

ಸುಭಾಷ್ ಎಚ್.ಜೆ.
‘ರೇಷನ್ ಸಿಗದಿದ್ದರೂ ಪರವಾಗಿಲ್ಲ, ಸಿಗರೇಟ್ ಸಿಕ್ಕರೆ ಸಾಕಪ್ಪ’, ‘ಯಾರಾದರೂ ಸಿಗರೇಟ್ಗಳನ್ನು ಹೋಮ್ ಡೆಲಿವರಿ ಮಾಡುವುದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು’, ‘ಇಷ್ಟೊಂದು ದಿನಗಳಿಂದ ಸಿಗರೇಟ್ ಇಲ್ಲದೆ, ನಮ್ಮ ಮನೆ ತಂಬಾಕು ಬಿಡಿಸುವ ರಿಹ್ಯಾಬಿಲಿಟೇಷನ್ ಸೆಂಟರ್ ಎಂದೆನಿಸುತ್ತಿದೆ’, ‘ಈ ಲಾಕ್ಡೌನ್ ಇರುವಷ್ಟು ದಿನವಾದರೂ ನನ್ನ ಗಂಡ ತಂಬಾಕು ಹಾಕೋದು ಬಿಟ್ಟರೆ ಸಾಕು ದೇವರೇ...’ ಈ ರೀತಿಯಾದ ಯೋಚನೆಗಳು ನಿಮ್ಮಲ್ಲೂ ಮೂಡಿವೆಯೇ? ಹಾಗಾದರೆ ಮುಂದಿನದನ್ನು ತಪ್ಪದೇ ಓದಿ.
ಇತ್ತೀಚೆಗಂತೂ ಎಲ್ಲಡೆಯೂ ಕರೊನಾ ಕುರಿತಾದ ಚರ್ಚೆಗಳು. ಜನ ಒಂದೆಡೆ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಈ ಮಧ್ಯೆ ವಿಪರ್ಯಾಸ ಎಂಬಂತೆ ಅನೇಕರು ಸಿಗರೇಟ್ ಅಥವಾ ತಂಬಾಕು ಪೊಟ್ಟಣಕ್ಕಾಗಿ ಚಡಪಡಿಸುತ್ತಿದ್ದಾರೆ. ಆದರೆ, ತಂಬಾಕು ಸೇವನೆಯಿಂದ ಕರೊನಾ ಹರಡುವ ಸಾಧ್ಯತೆ ಹೆಚ್ಚುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ತಿಳಿಸಿದೆ. ಇದಕ್ಕೆ ಹಲವು ಕಾರಣಗಳಿವೆ. ಈ ಕರೊನಾ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯಕೀಯ ಸಮುದಾಯದಿಂದ ಬಂದ ಮೊದಲ ಸಲಹೆಯೇನೆಂದರೆ, ‘ಯಾರೊಡನೆಯೂ ಕೈಕುಲುಕಬಾರದು ಹಾಗೂ ಪ್ರತಿಯೊಬ್ಬ ವ್ಯಕ್ತಿಯಿಂದ ಒಂದು ಮೀಟರ್ನಷ್ಟು ಅಂತರ ಕಾಯ್ದುಕೊಳ್ಳಬೇಕು ಹಾಗೂ ಅನವಶ್ಯಕವಾಗಿ ನಮ್ಮ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳಬಾರದು’ ಎಂಬುದು. ಏಕೆಂದರೆ ತನ್ಮೂಲಕ ಯಾವುದೇ ವೈರಸ್ ಇರುವ ವಸ್ತು ಪ್ರದೇಶವನ್ನು ರ್ಸ³ಸಿದಲ್ಲಿ ಅದು ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ದೇಹವನ್ನು ಸರಾಗವಾಗಿ ಸೇರುತ್ತದೆ. ಪದೇಪದೆ ಸಿಗರೇಟ್ ಹಚ್ಚುತ್ತ ಕೈಯಿಂದ ತುಟಿಯನ್ನು ಅಥವಾ ಬಾಯಿಯನ್ನು ಮುಟ್ಟಿಕೊಳ್ಳಬೇಕಾಗಿ ಬರುವುದು ತಂಬಾಕು ವ್ಯಸನಿಗಳಲ್ಲಿ ಮೊದಲ ಸಮಸ್ಯೆಯಾದರೆ, ಅನೇಕ ವರ್ಷಗಳಿಂದ ಸೇವಿಸಿದ ತಂಬಾಕು ಈಗಾಗಲೇ ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿರುತ್ತದೆ ಎಂಬುದು ಎರಡನೆಯ ಸಮಸ್ಯೆ.
‘ದ ಟೈಮ್ಸ್ ಆಫ್ ಇಸ್ರೇಲ್’ ಪತ್ರಿಕೆಗೆ ಇಸ್ರೇಲಿ ಮೆಡಿಕಲ್ ಅಸೋಸಿಯೇಶನ್ನ ಮುಖ್ಯಸ್ಥರು ತಿಳಿಸಿದ ಹಾಗೆ, ಧೂಮಪಾನ ಮಾಡುವವರು ಕರೊನಾ ಸೋಂಕಿನಿಂದಾಗಿ ಸಾಧಾರಣ ವ್ಯಕ್ತಿಗಳಿಗಿಂತಲೂ ಹದಿನಾಲ್ಕು ಪಟ್ಟು ತೀವ್ರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಈ ಕಾರಣದಿಂದಾಗಿಯೇ ಕರೊನಾದಿಂದ ಪ್ರಾಣ ಕಳೆದು ಕೊಂಡವರಲ್ಲಿ ಮಹಿಳೆಯರಿಗಿಂತ ಪುರುಷರ ಸಂಖ್ಯೆ ಹೆಚ್ಚಿದೆ.
ಕರೊನಾ ಮುಖ್ಯವಾಗಿ ಶ್ವಾಸಕೋಶ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ತಂದಿಡುತ್ತದೆ. ಸಿಗರೇಟ್, ಹುಕ್ಕಾ, ಬೀಡಿ ಇತ್ಯಾದಿಗಳನ್ನು ಸೇವಿಸುವವರು ಶ್ವಾಸಕೋಶ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಕರೊನಾ ಬಾಧಿತದಲ್ಲಿ ಕಂಡು ಬರುವ ಕೆಮ್ಮು, ಆಯಾಸ ಇತ್ಯಾದಿಗಳು ಸಾಧಾರಣವಾಗಿ ತಂಬಾಕು ಸೇವಿಸುವ ಅನೇಕರಲ್ಲಿ ಈಗಾಗಲೇ ಇರುವುದು ನಮಗೆಲ್ಲರಿಗೂ ತಿಳಿದಿದೆ ಹಾಗೂ ತಂಬಾಕು ಸೇವಿಸುವ ಗುಂಪಿನವರು ಕರೊನಾ ಸಮಸ್ಯೆಗೆ ತುತ್ತಾಗುವ ಅವಕಾಶಗಳು ಸಹ ಹೆಚ್ಚಿವೆ.
ಹೇಗೋ ಸರ್ಕಾರ ವಿಧಿಸಿರುವ ಲಾಕ್ಡೌನ್ನಿಂದಾಗಿ ತಂಬಾಕು ದೊರಕುವ ಸಾಧ್ಯತೆಗಳು ಅತ್ಯಂತ ವಿರಳವೇ. ಹಾಗಾಗಿ, ತಂಬಾಕು ಸೇವನೆಯ ಅಭ್ಯಾಸವನ್ನು ಬಿಟ್ಟುಬಿಡಲು ಇದೇ ಒಳ್ಳೆಯ ಸಮಯ. ಒಂದು ವೇಳೆ ತಂಬಾಕು ಸೇವನೆಯನ್ನು ನಿಲ್ಲಿಸಬೇಕು ಎಂದು ನೀವು ಬಯಸಿದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ವಿಶೇಷ ಸೇವೆ ಲಭ್ಯವಿದೆ. ತಂಬಾಕು ಅಭ್ಯಾಸವನ್ನು ಬಿಡಲು ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಹಾನ್ಸ್ನ ಆಪ್ತಸಮಾಲೋಚಕರ ಬಳಿ ಸಲಹೆ-ಸೂಚನೆಗಳನ್ನು ದೂರವಾಣಿಯ ಮುಖಾಂತರ ಪಡೆಯಬಹುದು. ತಂಬಾಕು ಬಿಡಬೇಕು ಎಂದುಕೊಂಡವರು 1800 112356 ಸಂಖ್ಯೆಗೆ ಕರೆ ಮಾಡಬಹುದು. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ರೂಪುಗೊಂಡಿರುವ ಈ ಸೇವೆಯು ಕೆಲ ವರ್ಷಗಳಲ್ಲಿ ಅನೇಕರನ್ನು ವ್ಯಸನಮುಕ್ತರನ್ನಾಗಿಸಿದೆ. ಈ ಸೇವೆ ಉಚಿತವಾಗಿದ್ದು, ನಿಮ್ಮ ಮಾಹಿತಿಯ ಗೌಪ್ಯತೆ ಕಾಪಾಡುತ್ತದೆ. ಸೋಮವಾರ ಹೊರತುಪಡಿಸಿ ಬೇರೆಲ್ಲ ದಿನ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಇಂಗ್ಲಿಷ್ ಹಾಗೂ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಸೇವೆ ಲಭ್ಯವಿದೆ.
(ಲೇಖಕರು ನಿಮ್ಹಾನ್ಸ್ನಲ್ಲಿ ಆಪ್ತಸಮಾಲೋಚಕರು)