

ಅದು ಎಲ್ಲವನ್ನೂ ಬದಲಿಸಿ ಬಿಡುತ್ತದೆ: ನಮ್ಮ ಬದುಕಿನ ಪ್ರಯಾರಿಟಿಗಳನ್ನೂ. ಮೊದಲೆಲ್ಲ ಮನೆಯಲ್ಲಿ ಸಾವುಗಳಾದರೆ ವೈಕುಂಠ ಸಮಾರಾಧನೆ ಅಂತಲೋ, ಶಿವಗಣಾರಾಧನೆ ಅಂತಲೋ ಸತ್ತವರದೊಂದು ಫೋಟೊ ಬ್ಲಾಕ್ ಮಾಡಿಸಿ ಹಾಕಿ, ಕರೀ ಇಂಕಿನಲ್ಲಿ ಪ್ರಿಂಟು ಹೊಡೆಸಿ ನೂರಿನ್ನೂರು ಜನಕ್ಕೆ ಪೋಸ್ಟು ಮಾಡುವ ಸಂಪ್ರದಾಯವಿತ್ತು. ಕೊಂಚ ಬಡವರಾದರೆ ಹತ್ತು ಪೈಸೆ ಪೋಸ್ಟ್ ಕಾರ್ಡಿನಲ್ಲಿ ವಿಚಾರ ತಿಳಿಸಿ ಬರೆದು ಹತ್ತಿಪ್ಪತ್ತು ಜನಕ್ಕೆ ಪೋಸ್ಟ್ ಮಾಡುತ್ತಿದ್ದರು. ಅಂಥ ಪತ್ರಗಳ ಮೂಲೆಯಲ್ಲಿ ಒಂದು ಗೀಟು ಹಾಕಿ, ಅದರ ಮೇಲೊಂದು ಕಪ್ಪುಮಸಿಯ ಚುಕ್ಕೆ ಇಟ್ಟರೆಂದರೆ, ಅದು ಮರಣವಾರ್ತೆಯ ಕಾರ್ಡ ಅಂತಲೇ ಲೆಕ್ಕ. ಆ ಪತ್ರಗಳ ಮೂಲೆಯಲ್ಲಿ ‘ಕ್ಷೇಮ’ ಅಥವಾ ಹೆಡ್ಡಿಂಗಿನ ಜಾಗದಲ್ಲಿ ‘ಓಂ ಶಿವಾಯನಮಃ’ ಇತ್ಯಾದಿ ಉ.ಕು.ಸಾಂ.ಗಳು ಇರುತ್ತಿರಲಿಲ್ಲ. ತೀರಾ ಶ್ರೀಮಂತರು, ಹೆಸರುವಾಸಿಗಳು ಸತ್ತರೆ ಮಾತ್ರ ಪತ್ರಿಕೆಗಳಿಗೆ ಜಾಹೀರಾತು ಕೊಟ್ಟು ‘ಇದನ್ನೇ ಆಮಂತ್ರಣವೆಂದು ತಿಳಿಯತಕ್ಕದ್ದು’ ಎಂದು ಹಾಕಿಸುತ್ತಿದ್ದರು. ಈಗೇನಿದೆ? ಒಂದು ಸರಳವಾದ, ಕ್ಲುಪ್ತವಾದ ಮೆಸೇಜ್: ಅಪ್ಪ ತೀರಿಕೊಂಡರು. ಅವರ ಹಳೇ ವೀಲ್ಛೇರು ಮಾರಾಟಕ್ಕಿದೆ! Finish.
ಇದೆಲ್ಲದರ ಮಧ್ಯೆ ನಾವು ಮರೆತು ಹೋದದ್ದೇನೆಂದರೆ, ಅವನೇನಾದ? ಪ್ರಿಂಟಿಂಗ್ ಪ್ರೆಸ್ಸಿನವನು? ಮರಣವಾರ್ತೆಯ ಕಾರ್ಡ, ಅದು ನೂರೇ ಪ್ರತಿಗಳಾದರೂ ಅವನೇ ಪ್ರಿಂಟು ಮಾಡಿಕೊಡಬೇಕಾಗಿತ್ತು. ಮದುವೆ ಕಾರ್ಡಿನ ಸಂಭ್ರಮವೇ ಬೇರೆ. ಛತ್ರ ಸಿಗುತ್ತೋ ಇಲ್ಲವೋ ನೋಡಿ ಎಂಬುದರಿಂದ ಹಿಡಿದು, ಹೇಳಿದ ಟೈಮಿಗೆ ಕಾರ್ಡ ಪ್ರಿಂಟ್ ಮಾಡಿಕೊಡುತ್ತಾನೋ ಇಲ್ಲವೋ ನೋಡಿ ಎಂಬುದರ ತನಕ ಎಚ್ಚರ ವಹಿಸಲಾಗುತ್ತಿತ್ತು. ಒಂದಿಡೀ ಮನೆತನದ ಅಷ್ಟೂ ಮದುವೆ ಫೋಟೊಗಳನ್ನು ಹೇಗೆ ಒಬ್ಬನೇ ಫೋಟೊಗ್ರಾಫರ್ ತೆಗೆಯಬೇಕೆಂಬ ನಿಯಮವಿರುತ್ತಿತ್ತೋ, ಹಾಗೆ ಆ ಮನೆತನದ ಅಷ್ಟೂ ಮದುವೆ ಕಾರ್ಡ-ಮರಣದ ಕಾರ್ಡಗಳನ್ನು ಒಂದೇ ಪ್ರಿಂಟಿಂಗ್ ಪ್ರೆಸ್ಸಿನವನು ಪ್ರಿಂಟು ಮಾಡಬೇಕೆಂಬ ಸಂಪ್ರದಾಯವಿತ್ತು. ಉಳಿದೆಲ್ಲ ಸಂದರ್ಭಗಳಲ್ಲಿ ಅವನನ್ನು ಮರೆತು ಹೋಗುತ್ತಿದ್ದೆವು. ಆದರೆ ಆ ಘಟನೆ ಹೊತ್ತಿಗೆ ಸರಿಯಾಗಿ ಅವನು ನೆನಪಾಗಿ ಬಿಡುತ್ತಿದ್ದ.
ಮೊದಲು ಝುರಾಕ್ಸು ಬಂತು. ಪ್ರಿಂಟಿಂಗ್ ಪ್ರೆಸ್ಸು ಕೊಂಚ ಮಂಕಾಯಿತು. ಆಮೇಲೆ ಕಂಪ್ಯೂಟರು-ಡಿ.ಟಿ.ಪಿ.ಗಳು ಬಂದವು. ಮುಂದೆ ಇ- ಮೇಲ್ ಬಂತು. ಕಡೆಗೆ ಮೊಬೈಲು-ವಾಟ್ಸಾಪ್ ಬರುವುದರೊಂದಿಗೆ ಪ್ರಿಂಟಿಂಗ್ ಪ್ರೆಸ್ಸುಗಳು ನಮ್ಮ ನಿತ್ಯ ಬದುಕಿನಿಂದ ಮರೆಯಾಗಿಯೇ ಹೋದವು. ಅದೇ ರೀತಿ ಡಿಜಿಟಲ್ ಕೆಮೆರಾಗಳು ಬರುವುದರೊಂದಿಗೆ ಎಂತೆಂಥ ಸ್ಟುಡಿಯೋಗಳೂ ಕಣ್ಮರೆಯಾಗಿಬಿಟ್ಟವು. ಈಗ ಮೊಬೈಲುಗಳಿಗೇ ಕೆಮೆರಾ-ವಿಡಿಯೋಗಳು ಬಂದಿವೆ. ಸ್ಟುಡಿಯೋಗಳ ಪಾಲಿಗೆ ಅದು ಮರಣವಾರ್ತೆ. ಹೀಗೆ ನಮ್ಮ ಬದುಕಿನಿಂದ ಅನೇಕ ಸಂಗತಿಗಳು ಮರೆಯಾಗಿ ಹೋಗಿವೆ. ಹೊಸವು ಬಂದು ಕುಳಿತಿವೆ. ಈಗ ಯಾರ ಕಿಸೆಯಲ್ಲಿ ಫೋನ್ ನಂಬರುಗಳನ್ನು ಬರೆದುಕೊಳ್ಳುವ ಪುಟ್ಟ ಪುಸ್ತಕವಿರುತ್ತದೆ ಹೇಳಿ? ಮನೆಯ ಮಧ್ಯದ ಹಾಲ್ನಲ್ಲಿ ಫೋನಿಟ್ಟು, ಅದರ ಕೆಳಗೆ ಡೈರೆಕ್ಟರಿ ಇಡುತ್ತಿದ್ದೆವು. ಈಗ ಅನೇಕರ ಮನೆಗಳಲ್ಲಿ ಲ್ಯಾಂಡ್ಫೋನ್ಗಳೇ ಇಲ್ಲ. ಹಣ ಇಟ್ಟುಕೊಳ್ಳಲಿಕ್ಕೆಂದೇ ಪ್ಯಾಂಟಿನ ಸೊಂಟದ ಒಳಭಾಗದಲ್ಲಿ ಒಂದು ವಾಚ್ ಪಾಕೆಟ್ ಅಂತ ಹೊಲಿಸುತ್ತಿದ್ದೆವು. ಈಗ ಕಾರ್ಡಗಳ ಕಾಲ. ಪಿನ್ ಕೋಡ್ ಹೊಂದಿದ ಕ್ರೆಡಿಟ್ ಕಾರ್ಡಿಗೆ ವಾಚ್ ಪಾಕೆಟ್ ಯಾಕೆ ಬೇಕು? ಈಗೀಗ ಪಂಚ್ ಮಾಡುವುದಕ್ಕೂ ಕಾರ್ಡ ಬೇಕಿಲ್ಲ. ಹೆಬ್ಬೆರಳ ಗುರುತು ತೋರಿಸಿದರೆ ಕದ ಬಿಚ್ಚಿಕೊಳ್ಳುತ್ತದೆ. ನಮ್ಮ ಮಂಗ್ಯಾನ ಬ್ರ್ಯಾಂಡಿನ ಹಲ್ಲುಪುಡಿ, ರೈಲು ಚೊಂಬು, ಕಟ್ಟಿಗೆಯ ಚಕ್ಕೆ ಹಾಕಿ ನೀರು ಕಾಯಿಸುತ್ತಿದ್ದ ತಾಮ್ರದ ಬಾಯ್ಲರು, ಥರ್ವ ಮೀಟರು, ಬಂದ ಪತ್ರಗಳನ್ನು ಚುಚ್ಚಿ ನೇತು ಹಾಕುತ್ತಿದ್ದ ಆ ಕೊಕ್ಕೆಯ ತಂತಿ, ಬೂಟು ಪಾಲೀಶ್ ಮಾಡುವ ಬ್ರಷ್ಷು-ಹೀಗೆ ಅನೇಕ ವಸ್ತುಗಳು ನಮ್ಮ ಬದುಕಿನಿಂದ ಕಣ್ಮರೆಯಾಗಿವೆ.
ಪ್ರಯಾರಿಟಿಗಳ ಪಟ್ಟಿ ಬೇರೆಯಾಗಿದೆ: ಮನುಷ್ಯ ಸಂಬಂಧಗಳೂ ಅಷ್ಟೇ ಅಲ್ಲವಾ ಅಂತ ಯೋಚಿಸುತ್ತೇನೆ. ಪ್ರೀತಿಸಿದ ಹುಡುಗಿ ಒಂದೇ ಒಂದು ದಿನ ಕಣ್ಣಿಗೆ ಬೀಳದಿದ್ದರೆ ಅವತ್ತಿಡೀ ಮಂಕಾಗಿ ಅವಳ ಮನೆಯ ಬೀದಿ ಸುತ್ತುತ್ತಿದ್ದ ಹುಡುಗ. ಈಗ ಅವನ ಹುಡುಗಿ ಅವನದೇ ಹೆಂಡತಿಯಾಗಿದ್ದಾಳೆ. ಪಕ್ಕದಲ್ಲೇ ಗಾಂಜಾ ಕುಡಿದ ಬೈರಾಗಿಯಂತೆ ಮಲಗಿ ನಿದ್ದೆ ಹೋಗುತ್ತಿದ್ದಾಳೆ. ಇವನು ಗೋಡೆಯೆಡೆಗೆ ಮುಖ ಮಾಡಿ ಮಲಗಿದ ಹಯವದನ. ತಮ್ಮ ಮದುವೆ ಆಲ್ಬಮ್ಳನ್ನು ಅವರೇ at least ವರ್ಷಕ್ಕೊಂದು ಬಾರಿ ತೆರೆದು ನೋಡುವುದಿಲ್ಲ. ಹಳೆಯ ಪ್ರೇಮಪತ್ರಗಳನ್ನು ಎತ್ತಿಟ್ಟುಕೊಳ್ಳುವುದಕ್ಕೂ ಇಂತಿಷ್ಟು ವರ್ಷ ಅಂತ expiry date ಇರುತ್ತದೆ. ಆಮೇಲೆ ಅವೆಲ್ಲ ಡಿಸ್ಪೋಸಬಲ್ ಕಮಾಡಿಟಿಗಳೇ.
ಇದೆಲ್ಲ ಗೊತ್ತಿದ್ದೂ ನಾವು ಮಾನವ ಸಂಬಂಧಗಳ ಬಗ್ಗೆ ಪ್ರತಿನಿತ್ಯ ರೋಮಾಂಚಿತರಾಗುತ್ತಿರುತ್ತೇವೆ. ಹೊಸ ಸ್ನೇಹ, ಹೊಸ ಸಂಬಂಧ, ಹೊಸ ಷೇಕ್ ಹ್ಯಾಂಡ್. ಈ ‘ಹೊಸ’ವುಗಳೆಲ್ಲವೂ ಕೆಲವೇ ದಿನಗಳಲ್ಲಿ ನಿಧನವಾಗಿ ಹಳೆಯದಾಗುತ್ತವೆ ಅಂತ ಗೊತ್ತಿದ್ದೂ ಹೊಸತುಗಳಿಗಾಗಿ ಹಾತೊರೆಯುತ್ತಿರುತ್ತೇವೆ. ಆದರೆ ಗಮನಿಸಿದ್ದೀರಾ? ಕೆಲವು ಹಳೆಯ-ಶಾಶ್ವತ ಸಂಗತಿಗಳು ನಮ್ಮೊಂದಿಗೆ ಬೇಡವೆಂದರೂ ಉಳಿದುಕೊಂಡು ಬಿಟ್ಟಿರುತ್ತವೆ. ಒಂದು ಸಂಬಂಧವೆಂಬುದು ಚೂಯಿಂಗ್ಗಮ್ ಹಾಗೆ. ಮೊದ ಮೊದಲು ರುಚಿ, ಘಮ, ಮಾಧುರ್ಯ. ಅದೆಲ್ಲ ಸ್ವಲ್ಪ ಹೊತ್ತಿಗೆ ಮುಗಿದು ಹೋಗುತ್ತದೆ. ಆದರೆ ನಾವು ಗಮ್ ಅಗೆಯುತ್ತಲೇ ಇರುತ್ತೇವೆ. ಅದು ಚಪ್ಪೆ-ಚಪಾಳೆದ್ದು ಹೋದ ನಂತರವೂ ಹಲ್ಲಿನಡಿಗೆ ಸಿಕ್ಕು ಜಬಡಿಸಿಕೊಳ್ಳುತ್ತಲೇ ಇರುತ್ತದೆ. ಯಾಕೆ ನಾವು ಆ ಸತ್ತು ಹೋದ, ರುಚಿಹೀನ ಗಮ್ ಉಗಿಯುವುದಿಲ್ಲ? ಯಾಕೆಂದರೆ, ನಮಗೆ ಹಾಗೆ ಅಗೀತಾ ಇರುವುದು ಅಭ್ಯಾಸವಾಗಿ ಹೋಗಿರುತ್ತದೆ ಅಂತೀರಾ? Sorry. ನಮಗೆ ಅದನ್ನು ಎಲ್ಲಿ ಉಗಿಯಬೇಕು ಎಂಬುದು ಗೊತ್ತಿರುವುದಿಲ್ಲ. ಅದು ಎಲ್ಲೆಂದರಲ್ಲಿ ಉಗಿದು ಮುಂದಕ್ಕೆ ನಡೆದುಬಿಡಬಹುದಾದ ಗಮ್ ಅಲ್ಲ. ಹಾಗೆ ಉಗಿದರೆ, ಯಾರ ಕಾಲಿಗೋ ಮೆತ್ತಿಕೊಳ್ಳುತ್ತದೆ. ಯಾರದೋ ಕಾಲಿಗೆ ಮೆತ್ತಿಕೊಂಡಿತು ಎಂಬುದಕ್ಕಿಂತ ಒಂದು ಕಾಲಕ್ಕೆ ಅದು ನಮ್ಮ ಬಾಯಲ್ಲಿ, ನಮ್ಮ ದವಡೆಯಲ್ಲಿ, ನಮ್ಮದೇ ನಾಲಗೆಯ ಮೇಲೆ ಇತ್ತು ಎಂಬುದು ಮಹತ್ವದ ಸಂಗತಿಯಾಗಿ ಬಿಡುತ್ತದೆ. ಒಮ್ಮೆ ಉಗಿದ ಮೇಲೆ, ಅದು ಯಾರದೋ ಕಾಲಿಗೆ ಮೆತ್ತಿಕೊಂಡ ನಂತರ, ಅದನ್ನು ಮತ್ತೆ ಅಲ್ಲಿಂದ ಬಿಡಿಸಿ ಬಾಯಿಗಿಟ್ಟುಕೊಳ್ಳುತ್ತೇವಾ? Not likely. ಹಾಗಾದರೆ ಅದನ್ನೇನು ಮಾಡೋದು?
ಚಿಕ್ಕದೊಂದು ಕಾಗದದ ತುಂಡು, ವೇಸ್ಟ್ ಪೇಪರ್, ಒಂದು ಟಿಷ್ಯೂ ಪೇಪರ್ ಸಾಕು. ಅದರೊಳಕ್ಕೆ ಮಟ್ಟಸವಾಗಿ ಉಗಿದು, ಕಾಗದ ಮಡಚಿ ಯಾರ ಕಾಲಿಗೂ ಮೆತ್ತಿಕೊಳ್ಳದಂತೆ ಡಿಸ್ಪೋಸ್ ಮಾಡಿ ಬಿಡಬಹುದು. ನಾವು ಚೂಯಿಂಗ್ ಗಮ್ ಖರೀದಿಸುವಾಗ, ಅದರ ರ್ಯಾಪರ್ ಉಳಿಸಿಟ್ಟುಕೊಳ್ಳಬೇಕು ಅಂತ ಯೋಚಿಸಿರುವುದೇ ಇಲ್ಲ. ಯೌವನದ ಹುರುಪು, ಗೆಲುವಿನ ಭರ, ಸಿಕ್ಕದ್ದೆಲ್ಲ ಉಂಡುಬಿಟ್ಟೇನೆಂಬ ಅತಿಯಾಸೆ-ಎಲ್ಲ ಸೇರಿಕೊಂಡು ಬಾಯಿಯ ತುಂಬ ನಾನಾ ತರಹದ ಚೂಯಿಂಗ್ ಗಮ್ಳನ್ನು ಹಾಕಿಕೊಂಡು ಅಗಿಯುತ್ತಲೇ ಹೋಗುತ್ತೇವೆ. ಉಗಿಯಬೇಕೆನ್ನಿಸಿದರೂ ಉಗಿಯಲಾಗದೆ ನರಳುತ್ತೇವೆ. ಮೂರ್ಖರಲ್ಲವೆ? ಗಮ್ ಎಂಥದ್ದೇ ಆಗಿರಬಹುದು. ತುಂಬ ದುಬಾರಿಯಾದದ್ದು, ವಿದೇಶದ್ದು, ಏರ್ಪೋರ್ಟಿನ ಡ್ಯೂಟಿ ಫ್ರೀ ಷಾಪ್ನಲ್ಲಿ ಕೊಂಡದ್ದು ಅಥವಾ ಹತ್ತಿರದ ಅಂಗಡಿಯಲ್ಲೇ ಸಿಗುವ ಸೆಂಟರ್ ಫ್ರೆಷ್! ಆದರೆ ರುಚಿ-ಘಮ ಕಳೆದುಕೊಂಡ ಮೇಲೆ ಅದು ಎಂಥದ್ದೇ ಆದರೂ dead gum ತಾನೆ? ಹಾಗಂತ ಅಲ್ಲಲ್ಲಿ ಉಗಿಯಬೇಡಿ. ಪ್ರತಿ ಸಂಬಂಧವೂ ಒಂದು ಸಂದರ್ಭದಲ್ಲಿ ಹುಟ್ಟಿ, ಮತ್ತೊಂದು ಸಂದರ್ಭದಲ್ಲಿ ಸಾಯುತ್ತದೆ. ಹಾಗೆ ಸತ್ತ ಪ್ರತಿಯೊಂದಕ್ಕೂ ಶಾಸ್ತ್ರೋಕ್ತ, ಗೌರವಪೂರ್ವಕ ಅಂತಿಮ ಸಂಸ್ಕಾರ ನೀಡಬೇಕು. ಡೀಸೆಂಟ್ ಬರಿಯಲ್. ಈ ಮಾತನ್ನು ಚೂಯಿಂಗ್ಗಮ್ ಬಾಯಿಗೆ ಹಾಕಿಕೊಳ್ಳುವ ಮುನ್ನ ನಿಚ್ಚಳವಾಗಿ ಯೋಚಿಸಬೇಕು. ಎಷ್ಟು ದಿನ, ಎಷ್ಟು ವರ್ಷ ಇದನ್ನು ಅಗಿದೇನು? ಆಮೇಲೆ ಉಗಿಯುತ್ತೇನಾ? ನುಂಗುವುದಂತೂ ಸಾಧ್ಯವಿಲ್ಲ. ಹಾಗಾದರೆ ಉಗಿಯುವುದೆಲ್ಲಿ? ಹೇಗೆ? ಟಿಷ್ಯೂ ಪೇಪರ್ ಇದೆಯಾ? ಅದಕ್ಕೆ ತೆರಬೇಕಾದ ಕಿಮ್ಮತ್ತೇನು? ಪ್ರತಿ ಸಂಬಂಧವೂ ತನ್ನದೇ ಆದ ಕಂದಾಯ ಬೇಡುತ್ತದೆ. ಕೊಡಲಾಗದಿದ್ದರೆ ಸತ್ತ ಗಮ್ ಅಗಿಯುತ್ತಲೇ ಇರಬೇಕಾದ ಯಾವಜ್ಜೀವ ಶಿಕ್ಷೆ. ಯಾವುದು ಸೂಕ್ತ? ನಿರ್ಧರಿಸಿ ಗಮ್ ಖರೀದಿಸಿ.
(ಲೇಖಕರು ಹಿರಿಯ ಪತ್ರಕರ್ತರು)