ಆರೋಗ್ಯ ಪಾಲನೆಗೆ ಮಳೆಗಾಲದ ದಿನಚರಿ: ಧನ್ವಂತರಿ

Dhanvanthari
Published on
ರೋಗ ಬಂದ ನಂತರ ಪರಿಹರಿಸುವುದಕ್ಕಿಂತ ಅದು ಬಾರದಂತೆ ತಡೆಯುವುದೇ ಜಾಣತನ. ಹಾಗಾಗಿ ಸ್ವಾಸ್ಥ್ಯ ರಕ್ಷಣೆಗಾಗಿ ಆಯುರ್ವೆದದಲ್ಲಿ ಹಲವು ವಿಚಾರಗಳನ್ನು ಹೇಳಿದ್ದಾರೆ. ಅದರಲ್ಲಿ ಋತುಚರ್ಯವೂ ಒಂದು. ಋತುಚರ್ಯ ಅಂದರೆ ಆಯಾ ಕಾಲಕ್ಕೆ ತಕ್ಕಂತೆ ಆಹಾರ, ದಿನಚರಿಗಳನ್ನು ಪಾಲಿಸುವುದು. ಇದರಿಂದ ಆಯಾ ಕಾಲದಲ್ಲಿ ಬರಬಹುದಾದ ಹಲವಾರು ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಈಗ ಮಳೆಗಾಲ. ಈ ಕಾಲದಲ್ಲಿ ನಾವು ಒಂದಿಷ್ಟು ಸಂಗತಿಗಳನ್ನು ಪಾಲಿಸಿದರೆ ಸುರಿಯುವ ಮಳೆಯ ನಡುವೆಯೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಎಲ್ಲಕ್ಕಿಂತ ಮೊದಲು ನಾವು ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ ಮಳೆಗಾಲದಲ್ಲಿ ನಮ್ಮ ಜೀರ್ಣಶಕ್ತಿ ತುಂಬಾ ಕಡಿಮೆಯಾಗಿರುತ್ತದೆ. ಹಾಗಾಗಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಮಾತ್ರ ಸೇವಿಸಬೇಕು. ಅಗ್ನಿ ಅಂದರೆ ಜೀರ್ಣಶಕ್ತಿ ಕಡಿಮೆಯಿದ್ದಾಗ ರೋಗ ಸುಲಭವಾಗಿ ಬರುವುದೊಂದೇ ಅಲ್ಲ, ಗುಣಪಡಿಸುವುದೂ ಕಷ್ಟವಾಗುತ್ತದೆ. ಹಾಗಾಗಿ ವಾತಾವರಣ ತಂಪಾಗಿದೆ ಎಂದು ಕರಿದ ಪದಾರ್ಥಗಳನ್ನು ಸೇವಿಸುವುದು ತಪ್ಪು. ಆಹಾರದಲ್ಲಿ ಹೆಚ್ಚು ಹುಳಿ ಪದಾರ್ಥಗಳನ್ನು ಸೇವಿಸಬೇಕು. ಕೊತ್ತಂಬರಿ, ಜೀರಿಗೆ, ಶುಂಠಿ, ಲವಂಗ, ದಾಲ್ಚಿನ್ನಿ, ಏಲಕ್ಕಿ, ಮೆಣಸಿನ ಕಾಳು, ಸಾಸಿವೆ ಮುಂತಾದ ಸಾಂಬಾರ ಪದಾರ್ಥಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ದೊಡ್ಡಪತ್ರೆ, ನುಗ್ಗೆ ಸೊಪ್ಪು, ಪುದಿನ ಮುಂತಾದ ಉಷ್ಣ ಗುಣವಿರುವ ಮತ್ತು ಜೀರ್ಣಕ್ಕೆ ಸಹಕಾರಿಯಾದ ಸೊಪ್ಪುಗಳನ್ನು ಬಳಸಬೇಕು. ಊಟದಲ್ಲಿ ಹೆಚ್ಚಾಗಿ ತಿಳಿಸಾರು ಮತ್ತು ಸೂಪ್​ಗಳನ್ನು ಬಳಸುವುದು ಸೂಕ್ತ. ಬೆಳ್ಳುಳ್ಳಿ, ಈರುಳ್ಳಿ, ಕರಿಬೇವು, ಇಂಗು, ಅರಿಶಿನ, ಸಾಸಿವೆಗಳನ್ನು ಒಗ್ಗರಣೆ ಅಥವಾ ಇನ್ನಾವುದಾದರೂ ರೂಪದಲ್ಲಿ ಸೇವಿಸಿದರೆ ಒಳ್ಳೆಯದು. ಸ್ವಲ್ಪ ಮಟ್ಟಿಗೆ ಕೊಬ್ಬಿನ ಅಂಶವನ್ನು ಸೇವಿಸಬೇಕು ಎನ್ನುತ್ತದೆ ಆಯುರ್ವೆದ. ಹಾಗಾಗಿ ಶುದ್ಧವಾದ ಎಣ್ಣೆಯನ್ನು ಬಳಸುವುದು ಸೂಕ್ತ. ಆಹಾರದ ಪ್ರಮಾಣದಲ್ಲಿಯೂ ಕಾಳಜಿ ವಹಿಸಬೇಕು. ಹೊಟ್ಟೆಯ ಸಾಮರ್ಥ್ಯದ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಆಹಾರ ಸೇವಿಸಬಾರದು.

ಜೇನುತುಪ್ಪ ಸೇವನೆ: ಜೇನುತುಪ್ಪದ ಸೇವನೆ ವಿಶೇಷವಾಗಿ ಮಳೆಗಾಲದಲ್ಲಿ ಹಿತಕಾರಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬರುವ ಹಲವು ಕಾಯಿಲೆಗಳನ್ನು ತಡೆಯುವ ತಾಕತ್ತು ಜೇನು ತುಪ್ಪಕ್ಕಿದೆ. ಪ್ರತಿನಿತ್ಯ ಒಂದೆರಡು ಚಮಚ ಜೇನುತುಪ್ಪವನ್ನು ಬಳಸಬಹುದು. ಕಾಯಿಸಿದ ಬಿಸಿನೀರು ಅಥವಾ ಕಾಯಿಸಿ ಆರಿಸಿದ ನೀರನ್ನು ಸೇವಿಸುವುದು ಉತ್ತಮ. ನೀರನ್ನು ಕಾಯಿಸುವಾಗ ಕಾಳುಮೆಣಸು, ಶುಂಠಿ ಮುಂತಾದ ಸಾಂಬಾರ ಪದಾರ್ಥಗಳು ಮತ್ತು ಅರಿಶಿನ ಹಾಕಿದರೆ ಇನ್ನೂ ಒಳ್ಳೆಯದು.

ಇನ್ನು ಮಳೆಗಾಲದಲ್ಲಿ ನಮ್ಮ ದಿನಚರಿಯನ್ನು ಸರಿಯಾಗಿಟ್ಟುಕೊಳ್ಳುವುದೂ ಅಷ್ಟೇ ಅವಶ್ಯವಾದದ್ದು. ಬೆಳಿಗ್ಗೆ ಬೇಗ ಎದ್ದು ಲಘು ವ್ಯಾಯಾಮ, ಪ್ರಾಣಾಯಾಮಗಳನ್ನು ಮಾಡಬೇಕು. ಅತಿಯಾದ ವ್ಯಾಯಾಮ ಸರಿಯಲ್ಲ. ಶರೀರದ ಬೊಜ್ಜು ಕರಗಿಸುವ ಮತ್ತು ನಮ್ಮನ್ನು ಕ್ರಿಯಾಶೀಲರನ್ನಾಗಿ ಇಡುವ ಕ್ರಿಯೆಯಾದ ಉದ್ವರ್ತನವನ್ನು ಮಾಡಬಹುದು. ಉದ್ವರ್ತನ ಎಂದರೆ ಕೆಲವು ಚೂರ್ಣಗಳಿಂದ ರೋಮದ ವಿರುದ್ಧ ದಿಕ್ಕಿನಲ್ಲಿ ಮಸ್ಸಾಜ್ ಮಾಡುವುದು. ಸಾಮಾನ್ಯವಾಗಿ ತ್ರಿಫಲಾ ಚೂರ್ಣವನ್ನು ಬಳಸಬಹುದು. ಮಳೆಯಲ್ಲಿ ನೆನೆದು ಅಥವಾ ಇನ್ನಾವುದೋ ಕಾರಣಕ್ಕೆ ಮೈ ಒದ್ದೆಯಾದರೆ ಆದಷ್ಟು ಬೇಗ ಅದನ್ನು ಒರೆಸಿಕೊಂಡು ಬೆಚ್ಚಗಿಟ್ಟುಕೊಳ್ಳಬೇಕು. ಇಲ್ಲದೇ ಹೋದರೆ ಫಂಗಸ್ ಸಮಸ್ಯೆ ಉಂಟಾಗಿ ತೊಡೆಸಂಧಿ, ಕಂಕುಳು ಮುಂತಾದ ಭಾಗಗಳಲ್ಲಿ ತುರಿಕೆ ಪ್ರಾರಂಭವಾಗುತ್ತದೆ. ಯಾವುದೇ ಕಾರಣಕ್ಕೂ ಐಸ್ಕ್ರೀಮ್ ತಣ್ಣಗಾಗಿಸಿದ ನೀರು, ಶೀತಲೀಕರಿಸಿದ ವಸ್ತುಗಳನ್ನು ಸೇವಿಸಬಾರದು. ಬದಲಿಗೆ ಸಾಂಬಾರ ಪದಾರ್ಥಗಳನ್ನು ಹಾಕಿದ ಮಸಾಲಾ ಮಜ್ಜಿಗೆಯನ್ನು ಸೇವಿಸಬಹುದು. ಮಳೆಗಾಲದಲ್ಲಿ ಹಗಲುನಿದ್ದೆ ಮಾಡಬಾರದು. ಮಾಡಿದರೆ, ನೆಗಡಿ, ಆಲಸ್ಯ, ತಲೆಭಾರ, ಅತಿತೂಕದ ಸಮಸ್ಯೆಗಳು ಕಾಡುತ್ತವೆ. ರಾತ್ರಿ ಊಟವನ್ನು ಸಾಧ್ಯವಾದಷ್ಟು ಬೇಗ ಮಾಡಬೇಕು ಮತ್ತು ರಾತ್ರಿಯ ಊಟ ಲಘುವಾಗಿರಬೇಕು. ಸಂಜೆ ಏನಾದರೂ ಆಹಾರ ಸೇವಿಸಿದ್ದರೆ ಊಟದ ಬದಲು ಹಣ್ಣುಗಳನ್ನು ಸೇವಿಸುವುದು ಉತ್ತಮ. ಕನಿಷ್ಠ ಇಷ್ಟು ನಿಯಮಗಳನ್ನು ಪಾಲಿಸಿದರೆ ಈ ಮಳೆಗಾಲ ಆರೋಗ್ಯಯುತವಾಗಿರಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net