ವಿಭಿನ್ನವಾಗಿ ಯೋಚಿಸಿ, ಎಂದಿಗೂ ಸೋಲಾಗುವುದಿಲ್ಲ: ಮನೋಲ್ಲಾಸ

Think
Published on
| ಸಿಹಿಜೀವಿ ವೆಂಕಟೇಶ್ವರ

ವಿಭಿನ್ನವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗುವವರಿಗೆ ಎಂದಿಗೂ ಸೋಲಾಗುವುದಿಲ್ಲ ಎಂಬುದಕ್ಕೆ ದಿನಕ್ಕೊಂದು ಸ್ಟಾರ್ಟಪ್, ಯೂನಿಕಾರ್ನ್ ಕಂಪನಿಗಳು ಹುಟ್ಟಿ ಕೋಟಿಗಳ ಲೆಕ್ಕದಲ್ಲಿ ವ್ಯವಹಾರ ಮಾಡುತ್ತ ನೂರಾರು ಜನರಿಗೆ ಉದ್ಯೋಗ ನೀಡಿ ನವೋದ್ಯಮಿಗಳಿಗೆ ಲಾಭ ತಂದುಕೊಡುತ್ತಿವೆ. ವ್ಯವಹಾರದಲ್ಲಿ ಯಶಸ್ವಿಯಾಗಲು ಕೊಂಚ ವಿಭಿನ್ನವಾಗಿ ಆಲೋಚಿಸಿ ಧೈರ್ಯದಿಂದ ಮುನ್ನುಗ್ಗಿದವರೇ ಮುಂದೊಂದು ದಿನ ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುತ್ತಾರೆ.

ಬಹುಕಾಲದ ಹಿಂದೆ ಚೀನಾದಲ್ಲಿ ಒಬ್ಬ ಯಶಸ್ವಿ ಉದ್ಯಮಿ ಇದ್ದರು. ಅವರದ್ದು ಬಾಚಣಿಗೆ ಬ್ಯುಸಿನೆಸ್. ಇನ್ನೇನು ನಿವೃತ್ತಿ ಹತ್ತಿರವಾಗಿತ್ತು. ಅವರಿಗೆ ಮೂವರು ಗಂಡು ಮಕ್ಕಳಿದ್ದರು. ತನ್ನ ಉದ್ಯಮವನ್ನು ಸುರಕ್ಷಿತ ಕೈಗಳಲ್ಲಿ ಇಡಬೇಕು ಎಂಬ ಆಸೆಯಿಂದ ಅವರು ಮಕ್ಕಳಿಗೆ ಒಂದು ಸಣ್ಣ ಪರೀಕ್ಷೆ ಒಡ್ಡಿದರು. ನೀವು ಬೌದ್ಧ ಆಶ್ರಮಕ್ಕೆ ಹೋಗಿ ಅಲ್ಲಿನ ಸನ್ಯಾಸಿಗಳಿಗೆ ಬಾಚಣಿಗೆ ಮಾರಾಟ ಮಾಡಿ ಮೂರು ದಿನದ ಬಳಿಕ ವರದಿ ನೀಡಬೇಕು ಎಂದರು. ಮಕ್ಕಳಿಗೆ ಆಘಾತ. ಸನ್ಯಾಸಿಗಳಿಗೆ ತಲೆ ಕೂದಲೇ ಇರುವುದಿಲ್ಲ. ಅವರಿಗೆ ಬಾಚಣಿಗೆ ಯಾಕೆ? ಎಂದು ಯೋಚಿಸಿದರು. ಆದರೂ ಅಪ್ಪನ ಮಾತು ಮೀರಲಾಗದೆ ಆಶ್ರಮಕ್ಕೆ ತೆರಳಿದರು. ಮೂರು ದಿನಗಳ ಬಳಿಕ ಒಬ್ಬ ಮಗ ಬಂದ. ನನಗೆ ಎರಡು ಬಾಚಣಿಗೆ ಮಾರಲು ಸಾಧ್ಯವಾಯಿತು ಅಪ್ಪಅಂದ. ಅಪ್ಪ ಕುತೂಹಲದಿಂದ ಕೇಳಿದ, ಬಾಚಣಿಗೆ ತೆಗೆದುಕೊಳ್ಳುವಂತೆ ಹೇಗೆ ಅವರನ್ನು ಒಪ್ಪಿಸಿದೆ ಮಗನೇ? ಮಗ ಹೇಳಿದ, ನಿಮಗೇನಾದರೂ ಬೆನ್ನು ಕಡಿಯಲಾರಂಭಿಸಿದರೆ ಆಗ ತುರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದೆ..

ಅಷ್ಟು ಹೊತ್ತಿಗೆ ಎರಡನೆ ಮಗ ಬಂದ. ಅವನು 10 ಬಾಚಣಿಗೆ ಮಾರಿಬಂದಿದ್ದ. ಅವನು ಹೇಳಿದ, ನೀವು ಈ ಬಾಚಣಿಗೆಗಳನ್ನು ಖರೀದಿಸಿ ಆಶ್ರಮದಲ್ಲಿ ಇಟ್ಟರೆ ಬರುವ ಪ್ರವಾಸಿಗರಿಗೆ ಅನುಕೂಲವಾದೀತು ಅಂದೆ. ಎಲ್ಲೋ ದೂರದಿಂದ ಬಂದಿರ್ತಾರೆ, ಕೂದಲು ಕೆದರಿಕೊಂಡಿದ್ದರೆ ಬಾಚಿಕೊಳ್ಳಲು ಅವರಿಗೆ ಬೇಕಾಗುತ್ತದೆ ಎಂದು ಹೇಳಿದೆ. ಮೊದ ಮೊದಲು ನಿರಾಕರಿಸಿದರೂ ಕೊನೆಗೆ 10 ತೆಗೆದುಕೊಳ್ಳಲು ಒಪ್ಪಿದರು ಅಂದ. ಅದೇ ಸಮಯಕ್ಕೆ ಮೂರನೇ ಮಗನೂ ಬಂದ. ಎಷ್ಟು ಬಾಚಣಿಗೆ ಮಾರಿದೆ ಮಗನೇ? ಎಂದು ಅಪ್ಪ ಕೇಳಿದ. 1000 ಬಾಚಣಿಗೆ ಸೇಲ್ ಆಯ್ತಪ್ಪ ಎಂದು ಅವನು ಹೇಳುತ್ತಿದ್ದಂತೆಯೇ ಎಲ್ಲರಿಗೂ ಅಚ್ಚರಿ! ಇದು ಹೇಗೆ ಸಾಧ್ಯ ಎಂದು ಎಲ್ಲರೂ ಮುಖ ಮುಖ ನೋಡಿಕೊಂಡರು. ಅಪ್ಪ ಕೇಳಿದರು, ಹೇಗಪ್ಪಾ? ಇದು ಸಾಧ್ಯವಾಗಿದ್ದು, ಸ್ವಲ್ಪ ವಿವರಿಸು. ನಾನು ಆಶ್ರಮ ವಾಸಿ ಸನ್ಯಾಸಿಗಳ ಬಳಿಗೆ ಹೋಗಿ ಅವರಿಗೊಂದು ಐಡಿಯಾ ಕೊಟ್ಟೆ. ಈ ಬಾಚಣಿಗೆಗಳಲ್ಲಿ ಬುದ್ಧನ ಸಂದೇಶ ಪ್ರಿಂಟ್ ಮಾಡಿದರೆ ಅದನ್ನು ಸಂದರ್ಶಕರು ಮತ್ತು ಭಕ್ತರಿಗೆ ಕಾಣಿಕೆಯಾಗಿ ಕೊಡಬಹುದು ಅಂದೆ. ಹಾಗೆ ಪಡೆದುಕೊಂಡವರು ಪ್ರತಿ ದಿನವೂ ತಲೆ ಬಾಚುವಾಗ ಬುದ್ಧನ ಬೋಧನೆಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾದೀತು ಎಂದು ಹೇಳಿದೆ. ಅವರಿಗೆ ಹೌದೆನಿಸಿತು. ಕೇವಲ ಎರಡು ರೂಪಾಯಿಯ ಬಾಚಣಿಗೆ ಮೂಲಕ ಬುದ್ಧನ ಸಂದೇಶವನ್ನು ಮನೆ ಮನೆಗೆ ತಲುಪಿಸಬಹುದು ಎಂಬ ಐಡಿಯಾವೇ ರೋಚಕವಾಗಿದೆ ಅಂದರು. ಒಂದು ಸಾವಿರ ಬಾಚಣಿಗೆಗೆ ಆರ್ಡರ್ ಮಾಡಿದರು.ಮಗ ಮುಂದುವರಿಸಿದ, ಅಷ್ಟೇ ಅಲ್ಲ ಅಪ್ಪ. ಬುದ್ಧನ ಸಂದೇಶಗಳನ್ನು ನಾವೇ ಮುದ್ರಿಸಿ ಕೊಡುವುದಾದರೆ ಬೇರೆ ಆಶ್ರಮಗಳ ಆರ್ಡರ್ ಕೂಡಾ ಪಡೆಯಲು ಸಹಾಯ ಮಾಡುವುದಾಗಿ ಅಲ್ಲಿನ ಸನ್ಯಾಸಿಗಳು ಹೇಳಿದರು ಎಂದ. ಈ ಕಥೆಯನ್ನು ಓದಿದಾಗ ಅಸಾಧ್ಯವಾದದು ಯಾವುದೂ ಇಲ್ಲ ಸ್ವಲ್ಪ ನಮ್ಮ ಮೆದುಳಿಗೆ ಕೆಲಸ ಕೊಡಬೇಕು. ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಥಿಂಕ್ ಔಟ್ ಆಪ್ ದಿ ಬಾಕ್ಸ್ ಎಂದರೆ ಇದೇ ಅಲ್ಲವೇ..? ಉದ್ಯೋಗವಿಲ್ಲ ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಬದಲು ವಿಭಿನ್ನವಾಗಿ ಆಲೋಚಿಸುವ ಮೂಲಕ ಉದ್ಯಮಿಯಾಗಿ ಬೆಳೆಯ ಬಹುದಲ್ಲವೆ?

(ಲೇಖಕರು ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net