ಧರ್ಮದ ಬೆಳಕು ಹರಡಿದವರು

4-6813bfa1bc456
Published on
|ರಾಜಗುರು ಬಿ.ಎಸ್.ದ್ವಾರಕಾನಾಥ

ಸನಾತನ ಧರ್ಮದ ಪುನರುತ್ಥಾನಕ್ಕೆ ಅವಿಚ್ಛಿನ್ನ ಕೊಡುಗೆ ನೀಡಿರುವ ಜಗದ್ಗುರು ಶಂಕರಾಚಾರ್ಯರು ಭವ್ಯ ಭಾರತಕ್ಕೆ ಧರ್ಮದ ಭದ್ರ ಬುನಾದಿಯನ್ನು ಹಾಕಿದವರು. ಶಂ ಎಂದರೆ ಶುಭ ಎಂತಲೂ, ಕರ ಎಂದರೆ ಮಾಡು ಎಂತಲೂ ಅರ್ಥವಿದ್ದು, ಶಂಕರ ಭಗವತ್ಪಾದರು ಧರೆಗೆ ಅವತರಿಸಿದ್ದೇ ಶುಭವನ್ನು ಮಾಡುವುದಕ್ಕಾಗಿ.

ಅನ್ಯ ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಧರ್ಮವನ್ನು ಸಂರಕ್ಷಿಸಿ, ನಿರಂತರ ಧರ್ಮ ಪ್ರಚಾರ ಮಾಡುವುದಕ್ಕಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿ ತ್ಯಾಗಿ ಸನ್ಯಾಸಿ ಪರಂಪರೆಯನ್ನು ಆರಂಭಿಸಿದರು. ಜಗತ್ತಿನಲ್ಲಿ ಧರ್ಮ ಎಂಬುದು ಶಾಶ್ವತವಾದದ್ದು. ಧರ್ಮವನ್ನು ಹಿಂಸಿಸುವುದರಿಂದ ಜಗತ್ತಿಗೆ ಶಾಂತಿ ದೊರೆಯಲು ಸಾಧ್ಯವಿಲ್ಲ. ಧರ್ಮದ ಮೂಲಮಂತ್ರವೇ ಸೈರಣೆ. ಇದನ್ನು ಸಾಧ್ಯವಾಗಿಸಿದ ಮಹಾತ್ಮರು ಶಂಕರಾಚಾರ್ಯರು. ಯಾವುದೇ ಜಾತಿ, ತತ್ವ, ಸಿದ್ಧಾಂತಗಳನ್ನು ಎಲ್ಲಿಯೂ ಟೀಕೆ ಮಾಡದೆ, ಧರ್ಮದ ಅಡಿಪಾಯದಲ್ಲಿ ಸಮನ್ವಯ ಸಾಧಿಸಿದ ಶಂಕರರು ದೇಶದ ಉದ್ದಗಲಕ್ಕೂ ಇದ್ದ ಅಸಂಖ್ಯಾತ ದೇವಾಲಯಗಳನ್ನು ಜೀಣೋದ್ಧಾರಗೊಳಿಸಿದರು. ಸಾವಿರಾರು ವರ್ಷಗಳಿಂದ ಪ್ರಕೃತಿ ವಿಕೋಪ, ಪರಕೀಯರ ದಾಳಿ, ಯುದ್ಧ ಇತ್ಯಾದಿ ಸಂಕಷ್ಟಗಳು ಬಂದೊದಗಿದಾಗಲೂ ಇಂದಿಗೂ ಆ ದೇವಾಲಯಗಳು ಸದೃಢವಾಗಿ ನಿಂತಿರುವುದಕ್ಕೆ ಶಂಕರರು ಹಾಕಿಕೊಟ್ಟ ಧರ್ಮದ ಬುನಾದಿ ಕಾರಣವಾಗಿದೆ.

ದೇಶ ಸುಭಿಕ್ಷವಾಗಿ ಮುಂದೆ ಸಾಗಲು ಜ್ಞಾನ-ವಿಜ್ಞಾನ ಎರಡೂ ಅವಶ್ಯಕ. ಅಂತೆಯೇ ಜ್ಞಾನ-ವಿಜ್ಞಾನದ ಸಾರ ಅಡಗಿರುವ ವೇದ-ವೇದಾಂತದ ಅಧ್ಯಯನಕ್ಕಾಗಿ ಹಲವು ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ನಿರಂತರ ಅಧ್ಯಯನ ನಡೆಯಲು ಅನುವು ಮಾಡಿಕೊಟ್ಟಿದ್ದಾರೆ. ತಮ್ಮ ಗುರು ಗೋವಿಂದ ಭಗವತ್ಪಾದರಿಂದ ಕಲಿತ ವೇದ, ಉಪನಿಷತ್, ಯೋಗ ವಿದ್ಯೆಯನ್ನು ಕರಗತ ಮಾಡಿಕೊಂಡು ಕಾಶಿಯಲ್ಲಿ ತಮ್ಮ ಶಿಷ್ಯರನೇಕರಿಗೆ ಉಪದೇಶವನ್ನು ಮಾಡಿದರು. ಮಾತ್ರವಲ್ಲದೆ ಸ್ವತಃ ಬಾದರಾಯಣ ಬ್ರಹ್ಮಸೂತ್ರ ಸೇರಿದಂತೆ ಪ್ರಸ್ಥಾನತ್ರಯಗಳಿಗೆ ಭಾಷ್ಯವನ್ನು ಬರೆದು ನಿರಂತರ ಜ್ಞಾನಗಂಗೆಯನ್ನು ಹರಿಸಿದ ಆಚಾರ್ಯರು ಶಂಕರರು. ಶಂಕರರು ರಚಿಸಿದ ಅನೇಕ ಸ್ತೋತ್ರಗಳು, ಅಷ್ಟಕಗಳು ಇಂದಿಗೂ ಪ್ರಸಿದ್ಧವಾಗಿವೆ. ಧರ್ಮವನ್ನು ಸದೃಢ ಮತ್ತು ಸಕ್ರಿಯಗೊಳಿಸುವುದರಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯ. ಕಾರಣ ಧರ್ಮವೇ ನಿಜವಾದ ಆಯುಧ ಎಂದು ನಂಬಿದ್ದವರು ಶಂಕರರು.

ಶಂಕರ ಪರಂಪರೆಯ ಧರ್ಮ ಜಾಗೃತಿ: ದೇವರನಾಡು ಕೇರಳದ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ ನಂಬೂದರಿ ಬಡ ಬ್ರಾಹ್ಮಣ ಕುಟುಂಬದಲ್ಲಿ 8ನೇ ಶತಮಾನದಲ್ಲಿ ಜನಿಸಿದ ಶಂಕರಾಚಾರ್ಯರು ಭೌತಿಕವಾಗಿ ಇದ್ದಿದ್ದು ಕೇವಲ 32 ವರ್ಷ. ವೈಶಾಖ ಮಾಸದ ಶುಕ್ಲಪಕ್ಷದ ಪಂಚಮಿ ತಿಥಿಯಂದು ಜನಿಸಿದ ಶಂಕರರು ಅಲ್ಪ ಅವಧಿಯಲ್ಲಿ ದೇಶವನ್ನು ಸಂಪೂರ್ಣ ಪರ್ಯಟನೆ ಮಾಡಿ ದ್ವಾರಕಾ, ಬದರಿ, ಜಗನ್ನಾಥಪುರಿ ಹಾಗೂ ಶೃಂಗೇರಿಯಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದ್ದಾರೆ. ಪ್ರಸ್ತುತ ಇರುವ ಪೀಠಗಳು ಧರ್ಮ ಪ್ರಚಾರಕ್ಕಾಗಿ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುತ್ತಿವೆ.

ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಮತ್ತು ಸ್ಕಂದ ಮತಗಳನ್ನು ಒಗ್ಗೂಡಿಸಿ ಷಣ್ಮತ ಸಂಘಟಕರಾಗಿ ಶಂಕರರು ನೀಡಿದ ಕೊಡುಗೆ ಅಪಾರ. ಆಚಾರ್ಯತ್ರಯರಾದ ಶಂಕರ, ಮಧ್ವ, ರಾಮಾನುಜರನ್ನು ಆರಾಧಿಸುವ ಸರ್ವರು ಧರ್ಮದ ಅಭ್ಯುದಯಕ್ಕಾಗಿ ಐಕ್ಯಮತ್ಯವನ್ನು ಸಾಧಿಸುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ವಿಶೇಷವಾಗಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಶೃಂಗೇರಿ ಶಾರದಾ ಪೀಠವು ಜ್ಞಾನಪೀಠವಾಗಿ ವಾಗ್ದೇವಿಯ ಆರಾಧ್ಯ ತಾಣವಾಗಿದೆ. ಇಲ್ಲಿನ 32ನೇ ಯತಿಗಳಾಗಿರುವ ಮಹಾಸನ್ನಿಧಾನ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ಅವರ ಕರಕಮಲ ಸಂಜಾತ ಸನ್ನಿಧಾನ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಸತ್ಪರಂಪರೆಯ ಸಾರಥಿಗಳಾಗಿ ಅದ್ವೈತ ಸಿದ್ಧಾಂತವನ್ನು ಲೋಕ ಪ್ರಚಾರ ಮಾಡುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಈ ಪರಂಪರೆ ಅನೂಚಾನವಾಗಿ ನಡೆಯುತ್ತಿರುವುದರ ಹಿಂದೆ ಮಹಾ ಸನ್ನಿಧಾನಂಗಳ ತಪಸ್ಸಿನ ಶಕ್ತಿ ಇರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಶಂಕರ ಜಯಂತಿಯನ್ನು ಸಮುದಾಯದ ಮಟ್ಟದಲ್ಲಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಆದರೆ ಸರ್ಕಾರ ಶಂಕರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು. ಧಾರ್ವಿುಕ ದತ್ತಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿಯವರು ಶಂಕರ ತತ್ವ ಪ್ರಸಾರಕ್ಕೆ ಹೆಚ್ಚಿನ ಒತ್ತು ನೀಡಬೇಕು.

ಧರ್ಮ ಸಮನ್ವಯ ಸನಾತನ ಸಿದ್ಧಾಂತ: ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಸನಾತನ ಧರ್ಮ ಸಿದ್ಧಾಂತದ ಸಾರ. ವಿದ್ವಾಂಸನಾದವನು ವಿತರ್ಕ, ವಿವಾದಗಳಿಗೆ ಹೋಗುವುದಿಲ್ಲ. ಜ್ಞಾನ ಸಂಪಾದನೆಗೆ ಗಾಯತ್ರಿ ದೇವಿಯ ಉಪಾಸನೆ ಮಾಡುವುದು ಸನಾತನ ಧರ್ಮದ ಪದ್ಧತಿ. ಅಂತೆಯೇ ಶಂಕರಾಚಾರ್ಯರು ವೇದಾಧ್ಯಯನಕ್ಕೆ ವಿಶೇಷ ಒತ್ತು ನೀಡಿದ್ದರು. ಆ ಸತ್ಸಂಪ್ರದಾಯ ಇಂದಿಗೂ ಶಂಕರ ಪರಂಪರೆಯಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ.

ಪ್ರಾಪ್ತ ವಯಸ್ಸಿಗೆ ಬಂದ ಬಾಲಕನಿಗೆ ಉಪನಯನ ಸಂಸ್ಕಾರವನ್ನು ನೀಡಿ ಮೂರು ಎಳೆಯ ದಾರದಲ್ಲಿ ತ್ರಿಮೂರ್ತಿಗಳನ್ನು ಆಹ್ವಾನಿಸಿ ಬ್ರಹ್ಮಗಂಟು ಹಾಕಿ ಗಾಯತ್ರಿ ಮಂತ್ರವನ್ನು ಉಪದೇಶಿಸಿ ಜನಿವಾರನ್ನು ಹಾಕಲಾಗುತ್ತದೆ. ಹೀಗೆ ಉಪದೇಶವಾದ ನಂತರ ನಿತ್ಯದಲ್ಲಿ ಸಂಧ್ಯಾವಂದನೆ ಮಾಡಬೇಕು. ಹಾಕಿದ ಜನಿವಾರವನ್ನು ತೆಗೆಯದೆ ಕಾಪಾಡಿಕೊಳ್ಳಬೇಕು. ತನ್ನ ತಂದೆ ಮೃತನಾದಾಗ ಮಾತ್ರ ಜನಿವಾರದ ಬ್ರಹ್ಮಗಂಟನ್ನು ಕತ್ತರಿಸುವ ಪದ್ಧತಿ ಇದೆ. ಹಾಗೂ ಸನ್ಯಾಸ ಸ್ವೀಕರಿಸುವಾಗಲೂ ಜನಿವಾರವನ್ನು ತೆಗೆಯುತ್ತಾರೆ. ಇಷ್ಟಾಗಿಯೂ ಇತ್ತೀಚೆಗೆ ಅತ್ಯಂತ ಪವಿತ್ರ ಮತ್ತು ಧಾರ್ವಿುಕ ನಂಬಿಕೆಯ ಪ್ರತೀಕವಾಗಿರುವ ಜನಿವಾರವನ್ನು ಕ್ಷುಲ್ಲಕ ಕಾರಣ ಮತ್ತು ಪೂರ್ವಗ್ರಹ ಪೀಡಿತವಾಗಿ ಕಿತ್ತು ಹಾಕಿರುವುದು ಸನಾತನ ಸಂಸ್ಕೃತಿಗೆ ಮಾಡಿದ ಅಪಮಾನ. ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕಾದ್ದು ಆಡಳಿತ ನಡೆಸುವವರ ಕರ್ತವ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net