ಹಸಿವು, ನಿದ್ರೆಯನ್ನು ಜಯಿಸಿದ್ದ ಜಗದ್ಗುರು; ಇಂದು ಶ್ರೀ ನೃಸಿಂಹ ಭಾರತೀ ಮಹಾಸ್ವಾಮಿಗಳ ಜಯಂತಿ

sdfsfsdfs
Published on
ಯೋಗಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ತಮ್ಮ 50ನೇ ವರ್ಷಕ್ಕೂ ಮುಂಚೆ ಜಗದ್ಗುರು ಶ್ರೀ ನೃಸಿಂಹ ಭಾರತೀ ಅವರು ಹಸಿವು ನಿದ್ರೆಯನ್ನೂ ಜಯಿಸಿದ್ದರಂತೆ. ಜಗದ್ಗುರುಗಳು ದಿನಕ್ಕೆ ಎರಡು ಗಂಟೆ ಮಾತ್ರ ನಿದ್ದೆ ಮಾಡುತ್ತಿದ್ದರು. ಎರಡು ತುತ್ತು ಅನ್ನ ಸೇವಿಸುತ್ತಿದ್ದರು. ಯೋಗಬಲದಿಂದಲೇ ಜೀವಿಸಿದ್ದರು.

| ಮಂಡಗದ್ದೆ ಪ್ರಕಾಶ್​ಬಾಬು

ಜಗದ್ಗುರು ಶ್ರೀ ನೃಸಿಂಹ ಭಾರತೀ ಸ್ವಾಮಿಗಳು ಜನಿಸಿದ್ದು ಕ್ರಿ.ಶ. 1798. ಬಾಲಕನಾಗಿದ್ದಾಗಲೇ ಶಾಸ್ತ್ರಗಳ ಅಧ್ಯಯನಕ್ಕಾಗಿ ಕಾಲ್ನಡಿಗೆಯಲ್ಲಿ ಕಾಶಿಗೆ (ವಾರಾಣಸಿ) ಹೋಗಿದ್ದು, ಅಲ್ಲಿ ವೇದಕ್ಕೆ ಸಂಬಂಧಪಟ್ಟ ತರ್ಕ, ಮೀಮಾಂಸ, ವ್ಯಾಕರಣ ಮುಂತಾದ ಶಾಸ್ತಾŠಧ್ಯಯನ ಮಾಡಿ ಹಿಂದಿರುಗಿದರು. ನಂತರ ಶಾರದಾ ಪೀಠಾಧಿಪತಿಯಾಗಿ ಹಲವಾರು ಶಾಸ್ತŠಗಳಲ್ಲಿ ಪ್ರಾವೀಣ್ಯ ಸಾಧಿಸಿದರು. ಮಠದ ಆಡಳಿತ ವ್ಯವಹಾರವನ್ನು ಕ್ರಮಬದ್ಧವಾಗಿ ಯಶಸ್ವಿಯಾಗಿ ಮಾಡಿದರು. ಸುಮಾರು 40 ವರ್ಷ ದಿಗ್ವಿಜಯ ಯಾತ್ರೆಯಲ್ಲಿ ಕಳೆದದ್ದು ಈ ಗುರುಗಳ ವಿಶೇಷ. ಯಾತ್ರೆಯ ಸಮಯದಲ್ಲಿ ಅದ್ವೈತ ತತ್ವ ಪ್ರಚಾರ ಮಾಡಿದರು.

ಕನ್ನಡ, ತೆಲುಗು, ತಮಿಳು, ಮರಾಠಿ ಹಾಗೂ ಸಂಸ್ಕೃತದಲ್ಲಿ ಪ್ರೌಢಿಮೆ ಗಳಿಸಿದ್ದರಿಂದ ದೇಶದ ಎಲ್ಲ ಮೂಲೆಗಳಿಂದ ಬರುವ ಭಕ್ತರ ಸಮಸ್ಯೆಗಳನ್ನು ಕೇಳಿ ಮಾರ್ಗದರ್ಶನ ನೀಡುತ್ತಿದ್ದರು. ಶಾರದೆ ಮತ್ತು ನರಸಿಂಹ ದೇವರ ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದರು. ಒಮ್ಮೆ ಜಗದ್ಗುರುಗಳು ತಮ್ಮ ಕಿರಿಯ ಶಿಷ್ಯರೊಂದಿಗೆ ಮದುರೈನ ಪ್ರಸಿದ್ಧ ಮೀನಾಕ್ಷೀ ದೇವಾಲಯಕ್ಕೆ ಹೋಗಿದ್ದರು. ಒಂದು ದಿನ ಕಿರಿಯ ಶಿಷ್ಯರು ದೇವಾಲಯದ ಗರ್ಭಗುಡಿಯಲ್ಲಿರುವ ದೇವಿಗೆ ಪೂಜೆ ಮಾಡಬೇಕೆಂದು ಒಳಗೆ ಪ್ರವೇಶ ಮಾಡಲು ಬಯಸಿದರು. ಆದರೆ ಅರ್ಚಕರು ಒಳಗಡೆ ಬಿಡಲಿಲ್ಲ. ಜಗದ್ಗುರುಗಳು ದೇವಾಲಯಕ್ಕೆ ಹೋಗಿ ಎರಡು ತೆಂಗಿನಕಾಯಿ ತರಲು ಹೇಳಿ, ಕೆಲವು ಮಂತ್ರಗಳನ್ನು ಉಚ್ಚರಿಸಿದರು. ದೇವಿ ಮೀನಾಕ್ಷಿಯ ಶಕ್ತಿಯನ್ನು ತೆಂಗಿನಕಾಯಿಗಳಲ್ಲಿ ಆವಾಹನೆ ಮಾಡಿ ಅಲ್ಲಿದ್ದ ಸಾವಿರಾರು ಭಕ್ತರಿಗೆ ತಾವು ದೇವಿಯನ್ನು ತಮ್ಮ ಮಠಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದರು.

ಇನ್ನು ಮುಂದೆ ಇಲ್ಲಿಗೆ ಬರುವ ಭಕ್ತರು ದೇವಾಲಯದ ಹೊಸ್ತಿಲ ಬಳಿಯೇ ದೇವಿಯ ಪೂಜೆ ಮಾಡಿದರೆ ಸಾಕೆಂದರು. ಆಗ ಅಲ್ಲಿನ ಅರ್ಚಕರಿಗೆ ತಮ್ಮ ತಪ್ಪಿನ ಅರಿವಾಗಿ ಜಗದ್ಗುರುಗಳ ಕ್ಷಮೆ ಕೇಳಿದರು. ಅರ್ಚಕರ ಪ್ರಾರ್ಥನೆಯಂತೆ ಮತ್ತೆ ಮದುರೈಗೆ ಬಂದು ದೇವತೆಯಲ್ಲಿ ಶಕ್ತಿಯನ್ನು ಮರು ಆವಾಹನೆ ಮಾಡಿದರು. ಈ ಜಗದ್ಗುರುಗಳಲ್ಲಿ ಅಂತಹ ವಿಶೇಷ ಶಕ್ತಿ ಇತ್ತು. ಹಿಂದಿನಿಂದಲೂ ಶೃಂಗೇರಿ ಜಗದ್ಗುರುಗಳಿಗೂ ಮೈಸೂರು ರಾಜಮನೆತನಕ್ಕೂ ನಿಕಟ ಸಂಬಂಧವಿತ್ತು. ನೂರು ವರ್ಷ ಹಿಂದೆ ಮುಮ್ಮಡಿ ಕೖಷ್ಣರಾಜ ಒಡೆಯರ್ ಅವರು ನೃಸಿಂಹ ಭಾರತೀ ಸ್ವಾಮಿಗಳಿಗೆ ಭವ್ಯ ಸ್ವಾಗತ ಏರ್ಪಡಿಸಿ, ಬೆಲೆಬಾಳುವ ಕಿರೀಟವನ್ನು ಸಮರ್ಪಿಸಿದರು. ಶೃಂಗೇರಿಯ ಶ್ರೀ ಚಂದ್ರಮೌಳೀಶ್ವರ ಲಿಂಗಕ್ಕೆ ಒಂದು ಅನರ್ಘ್ಯ ನಾಗಾಭರಣವನ್ನು ಕೊಡುಗೆಯಾಗಿ ನೀಡಿದರು. ಜಗದ್ಗುರುಗಳಿಂದ ನೇರವಾಗಿ ಶಿವಗೀತೆ ಕಲಿತರು. ಇದು ಮಹಾರಾಜರ ಸೌಭಾಗ್ಯ.

ಯೋಗಶಕ್ತಿ ಅಪಾರ: ತಮ್ಮ ನಿರ್ಯåಣಕ್ಕೆ ಮುಂಚೆ ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಹೋಗಿ ಬರಬೇಕು ಎಂದು ಜಗದ್ಗುರುಗಳು ಮನಸ್ಸು ಮಾಡಿದ್ದರು. ಅವರು ಮಠದಲ್ಲಿದ್ದಾಗ ಒಂದು ದಿನ ಪಲ್ಲಕ್ಕಿಯನ್ನು ಸಜ್ಜುಗೊಳಿಸಿ ನಾನು ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಬೇಗ ಹೋಗಬೇಕು ಎಂದು ನುಡಿದರಂತೆ. ತಕ್ಷಣವೇ ತಮ್ಮ ಯೋಗಬಲದಿಂದ ಅಲ್ಲಿಗೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿದರು. ಅದೇ ಸಮಯದಲ್ಲಿ ಅಲ್ಲಿರುವ ಭಕ್ತರು ಜಗದ್ಗುರುಗಳು ದೇವಾಲಯಕ್ಕೆ ಹೋಗಿ ಪೂಜೆ ಮಾಡುತ್ತಿದ್ದುದನ್ನು ಪ್ರತ್ಯಕ್ಷವಾಗಿ ಕಂಡರಂತೆ.
ಶಿಷ್ಯನ ಆಯ್ಕೆ ಮಾಡಿದ್ದು ಹೀಗೆ....

ಜಗದ್ಗುರುಗಳಿಗೆ 60 ವರ್ಷವಾಗಿದ್ದಾಗ ಒಮ್ಮೆ ಮೈಸೂರಿನ ಮಹಾರಾಜರ ಆಸ್ಥಾನ ಪಂಡಿತ ಕುಣಿಗಲ್ ರಾಮಾಶಾಸ್ತಿŠಗಳ ಮಗ ಶಿವಸ್ವಾಮಿ ಮತ್ತು ಆತನ ಅಣ್ಣ ಗುರುಗಳಿಗೆ ವಂದಿಸಲು ಬಂದಿದ್ದರು. ‘ಜೀವನದಲ್ಲಿ ಏನನ್ನು ಸಾಧಿಸಬೇಕೆಂದಿರುವೆಯಪ್ಪ’ ಎಂಬ ಪ್ರಶ್ನೆಯನ್ನು ಜಗದ್ಗುರುಗಳು ಆ ಬಾಲಕನ ಮುಂದಿಟ್ಟರು. ಆಗ ಆ ಬಾಲಕ, ಸಂಸ್ಕ್ಪ್ರ ಶ್ಲೋಕವೊಂದನ್ನು ಹೇಳಿದ. ಅದು ಶಿವಸ್ತೋತ್ರವಾಗಿದ್ದು ಅದರಲ್ಲಿ ಆ ಬಾಲಕ ದೖಢಭಕ್ತಿಯನ್ನು ಬಿಟ್ಟು ಬೇರೆ ಏನನ್ನೂ ಅಪೇಕ್ಷೆಪಟ್ಟಿಲ್ಲ ಎಂಬುದು ಗುರುಗಳಿಗೆ ಕಂಡು ಬಂತು. ‘ಈತನೇ ಶಾರದಾಪೀಠಕ್ಕೆ ಮುಂದಿನ ಉತ್ತರಾಧಿಕಾರಿ’ ಎಂದು ನಿರ್ಧರಿಸಿ, ಆತನಿಗೆ ಸಂನ್ಯಾಸಾಶ್ರಮ ನೀಡಿ ‘ಶ್ರೀ ಸಚ್ಚಿದಾನಂದ ಶಿವಾಭಿನವ ನೖಸಿಂಹ ಭಾರತೀ’ ಎಂದು ನಾಮಕರಣ ಮಾಡಿದರು.

ಪರೀಕ್ಷೆ ಮಾಡಿದ ಕಮಿಷನರ್!: ಗುರುಗಳು ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ ಬ್ರಿಟಿಷ್ ಕಮಿಷನರ್ ಬೌರಿಂಗ್ ಎಂಬಾತ ಮಧ್ಯರಾತ್ರಿ 1 ಗಂಟೆಗೆ ಒಬ್ಬನೇ ಅವರ ಬಿಡಾರಕ್ಕೆ ಹೋಗಿ ನಿಜಕ್ಕೂ ಇವರು ಹಸಿವು, ನಿದ್ರೆಯನ್ನು ಗೆದ್ದವರೇ ಎಂಬದನ್ನು ಪರೀಕ್ಷಿಸಿದನಂತೆ. ಆ ಅವೇಳೆಯಲ್ಲಿಯೂ ಗುರುಗಳು ಚಂದ್ರಮೌಳೀಶ್ವರನ ಪೂಜೆಯಲ್ಲಿ ನಿರತರಾಗಿದ್ದರಂತೆ! ಗುರುಗಳಿಗೆ 82 ವರ್ಷವಾಗಿದ್ದಾಗ ಜೇಷ್ಠಮಾಸದ ಶುಕ್ಲಪಕ್ಷದ ಬಿದಿಗೆ ದಿನ 1879ರಲ್ಲಿ ಅವರ ಆತ್ಮವು ಶಾಶ್ವತ ಆನಂದವನ್ನು ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net