

|ಕಿರಣ್ ಮಾದರಹಳ್ಳಿ ಚಾಮರಾಜನಗರ
‘ನಿನ್ನ ಕೈ ಮುಗಿದು ಕೇಳ್ಕೊತೀನಿ. ಅಭಯಾರಣ್ಯವನ್ನು ಉಳಿಸು. ಪ್ರಾಣಿಗಳನ್ನು ಉಳಿಸು. ಗಂಧದ ಗುಡಿಯನ್ನು ಉಳಿಸು...!’
ಇದು ವರನಟ ಡಾ.ರಾಜ್ಕುಮಾರ್ ಅಭಿನಯದ ‘ಗಂಧದಗುಡಿ’ ಚಿತ್ರದ ಸಂಭಾಷಣೆ. ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅವರ ‘ಗಂಧದಗುಡಿ’ ಸಾಕ್ಷ್ಯಚಿತ್ರಕ್ಕೂ ಬಳಕೆಯಾಗಿತ್ತು. ಒಂದರ್ಥದಲ್ಲಿ ಇದು ಸಿನಿಮಾಗೆ ಮಾತ್ರ ಸೀಮಿತ ವಾಗದ ಡೈಲಾಗ್. ಪರಿಸರ ಸಂರಕ್ಷಣೆ, ವನ್ಯಜೀವಿಗಳ ಉಳಿವಿಗಾಗಿ ಸರ್ವಕಾಲಕ್ಕೂ ಸಲ್ಲಿಕೆಯಾಗುವ ಮಹಾ ಮನವಿ. ಪ್ರತಿ ವರ್ಷ ಮಾರ್ಚ್ 3ರಂದು ಆಚರಣೆ ಮಾಡುವ ವಿಶ್ವ ವನ್ಯಜೀವಿಗಳ ದಿನದ ಎಲ್ಲ ಘೋಷವಾಕ್ಯಗಳ ಅಂತರಾಳ.
ಭೂಮಿಯ ಮೇಲೆ ಜೀವವೈವಿಧ್ಯ ಎಂಬ ಸೊಬಗನ್ನು ಕಾಪಾಡುವ ಏಕೈಕ ಬಗೆಯೇ ವನ್ಯಜೀವಿಗಳ ಸಂರಕ್ಷಣೆ. ಸಸ್ಯ, ಪ್ರಾಣಿ, ಮನುಷ್ಯ ಮೂರರ ಸಮತೋಲನ ವಿದ್ದರೆ ಪರಿಸರ. ಸೃಷ್ಟಿಯ ಶಿಖರವಾಗಿರುವ ಮನುಷ್ಯನಿಂದ ಎಲ್ಲ ಕಡೆ ಹಸ್ತಕ್ಷೇಪ ನಡೆದಿದೆ. ಇದರಿಂದ ಎದುರಾದ ಬಿಕ್ಕಟ್ಟಿನಲ್ಲಿ ವನ್ಯಜೀವಿಗಳು ಸಿಲುಕಿ ಅವನತಿಯ ಅಂಚಿಗೆ ಜಾರಿದ್ದವು. ಆಗ ದೇಶದಲ್ಲಿ ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಜಾರಿಗೆ ಬಂದಿತು. ಈ ಕಾಯ್ದೆ ಜಾರಿಗೆ ಬರುವ ಮೊದಲು ವನ್ಯಜೀವಿಗಳನ್ನು ಬೇಟೆ ಕ್ರೀಡೆಯ ಅರಣ್ಯ ಸಂಪತ್ತು ಎಂದೇ ಪರಿಗಣಿಸಲಾಗಿತ್ತು.
ವನ್ಯಜೀವಿಗಳ ಸಂರಕ್ಷಣೆಗೆ ಕಾಯ್ದೆಯ ಬಲ ಸಿಕ್ಕ ಬಳಿಕ ಕ್ರೀಡಾ ಅಭಯಾರಣ್ಯಗಳು ವನ್ಯಜೀವಿ ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನಗಳಾದವು. ಪ್ರಾಣಿಗಳ ಅಭಿವೃದ್ಧಿ ಯೋಜನೆಗಳು, ಕಾಡಿನ ಸುತ್ತಲಿನ ಜನರ ಶ್ರೇಯೋಭಿವೃದ್ಧಿಗಾಗಿ ಪರಿಸರ ಅಭಿವೃದ್ಧಿ ಯೋಜನೆಗಳು ಪ್ರಾರಂಭವಾದವು. ಹೀಗೆ ಸಂರಕ್ಷಣೆಯ ಹಾದಿಯಲ್ಲಿ ಸಾಗುತ್ತಿರುವ ವನ್ಯಜೀವಿಗಳು ಈಗಲೂ ಸವಾಲುಗಳನ್ನು ಎದುರಿಸುತ್ತಲೇ ಇವೆ. ಇದಕ್ಕೆ ರಾಜ್ಯದಲ್ಲಿ ಭಾಗಶಃ ಅರಣ್ಯ ಪ್ರದೇಶವನ್ನು ಹೊಂದಿರುವ ಚಾಮರಾಜನಗರ ಜಿಲ್ಲೆ ಉದಾಹರಣೆಯಾಗಿದೆ. ಜಿಲ್ಲೆ ಬಂಡೀಪುರ ಮತ್ತು ಬಿಆರ್ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳು, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳ ಬೀಡಾಗಿದೆ. ಜತೆಗೆ ಸಮಸ್ಯೆ, ಸಂಘರ್ಷದ ನೆಲೆಯೂ ಆಗಿದೆ.
ವನ್ಯಜೀವಿಗಳ ಸಂರಕ್ಷಣೆಗೆ ಕಳ್ಳಬೇಟೆ ದೊಡ್ಡ ತಲೆನೋವಾಗಿದೆ. ಮಾಂಸ ಮಾರಾಟದ ಉದ್ದೇಶದಿಂದ ವನ್ಯಜೀವಿಗಳನ್ನು ಬೇಟೆಯಾಡುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮೂಢನಂಬಿಕೆಯಿಂದಾಗಿ ಗೂಬೆ, ನಕ್ಷತ್ರ ಆಮೆಗಳ ಸಾಗಣೆಯೂ ನಡೆಯುತ್ತಿದೆ. ಈ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅರಣ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಬಿಆರ್ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿಧಾಮ, ಕಾವೇರಿ ವನ್ಯಜೀವಿಧಾಮಗಳಲ್ಲಿ ಒಟ್ಟು 691 ಅರಣ್ಯ ಮೊಕದ್ದಮೆ ಪ್ರಕರಣಗಳು ಬಾಕಿ ಉಳಿದಿವೆ. 2023ರಲ್ಲಿ ಬಂಡೀಪುರದಲ್ಲಿ ಕಡವೆ ಬೇಟೆಗೆ ಇಳಿದಿದ್ದ ಗುಂಪಿನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಭೀಮನಬೀಡು ಗ್ರಾಮದ ಮನು (26) ಮೃತಪಟ್ಟಿದ್ದನು.
ರಾಜ್ಯದ ಕಾಡು ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ಅರಣ್ಯ ಇಲಾಖೆಯ ಪಾತ್ರ ದೊಡ್ಡದು. ಇದಕ್ಕಾಗಿ ಬಲಿದಾನಗಳೇ ನಡೆದು ಹೋಗಿವೆ. ರಾಜ್ಯದ ಕಾಡು ಗಳ ರಕ್ಷಣೆಗಾಗಿ ಕಳೆದ 58 ವರ್ಷಗಳಲ್ಲಿ 61 ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪ್ರಾಣತ್ಯಾಗ ಮಾಡಿದ್ದಾರೆ.
ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ 1973ರ ಮಾರ್ಚ್ 3ರಂದು ಸಹಿ ಹಾಕಲಾಯಿತು. ಇದರ ನೆನಪಿಗಾಗಿ 2013ರಲ್ಲಿ ವಿಶ್ವಸಂಸ್ಥೆಯಲ್ಲಿ ಮಾರ್ಚ್ 3 ರಂದು ವಿಶ್ವ ವನ್ಯಜೀವಿಗಳ ದಿನವನ್ನಾಗಿ ಆಚರಿಸಲು ಘೋಷಣೆ ಮಾಡಲಾಯಿತು.
ಕೇರಳ-ತಮಿಳುನಾಡು ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಗಡಿ ಅಥವಾ ಭಾಷಾ ವಿವಾದವಿಲ್ಲ. ಮಾನವ-ಪ್ರಾಣಿ ಸಂಘರ್ಷವಿದೆ. ಈ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಸೋಲಾರ್ ತಂತಿ ಬೇಲಿ, ತೂಗುಬೇಲಿ, ಕಂದಕ, ರೈಲು ಕಂಬಿ ಅಳವಡಿಕೆ, ಗಸ್ತು ಇನ್ನಿತರ ಕ್ರಮ ಕೈಗೊಂಡರೂ ಮಾನವ-ಪ್ರಾಣಿ ಸಂಘರ್ಷ ನಿಲ್ಲುತ್ತಿಲ್ಲ. ಕಾಡಿನಿಂದ ಜಮೀನಿಗೆ ಬಂದು ಬೆಳೆಹಾನಿ ಮಾಡುವ ಕಾಡುಪ್ರಾಣಿಗಳ ಹಾವಳಿ ತಡೆಯಲು ಬೇಲಿಗೆ ವಿದ್ಯುತ್ ಹರಿಸುತ್ತಿರುವವರಿಂದ ವನ್ಯಜೀವಿಗಳು ಪ್ರಾಣ ಕಳೆದುಕೊಳ್ಳುತ್ತಿವೆ.
ಅರಣ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2023ರಲ್ಲಿ ಬಿಆರ್ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಲಕ್ಷ್ಮೀಪುರದ ಜಮೀನಿನಲ್ಲಿ ಅಕ್ರಮ ವಿದ್ಯುತ್ ಸ್ಪರ್ಶದಿಂದ ಗಂಡು ಜಿಂಕೆ ಮೃತಪಟ್ಟಿತ್ತು. 2024ರಲ್ಲಿ ಕಾವೇರಿ ವನ್ಯಜೀವಿ ವಿಭಾಗದ ಕೊತ್ತನೂರಿನಲ್ಲಿ ಗಂಡಾನೆ, ಸಂಗಮದಲ್ಲಿ ಗಂಡಾನೆ ವಿದ್ಯುತ್ ಸ್ಪರ್ಶದಿಂದ ಸತ್ತಿದ್ದವು.
ಮಲೆ ಮಹದೇಶ್ವರ ವನ್ಯಜೀವಿಧಾಮದ ಕಾಡಿನಿಂದ ನಾಡಿಗೆ ಬಂದಿದ್ದಾಗ ಬೀದಿ ನಾಯಿಗಳ ದಾಳಿಗೆ 8 ಜಿಂಕೆಗಳು ಮೃತಪಟ್ಟಿದ್ದವು. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹೆಣ್ಣು ಚಿರತೆ ವಿದ್ಯುತ್ ಸ್ಪರ್ಶದಿಂದ ಸತ್ತಿತ್ತು. ಪ್ರಾಣಿಗಳ ಅಸ್ವಾಭಾವಿಕ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇನ್ನು ವನ್ಯಪ್ರಾಣಿಗಳ ದಾಳಿಯಿಂದ ಮನುಷ್ಯರೂ ಪ್ರಾಣ ಕಳೆದುಕೊಂಡಿದ್ದಾರೆ. ಬಂಡೀಪುರ ಹುಲಿ ಕಾಡು ವ್ಯಾಪ್ತಿಯಲ್ಲಿ 2023ರ ಜೂನ್ 1ರಿಂದ 2025ರ ಫೆಬ್ರವರಿ 13ರವರೆಗೆ 8 ಜನರು ಮೃತಪಟ್ಟಿದ್ದಾರೆ. ಬಿಆರ್ಟಿ ಹುಲಿ ಕಾಡು, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ 2023ರ ಜುಲೈ 9ರಿಂದ 2024ರ ಡಿಸೆಂಬರ್ 14ರವರೆಗೆ 14 ಜನರು ಆನೆಗಳ ದಾಳಿಗೆ ಬಲಿಯಾಗಿದ್ದಾರೆ. ಅಲ್ಲದೆ ಗಾಯಗೊಂಡಿರುವ ಪ್ರಕರಣಗಳು ಮತ್ತು ಬೆಳೆಹಾನಿಯೂ ವರದಿಯಾಗಿದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ 1036 ಚದರ ಕಿ.ಮೀ. ವಿಸ್ತೀರ್ಣವಿದೆ. ಓಂಕಾರ್, ಮೊಳೆಯೂರು ವಲಯದಲ್ಲಿ ಒತ್ತುವರಿ ಸಮಸ್ಯೆ ಇದೆ. ಅರಣ್ಯ ಅತಿಕ್ರಮಣದಿಂದ ಕಾಡಿನ ಜಾಗ ಕಡಿಮೆಯಾಗುತ್ತಿದೆ. ಆಗ ಪ್ರಾಣಿಗಳು ಕಾಡಿನಿಂದ ಹೊರಗೆ ಬರುತ್ತವೆ. ವನ್ಯಜೀವಿಗಳು ನಮ್ಮ ಜೀವನದ ಭಾಗ. ಇವುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಒತ್ತುವರಿ ತೆರವು, ವನ್ಯಜೀವಿಗಳ ಸೆರೆ ಹಿಡಿಯುವ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರದ ಅಗತ್ಯವಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ ಪ್ರಭಾಕರನ್ ತಿಳಿಸಿದ್ದಾರೆ.
ಕಾಡುಗಳಲ್ಲಿ ಸ್ವಾಭಾವಿಕವಾಗಿ ಕಾಳ್ಗಿಚ್ಚು ಉಂಟಾಗಿ ಅರಣ್ಯ ಸುಟ್ಟು ಹೋಗುವುದಕ್ಕಿಂತಲೂ ದ್ವೇಷದ ಕಾರಣಕ್ಕೆ ಮಾನವ ನಿರ್ವಿುತ ಕಾಳ್ಗಿಚ್ಚು ಕಾಣಿಸಿಕೊಳ್ಳುವುದೇ ಹೆಚ್ಚು. ವನ್ಯಸಂಪತ್ತಿನ ಮಹತ್ವ ಅರಿಯದ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವುದರಿಂದ ಅರಣ್ಯ ಆಹುತಿಯಾಗುತ್ತಿದೆ. ಇದರಿಂದ ವನ್ಯಜೀವಿಗಳ ಆಹಾರ, ಆಶ್ರಯ ನಾಶವಾಗುತ್ತಿದೆ. ಆವಾಸದಲ್ಲಿರುವ ಪ್ರಾಣಿಗಳು ಪ್ರಾಣಭಯದಿಂದ ವಿವಿಧ ದಿಕ್ಕುಗಳಲ್ಲಿ ಚೆಲ್ಲಾಪಿಲ್ಲಿಯಾಗುತ್ತಿವೆ. ಇದು ನಿರ್ದಿಷ್ಟ ಪ್ರದೇಶದಲ್ಲಿ ಪ್ರಾಣಿ ಸಂತತಿಯ ಆವಾಸ ಸ್ಥಳದ ಬದಲಾವಣೆಗೆ ಕಾರಣವಾಗುತ್ತಿದೆ. ಬೇಸಿಗೆ ಕಾಲ ಅರಂಭಕ್ಕೂ ಮೊದಲೇ ಅರಣ್ಯ ಇಲಾಖೆ ಬೆಂಕಿ ರೇಖೆ ನಿರ್ಮಾಣ ಮಾಡಿ ಅಗ್ನಿ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸುತ್ತದೆ.
ಅಳಿವಿನಂಚಿ ನಲ್ಲಿರುವ ಪ್ರಾಣಿಗಳನ್ನು ಕಾಪಾಡಬೇಕಿದೆ. ಅರಣ್ಯ ಬೆಂಕಿ, ಮಾನವ-ಪ್ರಾಣಿ ಸಂಘರ್ಷದಂಥ ಸಮಸ್ಯೆ, ಸವಾಲುಗಳನ್ನು ತಡೆಯಲು ಸಂರಕ್ಷಣೆಯ ಯೋಜನೆಯಿಂದ ಮಾತ್ರ ಸಾಧ್ಯ. ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯ. | ಟಿ.ಹೀರಾಲಾಲ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ವೃತ್ತ. ವನ್ಯಜೀವಿ ಸಂರಕ್ಷಣೆ ಮಾಡಬೇಕಾದರೆ ಕಾಡು ರಕ್ಷಣೆಯಾಗಬೇಕು. ನಮ್ಮ ನದಿಗಳು ಹುಟ್ಟುವುದೇ ಕಾಡಿನಲ್ಲಿ. ಮಾನವರ ಭವಿಷ್ಯ ನಿರ್ಧಾರವಾಗುವುದೇ ಅರಣ್ಯದಿಂದ. ಅದಕ್ಕಾಗಿಯೇ ‘ಗಂಧದಗುಡಿ’ ಚಿತ್ರದ ಕಾವಲುಗಾರ ಗೀತೆಯಲ್ಲಿ ‘ಕಾಡು ಕಾಯುವ ಅರಣ್ಯ ಸಿಬ್ಬಂದಿ ನಮ್ಮ ನಾಳೆಗಳನ್ನೂ ಕಾಯುತ್ತಿದ್ದಾರೆ’ ಎಂದು ಹೇಳಿದ್ದೇವೆ. | ಅಮೋಘವರ್ಷ ಗಂಧದಗುಡಿ ಸಾಕ್ಷ್ಯಚಿತ್ರದ ನಿರ್ದೇಶಕ.