

ಕರೊನಾ ವೈರಸ್ ಹಾವಳಿಯ ಈ ಸಂದಿಗ್ಧ ಸಮಯವನ್ನು ದೇಶದ ಏಳಿಗೆಗೆ ಅವಕಾಶದ ಏಣಿಯನ್ನಾಗಿ ಬಳಸಿಕೊಳ್ಳುವ ಜಾಣ್ಮೆ, ವಿವೇಕವನ್ನು ಸರ್ಕಾರ ಮತ್ತು ಜನರು ತೋರಬೇಕಿದೆ.
ಕಾಫಿ ಸೇರಿದಂತೆ ವಿವಿಧ ಕೃಷಿ ಬೆಳೆಗಳ ವಿಷಯದಲ್ಲಿಯೂ ಈ ಮಾತು ಅನ್ವಯ. ಹೀಗೆ ಮಾಡಿದಲ್ಲಿ ಭಾರತ ಮುಂಚೂಣಿ ದೇಶವಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ.
ಕರೊನಾ ಕಾರಣಕ್ಕೆ ಬದುಕು ಲಾಕ್ಡೌನ್ ಆದ ಈ ಕಾಲದಲ್ಲಿ ಆರ್ಥಿಕತೆಯ ಬೇರೆಬೇರೆ ವ್ಯವಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಅಡೆತಡೆ ಅನುಭವಿಸಿವೆ. ಅದರಲ್ಲೂ ಶೇಖರಿಸಲಾಗದ ಸರಕುಗಳನ್ನು ಉತ್ಪಾದಿಸುವ ರೈತರ ನೋವುಗಳಿಗೆ ಸರ್ಕಾರದ ಸ್ಪಂದನೆ ಕೇವಲ ಬಾಯಿಗೆ ಬೆಣ್ಣೆ ಹಚ್ಚುವ ಹುನ್ನಾರದಂತೆ ಎನ್ನುವುದು ಇತ್ತೀಚಿನ, ಈರುಳ್ಳಿ ಬೆಳೆದ ರೈತಮಹಿಳೆಯೊಬ್ಬಳ ಅಳಲಿಂದ ತಿಳಿಯುತ್ತದೆ. ನಂತರದಲ್ಲಿ ವ್ಯವಸ್ಥೆ ಆ ಭಾಗದ ಈರುಳ್ಳಿ ಖರೀದಿಗೆ ಮುಂದಾದರೂ ಎಷ್ಟು ರೈತರು ಹೀಗೆ ಮುಖ್ಯವಾಹಿನಿಗೆ ಸುದ್ದಿ ಮುಟ್ಟಿಸಬಲ್ಲರು? ಎಷ್ಟು ಮಂದಿಗೆ ಸ್ಪಂದನೆ ದೊರಕುವುದು ಹೇಳಲಾಗದು.
ಕೃಷಿ ಪ್ರಕಾರಗಳಲ್ಲಿ ಮೂರು ಬಗೆ: 1-ಶೇಖರಿಸಿಡಲಾಗದ ಹಣ್ಣು, ತರಕಾರಿ. 2-ಧಾನ್ಯಗಳು, ಬೇಳೆಕಾಳು. 3-ತೋಟಗಾರಿಕೆ ಬೆಳೆಗಳು. ಇಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿರುವುದು ಮೊದಲನೆಯ ಕೃಷಿಕ ವರ್ಗವಾದರೂ ಭೂಮಿಯನ್ನು ನಂಬಿದ ಬಹುತೇಕ ಎಲ್ಲರ ತಾಪತ್ರಯಗಳೂ ಭಿನ್ನ ನೆಲೆಯಲ್ಲಿ ಒಂದೇ ಆಗಿವೆ.
ಆಂತರಿಕ ವಹಿವಾಟನ್ನು ಹೊರತುಪಡಿಸಿಯೂ ದೇಶಕ್ಕೆ ಸುಮಾರು ಎಂಟುನೂರು ಮಿಲಿಯನ್ ಡಾಲರ್ನಷ್ಟು ವಿದೇಶಿ ವಿನಿಮಯ ಕೊಡುತ್ತಿರುವ ಕಾಫಿ ಉದ್ದಿಮೆ ಕರೊನಾ ಕಾರಣಕ್ಕೆ ಅನುಭವಿಸುತ್ತಿರುವ ಸಂಕಷ್ಟಗಳನ್ನು ನೋಡುವುದಾದರೆ-
ಮಾರ್ಚ್ ತಿಂಗಳ ಮಧ್ಯಭಾಗದಿಂದ ಆರಂಭವಾದ ಲಾಕ್ಡೌನ್ನಿಂದಾಗಿ ರೊಬಸ್ಟಾ ತಳಿ ಹಾಗೂ ಕಾಳುಮೆಣಸಿನ ಕೊನೆಯ ಕೊಯ್ಲಿಗೆ ಕಾರ್ವಿುಕರು ಸಿಗದೆ ಬಹಳಷ್ಟು ಕಾಫಿ ಹಾಗು ಮೆಣಸು ಗಿಡದಲ್ಲಿ ಒಣಗಿ ಗಿಡ ಅಥವಾ ಬಳ್ಳಿಯೂ ಹೆಚ್ಚು ಕಾಲ ಫಸಲನ್ನು ಹಿಡಿದಿಟ್ಟುಕೊಂಡಿದ್ದರಿಂದ ಸೊರಗಿದ್ದಲ್ಲದೆ ಮುಂದಿನ ಹಂಗಾಮಿನ ಫಸಲು ಕಟ್ಟುವಿಕೆಗೆ ನೇರ ಪರಿಣಾಮ ಬೀರಿದೆ. ಜೊತೆಗೆ ಈ ವರ್ಷದ ಫಸಲು ಕಾರ್ವಿುಕರಿಲ್ಲದೆ ಪೂರ್ಣವಾಗಿ ಕಣಜ ಸೇರಲಿಲ್ಲ.
ಪ್ರಮುಖವಾಗಿ ಕಾಫಿ ತೋಟದ ನಿರ್ವಹಣೆಗಾಗಿ ಬೇರೆ ರಾಜ್ಯಗಳಿಂದ ಬರುತ್ತಿದ್ದ ವಲಸೆ ಕಾರ್ವಿುಕರು ಲಾಕ್ಡೌನ್ ಕಾರಣದಿಂದ ಬಾರದೆ ಅತ್ಯಂತ ಹೆಚ್ಚು ಕೆಲಸ ಬೇಡುವ ಈ ಬೇಸಿಗೆ ಹಂಗಾಮಿನಲ್ಲಿ ಕೆಲಸ ಮುಂದುವರಿಯದೆ ಮಾಲೀಕರು ದಿಕ್ಕುತೋಚದಂತಾಗಿದ್ದಾರೆ. ಬೇಸಿಗೆಯ ಈ ಮೂರು ತಿಂಗಳಲ್ಲಿ ತೋಟಗಳು ರಕ್ಷಣೆ(ಪೊ›ಟೆಕ್ಷನ್ ಮತ್ತು ಪೊ›ಡಕ್ಷನ್) ಮತ್ತು ಗಿಡದ ಉತ್ಪಾದನೆ ಹೆಚ್ಚಿಸುವ ಸಾಕಷ್ಟು ಕೆಲಸಗಳನ್ನು ಬಯಸುತ್ತವೆ.
ಬ್ಲಾಸಮ್ ಶಾವರ್, ಗಿಡಗಸಿ, ಮರಗಸಿ, ಚಿಗುರು, ಗೊಬ್ಬರ ಸಿಂಪಡಣೆಗಳು ಈ ಎರಡೂವರೆ ತಿಂಗಳೊಳಗೆ ಮುಗಿಯಲೇಬೇಕಾದ ಒತ್ತಡವಿರುತ್ತದೆ. ಬಹುತೇಕ ತೋಟಗಳಲ್ಲಿ ಈ ವರ್ಷದ ಈ ಕೆಲಸಗಳು ಲಾಕ್ಡೌನ್ ಕಾರಣಕ್ಕೆ ನಿಂತುಹೋಗಿವೆ.
ವಾರ್ಷಿಕ ಬೆಳೆಯೆನಿಸಿಕೊಂಡರೂ ಕಾಫಿ ಅತ್ಯಂತ ಶಿಸ್ತುಬದ್ಧವಾಗಿ, ನಿಯತವಾಗಿ ಕೆಲಸಗಳನ್ನು ಬೇಡುವ ಬೆಳೆ. ವ್ಯವಸ್ಥೆಯನ್ನು ಅದೆಷ್ಟೇ ಯಾಂತ್ರೀಕೃತಗೊಳಿಸಿದರೂ ಅತ್ಯಧಿಕ ಕಾರ್ವಿುಕರನ್ನು ಬೇಡುತ್ತದೆ.
ಇನ್ನು ಈ ಲಾಕ್ಡೌನ್ ಕಾರಣಕ್ಕೆ ಸ್ಥಳೀಯ ಕಾರ್ವಿುಕರ ಕೆಲಸದ ಗುಣಮಟ್ಟ ಕೂಡ ತೀವ್ರವಾಗಿ ಕುಸಿದಿದೆ. ಅಂಗಡಿಗಳು ಒಂದು ನಿಯತ ಸಮಯದಲ್ಲಿ ಮಾತ್ರ ತೆರೆದಿರುವುದು, ಪದೇಪದೆ ಸರ್ಕಾರದ ರೇಷನ್ ಕೊಡುವ ಬಗೆ ಕಾರ್ವಿುಕರನ್ನು ಕೆಲಸದಿಂದ ವಿಮುಖರನ್ನಾಗಿ ಮಾಡಿದೆ. ವಾರದ ಐದು ದಿನಗಳ ಕೆಲಸ ಮೂರು ದಿನಕ್ಕೆ ಇಳಿದು ಮಾಲೀಕರು ಕಾರ್ವಿುಕರಿಗಾಗಿ ಪರದಾಡುವಂತಾಗಿದೆ.
ಇದು ಮೊದಲ ಹಂತದ ಪಡಿಪಾಟಲು. ಮೇ ತಿಂಗಳು ಸಾಮಾನ್ಯವಾಗಿ ಕಾಫಿ ಮತ್ತು ಕಾಳುಮೆಣಸನ್ನು ಮಾರುವ ಸಮಯ. ಮುಂದಿನ ಹಂಗಾಮಿನ ನಿರ್ವಹಣೆಗೆ ಬಹುತೇಕ ಮಾಲೀಕರು ಈ ಮೂರು ತಿಂಗಳಲ್ಲಿ ಮಾರಾಟದ ಕುರಿತು ಯೋಚಿಸುತ್ತಾರೆ.
ನಮ್ಮ ಕಾಫಿ ಉತ್ಪಾದನೆಯ ಶೇಕಡಾ 80 ವಿದೇಶಿ ಮಾರುಕಟ್ಟೆಯನ್ನೇ ನೆಚ್ಚಿಕೊಂಡಿದೆ. ಲಾಕ್ಡೌನ್ ಕಾರಣದಿಂದ ಶಿಪ್ಪಿಂಗ್ ಆಗದೆ ಕಾಳುಮೆಣಸು ಮತ್ತು ಕಾಫಿಗೆ ಖರೀದಿದಾರರು ಮುಂದೆ ಬರುತ್ತಿಲ್ಲ. ರೈತರು ವಿಧಿಯಿಲ್ಲದೆ ಸಂಗ್ರಹಿಸಿಡಬೇಕಾದರೂ ಸಂಗ್ರಹಿಸಿದ ಪ್ರತಿ ಐವತ್ತು ಕೆಜಿ ತೂಕದ ಒಂದು ಚೀಲ ಮೂರು ತಿಂಗಳ ನಂತರ ಎರಡು ಕೆಜಿಯಷ್ಟು ತೂಕನಷ್ಟ ಹೊಂದಿರುತ್ತದೆ. ಜೊತೆಗೆ ಅಕಸ್ಮಾತ್ ಒಂದೆರಡು ಬೆರ್ರಿ ಬೋರರ್ ಇದ್ದ ಕಾಫಿ ಇದ್ದರೆ ಇಡಿ ರಾಶಿ ಈ ಕೀಟದ ಬಾಧೆಗೆ ಒಳಗಾಗುತ್ತದೆ. ಇವು ಎರಡನೇ ಹಂತದ ಸಂಕಷ್ಟಗಳು. ಇನ್ನು ಮೂರನೆ ಹಂತದಲ್ಲಿ ನೇರ ಪರಿಣಾಮ. ಬೆಳೆ ಮಾರದೆ ಸೂಕ್ತ ಆರ್ಥಿಕ ಅನುಕೂಲವಿಲ್ಲದೆ ಮುಂದಿನ ಹಂಗಾಮಿನ ಕೆಲಸಗಳು ನಿಂತುಹೋಗುತ್ತವೆ. ಇದು ಕಾಫಿತೋಟದ ಒಟ್ಟು ಆರೋಗ್ಯದ ಮೇಲೂ ತನ್ಮೂಲಕ ಮಾಲೀಕನ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಬ್ಯಾಂಕ್ ಮತ್ತು ಕೈಸಾಲದಲ್ಲೇ ತೋಟ ನಿರ್ವಹಿಸುವ ಬಹುತೇಕ ಬೆಳೆಗಾರರಿಗೆ ಕಂತು ಕಟ್ಟಲಾಗದೆ, ಸಾಲ ನವೀಕರಿಸಲಾಗದೆ ಪಡೆದ ಕೈಸಾಲಗಳನ್ನು ಮರುಪಾವತಿಸಲಾಗದೆ ಒದ್ದಾಡುವಂತಾಗುತ್ತದೆ. ಈ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮದುವೆ, ಮನೆ ನಿರ್ವಣ, ಗೋದಾಮು, ಕಣ ನಿರ್ವಣದಂತಹ ಕೆಲಸಗಳನ್ನು ಹಮ್ಮಿಕೊಂಡಿದ್ದವರ ಪಾಡಂತೂ ಕೇಳುವುದೇ ಬೇಡ.
ಆದರೂ...
ಇದೆಲ್ಲಾ ತೊಂದರೆಗಳ ನಂತರವೂ ಕಾಫಿ ಉದ್ದಿಮೆ ವ್ಯವಸ್ಥೆಯ ಸಂಕಷ್ಟಗಳಿಗೆ ಮನಃಪೂರ್ವಕವಾಗಿ ಸ್ಪಂದಿಸುತ್ತಿದೆ. ವಿವಿಧ ಸಂಘಸಂಸ್ಥೆಗಳ ನೆರವಿನಿಂದ, ತೊಂದರೆಯಲ್ಲಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚುತ್ತಿದೆ.
ಸರ್ಕಾರ ಕೊಡಬಹುದಾದ ಎಲ್ಲಾ ಸವಲತ್ತು, ಸೌಲಭ್ಯಗಳನ್ನು ತನ್ನ ಕಾರ್ವಿುಕರಿಗೆ ಉಚಿತವಾಗಿ ಒದಗಿಸುವ ಒಂದೇ ಒಂದು ಕೃಷಿ ಕ್ಷೇತ್ರ ಕಾಫಿ ಉದ್ದಿಮೆ. ಇದು ನಮ್ಮ ರಾಜ್ಯದಲ್ಲಿ ಸ್ಥಳೀಯವಾಗಿ ಸುಮಾರು ಎಂಟು ಲಕ್ಷ ಕುಟುಂಬಗಳಿಗೆ ಪ್ರತ್ಯಕ್ಷ ಉದ್ಯೋಗ ದೊರಕಿಸುತ್ತಿದೆ. ಪರೋಕ್ಷವಾಗಿ ಕೋಟ್ಯಂತರ ಮಂದಿ ಈ ಉದ್ದಿಮೆಯ ಲಾಭ ಪಡೆಯುತ್ತಾರೆ.
ಇದಲ್ಲದೆ ತುರ್ತಿನ ಕೆಲಸಗಳಿಗೆ ಅಸ್ಸಾಂ ಮತ್ತು ತಮಿಳುನಾಡಿನಿಂದ ಬರುವ ವಲಸೆ ಕಾರ್ವಿುಕರು ಕಾಫಿ ತೋಟದಿಂದ ಬದುಕು ಕಟ್ಟಿಕೊಂಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹೇಗೆ ಬೆಳೆಗಾರರ ಅಥವಾ ಭೂಮಿಯನ್ನು ನಂಬಿರುವವರ ಹಿತ ಕಾಪಾಡಬಹುದು? ಜೊತೆಗೆ, ಈ ಪ್ರತಿಕೂಲ ಪರಿಸ್ಥಿತಿಯ ಉಪಯೋಗವನ್ನು ಉದ್ದಿಮೆ ಹೇಗೆ ಪಡೆಯಬಹುದು..?
ಸ್ವಲ್ಪ ಹಿಂದಕ್ಕೆ ಹೋದರೆ...ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತದ ಕಾಫಿ ತುಂಬಿದ ಹಡಗುಗಳು ಪ್ರಯಾಣ ಪೂರೈಸಲು ಸಾಧ್ಯವಾಗದೆ ಸರಕು ಸಮೇತ ವಾಪಸು ಮಂಗಳೂರು ಬಂದರಿಗೆ ಬಂದಿಳಿದು ಮುಂಗಾರು ಮಳೆಗೆ ಸಿಲುಕಿ ಬಣ್ಣ ಕಳೆದುಕೊಂಡಿತು. ಬಿಳುಚಾದ ಆ ಕಾಫಿಯನ್ನು ಕೊಳ್ಳುವವರಿಲ್ಲದೆ ಸಮುದ್ರಕ್ಕೆ ಸುರಿಯುವ ಸಂಧರ್ಭದಲ್ಲಿ ಸ್ಕಾ್ಯಂಡಿನೇವಿಯ ದೇಶಗಳ ಚತುರ ಮಾರಾಟಗಾರರು ಯುದ್ಧ ಮುಗಿದ ಮೇಲೆ ಅದನ್ನು ‘ಮಾನ್ಸೂನ್ ಕಾಫಿ’ ಎಂದು ಹೆಸರಿಟ್ಟು ಮಾರಿ ಗ್ರಾಹಕರಿಗೆ ಹೊಸ ರುಚಿ ಹತ್ತಿಸಿ ಲಾಭ ಸೂರೆ ಮಾಡಿಕೊಂಡರು. ಎಂಬತ್ತು ವರ್ಷಗಳಿಂದ ಸುಮಾರು ಇಪ್ಪತ್ತು ಸಾವಿರ ಟನ್ ಒಳ್ಳೆಯ ಒಣಗಿದ ಕಾಫಿಗೆ ನೀರಿನ ಸ್ಪ್ರೇ ಮಾಡಿ ಮಂಗಳೂರು ಬಂದರಿನಿಂದ ಆ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಬುದ್ಧಿವಂತ ಜನರು ಹಾಳಾದ ಮಾಲಿಗೆ ಹೆಚ್ಚಿನ ಬೆಲೆ ಪಡೆಯಲು ಮಾರುಕಟ್ಟೆಯನ್ನು ಸೃಷ್ಟಿಸಿರುವ ಇತಿಹಾಸ ನಮ್ಮ ಕಣ್ಣ ಮುಂದಿದೆ.
ಪ್ರತಿಕೂಲ ವಾತಾವರಣದಲ್ಲಿ ಹೊಸ ವಿಚಾರಗಳು ಮೂಡುತ್ತವೆ. ಹೊಸ ಅಧ್ಯಾಯ ತೆರೆಯುತ್ತದೆ. ಕರೋನಾ ವೈರಾಣು ಜಾಗತಿಕ ಅರ್ಥ ವ್ಯವಸ್ಥೆಯನ್ನು ಅಲುಗಾಡಿಸಿದೆ ನಿಜ. ಆದರೆ ಇದರಿಂದಾಗಿ ಭಾರತದ ಭವಿಷ್ಯ ನಂಬಲಾಗದ ಹಾಗೆ ಬೆಳಗಲಿದೆ ಎಂಬ ಬಹುತೇಕರ ನಿರೀಕ್ಷೆಗಳಿಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡು ನಮ್ಮಲ್ಲಿರುವ ಅಪಾರ ಜನಸಂಖ್ಯೆಯನ್ನು ಜನಸಂಪತ್ತಾಗಿ ಬದಲಾಯಿಸುವ ಕಾಲ ಸನ್ನಿಹಿತವಾಗಿದೆ. ಹೆಚ್ಚು ಜನಸಂಖ್ಯೆ ಶಾಪವಲ್ಲ. ಅದೊಂದು ವರ. ಏಕೆಂದರೆ ಸಂತಾನ ನಿಯಂತ್ರಣ ಮಾಡಿಕೊಂಡು ಚೀನಾ ಸಹಿತ ಯುವಜನರ ಸಂಖ್ಯೆಯಲ್ಲಿ ಬಹಳ ಹಿಂದಿದೆ. ಅದೇ ಭಾರತ ‘ಯುವಜನರ ದೇಶ’ವೆಂದೇ ಕರೆಸಿಕೊಳ್ಳುತ್ತಿದೆ.
ಅಮೆರಿಕ, ಇಟಲಿ, ಫ್ರಾನ್ಸ್, ಜರ್ಮನಿ, ಸ್ವೀಡನ್, ಸ್ವಿಜರ್ಲೆಂಡ್, ಇರಾನ್, ಸ್ಪೇನ್ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳು ಕರೊನಾದಿಂದ ತತ್ತರಿಸಿವೆ. ಉತ್ತರ ಮತ್ತು ಮಧ್ಯ ಅಮೆರಿಕದ ಕಾಫಿ ಬೆಳೆಯುವ ರಾಷ್ಟ್ರಗಳು, ಬ್ರೆಜಿಲ್ ಸಹ ಆರ್ಥಿಕ ಹಿನ್ನಡೆ ಅನುಭವಿಸುತ್ತಿವೆ. ಚೀನಾದಿಂದ ಭಾರತಕ್ಕೆ ಅನೇಕ ಉದ್ದಿಮೆಗಳು ಸ್ಥಳಾಂತರವಾಗುವ ಸಾಧ್ಯತೆ ಇದೆ. ಇದೆಲ್ಲದರ ಪರಿಣಾಮ ನಮ್ಮ ಕಾಫಿ ಉತ್ಪಾದನೆ ಆಂತರಿಕ ಬಳಕೆಗೇ ಸಾಕಾಗುವುದಿಲ್ಲ. ಇದು ಆರ್ಥಿಕ ತಜ್ಞರು, ಚಿಂತಕರು, ಹೂಡಿಕೆದಾರರು ವ್ಯಕ್ತಪಡಿಸುತ್ತಿರುವ ಖಚಿತ ಅಭಿಪ್ರಾಯ. ಈ ಕನಸು ನನಸಾಗಬೇಕಾದರೆ ನಮ್ಮ ಯುವ ಜನತೆ ಬೇರೆಯವರಿಗೆ ದುಡಿಯುವ ಬದಲಿಗೆ ತಾವೇ ಆಂತರಿಕ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲಸ ಮಾಡಬೇಕಿದೆ. ಸರ್ಕಾರ ಗ್ರಾಮೀಣ ಮಟ್ಟದಲ್ಲಿ ಸೂಕ್ತ ತರಬೇತಿ ಕೊಟ್ಟು ವೃತ್ತಿಪರತೆಯನ್ನು ಹೆಚ್ಚಿಸಬೇಕಿದೆ.
ಸದ್ಯದ ಬ್ಯಾಂಕ್ ಸಾಲ, ಬಡ್ಡಿಗಳಿಂದ ಬೆಳೆಗಾರನನ್ನು ಸಂಪೂರ್ಣ ಮುಕ್ತ ಮಾಡಿ ಹೊಸ ಹುರುಪಿನಿಂದ ಕೆಲಸ ಮಾಡಲು ವ್ಯವಸ್ಥೆ ಅನುವು ಮಾಡಿಕೊಡಬೇಕಿದೆ.
ನಮ್ಮ ಶ್ರಮದ ಫಲವನ್ನು ನಾವೇ ಅನುಭವಿಸುವ ಸುಸಂಧರ್ಭ ಒದಗಿರುವ ಈ ಕಾಲದಲ್ಲಿ ನಮ್ಮ ಕಾಫಿಯನ್ನು ಪೈಪೋಟಿಯ ಮೇಲೆ ಜಾಗತಿಕ ಮಾರುಕಟ್ಟೆಯಲ್ಲಿ ಕೊಳ್ಳಲು ಜನ ಬರುವ ಅವಕಾಶಗಳಿವೆ.
ಬೆಳೆಗಾರರು ಕಾಯಾ, ವಾಚಾ, ಮನಸಾ ಒಗ್ಗಟ್ಟಿನಿಂದ ದುಡಿದರೆ, ಸರ್ಕಾರ ಅದಕ್ಕೆ ಸೂಕ್ತವಾಗಿ ಸ್ಪಂದಿಸಿದರೆ ಕಾಫಿ ಉದ್ಯಮ ಇನ್ನಿಲ್ಲದಂತೆ ಹೆಸರು, ಹಣ ಮಾಡುವ ವಿಪುಲ ಅವಕಾಶಗಳು ನಮ್ಮೆದುರಿಗಿವೆ. ಹಟ್ಟಿಕಾಫಿ, ಕಲ್ಮನೆ ಕಾಫಿ, ಬ್ಲಾಕ್ ಫಾರೆಸ್ಟ್ ಕಾಫಿಯಂತೆ, ಬಾಳ್ಳು ಕಾಫಿ, ಗಿರಿ ಕಾಫಿ, ಮಗ್ಗೆಕಾಫಿ, ಆಲೂರ್ ಕಾಫಿ, ಬೇಲೂರು ಕಾಫಿ, ಮಂಜ್ರಾಬಾದ್ ಕಾಫಿ, ಶನಿವಾರ ಸಂತೆ ಕಾಫಿ ಕೂಡ ಬರಬಹುದೆಂಬ ಕನಸು ಹಿರಿಯ ಕಾಫಿ ಬೆಳೆಗಾರರದ್ದು. ವೈರಸ್ ಅನ್ನು ಬೇರೆಯವರಿಗಿಂತ ಯಶಸ್ವಿಯಾಗಿ ಹಿಮ್ಮೆಟ್ಟಿ ಖಂಡಿತವಾಗಿ ಒಳ್ಳೆಯ ದಿನಗಳನ್ನು ನೋಡುತ್ತೇವೆ. ಹಿಂದೆ ನಮ್ಮ ಸಂಪತ್ತನ್ನು ಇಂಗ್ಲಿಷರು, ಪೋರ್ಚುಗೀಸರು, ಫ್ರೆಂಚರು, ಮಂಗೋಲಿಯನ್ನರು ಲೂಟಿ ಹೊಡೆದಿದ್ದರು. ಈಗ ಭಾರತ ಮುಂಚೂಣಿಗೆ ಬರುವ ಸಾಧ್ಯತೆಗಳು ಗೋಚರಿಸುತ್ತಿವೆ. ಮುಂದಿನ ಜನಾಂಗ ಭವ್ಯ ಭಾರತವನ್ನು ಕಟ್ಟಲು ಈ ಕರೊನಾ ನಾಂದಿ ಹಾಡಿದೆ ಎನ್ನಬಹುದು.
(ಲೇಖಕರು ಕವಯಿತ್ರಿ, ಕಥೆಗಾರ್ತಿ)