ಸಿದ್ಧವಾದ ಆಹಾರ ಸೇವನೆಗೂ ಕಾಲಮಿತಿ!

Food Timings
Published on
ಜಗತ್ತು ಬದಲಾಗುತ್ತಿದೆ. ಜೀವನ ಶೈಲಿಯಲ್ಲಿ ದಿನೇದಿನೇ ಮಾರ್ಪಾಡುಗಳು ಆಗುತ್ತಿರುವುದನ್ನೂ ನೋಡುತ್ತಿದ್ದೇವೆ. ಇದರ ಜೊತೆಯಲ್ಲೇ ಆಹಾರ ಕ್ರಮದಲ್ಲೂ ಕ್ಷಿಪ್ರ ಬೆಳವಣಿಗೆಗಳು ಆಗುತ್ತಿವೆ. ವಿಪರ್ಯಾಸದ ಸಂಗತಿಯೆಂದರೆ ಮಾನವನ ಆರೋಗ್ಯ ಸ್ಥಿತಿಯಲ್ಲೂ ಇವೆಲ್ಲವುಗಳಿಂದ ವೇಗವಾಗಿ ಏರುಪೇರು ಸಂಭವಿಸುತ್ತಿವೆ. ಹಾಗಿದ್ದರೆ ನಾವು ಎಡವಿದ್ದಾದರೂ ಎಲ್ಲಿ? ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಏಕೆಂದರೆ ಆಹಾರ ವಸ್ತುಗಳ ಶುಚಿತ್ವದ ವಿಷಯದಲ್ಲಿ ಸುಧಾರಿಸಿದ್ದೇವೆ. ದೂರದ ದೇಶಗಳ ಹಣ್ಣುಗಳು, ಆಹಾರ ತಿಂಡಿಗಳು, ಒಣಹಣ್ಣುಗಳು ಎಲ್ಲವೂ ಅಂಗೈ ಎದುರಿಗೇ ಸಿಗುತ್ತಿದೆ. ಅತ್ಯಾಧುನಿಕ ವ್ಯವಸ್ಥೆ ಹೊಂದಿದ್ದೇವೆ. ಎಲ್ಲವೂ ಇದ್ದರೂ ಆರೋಗ್ಯ ಯಾಕೆ ಮರೀಚಿಕೆ ಆಗುತ್ತಿದೆ?. ಆಹಾರ ವಿಷಯದಲ್ಲಿ ಪ್ರಾಚೀನ ಭಾರತದ ಪ್ರಭುತ್ವದ ಎದುರು ಇಂದಿನ ಆಹಾರ ಜ್ಞಾನ ಏನಿದ್ದರೂ ಕುಬ್ಜವಾಗಿ ಕಾಣುತ್ತದೆ. ಬೆಂಗಳೂರಿನ ಕೊಚ್ಚೆಯೆಲ್ಲ ಸಾಗುವ ವೃಷಭಾವತಿ ನದಿಯ ತೀರದಲ್ಲಿ ಕೊಬ್ಬಿ ದಷ್ಟಪುಷ್ಟವಾಗಿ ಬೆಳೆದ ಸೊಪ್ಪುಗಳು ಅದುಹೇಗೆ ಉಂಡವರಿಗೆ ಆರೋಗ್ಯವನ್ನು ನೀಡೀತು? ಆಯುರ್ವೆದ, ಶಾಸ್ತ್ರ, ಉಪನಿಷತ್ತುಗಳು, ಸೂಕ್ಷ್ಮವಾಗಿ, ಸಮಗ್ರವಾಗಿ, ಸಮರ್ಪಕವಾಗಿ, ಸದುದ್ದೇಶದಿಂದ ವಿವರಿಸಿದ ಆಹಾರ ವಿಷಯಗಳನ್ನು ಅರಿತುಕೊಳ್ಳದೆ ಆಗುವ ಬೆಳವಣಿಗೆಗಳನ್ನೆಲ್ಲಾ ಸತ್ಯ ಸಂಶೋಧನೆಗಳ ಫಲವೆಂದು ಗಣಿಸಿ, ಭ್ರಮಿಸಿದರೆ ಅದುಹೇಗೆ ಆರೋಗ್ಯ ಪ್ರಾಪ್ತಿ ಆದೀತು? ಪ್ರಾಚೀನ ಭಾರತ ಆಹಾರಕ್ಕೆ ನೀಡಿದ ಸ್ಥಾನ ಗೌರವಗಳೇ ನಮ್ಮೆಲ್ಲರ ಕಣ್ಣು ತೆರೆಸಬೇಕು. ಮಾನವ ದೇಹವೇ ಆಹಾರದಿಂದ ಸಂಭವಿಸಿದ್ದು ಎಂದ ಚರಕಸಂಹಿತೆ, ಅನ್ನದಿಂದ ಪುರುಷ, ಜೀವಿಗಳು ಹುಟ್ಟಿ, ಅನ್ನದಿಂದಲೇ ಬೆಳೆಯುತ್ತವೆ, ಆದುದರಿಂದ ಅನ್ನವನ್ನು ಬ್ರಹ್ಮ ಎಂಬುದಾಗಿ ತಿಳಿದುಕೊಳ್ಳಬೇಕು, ಅನ್ನವನ್ನು ಯಾವತ್ತೂ ನಿಂದಿಸಬಾರದು ಎಂದು ತಿಳಿಹೇಳಿದ ತೈತ್ತರೀಯ ಉಪನಿಷತ್ತು, ನಾವು ಸೇವಿಸುವ ಆಹಾರವೇ ವಿಷ್ಣು ಎಂಬ ಅತ್ಯುನ್ನತ ವಿಚಾರಧಾರೆಯ ವಿಷ್ಣುಸಹಸ್ರನಾಮದ ಅರ್ಚನೆಗಳು, ಆಹಾರ ಶುದ್ಧಿಯಿಂದ ಸತ್ತ್ವ ಶುದ್ಧಿ, ಇದರಿಂದಲೇ ಉತ್ಕೃಷ್ಟವಾದ ಸ್ಮೃತಿ ಎಂದು ಜಗಕೆ ಸಾರಿದ ಛಾಂದೋಗ್ಯ ಉಪನಿಷತ್, ಆಹಾರದಿಂದ ಮನಸ್ಸಿನ ಮೇಲಾಗುವ ಪರಿಣಾಮವನ್ನು ಹೇಳುತ್ತಾ ಸಾತ್ವಿಕ ಆಹಾರದ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದ ಭಗವದ್ಗೀತೆ ಮೊದಲಾದ ಸನಾತನ ಉಪದೇಶಗಳು ಆಹಾರದ ಬಗೆಗೆ ಭಾರತೀಯ ಪರಂಪರೆ ಹೊಂದಿರುವ ಪೂಜ್ಯಭಾವವನ್ನು ಅಭಿವ್ಯಕ್ತಗೊಳಿಸುತ್ತವೆ.

ಆಹಾರದಿಂದ ಶರೀರದಲ್ಲಿ ಆಗುವ ಬದಲಾವಣೆಗಳು ಒಂದೆಡೆಯಾದರೆ ಮನಸ್ಸಿನ ಮೇಲಾಗುವ ಪ್ರಭಾವವೂ ಹಲವಾರು ಪರಿವರ್ತನೆಗಳಿಗೆ ಕಾರಣವಾಗುತ್ತದೆ. ಹಣ್ಣಿನ ರಸಗಳು, ಒಣಹಣ್ಣುಗಳು, ಸ್ನಿಗ್ಧ ಆಹಾರಗಳು, ಹೃದ್ಯ, ರುಚಿಕರ ಆಹಾರ ಹಾಗೂ ತರಕಾರಿಗಳೆಲ್ಲಾ ಬಹುತೇಕ ಸಾತ್ವಿಕ ಗುಣವನ್ನು ಹೊಂದಿರುವುದನ್ನು ಭಗವದ್ಗೀತೆಯೇ ಬೋಧಿಸುತ್ತದೆ. ಬದಲಾದ ಜೀವನ ಶೈಲಿಯಿಂದಾಗಿ ಇಂದು ಮೊದಲೇ ಸಿದ್ಧಪಡಿಸಿ ಕಟ್ಟಿಟ್ಟ ಆಹಾರಗಳಿಗೆ ಬಹುಬೇಡಿಕೆಯಿದೆ. ಅವುಗಳಲ್ಲಿ ಬಳಸುವ ಸಂರಕ್ಷಕ ರಾಸಾಯನಿಕಗಳ ಪರಿಣಾಮ ದೀರ್ಘಕಾಲದಲ್ಲಿ ಆರೋಗ್ಯವನ್ನು ಬುಡಮೇಲು ಮಾಡುತ್ತದೆ ಎಂಬುದು ತಿಳಿದಿರುವ ವಿಚಾರ. ಖಾರ, ಹುಳಿ, ಉಪ್ಪುಗಳು ಅತಿಯಾಗಿ ಉಪಯೋಗಿಸಲ್ಪಟ್ಟು ಒಣ, ವಿದಾಹಿ ಗುಣಗಳು ಸೇರಿಕೊಂಡು ಪೊಟ್ಟಣಗಳಲ್ಲಿ ಸಿಗುವ ಹೆಚ್ಚಿನೆಲ್ಲಾ ಸಿದ್ಧ ಆಹಾರ ವಸ್ತುಗಳು ಮಿತಿಮೀರಿದ ರಾಜಸಿಕ ಗುಣಗಳಿಂದ ಕೂಡಿರುತ್ತವೆ. ತಯಾರಿಸಿ ಹಲವು ದಿನಗಳೇ ಕಳೆದಿರುವುದರಿಂದ ತಾಮಸಿಕ ಗುಣವನ್ನೂ ಹೊಂದುತ್ತದೆ. ಒಂದೇ ಆಹಾರ ಪದಾರ್ಥವು ಮೂಲತಃ ಸಾತ್ವಿಕ ಗುಣವನ್ನೇ ಹೊಂದಿದ್ದರೂ ಕಾಲ ಮೀರುವುದರಿಂದ ತಾಮಸಿಕ ಗುಣವನ್ನು ತಾಳುತ್ತದೆ ಎಂಬ ವಿಶಿಷ್ಟ ಚಿಂತನೆಯನ್ನು ಅರ್ಥೈಸಿಕೊಂಡಷ್ಟು ಕ್ಷೇಮ. ನೆಲ್ಲಿಕಾಯಿ ಹಣ್ಣನ್ನು ಹಾಗೆಯೇ ತಿಂದರೆ ಸಾತ್ವಿಕ ಗುಣವಿದೆ. ನೆಲ್ಲಿಕಾಯಿಯಿಂದ ಮಾಡಿದ ಉಪ್ಪಿನಕಾಯಿ ರಾಜಸಿಕ! ನೆಲ್ಲಿಕಾಯಿ ಹಾಕಿ ಮದ್ಯ ತಯಾರಿಸಿದರೆ ಅದು ತಾಮಸಿಕ! ಮನೆಯಲ್ಲೇ ಇರಲಿ, ಹೋಟೆಲು-ಮಾರುಕಟ್ಟೆಗಳಲ್ಲೇ ಆಗಿರಲಿ, ಒಮ್ಮೆ ತಯಾರಿಸಿದ ಅನ್ನ ಪಲ್ಯ, ಸಾರು, ಸಾಂಬಾರು, ಪಾಯಸ, ಮುಂತಾದ ಆಹಾರ ವ್ಯಂಜನಗಳು ಸಾತ್ವಿಕ ಗುಣವನ್ನೇ ಹೊಂದಿದ್ದರೂ ಮೂರುಗಂಟೆಯ ಅವಧಿಯನ್ನು ದಾಟಿದರೆ ತಾಮಸ ಗುಣವನ್ನು ಪಡೆಯುತ್ತವೆ. ಊಟವನ್ನು ತಯಾರಿಸಿದ ಬಳಿಕ ಭೋಜನವನ್ನು ಮಾಡಲು ತಡಮಾಡಬಾರದು ಎನ್ನುವುದು ಇದಕ್ಕಾಗಿಯೇ, ತಯಾರಿಸಿ ಯಾಮ ಅಂದರೆ ಮೂರು ಗಂಟೆ ದಾಟಿದ, ರುಚಿ ಕಳೆದುಕೊಂಡಿರುವ, ಹಳಸಿರುವ, ದುರ್ವಾಸನೆ ಬೀರುತ್ತಿರುವ ಆಹಾರವು ತಾಮಸಿಕ ಎಂದು ಭಗವದ್ಗೀತೆಯಲ್ಲಿ ಹೇಳಿರುವುದು ಗಮನಾರ್ಹ. ಮನಸ್ಸು ಖುಷಿಯಿಂದ ಇದ್ದರೆ ಆಹಾರವು ಬೇಗನೆ ಜೀರ್ಣವಾಗುತ್ತದೆ. ಕೋಪ, ಚಿಂತೆ, ಬೇಸರ, ಭಯ, ದುಃಖಗಳಿದ್ದರೆ, ನಿದ್ರೆಯು ಸರಿಯಾಗಿ ಆಗಿಲ್ಲದಿದ್ದರೆ ಸುಲಭವಾಗಿ ಜೀರ್ಣವಾಗುವುದಿಲ್ಲ ಎನ್ನುತ್ತದೆ ಆಯುರ್ವೆದದ ಚರಕ ಸಂಹಿತೆ. ಪ್ರಾಚೀನರ ಆರೋಗ್ಯದ ಗುಟ್ಟು ಸಿದ್ಧಪಡಿಸಿ ದಿನಗಳೇ ಕಳೆದುಹೋದ ಆಹಾರವಲ್ಲ, ಸಿದ್ಧರ ಆಹಾರ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net