

| ಉಮೇಶ್ ಕುಮಾರ್ ಎಸ್. ಬೆಂಗಳೂರು
ಎರಡು-ಮೂರು ವಾರಗಳ ಷೇರುಪೇಟೆ ವಿದ್ಯಮಾನಗಳನ್ನು ಗಮನಿಸಿದರೆ, ನೈಕಾ ಐಪಿಒ ಬಿಡುಗಡೆಯಾಗಿ ಷೇರುಪೇಟೆಯಲ್ಲಿ ಲಿಸ್ಟಿಂಗ್ ಆದ ಕೂಡಲೇ ಅದರ ಸಂಸ್ಥಾಪಕಿ ಫಲ್ಗುಣಿ ನಾಯರ್ ಜಗತ್ತಿನ ಶತಕೋಟ್ಯಧಿಪತಿ ಉದ್ಯಮಿಗಳ ಪಟ್ಟಿ ಸೇರಿದರು. ಅವರ ಕಂಪನಿಯ ಮೂವರು ಟಾಪ್ ಎಕ್ಸಿಕ್ಯೂಟಿವ್ಸ್ ಸಂಪತ್ತು 200 ಕೋಟಿ ರೂಪಾಯಿಗಿಂತ ಮೇಲಕ್ಕೇರಿತು. ಇನ್ನೂ ಏಳು ಉನ್ನತಾಧಿಕಾರಿಗಳು ಕೋಟ್ಯಧಿಪತಿಗಳಾದರು. ಇನ್ನು ಕಳೆದ ವಾರ ಬಹುನಿರೀಕ್ಷೆ ಹುಟ್ಟಿಸಿದ್ದ ಪೇಟಿಎಂ ಐಪಿಒ ಧನಾತ್ಮಕ ಮತ್ತು ಋಣಾತ್ಮಕ ದಾಖಲೆಗಳನ್ನು ಬರೆದು ಬಿಟ್ಟಿತು. 18,300 ಕೋಟಿ ರೂಪಾಯಿಯ ಭಾರಿ ಪ್ರಮಾಣದ ಹೂಡಿಕೆ ನಿರೀಕ್ಷಿಸಿ, ಅದಕ್ಕೂ ಹೆಚ್ಚಿನ ಹೂಡಿಕೆ ಪಡೆದು ದಾಖಲೆ ಬರೆಯಿತು. 350 ಹೊಸ ಕೋಟ್ಯಧಿಪತಿಗಳ ಉದಯಕ್ಕೂ ಈ ಐಪಿಒ ಕಾರಣವಾಯಿತು. ಆದರೆ, ಷೇರುಪೇಟೆಯಲ್ಲಿ ಲಿಸ್ಟ್ ಆದ ದಿನವೇ ಅದರ ಷೇರು ಮೌಲ್ಯ ವಿತರಣಾ ದರಕ್ಕಿಂತ ಶೇಕಡ 28 ಕುಸಿತ ಕಂಡು ಹೂಡಿಕೆದಾರರು 35,000 ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದ್ದು ಈಗ ಇತಿಹಾಸ. ಈ ರೀತಿಯ ಕೋಟ್ಯಧಿಪತಿಗಳ ಸುದ್ದಿ ಈ ವರ್ಷ ಪ್ರತಿ ತಿಂಗಳೂ ಸುದ್ದಿ ಮಾಧ್ಯಮಗಳಲ್ಲಿ ಗಮನಸೆಳೆದಿವೆ. ಮಾರುಕಟ್ಟೆಯಲ್ಲಿ ಐಪಿಒಗಳು ಯಾಕಿಷ್ಟು ಸದ್ದು ಮಾಡುತ್ತಿವೆ? ಅವುಗಳಿಗೇಕೆ ಈ ಪ್ರಾಮುಖ್ಯತೆ ಎಂಬುದು ಸಾಮಾನ್ಯರ ಸಹಜ ಕುತೂಹಲ. ಕಾರಣ ಇಷ್ಟೇ- ಹೂಡಿಕೆ ಮಾಡಿದ ಹಣ ಅಲ್ಪಾವಧಿಯಲ್ಲೇ ದುಪ್ಪಟ್ಟು ಮಾಡಿಕೊಳ್ಳುವುದಕ್ಕೆ ಪ್ರತಿಯೊಬ್ಬ ಹೂಡಿಕೆದಾರನಿಗೆ ಇದೊಂದು ‘ಜಾಕ್ಪಾಟ್’ನಂತಹ ಅವಕಾಶ ಎಂಬುದು ಸಾಮಾನ್ಯ ಹೂಡಿಕೆದಾರರ ನಂಬಿಕೆ. ಅದೇ ರೀತಿ, ಐಪಿಒ ಮೇಲಿನ ಹೂಡಿಕೆ ಒಂದು ರೀತಿಯಲ್ಲಿ ‘ಹಾವು-ಏಣಿ ಆಟ’ ಇದ್ದ ಹಾಗೆ ಎಂಬುದು ಸಾಮಾನ್ಯ ಹೂಡಿಕೆದಾರರ ನಡುವಿನ ಮಾತು. ಜಾಕ್ಪಾಟ್, ಹಾವು-ಏಣಿ ಆಟ ಎಂದು ವಿಶೇಷವಾಗಿ ಉಲ್ಲೇಖಿಸುವುದಕ್ಕೂ ಕಾರಣವಿದೆ. ಸಾಮಾನ್ಯ ಹೂಡಿಕೆದಾರರು ಯಾರದ್ದೋ ಸಲಹೆ ತೆಗೆದುಕೊಂಡೋ ಅಥವಾ ಸ್ವತಃ ಯಾವುದೋ ಲೆಕ್ಕಾಚಾರ ಮಾಡಿಕೊಂಡು ಹೂಡಿಕೆ ಮಾಡುವ ಕಾರಣ ಇಲ್ಲಿ ಅಪಾಯ ಹೆಚ್ಚು. ಈ ರೀತಿ ಮಾಡುವಾಗ ಕೆಲವೊಮ್ಮೆ ಅದೃಷ್ಟ ಕೈಕೊಟ್ಟರೆ ಹೂಡಿಕೆ ಹಣವೂ ಕರಗಿ ಹೋಗುವ ಸಾಧ್ಯತೆಯೂ ಇದೆ. ಈ ವರ್ಷದ ಐಪಿಒಗಳನ್ನು ಗಮನಿಸಿದರೆ ಅನೇಕರು ಕೋಟ್ಯಧಿಪತಿಗಳಾದ ಸುದ್ದಿ ಗಮನಸೆಳೆಯುತ್ತಿದೆ. ಆದರೆ, ದುಡ್ಡು ಕಳೆದುಕೊಂಡವರು ಎಲ್ಲೂ ಗಮನಸೆಳೆಯಲ್ಲ.
ನಷ್ಟದಲ್ಲಿ ಐದರಲ್ಲೊಂದು: ಐಪಿಒ ಮಾರುಕಟ್ಟೆ ಮಟ್ಟಿಗೆ 2021 ‘ಐಪಿಒ ವರ್ಷ’. 2021-22ರ ಮೂರನೇ ತ್ರೖೆಮಾಸಿಕ ಕೊನೆಗೊಳ್ಳಲು ತಿಂಗಳು ಬಾಕಿ. 2 ತ್ರೖೆಮಾಸಿಕದಲ್ಲಿ ಒಟ್ಟು 72 ಐಪಿಒಗಳು ಬಿಡುಗಡೆಯಾಗಿದ್ದು, 72378.77 ಕೋಟಿ ರೂ. ಅನ್ನು ಕಂಪನಿಗಳು ಸಂಗ್ರಹಿಸಿವೆ. ಬಿಡುಗಡೆಯಾದ ಐಪಿಒಗಳ ಪೈಕಿ ಐದರಲ್ಲಿ ಒಂದು ನಷ್ಟದಲ್ಲಿ ವಹಿವಾಟು ನಡೆಸಿದೆ. ಈ ವರ್ಷ ಒಟ್ಟು -ಠಿ;1 ಲಕ್ಷ ಕೋಟಿಗೂ ಅಧಿಕ ನಿಧಿ ಸಂಗ್ರಹ ಐಪಿಒ ಮೂಲಕ ನಡೆಯುವ ನಿರೀಕ್ಷೆ ಇದೆ. ಅಕ್ಟೋಬರ್ -ಡಿಸೆಂಬರ್ ಅವಧಿಯಲ್ಲಿ 30 ಕ್ಕೂ ಹೆಚ್ಚು ಐಪಿಒ ಬಿಡುಗಡೆಯಾಗಲಿವೆ.
| ಚಂದ್ರಲೇಖ ಯುಎಸ್ ಸಿಎಂಎ, ಸಿಐಎ, ರಿಸ್ಕ್ ಕನ್ಸಲ್ಟಂಟ್ @ ಬಿಗ್ 4
ಸೂಕ್ಷ್ಮವಾಗಿ ಅಧ್ಯಯನ ನಡೆಸಿದರೆ, ಐಪಿಒಗಳಿಂದ ಲಾಭ ಮಾಡಿಕೊಳ್ಳುವವರು ಕಂಪನಿಯ ಪ್ರಮೋಟರ್ಸ್ ಮತ್ತು ಎಂಪ್ಲಾಯಿ ಸ್ಟಾಕ್ ಓನರ್ಶಿಪ್ ಪ್ಲಾನ್ (ಇಎಸ್ಒಪಿ) ಷೇರುಗಳನ್ನು ಪಡೆದವರು. ಇಎಸ್ಒಪಿ ಷೇರುಗಳು ಬಹುತೇಕ ಕಂಪನಿಯ ಉನ್ನತಾಧಿಕಾರಿಗಳಿಗೆ ಸಿಕ್ಕಿರುತ್ತದೆ. ಕಂಪನಿಯ ವಾರ್ಷಿಕ ವಹಿವಾಟುಗಳನ್ನು ಗಮನಿಸಿ ಹೂಡಿಕೆಯನ್ನು ಹಿಂಪಡೆಯಲು ಪ್ರಮೋಟರ್ಸ್ ತೀರ್ವನಿಸಿದಾಗ, ಅವರು ತಮ್ಮ ಷೇರುಗಳನ್ನು ಚಿಲ್ಲರೆ ಹೂಡಿಕೆದಾರರಿಗೆ ಮಾರಾಟ ಮಾಡಲು ಐಪಿಒ ಮಾರ್ಗವನ್ನು ಬಳಸಿಕೊಳ್ಳು ತ್ತಾರೆ. ಹೀಗೆ ಮಾಡಿದಾಗ ಹೂಡಿಕೆ ಮೇಲೆ ಅವರಿಗೊಂದಿಷ್ಟು ಲಾಭ ಬಂದು ಬಿಡುತ್ತದೆ. ಕಂಪನಿಯ ವಹಿವಾಟು ನಷ್ಟದಲ್ಲಿದ್ದರೆ ಐಪಿಒ ಸಬ್ಸ್ಕ್ರಿಪ್ಶನ್ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ಲಾಭದಲ್ಲಿದ್ದರೆ ಹಲವು ಪಟ್ಟು ಹೆಚ್ಚಾಗಿರುತ್ತದೆ. ಇದು ಷೇರುಪೇಟೆಯಲ್ಲಿ ಕಂಡುಬರುವ ವಾಡಿಕೆಯ ವಹಿವಾಟು.
ಐಪಿಒದಲ್ಲಿ ಗಮನಿಸಬೇಕಾದ 2 ಮುಖ್ಯ ಅಂಶಗಳಿವೆ. ಒಂದು ಆಫರ್ ಫಾರ್ ಸೇಲ್ ಮತ್ತು ಫ್ರೆಶ್ ಇಶ್ಯೂ. ಆಫರ್ ಫಾರ್ ಸೇಲ್ ಎಂಬುದು ಪ್ರಮೋಟರ್ಸ್ ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಕಂಪನಿಯಿಂದ ಹೊರಕ್ಕೆ ಹೋಗುವುದು. ಇಲ್ಲಿ ಪ್ರಮೋಟರ್ಸ್ಗೆ ಪ್ರಯೋಜನ ಹೆಚ್ಚು. ಇನ್ನು ಫ್ರೆಶ್ ಇಶ್ಯೂನಲ್ಲಿ ಸಾರ್ವಜನಿಕರಿಗೆ ನೇರವಾಗಿ ಕಂಪನಿಯೇ ಹಣ ಸಂಗ್ರಹಿಸುತ್ತಿದ್ದು, ಅದು ಉದ್ಯಮಕ್ಕೆ ಬಳಕೆಯಾಗುತ್ತದೆ. ಇಲ್ಲಿ ಹೂಡಿಕೆಯ ಪ್ರಯೋಜನ ಕಂಪನಿ/ಉದ್ಯಮಕ್ಕೆ ಸಿಗುತ್ತದೆ. ಆದ್ದರಿಂದ ಐಪಿಒದಲ್ಲಿ ಹೂಡಿಕೆ ಮಾಡುವವರು ಐಪಿಒ ಗಾತ್ರ (ಮೊತ್ತ)ದಲ್ಲಿ ಆಫರ್ ಫಾರ್ ಸೇಲ್ ಪ್ರಮಾಣ ಎಷ್ಟು ಎಂಬುದನ್ನು ಖಚಿತಪಡಿಸಬೇಕು.