಿಶ್ವಮಾನವ. ಅವರು ಪ್ರತಿಪಾದಿಸಿದ ವಿಚಾರಗಳು ತಮ್ಮ ವೈಶಾಲ್ಯ ಹಾಗೂ ಲೋಕೋಪಯೋಗಿತ್ವ ಗುಣವಿಶೇಷಗಳಿಗೆ ಹೆಸರಾಗಿವೆ. ಕೇವಲ ತಮ್ಮ ಬಹುಮುಖ ವ್ಯಕ್ತಿತ್ವಕ್ಕಷ್ಟೇ ಅವರು ಖ್ಯಾತರಾಗದೆ ಬಹುದೊಡ್ಡ ದೂರದರ್ಶಿತ್ವಕ್ಕೂ ಹೆಸರಾಗಿದ್ದರು. ಸ್ವಾಮಿ ವಿವೇಕಾನಂದರ ಅದ್ಭುತ ಸಮಾಜ ಸುಧಾರಣಾ ತತ್ತ್ವ, ರಾಷ್ಟ್ರತತ್ವ ಮತ್ತು ನಿರ್ವಹಣಾ ಕೌಶಲ್ಯದ ವಿಧಾನಗಳು ಹೆಸರುವಾಸಿ. ಸರ್ವವಿಧಗಳಿಂದಲೂ ಮಾನವೋತ್ಥಾನ ಸಾಧಿಸುವುದು ಅವರ ಬದುಕಿನ ಧ್ಯೇಯವಾಗಿತ್ತು.

ಬಹಳಷ್ಟು ಸಂದರ್ಭಗಳಲ್ಲಿ ನಾವು ಮಹಾನ್ ವ್ಯಕ್ತಿಗಳ ಸಂದೇಶಗಳ ಪ್ರಸ್ತುತತೆ ಯನ್ನು ನಿರ್ದಿಷ್ಟ ಕಾಲಘಟ್ಟಕ್ಕೆ ಸೀಮಿತಗೊಳಿಸು ತ್ತೇವೆ. ಸಮಾಜವು ನಿರಂತರ ಪರಿವರ್ತನೆಗೊಂಡು ಸಾಗಿದಂತೆ ಅದರ ಸುಧಾರಣೆಗೆ ಅತ್ಯುಪಯುಕ್ತವಾದ ವಿಚಾರಗಳೂ ಸಹಜವಾಗಿಯೇ ತಮ್ಮ ಸ್ವರೂಪದಲ್ಲಿ ವ್ಯತ್ಯಯ ಕಾಣುತ್ತವೆ. ಶ್ರೀ ರಾಮಕೃಷ್ಣರು ಹೇಳುವಂತೆ ‘ಮೊಘಲರ ಕಾಲದ ನಾಣ್ಯ ಕಂಪನಿ ಸರ್ಕಾರದಲ್ಲಿ ಚಲಾವಣೆ ಕಾಣದು’. ಕುವೆಂಪು ಹೇಳುವ ಹಾಗೆ, ‘ಅಜ್ಜಿಯ ಒಡವೆಗಳನ್ನು ಮೊಮ್ಮಗಳು ಕರಗಿಸಿ ತನಗಿಷ್ಟವಾದ ವಿನ್ಯಾಸದಲ್ಲಿ ಹೊಸದಾಗಿ ತಯಾರಿಸಿಕೊಳ್ಳಲು ಹಂಬಲಿಸುವಂತೆ’. ಈ ರೀತಿಯಲ್ಲಿ ಸಮಾಜ ಸುಧಾರಣೆಯ ವಿಚಾರಗಳೂ ಬದಲಾಗುತ್ತ ಸಾಗುತ್ತವೆ.

ಸ್ವಾಮಿ ವಿವೇಕಾನಂದರು ಪ್ರತಿಪಾದಿಸುವ ವಿಚಾರಗಳಿಗೆ ಉಪನಿಷತ್ತಿನ ಹಿನ್ನೆಲೆ ಇದೆ. ಅವರು ಮನುಷ್ಯನ ಅಭ್ಯುದಯಕ್ಕೆ ಆತನ ಆಧ್ಯಾತ್ಮಿಕ ಸ್ವರೂಪಕ್ಕೆ ಪ್ರತಿಬಂಧಕವಾಗಿ ನಿಂತ ಕಳೆಯ ನಿಮೂಲನ ಕಾರ್ಯಕ್ಕೆ ಒತ್ತು ನೀಡಿದರೇ ವಿನಃ ಕೇವಲ ಜೈವಿಕ ವಿನ್ಯಾಸವನ್ನು ಸುಂದರಗೊಳಿಸುವ ಕಾರ್ಯಕ್ಕಲ್ಲ. ಜಗತ್ತಿನ ಬಹುತೇಕ ಜನರು ‘ಶಿಲ್ಪಿಯೊಬ್ಬ ವಿಗ್ರಹವನ್ನು ಅತ್ಯುತ್ತಮವಾಗಿ ರೂಪಿಸಿದ್ದಾನೆ’ ಎಂದು ಶ್ಲಾಘಿಸಿದರೆ, ಪ್ರಾಜ್ಞರು ‘ಶಿಲ್ಪಿಯು ವಿಗ್ರಹವನ್ನು ಕೆತ್ತಬೇಕಾದರೆ ಕಚ್ಚಾವಸ್ತುವಿನಲ್ಲಿದ್ದ ಅನವಶ್ಯಕ ಅಂಶಗಳನ್ನು ನಿಮೂಲನ ಮಾಡಿದಾಗ ಪಕ್ಕಾ ವಸ್ತು ಅರ್ಥಾತ್ ವಿಗ್ರಹವು ರೂಪುಗೊಂಡಿತು’ ಎಂಬ ವಿಶೇಷ ರೀತಿಯ ಸಂದೇಶವನ್ನು ನೀಡುತ್ತಾರೆ!

ಅಂತೆಯೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ""Man is potentially divine. Infinite perfection is in every man, though unmanifested... to succeed we must have tremendous perseverance, tremendous will...'' ಸ್ವಾಮಿ ವಿವೇಕಾನಂದರು ಸಮಾಜದ ಐತಿಹಾಸಿಕ ಅವಶ್ಯಕತೆಗಳಿಗೆ ತಕ್ಕಂತೆ ಅನೇಕ ವಿಧಗಳಲ್ಲಿ ಪರಿವರ್ತನೆಗೆ ಒಳಗಾಗಬೇಕೆಂದು ಪ್ರತಿಪಾದಿಸಿದರೂ ಮಾನವನ ಎಲ್ಲ ಪ್ರಯತ್ನಗಳ ಹಿಂದೆ ಮೂಲಭೂತವಾಗಿರುವ ಶಾಶ್ವತ ಮೌಲ್ಯಗಳನ್ನು ಬಿಡುವುದಾಗಲಿ ಅಥವಾ ಬದಲಾಯಿಸಬೇಕಾದ ಔಚಿತ್ಯವಾಗಲಿ ಇಲ್ಲವೆಂದು ಬಲವಾಗಿ ಸಾರಿದ್ದಾರೆ.

ಅವರ ಅಭಿಮತವೆಂದರೆ, ಸಾಮಾಜಿಕವೇ ಮೊದಲಾದ ಯಾವುದೇ ವಿವಿಧ ನೆಲೆಗಳಲ್ಲಿನ ಚಟುವಟಿಕೆಗಳಿಗೆ ಆಧ್ಯಾತ್ಮಿಕತೆಯೇ ಶ್ರೇಷ್ಠ ಪ್ರೇರಣಾ ಶಕ್ತಿ ಎಂಬುದು. ಆದ್ದರಿಂದಲೇ ಶಾಶ್ವತ ಮೌಲ್ಯಗಳನ್ನು ಆಧರಿಸಿದರಷ್ಟೇ ಪರಿವರ್ತನೆಯಿಂದ ಸಾಗುವ ಸಮಾಜಕ್ಕೆ ಉಳಿಗಾಲವಿದೆ ಎಂಬ ಸ್ವಾಮಿ ವಿವೇಕಾನಂದರ ದಿವ್ಯ ಸಂದೇಶದಲ್ಲಿ ಉಪನಿಷತ್ತಿನ ಅಡಿಪಾಯವಿದೆ.

ಸುಪ್ರಸಿದ್ಧ ಚಿಂತಕ ಬ್ಲೂಮ್ ಫೀಲ್ಡ್ ತಮ್ಮ ‘ದಿ ರಿಲಿಜನ್ ಆಫ್ ವೇದ’ ಎಂಬ ಪುಸ್ತಕದಲ್ಲಿ ಹೇಳುತ್ತಾರೆ: ‘ಉಪನಿಷತ್ತುಗಳಲ್ಲಿ ತಮ್ಮ ಬೇರುಗಳನ್ನು ಹೊಂದಿಲ್ಲದ ಯಾವುದೇ ಭಾರತೀಯ ತತ್ತ್ವಶಾಖೆಯೂ ಇಲ್ಲ. ಅವೈದಿಕವಾದ ಬೌದ್ಧ ಧರ್ಮದಲ್ಲೂ ಇಲ್ಲ’. ಇಲ್ಲಿ ಉಪನಿಷತ್ತುಗಳ ಅದ್ಭುತ ವ್ಯಾಪ್ತಿಯು ನಮಗೆ ಅರಿವಾಗದಿರದು.

ಅಂತೆಯೇ ಖಗೋಳ ಭೌತವಿಜ್ಞಾನಿ ಆರ್.ಎ. ಮಿಲ್ಲಿಕನ್ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ದಾಖಲಿಸುತ್ತಾರೆ. ‘ಸಮಸ್ತ ಮಾನವ ಕಲ್ಯಾಣ ಮತ್ತು ಮಾನವ ಪ್ರಗತಿಗಳನ್ನು ಹೊತ್ತಿರುವ ಎರಡು ಬೃಹತ್ ಆಧಾರಸ್ತಂಭಗಳೆಂದರೆ, ಮೊದಲನೆಯದು ಧರ್ಮದೃಷ್ಟಿ, ಎರಡನೆಯದು ವಿಜ್ಞಾನದೃಷ್ಟಿ. ಇವೆರಡೂ ಪರಸ್ಪರ ನೆರವನ್ನು ಪಡೆಯದೇ ವಿಶೇಷ ಪರಿಣಾಮ ಬೀರಲಾರವು. ವಿಜ್ಞಾನದೃಷ್ಟಿಯ ಅಭಿವೃದ್ಧಿಗೆ ವಿಶ್ವವಿದ್ಯಾನಿಲಯಗಳಿವೆ, ಸಂಶೋಧನಾ ಸಂಸ್ಥೆಗಳಿವೆ. ಆದರೆ ಯಾವುದೇ ವಿನಾಯಿತಿಯಿಲ್ಲದೆ ಪ್ರತಿಯೊಬ್ಬರಿಗೂ ಪರಮಾವಕಾಶವಿರುವುದು ಧರ್ಮದೃಷ್ಟಿಯಲ್ಲಿ.’

ಸ್ವಾಮಿ ವಿವೇಕಾನಂದರು, ‘ನಾನು ಸಾರಿದ್ದು ಉಪನಿಷತ್ತುಗಳನ್ನು ಮಾತ್ರ’ ಎಂದಿದ್ದಾರೆ. ಅಲ್ಲದೆ ಅವರು ಪ್ರತಿಪಾದಿಸಿದ್ದು ಜೈವಿಕವಾದ ಮಾನವನ ಅಸ್ತಿತ್ವವನ್ನಲ್ಲ. ಬದಲಾಗಿ ಮಾನವನ ಆಧ್ಯಾತ್ಮಿಕ ಅಸ್ತಿತ್ವವನ್ನು. ಆದ್ದರಿಂದ ನಾವು ಸ್ವಾಮಿ ವಿವೇಕಾನಂದರ ಚಿಂತನೆಗಳಿಗಿರುವ ಸಾರ್ವಕಾಲಿಕ ಪ್ರಸ್ತುತತೆಯನ್ನು ಪೂರ್ವಾಗ್ರಹವಿಲ್ಲದೆ ಸಮ್ಮತಿಸಬೇಕಿದೆ. ಸ್ವಾಮಿ ವಿವೇಕಾನಂದರ ಚಿಂತನೆಗಳ ವಿರಾಟ್ ಸ್ವರೂಪದ ಕೆಲವು ಆಯಾಮಗಳನ್ನು ಕುರಿತು ಚಿಂತನೆ ನಡೆಸಬೇಕಾದ ಸಂದರ್ಭವಿದು.

ಮಾನವ ವಿಕಾಸತತ್ತ್ವ

ವಿಜ್ಞಾನಿ ಡಾರ್ವಿನ್ನನು ಏಕಕೋಶಜೀವಿಯು ಮಾನವನ ಹಂತಕ್ಕೆ ವಿಕಸನ ಹೊಂದಿದಾಗ ವಿಕಾಸ ಪ್ರಕ್ರಿಯೆ ಮುಕ್ತಾಯ ವಾಯಿತೆಂದು ಸಾರುತ್ತಾನೆ. ಆದರೆ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಮಾನವನು ಅಸತ್ಯದಿಂದ ಸತ್ಯದೆಡೆಗೆ ಪಯಣಿಸುವುದಿಲ್ಲ, ಸತ್ಯದಿಂದಲೇ ಸತ್ಯದೆಡೆಗೆ. ಅರ್ಥಾತ್ ಅಲ್ಪ ಸತ್ಯದಿಂದ ಪೂರ್ಣ ಸತ್ಯದೆಡೆಗೆ ಪಯಣಿಸುತ್ತಾನೆ.

ಪ್ರಾಣಿ ಸಂಕುಲಕ್ಕೆ ಅನ್ವಯಿಸುವ ಅಸ್ತಿತ್ವಕ್ಕಾಗಿ ಹೋರಾಟ ಎಂಬ ನಿಯಮವು ಮಾನವನ ವಿಕಾಸದ ಹಂತದಲ್ಲಿ ಬಾಲಿಶವೆನಿಸುತ್ತದೆ ಮತ್ತು ಈ ಹಂತದಲ್ಲಿ ವಿಕಾಸಕ್ಕಾಗಿ ಹೋರಾಟ ಎಂಬ ಉದಾತ್ತ ತತ್ತ್ವಕ್ಕೆ ತಲೆಬಾಗುತ್ತದೆ. ಮಂಗನಲ್ಲಿ ಮಾನವ ಹುದುಗಿದ್ದನೆಂದು ನಂಬುವುದಾದರೆ ಮಾನವನಲ್ಲಿ ದೈವ ಹುದುಗಿದೆ ಎಂಬುದು ಮಹಾನ್ ಸತ್ಯವಲ್ಲವೇ?’ ಎಂದಿದ್ದಾರೆ. ಇಲ್ಲಿ ಮಾನವ ವಿಕಾಸದ ಆಧ್ಯಾತ್ಮಿಕ ಆಯಾಮವನ್ನು ತೆರೆದಿಟ್ಟು ಸ್ವಾಮೀಜಿ ನಮ್ಮ ಜೀವನದ ಹೋರಾಟಕ್ಕೆ ಸನ್ನದ್ಧಗೊಳಿಸುತ್ತಿದ್ದಾರೆ.

ವಿವೇಕಾನಂದರ ಜೀವನ ತತ್ತ್ವ

ಸ್ವಾಮಿ ವಿವೇಕಾನಂದರು ಜೀವನವನ್ನು ‘ನಿರಂತರ ಹೋರಾಟ’ಕ್ಕೆ ಹೋಲಿಸುತ್ತಾರೆ. ಅಲ್ಲದೆ ಪ್ರಕೃತಿ ನಮ್ಮ ಮುಂದಿರುವ ‘ಸವಾಲು’ ಎಂದೇ ವ್ಯಾಖ್ಯಾನಿಸುತ್ತಾರೆ. ‘ಜೀವನಕ್ಕೆ ಚೈತನ್ಯ ದೊರಕುವುದೇ ಮೌಲ್ಯಗಳಿಂದ. ಆದ್ದರಿಂದ ಋಣಾತ್ಮಕ ಹಾಗೂ ನಕಾರಾತ್ಮಕ ಚಿಂತನೆಗಳು ನಮ್ಮನ್ನು ಮೃತಪ್ರಾಯವಾಗಿಸುತ್ತವೆ. ಯಶಸ್ವೀ ಜೀವನಕ್ಕಿಂತ ಮೌಲ್ಯಪೂರ್ಣ ಜೀವನ ಹಿರಿದಾದದ್ದು. ಆದರ್ಶ ಹೊತ್ತ ವ್ಯಕ್ತಿ ಐದುನೂರು ತಪ್ಪುಗಳನ್ನೆಸಗಿದರೆ ಆದರ್ಶರಹಿತ ವ್ಯಕ್ತಿ ಐವತ್ತು ಸಾವಿರ ತಪ್ಪುಗಳನ್ನೆಸಗುವುದರಿಂದ ಜೀವನವು ಆದರ್ಶಾವಲಂಬಿತವಾಗಬೇಕು. ಅನ್ಯಾಯದ ಮಾರ್ಗದಲ್ಲಿ ಗೆಲ್ಲುವುದಕ್ಕಿಂತ ನ್ಯಾಯ ಮಾರ್ಗದಲ್ಲಿ ಸೋಲುವುದು ಘನತೆಪೂರ್ಣ. ಸತ್ಯಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವುದು ಒಳಿತು. ಆದರೆ ಸತ್ಯವನ್ನು ಯಾವುದೇ ವಸ್ತುವಿಗಾಗಿ, ವಿಚಾರಕ್ಕಾಗಿ ತ್ಯಾಗ ಮಾಡಬಾರದು’ ಎಂಬಿತ್ಯಾದಿ ಜೀವನ ತತ್ತಾ್ವದರ್ಶಗಳನ್ನು ನಮ್ಮ ಮುಂದಿಟ್ಟಿದ್ದಾರೆ.

ಸೇವಾ ತತ್ತ್ವ

ಸ್ವಾಮಿ ವಿವೇಕಾನಂದರು ‘ತ್ಯಾಗ ಮತ್ತು ಸೇವೆ ಭಾರತದ ಅವಳಿ ಆದರ್ಶಗಳು. ಅವುಗಳನ್ನು ನಾವು ಊರ್ಜಿತಗೊಳಿಸಿದಷ್ಟೂ ರಾಷ್ಟ್ರದ ಉತ್ಥಾನದ ಸೋಪಾನವು ಸುರಕ್ಷಿತವಾಗುತ್ತದೆ’ ಎಂದಿದ್ದಾರೆ. ‘ಸೇವೆಯು ಭಾವುಕತೆಯಾಗದೆ ಜೀವನ ವಿಧಾನವಾಗಬೇಕು. ಸೇವೆ ಮಾಡುವವರು ಸೇವೆ ಪಡೆಯುವವರಿಗೆ ಋಣಿಯಾಗಿರಬೇಕು’ ಎಂದಿದ್ದಾರೆ. ಸ್ವಾಮೀಜಿಯವರಿಂದ ಪ್ರೇರೇಪಿತರಾಗಿ ಅಮೆರಿಕಾದ ಪ್ರತಿಷ್ಠಿತ ಶ್ರೀಮಂತ ಜಾನ್ ಡಿ. ರಾಕ್​ಫೆಲ್ಲರ್ ತಮ್ಮ ಸೇವಾಕಾರ್ಯಗಳ ಮೂಲಕ ಅಮೆರಿಕದ ಇತಿಹಾಸದಲ್ಲಿ ದಾಖಲಾದರು. ‘ಯಾರು ಇತರರಿಗಾಗಿ ಬದುಕುತ್ತಾರೆಯೋ ಅವರದ್ದೇ ಜೀವನ, ಉಳಿದವರು ಬದುಕಿದ್ದೂ ಸತ್ತಂತೆ...’ ಎಂದಿರುವ ಸ್ವಾಮೀಜಿ ನಮ್ಮ ಬದುಕಿನ ವ್ಯಾಪ್ತಿಯನ್ನು ಹಿರಿದಾಗಿಸಿದ್ದಾರೆ, ವೈಯಕ್ತಿಕತೆಗಿಂತ ಹಿರಿದಾದ ಆಯಾಮದಲ್ಲಿ ಬದುಕಲು ಪ್ರೇರೇಪಿಸಿದ್ದಾರೆ.

ವಿಶ್ವಶಾಂತಿ ತತ್ತ್ವ

1993ರಲ್ಲಿ ಅಮೆರಿಕಾದಲ್ಲಿ ನೆರವೇರಿದ ಐತಿಹಾಸಿಕ ಚಿಕಾಗೋ ಉಪನ್ಯಾಸದ ಶತಮಾನೋತ್ಸವ ಸಮಾರಂಭದಲ್ಲಿ ಯುನೆಸ್ಕೋ ಡೈರೆಕ್ಟರ್ ಜನರಲ್ ಫೆಡರಿಕೊ ಮೇಯರ್ ಹೀಗೆ ಹೇಳುತ್ತಾರೆ: ‘ಸ್ವಾಮಿ ವಿವೇಕಾನಂದರು 1897ರಷ್ಟು ಹಿಂದೆಯೇ ಸ್ಥಾಪಿಸಿದ ರಾಮಕೃಷ್ಣ ಮಹಾಸಂಘದ ಸಂವಿಧಾನಕ್ಕೂ, 1945ರಲ್ಲಿ ರೂಪುಗೊಂಡ ಯುನೆಸ್ಕೋ ಸಂವಿಧಾನಕ್ಕೂ ಇರುವ ಸಾಮ್ಯವನ್ನು ಕಂಡು ನಾನು ನಿಜಕ್ಕೂ ಚಕಿತನಾಗಿದ್ದೇನೆ. ಇವೆರಡೂ ಪ್ರಗತಿಯನ್ನು ಉದ್ದೇಶವಾಗಿ ಉಳ್ಳ ತಮ್ಮ ಪ್ರಯತ್ನಗಳಲ್ಲಿ ಮನುಷ್ಯನನ್ನು ಕೇಂದ್ರವಾಗಿರಿಸಿಕೊಂಡಿವೆ. ಪ್ರಜಾಸತ್ತಾತ್ಮಕತೆಯನ್ನು ನಿರ್ವಿುಸುವ ತಮ್ಮ ಕಾರ್ಯಸೂಚಿಯಲ್ಲಿ ಇವೆರಡೂ ಸಹಿಷ್ಣುತೆಯನ್ನು ಅಗ್ರಸ್ಥಾನದಲ್ಲಿರುಸುತ್ತವೆ.

ಇವೆರಡೂ ಮಾನವಸಂಸ್ಕೃತಿ ಮತ್ತು ಸಮಾಜಗಳ ವೈವಿಧ್ಯವನ್ನು ಸಮಾನ ಪರಂಪರೆಯ ಅಗತ್ಯ ಅಂಶಗಳೆಂದು ಗುರುತಿಸುತ್ತವೆ.’ ಇಲ್ಲಿ ಸ್ವಾಮೀಜಿಯವರ ವಿಶ್ವಾತ್ಮಭಾವ ವೇದ್ಯವಾಗುತ್ತದೆ. ಸರ್ವಜನರ ಬದುಕಿಗೆ ಸ್ವಾಮಿ ವಿವೇಕಾನಂದರು ಬೆಳಕಾದದ್ದು ತಮ್ಮ ಚಾರಿತ್ರ್ಯ ಬಲದಿಂದ. ‘ಚರಿತ್ರೆ ರೂಪಿಸುವವರು ಚಾರಿತ್ರ್ಯವಂತರೇ’ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮಹಾವಾಗ್ಮಿಗಳಾಗಿದ್ದ ಅವರು ತಮ್ಮ 91ಕ್ಕೂ ಅಧಿಕ ಪರಿಚಿತರಿಗೆ 768 ಪತ್ರಗಳನ್ನು ಬರೆದು ಬದುಕಿಗೆ ಪ್ರೇರೇಪಿಸಿದ್ದಾರೆ. ಲೋಕಶಿಕ್ಷಣಕ್ಕೆ ನಿರ್ದೇಶಿತರಾಗಿ ಧರೆಗಿಳಿದ ಸ್ವಾಮೀಜಿ ತಮ್ಮ ಮಾತು, ಕೃತಿ, ಬರಹಗಳ ಮೂಲಕ ಜೀವನಾದರ್ಶಕ್ಕೆ ದಾರಿದೀಪವಾದರು, ಜನಸಂಕುಲದ ಭವನಾಶದ ಪಯಣಕ್ಕೆ ಚುಕ್ಕಾಣಿಗರಾದರು ಮತ್ತು ಅವರ ವಾಣಿ ಸಾರ್ವಕಾಲಿಕ ಸಂಜೀವಿನಿಯಾಗಿ ಜನರ ಹೃನ್ಮನಗಳಲ್ಲಿ ಶಿಲಾಕ್ಷರವಾಗಿ ನಿಂತಿದೆ.

ಯೌವನ ತತ್ತ್ವ

‘ದೈವವನ್ನಷ್ಟೇ ನಂಬಿದರೆ ನಾವು ಆಸ್ತಿಕರೆನಿಸುವುದಿಲ್ಲ, ನಮ್ಮನ್ನು ನಾವು ನಂಬದೆ ಎಷ್ಟೇ ದೈವಗಳನ್ನು ನಂಬಿದರೂ ನಾವು ನಾಸ್ತಿಕರೆಂದೇ ಪರಿಗಣಿತರಾಗುತ್ತೇವೆ. ಜೀವನದ ವಸಂತಕಾಲವೆನಿಸಿರುವ ಯೌವನವು ಅನಂತ ಶಕ್ತಿಯನ್ನರಿಯಲು, ನಮ್ಮ ಕಾರ್ಯದಕ್ಷತೆಯನ್ನು ಕಾರ್ಯ ರೂಪಗೊಳಿಸಲು, ಸೋಲನ್ನು ದ್ವೇಷಿಸುವ ಅರ್ಥಾತ್ ಅಸಾಧ್ಯವೆನಿಸಬಹುದಾದುದನ್ನು ಸುಸಾಧ್ಯಗೊಳಿಸಬಹುದಾದ ಪರ್ವಕಾಲವೆನಿಸಿದೆ! ಯುವಕರು ತಮ್ಮ ಆದರ್ಶವನ್ನು ಸಿದ್ಧಿಸಿಕೊಳ್ಳುವ ಯತ್ನದಲ್ಲಿ ಪರಿಸರ ಪರಿಸ್ಥಿತಿಗಳೊಂದಿಗೆ ಸಾಕಷ್ಟು ಸೆಣಸಾಡಿದಾಗ ಮಾತ್ರ ಪ್ರಚಂಡ ಚೇತನವಾಗಿ ಪ್ರಕಟಗೊಳ್ಳಲು ಸಾಧ್ಯ.

ನಿನ್ನನ್ನು ನೀನು ದುರ್ಬಲನೆಂದು ಭಾವಿಸುವುದೇ ಜೀವನದಲ್ಲಿ ನೀನು ಮಾಡಬಹುದಾದ ಘೊರಪಾಪ. ಪೌರುಷದಿಂದ ಪ್ರಯತ್ನ ಮಾಡದಿದ್ದರೆ ಎಂತಹ ದೈವಬಲವೂ ನಿನ್ನ ತಮಸ್ಸನ್ನು ತೊಲಗಿಸಲಾರದು... ಜನರು ನಮ್ಮನ್ನು ಹೊಗಳಲಿ ಅಥವಾ ತೆಗಳಲಿ ನಾವು ಮಾತ್ರ ಅದ್ಯಾವುದಕ್ಕೂ ಗಮನ ಕೊಡದೆ ಆದರ್ಶವನ್ನು ಮುಂದಿರಿಸಿಕೊಂಡು ಸಿಂಹ ಪರಾಕ್ರಮದಿಂದ ಕಾರ್ಯಪ್ರವೃತ್ತರಾಗಬೇಕು. ಸರ್ವಶಕ್ತಿ ಸ್ವರೂಪಿಣಿಯಾದ, ಅನಂತಳಾದ ಜಗಜ್ಜನನಿಯ ಪುತ್ರ ನೀನೆಂಬುದು ನೆನಪಿರಲಿ. ಎಲ್ಲ ನಕಾರಾತ್ಮಕ ಭಾವನೆಗಳನ್ನು ಅದೊಂದು ಅಂಟುರೋಗವೋ ಎಂಬಂತೆ ಹೊಸಕಿ ಹಾಕು...’ ಎಂದಿದ್ದಾರೆ ಸ್ವಾಮೀಜಿ.

(ಲೇಖಕರು ತುಮಕೂರಿನ ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷರು) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net