ಇಂದು ರವಿಚಂದ್ರನ್ ಅವರ ಹುಟ್ಟುಹಬ್ಬ: ಹೊಸ ಚಾಪ್ಟರ್ ಶುರು

Ravi chandran 29 May 20
Published on

| ಚೇತನ್​ ನಾಡಿಗೇರ್​

ಇಂದು ರವಿಚಂದ್ರನ್ ಅವರ ಹುಟ್ಟುಹಬ್ಬ. ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂಬ ಸಂದೇಶವನ್ನು ಈಗಾಗಲೇ ತಮ್ಮ ಅಭಿಮಾನಿಗಳಿಗೆ ರವಾನಿಸಿಬಿಟ್ಟಿದ್ದಾರೆ. ಹಾಗಾಗಿ, ಇಂದು ಅವರ ಮನೆಯ ಎದುರು ದೊಡ್ಡ ಸಂಭ್ರಮವೇನೂ ಇರುವುದಿಲ್ಲ. ಇನ್ನು ಹೊಸದೊಂದು ವರ್ಷಕ್ಕೆ ಕಾಲಿಡುತ್ತಿರುವ ಅವರು, ಇನ್ನೊಂದಿಷ್ಟು ಕನಸುಗಳನ್ನು ತುಂಬಿಕೊಂಡಿದ್ದಾರೆ. ಹೊಸ ಪ್ರಯೋಗಗಳನ್ನು ಮಾಡುವುದಕ್ಕೆ ಹೊರಟಿದ್ದಾರೆ. ಅದೆಲ್ಲವನ್ನೂ ವಿಜಯವಾಣಿ ಜತೆಗೆ ಹಂಚಿಕೊಂಡಿದ್ದಾರೆ.

ಕಳೆದ ಎರಡು ತಿಂಗಳ ಲಾಕ್​ಡೌನ್ ಸಮಯದಲ್ಲಿ ರವಿಚಂದ್ರನ್ ಅವರು ಸತತವಾಗಿ ಒಂದಿಷ್ಟು ಕೆಲಸಗಳನ್ನು ಮಾಡುತ್ತಲೇ ಇದ್ದರಂತೆ. ‘ಈ ಸಮಯದಲ್ಲಿ ಆಚೆ ಎಲ್ಲೂ ಹೋಗಿಲ್ಲ. ಹಾಗಂತ ಕೆಲಸವನ್ನು ನಿಲ್ಲಿಸಿಲ್ಲ. ನಿರಂತರವಾಗಿ ಕಥೆ, ಹಾಡು ಮುಂತಾದ ಕೆಲಸಗಳಲ್ಲಿ ಬಿಜಿ ಇದ್ದೆ. ಮುಂದೇನು ಎಂದರೆ, ಕರೊನಾ ನಂತರ ಜೀವನ ಹೇಗೆ. ಇದೇ ತರಹ ಪರಿಸ್ಥಿತಿ ಮುಂದುವರಿದರೆ, ನಮ್ಮ ಬದುಕು ಹೇಗೆ ಎಂದು ಯೋಚಿಸಿ, ನಾವು ಅದಕ್ಕೆ ರೆಡಿಯಾಗಬೇಕು. ಇನ್ನು ಹಳೆಯದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಮುಂದೇನು ಎಂಬುದು ಬಹಳ ಮುಖ್ಯ.ಕರೊನಾನ ತಲೆ ಮೇಲೆ ಹೊತ್ತರೆ ಅದು ಬಹಳ ಭಾರ. ಅದನ್ನು ಎದುರಿಗಿಟ್ಟುಕೊಂಡು, ಅದರ ಜತೆಗೆ ಹೋರಾಡುವುದೇ ಇನ್ನು ಮುಂದಿನ ಜೀವನ. ಅದನ್ನು ಎದುರಿಸಿ ಬದುಕಬೇಕೇ ಹೊರತು, ಹೆದರಿಕೊಂಡು ಕೂರೋಕೆ ಆಗುವುದಿಲ್ಲ. ಅದರಿಂದ ಕರೊನಾ ಹೋಗೋದೂ ಇಲ್ಲ. ಅದಕ್ಕೊಂದು ಪರಿಹಾರವೂ ಸಿಗಲ್ಲ. ಎಲ್ಲಿಯವರೆಗೂ ಅದಕ್ಕೊಂದು ವ್ಯಾಕ್ಸಿನ್ ಸಿಗುವುದಿಲ್ಲವೋ, ಅಲ್ಲಿಯವರೆಗೂ ವೆಕೇಶನ್. ಹಾಗಾಗಿ ಸುಮ್ಮನೆ ಕೂರುವ ಹಾಗಿಲ್ಲ. ನುಗ್ಗಬೇಕು. ಆದರೆ, ಎಚ್ಚರಿಕೆಯಿಂದ ನುಗ್ಗಬೇಕು’ಎನ್ನುತ್ತಾರೆ ಅವರು. ಇದನ್ನೂ ಓದಿ: ಇನ್ನು ಮುಂದೆ ವರ್ಷಕ್ಕೆ 100 ದಿನ ಮಾತ್ರ ಶಾಲೆ!

ಈಗ ಆಪ್; ಮುಂದೆ ಓಟಿಟಿ

ಇನ್ನು ಈಶ್ವರಿ ಸಂಸ್ಥೆಗೆ 50 ವರ್ಷ ತುಂಬಿದೆ. ತಮ್ಮ ತಂದೆ ವೀರಾಸ್ವಾಮಿ ಅವರು ಹುಟ್ಟುಹಾಕಿದ ಈ ಸಂಸ್ಥೆಯ ಸುವರ್ಣ ಮಹೋತ್ಸವವನ್ನು ಬೇರೆ ರೀತಿಯಲ್ಲಿ ಆಚರಿಸುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ ರವಿಚಂದ್ರನ್. ಈ ಕುರಿತು ಮಾತನಾಡುವ ಅವರು, ‘ಆಪ್ ಮಾಡುತ್ತಿದ್ದೀನಿ. ಅದೊಂದು ಪರ್ಸನಲೈಸ್ಡ ಆಪ್ ಅದರಲ್ಲಿ ನನ್ನ ಬಗ್ಗೆ, ಈಶ್ವರಿ ಸಂಸ್ಥೆಯ ಬಗ್ಗೆ, ತಂದೆ ಬಗ್ಗೆ, ಸಿನಿಮಾಗಳ ಬಗ್ಗೆ ಮಾತಾಡಿರುತ್ತೀನಿ. ಒನ್ ಆಂಡ್ ಓನ್ಲಿ ಅಂತ ಅದರ ಹೆಸರು. ಹೆಸರು ಫಿಕ್ಸ್ ಆಗಿದೆ. ಕೆಲಸಗಳು ನಡೆಯುತ್ತಿವೆ. ಇನ್ನೊಂದೆರೆಡು ತಿಂಗಳಲ್ಲಿ ಎಲ್ಲ ಕೆಲಸ ಮುಗಿಯಲಿವೆ. ಆ ನಂತರ ಓಟಿಟಿ ಪ್ಲಾಟ್ ಫಾರ್ಮ್​​ಗೆ ಎಂಟ್ರಿ ಕೊಡುವ ಯೋಚನೆ ಇದೆ. ಅದಕ್ಕೆ ಏನಿಲ್ಲವೆಂದರೂ ಇನ್ನೊಂದೆರೆಡು ವರ್ಷ ಬೇಕು. ಮೊದಲು ಕಂಟೆಂಟ್ ಪ್ಲಾನ್ ಆಗಬೇಕು’ ಎನ್ನುತ್ತಾರೆ ರವಿಚಂದ್ರನ್.

ಇಂಥ ಹೊತ್ತಲ್ಲಿ ಆಚರಣೆ ಬೇಡ

‘ಈ ಬಾರಿ ಆಗಲ್ಲ. ಬರಬೇಡಿ ಅಂತ ಹೇಳಿಬಿಟ್ಟಿದ್ದೀನಿ ...’ ರವಿಚಂದ್ರನ್ ಈ ರೀತಿ ಹೇಳಿರುವುದು ತಮ್ಮ ಅಭಿಮಾನಿಗಳಿಗೆ. ಅವರ ಹುಟ್ಟುಹಬ್ಬ ಎಂದರೆ, ಜನ ದೂರದೂರಿನಿಂದ ಹುಡುಕಿಕೊಂಡು ಬರುವುದು, ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಿವುದು ... ಇವೆಲ್ಲವೂ ಸಹಜವೇ. ಆದರೆ, ಈ ಬಾರಿಯ ತಮ್ಮ ಹುಟ್ಟುಹಬ್ಬವನ್ನು ಕ್ಯಾನ್ಸಲ್ ಮಾಡಿದ್ದಾರೆ ಅವರು. ‘ಈ ವಾತಾವರಣದಲ್ಲಿ ಹುಟ್ಟುಹಬ್ಬ ಸಾಧ್ಯವಿಲ್ಲ. ಸರ್ಕಾರದ ನಿಯಮಗಳನ್ನು ಫಾಲೋ ಮಾಡಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗಾಗಿ ಬರಬೇಡಿ ಅಂತ ಹೇಳಿದ್ದೀನಿ. ಮನೆಯಲ್ಲಿ ಸರಳ ಆಚರಣೆ ನಡೆದೇ ನಡೆಯುತ್ತದೆ. ಮುಂದಿನ ವರ್ಷ ಗ್ರಾಂಡ್ ಆಗಿ ಮಾಡುವ ಯೋಚನೆ ಇದೆ. ಏಕೆಂದರೆ, ಈಗ 60ಕ್ಕೆ ಕಾಲಿಟ್ಟಿದ್ದೀನಿ. ಮುಂದಿನ ವರ್ಷ 60 ಕಂಪ್ಲೀಟ್ ಆಗುತ್ತದೆ. ಅಲ್ಲಿಂದ ನನ್ನ ಜೀವನದ ಹೊಸ ಚಾಪ್ಟರ್ ಶುರು’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net