ವಿನಯರಾಗಬೇಕಾದ್ದು ಮಾನವ ಗುಣ, ಉಳಿದದ್ದು ಪರಿಸ್ಥಿತಿಗಳ ಗುಣ..

Sadhguru Column
Published on
ಭಾರತದ ಬಹುದೊಡ್ಡ ಭಾಗ ಶ್ರೀರಾಮನನ್ನು ಆರಾಧಿಸುತ್ತದೆ, ಆದರೆ ಶ್ರೀರಾಮನ ಜೀವನದ ಸಂದರ್ಭ ಮತ್ತು ಅವನು ಜೀವಿಸಿದ ವಿಧಾನವನ್ನು ನೋಡಿದರೆ ಹಲವು ಜಿಜ್ಞಾಸೆಗಳು ಕಾಡುತ್ತವೆ. ನ್ಯಾಯಸಮ್ಮತವಾಗಿ ಅವನಿಗೆ ಸೇರಿದ್ದ ರಾಜ್ಯವನ್ನು ಕಳೆದುಕೊಂಡು ರಾಮ ವನವಾಸಕ್ಕೆ ಹೋಗಬೇಕಾಯಿತು. ನಂತರ ಸೀತಾಮಾತೆ ಅಪಹರಿಸಲ್ಪಟ್ಟಳು; ರಾಮ ಬಯಸದಿದ್ದರೂ ಅವನು ಯುದ್ಧ ಮಾಡಬೇಕಾಯಿತು. ನಂತರ ಪತ್ನಿಯನ್ನು ಮರಳಿ ಕರೆತಂದಾಗ, ಸುತ್ತಲಿನ ಹಲವರಿಂದ ಅನಪೇಕ್ಷಿತ ಮಾತುಗಳನ್ನು ಕೇಳಬೇಕಾಯಿತು. ಆದ್ದರಿಂದ ತನಗೆ ತುಂಬ ಪ್ರಿಯಳಾಗಿದ್ದ ಮತ್ತು ಗರ್ಭಿಣಿಯಾಗಿದ್ದ ಪತ್ನಿಯನ್ನು ಅವನು ಕಾಡಿಗೆ ಕಳುಹಿಸಿದ. ನಂತರ ತಿಳಿಯದೆಯೇ ಸ್ವಂತ ಮಕ್ಕಳ ವಿರುದ್ಧ ಯುದ್ಧದಲ್ಲಿ ಸೆಣೆಸಿದ. ಕೊನೆಗೆ ಹೆಂಡತಿಯನ್ನು ಕಳೆದುಕೊಂಡ. ಹೀಗಿದ್ದರೂ ಅಷ್ಟೆಲ್ಲ ಜನ ಶ್ರೀರಾಮನನ್ನೇಕೆ ಪೂಜಿಸುತ್ತಾರೆ?

ಈ ಪ್ರಶ್ನೆಗೆ ಉತ್ತರ ತುಂಬ ಸರಳ. ಏಕೆಂದರೆ, ರಾಮನ ಮಹತ್ವವು ಅವನು ತನ್ನ ಜೀವನದಲ್ಲಿ ಎದುರಿಸಿದ ಸನ್ನಿವೇಶಗಳಲ್ಲಿಲ್ಲ. ಅವನಿಗೆ ಒದಗಿಬಂದ ಸಂಕಷ್ಟ, ಸವಾಲುಗಳನ್ನು ಎದುರಿಸುವಲ್ಲಿ ತನ್ನನ್ನು ಎಷ್ಟು ವಿನಯ, ಲಾಲಿತ್ಯದಿಂದ ನಡೆಸಿಕೊಂಡಿದ್ದಾನೆ ಎಂಬುದು ರಾಮನ ಜೀವನದ ಮಹತ್ವ. ಶ್ರೀರಾಮ ಮರ್ಯಾದಾ ಪುರುಷೋತ್ತಮ. ಅವನು ಎಂದಿಗೂ ಕೋಪಗೊಳ್ಳುವುದನ್ನು ಅಥವಾ ಯಾರನ್ನಾದರೂ ಶಪಿಸುವುದನ್ನು ಅಥವಾ ಅವನು ನಿಯಂತ್ರಣ ತಪ್ಪಿದ್ದನ್ನು ಯಾರೂ ಕಂಡಿರಲಿಲ್ಲ. ಶ್ರೀರಾಮ ಎಲ್ಲ ಸಂದರ್ಭಗಳಲ್ಲೂ ವಿನಯಶೀಲನಾಗಿದ್ದ. ಆದ್ದರಿಂದ ಮುಕ್ತಿ ಮತ್ತು ಘನತೆಯ ಜೀವನವನ್ನು ಅರಸುವ ಜನರು ಶ್ರೀರಾಮನನ್ನು ಪೂಜಿಸುತ್ತಾರೆ, ಏಕೆಂದರೆ ಬಾಹ್ಯ ಸಂದರ್ಭಗಳು ಯಾವುದೇ ಕ್ಷಣದಲ್ಲಿ ಕೈಮೀರಬಹುದು, ಸಾಕಷ್ಟು ನಿರ್ವಹಣೆ ಮಾಡಿದಾಗಲೂ, ಬಾಹ್ಯ ಸಂದರ್ಭಗಳು ಕೈಮೀರಿ ಹೋಗಬಹುದು. ಎಲ್ಲವನ್ನೂ ಒಪ್ಪಓರಣವಾಗಿ, ಸರಿಯಾಗಿಯೇ ಇಟ್ಟುಕೊಂಡಿರಬಹುದು ನಿಜ, ಆದರೆ ಚಂಡಮಾರುತವೊಂದು ಅಪ್ಪಳಿಸಿದರೆ, ಅದು ಮನೆ ಮತ್ತೆಲ್ಲವನ್ನೂ ನೆಲಸಮ ಮಾಡುತ್ತದೆ. ಈಗಲೂ ಇಂತಹ ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿವೆ. ಅವು ನಮಗೆ ಆಗದಿರಬಹುದು, ಆದರೆ ನಮ್ಮ ಸುತ್ತಮುತ್ತಲಿನ ಸಾವಿರಾರು ಜನರಿಗೆ ಹಾಗಾಗುತ್ತಿದೆ. ‘ಓಹ್ ಅಂತಹ ಪರಿಸ್ಥಿತಿ ನನಗೆ ಎದುರಾಗುವುದಿಲ್ಲ’ ಎಂದೆಣಿಸಿ ಬದುಕುವುದು ಒಂದು ಮೂರ್ಖವಾದ ಮಾರ್ಗ. ‘ನನಗೆ ಅಂತಹ ಪರಿಸ್ಥಿತಿ ಒದಗಿಬಂದರೂ, ಅದನ್ನು ಜಾಣ್ಮೆ, ಲಾಲಿತ್ಯದಿಂದ ಎದುರಿಸುತ್ತೇನೆ’ ಎನ್ನುವುದು ಬುದ್ಧಿವಂತರ ಮಾರ್ಗ. ಜನರು ಈ ಅಪೂರ್ವ ಬುದ್ಧಿವಂತಿಕೆಯನ್ನು ಕಂಡ ಕಾರಣ ಶ್ರೀರಾಮನನ್ನು ಆರಾಧಿಸುತ್ತಾರೆ. ಜೀವನ ನಿರಂತರ ದೌರ್ಭಾಗ್ಯದ ಸರಣಿಯಾಗಿದ್ದರೂ, ಅವನು ಎಂದಿಗೂ ತನ್ನ ಸತ್ಯಸಂಧತೆಯಿಂದ, ತನಗಾಗಿ ಸ್ಥಾಪಿಸಿಕೊಂಡಿದ್ದ ಜೀವನದ ಮೂಲಭೂತ ವಿಷಯ, ಮೌಲ್ಯಗಳಿಂದ ಹಿಂದೆ ಸರಿಯಲಿಲ್ಲ. ಅವನು ಏನು ಮಾಡಬೇಕೆಂಬುದರ ಬಗ್ಗೆ ಏಕನಿಷ್ಠನಾಗಿದ್ದು, ಜೀವನವನ್ನು ಸಮತೋಲನದಿಂದ ನಡೆಸಿದ.

ಕಷ್ಟ ಬರಲಿ ಬಿಡಿ: ವಾಸ್ತವದಲ್ಲಿ, ಅನೇಕ ಆಧ್ಯಾತ್ಮಿಕ ಅನ್ವೇಷಕರು ಜೀವನದಲ್ಲಿ ಯಾವುದಾದರೂ ಕಷ್ಟದ ಪರಿಸ್ಥಿತಿ ಎದುರಾಗಲಿ ಎಂದು ಕೇಳಿಕೊಳ್ಳುತ್ತಾರೆ, ಏಕೆಂದರೆ ಸಾವು ಬರುವ ಮೊದಲು ತಾವು ಸಂಪೂರ್ಣವಾಗಿ ಪರೀಕ್ಷೆಗೆ ಒಳಗಾಗಬೇಕೆಂದು ಅವರ ಆಸೆ. ಏನಾದರಾಗಲಿ, ಅವರು ಅದನ್ನು ವಿನಯಶೀಲರಾಗಿ ಎದುರಿಸುತ್ತಾರೋ ಎಂದು ನೋಡುವ ಗುಣಮಟ್ಟ ಪರೀಕ್ಷೆಯಾಗಬೇಕೆಂದು ಅವರು ಬಯಸುತ್ತಾರೆ, ಏಕೆಂದರೆ ದೇಹವನ್ನು ತ್ಯಜಿಸುವ ಗಳಿಗೆ, ನಮ್ಮ ಸಮತೋಲನವನ್ನು ಕಳೆದುಕೊಳ್ಳುವ ಸಮಯ. ಈಗ ಎಲ್ಲವೂ ಸರಿಯಾಗಿದೆ, ಆದರೆ ವಾಸ್ತವವೆಂದು ಬಗೆಯುವ ಎಲ್ಲವೂ ಕೈಯಿಂದ ಜಾರಿಹೋಗುವ ಕ್ಷಣ ಬಂದಾಗ, ಅದು ಸ್ವಲ್ಪ ನಿಯಂತ್ರಣವನ್ನು ಕಳೆದುಕೊಳ್ಳುವಂಥ ಸಮಯ.

ಅಕ್ಕ ಮಹಾದೇವಿ ಒಬ್ಬ ರಾಜನನ್ನು ಮದುವೆಯಾಗಿದ್ದಳು, ಆದರೆ ಬಾಲ್ಯದಿಂದಲೇ ತನ್ನನ್ನು ಸಂಪೂರ್ಣವಾಗಿ ಶಿವನಿಗೆ ಅರ್ಪಿಸಿಕೊಂಡಿದ್ದಳು, ‘ಓ ಶಿವ, ನನಗೆ ಹಸಿವಾಗುವಂತೆ ಮಾಡು, ಆದರೆ ಯಾವುದೇ ಆಹಾರ ಸಿಗದಂತೆ ನೋಡಿಕೊ. ಒಂದು ವೇಳೆ ಆಹಾರ ಸಿಕ್ಕರೆ, ಅದನ್ನು ಬಾಯಿಗೆ ಹಾಕುವ ಮುನ್ನ, ಅದು ಕೈಯಿಂದ ಬೀಳುವಂತೆ ಮಾಡು. ಆ ತುತ್ತನ್ನು ನೆಲದಿಂದ ಎತ್ತಿಕೊಳ್ಳುವ ಮೊದಲು, ಹಸಿದ ನಾಯಿ ಅದನ್ನು ತಿನ್ನುವಂತೆ ಮಾಡು. ಬಾಹ್ಯ ಪರಿಸ್ಥಿತಿ ಏನೆಂಬುದನ್ನು ಲೆಕ್ಕಿಸದೆ ವಿನಯಶೀಲತೆಯಿಂದ ಜೀವನ ನಡೆಸಲು ನಾನು ಕಲಿಯುವಂತಾಗಲು ಎಲ್ಲ ತರಹದ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡು’ ಇದು ಭಕ್ತಿಯ ಅತ್ಯುನ್ನತ ರೂಪ. ನೀವು ಸಿದ್ಧರಾಗಿರಲು ಬಯಸುತ್ತೀರಿ; ಜೀವವನ್ನು ಬಿಡುವ ಕ್ಷಣ ಬಂದಾಗ, ಲವಲೇಶವೂ ಹಿಂಜರಿಯಲು ಇಚ್ಛಿಸುವುದಿಲ್ಲ, ಏಕೆಂದರೆ ಆ ಕ್ಷಣ ವಿನಯಶೀಲರಾಗಿ ನಿರ್ವಹಿಸಬೇಕಾದ ಕ್ಷಣ. ಇದಕ್ಕೆ ಸ್ವಲ್ಪ ಅಭ್ಯಾಸ ಬೇಕಾಗುತ್ತದೆ. ಒಂದು ದಿನ ಇದ್ದಕ್ಕಿದ್ದಂತೆ ಹೀಗಾದರೆ, ಅದನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆಧ್ಯಾತ್ಮಿಕ ರಂಗದಲ್ಲಿ ಇರುವವರು ಪ್ರಜ್ಞಾಪೂರ್ವಕವಾಗಿ ಜೀವನದಲ್ಲಿ ಪರೀಕ್ಷೆಗಳನ್ನು ಮತ್ತು ತೊಂದರೆಗಳನ್ನು ಅರಸುತ್ತಿದ್ದರು. ಆಧ್ಯಾತ್ಮಿಕ ಹಾದಿಯನ್ನು ಯಾರಾದರೂ ಆರಿಸಿಕೊಂಡರೆ, ಅವರು ಮೊದಲು ಪ್ರಜ್ಞಾಪೂರ್ವಕವಾಗಿ ಬಡತನವನ್ನು ಅರಸು ತ್ತಾರೆ. ಹಸಿವಾದಾಗಲೂ ವಿನಯಶೀಲರಾಗಿ ಇರುವುದು ಸುಲಭದ ಮಾತನೇಲ್ಲ- ಅದು ನಮ್ಮನ್ನು ಎಲ್ಲ ರೀತಿಯಲ್ಲಿ ಪರೀಕ್ಷೆಗೆ ಒಡ್ಡುತ್ತದೆ. ಹಸಿದಿರುವಾಗ, ನಾವು ಮನುಷ್ಯರಾಗಿರುವುದಿಲ್ಲ ಪ್ರಾಣಿಯಂತಾಗಿರುತ್ತೇವೆ. ಭಾರತದಲ್ಲಿ ಯೋಗಿಗಳ ಬದುಕನ್ನು ನೋಡಿ. ಅವರು ಎಂದಿಗೂ ಏನನ್ನೂ ಕೇಳುವು ದಿಲ್ಲ; ಅವರು ಮುಂದೆ ಮುಂದೆ ಸಾಗುತ್ತಿರುತ್ತಾರಷ್ಟೆ. ಯೋಗಿಗಳಿಗೂ ಹಸಿವಾಗುತ್ತದೆ. ಆದರೆ, ಕೆಲವೊಮ್ಮೆ ಅವರು ಹಲವಾರು ದಿನಗಳವರೆಗೆ ಊಟ ಮಾಡಿರುವುದಿಲ್ಲ, ಆದರೂ ವಿನಯಶೀಲರಾಗಿಯೇ ವರ್ತಿಸುತ್ತಾರೆ. ನೀವು ಅವರಿಗೆ ಆಹಾರ ಕೊಟ್ಟರಷ್ಟೆ ಅದನ್ನು ಸ್ವೀಕರಿಸುತ್ತಾರೆ. ಮರುದಿನದ ಆಹಾರಕ್ಕಾಗಿ ಹಣ ನೀಡಿದರೆ ಅದನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಈ ಹಸಿವಿನ ಸವಾಲು ಜೀವನದಲ್ಲಿ ಯಾವಾಗಲೂ ಇರಬೇಕೆಂದು ಅವರು ಬಯಸುತ್ತಾರೆ. ಏಕೆಂದರೆ ನೀವು ಇಂದು ಎರಡು ಊಟಕ್ಕೆ ಹಣ ತೆಗೆದುಕೊಂಡರೆ, ನಾಳೆ ಹತ್ತು ಊಟಕ್ಕೆ ಹಣ ತೆಗೆದುಕೊಳ್ಳುವಂತೆ ತರ್ಕಬದ್ಧವಾಗಿ ನಿಮ್ಮನ್ನು ನೀವೇ ಒಪ್ಪಿಸಿಬಿಡುತ್ತೀರಿ. ಒಂದನ್ನು ಸೇರಿಸಿದ ನಂತರ, ಇನ್ನೊಂದನ್ನು ಸೇರಿಸುವುದು ರ್ತಾಕವಾಗಿ ಸ್ವೀಕಾರಾರ್ಹವಾಗಿಸುತ್ತದೆ. ನಂತರ ನಿಧಾನವಾಗಿ ಇಡೀ ಜೀವನವನ್ನು ಸಂಘಟಿಸುತ್ತೀರಿ ಮತ್ತು ಅದು ಕೊನೆಯೇ ಇಲ್ಲದ ರೀತಿಯಲ್ಲಿ ಬೆಳೆಯುತ್ತದೆ. ನಮ್ಮ ಬದುಕುಳಿಯುವ ಪ್ರಕ್ರಿಯೆಯನ್ನು ಯಾವ ಮಟ್ಟಕ್ಕೆ ಕರೆದೊಯ್ದಿದ್ದೇವೆ ಎಂದು ನೋಡಿ. ಬದುಕುಳಿಯುವ ಪ್ರಕ್ರಿಯೆಯನ್ನು ಆಕಾಶದೆತ್ತರಕ್ಕೆ ಏರಿಸಿದ್ದೇವೆಯಾದರೂ ಇನ್ನೂ ಅದು ಸಾಕಾಗಿಲ್ಲ.

ಆದ್ದರಿಂದಲೇ ಜನರು ಭಕ್ತಿ, ಗೌರವದಿಂದ ಶ್ರೀರಾಮನನ್ನು ಆರಾಧಿಸುವುದು. ಈ ಪೂಜೆ ಆತನ ಜೀವನದ ಯಶಸ್ಸಿನ ಕಾರಣದಿಂದಲ್ಲ, ಆದರೆ ಶ್ರೀರಾಮ ಕಷ್ಟಕರವಾದ ಕ್ಷಣಗಳನ್ನೂ ಎದುರಿಸಿದ ವಿನಯಶೀಲತೆಗಾಗಿ. ಅದುವೇ ಮೌಲ್ಯಯುತವಾಗಿರುವುದು; ಅದು ಜೀವನದ ಅತ್ಯುನ್ನತ ಮೌಲ್ಯ. ನಿಮ್ಮ ಬಳಿ ಎಷ್ಟಿದೆ, ಏನು ಮಾಡಿದ್ದೀರಿ, ಏನಾಯಿತು ಅಥವಾ ಏನಾಗಲಿಲ್ಲ ಎಂಬುದು ಪ್ರಶ್ನೆಯಲ್ಲ. ಏನೇ ಆದರೂ, ಅದನ್ನು ಹೇಗೆ ನಿಭಾಯಿಸಿದ್ದೀರಿ? ಎಂಬುದು ನೀವು ಯಾರೆಂಬುದರ ಗುಣಮಟ್ಟವನ್ನು ನಿರ್ಧರಿಸುತ್ತದೆ. ಮಾರುಕಟ್ಟೆ ಉತ್ತಮವಾಗಿರುವುದರಿಂದ ಶತಕೋಟಿಯನ್ನು ಗಳಿಸಬಹುದು. ಅದಕ್ಕೆ ಯಾವುದೇ ಅರ್ಥವಿಲ್ಲ. ಇದು ಸಾಮಾಜಿಕ ಪರಿಸ್ಥಿತಿ. ಒಂದು ಸಮಾಜದಲ್ಲಿ ಕೋಟ್ಯಧಿಪತಿ ಆಗಿರಬಹುದು. ಇನ್ನೊಂದು ಸಮಾಜದಲ್ಲಿ ನೀವೊಂದು ವೈಫಲ್ಯದಂತೆ ಕಾಣಿಸಬಹುದು. ಇದಕ್ಕೂ ಯಾವುದೇ ಅರ್ಥವಿಲ್ಲ. ಅದರಿಂದ ಬರುವ ಸೌಕರ್ಯಗಳನ್ನು ಆನಂದಿಸುವುದು ಸರಿ, ಆದರೆ ಮನುಷ್ಯರ ಬಗ್ಗೆ ಮುಖ್ಯವಾದ ವಿಷಯವಿದು: ಯಾವುದೇ ಪರಿಸ್ಥಿತಿಯಿದ್ದರೂ ಅವರು ಅದನ್ನು ಎಷ್ಟು ವಿನಯಶೀಲರಾಗಿ ನಿಭಾಯಿಸಬಲ್ಲರು? ಇದು ಬಹಳಷ್ಟು ಜನರಿಗೆ ಆಗುವುದನ್ನು ನೋಡುತ್ತೀರಿ; ಜೀವನದಲ್ಲಿ ದೊಡ್ಡ ಸವಾಲು ಎದುರಾಗುವವರೆಗೂ ಅವರು ಚೆನ್ನಾಗಿಯೇ ಕಾಣುತ್ತಾರೆ. ಸವಾಲು ಎದುರಾದಾಗ ಅವರು ನಿಜವಾಗಿಯೂ ಯಾರೆಂದು ತಿಳಿಯುತ್ತದೆ. ಅವರಿಗೆ ಬೇಕಿರುವ ರೀತಿಯಲ್ಲಿ ವಿಷಯಗಳು ನಡೆಯದೇ ಹೋದರೆ, ನಿಯಂತ್ರಣ ಕಳೆದುಕೊಳ್ಳುತ್ತಾರೆ.

ಜನರು ಯಾವಾಗಲೂ ತಮಗೆ ದೊರಕಿದ ವಸ್ತುಗಳಿಗಾಗಿ ಧನ್ಯವಾದ ಅರ್ಪಿಸುತ್ತಾರೆ. ದೊರಕುವ ವಸ್ತುಗಳು ಜೀವನಕ್ಕೆ ಮೌಲ್ಯವನ್ನು ಸೇರಿಸುವುದಿಲ್ಲ. ಇದನ್ನು ಭಾರತದಲ್ಲಿ ನೋಡಬಹುದು. ಒಂದು ಗುಡಿಸಲಿನ ಪಕ್ಕದಲ್ಲಿಯೇ ದೊಡ್ಡ ಮನೆ ಇರುತ್ತದೆ. ಆದರೆ ಪುಟ್ಟ ಗುಡಿಸಲಿನಲ್ಲಿ ವಾಸಿಸುವ ವ್ಯಕ್ತಿಗೂ ಸಿರಿವಂತನಷ್ಟೇ ಹೆಮ್ಮೆ ಇರುತ್ತದೆ. ಬೇರೆಯವರು ಹೇಗೆ ಇರಲಿ, ಕೇವಲ ಹೆಮ್ಮೆಯಿಂದಲ್ಲದೆ, ಒಬ್ಬ ವ್ಯಕ್ತಿ ವಿನಯಶೀಲನಾಗಿ ನಡೆದುಕೊಳ್ಳುವುದು ಒಳ್ಳೆಯದು. ಗಲ್ಲಿಗೆ ತಲೆಯೊಡ್ಡಬೇಕಾದರೂ ವಿನಯಶೀಲರಾಗಿಯೇ ಇರಿ. ಇದು ಮಾನವ ಗುಣ. ಉಳಿದದ್ದು ಕೇವಲ ಪರಿಸ್ಥಿತಿಗಳ ಗುಣ. ಹಾಗಾದರೆ, ಜೀವನವನ್ನು ಸರಿಯಾಗಿ ನಿರ್ವಹಿಸ

ಬಾರದು ಎಂದು ಇದರ ಅರ್ಥವೇ? ಇಲ್ಲ, ಸುತ್ತಲಿರುವುದನ್ನು ಚೆನ್ನಾಗಿಯೇ ನಿರ್ವಹಿಸಬೇಕು ಏಕೆಂದರೆ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದರೆ, ನನಗದು ಅದ್ಭುತವಾದ ಅನುಭವ ನೀಡುವ ಅಗತ್ಯವೇ ನಿಲ್ಲ. ಪ್ರತಿಯೊಂದು ಸನ್ನಿವೇಶವನ್ನೂ ವಿನಯವಂತಿಕೆಯಿಂದ ಎದುರಿಸಲು ಸಾಧ್ಯವಾದಾಗ ಮಾತ್ರ ನಾನು ಅದ್ಭುತವೆನಿಸುತ್ತದೆ. ಆದರೆ ಎಲ್ಲರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ಪರಿಸ್ಥಿತಿಯನ್ನು ನಿರ್ವಹಿಸುತ್ತೀರಷ್ಟೆ.

ಶ್ರೀರಾಮನು ಜೀವನದ ಸಂದರ್ಭಗಳನ್ನು ನಿರ್ವಹಿಸಲು ಪ್ರಯತ್ನಿಸಿದ, ಆದರೆ ಅವನಿಗೆ ಯಾವಾಗಲೂ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಅವನಿದ್ದಿದ್ದು ಕಷ್ಟದ ಸಮಯದಲ್ಲಿ ಮತ್ತು ವಿಷಯಗಳು ಅವನ ನಿಯಂತ್ರಣದಲ್ಲಿಲ್ಲ. ಆದರೆ ಮುಖ್ಯ ವಿಷಯವೆಂದರೆ ಅವನು ಯಾವಾಗಲೂ ವಿನಯಶೀಲನಾಗಿರುತ್ತಿದ್ದ. ಇದು ಆಧ್ಯಾತ್ಮಿಕವಾಗುವುದರ ಮೂಲಭೂತ ಸಾರವಾಗಿದೆ. ನಿಮ್ಮ ಚೇತನವು ಸುಂದರವಾದ ಪರಿಮಳಯುಕ್ತ ಹೂವಿನಂತೆ ಅರಳಲು ಸರಿಯಾದ ರೀತಿಯ ವಾತಾವರಣ ಬೇಕಿದ್ದಲ್ಲಿ, ನಿರಂತರವಾಗಿ ವಿನಯಶೀಲತೆಯ ವಾತಾವರಣ ಸೃಷ್ಟಿಸಬೇಕು.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net