ಈ ಸಲ ಆನ್​ಲೈನ್​ನಲ್ಲೇ ಆಗಲಿ ಸುರಕ್ಷತಾ ಸಪ್ತಾಹ

Putani 2
Published on

ರಾಜ್ಯದ ಶಿಕ್ಷಣ ಇಲಾಖೆ ಪ್ರತಿ ವರ್ಷ ಜೂನ್​ನಲ್ಲಿ ಮಕ್ಕಳ ಸುರತಾ ಸಪ್ತಾಹ ಆಚರಿಸುತ್ತ ಬಂದಿದೆ. ಈ ಸಪ್ತಾಹಕ್ಕೆ ಜೂ. 7ರಿಂದ 14ರವರೆಗೆ ದಿನಾಂಕ ನಿಗದಿಯಾಗಿದ್ದರೂ ಶಾಲೆಗಳು ಮತ್ತು ಸಂಸ್ಥೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆಬೇರೆ ದಿನಗಳಲ್ಲಿ ಆಚರಿಸುತ್ತವೆ. ಎಲ್ಲವೂ ಸರಿ ಇದ್ದಿದ್ದರೆ ಇಷ್ಟೊತ್ತಿಗೆ ಸಪ್ತಾಹ ಎಲ್ಲೆಡೆ ಸದ್ದು ಮಾಡುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಆಚರಣೆಯನ್ನು ಕೈಬಿಡಲಾಗಿದೆ.
| ದೇವರಾಜ್​ ಕನಕಪುರ

ಪ್ರತಿ ವರ್ಷ ಜೂನ್​ನಲ್ಲಿ ರಾಜ್ಯದ ಶಿಕ್ಷಣ ಇಲಾಖೆಯು ಪೊಲೀಸ್​ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜತೆಗೂಡಿ ಮಕ್ಕಳ ಸುರತೆ ಕುರಿತು ಬೀದಿಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ ಜನರ ಗಮನ ಸೆಳೆಯುತ್ತಿತ್ತು. ಸದ್ಯ ಕರೊನಾ ಲಾಕ್​ಡೌನ್​ನಿಂದಾಗಿ ಶಾಲಾ&-ಕಾಲೇಜುಗಳು ಮುಚ್ಚಿವೆ. ವಿದ್ಯಾರ್ಥಿಗಳಿಗೆ ಬೋಧನೆ, ಮುಖ್ಯ ಪರೀಕ್ಷೆ ಆಯೋಜಿಸುವುದೇ ಶಿಣ ಇಲಾಖೆಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಸುರತಾ ಸಪ್ತಾಹ ಆಯೋಜನೆ ಕಷ್ಟಕರ. ಹಾಗಾಗಿ ಪರ್ಯಾಯ ಮಾರ್ಗವನ್ನೂ ಇಲಾಖೆ ಕಂಡುಕೊಳ್ಳದೆ ಈ ವರ್ಷ ಸಪ್ತಾಹಕ್ಕೆ ತಿಲಾಂಜಲಿ ಇತ್ತಿದೆ. ಇದೀಗ ಮಕ್ಕಳು ಮನೆಯಲ್ಲೇ ಇರುವುದರಿಂದ ಕರೊನಾ ಮೂರನೇ ಅಲೆ ಹಾಗೂ ಮನೆಯಲ್ಲಿ ನಡೆಯಬಹುದಾದ ದೌರ್ಜನ್ಯ ತಡೆ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಹಾಗಾಗಿ ಕನಿಷ್ಠ ಆನ್​ಲೈನ್​ ಮೂಲಕವಾದರೂ ಜಾಗೃತಿ ಕಾರ್ಯಕ್ರಮ ನಡೆಯಲಿ ಎಂಬುದು ಶಿಣ ತಜ್ಞರ ಅಭಿಪ್ರಾಯ.

ಶಿಕ್ಷಣ ತಜ್ಞರ ಸಲಹೆಗಳೇನು?: ಮಕ್ಕಳ ಸುರತಾ ಸಪ್ತಾಹಕ್ಕಾಗಿ ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​ ಮುಂತಾದ ಸಾಮಾಜಿಕ ಸಂವಹನ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಮಕ್ಕಳಿಗೆ ಜಾಹೀರಾತುಗಳ ಮೇಲೆ ಹೆಚ್ಚು ಆಸಕ್ತಿ. ಹಾಗಾಗಿ ಸಣ್ಣ ಜಾಹೀರಾತು ರೂಪಿಸಿ ಪ್ರಕಟಿಸಬೇಕು. ಆನ್​ಲೈನ್​ ಮೂಲಕ ಮಕ್ಕಳಿಗೆ ಚಟುವಟಿಕೆ ಮಾಡಿಸಬೇಕು. ಕರೊನಾ ಬಗ್ಗೆ ಭಯ ಬೇಡ ಎಂಬುದನ್ನು ಮನದಟ್ಟು ಮಾಡಿಸಬೇಕು. ಪಾಲಕರು ಮಕ್ಕಳ ಜತೆ ಕನಿಷ್ಠ 2 ಗಂಟೆಯಾದರೂ ಕಾಲ ಕಳೆಯಬೇಕು. ಮಕ್ಕಳಲ್ಲಿ ಲಿಂಗ ತಾರತಮ್ಯ ಕಾಣದಂತೆ ಎಚ್ಚರ ವಹಿಸಬೇಕು.

ಮನೆಯಲ್ಲೂ ಸೇಫಲ್ಲ!: ಮಗು ಮನೆಯಲ್ಲಿದೆ ಎಂದ ಕಾರಣಕ್ಕೆ ದೌರ್ಜನ್ಯ ನಡೆಯುವುದಿಲ್ಲ ಎಂದು ಭಾವಿಸುವುದು ತಪ್ಪು. ಪಾಲಕರಿಂದ, ಸಂಬಂಧಿಕರಿಂದಲೂ ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿರುವ ಹಲವು ಪ್ರಕರಣಗಳು ವರದಿಯಾಗಿವೆ. ಮನೆಯಲ್ಲಿ ಮಕ್ಕಳ ವರ್ತನೆಯನ್ನು ಗಮನಿಸುವುದು, ಮನೆಯ ಇತರ ಸದಸ್ಯರ ಮೇಲೆ ನಿಗಾ ವಹಿಸುವುದು ಕೂಡ ಮುಖ್ಯ.

ಮಕ್ಕಳು ಮನೆಯಲ್ಲಿರುವಾಗ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಅವರಿಗೆ ಸುರಕ್ಷಿತವಾಗಿರುವುದರ ಕುರಿತು ಅರಿವು ಮೂಡಿಸಬೇಕು. ಮುಖ್ಯವಾಗಿ ಕರೊನಾ ಮೂರನೇ ಅಲೆಯ ಬಗ್ಗೆ ತಿಳಿಸುವುದು ಉತ್ತಮ.
|ವಿ.ಪಿ. ನಿರಂಜನಾರಾಧ್ಯ ಶಿಕ್ಷಣ ತಜ್ಞ
ಮಕ್ಕಳ ಸುರಕ್ಷತಾ ಸಪ್ತಾಹವನ್ನು ಶಿಕ್ಷಣ ಇಲಾಖೆ ನಿಲ್ಲಿಸಬಾರದು. ಕನಿಷ್ಠ ಆನ್​ಲೈನ್​ ಮೂಲಕವಾದರೂ ಆಯೋಜಿಸಬೇಕು. ಮಕ್ಕಳಿಗೆ ಸುರಕ್ಷತೆ ಕುರಿತು ಅರಿವು ಮೂಡಿಸಬೇಕು.
| ನಾಗಸಿಂಹ ಜಿ.ರಾವ್​ ಸಂಚಾಲಕ, ಮಕ್ಕಳ ಹಕ್ಕುಗಳ ಟ್ರಸ್ಟ್​

ಹಿಂದಿನ ವರ್ಷ ಹೀಗಿತ್ತು...

  • ಶಾಲೆಗಳಲ್ಲಿ ಸುರಕ್ಷತಾ ಸಮಿತಿ ರಚನೆ
  • ಮಕ್ಕಳಿಗೆ ಸೂಕ್ತ ಶೌಚಗೃಹ
  • ಭಿತ್ತಿಪತ್ರ ಮುದ್ರಿಸಿ ಮಕ್ಕಳಿಗೆ ನೀಡುವುದು
  • ಸಿಸಿಟಿವಿ ಅಳವಡಿಕೆ
  • ಪೋಕ್ಸೋ ಕಾಯ್ದೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು
  • ಮಕ್ಕಳ ಸುರಕ್ಷತೆ ಯೋಜನೆ ಮತ್ತು ಕ್ರಿಯಾ ಯೋಜನೆ ರೂಪಿಸುವುದು
  • ಮಗುವಿನ ವರ್ತನೆ, ಪ್ರಗತಿ ಗುರುತಿಸುವುದು
  • ಶಾಲೆಗಳಲ್ಲಿ ಸುರಕ್ಷತಾ ಕ್ರಮ ಅನುಸರಿ ಸಿರುವ ಬಗ್ಗೆ ಇಲಾಖೆ ಖಾತ್ರಿ ಪಡಿಸುವುದು

ಯಾವ್ಯಾವ ವಿಷಯದಲ್ಲಿ ಜಾಗೃತಿ ಅಗತ್ಯ?
ಶಾಲೆಗೆ ಹೋಗುವಾಗ ಮತ್ತು ಮನೆಗೆ ಮರಳುವಾಗ ರಸ್ತೆ ದಾಟುವ ವೇಳೆ ಅಪಘಾತವಾಗದಂತೆ ಹೇಗೆ ಎಚ್ಚರ ವಹಿಸಬೇಕು, ಬೈಸಿಕಲ್​ ಓಡಿಸುವಾಗ, ಶಾಲೆಯ ಬಳಿ ಅಪರಿಚಿತರೊಂದಿಗೆ ವ್ಯವಹರಿಸುವಾಗ, ಮನೆಯಲ್ಲಿ ಗ್ಯಾಸ್​ ಸ್ಟವ್​ ಹೊತ್ತಿಸುವಾಗ, ಕುಕ್ಕರ್​, ಚಾಕು ಬಳಸುವಾಗ, ನಾಣ್ಯಗಳೊಂದಿಗೆ ಆಡುವಾಗ, ಗಾಜಿನ ವಸ್ತುಗಳನ್ನು ಉಪಯೋಗಿಸುವಾಗ, ಪಾಲಕರ ಮೊಬೈಲ್​ ಫೋನ್​ ತೆಗೆದುಕೊಂಡಾಗ, ಫಿನೈಲ್​ ಮತ್ತಿತರ ಗೃಹಬಳಕೆ ವಸ್ತುಗಳ ವಿಷಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಮುಂತಾಗಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಬೇಕಾದ ನೂರೆಂಟು ವಿಷಯಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net