ಇಂದು ಸ್ವಾಮಿ ವಿವೇಕಾನಂದ ಜಯಂತಿ; ಪಥದರ್ಶಕ ಪರಿವ್ರಾಜಕ

ವಿಜಯವಾಣಿ (6)
Published on
ಪ್ಯಾರಿಸ್ ನಗರದಲ್ಲಿ ನೆಪೋಲಿಯನ್ನನ ಮೊಮ್ಮಗನನ್ನು ಭೇಟಿ ಮಾಡಿದ ಸ್ವಾಮಿ ವಿವೇಕಾನಂದರು ಅವನನ್ನು ಭಾರತಕ್ಕೆ ಆಹ್ವಾನಿಸಿದರು. ನೆಪೋಲಿಯನ್ನನ ಮಹಾ ಅಭಿಮಾನಿ ಅವರು. ಎಲ್ಲಿಯೇ ಅದ್ಭುತ ಮಹತ್ತು, ಸಾಧನೆ, ವೀರ್ಯ, ಶೌರ್ಯಗಳು ಕಂಡು ಬಂದಲ್ಲಿ ಮುಕ್ತಕಂಠದಿಂದ ಪ್ರಶಂಸಿಸುವ ಸದ್ಗುಣ ಅವರದ್ದು. ತಾನು ಭಾರತಕ್ಕೆ ಬಂದರೆ ಏನು ಪ್ರಯೋಜನ ಎಂದು ನೆಪೋಲಿಯನ್ನನ ಮೊಮ್ಮಗ ಕೇಳಿದ, ‘ನಾಳೆ ಮೃತ್ಯು ನಿನ್ನ ಹತ್ತಿರ ಬಂದಾಗ ಅದರ ಮೀಸೆ ಹಿಡಿದು ಆಟವಾಡುವುದು ಹೇಗೆ ಎಂದು ಹೇಳಿಕೊಡುತ್ತೇನೆ ಬಾ’ ಎಂದುಸುರಿದರು ಸ್ವಾಮೀಜಿ. ‘ಬೇಡ, ನನ್ನ ಆಸಕ್ತಿ ಬೇರೆಡೆಗಿದೆ’ ಎಂದುಬಿಟ್ಟ ಅವನು. ಈ ಒಂದು ಘಟನೆಯಲ್ಲಿ ವಿವೇಕಾನಂದರ ವ್ಯಕ್ತಿತ್ವ ಮತ್ತು ಚಿಂತನೆಗಳೆಲ್ಲಾ ಅಡಗಿವೆ.

ಯಾರೇ ಎಷ್ಟೇ ದೊಡ್ಡವರಿರಲಿ, ಪರಾಕ್ರಮಿ ಚಕ್ರವರ್ತಿಯಿರಲಿ, ಬಹುಶ್ರುತ ಕವಿ ವಿದ್ವಾಂಸರಿರಲಿ ತರಗೆಲೆಯಂತೆ ಎಳೆದುಕೊಂಡು ಹೋಗುವುದು ಮೃತ್ಯು. ಆದರೆ ಇಲ್ಲಿ ವಿವೇಕಾನಂದರು ಮತ್ತು ಅವರ ಮೂಲಕ ಭಾರತೀಯ ವೇದಾಂತ ಜಗತ್ತಿಗೆ ಅಭಯ ಹಸ್ತವನ್ನೀಯುತ್ತಿರುವುದು ಏನೆಂದು?! ‘ಮನುಷ್ಯನೇ ಯಾರನ್ನೂ ಅಸಹಾಯಕನಾಗಿಸುವ, ಮೃತ್ಯುವನ್ನೂ ಆಟದ ಗೊಂಬೆಯಾಗಿಸಬಲ್ಲ ಯೋಗ್ಯತೆಯುಳ್ಳವನು ನೀನು. ಗುಂಡಿಗೆಯಿದೆಯೋ? ಹಾಗಾದರೆ ಪ್ರಯತ್ನಿಸು’ ಎಂದು. ಶ್ವೇತಾಶ್ವತರ ಉಪನಿಷತ್ ಎಂದೋ ಈ ಧೀರವಾಣಿಯನ್ನು ತನ್ನ ಪಾಂಚಜನ್ಯದ ಮೂಲಕ ಮೊಳಗಿಸಿದೆ. ‘ಹಿಂದೂ ಧರ್ಮ’ದ ಬಗೆಗಿನ ವಿವೇಕಾನಂದರ ಚಿಕಾಗೋ ಪಾರ್ಲಿಮೆಂಟಿನಲ್ಲಿ ನೀಡಿದ ಭಾಷಣದಲ್ಲಿ ಅವರು ತಮ್ಮ ಧೀರಸಹಜ ಭಾಷೆಯಲ್ಲಿ ಈ ವಿಷಯವನ್ನು ಮೊಳಗಿಸಿದಾಗ ಇಡೀ ಸಭೆಯೇ ಕೆಲಕ್ಷಣ ಸ್ತಂಭೀಭೂತವಾಗಿತ್ತು.

ಹೌದು! ವಿವೇಕಾನಂದರೇ ಹಾಗೆ! ಅವರ ಮತ್ತು ಅವರ ಉಸಿರೇ ಆಗಿದ್ದ ವೇದಾಂತದ ಸಾರವೇ ಇಡೀ ಜಗತ್ತನ್ನು, ಅಷ್ಟೇ ಏಕೆ, ಜಗತ್ತನ್ನೇ ಒಂದು ದಿನ ನುಂಗಿ ಹಾಕುವ ಮೃತ್ಯುವನ್ನೂ ನಿಯಂತ್ರಿಸುವುದು ಹೇಗೆ, ತನ್ನ ಆಳಾಗಿಸಿಕೊಳ್ಳುವುದು ಹೇಗೆ ಎನ್ನುವುದರತ್ತ! ಧೀರತೆಯತ್ತ! ಶೌರ್ಯದತ್ತ! ಇಡೀ ವೇದ ಇಲ್ಲವೇ ಉಪನಿಷತ್ ದ್ವೇಷಿಸುವ ಏಕಮೇವ ವಿಷಯ ಎಂದರೆ ಹೇಡಿತನ; ದೌರ್ಬಲ್ಯ! ಅಳುಮೋರೆ, ಅಸಹಾಯಕತೆ! ವೇದಾಂತದಲ್ಲಿ ನಿರಂತರ ಅನುರಣಿಸುವ ಒಂದು ಪದವೇ ಅಭೀಃ! ಹೆದರಬೇಡ! ಅವರ ಮಾತಿನಲ್ಲೇ ಇದನ್ನು ಕೇಳೋಣ- The one word that bursts out like a bombshell from every page of Upanishads is fearlessness, Abhihi! ನಮಗಿಂದು ಬೇಕಿರುವುದು ಶಕ್ತಿ! ಶಕ್ತಿ! ಶಕ್ತಿ! ಪ್ರತಿಕ್ಷಣವೂ ಶಕ್ತಿ! ಉಪನಿಷತ್ತುಗಳು ಆ ಶಕ್ತಿಯ ಮಹಾಗಣಿಯೇ ಆಗಿವೆ. ಇಡೀ ಜಗತ್ತನ್ನೇ ಶಕ್ತನನ್ನಾಗಿಸುವ ಸಾಮರ್ಥ್ಯ ಆ ಉಪನಿಷತ್ತುಗಳಲ್ಲಿದೆ. ಆದ್ದರಿಂದ ಹಿಂದಿರುಗಿ ಉಪನಿಷತ್ತುಗಳೆಡೆಗೆ - Go back to the Upanishads…! ಏಕೆಂದರೆ ಜೀವನ ದೌರ್ಬಲ್ಯವೇ ಮರಣ! ಬುದ್ಧಿಶಾಲಿಯೂ ಶಕ್ತಿಶಾಲಿಯೂ ಆದ ದುಷ್ಟನನ್ನಾದರೂ ನಾನು ಮೆಚ್ಚಿಕೊಳ್ಳುತ್ತೇನೆ. ಆದರೆ ಬುದ್ಧಿಯೂ ಇಲ್ಲದ ಶಕ್ತಿಯೂ ಇಲ್ಲದ ಸಭ್ಯನಂತೆ ಕಾಣುವ ಗುಡಿಗುಡಿ ಮನುಷ್ಯನನ್ನಲ್ಲ’. ಈ ಮಾತುಗಳನ್ನು ಕೇಳುತ್ತಿದ್ದರೆ ಒಂದು ಹೆಣವೂ ಎದ್ದು ನಿಂತು ಕೈಯಲ್ಲಿ ಕತ್ತಿ ಹಿಡಿದು ರಣರಂಗದತ್ತ ಹೊರಡುತ್ತದೆ.

ಹೌದು! ಅವರು ಈ ದೇಶಕ್ಕೆ ಮಾಡಿದ್ದೇ ಇದನ್ನು! ಪೂರ್ವಾಗ್ರಹವಿಲ್ಲದ ಪಾಶ್ಚಾತ್ಯರು ಇದನ್ನು ಅರ್ಥೈಸಬಲ್ಲರು. ನೊಬೆಲ್ ವಿಜೇತ ಫ್ರಾನ್ಸಿನ ರೊಮೈರೊಲಾ ವಿವೇಕಾನಂದರ ಜೀವನಚರಿತ್ರೆಯಲ್ಲಿ ಬರೆಯುತ್ತಾನೆ. ‘ಸತ್ತ ಲ್ಯಾಸರಸ್ಸನ ಹೆಣದ ಮುಂದೆ ಕ್ರಿಸ್ತ ನಿಂತು ಲ್ಯಾಸರಸ್ ಏಳು ಎಂದಾಗ ಅವನು ಹೇಗೆ ಎದ್ದು ನಿಂತನೋ ಅದೇ ರೀತಿ ಅಮೆರಿಕದಿಂದ ಮರಳಿದ ವಿವೇಕಾನಂದರು ತಮ್ಮ ತಾಯ್ನಾಡಿನ ಪಾದದಡಿಯಲ್ಲಿ ನಿಂತು ಮೊಳಗಿಸಿದ ಮದ್ರಾಸ್ ಭಾಷಣಗಳು ಉಸಿರಾಡುವ ಹೆಣದಂತಿದ್ದ ಭಾರತವನ್ನು ಮೈಕೊಡವಿ ಏಳುವಂತೆ ಮಾಡಿದವು. ಅವರು ತೀರಿಕೊಂಡ ಐದು ವರ್ಷದೊಳಗೆ ಬಂಗಾಳದ ವಿಭಜನೆಯಿಂದ ಪ್ರಾರಂಭವಾದ ರಾಷ್ಟ್ರವ್ಯಾಪಿ ಸ್ವಾತಂತ್ರ್ಯ ಚಳವಳಿಯನ್ನು ಬ್ರಿಟಿಷರು ಮತ್ತೆ ಹತ್ತಿಕ್ಕಲು ಸಾಧ್ಯವಾಗಲೇ ಇಲ್ಲ!’ ಎಂದು. ಇದಕ್ಕೆ ಪುಷ್ಟಿ ಕೊಡುವಂತೆ ಬಂಗಾಳದ ಗವರ್ನರ್ ಲಂಡನ್ನಿನ ಸೆಕ್ರೆಟರಿ ಆಫ್ ಸ್ಟೇಟ್ಸ್ ಫಾರ್ ಇಂಡಿಯಾಗೆ ಬರೆದ ಪತ್ರದಲ್ಲಿ ಹೀಗೆ ಒಕ್ಕಣಿಸುತ್ತಾರೆ- ‘ಹೃದಯದಲ್ಲಿ ವಿವೇಕಾನಂದರ ಮಾತುಗಳು ಮತ್ತು ತುಟಿಯ ಮೇಲೆ ವಂದೇಮಾತರಂ ಮೊಳಗಿಸುತ್ತಾ, ನವತಾರುಣ್ಯದ, ಉಜ್ವಲ ಭವಿಷ್ಯವಿರುವ ಸಹಸ್ರಾರು ಕ್ರಾಂತಿಕಾರಿ ಯುವಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಬ್ರಿಟಿಷರ ಗುಂಡೇಟಿಗೆ ಎದೆಯೊಡ್ಡಿ ಧಾವಿಸುವ ದೃಶ್ಯ ನಮ್ಮನ್ನು ಚಿಂತೆಗೀಡು ಮಾಡಿದೆ’ ಎಂದು.

ಅಂದು ಪ್ರಾರಂಭವಾದ ಈ ಮಹಾನ್ ಆತ್ಮಬಲಿದಾನ ಯಜ್ಞ ಬೃಹತ್ ರೀತಿಯಲ್ಲಿ ಪರ್ಯವಸಾನವಾಗಿದ್ದು ಅದೇ ಬಂಗಾಳಿ ಯುವಕ ಸುಭಾಷ್ ಚಂದ್ರ ಬೋಸರ ಐಎನ್​ಎ ನಿರ್ವಣದಲ್ಲಿ! ಅದರಿಂದ ಸ್ಪೂರ್ತಿ ಪಡೆದ ಭಾರತೀಯ ನೌಕಾನೆಲೆ ಇಂಗ್ಲಿಷರ ವಿರುದ್ಧ ನಡೆಸಿದ ಹೋರಾಟದಲ್ಲಿ! ಮುಂದುವರೆದು ಬ್ರಿಟಿಷರು ಭಾರತವನ್ನು ಬಿಡಲೇಬೇಕಾದ ಅನಿವಾರ್ಯತೆ ಸೃಷ್ಟಿಸುವಲ್ಲಿ! ಸಹಸ್ರಾರು ಯುವಕ ಯುವತಿಯರು ಹಳೇ ಬಟ್ಟೆಯೊಂದನ್ನು ಬಿಸಾಡುವಂತೆ ತಮ್ಮ ಶರೀರಗಳನ್ನು ರಾಷ್ಟ್ರಮಾತೆಯ ಸೇವೆಯಲ್ಲಿ ಬಿಸಾಡಿದ್ದರು. ‘ಮಹಾತ್ಯಾಗವಿಲ್ಲದೆ ಮಹತ್ಕಾರ್ಯಗಳು ಸಂಭವಿಸಲಾರವು. ತ್ಯಾಗ ಮತ್ತು ಸೇವೆ ಇವೇ ಈ ನಾಡಿನ ಅವಳಿ ಆದರ್ಶಗಳು. ಇವುಗಳನ್ನು ತೀವ್ರಗೊಳಿಸಿದಷ್ಟೂ ಈ ನಾಡು ಮುಂದೆ ನಡೆಯುತ್ತದೆ ಮತ್ತು ಜಾಗೃತಗೊಳ್ಳುತ್ತದೆ’ ಎಂಬ ಅವರ ಈ ಕರೆಗೆ ಮೊದಲು ಓಗೊಟ್ಟಿದ್ದು ಅವರದೇ ನಾಡಾದ ವಂಗಭೂಮಿ. ಹಾಗೆಂದು ಅವರ ಕರೆ, ಅವರ ಸಿಂಹವಾಣಿ ಕೇವಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೀಮಿತವಲ್ಲ. ಗುಲಾಮಿ ಭಾರತವನ್ನು ಸಂಕೋಲೆಗಳಿಂದ ಬಿಡಿಸುವುದಕ್ಕಷ್ಟೇ ಸೀಮಿತವಲ್ಲ. ಅದು ಸಾರ್ವಕಾಲಿಕ, ಸಾರ್ವತ್ರಿಕ ಉದ್ಧಾರದ ಮಂತ್ರ. ಅವರ ಗುರಿ ಇಡೀ ಮಾನವ ಜನಾಂಗ. ಅದು ಗಡಿ, ಭಾಷೆ, ದೇಶಗಳನ್ನೆಲ್ಲಾ ಮೀರಿದ್ದು. I have fallen in love with man ನಾನು ಮನುಷ್ಯನೊಂದಿಗೆ ಪ್ರೇಮಪಾಶದಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದವರು ಅವರು. ತಮ್ಮ ಗುರುವಿನಂತೆ ಸಾಮರಸ್ಯದ ಸೂತ್ರವನ್ನು ಒತ್ತುಕೊಟ್ಟು ಎತ್ತಿಹಿಡಿದ ವಿಶ್ವಮಾನವ ಅವರು. ಅವರ ಚಿಂತನೆಗಳ ಪ್ರಾರಂಭವೇ ‘ಅಮೆರಿಕಾದ ಸೋದರ ಸೋದರಿಯರೇ’ ಎಂದು!

ಆದರೆ ತಪ್ಪುಗಳ ವಿಷಯದಲ್ಲಿ ಪಾಶ್ಚಾತ್ಯರನ್ನಾಗಲಿ, ಭಾರತೀಯರನ್ನಾಗಲಿ ಅವರಷ್ಟು ಕಟುವಾಗಿ ಟೀಕಿಸಿದವರೇ ಇಲ್ಲ. ಕ್ರಿಶ್ಚಿಯನ್ ರಾಷ್ಟ್ರಗಳು ಶ್ರೀಮಂತವಾಗಿರುವುದರಿಂದ ಎಲ್ಲರೂ ಕ್ರಿಶ್ಚಿಯನ್ನರಾಗಬೇಕು ಎಂದು ಅಮೆರಿಕನ್ ಪಾದ್ರಿ ಜೋಸೆಫ್ ಕುಕ್ ಪಾರ್ಲಿಮೆಂಟಿನಲ್ಲಿ ಕರೆ ಕೊಟ್ಟಾಗ ‘ಅತ್ಯಂತ ಶ್ರೀಮಂತ ಕ್ರಿಶ್ಚಿಯನ್ ರಾಷ್ಟ್ರ ಇಂಗ್ಲೆಂಡ್ ತನ್ನ ಶ್ರೀಮಂತಿಕೆಯನ್ನು ಪಡೆದಿರುವುದು ಮುನ್ನೂರು ಮಿಲಿಯನ್ ಏಷಿಯನ್ನರ ಕುತ್ತಿಗೆಯ ಮೇಲೆ ಕಾಲಿಟ್ಟು, ಉಸಿರುಗಟ್ಟಿಸಿ! ಇಂಥಾ ಶ್ರೀಮಂತಿಕೆಯನ್ನು ಒಬ್ಬ ಹಿಂದೂ ಎಂದೂ ಬಯಸುವುದಿಲ್ಲ’ ಎಂದು ಅದೇ ವೇದಿಕೆಯಲ್ಲೇ ಮೊಳಗಿ ಅವನನ್ನು ಇಂಗು ತಿಂದ ಮಂಗನನ್ನಾಗಿಸಿದವರು ಅವರು! ಎಷ್ಟೇ ಆಗಲಿ, ಅವರೊಬ್ಬ ವೀರವೇದಾಂತಿಯಲ್ಲವೇ?! ‘ಅಭೀಃ - ಹೆದರಬೇಡ’ ಈ ಕರೆ ವೇದಾಂತದ್ದೇ ಅಲ್ಲವೇ? ಇದೇ ಅದರ ಉಸಿರಲ್ಲವೇ? ಆದರೆ ಪಾಶ್ಚಾತ್ಯರ ಸಂಘಟನಾ ಸಾಮರ್ಥ್ಯ, ಸ್ವಾತಂತ್ರ್ಯಪ್ರಿಯತೆ, ಸ್ವಾವಲಂಬಿತನ, ಸ್ತ್ರೀಯರಿಗೆ ಅವರು ಕೊಟ್ಟ ಸ್ವಾತಂತ್ರ್ಯ ಇವುಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದವರೂ ಅವರೇ. ಇಂಗ್ಲೆಂಡಿನ ಸಾಮರ್ಥ್ಯ ಇರುವುದು ಅವರ ವಿಧೇಯತೆ ಮತ್ತು ಆತ್ಮಗೌರವಗಳನ್ನು ಅದ್ಭುತವಾಗಿ ಸಾಮರಸ್ಯ ಗೊಳಿಸಿಕೊಂಡಿರುವುದರಲ್ಲಿ ಎಂದು ಅವರಿಗೇ ತೋರಿಸಿಕೊಟ್ಟಿದ್ದರಲ್ಲದೇ ಯುರೋಪ್ ತನ್ನ ವಿಪರೀತ ಭೋಗಲಾಲಸೆಯನ್ನು ಬಿಟ್ಟು ಆಧ್ಯಾತ್ಮಿಕದೆಡೆಗೆ ಹೊರಳದಿದ್ದಲ್ಲಿ ಇನ್ನು ಐವತ್ತು ವರ್ಷಗಳಲ್ಲಿ ಸುಟ್ಟು ಬೂದಿಯಾಗುವುದೇ ದಿಟ ಎಂದು 1895ರಲ್ಲೇ ಎಚ್ಚರಿಸಿ ಮಹಾಯುದ್ಧಗಳಿಗೆ ಹೇಗೆ ವೇದಿಕೆ ನಿರ್ವಣವಾಗುತ್ತದೆ, ಯುದ್ಧಗಳ ನಾಂದಿ ಎಲ್ಲಿದೆ?

ಭೋಗವಾದದ ಇತಿಮಿತಿಗಳು ಎಷ್ಟು? ಗ್ರೀಕರು ರೋಮನ್ನರು ಬೆಂದು ಹೋಗಿದ್ದು ಹೇಗೆ? ಎಂಬೆಲ್ಲದರ ಬಗ್ಗೆ ಅವರಿಗೇ ಗೊತ್ತಿರದ ವಿಷಯಗಳಲ್ಲಿ ಬೆಳಕು ಚೆಲ್ಲಿ ಇತಿಹಾಸವನ್ನು ಸಮಗ್ರವಾಗಿ ವಿಶ್ಲೇಷಿಸಬೇಕಾದ್ದು ಹೇಗೆ ಎಂಬುದನ್ನೂ ತೋರಿಸಿಕೊಟ್ಟ ಮಹಾನ್ ಚರಿತ್ರಕಾರ ವಿವೇಕಾನಂದರು. ಮುಂದಿನ ಕ್ರಾಂತಿಗಳು ರಷ್ಯಾ ಮತ್ತು ಚೀನಾಗಳಿಂದ ಬರುತ್ತವೆ ಎಂಬ ಅವರ ಹೇಳಿಕೆ ಇದನ್ನು ಸಂಶಯಕ್ಕೆಡೆಯಿಲ್ಲದಂತೆ ಸಮರ್ಥಿಸುತ್ತದೆ. ಅವರ ಈ ಚಾರಿತ್ರಿಕ ಪ್ರಜ್ಞೆ ಮತ್ತು ಇಂಥಾ ಮತ್ತು ಇದೇ ತರಹದ ಅನೇಕ ವಿಷಯಗಳಲ್ಲಿ ಭಾರತ ಪಶ್ಚಿಮಕ್ಕೆ ಹೇಳಿಕೊಡಬೇಕಾದ ಪಾಠಗಳ ಪರಿಚಯವನ್ನು ಭಾರತೀಯರಿಗೂ ಮಾಡಿಕೊಟ್ಟು, I have fallen in love with man ಎಂದು ಗುಡುಗಿದ್ದರು. ‘ಮನುಷ್ಯ ಜೀವನ, ಅದರ ಗುರಿ, ಅದರ ಔನ್ನತ್ಯ ಇತ್ಯಾದಿ ಪ್ರಮುಖ ವಿಷಯಗಳ ಬಗ್ಗೆ ಭಾರತ ಬುದ್ಧ ಪೂರ್ವ ಯುಗಗಳಿಂದಲೂ ಜಗತ್ತಿಗೆ ಬೆಳಕನ್ನು ನೀಡುತ್ತಲೇ ಬಂದಿದೆ; ಮುಂದೆಯೂ ನೀಡಲಿದೆ. ನಾನು ಅಮೆರಿಕಕ್ಕೆ ಹೋಗಿದ್ದು ಇದರ ಮುಂದುವರೆದ ಭಾಗ ಮಾತ್ರ. ಭಾರತಕ್ಕೆ ಇದೊಂದು ಮಹಾನ್ ಜವಾಬ್ದಾರಿ ಇರುವುದರಿಂದಲೇ ಭಗವಂತ ಅವಳನ್ನು ಇಷ್ಟೆಲ್ಲಾ ಕಷ್ಟಗಳ ನಡುವೆಯೂ ರಕ್ಷಿಸಿಟ್ಟಿದ್ದಾನೆ’ ಎಂದು ಹೇಳಿ ತಮ್ಮ ಪೂರ್ವಜರ ನಾಡು, ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬ ಭಾರತೀಯನು ಎಷ್ಟು ಹೆಮ್ಮೆ ಪಡಬೇಕಿತ್ತು ಎಂದು ಸೂಚಿಸಿದ್ದಲ್ಲದೆ ತಾಯ್ನಾಡಿನ ಭವ್ಯತೆ, ಮಹತ್ತುಗಳು ತಮ್ಮಂಥ ಕಟು ವಿಮರ್ಶಕ ವೈಜ್ಞಾನಿಕ ಮನೋವೃತ್ತಿಯವನನ್ನೂ ಅವಳ ಬಗ್ಗೆ ಹೇಗೆ ಭಾವುಕನನ್ನಾಗಿ ಮಾಡಿದೆ ಎಂಬುದನ್ನು ಮುಚ್ಚಿಡುವ ಗೋಜಿಗೇ ಅವರು ಹೋಗಲಿಲ್ಲ.

ಅವರ ಈ ಮಾತಿನಲ್ಲಿ ಭಾವುಕತೆ ನಿಚ್ಚಳ. ಅವರೊಮ್ಮೆ ಹೇಳಿದ್ದುಂಟುI have fallen in love with manಅರ್ಥಾತ್ ಈ ಜಗತ್ತು ಕಂಡ ಮಹಾನ್ ಹೆಮ್ಮೆಯ ಮನುಷ್ಯರಲ್ಲಿ ನಾನೊಬ್ಬ ಮತ್ತು ಈ ನನ್ನ ಹೆಮ್ಮೆಗೆ ನನ್ನ ಪೂರ್ವಜರೇ ಕಾರಣ ಎಂದು. ಆದರೆ ಪ್ರಸ್ತುತ ಭಾರತೀಯ ಚರಿತ್ರೆ ಈ ರೀತಿ ಇರುವುದೇ? ಹೆಮ್ಮೆಯನ್ನು ಸೃಜಿಸಬಲ್ಲದೇ? ರಾಷ್ಟ್ರ ನಿರ್ವಣದಲ್ಲಿ ತ್ಯಾಗ ಮತ್ತು ಸೇವೆ ಅನಿವಾರ್ಯವಾಗಿದ್ದಲ್ಲಿ ಅದಕ್ಕೆ ಒಂದು ಪ್ರೇರಣೆ ಬೇಡವೇ? ಪರಂಪರೆಯ ಮೇಲಿನ ಹೆಮ್ಮೆಗಿಂತಲೂ ಬಲಿಷ್ಠ ಪ್ರೇರಣೆ ಇರಬಲ್ಲದೆ? ಈ ವಿಷಯಗಳನ್ನೆಲ್ಲ ಗಮನಿಸುವಾಗ ಭಾರತೀಯನೊಬ್ಬ ತನ್ನ ಜೀವನ ಚಹರೆಯನ್ನು, ತನ್ನ ಬಗೆಗಿನ ತನ್ನ ಭಾವನೆಯನ್ನು ಮೂಲಭೂತವಾಗಿ ಬದಲಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದೆನಿಸುತ್ತದೆ. ಸ್ವಾಮಿ ವಿವೇಕಾನಂದರು ಒಂದು ಕನ್ನಡಿ. ಅದು ಭಾರತಮಾತೆಯ ಸ್ಥಾನಮಾನ, ಆದರ್ಶಗಳು ಎಂಬ ಕನ್ನಡಿ. ಭಾರತಮಾತೆಯ ಮಾನುಷ ರೂಪ ಅವರು. ಅವಳ ಸಾಧನೆಯಲ್ಲಿ ಅವರು ಪಟ್ಟ ಸುಖ, ಅವಳ ಹಿನ್ನಡೆಗಳಲ್ಲಿ ಅವರು ಅನುಭವಿಸಿದ ದುಃಖ ಅವರಿಗೇ ಗೊತ್ತು! ತಮ್ಮ ಯುವ ಶಿಷ್ಯರಿಗೆ ಅವರು ಹೇಳುತ್ತಿದ್ದುದುಂಟು- ‘ನಿನ್ನ ಒಂದು ಜನ್ಮವನ್ನು ನನಗೆ ಕೊಡು’ ಎಂದು. ಯಾಕಾಗಿ? ಭಾರತದ ಪುನರ್ನಿಮಾರ್ಣಕ್ಕಾಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net