

| ಕೆ.ಬಿ.ಶುಭ ಬೆಂಗಳೂರು
ಕರೊನಾ ಮೊದಲ ಅಲೆ ಎದುರಾದಾಗ ಎಲ್ಲರನ್ನೂ ಕಾಡಿದ ಭಯ, ಆತಂಕ, ಚಿಂತೆ ಕರೊನಾ ವಾರಿಯರ್ಗಳನ್ನೂ ಬಿಟ್ಟಿಲ್ಲ. ಕುಟುಂಬದ ಜಾಗೃತಿ ಜತೆ ಸಮಾಜವನ್ನೂ ಕಾಪಾಡಿ ಜಾಗೃತಿ ಮಾಡಿದ ಕೀರ್ತಿ ಇವರಿಗೆ ಸಲ್ಲಲೇಬೇಕು. ಆದರೆ ಕರೊನಾ ಸಂದರ್ಭದಲ್ಲಿ ಕರೊನಾ ವಾರಿಯರ್ಸ್ ಆಗಿದ್ದ ಮಹಿಳೆಯರು ಎದುರಿಸಿದ ಸಮಸ್ಯೆಗಳೇನು? ಅವರ ಪರಿಪಾಟಲು ಕೇಳುವವರು ಯಾರಾಗಿದ್ದರು? ಎದುರಾದ ಸಂದರ್ಭಗಳನ್ನು ಮಹಿಳಾ ಶಕ್ತಿ ಆಗಿ ಹೇಗೆ ಎದುರಿಸಿದರು ಎಂಬ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
ಕರೊನಾ ಎಂದರೆ ಕನಸಲ್ಲೂ ಬೆಚ್ಚಿ ಬೀಳುವ ತಾಯಂದಿರು ಕರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ. ಕೆಳಹಂತದಲ್ಲಿ ಸರ್ಕಾರದ ಕೆಲಸ ಮಾಡುವ ಮಹಿಳೆಯರಿಗೆ ಧೈರ್ಯ ತುಂಬುವವರು ಯಾರೂ ಇರಲಿಲ್ಲ. ಇವರು ತಮ್ಮಲ್ಲೇ ಆತ್ಮವಿಶ್ವಾಸ ಬೆಳೆಸಿಕೊಂಡು ಸೇವೆ ಸಲ್ಲಿಸಿದ್ದಾರೆ. ಆಶಾ, ಅಂಗನವಾಡಿ, ಬಿಸಿಯೂಟ ಹಾಗೂ ಆರೋಗ್ಯ ಸಿಬ್ಬಂದಿಗೆ ಪ್ರತಿಯೊಬ್ಬರೂ ಒಂದು ಸಲಾಂ ಹೇಳಲೇ ಬೇಕು ಎನ್ನುತ್ತಾರೆ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ.
ಸಾವು-ನೋವು: ಕರೊನಾ ಮೊದಲ ಅಲೆಯಲ್ಲಿ 28 ಹಾಗೂ ಎರಡನೇ ಅಲೆಯಲ್ಲಿ 29 ಅಂಗನವಾಡಿ ಕಾರ್ಯಕರ್ತೆಯರು ಕರೊನಾ ಸಾಂಕ್ರಾಮಿಕದಿಂದ ಮೃತರಾದರೆ, ಕೆಲಸದ ಒತ್ತಡದಿಂದ ಲೋ ಬಿಪಿ, ಹೃದಯಾಘಾತದಂತಹ ಕಾರಣದಿಂದಾಗಿ 35-40 ಮಂದಿ ಮೃತರಾಗಿದ್ದಾರೆ. ಎರಡೂ ಅಲೆ ಸೇರಿ ಐವರು ಆಶಾ ಕಾರ್ಯಕರ್ತೆಯರು ಮೃತರಾಗಿದ್ದಾರೆ.
ದೌರ್ಜನ್ಯಕ್ಯಾರು ಹೊಣೆ?: ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರ ಮೇಲೆ ಕರೊನಾ ಸಂದರ್ಭದಲ್ಲಿ ಸಾಕಷ್ಟು ದೌರ್ಜನ್ಯ ನಡೆದಿದೆ. ಆರೋಗ್ಯ ಪರೀಕ್ಷೆ ಅಥವಾ ಡಾಟಾ ಸಂಗ್ರಹಕ್ಕೆ ತೆರಳಿದ ಮಹಿಳೆಯರ ಮೇಲೆ ಗ್ರಾಮದ ಜನ ದೌರ್ಜನ್ಯ ನಡೆಸಿದ್ದಾರೆ. ಒಬ್ಬ ಮಹಿಳೆಯನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದಾರೆ. ಇದು ದೈಹಿಕ ಮಾತ್ರವಲ್ಲದೆ ಮಾನಸಿಕ ದೌರ್ಜನ್ಯವೂ ಆಗಿದೆ. ಇದಕ್ಕೆ ಯಾರನ್ನು ಹೊಣೆ ಮಾಡೋಣ?
ಕಾರ್ಯಕರ್ತೆಯರು ನಿರ್ವಹಿಸಿದ ಜವಾಬ್ದಾರಿ: ಆಶಾ, ಅಂಗನವಾಡಿ, ಬಿಸಿಯೂಟ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಕುಟುಂಬವನ್ನೂ ಬದಿಗಿಟ್ಟು ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ. ರೋಗಿಗಳ ಮನೆ ಮನೆ ಸರ್ವೆ, ಡೇಟಾ ಸಂಗ್ರಹ, ಚಿಕಿತ್ಸೆ, ಔಷಧ ಒದಗಿಸುವುದು, ಕ್ವಾರಂಟೈನ್ ಆದವರ ಮಾಹಿತಿ ಸಂಗ್ರಹ, ಕ್ವಾರಂಟೈನ್ಗೆ ಬೇಕಾದ ವ್ಯವಸ್ಥೆ, ರೋಗಿಗಳ ಊಟದ ವ್ಯವಸ್ಥೆ, ಗಂಟಲ ದ್ರವ ಸಂಗ್ರಹಣೆ ಮಾಡುವುದು, ಪಲ್ಸ್ ಪರೀಕ್ಷೆ, ಆಸ್ಪತ್ರೆಗಳ ವಿವರ ನೀಡುವುದು ಹೀಗೆ ಎಲ್ಲ ಮಾದರಿಯ ಕೆಲಸ ಮಾಡಿದ್ದಾರೆ.
ಯಾರಿಗೆ ಸಾಲುತ್ತೆ ಸಂಬಳ!: ರಾಜ್ಯದಲ್ಲಿ 1,19,000 ಅಂಗನವಾಡಿ ಕಾರ್ಯಕರ್ತೆಯರಿದ್ದು, ಇವರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10,000 ರೂ., ಸಹಾಯಕರಿಗೆ 5000 ರೂ. ನೀಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು 1,20,000 ಮಂದಿ ಇದ್ದು, ಇವರಿಗೆ 6000 ರೂ. ಹಾಗೂ ಇನ್ಸೆಂಟೀವ್ಸ್ ನೀಡುತ್ತಾರೆ. ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ 2,600 ರೂ. ಬೇಸಿಗೆ ರಜೆ, ದಸರಾ ರಜೆಗಳಲ್ಲಿ ಇವರಿಗೆ ಸಂಬಳ ಇರುವುದಿಲ್ಲ. ತಿಂಗಳಿಗೆ 2000 ರೂ.ನಲ್ಲಿ ಜೀವನ ಹೇಗೆ ನಡೆಸಬೇಕು. ಬೆರಳೆಣಿಕೆಯಷ್ಟು ಹೆಣ್ಣು ಮಕ್ಕಳನ್ನು ಹೊರತು ಪಡಿಸಿ, ಉಳಿದ ವಿಧವಾ, ಸಿಂಗಲ್ ವುಮೆನ್ ನಂತಹ ಮಹಿಳೆಯರು ಹೇಗೆ ಜೀವನ ನಡೆಸಬೇಕು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಈಗ ಮೊಬೈಲ್ ನೀಡಿದ್ದಾರೆ. ಸರ್ಕಾರದಿಂದ ನೀಡಲಾಗುವ ಕರೆನ್ಸಿ ಹಣ ಮುಗಿದರೆ ಇವರೇ ಹಣ ಹಾಕಿಕೊಳ್ಳಬೇಕು, ಮೊಬೈಲ್ ದುರಸ್ತಿಗೆ ಬಂದರೆ ಅಥವಾ ಕಳೆದು ಹೋದರೆ ಕಾರ್ಯಕರ್ತೆಯರನ್ನೇ ಹೊಣೆ ಮಾಡಲಾಗುತ್ತದೆ. ಇದು ಯಾವ ನ್ಯಾಯ ಎಂಬಂತಾಗಿದೆ.
ಊರಿಂದ ಊರಿಗೆ ಓಡಾಡಬೇಕು. ರೇಷನ್ ವಿತರಣೆ ಸಂದರ್ಭದಲ್ಲಿ ಸ್ವಂತ ಖರ್ಚಿನಿಂದ ವಾಹನ ಬಾಡಿಗೆ ನೀಡಿ ಕೆಲಸ ಮಾಡಿದ್ದಾರೆ. ನಮ್ಮ ಪರಿಚಯಸ್ಥರಿಗೆ ಸೋಂಕು ತಗುಲಿದಾಗ 3ರಿಂದ 4 ಲಕ್ಷ ರೂ. ಖರ್ಚಾಯಿತು. ಆಗ ಯಾರೂ ಸಹಾಯಕ್ಕೆ ಬಂದಿಲ್ಲ. ನಮಗೆ ಜೀವದ, ಜೀವನದ, ಕೆಲಸದ ಭದ್ರತೆಯೂ ಇಲ್ಲ.
| ಜಿ.ಕಮಲ ಅಂಗನವಾಡಿ ಕಾರ್ಯಕರ್ತೆ, ಜಡೆಗೊಂಡನಹಳ್ಳಿ, ಮಧುಗಿರಿ ತಾಲೂಕು
ಕೆಲಸ ಮಾಡುವ ವೇಳೆ ನಮಗೆ ಸೋಂಕು ಅಂಟಿದರೆ ಹೇಗೆ ಎಂಬ ಅಳುಕು ಎದುರಾಗಿ ಮಕ್ಕಳು, ಹಿರಿಯರು ನೆನಪಾಗುತ್ತಿದ್ದರು. ಸೋಂಕಿನ ದರ ಹೆಚ್ಚಿದ್ದಾಗ ತುಂಬಾ ಒತ್ತಡದಲ್ಲಿ ಕೆಲಸ ಮಾಡಿದ್ದೇವೆ. ಸೋಂಕಿತರ ಮನೆ ಬಳಿ ಹೋದಾಗ ಅವಮಾನ, ನಿಂದನೆ ಎದುರಿಸಿದ್ದೇವೆ.
| ವಿನುತಾ ಕುಮಾರ್ ಆರೋಗ್ಯ ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉತ್ತರಹಳ್ಳಿ
ಮಾನವೀಯ ದೃಷ್ಟಿಯಿಂದ ಮಹಿಳೆಯರು ಕೆಲಸ ಮಾಡಿದ್ದಾರೆ. ನಮ್ಮ ಕಾರ್ಯಕರ್ತೆಯರ ಮೇಲೆ ಸರ್ಕಾರ ಗಮನ ಹರಿಸುತ್ತಿಲ್ಲ. ಹಾಗಂತ ಯಾವ ಕಾರ್ಯಕರ್ತೆಯರೂ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಇವರ ಏಳಿಗೆಗೆ ಶ್ರಮವಹಿಸಬೇಕಿದೆ. ಕಾರ್ಯಕರ್ತೆಯರ ಕೆಲಸ ಗುರುತಿಸಿ ಫ್ರೆಂಟ್ ಲೈನ್ ವಾರಿಯರ್ ಅವಾರ್ಡ್ ನೀಡಿದ್ದಾರೆ. ಇದು ಸಂತಸದ ವಿಷಯ.
| ವರಲಕ್ಷ್ಮೀ ಸಿಐಟಿಯು ರಾಜ್ಯಾಧ್ಯಕ್ಷೆ