ಹಿಮಾಲಯದ ತುತ್ತತುದಿ ಮುಟ್ಟಬೇಕೆಂದರೆ...; ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟ ಅನಿರುದ್ಧ

Aniruddha 1
Published on

ನಾನೊಬ್ಬ ಸ್ಪೆಷಲ್ ವ್ಯಕ್ತಿ ಎಂದು ಯಾವಾಗಲೂ ಅನಿಸುತ್ತದೆ. ನನ್ನಲ್ಲೇನೋ ವಿಶಿಷ್ಟವಾದುದಿದೆ ಎಂದು ಬಹಳ ಚೆನ್ನಾಗಿ ಗೊತ್ತಿದೆ. ಸದಾ ಉತ್ತುಂಗದಲ್ಲಿರಬೇಕು, ಎಲ್ಲರೂ ನನ್ನನ್ನು ಗೌರವಿಸಬೇಕು, ಎಲ್ಲರೂ ಪ್ರೀತಿಸಬೇಕು ಎಂಬ ಹಪಾಹಪಿಯನ್ನು ಯಾರೂ ತೃಪ್ತಿಪಡಿಸುವುದಕ್ಕೆ ಸಾಧ್ಯವಿಲ್ಲ. ನಂಬರ್ ಒನ್ ಆಗಿರುವುದಕ್ಕೆ ಯಾವಾಗಲೂ ಪ್ರಯತ್ನಪಡುತ್ತಲೇ ಇರುತ್ತೇನೆ.

ಇವತ್ತು ನಾನೇನಾಗಿದ್ದೇನೋ, ಅದಕ್ಕೆ ಕಾರಣ ನಾನೇ. ಸಾಮರ್ಥ್ಯ, ಬುದ್ಧಿಮತ್ತೆ, ಕಠಿಣ ಶ್ರಮ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಚಾಣಾಕ್ಷತೆ ಇವತ್ತು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಇದರಿಂದಾಗೇ ಇಷ್ಟು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದೇನೆ. ಅದೊಂದು ದಿನ, ನಮ್ಮ ಆಫೀಸಿನಲ್ಲಿ ಯಾರೋ ಒಬ್ಬರು ನನ್ನನ್ನು ಹಿಮಾಲಯಕ್ಕೆ ಹೋಲಿಸಿದರು. ನೀವು ನಂಬುತ್ತೀರಾ, ಹಿಮಾಲಯದ ಜತೆಗೆ ನನ್ನ ಹೋಲಿಕೆ!

ಇದು ಬೇರೆಯವರಿಗೆ ಸ್ವಲ್ಪ ಅತಿ ಎನಿಸಿದರೂ, ನನಗೂ ಆಗಾಗ ಅನಿಸುವುದಿದೆ. ನನ್ನನ್ನು ಯಾವುದರ ಜತೆಗಾದರೂ ಹೋಲಿಸಿದರೆ ಅದು ಹಿಮಾಲಯವೇ ಸರಿ. ಮಿಕ್ಕೆಲ್ಲವೂ ಚಿಕ್ಕದಾಗುತ್ತದೆ. ಮುಂದಿನ ದಿನಗಳಲ್ಲಿ, ಹಿಮಾಲಯದಲ್ಲೇ ಅತೀ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಜತೆಗೆ ನನ್ನನ್ನು ಎಲ್ಲರೂ ಹೋಲಿಸಬೇಕೆಂಬುದು ಆಸೆ. ಹೌದು, ನಾನು ಮೌಂಟ್ ಎವರೆಸ್ಟ್ ಆಗಬೇಕು. ಎಲ್ಲರಿಗಿಂತ ಬಹಳ ಎತ್ತರದಲ್ಲಿ ನಿಲ್ಲಬೇಕು.

ಹಿಮಾಲಯದ ಬಗ್ಗೆ ಓದಿದ್ದೆ, ಕೇಳಿದ್ದೆ, ವಿಡಿಯೋಗಳಲ್ಲಿ ನೋಡಿದ್ದೆ. ಆದರೆ, ನಿಜಕ್ಕೂ ಅದು ಎಷ್ಟು ಎತ್ತರ ಇದೆ ಮತ್ತು ಹಿಮಾಲಯದ ಸಮನಾಗಿ ನಾನು ಹೇಗೆ ಕಾಣುತ್ತೇನೆ ಎಂದು ನೋಡಬೇಕು ಅಂತ ಒಂದು ದಿನ ಆಸೆ ಆಯಿತು. ಸರಿ, ಒಂದು ವಾರ ರಜೆ ಹಾಕಿ, ಹಿಮಾಲಯಕ್ಕೆ ಹೋಗಿ, ಅದರ ಸರಿಸಮನಾಗಿ ಇದ್ದು ಬರಬೇಕು ಎಂದು ನಿಶ್ಚಯ ಮಾಡಿದೆ. ಆದರೆ, ನಾನು ಹೋದರೆ, ನನ್ನ ಸಾಮ್ರಾಜ್ಯವನ್ನು ಯಾರು ನೋಡಿಕೊಳ್ಳುತ್ತಾರೆ? ಇಲ್ಲಿದ್ದಾಗ ಎಲ್ಲರೂ ನನ್ನನ್ನೇ ಅವಲಂಬಿಸಿರುತ್ತಾರೆ. ನಾನಿಲ್ಲದಾಗ ಹೇಗೆ ನೋಡಿಕೊಳ್ಳುತ್ತಾರೆ? ಎಂಬ ಆತಂಕ ಇದ್ದೇ ಇತ್ತು. ಸಾಮಾನ್ಯವಾಗಿ ಎಲ್ಲೇ ವೆಕೇಶನ್​ಗೆ ಅಥವಾ ಬಿಜಿನೆಸ್ ಟ್ರಿಪ್​ಗೆ ಹೋದರೂ, ನನ್ನ ದೇಹ ಮಾತ್ರ ಅಲ್ಲಿರುತ್ತದೆ; ಆತ್ಮ ಸಂಪೂರ್ಣವಾಗಿ ಕೆಲಸದಲ್ಲೇ ಇರುತ್ತದೆ. ಈ ಬಾರಿ ಸಹ ಹಾಗೇ ಮಾಡುವುದೆಂದು ತೀರ್ವನಿಸಿದೆ. ಅಲ್ಲಿದ್ದುಕೊಂಡೇ, ಇಲ್ಲಿಯ ವ್ಯವಹಾರಗಳನ್ನು ಹೇಗೋ ಮ್ಯಾನೇಜ್ ಮಾಡಿದರಾಯ್ತು ಎಂದು ನಿಶ್ಚಯಿಸಿ ಬ್ಯಾಗ್ ಪ್ಯಾಕ್ ಮಾಡಿದೆ. ನಾಳೆ ನನ್ನ ಪಯಣ ಹಿಮಾಲಯದತ್ತ...

ಹಿಮಾಲಯದ ಎದುರಿಗೆ ನಿಂತಿದ್ದೇನೆ. ಯಾಕೋ ನನ್ನ ಬಾಯಿಂದ ಮಾತುಗಳೇ ಬರುತ್ತಿಲ್ಲ. ಈ ನೀರವತೆ ನನ್ನಲ್ಲಿ ಮಾತ್ರ ಇದೆ, ಹೊರಗ್ಯಾಕಿಲ್ಲ? ಅದ್ಯಾಕೆ ನನಗೆ ನಾನು ಬಹಳ ಅತ್ಯಲ್ಪ ಎಂದನಿಸುತ್ತಿದೆ? ಈ ಹಿಮಾಲಯದ ಮುಂದೆ ನಾನೊಬ್ಬ ಹುಲುಮಾನವ ಅಂತ ಯಾಕೆ ಪದೇಪದೆ ಮನಸ್ಸು ಹೇಳುತ್ತಿದೆ? ನಾನ್ಯಾಕೆ ಇಷ್ಟು ಕುಬ್ಜನಾಗಿ ಕಾಣುತ್ತಿದ್ದೇನೆ? ನಾನು ಏನೂ ಅಲ್ಲ, ಮಾಡಿದ್ದು ಸಾಧನೆಯೇ ಅಲ್ಲ ಎಂಬ ಭಾವನೆ ಯಾಕೆ ಬರುತ್ತಿದೆ? ಹಾಗೆ ನೋಡಿದರೆ, ಹಿಮಾಲಯವೇ ಜಗತ್ತಲ್ಲ. ಅದರಾಚೆಗೂ ಜಗತ್ತಿದೆ. ಹಿಮಾಲಯ ಎನ್ನುವುದು ಈ ಬ್ರಹ್ಮಾಂಡದ ಒಂದು ಭಾಗ ಅಷ್ಟೇ. ಈ ಹಿಮಾಲಯವೇ ಹೀಗಾದರೆ, ಇಡೀ ಬ್ರಹ್ಮಾಂಡ ಹೇಗಿರುತ್ತದೆ? ಹೇಗೆ ಕಾಣುತ್ತದೆ? ಅದರ ಮುಂದೆ ನನ್ನ ಅಸ್ತಿತ್ವ ಏನು? ಇಡೀ ಬ್ರಹ್ಮಾಂಡದಲ್ಲಿ ನಾನು ಹೇಗೆ ಕಾಣಬಹುದು?

ಇಷ್ಟು ವರ್ಷಗಳ ಕಾಲ, ನಾನು ನನ್ನನ್ನು ಬಿಟ್ಟು ಬೇರೆ ಯಾರ ಬಗ್ಗೆಯೂ ಹೆಚ್ಚು ಯೋಚಿಸುವುದಕ್ಕೆ ಹೋಗಿಲ್ಲ. ಈಗ ಅದರಾಚೆಗೂ ನೋಡಬೇಕೆನಿಸುತ್ತಿದೆ. ಅದಕ್ಕೆ ಕಾರಣ ಕುತೂಹಲ. ನಾನು ಯಾವತ್ತೂ ಆಳದ ಬಗ್ಗೆ ಯೋಚಿಸಲಿಲ್ಲ. ಹಿಮಾಲಯ ಮತ್ತು ಅದರ ಎತ್ತರದ ಬಗ್ಗೆ ಯೋಚಿಸಿದ್ದೆನೋ ಹೊರತು, ಸಮುದ್ರದ ಆಳದ ಬಗ್ಗೆ ಆಲೋಚಿಸಿರಲಿಲ್ಲ. ಎತ್ತರ ಏರಬೇಕು ಎಂದರೆ, ಆಳವಾದ ಜ್ಞಾನ ಇರಬೇಕು ಎಂಬುದು ಗೊತ್ತಿರಲಿಲ್ಲ. ಸಮುದ್ರದ ಆಳದ ಜತೆಗೆ ನನ್ನನ್ನು ಹೋಲಿಸಿಕೊಳ್ಳುವುದು ಸಾಧ್ಯವಾ? ನಿಜಕ್ಕೂ ನನಗೆ ಆ ಆಳ ಇದೆಯಾ? ಅಷ್ಟೊಂದು ಜ್ಞಾನ ಇದೆಯಾ?

ಈಗ ನಾನು ಸರಸ್ವತಿ ನದಿಯ ಉಗಮಸ್ಥಾನದಲ್ಲಿ ನಿಂತಿದ್ದೇನೆ. ನದಿಯ ಹರಿವು ಬಹಳ ಜೋರಾಗಿದೆ. ಆದರೆ, ಸ್ವಲ್ಪ ದೂರದ ನಂತರ ಅದು ಮಾಯವಾಗಿಬಿಡುತ್ತದೆ. ಭೂಮಿಯ ಆಳದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತದೆ. ಈ ಹಿಮಾಲಯ ಮತ್ತು ಸರಸ್ವತಿ ನದಿ ನನ್ನನ್ನು ನೋಡಿ ನಗುತ್ತಿವೆಯಾ? ಈ ಪ್ರಕೃತಿಯ ಮುಂದೆ ನೀನೇನೂ ಅಲ್ಲ ಎಂದು ಅಣಕ ಮಾಡುತ್ತಿವೆಯಾ? ಎಲ್ಲ ಪ್ರಾರಂಭಕ್ಕೂ ಒಂದು ಅಂತ್ಯ ಇರುತ್ತದೆ. ನಾನು ಶಾಶ್ವತವಾಗೇನೂ ಇರುವವನಲ್ಲ. ನಾನು ಸಹ ಒಂದಲ್ಲ ಒಂದು ದಿನ ಸಾಯಲೇಬೇಕು. ನಾನು ಹುಟ್ಟುವುದಕ್ಕೂ ಮುನ್ನ ಎಷ್ಟೋ ಲಕ್ಷ ವರ್ಷಗಳಿಂದ ಈ ಭೂಮಿ ಇದೆ. ನಾನು ಹೋದ ಮೇಲೂ ಇದ್ದೇ ಇರುತ್ತದೆ. ನಾನಿಲ್ಲ ಎಂದು ಯಾವುದೂ ಮುಗಿಯುವುದಿಲ್ಲ. ಎಲ್ಲವೂ ಅದರ ಪಾಡಿಗೆ ಅದು ಸ್ವಾಭಾವಿಕವಾಗಿ ನಡೆಯುತ್ತದೆ. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನನ್ನು ಬಹಳವಾಗಿ ಅವಲಂಬಿಸಿದ್ದಾರೆ ಅಂತ ಯಾವಾಗಲೂ ಅನಿಸುತ್ತದೆ. ಹಾಗಂತ, ನಾನು ಇಲ್ಲದಿದ್ದರೆ ಅವರು ಬದುಕುವುದಿಲ್ಲವಾ? ಖಂಡಿತ ಬದುಕುತ್ತಾರೆ. ನಾನಿಲ್ಲದಿದ್ದರೂ ಅವರಿಗೆ ಬದುಕುವ ಶಕ್ತಿ ಇದೆ. ನನ್ನ ಸಹಕಾರವಿಲ್ಲದಿದ್ದರೂ, ಜೀವನದಲ್ಲಿ ಏನಾದರೂ ಸಾಧಿಸುವ ಸಾಮರ್ಥ್ಯ ಖಂಡಿತ ಇದೆ.

ನನ್ನ ಸುತ್ತಮುತ್ತಲಿನ ಜನ, ನನ್ನನ್ನು ಬಿಟ್ಟು ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂದು ನಂಬಿದ್ದೆ. ಅವರೆಲ್ಲರ ಜೀವನದಲ್ಲಿ ನಾನು ಮಹತ್ವದ ಪಾತ್ರವನ್ನು ವಹಿಸುತ್ತಿದ್ದೇನೆ ಎಂಬ ಗರ್ವ ಇತ್ತು. ನಾನು, ನನ್ನದು, ನನ್ನಿಂದ... ಎಂಬ ಮೂರೇ ಪದಗಳ ಸುತ್ತ ಜೀವನ ನಡೆಸಿಬಿಟ್ಟೆ. ನಾನಿಲ್ಲದಿದ್ದರೆ ಏನೂ ಆಗುವುದಿಲ್ಲ ಎಂಬ ಕಲ್ಪನೆಯಲ್ಲಿ ಇಷ್ಟು ದಿನ ಬದುಕಿದೆ. ಅದರೆ, ಇಲ್ಲಿಗೆ ಬಂದ ಮೇಲೆ ಒಂದು ವಿಷಯ ಸ್ಪಷ್ಟವಾಗುತ್ತಿದೆ. ಈ ‘ನಾನು’ ಎಂಬ ಸ್ವಾರ್ಥ ಮತ್ತು ಗೀಳಿನಿಂದ ಹೊರಬರಬೇಕು, ಪ್ರಕೃತಿಯನ್ನು ಗೌರವಿಸಬೇಕು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸುತ್ತಮುತ್ತಲಿನ ಜನರಿಗೆ ಸ್ಪಂದಿಸಬೇಕು ಎಂದು ಅರ್ಥವಾಗುತ್ತಿದೆ.

ಎಂಥ ಅದ್ಭುತವಾದ ಸಾಕ್ಷಾತ್ಕಾರ ಇದು. ಇಷ್ಟು ಅರ್ಥವಾಗುತ್ತಿದ್ದಂತೆ, ಬಹಳ ಹಗುರ ಎಂದನಿಸುತ್ತಿದೆ. ನಾನು ಬಹಳ ಆಧ್ಯಾತ್ಮಿಕವಾಗಿ ಯೋಚಿಸುತ್ತಿದ್ದೇನಾ? ಮಾತಾಡುತ್ತಿದ್ದೇನಾ? ಗೊತ್ತಿಲ್ಲ. ಒಂದಂತೂ ಸತ್ಯ. ಈ ಪ್ರಕೃತಿ ನನ್ನ ಕಣ್ಣು ತೆರೆಸಿದೆ.

(ಇಲ್ಲಿ ‘ನಾನು’ ಎಂಬುದು ವೈಯಕ್ತಿಕ ಅಭಿಪ್ರಾಯವಲ್ಲ. ಅದು ಬಹುತೇಕರ ಅಥವಾ ಸಮಷ್ಟಿಯ ಭಾವವನ್ನು ಸೂಚಿಸುತ್ತದೆ)

(ಲೇಖಕರು ಖ್ಯಾತ ನಟ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net