ಇಂದು ಎಂದೆಂದೂ ಕುಗ್ಗದ ಶಕ್ತಿ ಗಾಂಧಿ

New Gandhiji
Published on

| ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್

‘ನನ್ನ ಜೀವನವೇ ನನ್ನ ಸಂದೇಶ’ ಎಂದಿದ್ದ ಮಹಾತ್ಮ ಗಾಂಧಿ ಒಂದು ಶಕ್ತಿ; ಆ ಶಕ್ತಿಯ ವರ್ಣಿಸಲು ಬಹುಶಃ ಪದಗಳು ಸಾಲಲಿಕ್ಕಿಲ್ಲ. ಗಾಂಧಿ ಎಂದರೆ ಸಾಕು, ಕಿವಿ ಅರಳಿಸಿ ಕೇಳುವವರಿದ್ದಾರೆ; ಅವರಿರುವ ನೋಟುಗಳನ್ನು ಇಷ್ಟಪಟ್ಟು, ಅವರನ್ನೇ ತೆಗಳುವವರೂ ನಮ್ಮ ನಡುವಿದ್ದಾರೆ. ಆದರೆ ಗಾಂಧಿ ಅನನ್ಯ- ಅದ್ಭುತ; ಭ್ರಾತೃತ್ವದ ಚಿಲುಮೆ. ಇತಿಹಾಸದಿಂದ ಹಿಡಿದು ಪ್ರಸ್ತುತದವರೆಗೂ, ಮುಂದಿನ ನೂರು ವರ್ಷ ಕಳೆದರೂ ಈ ಗಾಂಧಿಯ ಶಕ್ತಿಯನ್ನು ಯಾರಿಂದಲೂ ಕುಗ್ಗಿಸಲು ಅಸಾಧ್ಯ.

ಜೀವನದುದ್ದಕ್ಕೂ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನೇ ಉಸಿರಾಡಿದ್ದ ಮಹಾತ್ಮ, ಸ್ವಾತಂತ್ರ್ಯಕ್ಕಾಗಿ ಸವೆಸಿದ ಹಾದಿ ಇಂದಿನ ಪೀಳಿಗೆಗೆ ಆದರ್ಶ. ರಾಜಕೀಯ ಬಣಗಳನ್ನು, ಒಳಜಗಳಗಳನ್ನು, ಪಕ್ಷಗಳನ್ನು ಮೀರಿ ಗೌರವಿಸಲ್ಪಡುವ ವ್ಯಕ್ತಿತ್ವ ಅವರದು. ಅವರ ಬಗ್ಗೆ ಯಾರು ಎಷ್ಟೇ ನಾಲಿಗೆ ಹರಿಬಿಡಲಿ, ಗಾಂಧಿ ಇಲ್ಲದಿದ್ದರೆ ತಾವೇನೂ ಅಲ್ಲವೆಂಬುದು ಅವರಿಗೂ ತಿಳಿದಿರುವ ವಿಚಾರವೇ! ದ್ವೇಷವನ್ನು ಮರೆತು ಪ್ರೀತಿಸುವ ವ್ಯಕ್ತಿತ್ವ ಗಾಂಧಿ ಅವರದು. ದೇಶಭಕ್ತ ಹೋರಾಟದ ರೂವಾರಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನಾಯಕ ಎಂದು ಇಡೀ ಜಗತ್ತೇ ಸಾರುತ್ತದೆ; ಆರಾಧಿಸಿ ಸಂಭ್ರಮಿಸುತ್ತದೆ. ದೇಶದಿಂದ ವಿದೇಶದವರೆಗೂ ಬಾಪೂವಿನ ಖ್ಯಾತಿ ಇದೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾರ ಹೋರಾಟ ಗಾಂಧಿಯ ತತ್ವಗಳನ್ನಾಧರಿಸಿದೆ; ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ನಾಗರಿಕ ಹೋರಾಟಗಳು ಗಾಂಧಿಯ ಅಹಿಂಸಾ ವಿರೋಧಿ ಚಳವಳಿಯಿಂದ ಪ್ರೇರೇಪಿತವಾಗಿವೆ. ಜೋಹಾನ್ಸ್​ಬರ್ಗ್, ವಾಷಿಂಗ್ಟನ್ ಡಿಸಿ, ಸ್ಯಾನ್​ಫ್ರಾನ್ಸಿಸ್ಕೋ, ಹ್ಯೂಸ್ಟ್ಟ್ನಂಥ ನಗರಗಳಲ್ಲಿ, ಲಂಡನ್​ನ ಪಾರ್ಲಿಮೆಂಟ್ ಚೌಕ, ಕೆನಡಾ, ಆಸ್ಟ್ರೇಲಿಯಾ, ಮೌರಿಷಸ್ ಹೀಗೆ ಹತ್ತು ಹಲವು ವಿದೇಶಿಗರ ನಾಡಲ್ಲೂ ಗಾಂಧಿ ಅಹಿಂಸಾವಾದದ ಮೂರ್ತಿಯಾಗಿ ಇಂದಿಗೂ ರಾರಾಜಿಸುತ್ತಿದ್ದಾರೆ.

ಬಾಪೂವನ್ನು ಹತ್ಯೆಗೈದಾಗ ಜಗತ್ತಿನ ಹಲವು ಪತ್ರಿಕೆಗಳು ಮುಖಪುಟದಲ್ಲಿ ಆ ಘಟನೆಯನ್ನು ಮುದ್ರಿಸಿದವು. ‘ನ್ಯೂಯಾರ್ಕ್ ಟೈಮ್್ಸ’ ‘ಗಾಂಧಿ ಈಸ್ ಕಿಲ್ಡ್ ಬೈ ಹಿಂದೂ; ಇಂಡಿಯಾ ಶೇಕನ್, ವರ್ಲ್ಡ್ ಮೌರ್ನ್ಸ್’ ಎಂದು ಹೆಡ್​ಲೈನ್ ನೀಡಿತ್ತು. ವಿಶ್ವಸಂಸ್ಥೆ ಸಭೆ ಸೇರಿ, ತನ್ನ ಬಾವುಟವನ್ನು ಅರ್ಧಕ್ಕಿಳಿಸಿ ಗೌರವ ಸಲ್ಲಿಸಿತ್ತು. ಭಾರತವನ್ನು, ಭಾರತೀಯರನ್ನು ಜೀತದಾಳುಗಳಂತೆ ಕಾಣುತ್ತಿದ್ದ ಆಂಗ್ಲರೇ ಯಾರನ್ನಾದರೂ ಆದರ್ಶ ವ್ಯಕ್ತಿ ಎಂದು ಕರೆಯುತ್ತಾರೆಂದರೆ ಅದು ಗಾಂಧಿ ಒಬ್ಬರನ್ನೇ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ಗೆ ದೂರದೃಷ್ಟಿತ್ವ ಮತ್ತು ಮಾರ್ಗದರ್ಶನ ನೀಡಿ, ಸ್ವಾವಲಂಬಿ ರಾಷ್ಟ್ರದ ಕನಸನ್ನು ಪ್ರತಿಪಾದಿಸಿದ್ದರು. ಬ್ರಿಟಿಷರ ದಬ್ಬಾಳಿಕೆ, ಸರ್ವಾಧಿಕಾರದ ವಿರುದ್ಧ ಗಾಂಧಿ ಹೋರಾಡಿದರು ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಸಮೃದ್ಧ ಭಾರತಕ್ಕಾಗಿ, ಭಾರತೀಯರ ಒಗ್ಗೂಡಿಸಲು ಕಾಂಗ್ರೆಸ್ ಭಾರತದ ದಕ್ಷಿಣದ ತುದಿಯಲ್ಲಿರುವ ಕನ್ಯಾಕುಮಾರಿಯಿಂದ ಹಿಡಿದು ಜಮ್ಮು- ಕಾಶ್ಮೀರದವರೆಗೆ ಇತ್ತೀಚಿನ ವರ್ಷದಲ್ಲಿ ಆಯೋಜಿಸಿದ್ದ ‘ಭಾರತ ಜೋಡೋ’ ಯಾತ್ರೆ ಕೂಡ ಗಾಂಧೀಜಿಯಿಂದಲೇ ಪ್ರೇರಿತ. ಸ್ವರಾಜ್ಯದ ಕನಸುಗಳೊಂದಿಗೆ 1924ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಅಧಿವೇಶನವನ್ನು ಉದ್ದೇಶಿಸಿ ನಮ್ಮ ಕರ್ನಾಟಕದ ಬೆಳಗಾವಿಯಲ್ಲಿ ಭಾಷಣ ಮಾಡಿ ಭಾರತೀಯರನ್ನು ಒಗ್ಗೂಡಿಸಿದ್ದ ಗಾಂಧಿಯ ಒಗ್ಗಟ್ಟಿನ ಮಂತ್ರಕ್ಕೆ, ಗಡಿನಾಡಲ್ಲಿ ಮಹಾತ್ಮನ ಹೋರಾಟದ ಹಾದಿಗೆ ಶತಮಾನದ ಸಂಭ್ರಮವನ್ನು ನಾವೆಲ್ಲರೂ ಎದುರು ನೋಡುತ್ತಿದ್ದೇವೆ. ಇಂದು, ಎಂದಿಗೂ ಅವರು ಜೀವಂತ; ಅದು ನಾವು ಉಡುವ ಖಾದಿ ಬಟ್ಟೆಯಲ್ಲಿ, ಸತ್ಯದ ಹಾದಿಯಲ್ಲಿ, ಅನ್ಯಾಯದ ವಿರುದ್ಧ ಹೋರಾಟದಲ್ಲಿ, ಪತ್ರಕರ್ತರ ದಿಟ್ಟ ಹೆಜ್ಜೆಯಲ್ಲಿ, ಮಕ್ಕಳ ವೇಷಭೂಷಣದಲ್ಲಿ, ಅವರ ಹೋರಾಟದ ಹೆಜ್ಜೆ ಗುರುತುಗಳಲ್ಲಿ ಸದಾ ಗಾಂಧೀಜಿ ನೆನಹು ಆಗಿದ್ದಾರೆ.

ಇಂದಿನ ಯುವ ಪೀಳಿಗೆಗೆ ಗಾಂಧೀಜಿಯವರ ಹೋರಾಟದ ಹಾದಿ, ಅವರು ಸವೆಸಿದ ದಿಟ್ಟ ಹೆಜ್ಜೆಗಳ ಗುರುತುಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ. ‘ವಸುಧೈವ ಕುಟುಂಬಕಂ’ ಎಂಬುದನ್ನು ಜಗತ್ತಿಗೆ ಸಾರಿದ ಆದರ್ಶವಾದಿ ಗಾಂಧಿ ನಮಗೆಲ್ಲ ಮಹಾತ್ಮರು; ಅಜರಾಮರರು. ಇಂದು, ಈ ದೇಶದ ಯುವಕರ ಸಂದೇಶ ಸ್ಪಷ್ಟವಾಗಿದೆ: ನಾವು ಸತ್ಯ, ಸಹಿಷ್ಣುತೆಗಾಗಿ ಮತ್ತೆ ಹೋರಾಡುತ್ತೇವೆ. ಮಹಾತ್ಮ ಗಾಂಧಿಯವರ ಬೋಧನೆಗಳು ನ್ಯಾಯ ಮತ್ತು ಸತ್ಯಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ನಮಗೆ ನೆನಪಿಸುತ್ತವೆ. ಅವರು ಎಂದಿಗೂ ಅಮರರು.

(ಲೇಖಕರು ಮಾಜಿ ಶಾಸಕಿ, ಎಐಸಿಸಿ ಕಾರ್ಯದರ್ಶಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net