

ಆ ಉದ್ಯಾನದ ಸುತ್ತಮುತ್ತಲಿದ್ದ ಮನೆಗಳವರನ್ನು ವಿಚಾರಣೆ ಮಾಡಲಾಯಿತು. ನಮ್ಮ ಅಕ್ಕಪಕ್ಕದಲ್ಲಿ ಯಾರೂ ಗರ್ಭಿಣಿಯರೇ ಇರದಿದ್ದ ಕಾರಣ ಬೇರೊಂದು ಬಡಾವಣೆಯ ನಿವಾಸಿ ಈ ಕೃತ್ಯ ಮಾಡಿರಬೇಕೆಂದು ಅವರೆಂದರು. ಸಿಸಿಟಿವಿಗಳ ಫುಟೇಜ್ನಲ್ಲಿ, ಒಬ್ಬ ಮಹಿಳೆ ಬೆಳಗಿನ ಜಾವದ 4 ಗಂಟೆಯ ಸುಮಾರಿಗೆ ಉದ್ಯಾನದೊಳಗೆ ಹೋದದ್ದು ಗೋಚರಿಸಿತು. ಆದರೆ ಮುಖ ಸರಿಯಾಗಿ ಕಾಣದ ಕಾರಣ ಆಕೆ ಯಾರೆಂದು ತಿಳಿಯಲಿಲ್ಲ.
ಅಕ್ಕಪಕ್ಕದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳಲ್ಲಿ ವಿಚಾರಣೆ ಮಾಡಿದರೂ ಯಾವ ಸುಳಿವೂ ಸಿಗಲಿಲ್ಲ. ಆಗ ಆ ಉದ್ಯಾನದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಗರ್ಭಧಾರಣೆಯ ವಯಸ್ಸಿನಲ್ಲಿರುವ ಸ್ತ್ರೀಯರು ಸ್ವಯಂ ಆಗಿ ತಮ್ಮ ಗಂಟಲು ದ್ರವದ ಸ್ಯಾಂಪಲ್ಗಳನ್ನು ಪೊಲೀಸರಿಗೆ ನೀಡಬೇಕೆಂದು ಸ್ಥಳೀಯ ಎಸ್ಪಿ ವಿನಂತಿಸಿದರು. 18 ಜನರು ಸ್ಯಾಂಪಲುಗಳನ್ನು ನೀಡಿದರು. ನವಜಾತ ಶಿಶುವಿನ ರಕ್ತದ ಸಾಂಪಲನ್ನು ಈ ಸ್ಯಾಂಪಲ್ಗಳೊಂದಿಗೆ ಹೋಲಿಸಿ ನೋಡಿದಾಗ ಶಿಶುವಿನ ಡಿಎನ್ಎ ಸುಧಾ ಎನ್ನುವವಳ ಡಿಎನ್ಎ ಜತೆಗೆ ಹೋಲಿಕೆಯಾಯಿತು.
ಸುಧಾಳ ಮನೆಗೆ ಪೊಲೀಸರು ಹೋದಾಗ ಆಕೆಯ ಪತಿ ರಾಜ್, ‘ನಮ್ಮ ಲಗ್ನವಾಗಿ ಒಂದೂವರೆ ವರ್ಷಗಳಾಗುತ್ತ ಬಂದಿದೆ, ಹೆಂಡತಿ ಗರ್ಭ ಧರಿಸಿಯೇ ಇಲ್ಲ, ನೀವು ತಪು್ಪಕಲ್ಪನೆಯಿಂದ ಇಲ್ಲಿಗೆ ಬಂದಿರಬೇಕು’ ಎಂದ. 22 ವರ್ಷದ ಸುಧಾಳನ್ನು ವಿಚಾರಿಸಿದಾಗ ತಾನು ಗರ್ಭಿಣಿ ಆಗಿರದಿದ್ದ ಕಾರಣ ಶಿಶು ಜನಿಸುವ ಪ್ರಮೇಯವೇ ಇಲ್ಲ, ಇದೇ ಧೈರ್ಯದಿಂದಲೇ ಗಂಟಲು ದ್ರವದ ಸ್ಯಾಂಪಲ್ ಕೊಡಲು ಮುಂದೆಬಂದೆ ಎಂದಳು. ಲ್ಯಾಬೊರೇಟರಿಯಲ್ಲಿ ಪರೀಕ್ಷೆ ನಡೆಸುವಾಗ ಅಚಾತುರ್ಯವಾಗಿರಬಹುದೆಂದು ಪೊಲೀಸರು ಭಾವಿಸಿ ಅವಳ ಗಂಟಲು ದ್ರವದ ಸ್ಯಾಂಪಲ್ಲಿನ ಡಿಎನ್ಎ ಹೋಲಿಕೆಯನ್ನು ಮತ್ತೊಮ್ಮೆ ಮಾಡಿಸಬೇಕೆಂದು ತೀರ್ವನಿಸಿದರು. ಆದರೆ ಜಿಲ್ಲಾ ಎಸ್ಪಿ ಈ ನಿರ್ಧಾರಕ್ಕೆ ಸಮ್ಮತಿಸದೇ ಸುಧಾಳನ್ನೇ ಶಂಕಿಸಿ ಹೆಚ್ಚಿನ ತನಿಖೆಗೆ ಆದೇಶಿಸಿದರು.
ಸುಧಾಳ ಹಿನ್ನೆಲೆ ಪರಿಶೀಲಿಸಿದಾಗ, ಆಕೆ ಪಕ್ಕದ ತಾಲೂಕಿಗೆ ಸೇರಿದವಳೆಂದೂ; ಆಕೆ ಹಿಂದೆ ಪರಶುರಾಮ್ ಎನ್ನುವವನನ್ನು ಪ್ರೀತಿಸುತ್ತಿದ್ದಳೆಂದೂ ಅವನ ಜತೆಗೆ ಕೆಲ ತಿಂಗಳ ಕಾಲ ಸಹಜೀವನ ನಡೆಸಿ ಆನಂತರ ಅವನನ್ನು ಬಿಟ್ಟು ಕುಟುಂಬದವರ ತೀರ್ವನದಂತೆ ರಾಜನನ್ನು ಮದುವೆ ಮಾಡಿಕೊಂಡಿದ್ದಾಗಿಯೂ ತಿಳಿದು ಬಂದಿತು. ಸುಧಾಳನ್ನು ಮತ್ತೊಮ್ಮೆ ಪೊಲೀಸರು ವಿಚಾರಿಸಿದಾಗ ಆಗಲೂ ತಾನು ಗರ್ಭಿಣಿಯಾಗಿರಲೇ ಇಲ್ಲ ಎಂದು ಸಾಧಿಸಿದಳು. ಸಿಸಿಟಿವಿ ಚಿತ್ರಗಳಲ್ಲಿದ್ದ ಮಹಿಳೆ ಸುಧಾಳನ್ನು ಹೋಲುತ್ತಿದ್ದ ಕಾರಣ ಆಕೆಯನ್ನು ನುರಿತ ಪ್ರಸೂತಿ ತಜ್ಞೆಯೊಬ್ಬರ ಮೂಲಕ ದೈಹಿಕ ಪರೀಕ್ಷೆಗೊಳಪಡಿಸಲಾಯಿತು. ‘ಈಕೆ ಬಾಣಂತಿ ಎನ್ನುವುದರಲ್ಲಿ ಸಂಶಯವಿಲ್ಲ, ಕೆಲವೇ ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ’ ಎಂದರು ಆ ತಜ್ಞೆ. ಆನಂತರ ಸುಧಾಳ ಗಂಡನ ಗಂಟಲು ದ್ರವದ ಸ್ಯಾಂಪಲ್ ಪಡೆದು ಶಿಶುವಿನ ಡಿಎನ್ಎ ಜತೆಗೆ ಹೋಲಿಸಿದಾಗ ಮೃತಹೊಂದಿದ್ದ ನವಜಾತ ಶಿಶು, ಸುಧಾ ಹಾಗೂ ರಾಜನ ಮಗುವೇ ಎಂದು ಸಾಬೀತಾಯಿತು.
ಈ ಸುದ್ದಿ ಕೇಳಿ ರಾಜ ಗಾಬರಿಗೊಂಡ. ‘ನನ್ನ ಹೆಂಡತಿ ಗರ್ಭಿಣಿಯಾಗಿದ್ದಲ್ಲಿ ಆಕೆಯ ಹೊಟ್ಟೆ ದೊಡ್ಡದಾಗಿರಬೇಕಾಗಿತ್ತಲ್ಲವೇ’ ಎಂದು ಆತ ಪ್ರಶ್ನಿಸಿ ಪತ್ನಿಯ ಹೊಟ್ಟೆ ಉಬ್ಬಿಯೇ ಇರಲಿಲ್ಲ ಎಂದ. ಕೆಲವು ಸ್ತ್ರೀಯರು ಗರ್ಭಧಾರಣೆ ಮಾಡಿದಾಗ ಅವರ ಉದರ ದೊಡ್ಡದಾಗಿ ಕಾಣುವುದಿಲ್ಲ ಎಂದರು ವೈದ್ಯರು. ಸತ್ತ ಶಿಶು ತನ್ನದೇ ಮಗುವೆಂದು ತಿಳಿದಾಗ ರಾಜ ಅಳತೊಡಗಿದ. ‘ನನಗೆ ಮಕ್ಕಳಾಗಬೇಕೆಂದು ಬಹಳ ಆಸೆಯಿತ್ತು, ಸುಧಾ ನನ್ನ ಆಸೆಗೆ ಏಕೆ ತಣ್ಣೀರೆರಚಿದಳೆನ್ನುವುದೇ ತಿಳಿಯುತ್ತಿಲ್ಲ’ ಎಂದ.
ಆನಂತರ ಸುಧಾಳನ್ನು ಸುದೀರ್ಘವಾಗಿ ವಿಚಾರಣೆ ಮಾಡಿದಾಗ ಆಕೆ ತಾನು ಸ್ವಾಭಾವಿಕವಾಗಿಯೇ ಮನೆಯಲ್ಲಿಯೇ ಗರ್ಭ ಧರಿಸಿದ್ದು, ಮನೆಯಲ್ಲಿಯೇ ಮಗುವನ್ನು ಹೆತ್ತು ಆನಂತರ ಯಾರಿಗೂ ತಿಳಿಯದಂತೆ ಮಗುವನ್ನು ಉದ್ಯಾನದ ಬಳಿ ಎಸೆದಿದ್ದಾಗಿ ತಿಳಿಸಿದಳು. ತಾನೇ ಮಗುವಿನ ಹೊಕ್ಕಳಬಳ್ಳಿಯನ್ನು ಕತ್ತರಿಸಿದ್ದಾಗಿಯೂ ಹೇಳಿದಳು. ತಾನು ಈ ಹಿಂದೆಯೂ ಪರಶುರಾಮ್ಂದ ಗರ್ಭಿಣಿಯಾಗಿದ್ದು, ಆಗಲೂ ಮನೆಯವರಿಗೆ ತಾನು ಗರ್ಭಿಣಿಯೆಂದು ತಿಳಿದುಬಂದಿರಲಿಲ್ಲ, ಮಗುವನ್ನು ಹೆತ್ತು ಮೋರಿಯಲ್ಲಿ ಎಸೆದಿದ್ದೆ ಎಂದು ಆಕೆ ಹೇಳಿದಳು.
‘ಈ ಹಿಂದೆ ನಿನಗೆ ಪರಶುರಾಮ್ಂದ ಮಗು ಜನಿಸಿದಾಗ ಅವಿವಾಹಿತೆಯಾಗಿದ್ದ ಕಾರಣ ತಾಯಿಯಾದದ್ದನ್ನು ಮುಚ್ಚಿಡಲು ಶಿಶುಹತ್ಯೆ ಮಾಡಿದ್ದಿರಬಹುದು. ಆದರೆ ಈಗ ನೀನು ರಾಜನ ಧರ್ಮಪತ್ನಿಯಾಗಿರುವೆ. ಮಕ್ಕಳಾಗಬೇಕೆಂದು ತನಗೂ ಇಚ್ಛೆಯಿತ್ತು ಎಂದು ಆತನೇ ಹೇಳಿದ್ದಾನೆ, ನೀನು ನವಜಾತ ಮಗುವನ್ನು ಹತ್ಯೆ ಮಾಡಲು ಏನು ಕಾರಣ’ ಎಂದು ಪೊಲೀಸರು ಕೇಳಿದಾಗ ಸುಧಾ ಹೀಗೆಂದಳು: ‘ನನಗೆ ಫೇಸ್ಬುಕ್ನಲ್ಲಿ ಹೊಸ ಹೊಸ ಯುವಕರನ್ನು ಪರಿಚಯ ಮಾಡಿಕೊಂಡು ಅವರೊಡನೆ ಚಾಟ್ ಮಾಡುವ ಚಟವಿದೆ. ಹೀಗಾಗಿ ಬೇರೆ-ಬೇರೆ ಹೆಸರುಗಳಲ್ಲಿ ಹಲವಾರು ಅಕೌಂಟ್ಗಳನ್ನು ತೆರೆದು ನೂರಾರು ಯುವಕರನ್ನು ಗೆಳೆಯರನ್ನಾಗಿ ಮಾಡಿಕೊಂಡು ಚಾಟ್ ಮಾಡುತ್ತಿದ್ದೆ. ಆರು ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ಉದಯ್ ಎನ್ನುವ ಸುಂದರ, ಸುಶಿಕ್ಷಿತ, ಶ್ರೀಮಂತ ವ್ಯಕ್ತಿಯ ಪರಿಚಯ ಮಾಡಿಕೊಂಡೆ. ಆತ ತಾನು ಕೊಲ್ಲಿ ರಾಷ್ಟ್ರವೊಂದರಲ್ಲಿ ದೊಡ್ಡ ಉದ್ಯೋಗದಲ್ಲಿರುವುದಾಗಿ ತಿಳಿಸಿದ್ದ. ಆತ ನನ್ನನ್ನು ಮದುವೆಯಾಗಲು ಇಷ್ಟಪಟ್ಟಾಗ ಈಗಾಗಲೇ ನನ್ನ ಲಗ್ನವಾಗಿರುವುದಾಗಿ ತಿಳಿಸಬೇಕಾಯಿತು. ಆಗ ಆತ, ‘ನಿನ್ನ ಲಗ್ನವಾಗಿದ್ದರೂ ಪರವಾಗಿಲ್ಲ, ಮಕ್ಕಳಿರದಿದ್ದರೆ ಸಾಕು. ಗಂಡನನ್ನು ಬಿಟ್ಟು ಬಂದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ, ವಿದೇಶದಲ್ಲಿ ಸುಖವಾಗಿರೋಣ’ ಎಂದ. ಆಗಲೇ ನಾನು ಆರು ತಿಂಗಳ ಗರ್ಭಿಣಿಯಾಗಿದ್ದೆ. ತವರೂರಿಗೆ ಹೋಗಿ ಗರ್ಭಪಾತ ಮಾಡಿಸಿಕೊಳ್ಳಲು ಯತ್ನಿಸಿದೆ. ಯಾವ ವೈದ್ಯರೂ ಒಪ್ಪಲಿಲ್ಲ. ಹೀಗಾಗಿ ಹೆರಿಗೆಯಾಗುವವರೆಗೆ ಕಾಯಬೇಕಾಯಿತು. ಹೊಟ್ಟೆ ದೊಡ್ಡದಾಗದಿದ್ದ ಕಾರಣ ಗಂಡ ಮತ್ತವನ ಕುಟುಂಬದವರಿಗೆ ನಾನು ಗರ್ಭಿಣಿಯೆಂದು ತಿಳಿಯಲಿಲ್ಲ.’
ತಾನು ಉದಯ್ನನ್ನು ಅಲ್ಲಿಯವರೆಗೂ ಭೇಟಿಯಾಗಿಲ್ಲ ಹಾಗೂ ತಮ್ಮಿಬ್ಬರ ಸಂವಹನ ಕೇವಲ ಫೇಸ್ಬುಕ್ ಮೆಸೆಂಜರ್ಗೆ ಸೀಮಿತ ಎಂದಳು ಸುಧಾ. ಉದಯ್ ಯಾರೆಂದು ಪತ್ತೆಮಾಡಲು ಪೊಲೀಸರು ಆತನ ಫೇಸ್ಬುಕ್ ಅಕೌಂಟನ್ನು ಪರಿಶೀಲಿಸಿದರು. ಆತ ಅಕೌಂಟ್ ಓಪನ್ ಮಾಡಲು ಕೊಟ್ಟ ಮೊಬೈಲ್ ಫೋನ್ ವಿವರಗಳು ಸಿಕ್ಕವು. ಪೊಲೀಸರು ಆ ನಂಬರಿಗೆ ಫೋನ್ ಮಾಡಿದಾಗ ಉಷಾ ಎನ್ನುವವಳು ಉತ್ತರಿಸಿ, ತನಗೆ ಉದಯ್ ಎನ್ನುವವನು ಗೊತ್ತಿಲ್ಲ, ಆದರೆ ಆ ನಂಬರ್ ತನ್ನದೇ ಎಂದಳು. ಮರುದಿನ ತನಿಖೆಗೆ ಬರುವುದಾಗಿ ತಿಳಿಸಿದ ಪೊಲೀಸರು, ಅದೇ ದಿನವೇ ಸುಧಾಳನ್ನು ಬಂಧಿಸಿದರು. ಮರುದಿನ ಅದೇ ಊರಿನಲ್ಲಿ 20ರಿಂದ 25 ವರ್ಷ ವಯಸ್ಸಿನ ಇಬ್ಬರು ಯುವತಿಯರ ಶವಗಳು ನಗರದ ಮಧ್ಯಭಾಗದಲ್ಲಿರುವ ಕೆರೆಯಲ್ಲಿ ತೇಲುತ್ತಿರುವುದು ವರದಿಯಾಯಿತು. ಆ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಊಹಿಸಲಾಯಿತು.
ಶಿಶುಹತ್ಯೆ ತನಿಖೆ ನಡೆಸುತ್ತಿದ್ದ ಪೊಲೀಸರು ಉಷಾಳ ಮನೆಗೆ ಹೋದಾಗ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಇಬ್ಬರಲ್ಲಿ ಆಕೆಯೂ ಒಬ್ಬಳೆಂದು ತಿಳಿದು ಆಶ್ಚರ್ಯಗೊಂಡರು. ಅವಳ ಜತೆಗೆ ಮೃತಹೊಂದಿದ್ದವಳು ಆಕೆಯ ಅತ್ತಿಗೆಯಾಗಿದ್ದ ಶ್ಯಾಮಲಾ ಎಂದು ತಿಳಿಯಿತು. ಉಷಾ, ಶಿಶುಹತ್ಯೆಯ ಆರೋಪಿ ಸುಧಾಳ ಚಿಕ್ಕಮ್ಮನ ಮಗಳಾಗಿದ್ದಳು. ಪೊಲೀಸರಿಗೆ ಉಷಾಳ ಡೈರಿ ಸಿಕ್ಕಿತು. ಅದರಲ್ಲಿ ಆಕೆ ಈ ರೀತಿ ಬರೆದಿದ್ದಳು. ‘ನನ್ನ ಚಿಕ್ಕಮ್ಮನ ಮಗಳು ಸುಧಾ ಹಲವಾರು ಫೇಸ್ಬುಕ್ ಅಕೌಂಟ್ಗಳನ್ನು ತೆರೆದು ಯುವಕರೊಂದಿಗೆ ಚಾಟ್ ಮಾಡುತ್ತಿದ್ದುದು ನನಗೆ ತಿಳಿದಿತ್ತು. ಸುಧಾಳನ್ನು ಬೇಸ್ತು ಬೀಳಿಸಬೇಕೆಂದು ನಾನು ಮತ್ತು ಶ್ಯಾಮಲಾ, ಉದಯ್ ಮತ್ತು ನೀರಜ್ ಎನ್ನುವವರ ಹೆಸರಿನಲ್ಲಿ ಖೊಟ್ಟಿ ಫೇಸ್ಬುಕ್ ಅಕೌಂಟ್ಗಳನ್ನು ತೆರೆದೆವು. ಅವಕ್ಕೆ ಸುಂದರ ಯುವಕರ ಫೋಟೋಗಳನ್ನು ಜೋಡಿಸಿದೆವು. ಸುಧಾಳ ಜತೆಗೆ ಫೇಸ್ಬುಕ್ ಸ್ನೇಹಿತರಾದೆವು. ಉದಯ್ ಹೆಸರಿನಲ್ಲಿ ನಾನು ಅವಳೊಡನೆ ಚಾಟ್ ಮಾಡಿ, ಗಂಡನನ್ನು ಬಿಟ್ಟು ಬರುವುದಾದರೆ ನಾನು ಲಗ್ನ ಮಾಡಿಕೊಳ್ಳುವೆ ಎಂಬ ಮೆಸೇಜ್ ಕಳಿಸಿದೆ. ನೀನು ತಾಯಿಯಾಗಿರಬಾರದು ಎಂಬ ಷರತ್ತನ್ನು ಶ್ಯಾಮಲಳ ಸೂಚನೆಯಂತೆ ಹಾಕಿದೆ. ಸುಧಾ ಗರ್ಭಿಣಿಯಾದದ್ದು ನಮಗೆ ತಿಳಿದಿರಲಿಲ್ಲ. ಉದಯ್ ಹೆಸರಿನಲ್ಲಿ ಫೇಸ್ಬುಕ್ ಅಕೌಂಟ್ ತೆರೆಯಲು ನನ್ನ ಫೋನ್ ನಂಬರ್ ಕೊಟ್ಟಿದ್ದೆ. ಪೊಲೀಸರು ಫೋನ್ ಮಾಡಿದಾಗ ಶಿಶುಹತ್ಯೆ ಪ್ರಕರಣದಲ್ಲಿ ನಮ್ಮನ್ನೂ ಬಂಧಿಸಬಹುದೆಂದು ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.’
ಸುಧಾಳ ಮೇಲೆ ಶಿಶುಹತ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ‘ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ, ಕೋಟಿ ನಟರಾಂತಿಹರು ಚಿತ್ರಪಾತ್ರ್ರಳ, ಆಟಕ್ಕೆ ಕಥೆಯಿಲ್ಲ, ಮೊದಲಿಲ್ಲ ಕಡೆಯಿಲ್ಲ, ನೋಟಕು ಮಾಟಕರೆ ಮಂಕುತಿಮ್ಮ’ ಎಂಬಂತೆ ಮೋಜಿಗಾಗಿ ಮಾಡಿದ ಕೃತ್ಯದಿಂದ ಮೂವರ ಪ್ರಾಣಹೋಗಿದ್ದು ದುರದೃಷ್ಟಕರ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)