

‘ಜೀವನ ಬಹಳ ಅನಿಶ್ಚಿತವಾಗಿದೆ... ನೀವು ರಜೆಯಲ್ಲಿ ವಿಹಾರಕ್ಕೆಂದು ಹೋಗುತ್ತೀರಿ, ಭಯೋತ್ಪಾದಕರು ಗುಂಡಿನ ದಾಳಿ ಮಾಡುತ್ತಾರೆ... ನೀವು ಟ್ರೋಫಿ ಗೆದ್ದ ವಿಜಯೋತ್ಸವಕ್ಕೆ ಹಾಜರಾಗುತ್ತೀರಿ, ಅಲ್ಲಿ ಭೀಕರ ಕಾಲ್ತುಳಿತ ಉಂಟಾಗುತ್ತದೆ... ನೀವು ಕೆಲಸ ಅಥವಾ ಪ್ರವಾಸಕ್ಕಾಗಿ ವಿಮಾನವನ್ನು ಏರುತ್ತೀರಿ, ಅದು ಪತನಗೊಳ್ಳುತ್ತದೆ... ನೀವು ಹಾಸ್ಟೆಲ್ನಲ್ಲಿ ಶಾಂತಿಯುತವಾಗಿ ಅಧ್ಯಯನ ಮಾಡುತ್ತಿರುತ್ತೀರಿ, ಅಷ್ಟರಲ್ಲಿ ಒಂದು ವಿಮಾನವು ನೀವಿದ್ದ ಕಟ್ಟಡದ ಮೇಲೆ ಬೀಳುತ್ತದೆ... ನಾವಿರುವ ಸ್ಥಳ ಅತ್ಯಂತ ಸುರಕ್ಷಿತ ಎನ್ನಿಸುವ ಹೊತ್ತಿನಲ್ಲೇ, ಅದು ಹೇಗೆ ದುರಂತಕ್ಕೊಳಗಾಗುತ್ತದೆ ಎನ್ನುವುದು ಊಹಿಸಲೂ ಅಸಾಧ್ಯ...’
ಹೀಗೊಂದು ಸಂದೇಶ ಅಹಮದಾಬಾದ್ನ ವಿಮಾನ ದುರಂತ ಸಂದರ್ಭದಲ್ಲಿ ಬಹಳಷ್ಟು ಪ್ರಚಲಿತವಾಗಿತ್ತು. ಎಲ್ಲರೂ ಈ ಸಂದೇಶವನ್ನು ತಮ್ಮ ಸಾಮಾಜಿಕ ಜಾಲತಾಣ, ಫೇಸ್ಬುಕ್, ವಾಟ್ಸ್ಆಪ್ಗಳಲ್ಲಿ ಸ್ಟೇಟಸ್ ಹಾಕಿ ಬದುಕು ಎಷ್ಟು ಕ್ಷಣಿಕ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದರು.
ಪುರಂದರದಾಸರು ರಚಿಸಿರುವ ‘ಯಾರಿಗೆ ಯಾರುಂಟು, ಎರವಿನ ಸಂಸಾರ’ ಎಂಬ ಕೀರ್ತನೆಯಲ್ಲಿ ‘ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ’ ಎನ್ನುತ್ತ ಬದುಕು ನೀರ ಮೇಲಿನ ಗುಳ್ಳೆಯಂತೆ ಅನಿಶ್ಚಿತ, ಕ್ಷಣಿಕ; ಸಂಬಂಧಗಳು, ಲೌಕಿಕ ವಸ್ತುಗಳೆಲ್ಲ ತಾತ್ಕಾಲಿಕವಾಗಿ ಇರುವಂಥವು ಎಂದು ಹೇಳುತ್ತ ಜೀವನದ ಅನಿಶ್ಚಿತತೆಯನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಭಗವಂತ ಒಬ್ಬನೇ ಶಾಶ್ವತ ಎಂಬ ಸತ್ಯವನ್ನು ಪ್ರತಿಪಾದಿಸಿದ್ದಾರೆ.
ಬದುಕು ಎಂಬುದು ದೇವರು ಒದಗಿಸಿದ ಸುಂದರ ವರ. ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ. ಅದು ಭಗವಂತನ ಇಚ್ಛೆ. ಬದುಕನ್ನು ಕರ್ವನುಸಾರವಾಗಿ ಅವರವರು ಪಡೆದುಕೊಂಡು ಬಂದ ಭಾಗ್ಯವೆನ್ನಬಹುದು. ಲೋಕದಲ್ಲಿ ಅಜರಾಮರರಾದವರು ಯಾರೂ ಇಲ್ಲ. ಸಾವನ್ನೇ ಗೆಲ್ಲಲು ಹೊರಟ ಅನೇಕರ ಕಥೆಗಳು ಪುರಾಣದಲ್ಲಿವೆ. ತನಗೆ ಸಾವೇ ಬರಬಾರದು ಎಂದು ವರ ಪಡೆಯಲು ಹೋದ ಹಿರಣ್ಯಕಶ್ಯಪ, ಮಹಿಷಾಸುರ ಸೇರಿದಂತೆ ಅನೇಕರು ಸಾವಿಗೆ ಶರಣಾಗಿದ್ದಾರೆ. ಹಾಗೆಯೇ ಪುಣ್ಯಪುರುಷರು ದೀರ್ಘಾಯುಷಿಗಳಾಗಿದ್ದರೂ ಒಂದಲ್ಲ ಒಂದು ದಿನ ಮುಕ್ತಿ ಪಡೆದವರೇ ಆಗಿದ್ದಾರೆ. ಈ ಬಗ್ಗೆ ಮಹಾಭಾರತದ ಪುರಾಣ ಕಥೆಗಳಲ್ಲೂ ಉಲ್ಲೇಖವಿದೆ.
ಅಭಿಮನ್ಯು ಮತ್ತು ಉತ್ತರೆಯ ಮಗನಾದ ಪರೀಕ್ಷಿತ ಮಹಾರಾಜ ಬೇಟೆಗೆೆ ಎಂದು ಕಾಡಿಗೆ ಹೋಗಿದ್ದ. ಜಿಂಕೆಯೊಂದನ್ನು ನೋಡಿದ ಆತ ಅದರತ್ತ ಬಾಣ ಹೂಡಿದ. ಜಿಂಕೆಯು ವೇಗದಿಂದ ಓಡಿ ಕಣ್ಮರೆಯಾಯಿತು. ಆಗ ರಾಜನು ಜಿಂಕೆಯನ್ನು ಹುಡುಕುತ್ತ ಹತ್ತಿರದಲ್ಲೇ ಇದ್ದ ಶಮೀಕ ಮುನಿಯ ಆಶ್ರಮವನ್ನು ತಲುಪಿದ. ಅಲ್ಲಿ ಮುನಿಗಳು ಧ್ಯಾನಸ್ಥರಾಗಿದ್ದರು. ಮಹಾರಾಜನ ಆಗಮನ ಅವರಿಗೆ ತಿಳಿಯಲಿಲ್ಲ. ಏಕಾಗ್ರತೆಯಿಂದ ತಪಸ್ಸು ಮಾಡುತ್ತಿದ್ದ ಮುನಿಗಳಿಗೆ ಪರೀಕ್ಷಿತ ಮಹಾರಾಜ ಎಷ್ಟೇ ಕೂಗಿದರೂ ಅದು ಕೇಳದಾಯಿತು.
ತನ್ನ ಕೂಗಿಗೆ ಸ್ಪಂದಿಸದ ಕಾರಣ, ಕೋಪಗೊಂಡ ಮಹಾರಾಜ ಅಲ್ಲೇ ಪಕ್ಕದಲ್ಲಿ ಸತ್ತು ಬಿದ್ದಿದ್ದ ಹಾವನ್ನು ಮುನಿಯ ಕೊರಳಿಗೆ ಹಾಕಿ ತೆರಳಿದ. ತುಸು ಹೊತ್ತಿನ ಬಳಿಕ ಅಲ್ಲಿಗೆ ಮುನಿಪುತ್ರ ಶೃಂಗಿ ಆಗಮಿಸಿದ. ತಂದೆಯ ಕೊರಳಲ್ಲಿ ಸತ್ತ ಹಾವನ್ನು ಕಂಡು ಕೋಪಗೊಂಡ. ‘ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅಪಮಾನ ಮಾಡಿದವನು ಇಂದಿನಿಂದ ಏಳು ದಿನಗಳೊಳಗಾಗಿ ಸರ್ಪ ಕಚ್ಚಿ ಸಾಯಲಿ’ ಎಂದು ಶಪಿಸಿದ. ಮುನಿಶಾಪದಿಂದ ಪರೀಕ್ಷಿತ ಮಹಾರಾಜ ಮರಣದಿಂದ ತಪ್ಪಿಸಿಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡಿದ. ಸಮುದ್ರದ ನಡುವೆ ಒಂದು ಎತ್ತರವಾದ ಸೌಧವನ್ನು ನಿರ್ವಿುಸಿ, ಒಂದಿರುವೆಯೂ ನುಸುಳದ ರೀತಿಯಲ್ಲಿ ಸುರಕ್ಷಿತವಾಗಿರಲು ಸಕಲ ವ್ಯವಸ್ಥೆಯನ್ನು ಮಾಡಿದ. ಆದರೆ ಆತನಿಗೆ ತಿನ್ನಲು ಕೊಂಡೊಯ್ದ ಹಣ್ಣಿನಲ್ಲಿ ಸಣ್ಣ ಹುಳದ ರೂಪದಲ್ಲಿ ಅಡಗಿದ ಸರ್ಪರಾಜ ತಕ್ಷಕ ಪರೀಕ್ಷಿತ ಮಹಾರಾಜನನ್ನು ಕಚ್ಚಿದ. ಈ ರೀತಿ ಪರೀಕ್ಷಿತ ಮಹಾರಾಜನ ಅಂತ್ಯವಾಯಿತು. ಹೀಗೆ ಅನೇಕರು ಸಾವಿನಿಂದ ತಪ್ಪಿಸಿಕೊಳ್ಳಲು ಅನೇಕ ಪ್ರಯತ್ನ ಮಾಡಿದರೂ ಸಾವನ್ನು ಗೆಲ್ಲಲಾಗಲಿಲ್ಲ. ಇಂದಿಗೂ ಸಾವನ್ನು ದೂರವಿಡಲು, ಆಯುಷ್ಯವನ್ನು ಹೆಚ್ಚಿಸಲು ವಿಜ್ಞಾನಿಗಳು, ವೈದ್ಯರು ಸಾಕಷ್ಟು ಅಧ್ಯಯನ, ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ ಸಾವಿನ ನಿಗೂಢ ರಹಸ್ಯವನ್ನು ಭೇದಿಸಿದವರಾರೂ ಇಲ್ಲ.
ನಿತ್ಯವೂ ನೂರಾರು ಅಪಘಾತಗಳು, ಅವಘಡಗಳು ಸಂಭವಿಸುತ್ತಿರುತ್ತವೆ. ಈ ಸಂದರ್ಭದಲ್ಲಿ ಅನೇಕರ ಪ್ರಾಣ ಉಳಿಸುವ ಕಾರ್ಯವನ್ನು ವೈದ್ಯರು ಮಾಡುತ್ತಾರೆ. ಸೂಕ್ತ ಕಾಲದಲ್ಲಿ ಚಿಕಿತ್ಸೆ ನೀಡಿ ಆರೈಕೆ ಮಾಡಿ ರೋಗಿಗೆ ಮರುಜೀವ ನೀಡುವಲ್ಲಿ ವೈದ್ಯಕೀಯ ಸಿಬ್ಬಂದಿಯ ಪಾತ್ರ ಮಹತ್ವದ್ದು. ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಕಾಯಿಲೆಗಳನ್ನು, ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳನ್ನು ಗುಣಪಡಿಸುವಲ್ಲಿ ವೈದ್ಯರು ಬಹಳಷ್ಟು ಶ್ರಮಿಸುತ್ತಿದ್ದಾರೆ. ಹಾಗಾಗಿ ವೈದ್ಯರನ್ನು ದೇವರ ಸಮಾನವಾಗಿ ಕಂಡು ‘ವೈದ್ಯೋ ನಾರಾಯಣ ಹರಿಃ’ ಎಂದು ಹೇಳುತ್ತೇವೆ. ಕೆಲವೊಮ್ಮೆ ವೈದ್ಯರು ‘ರೋಗಿಯನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಕೈಯಲ್ಲಾಗುವಷ್ಟು ಪ್ರಯತ್ನ ಮಾಡಿದ್ದೇವೆ, ಇನ್ನೇನಿದ್ದರೂ ಭಗವಂತನ ಇಚ್ಛೆ’ ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ ರೋಗಿಯೂ ತನ್ನ ಕರ್ಮದಿಂದ ಪುಣ್ಯ ಫಲ ಹೊಂದಿದ್ದಲ್ಲಿ ಬದುಕುಳಿಯುತ್ತಾನೆ ಅಷ್ಟೆ.
ಒಮ್ಮೊಮ್ಮೆ ರೋಗಿ ಅಸುನೀಗಿದ್ದಾನೆ ಎಂದು ಹೇಳಿ ವೈದ್ಯರು ಶವವನ್ನು ಮನೆಯವರಿಗೆ ಹಸ್ತಾಂತರಿಸಿದ ಮೇಲೆ ಇನ್ನೇನು ಶವವನ್ನು ದಹನ/ದಫನ ಮಾಡಬೇಕು ಎನ್ನುವಷ್ಟರಲ್ಲಿ ಮತ್ತೆ ಬದುಕಿ ಎದ್ದು ಬರುವಂತಹ ಆಶ್ಚರ್ಯಕರ ಘಟನೆಗಳು ನಡೆದಾಗ ಇದು ದೇವರ ಪವಾಡ ಎಂದೆನ್ನುತ್ತೇವೆ. ಈ ಬದುಕು ಕ್ಷಣಿಕ ಎಂಬ ಅರಿವಿದ್ದರೂ ಅತಿ ಆಸೆ, ಲೋಭ, ಮೋಹದಿಂದ ಮನುಷ್ಯ ತನ್ನ ಬದುಕಿನ ಉದ್ದೇಶವನ್ನೇ ಮರೆತಂತಿದೆ. ಶಾಂತಿ, ಸೌಹಾರ್ದದಿಂದ ಜೀವಿಸುವ ಬದಲು ಅಹಂಕಾರದಿಂದ ತಾನು ಮಾತ್ರ ಬದುಕಿದರೆ ಸಾಕು, ತಾನು ಪ್ರಬಲನಾಗಬೇಕು, ತನ್ನ ಧರ್ಮವೇ ಶ್ರೇಷ್ಠ ಎಂಬ ಅಮಲಿನಲ್ಲಿ ಬದುಕುತ್ತ ಇತರರಿಗೆ ತೊಂದರೆ ಉಂಟು ಮಾಡುತ್ತಿರುವುದು ಖೇದಕರ ಸಂಗತಿ.
ಇಂದು ವಿಶ್ವದಲ್ಲಿ ಶಾಂತಿಗಿಂತ ಅಶಾಂತಿಯೇ ಹೆಚ್ಚಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಜಗತ್ತಿನ ಅನೇಕ ರಾಷ್ಟ್ರಗಳ ನಡುವೆ ವೈಮನಸ್ಸು, ಹಗೆತನದಿಂದ ಪರಸ್ಪರ ಅಪ್ರಚೋದಿತ ದಾಳಿ, ಸಂಘರ್ಷ, ಯುದ್ಧದಂತಹ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಯೂಕ್ರೇನ್-ರಷ್ಯಾ, ಇಸ್ರೇಲ್-ಇರಾನ್ ನಡುವಿನ ಸಂಘರ್ಷಗಳು ಇತ್ತೀಚಿನ ಉದಾಹರಣೆಗಳು. ಈ ನಡುವೆ ಪಾಕಿಸ್ತಾನವು ಕಾಶ್ಮೀರದಲ್ಲಿ ಉಗ್ರರ ಮೂಲಕ ದಾಳಿ ಮಾಡಿಸಿ ಅಮಾಯಕರನ್ನು ಹತ್ಯೆ ಮಾಡಿತು. ಅದಕ್ಕೆ ಪ್ರತ್ಯುತ್ತರವಾಗಿ ಭಾರತವೂ ‘ಆಪರೇಶನ್ ಸಿಂಧೂರ’ದ ಮೂಲಕ ತಕ್ಕ ಪಾಠ ಕಲಿಸುವುದರ ಜೊತೆಗೆ ಉಗ್ರರಿಗೆ ಹಾಗೂ ಅವರಿಗೆ ಸಹಕಾರ ನೀಡುವ ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ರವಾನಿಸಿತು. ಭಾರತ ನಡೆಸಿದ ಕಾರ್ಯಾಚರಣೆಯ ನೇತೃತ್ವ ವಹಿಸಿದ ದೇಶದ ಧೀರ ಮಹಿಳಾ ಯೋಧರನ್ನು ನಾವೆಲ್ಲ ಶ್ಲಾಘಿಸಲೇಬೇಕು.
ಯುದ್ಧ ಯಾರಿಗೂ ಖುಷಿ ಕೊಡುವ ಸಂಗತಿಯಲ್ಲ. ಯುದ್ಧದ ಭೀತಿ ಎಷ್ಟಿದೆ ಎಂದರೆ ಕೆಲವು ರಾಷ್ಟ್ರಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯಪುಸ್ತಕದ ಪಾಠಕ್ಕಿಂತ ಹೆಚ್ಚಾಗಿ ವೈರಿ ದೇಶಗಳಿಂದ ದಾಳಿಗಳು ನಡೆದಾಗ ಹೇಗೆ ಅದರಿಂದ ಸುರಕ್ಷಿತವಾಗಿರಬೇಕು, ಬಂಕರ್ಗಳಲ್ಲಿ ಹೇಗೆ ಅಡಗಿ ಇರಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆಯೇ ಹೇಳಿಕೊಡುವ ಮಟ್ಟಿಗೆ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸ. ಯುದ್ಧ ಮತ್ತು ಯುದ್ಧಭೀತಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿರುವುದು ವಿಷಾದನೀಯ.
‘ಯುದ್ಧದಲ್ಲಿ ಗೆದ್ದವ ಸೋತ, ಸೋತವ ಸತ್ತ’ ಎಂಬ ಮಾರ್ವಿುಕ ನುಡಿಯು ಅದರಿಂದಾಗುವ ಕಷ್ಟ, ನಷ್ಟ, ಸಾವು-ನೋವುಗಳ ಬಗೆಗಿನ ಸತ್ಯವನ್ನು ತೆರೆದಿಡುತ್ತದೆ. ಎರಡು ದೇಶಗಳ ನಡುವೆ ಮಾತ್ರ ಯುದ್ಧ ನಡೆದರೂ ಅದರ ಪರಿಣಾಮ ವಿಶ್ವದ ಅನೇಕ ರಾಷ್ಟ್ರಗಳನ್ನು ಬಾಧಿಸುತ್ತದೆ. ಆರ್ಥಿಕತೆ, ರಾಜಕೀಯ, ಶಿಕ್ಷಣ, ಜನಜೀವನ ಹೀಗೆ ಎಲ್ಲದರ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪರಿಣಮಿಸಿ ಭವಿಷ್ಯದ ಅಸ್ಥಿರತೆಗೆ ಕಾರಣವಾಗಬಹುದು. ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎಂಬಂತೆ ಯುದ್ಧಗಳು ಕ್ಷಣಮಾತ್ರದಲ್ಲಿ ಎಲ್ಲವನ್ನೂ ನಾಶ ಮಾಡಿಬಿಡಬಹುದು. ಅಂತಹ ನಾಶವನ್ನು ನಾವೇ ನಮ್ಮ ಕೈಯಾರೆ ತಂದುಕೊಳ್ಳಬೇಕೆ ಎಂಬುದನ್ನು ಮಾನವ ಜನಾಂಗ ಮನಃಸಾಕ್ಷಿಯಲ್ಲಿ ಒಮ್ಮೆ ಪ್ರಶ್ನಿಸಿಕೊಳ್ಳಲೇಬೇಕಿದೆ.
ಎಲ್ಲದಕ್ಕೂ ಒಂದು ಮಿತಿ ಇದೆ. ತಪ್ಪಿ ನಡೆದಾಗ ಸರಿ ಮಾಡಿಕೊಳ್ಳಲು, ಅಧರ್ಮ ಬಿಟ್ಟು ಧರ್ಮ ಮಾರ್ಗದಲ್ಲಿ ನಡೆಯಲು ದೇವರು ಸಾಕಷ್ಟು ಅವಕಾಶಗಳನ್ನು ನೀಡುತ್ತಾನೆ. ಉದಾಹರಣೆಗೆ ಶ್ರೀಕೃಷ್ಣನು ಶಿಶುಪಾಲನ ನೂರು ತಪ್ಪುಗಳನ್ನು ಸಹಿಸಿಕೊಂಡು, ಮತ್ತೆ ಆತನಿಂದ ತಪ್ಪು ನಡೆದಾಗ ಆತನನ್ನು ವಧಿಸಿದ. ಈ ಮೂಲಕ ತಪ್ಪು ಮಾಡಿದವನಿಗೂ ಶ್ರೀಕೃಷ್ಣ ಅವಕಾಶ ನೀಡಿ ಸರಿದಾರಿಗೆ ಬರುವಲ್ಲಿ ಮಾರ್ಗದರ್ಶನ ನೀಡುತ್ತಾನೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ದೇವತೆಗಳು ಮತ್ತು ಅಸುರರ ನಡುವಿನ ವ್ಯತ್ಯಾಸವೂ ಇಷ್ಟೇ. ದೇವತೆಗಳು ಲೋಕದ ಒಳಿತಿಗೆ, ರಕ್ಷಣೆಗೆ ತಮ್ಮನ್ನು ತೊಡಗಿಸಿಕೊಂಡರೆ ಅಸುರರು ತಮಗೆ ದೊರೆತ ವರದ ಬಗ್ಗೆ ಅಹಂಕಾರದಿಂದ ದುರ್ವರ್ಗದಲ್ಲಿ ನಡೆದು ಯಜ್ಞಯಾಗಾದಿಗಳನ್ನು ನಾಶ ಮಾಡಿ ಎಲ್ಲರನ್ನೂ ಹಿಂಸಿಸುತ್ತ ಸಂಹರಿಸುತ್ತ ಜಗತ್ತಿನ ಸದ್ಧರ್ಮದ ನಾಶಕ್ಕೆ ಪ್ರಯತ್ನಿಸುತ್ತಾರೆ. ಅವರ ಆಟಾಟೋಪ ಮಿತಿ ಮೀರಿದಾಗ ದೇವರು ಯಾವುದಾದರೊಂದು ಅವತಾರದ ಮೂಲಕ ಅಸುರರನ್ನು ವಧಿಸಿ ಲೋಕಕಲ್ಯಾಣ ಮಾಡುತ್ತಾರೆ. ಅಂತೆಯೇ ದೇವರು ನಮಗೂ ತಪ್ಪು ತಿದ್ದಿಕೊಳ್ಳಲು ಸಮಯ ನೀಡುತ್ತಾರೆ. ಆದರೆ ತಪ್ಪು ತಿದ್ದಿಕೊಳ್ಳದೆ ಮೊಂಡುತನ ಪ್ರದರ್ಶಿಸಿದರೆ ತಕ್ಕ ಶಿಕ್ಷೆ ತಪ್ಪಿದ್ದಲ್ಲ.
‘ತೇನವಿನಾ ತೃಣಮಪಿ ನ ಚಲತಿ’ ಎನ್ನುವಂತೆ ಭಗವಂತನ ಇಚ್ಛೆಯಿಲ್ಲದೆ ಏನೂ ಆಗುವುದಿಲ್ಲ, ಎಲ್ಲವೂ ಅವನ ದಯೆಯಿಂದಲೇ ನಡೆಯುತ್ತದೆ ಎಂದು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಾಗಿದೆ. ವಿಧಿಯನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಸರ್ವವಿದಿತ. ಹುಟ್ಟು ಸಾವು ನಿತ್ಯ ನಿರಂತರ, ಆದರೆ ನಮ್ಮ ಕರ್ಮಗಳಿಂದ ನಾವು ಅಜರಾಮರರಾಗಿ ಉಳಿಯಲು ಖಂಡಿತ ಸಾಧ್ಯ. ರಾಮಾಯಣ, ಮಹಾಭಾರತ ನಡೆದು ಅದೆಷ್ಟೋ ಸಂವತ್ಸರಗಳು ಕಳೆದರೂ ಶ್ರೀರಾಮ ಇನ್ನೂ ನಮ್ಮ ನಡುವೆ ಇದ್ದಾನೆ. ಆತನ ಆದರ್ಶ ಜೀವನ, ತತ್ವಗಳೆಲ್ಲ ಇನ್ನೂ ಮನಗಳಲ್ಲಿ ತುಂಬಿವೆ. ಅಂತೆಯೇ ಪಾಂಡವರ ಧರ್ವಚರಣೆಯ ವಿಚಾರಗಳು ನಮ್ಮಲ್ಲಿ ಮಿಳಿತವಾಗಿದ್ದು ನಿತ್ಯ ಜೀವನದಲ್ಲಿ ಅವುಗಳ ಪಾಲನೆಗೆ ಸಾಕಷ್ಟು ಅವಕಾಶಗಳಿವೆ.
ದೇವರು ಕೊಟ್ಟ ಈ ಬದುಕು ಸದಾ ಅಮೂಲ್ಯ. ಪ್ರತಿಕ್ಷಣವನ್ನು ನಾವು ಸುಂದರವಾಗಿ ಜೀವಿಸಿ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ನಮ್ಮ ಕೈಯಲ್ಲಿ ಇನ್ನೊಬ್ಬರಿಗೆ ಒಳಿತು ಮಾಡಲು ಸಾಧ್ಯವಾಗದಿದ್ದರೂ ಕೆಟ್ಟದ್ದನ್ನು ಮಾಡಬಾರದು ಮತ್ತು ಬಯಸಬಾರದು ಎನ್ನುವುದು ನಮ್ಮ ಬದುಕಿನ ಧ್ಯೇಯವಾಗಬೇಕು. ಇಂದಿನ ಈ ಧಮಾಂಧತೆ, ಭಯೋತ್ಪಾದನೆ, ಯುದ್ಧ ಸನ್ನಿವೇಶಗಳು ಶೀಘ್ರದಲ್ಲಿ ತಿಳಿಯಾಗಿ ‘ವಸುಧೈವ ಕುಟುಂಬಕಂ’ ತತ್ವದಡಿ ‘ಮನುಷ್ಯ ಕುಲಂ ತಾನೊಂದೇ ವಲಂ’ ಎನ್ನುವಂತೆ ಎಲ್ಲರೂ ಒಟ್ಟಾಗಿ ಬಾಳ್ವೆ ನಡೆಸೋಣ. ಬದುಕನ್ನು ಮತ್ತು ಜಗತ್ತನ್ನು ಸಮೃದ್ಧವಾಗಿಸೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)