

ಅದು 2022ರ ಡಿಸೆಂಬರ್ 18, ಸ್ಥಳ ಕರ್ನಾಟಕ ವಿಧಾನಸಭೆ, ಗೊಂದಲಮಯ ವಾತಾವರಣ. ಅಂದು ಅಲ್ಲಿ ಏನಾಗುತ್ತಿತ್ತು? ಅಂದು ವಿಧಾನಸಭೆಯ ಸೆಂಟ್ರಲ್ ಹಾಲ್ನಲ್ಲಿ ಅದಾಗಲೇ ಇದ್ದ ಗಾಂಧೀಜಿ, ನೆಹರು, ಅಂಬೇಡ್ಕರ್, ಸುಭಾಷ್ಚಂದ್ರ ಬೋಸ್ ಮುಂತಾದ ರಾಷ್ಟ್ರೀಯ ನಾಯಕರ ಭಾವಚಿತ್ರಗಳ ನಡುವೆ ವೀರ ಸಾವರ್ಕರ್ ಅವರ ಭಾವಚಿತ್ರವನ್ನೂ ಅನಾವರಣಗೊಳಿಸಲಾಯಿತು. ಬಿಜೆಪಿ ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷವಾದ ಕಾಂಗ್ರೆಸ್ ವಿರೋಧಿಸಿತು.
ಹಿಂದೆ ರಾಷ್ಟ್ರದ ಸಂಸತ್ನಲ್ಲೂ ಇಂತಹದೇ ಪ್ರಕರಣ ಜರುಗಿತ್ತು. ವೀರ ಸಾವರ್ಕರ್ ಅವರ ಜನ್ಮದ 120ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 2003ರ ಮೇ 28ರಂದು ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಪಾರ್ಲಿಮೆಂಟ್ನ ಸೆಂಟ್ರಲ್ ಹಾಲ್ನಲ್ಲಿ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಬಿಜೆಪಿ ಮುಂದಾಳತ್ವದ ಎನ್ಡಿಎ ಸರ್ಕಾರದ ಆ ನಡೆಯನ್ನೂ ಅಂದು ವಿರೋಧಪಕ್ಷವಾಗಿದ್ದ ಕಾಂಗ್ರೆಸ್ ವಿರೋಧಿಸಿತ್ತು. ಆ ಪಕ್ಷದ ನಡೆ ಮಹಾನ್ ನಾಯಕಿ ಇಂದಿರಾ ಗಾಂಧಿಯವರು ಕೇವಲ 20 ವರ್ಷಗಳ ಹಿಂದೆ ಪ್ರದರ್ಶಿಸಿದ್ದ ನಡೆಗೆ ಸಂಪೂರ್ಣ ವಿರುದ್ಧವಾಗಿತ್ತು. 1983ರ ಮೇ 28ರಂದು ಸಾವರ್ಕರ್ ಅವರ ಜನ್ಮಶತಮಾನೋತ್ಸವದಂದು ಅವರ ಭಾವಚಿತ್ರವಿದ್ದ ಅಂಚೆಚೀಟಿಯನ್ನು ಇಂದಿರಾ ಸರ್ಕಾರ ಹೊರಡಿಸಿತ್ತು.
ಅಂದಿಗೂ ಇಂದಿಗೂ ಆದ ವ್ಯತ್ಯಾಸವಾದರೂ ಏನು? ಅದು ಬಹು ದೊಡ್ಡದೇ. 1983ರಲ್ಲಿ ಇಂದಿರಾ ಗಾಂಧಿ ಕಾಂಗ್ರೆಸ್ ನಾಯಕಿ ಆಗಿದ್ದರು, 2003ರಲ್ಲಿ ಆ ನಾಯಕತ್ವ ಸೋನಿಯಾ ಗಾಂಧಿಯವರ ಕೈಗೆ ಬಂದಿತ್ತು, ಮತ್ತೆರಡು ದಶಕಗಳು ಉರುಳುವ ಹೊತ್ತಿಗೆ ಆ ಪಕ್ಷದ ನೇತಾರ ರಾಹುಲ್ ಗಾಂಧಿ ‘ನಾನು ಗಾಂಧಿ. ಸಾವರ್ಕರ್ ಅಲ್ಲ. ನಾನು ಕ್ಷಮಾಪಣೆ ಕೇಳುವುದಿಲ್ಲ’ ಎಂದು ಸಾರ್ವಜನಿಕವಾಗಿ ಹೇಳತೊಡಗಿದ್ದರು. ರಾಹುಲ್ ಗಾಂಧಿ ಸಾವರ್ಕರ್ ಅಲ್ಲ, ಆಗಲು ಸಾಧ್ಯವೇ ಇಲ್ಲ. ಅವರು ಅದಾಗಲೇ ಸವೋಚ್ಚ ನ್ಯಾಯಾಲಯದಲ್ಲಿ ಕ್ಷಮಾಪಣೆ ಕೇಳಿಯಾಗಿದೆ. ಇಷ್ಟಾಗಿಯೂ, ರಾಹುಲ್ ಉಲ್ಲೇಖಿಸಿದ ‘ಕ್ಷಮಾಪಣೆ’ಯ ಸತ್ಯವೇನು? ಇದಕ್ಕೆ ಉತ್ತರ ನೀಡುವ ಪ್ರಯತ್ನ ವೀರ ಸಾವರ್ಕರ್ ಅವರ ಜನ್ಮದ 142ನೇ ವಾರ್ಷಿಕೋತ್ಸವದಂದು ‘ಜಗದಗಲ’ದ ವಸ್ತುವಿಷಯ.
1883ರ ಮೇ 28ರಂದು ಮಹಾರಾಷ್ಟ್ರದ ನಾಸಿಕ್ ಬಳಿಯ ಭಾಗೂರ್ ಗ್ರಾಮದಲ್ಲಿ ದಾಮೋದರ ಮತ್ತು ರಾಧಾಬಾಯಿ ಸಾವರ್ಕರ್ ದಂಪತಿಯ ಮೂರು ಗಂಡು ಮತ್ತು ಒಂದು ಹೆಣ್ಣು ಸಂತಾನಗಳಲ್ಲಿ ಒಬ್ಬರಾಗಿ ಜನಿಸಿ, ವಯಸ್ಸಿನ ಒಂಬತ್ತರಲ್ಲಿ ತಾಯಿಯನ್ನೂ, ಹನ್ನೆರಡರಲ್ಲಿ ತಂದೆಯನ್ನೂ ಕಳೆದುಕೊಂಡು, ಅವೆರಡು ದುರಂತಗಳ ನಡುವಿನ ವಯೋಮಾನದಲ್ಲಿ ಸಾರ್ವಜನಿಕ ಬದುಕಿಗೆ ಪ್ರವೇಶಿಸಿ; ಇಪ್ಪತ್ತರ ಹೊತ್ತಿಗೆ ಸ್ವಾತಂತ್ರ್ಯ ಆಂದೋಲನಕ್ಕೆ ಧುಮುಕಿದರು. ಕಾಂಗ್ರೆಸ್ನ ಉಗ್ರಗಾಮಿ ನೇತಾರ ಬಾಲಗಂಗಾಧರ ತಿಲಕರ ಪ್ರಭಾವದಲ್ಲಿ ಹೆಜ್ಜೆಹಾಕುತ್ತ, ಇಟಲಿಯ ಮಹಾನ್ ಏಕೀಕರಣವಾದಿ ಕ್ರಾಂತಿನಾಯಕ ಗ್ಯೂಸೆಪ್ಪೆ ಮ್ಯಾಜಿನಿಯವರಲ್ಲಿ ತಮ್ಮ ಸ್ವಾತಂತ್ರಾ್ಯಂದೋಲನದ ಸ್ವರೂಪವನ್ನು ಕಂಡುಕೊಂಡರು. ವಿನಾಯಕ ದಾಮೋದರ ಸಾವರ್ಕರ್ ಅವರ ಬದುಕು, ಚಿಂತನೆ ಹಾಗೂ ಹೋರಾಟಗಳ ಎಲ್ಲ ಮಜಲುಗಳು ಮತ್ತು ಆಯಾಮಗಳ ಚಿತ್ರಣವನ್ನೂ ಈ ಒಂದು ಲೇಖನದಲ್ಲಿ ತುರುಕಲು ಹೋದರೆ ಯಾವುದಕ್ಕೂ ನ್ಯಾಯ ಒದಗಿಸಲಾಗದು.
ಹೀಗಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಹಿಡಿದ ಹೊಸ ಮಾರ್ಗವೇನು, ಅದನ್ನು ಬ್ರಿಟಿಷ್ ವಸಾಹತುಶಾಹಿ ಆಡಳಿತ ನೋಡಿದ ಬಗೆಯೇನು, ಅದರಿಂದಾಗಿ ಕ್ಷಮೆಕೋರಿಕೆಯ ‘ಆಪಾದನೆ’ ಅವರಿಗೆ ಹೇಗೆ ಅಂಟಿಕೊಂಡಿತು ಎಂಬ ವಿಷಯಗಳಿಗಷ್ಟೇ ವಿಶ್ಲೇಷಣೆಯನ್ನು ಸೀಮಿತಗೊಳಿಸುತ್ತೇನೆ. ತಮ್ಮ ಗ್ರೇಟ್ ಬ್ರಿಟನ್ ದ್ವೀಪಕ್ಕಿಂತ ಇಪ್ಪತ್ತೆರಡು ಪಟ್ಟು ವಿಶಾಲವಾದ ಭಾರತೀಯ ಉಪಖಂಡದಲ್ಲಿ ವಸಾಹತುಶಾಹಿ ಲೂಟಿಗಾರರಾಗಿ ಪಟ್ಟಾಗಿ ತಳವೂರಿದ ಬ್ರಿಟಿಷರು ಇಲ್ಲಿ ಹೆದರುತ್ತಿದ್ದುದು ಭಾರತೀಯರಿಗಲ್ಲ. ಅವರನ್ನು ಸದಾ ಭಯದಲ್ಲಿ ತೊಳಲಿಸುತ್ತಿದ್ದುದು ಭಾರತೀಯರ ಕೈಗೆ ಸೇರಬಹುದಾದ ಆಯುಧಗಳ ಬಗ್ಗೆ ಮತ್ತು ಅವೆಲ್ಲವನ್ನೂ ಏಕಕಾಲದಲ್ಲಿ ಒಟ್ಟಿಗೆ ಬಳಸುವ ನಿರ್ಧಾರವನ್ನು ಭಾರತೀಯರು ಬೆಳೆಸಿಕೊಳ್ಳಬಹುದಾದ ಸಾಧ್ಯತೆಯ ಬಗ್ಗೆ. ಅಂತಹದೊಂದು ಸಾಧ್ಯತೆಯನ್ನು ಅವರು ಕಂಡದ್ದು 1857-58ರಲ್ಲಿ.
ಅಲ್ಲಿಯವರೆಗೆ ಬ್ರಿಟಿಷರು ಈ ದೇಶವನ್ನು ಆಕ್ರಮಿಸಿಕೊಂಡದ್ದು ಮತ್ತು ಆಳುತ್ತಿದ್ದುದು ಭಾರತೀಯರ ಸಹಕಾರದಿಂದಲೇ. ಆಡಳಿತಾಂಗ ಮತ್ತು ಸೇನೆಯಲ್ಲಿದ್ದ ಉನ್ನತ ಹಾಗೂ ಮಧ್ಯಮ ಹಂತದ ಅಧಿಕಾರವರ್ಗದಲ್ಲಿನ ಒಟ್ಟು ಬ್ರಿಟಿಷರ ಸಂಖ್ಯೆ 30,000ವನ್ನು ದಾಟಿರಲೇ ಇಲ್ಲ. ಅವರ ಕೈಕೆಳಗಿದ್ದ ಸಹಸ್ರಗಟ್ಟಲೆ ಭಾರತೀಯ ಸರ್ಕಾರಿ ನೌಕರರು, ಪೊಲೀಸರು ಮತ್ತು ಲಕ್ಷಗಟ್ಟಲೆ ಭಾರತೀಯ ಸೈನಿಕರು ಇಲ್ಲಿ ಕಂಪನಿ ಆಡಳಿತದ ಪ್ರಮುಖ ಶಕ್ತಿಯಾಗಿದ್ದರು. ಆದರೆ ಈ ಭಾರತೀಯರಲ್ಲಿ ಸಾಕಷ್ಟು ಜನ 1857-58ರಲ್ಲಿ ಕಂಪನಿ ಆಡಳಿತದ ವಿರುದ್ಧ ಆಯುಧಗಳನ್ನೆತ್ತಿಕೊಂಡಾಗ ಬ್ರಿಟನ್ ಮತ್ತು ಪೂರ್ವ ಆಫ್ರಿಕಾಗಳಿಂದ ತರಾತುರಿಯಲ್ಲಿ ಸೇನೆಗಳನ್ನು ಕರೆಸುವ ಅನಿವಾರ್ಯತೆಗೆ ವಸಾಹತುಶಾಹಿ ಆಡಳಿತ ಒಳಗಾಯಿತು. ಕೊನೆಗೆ ಅದು ಭಾರತೀಯರ ಶಸ್ತ್ರಸಜ್ಜಿತ ಹೋರಾಟವನ್ನು ದಮನಗೈದದ್ದು ಹೊರಗಿನಿಂದ ಕರೆಸಿಕೊಂಡ ಸೈನಿಕರು ಹಾಗೂ ಸೇನಾಧಿಕಾರಿಗಳಿಂದಲೇ. ಅವರು ತ್ವರಿತವಾಗಿ ಈ ದೇಶ ತಲುಪುವುದಕ್ಕೆ ಅಡಚಣೆಯಾಗಿದ್ದಿದ್ದರೆ ಇಲ್ಲಿ ಬ್ರಿಟಿಷ್ ಆಡಳಿತ ಮುಂದುವರಿಯುವ ಸಾಧ್ಯತೆ ಕ್ಷೀಣವಾಗಿತ್ತು.
ಇದು ಕಂಪನಿ ಆಡಳಿತ ಕಂಡ ದುಃಸ್ವಪ್ನ. ತದನಂತರ ಭಾರತದ ಮೇಲಿನ ‘ಅಧಿಕಾರ’ವನ್ನು ಕಂಪನಿಯಿಂದ ತನ್ನ ಕೈಗೆ ತೆಗೆದುಕೊಂಡ ಬ್ರಿಟಿಷ್ ವಸಾಹತುಶಾಹಿ ಮತ್ತದರ ಸರ್ಕಾರ ಆ ದುಃಸ್ವಪ್ನವನ್ನೂ ತನ್ನದಾಗಿಸಿಕೊಂಡಿತು. ಭಾರತೀಯರು ಮತ್ತೊಮ್ಮೆ ಒಟ್ಟಿಗೆ ಶಸ್ತ್ರವೆತ್ತುವುದನ್ನು ಶತಾಯಗತಾಯ ತಡೆಯುವುದು ಲಂಡನ್ ಸರ್ಕಾರದ ದೃಢಸಂಕಲ್ಪವಾಯಿತು. ಅದನ್ನು ಸಾಧಿಸಲು ಬ್ರಿಟಿಷ್ ಆಡಳಿತ ಹುಡುಕಿಕೊಂಡ ಮಾರ್ಗಗಳು ಮುಖ್ಯವಾಗಿ ಎರಡು- 1857-58ರ ಪ್ರಕರಣಗಳು ಭಾರತೀಯರ ಮುಂದಿನ ಪೀಳಿಗೆಗಳಿಗೆ ಎಂದೂ ಸ್ಪೂರ್ತಿದಾಯಕವಾಗಕೂಡದು ಮತ್ತು ಭಾರತೀಯರು ತಮ್ಮ ರಾಜಕೀಯದ ಆಶೋತ್ತರಗಳನ್ನು ಶಾಂತ ವಿಧಾನದಲ್ಲೇ ವ್ಯಕ್ತಪಡಿಸುವಂತಾಗಬೇಕು. ಆ ಪ್ರಕಾರ 1857-58ರ ಸಂಗ್ರಾಮವನ್ನು ‘ಸಿಪಾಯಿ ದಂಗೆ’ ಎಂದು ಕರೆಯಲಾಯಿತು. ಇದರ ಉದ್ದೇಶ ಆ ಸಂಗ್ರಾಮ ಭಾರತೀಯರು ಒಟ್ಟುಗೂಡಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವಲ್ಲ, ಬದಲಿಗೆ ಅದು ಬ್ರಿಟಿಷ್ ಸರ್ಕಾರದ ಸೇವೆಯಲ್ಲಿದ್ದ ಕೆಲ ಭಾರತೀಯ ಸೈನಿಕರು ದಂಗೆಯೆದ್ದದ್ದಷ್ಟೇ ಎಂದು ಭಾರತೀಯರಷ್ಟೇ ಅಲ್ಲ ಜಗತ್ತನ್ನೂ ನಂಬಿಸುವುದಾಗಿತ್ತು.
ಭಾರತೀಯರ ಶಾಂತಿಯುತ ರಾಜಕೀಯ ಅಭಿವ್ಯಕ್ತಿ ಬಗೆಗಿನ ಬ್ರಿಟಿಷರ ಯೋಜನೆ ಸ್ಪಷ್ಟವಾಗಿ ಕಾಣತೊಡಗಿದ್ದು 1880ರ ದಶಕದಲ್ಲಿ. 1857-58ರ ಸಮಯದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಸೇವೆಯಲ್ಲಿದ್ದ ಆಲನ್ ಅಕ್ಟೇವಿಯಸ್ ಹ್ಯೂಮ್ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಅನ್ನು ಸ್ಥಾಪಿಸಿದ್ದು ಗಂಭೀರ ಅಧ್ಯಯನಯೋಗ್ಯ ಪ್ರಕರಣ. ಡಿಸೆಂಬರ್ 28-30ರಂದು ಬಾಂಬೆಯಲ್ಲಿ ಕಾಂಗ್ರೆಸ್ನ ಮೊದಲ ಅಧಿವೇಶನ ನಡೆದಾಗ ಅಲ್ಲಿದ್ದ 72 ಜನರಲ್ಲಿ ಬಹುತೇಕರು ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಸೇವೆಯಲ್ಲಿದ್ದು ಸಹ ಭಾರತೀಯರ ದಮನಕ್ಕೆ ನೆರವಾಗಿದ್ದ ಭಾರತೀಯ ‘ಬಾಬು’ಗಳೇ. ಇದರ ಜತೆಗೆ ಕಾಂಗ್ರೆಸ್ನ್ನು ಸ್ಥಾಪಿಸಲು ತಮಗೆ ಯಾರು ಸೂಚಿಸಿದರು ಎಂದು ಹ್ಯೂಮ್ ಹೇಳುವ ಕಥೆ ಇನ್ನೂ ಸ್ವಾರಸ್ಯಕರ. ಭಾರತೀಯರು ತಮ್ಮ ರಾಜಕೀಯ ಆಶೋತ್ತರಗಳನ್ನು ಶಾಂತಿಯುತವಾಗಿ ಬ್ರಿಟಿಷ್ ಸರ್ಕಾರದ ಮುಂದಿಡಲು ವೇದಿಕೆಯೊಂದನ್ನು ಸೃಷ್ಟಿಸಲು ತಮಗೆ ಹೇಳಿದ್ದು ಒಬ್ಬರು ‘ಹಿಮಾಲಯದ ಮಹಾತ್ಮರು’, ದೇಶಕಾಲಗಳ ಪರಿಧಿಯೊಳಗೆ ಸಿಲುಕದೆ, ಬೇಕಾದಾಗ ಬೇಕಾದಲ್ಲಿ ಪ್ರತ್ಯಕ್ಷರಾಗಬಲ್ಲ, ನೂರಾರು ವರ್ಷ ಬದುಕಬಲ್ಲ ಆ ಮಹಾತ್ಮರನ್ನು ತಮಗೆ ಪರಿಚಯಿಸಿದ್ದು ಥಿಯಸಾಫಿಕಲ್ ಸೊಸೈಟಿಯ ಅನಿ ಬೆಸೆಂಟ್ ಎಂದು ಹ್ಯೂಮ್ ಹೇಳುತ್ತಾರೆ!
ಹಿಮಾಲಯದಲ್ಲಿ ಕಾಲಾತೀತ ಮಹಾತ್ಮರು ಇರುವುದು ನಿಜ, ಅದನ್ನು ಭಾರತೀಯರು ನಂಬುವುದೂ ನಿಜ. ಹೀಗಾಗಿ ಕಾಂಗ್ರೆಸ್ನ್ನು ಭಾರತೀಯರಿಗೆ ಪ್ರೀತ್ಯಾದರ ಉಂಟಾಗುವಂತೆ ಮಾಡಲು ‘ಹಿಮಾಲಯದ ದೇಶಕಾಲಾತೀತ ಮಹಾತ್ಮರ ಕಥೆ’ಗಿಂತ ಉತ್ತಮ ಗಾಳ ಹ್ಯೂಮ್ಗೆ ಬೇರೇನು ಸಿಗಲು ಸಾಧ್ಯ? ‘ನಿಮ್ಮ ಹಿಮಾಲಯದ ಮಹಾತ್ಮರನ್ನು ತೋರಿಸಿ’ ಎಂದು ವೈಸ್ರಾಯ್ ಲಾರ್ಡ್ಡಫರಿನ್ ಕೇಳಿದರಂತೆ, ಆದರೆ ಹಾಗೆ ಮಾಡಲಾಗದೇ ಹೋದ ಹ್ಯೂಮ್ ‘ಹಿಮಾಲಯದ ಮಹಾತ್ಮರು ನಾನು ಬೇಕೆಂದಾಗ ಕಾಣಿಸಿಕೊಳ್ಳದ ಕಾರಣ ನನ್ನ ಮಿತ್ರರು ನನ್ನನ್ನು ಸುಳ್ಳುಗಾರ ಎಂದು ತಿಳಿಯುವಂತಾಗಿದೆ’ ಎಂದು ಅಲವತ್ತುಕೊಂಡದ್ದಿದೆ! ಇರಲಿ, ಮುಖ್ಯ ವಿಷಯಕ್ಕೆ ಬರೋಣ. ಬ್ರಿಟಿಷರ ‘ಸಿಪಾಯಿ ದಂಗೆ’ ಸುಳ್ಳು ಮತ್ತು ‘ಭಾರತೀಯರ ಶಾಂತಿಯುತ ರಾಜಕೀಯ ವೇದಿಕೆ’ಯ ಪ್ರಹಸನಗಳೆರಡಕ್ಕೂ ಕೊಡಲಿಯೇಟು ಹಾಕಿದ್ದು ಸಾವರ್ಕರ್! ಹೀಗಾಗಿ ಅವರು ಏಕಕಾಲಕ್ಕೆ ಬ್ರಿಟಿಷರಿಗೂ, ಕಾಂಗ್ರೆಸ್ಗೂ ವಿರೋಧಿಯಾದರು.
ಸ್ವಾತಂತ್ರಾ್ಯಂದೋಲನದ ಕುರಿತಾಗಿ ಸಮಾ ಲೋಚನೆ ನಡೆಸಲು ಅಣ್ಣ ಗಣೇಶ ಸಾವರ್ಕರ್ ಜತೆಗೂಡಿ 1903ರಲ್ಲಿ ಫರ್ಗ್ಯೂಸನ್ ಕಾಲೇಜ್ನಲ್ಲಿ ‘ಮಿತ್ರಮೇಲಾ’ ಎಂಬ ರಹಸ್ಯ ಕೂಟವನ್ನು ಕಟ್ಟಿದ ವೀರ ಸಾವರ್ಕರ್ ಅದನ್ನು 1906ರಲ್ಲಿ ಗ್ಯೂಸೆಪ್ಪೆ ಮ್ಯಾಜಿನಿಯ ‘ಯಂಗ್ ಇಟಲಿ’ ಮಾದರಿಯಲ್ಲಿ ‘ಅಭಿನವ ಭಾರತ’ ಎಂಬ ಹಂತಕ್ಕೇರಿಸಿದರು. ಸ್ವಾತಂತ್ರ್ಯಕ್ಕಾಗಿ ಶಸ್ತ್ರಸಜ್ಜಿತ ಹೋರಾಟದ ಹಾದಿ ‘ಅಭಿನವ ಭಾರತ’ದ್ದಾಗಿತ್ತು. ಮ್ಯಾಜಿನಿಯ ಮಾದರಿಯಲ್ಲಿ ತಾವೂ ಕ್ರಾಂತಿಕಾರಕ ಲೇಖನಗಳನ್ನು ಬರೆಯಲು, ಇತರ ಸದಸ್ಯರಿಂದ ಬರೆಸಲು ಸಾವರ್ಕರ್ ಆರಂಭಿಸಿದರು. ಈ ಮನೋಭಾವ ಲಂಡನ್ನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಗ ಹರಳುಗಟ್ಟಿ 1909ರಲ್ಲಿ "Indian War of Independence, 1857' ಕೃತಿಯನ್ನು ರಚಿಸಿದರು. ಗಾಬರಿಗೊಂಡ ಸರ್ಕಾರ ಬಿಡುಗಡೆಯ ಮೊದಲೇ ಆ ಕೃತಿಯನ್ನು ಪ್ರತಿಬಂಧಿಸಿತು. ಇದು ಆ ಕೃತಿಯ ಮಹತ್ತು!
ವೀರ ಸಾವರ್ಕರ್ ತಳೆದ ಶಸ್ತ್ರಸಜ್ಜಿತ ಹೋರಾಟಕ್ಕೆ ಚಾಲನೆ ದೊರೆಯುತ್ತಿದೆ ಎಂಬ ಸೂಚನೆ ಸರ್ಕಾರಕ್ಕೆ ಸಿಕ್ಕಿದ್ದು 1909ರ ಜುಲೈ 1ರಂದು, ಸಾವರ್ಕರ್ ಶಿಷ್ಯ ಮದನ್ಲಾಲ್ ಧಿಂಗ್ರಾ ಲಂಡನ್ನಲ್ಲಿ ಸೆಕ್ರೆಟರಿ ಆಫ್ ಸ್ಟೇಟ್ ಆಫ್ ಇಂಡಿಯಾದ ಸಹಾಯಕ ವಿಲಿಯಂ ವೈಲೀಯವರನ್ನು ಹತ್ಯೆಗೈದಾಗ. ಧಿಂಗ್ರಾ ಬಳಸಿದ ಪಿಸ್ತೂಲ್ ಸಾವರ್ಕರ್ ಒದಗಿಸಿದ್ದು ಎಂದು ತಿಳಿಯುತ್ತಲೇ ಬ್ರಿಟಿಷ್ ಪೊಲೀಸರು ಅವರ ಹಿಂದೆ ಬಿದ್ದರು. ಬಾಂಬ್ ತಯಾರಿಕೆಯ ಮ್ಯಾನ್ಯುಯೆಲ್ಗಳನ್ನು ಸಾವರ್ಕರ್ ಅದಾಗಲೇ ಲಂಡನ್ನಿಂದ ಭಾರತಕ್ಕೆ ಕಳುಹಿಸಿದ್ದರು ಎಂಬ ಮಾಹಿತಿಯೂ ಲಂಡನ್ ಪೊಲೀಸರಿಗೆ ದಕ್ಕಿತ್ತು. 1909ರ ಮಿಂಟೋ-ಮಾರ್ಲೆ ಸುಧಾರಣೆಗಳು ಪ್ರಾಂತೀಯ ಶಾಸನಸಭೆಗಳ ಮುಸ್ಲಿಂ ಸದಸ್ಯರನ್ನು ಮುಸ್ಲಿಂ ಮತದಾರರೇ ಆರಿಸಬೇಕೆಂದು ಹೇಳಿದ್ದನ್ನು ದೇಶದಾದ್ಯಂತ ವಿರೋಧಿಸಲಾಯಿತು. ಆದರೆ ಆ ವಿರೋಧ ಶಸ್ತ್ರಸಜ್ಜಿತವಾಗಿರಬೇಕೆಂದು ವಾದಿಸಿದ್ದು ‘ಅಭಿನವ ಭಾರತ’.
ಅದರಿಂದಾಗಿ ಜಿಲ್ಲಾ ಮ್ಯಾಜಿಸ್ಟ್ರೆಟ್ ಜಾಕ್ಸನ್ ಗಣೇಶ ಸಾವರ್ಕರ್ ಅವರಿಗೆ ಕಾಲಾಪಾನಿ ಶಿಕ್ಷೆ ವಿಧಿಸಿ ಅಂಡಮಾನ್ನ ಸೆಲ್ಯುಲರ್ ಜೈಲಿಗೆ ಕಳಿಸಿದ. ಅದರಿಂದಾಗಿ ಮನನೊಂದ ಅನಂತ ಕಾನ್ಹೇರೆ ಜಾಕ್ಸನ್ನನ್ನೇ ಕೊಂದ. ಅದಕ್ಕಾಗಿ ಬಳಸಿದ ಪಿಸ್ತೂಲನ್ನೂ ವೀರ ಸಾವರ್ಕರ್ ಅವರೇ ಲಂಡನ್ನಿಂದ ಪೂರೈಸಿದ್ದರು ಎನ್ನವುದು ಪೊಲೀಸರ ವಾದವಾಯಿತು. ಮುಂದಿನ ದೊಡ್ಡ ಕಥೆಯನ್ನು ಚಿಕ್ಕದಾಗಿಸಿ ಹೇಳುವುದಾದರೆ, ವಸಾಹತುಶಾಹಿ ಸರ್ಕಾರ 1911ರ ಜುಲೈ 4ರಂದು 28 ವರ್ಷದ ವೀರ ಸಾವರ್ಕರ್ ಅವರಿಗೆ ಎರಡು ಜೀವಾವಧಿಗಳ ಅಂದರೆ 50 ವರ್ಷಗಳ ಕಾಲಾಪಾನಿ ಶಿಕ್ಷೆ ವಿಧಿಸಿ ಅಂಡಮಾನ್ಗೆ ಸಾಗಿಸಿತು. ಸೆಲ್ಯಲರ್ ಜೈಲ್ ಗಾಂಧೀಜಿಯವರನ್ನು ಇರಿಸಲಾಗುತ್ತಿದ್ದ ಆಗಾ ಖಾನ್ ಅರಮನೆಯಂತಿರಲಿಲ್ಲ. ಅಲ್ಲಿನ ಕೋಣೆ ನೈನಿತಾಲ್ನಲ್ಲಿ ನೆಹರು ಅವರಿಗೆ ಸಿಕ್ಕಿದ ಹಲವು ಕಿಟಕಿಗಳುಳ್ಳ ವಿಶಾಲ ಕೋಣೆಯಾಗಿರಲಿಲ್ಲ. ಅದು ಕೇವಲ 11 ಅಡಿ ಉದ್ದ, 7 ಅಡಿ ಅಗಲದ ಕಿಟಕಿಗಳಿಲ್ಲದ ಕತ್ತಲ ಕೋಣೆ.
ಅಲ್ಲೇ ಟಾಯ್ಲೆಟ್ ಕಮೋಡ್ ಸಹ. ಜತೆಗೆ ನೆಹರು ಮತ್ತು ಗಾಂಧಿಯವರಿಗೆ ಸಿಗುತ್ತಿದ್ದ ಹಗಲಿಡೀ ಪ್ರಾಕಾರದೊಳಗೆ ಸುತ್ತಾಡುವ, ಚಹಾ ಸೇವಿಸುವ, ಪತ್ರಿಕೆ ಓದುವ, ಇತರ ಸಮಯದಲ್ಲಿ ಸುಮ್ಮನೆ ಕನಸು ಕಾಣುತ್ತ ಕೂರುವ ಅವಕಾಶ ಸಾವರ್ಕರ್ ಅವರಿಗಿರಲಿಲ್ಲ. ಹಗಲಿಡೀ ಕೈಗಳಿಂದ ಗಾಣ ಚಲಾಯಿಸಿ ಎಣ್ಣೆ ತೆಗೆಯಬೇಕಾಗಿತ್ತು! ಅಲ್ಲಿನ ಸ್ಥಿತಿಯನ್ನು ಅಲ್ಲಿದ್ದ ಕೊನೆಯ ಕೈದಿಗಳಲ್ಲೊಬ್ಬರಾದ ಧೀರಜ್ ಚೌಧರಿ 2021ರಲ್ಲಿ ‘ದ ಗಾರ್ಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಣ್ಣಿಸಿದ್ದು ಈ ನಾಲ್ಕು ಪದಗಳಲ್ಲಿ- "We are forgotten victims!’ ತನಗೆ ಸಹಾಯಕರಾದ ಕಾಂಗ್ರೆಸ್ಸಿಗರಿಗೆ ಬ್ರಿಟಿಷ್ ಆಡಳಿತ ನೀಡಿದ ಸೌಲಭ್ಯಗಳು, ಶಸ್ತ್ರಸಜ್ಜಿತ ಹೋರಾಟಕ್ಕೆ ನಾಂದಿ ಹಾಡಿದ ವೀರ ಸಾವರ್ಕರ್ ಅವರಿಗೆ ನೀಡಿದ ಯಾತನೆ ಈಗ ಸರ್ವವಿದಿತ.
ಅಂತಹ ಸ್ಥಿತಿಯಲ್ಲಿ ಜೀರ್ಣವಾಗಿ ಹೋಗುವುದಕ್ಕಿಂತಲೂ ಕ್ಷಮೆ ಕೇಳಿ ಹೊರಬಂದು ನೇರವಾಗಿ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗಿಯಾಗಲಾಗದಿದ್ದರೂ ಇತರ ದೇಶಾಭಿಮಾನಿಗಳಿಗೆ ಸ್ಪೂರ್ತಿ ನೀಡುತ್ತ ಬದುಕುವುದು ಸೂಕ್ತ ಎಂದು ಸಾವರ್ಕರ್ ತಿಳಿದದ್ದು ತಪ್ಪೇ? ತಮ್ಮ ಆಶಯದಂತೇ ಅವರು ಭಗತ್ ಸಿಂಗ್, ಆಶ್ಪಾಕ್ ಉಲ್ಲಾ ಖಾನ್, ಸುಭಾಷ್ ಚಂದ್ರ ಬೋಸ್ ನೂರಾರು ಶಸ್ತ್ರಸಜ್ಜಿತ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯಾದದ್ದನ್ನು ಇತಿಹಾಸ ದಾಖಲಿಸಿಲ್ಲವೇ? ಗಾಂಧಿ, ನೆಹರುಗಳಿಗೆ ಸಿಕ್ಕಿದ ಸವಲತ್ತುಗಳು ಅವರಿಗೂ ಸಿಕ್ಕಿದ್ದರೆ ಅವರು ಕ್ಷಮಾಪಣೆ ಕೇಳುತ್ತಿದ್ದರೇ? ಕಾಂಗ್ರೆಸ್ಸಿಗರಂತೆ ಬ್ರಿಟಿಷ್ ವಸಾಹತುಶಾಹಿಗಳಿಗೆ ಸಹಾಯಕರಾಗಿ ನಿಲ್ಲದೆ, ಅಧಿಕಾರದ ಸವಿಯನ್ನು ಸವಿಯದೆ ಹೋದ ವೀರ ಸಾವರ್ಕರ್ ಹಿಡಿದ ಹಾದಿ ಸರಿಯೇ ತಪ್ಪೇ ಎಂದು ಅವರ ಜಯಂತಿಯಂದು ನೀವು ತೀರ್ಮಾನಿಸಿ.