

‘ಮಾಡಿದಷ್ಟು ನೀಡು ಭಿಕ್ಷೆ’ ಎಂಬ ಕಾಯಕತತ್ವ ಸಾರಿದ ಯೋಗಿ, ಜಲಸಂರಕ್ಷಣೆಯ ಮಹತ್ವ ಅರಿತು ಕೆರೆಗಳನ್ನು ಕಟ್ಟಿಸಿದ ದೂರದೃಷ್ಟಿಯ ಚಿಂತಕ, ಜಾತೀಯತೆ ಹೋಗಲಾಡಿಸಿ ಸಮಾನತೆಗಾಗಿ ಶ್ರಮಿಸಿದ ಸಮಾಜ ಸುಧಾರಕ ಎಂಬಿತ್ಯಾದಿ ವಿಶೇಷತೆ ಹೊಂದಿ ಜನಮಾನಸದಲ್ಲಿ ನೆಲೆಗೊಂಡಿರುವವರು ಶ್ರೀ ಗುರು ತಿಪ್ಪೇರುದ್ರಸ್ವಾಮಿ. ರಾಜ್ಯದಲ್ಲೇ ಎರಡನೇ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಹೊಂದಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ಜಾತ್ರೋತ್ಸವದಲ್ಲಿ ಇಂದು (ಮಾ. 12) ದೊಡ್ಡ ರಥೋತ್ಸವವು ಜರುಗಲಿದೆ.
ಒಂದು ವಾರ ನಡೆಯುವ ಈ ಜಾತ್ರೋತ್ಸವದ ನಿಮಿತ್ತ ಒಳ ಮತ್ತು ಹೊರಮಠಗಳಲ್ಲಿ ವಿಶೇಷ ಪೂಜೆ ಜರುಗಲಿವೆ. ಈ ರಥೋತ್ಸವದಲ್ಲಿ ರಾಜ್ಯ ಸೇರಿ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಕೇರಳದಿಂದಲೂ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ನವದಂಪತಿ ತೇರಿನ ಕಳಸ ನೋಡಿದರೆ ಒಳ್ಳೆಯದಾಗುತ್ತದೆ ಎಂಬ ಪ್ರತೀತಿಯೂ ಇದೆ. ನೆಲಮೂಲ ಸಂಸ್ಕೃತಿಯ ಆಚರಣೆಯೆಂದೇ ಬಿಂಬಿತವಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾಮಹೋತ್ಸವವು ಶಿಷ್ಟ ಹಾಗೂ ಬುಡಕಟ್ಟು ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಇದು ಹಿಂದು, ಮುಸ್ಲಿಂ ಭಾವೈಕ್ಯದ ಸಂಕೇತವಾಗಿಯೂ ಹೊರಹೊಮ್ಮಿದೆ.
ತಿಪ್ಪೇರುದ್ರಸ್ವಾಮಿ ಹಿನ್ನೆಲೆ: ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ಆಂಧ್ರದ ಕಡೆಯಿಂದ ಭಕ್ತ ಫಣಿಯಪ್ಪನ ಜತೆ ಆಗಮಿಸಿದ್ದಾಗ ನಾಯಕನಹಟ್ಟಿಯು ಪಾಳೆಪಟ್ಟಿನ ಕೇಂದ್ರವಾಗಿತ್ತು. ಆಗ ಊರಿನ ಮಾರಿಗುಡಿಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ತಿಪ್ಪೇರುದ್ರಸ್ವಾಮಿಯವರು ಬೆಳಗಾಗುವುದರಲ್ಲಿ ಬೆತ್ತ, ಜೋಳಿಗೆ ಪವಾಡ ತೋರಿಸಿ ಅಲ್ಲಿಂದ ಮಾರಿ(ಜನರಲ್ಲಿನ ಅಜ್ಞಾನ, ಅಂಧಕಾರ)ಯನ್ನು ಓಡಿಸಿ ಅದೇ ಗುಡಿಯಲ್ಲೇ ನೆಲೆಗೊಂಡರು. ಅದೇ ಈಗಿನ ಒಳಮಠ. ಇಲ್ಲಿ ಶೈವಸಂಸ್ಕೃತಿಯ ಆಚರಣೆಗಳಿವೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ಕಾಲಮಾನ ನಿಖರವಾಗಿಲ್ಲವಾದರೂ 17ನೇ ಶತಮಾನವೆಂಬುದು ಹಲವು ವಿದ್ವಾಂಸರ ಅಭಿಮತ. ಹಟ್ಟಿ ಮಲ್ಲಪ್ಪ ನಾಯಕ ದೊರೆಯ ಜತೆಯಾಗಿ ಶ್ರೀ ತಿಪ್ಪೇರುದ್ರಸ್ವಾಮಿಯವರು ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಕೊನೆಗೆ ಜೀವಸಮಾಧಿಯಾಗಿದ್ದಾರೆ. ಆ ಸ್ಥಳವೇ ಈಗಿನ ಹೊರಮಠ.
ಇಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆಯ ವಿಶೇಷತೆಯನ್ನು ಕಾಣಬಹುದಾಗಿದೆ. ಮೈಸೂರಿನ ಹೈದರಾಲಿಯು ಚಿತ್ರದುರ್ಗದ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಹೈದರಾಲಿಯ ಕನಸಿನಲ್ಲಿ ಕಂಡ ಶ್ರೀ ತಿಪ್ಪೇರುದ್ರಸ್ವಾಮಿಯು ‘ನಿನಗೆ ಪುತ್ರಸಂತಾನವಾಗಲಿದೆ’ ಎಂದು ಆಶೀರ್ವದಿಸಿದ್ದರಂತೆ. ಆ ನಂತರ ಹೈದರಾಲಿ ವಂಶಸ್ಥನಾಗಿ ಜನಿಸಿದ ಮಗುವಿಗೆ ಶ್ರೀಗಳ ಜ್ಞಾಪಕಾರ್ಥವಾಗಿ ‘ತಿಪ್ಪು ಸುಲ್ತಾನ್’ ಎಂದು ನಾಮಕರಣ ಮಾಡಿದ್ದು, ನಂತರದಲ್ಲಿ ಅದೇ ಹೆಸರು ‘ಟಿಪ್ಪು ಸುಲ್ತಾನ್’ ಎನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ. ಅಲ್ಲದೆ, ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ಜೀವಂತ ಸಮಾಧಿಯ ಸ್ಥಳದಲ್ಲಿ ಹೈದರ್ ಅಲಿ ದೇಗುಲ ನಿರ್ವಿುಸಿದ್ದು, ಅದು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿದೆ.
ತಿಪ್ಪೇರುದ್ರಸ್ವಾಮಿ ಪಾಳೇಪಟ್ಟಿನ ಸ್ಥಳೀಯ ರಾಜರ ಜತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವುದಕ್ಕೆ ನಾಲ್ಕೈದು ಶತಮಾನಗಳಿಂದಲೂ ಜೀವನಾಡಿಯಾಗಿರುವ ಕೆರೆಗಳು ಸಾಕ್ಷಿಯಾಗಿವೆ. ಕಾಯಕಯೋಗಿ ಎಂದೇ ಪ್ರಸಿದ್ಧವಾದ ಶ್ರೀ ತಿಪ್ಪೇರುದ್ರಸ್ವಾಮಿ, ಬಯಲುಸೀಮೆಯ ಜನರ ಬವಣೆ ನೀಗಿಸಲು ಕೆರೆಗಳನ್ನು ನಿರ್ವಿುಸಿ ಜಲತಜ್ಞ ಎಂದು ಸಾಬೀತುಪಡಿಸಿರುವುದನ್ನು ಕಾಣಬಹುದು. ಇವರ ಕೆಲಸಗಳು ಮೇಲ್ನೋಟಕ್ಕೆ ಪವಾಡಗಳೆನಿಸಿದರೂ ಅವುಗಳಲ್ಲಿ ಸಮಾಜಮುಖಿ ಚಿಂತನೆ ಇರುವುದು ಕಂಡುಬರುತ್ತದೆ.
ಇನ್ನು ಜಾತಿನಿಮೂಲನೆಗಾಗಿ ಶೈವ ಹಾಗೂ ದಲಿತರ ಮನೆಯಲ್ಲಿ ಏಕಕಾಲಕ್ಕೆ ಶಿವಪೂಜೆ ಕೈಗೊಂಡು ‘ಮನುಷ್ಯಜಾತಿ ತಾನೊಂದೇ ವಲಂ’ ಎಂಬ ಆದಿಕವಿ ಪಂಪನ ನಾಣ್ನುಡಿಯನ್ನು ಸಾಕಾರಗೊಳಿಸಿದ್ದಾರೆ. ಕೆರೆ ಕಟ್ಟುವಾಗ ಇವರು ಸ್ವತಃ ಕಾರ್ವಿುಕರೊಂದಿಗೆ ಕೆಲಸ ಮಾಡಿದ್ದಲ್ಲದೆ, ಕಾರ್ವಿುಕರಿಗೆ ಮರಳಿನ ಗುಡ್ಡೆಗಳನ್ನು ಮಾಡಲು ಹೇಳಿ ಆ ಗುಡ್ಡೆಗಳಿಗೆ ಬೆತ್ತದಿಂದ ಮುಟ್ಟಿಸಿ ಕೂಲಿ ಹಣವನ್ನು ನೀಡುತ್ತಿದ್ದರು. ಹೀಗಾಗಿಯೇ ಕಾಯಕನಿಷ್ಠರು, ಗರ್ಭಿಣಿಯರು ತಾವು ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿತ್ತು. ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ಈ ಕ್ರಮವನ್ನು ಈಗಲೂ ಜನರು ಸ್ಮರಿಸುತ್ತಿದ್ದು, ಮಾಡಿದಷ್ಟು ನೀಡು ಭಿಕ್ಷೆ ಎನ್ನುವುದು ಸುಳ್ಳಲ್ಲ ಎಂದು ಅನೇಕ ಸಂದರ್ಭಗಳಲ್ಲಿ ಮಾತನಾಡುವುದು ಸಾಮಾನ್ಯ. ನಾಯಕನಹಟ್ಟಿ ಸುತ್ತಮುತ್ತ ಇವರು ಕಟ್ಟಿಸಿದ ಕೆರೆಗಳು ಇಂದಿಗೂ ಜೀವನಾಡಿಯಾಗಿದ್ದು, ಆಗಲೇ ಇವರೊಬ್ಬ ಇಂಜಿನಿಯರ್ ಆಗಿದ್ದರು ಎನ್ನುವುದಕ್ಕೆ ನಾಲ್ಕೈದು ಶತಮಾನಗಳು ಕಳೆದರೂ ಕೆರೆಗಳು ಸುಭದ್ರವಾಗಿರುವುದು ಸಾಕ್ಷಿ. ಶ್ರೀ ಗುರು ತಿಪ್ಪೇರುದ್ರಸ್ವಾಮಿಯನ್ನು ಜಲಜಂಗಮರೆಂದೇ ಅನೇಕರು ಹೆಸರಿಸುವುದುಂಟು. ಸತ್ತ ಎಮ್ಮೆಯನ್ನು ಬದುಕಿಸಿದ್ದು, ತಿಪ್ಪೇರುದ್ರಸ್ವಾಮಿಯವರು ಪಶುಪಾಲನಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದ್ದಕ್ಕೆ ದೃಷ್ಟಾಂತ ವಾಗಿದೆ.
ಕೊಬ್ಬರಿ ಸುಡುವುದು: ಶ್ರೀಗುರು ತಿಪ್ಪೇರುದ್ರಸ್ವಾಮಿಗಳು ನಾಯಕನಹಟ್ಟಿಗೆ ಬರುವಾಗ ಸಂಜೆಗತ್ತಲಾದ್ದರಿಂದ ವ್ಯಾಪಾರಿಯಾದ ಭಕ್ತ ಫಣಿಯಪ್ಪ ಕೊಬ್ಬರಿ ಬೆಳಕನ್ನು ಮಾಡಿಕೊಂಡು ಬಂದ. ಆ ಕಾರಣಕ್ಕಾಗಿ ಇಂದಿಗೂ ಜಾತ್ರೆಯ ಸಮಯದಲ್ಲಿ ಲಕ್ಷಾಂತರ ಭಕ್ತರು ಕ್ವಿಂಟಾಲ್ಗಟ್ಟಲೆ ಕೊಬ್ಬರಿಯನ್ನು ಸುಡುವ ಸಂಪ್ರದಾಯವಿದೆ. ದೇವಸ್ಥಾನ ಸಮಿತಿಯವರು ದಾಸೋಹಕ್ಕೆ ನೀಡಿ ಎಂದು ಮನವಿ ಮಾಡಿದರೂ ಈ ಸಂಪ್ರದಾಯ ನಿಂತಿಲ್ಲ.
ನಾಯಕನಹಟ್ಟಿಯ ದಾರಿ...: ಜಾತ್ರೆ ನಡೆಯುವ ನಾಯಕನಹಟ್ಟಿಯು ಚಿತ್ರದುರ್ಗ ಜಿಲ್ಲಾಕೇಂದ್ರದಿಂದ ಈಶಾನ್ಯ ದಿಕ್ಕಿಗೆ 34 ಕಿ.ಮೀ., ಚಳ್ಳಕೆರೆ ತಾಲೂಕು ಕೇಂದ್ರದಿಂದ ವಾಯವ್ಯಕ್ಕೆ 20 ಕಿ.ಮೀ. ಅಂತರದಲ್ಲಿದೆ. ಜಾತ್ರಾವಿಶೇಷವಾಗಿ ಮಾ. 12ರಂದು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿದಂತೆ ಇತರ ಕಡೆಗಳಿಂದ ಜಿಲ್ಲಾಡಳಿತವು ಹೆಚ್ಚಿನ ಬಸ್ ಸಂಚಾರದ ಸೌಲಭ್ಯ ಕಲ್ಪಿಸಿದೆ.
ರಥದ ಮಹತ್ವ: ಹಟ್ಟಿ ಪರಿಷೆಯ ಕೇಂದ್ರಬಿಂದು ರಥೋತ್ಸವ. ಇದು ಪ್ರತಿವರ್ಷ ಪಾಲ್ಗುಣ ಮಾಸದ ತದಿಗೆಯ ದಿನ ಚಿತ್ತಾ ನಕ್ಷತ್ರದಂದು ಜರುಗಲಿದೆ. ರಾಜ್ಯದ ಎರಡನೇ ದೊಡ್ಡ ರಥ ಎನ್ನುವ ಖ್ಯಾತಿ ಇಲ್ಲಿನ ತೇರಿಗಿದೆ. ಈ ತೇರಿಗೆ ಐದು ಗಾಲಿಗಳು, ಒಂಬತ್ತು ಮಜಲುಗಳಿವೆ. 75 ಅಡಿ ಎತ್ತರ, 70 ಟನ್ ತೂಕವಿರುವ ಬೃಹತ್ ಗಾತ್ರದ ರಥ ಇದಾಗಿದೆ. ಸಿಂಗರಿಸಿದ ರಥವನ್ನು ಎಳೆಯಲು ಬೃಹತ್ ಗಾತ್ರದ ಮಿಣಿ(ಹಗ್ಗ)ಯನ್ನು ಪ್ರತಿವರ್ಷ ಮನ್ನೇಕೋಟೆಯವರು ತಂದು ಒಪ್ಪಿಸುತ್ತಾರೆ.