

| ಡಾ. ಪೂರ್ಣಿಮಾ ಶಶಿಧರ್ಬಾವಿ ಹಗರಿಬೊಮ್ಮನಹಳ್ಳಿ
ನನ್ನ ಮುದ್ದಿನ ಪುಟ್ಟಿ,
ನೀನೀಗ ಆರಂಭಿಕ ಹದಿಹರೆಯದ ಹೊಸ್ತಿಲಲ್ಲಿದ್ದೀಯ. ಶುಭಾಶಯಗಳು ನಿನಗೆ!!
ಅಂದ್ರೆ 12ರಿಂದ 18 ವರ್ಷಗಳ ಸುದೀರ್ಘವಾದ ಹಂತವನ್ನು ಪ್ರಾಯದ, ಹರೆಯದ ಹಂತ ಅಂತ ಹೇಳ್ತೇವೆ. ಇದೊಂದು ಸಮಸ್ಯಾತ್ಮಕವಾದ ಹಂತವೂ ಹೌದು. ಯಾಕೆ ಗೊತ್ತಾ? ಈ ಸಮಯದಲ್ಲಿ ದೈಹಿಕ, ಮಾನಸಿಕವಾಗಿ ಅನೇಕ ಮಹತ್ತರ ಬದಲಾವಣೆ ಆಗ್ತವೆ. ಭಯ ಬೇಡ. ಇದುವರೆಗೂ ಚಿಕ್ಕವಳಂತಿದ್ದ ನೀನು ದೊಡ್ಡವಳಾಗುವ ಹಂತಕ್ಕೆ ಕಾಲಿಡುತ್ತಿದ್ದೀಯ. ಹಾಮೋನುಗಳ ಉತ್ಪತ್ತಿಯಿಂದ ದೇಹದಲ್ಲಿ ಅನೇಕ ಮಾರ್ಪಾಡುಗಳಾಗುತ್ತವೆ. ಇದು ಸಹಜ ಪ್ರಕ್ರಿಯೆ.
ನಾನೂ ಬದಲಾಗಬೇಕು: ನಿನ್ನಲ್ಲಿ ಮಾನಸಿಕವಾಗಿ ಅನೇಕ ಬದಲಾವಣೆ ಗುರುತಿಸುತ್ತಿದ್ದೇನೆ. ಹೆಚ್ಚಾಗಿ ಒತ್ತಡದಲ್ಲೇ ಇರ್ತೀಯ. ಕೋಪ ಹೆಚ್ಚಾಗಿದೆ. ಏಕಾಗ್ರತೆ ತಗ್ಗಿದೆ. ಏಕಾಂತವನ್ನು ಇಷ್ಟ ಪಡ್ತೀಯ. ಇದೆಲ್ಲದರಿಂದ ಮೊದಲು ನನಗೆ ಆತಂಕ ಉಂಟಾಗುತ್ತಿತ್ತು. ಈ ವಿಷಯವಾಗಿಯೇ ಅನೇಕ ಬಾರಿ ನಿನ್ನೊಡನೆ ಜಗಳ ಮಾಡಿದ್ದೇನೆ. ಜಾಸ್ತಿ ಟಿವಿ ನೋಡಬೇಡ, ಆ ಬಟ್ಟೆ ಹಾಕ್ಕೋಬೇಡ, ಈ ಬಟ್ಟೆ ಬೇಡ, ಇದನ್ನೇ ಊಟ ಮಾಡು, ಅದು ಮಾಡಬೇಡ, ಇದು ಮಾಡಬೇಡ ಅಂತ ಹೇಳ್ತಾ ನನ್ನ ನಿರೀಕ್ಷೆಗಳನ್ನು ನಿನ್ನ ಮೇಲೆ ಹೇರುತ್ತಾ ನಿನ್ನನ್ನು ನಿಯಂತ್ರಣದಲ್ಲಿಡೋಕೆ ಪ್ರಯತ್ನಿಸುತ್ತಿದ್ದೀನಾ? ಒಂದು ರೀತಿಯ ಸಂದಿಗ್ಧ ಸ್ಥಿತಿಯಲ್ಲಿ ನಾನಿದ್ದೆ. ನನ್ನ ಈ ವರ್ತನೆ ಖಂಡಿತಾ ತಪು್ಪ. ನಾನೂ ಬದಲಾಗಬೇಕು, ಧನಾತ್ಮಕ ರೀತಿಯಲ್ಲಿ ನಿನ್ನ ಸಮಸ್ಯೆಗಳು ನಿನ್ನ ಜಾಗದಲ್ಲಿ ನಿಂತು ಯೋಚಿಸಿದಾಗ ನೆನಪಿಗೆ ಬಂತು. ಅಯ್ಯೋ ಮಗಳು ಈಗ ‘ಪೀರಿಯಡ್ ಆಫ್ ಸ್ಟಾಮ್ರ್ ಅಥವಾ ಸ್ಟ್ರೆಸ್’ ಹಂತದಲ್ಲಿದ್ದಾಳೆ. ಅದನ್ನು ಜಾಗರೂಕವಾಗಿ ನಿಭಾಯಿಸಬೇಕು. ಈ ರೀತಿ ಹುಚ್ಚು ಹುಚ್ಚಾಗಿ ಜಗಳ, ಸಿಟ್ಟು ಮಾಡಿಕೊಳ್ಳೋದ್ರಲ್ಲಿ ಅರ್ಥ ಇಲ್ಲ ಅಂಥ ಗೊತ್ತಾಯ್ತು.
ಸರಿ, ತಪ್ಪು ನಿನಗೇ ಗೊತ್ತಿರಲಿ: ಈ ಸಮಯದಲ್ಲಿ ನಿನ್ನ ಮನಸ್ಸಿನಲ್ಲಿ ಶಿಕ್ಷಣ, ಪ್ರೀತಿ, ಉದ್ಯೋಗ, ಕುಟುಂಬ ಇವುಗಳ ಬಗ್ಗೆ ಬಿರುಗಾಳಿಯಂತೆ ಅಲೆ ಏಳಬಹುದು. ಇದು ಸಹಜ ಕೂಡ. ಆದ್ರೆ ನಾವು ಎಷ್ಟೇ ಬದಲಾವಣೆಗೆ ಒಳಪಟ್ಟರೂ ಸರಿ, ತಪು್ಪಗಳನ್ನು ನಿರ್ಧರಿಸುವ ಜಾಣ್ಮೆಯನ್ನು ಎಂದೂ ಕಳಕೊಳ್ಳಬಾರದು. ಮನೆಯ ಆಚಾರ, ವಿಚಾರವನ್ನು ಎಂದೂ ಮರೆಯಬಾರದು. ಹಾಗೆ ನಿನ್ನ ಸ್ನೇಹವೃಂದವನ್ನು ಜಾಣ್ಮೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ಯಾಕೆಂದರೆ ನಿನ್ನ ಬಹುಪಾಲು ಉಡುಗೆ, ತೊಡುಗೆಗಳು, ಬದಲಾವಣೆಗಳು ನಿನ್ನ ಸ್ನೇಹ ವೃಂದವನ್ನೇ ಹೋಲುತ್ತವೆ.
ನನಗೆ ನಿನ್ನ ಮೇಲೆ ನಂಬಿಕೆ ಇದೆ: ನನಗೆ ನಿನ್ನ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇದೆ. ತುಂಬಾ ಜಾಣೆ ನೀನು. ನಿನಗೆ ಏನೇ ತೊಂದರೆ, ಆತಂಕಗಳಿದ್ರೂ ನಿನ್ನ ಜೊತೆ ನಾನಿದ್ದೇನೆ. ನಿನ್ನ ಗೆಳತಿಯ ಹಾಗೆ ಎಂದಿಗೂ, ಯಾವಾಗಲೂ. ಇದು ನನ್ನ ಭರವಸೆ, ನನ್ನಲ್ಲೂ ಏನಾದ್ರು ಬದಲಾವಣೆ ತರೋದಕ್ಕೆ ಇಷ್ಟ ಪಡೋದಾದರೆ ನಿರಾತಂಕವಾಗಿ ಹೇಳು. ಖಂಡಿತಾ ಬದಲಾಗುತ್ತೇನೆ.
ಇತಿ ನಿನ್ನ ಪ್ರೀತಿಯ ಅಮ್ಮ
‘ಪೀರಿಯಡ್ ಆಫ್ ಸ್ಟಾಮ್ರ್ ಅಥವಾ ಸ್ಟ್ರೆಸ್’ ಹಂತದಲ್ಲಿ ಎದೆಯ ಆಕಾರದಲ್ಲಿ ಮಾರ್ಪಾಡಾಗುತ್ತದೆ, ಕಂಕುಳಿನ ಕೂದಲ ಬೆಳವಣಿಗೆ, ಮುಖದಲ್ಲಿ ಮೊಡವೆಗಳ ದಾಳಿ ಶುರುವಾಗಬಹುದು. ಇನ್ನು ಅನೇಕ ಬದಲಾವಣೆಗೆ ದೇಹ ಒಳಪಡುತ್ತದೆ. ಹಾಗೆ ಇತ್ತ ಮನಸ್ಸು ಕೂಡ ಸದ್ದಿಲ್ಲದೆ ಏನೇನೋ ಬದಲಾವಣೆ, ವಿಚಾರ ಮತ್ತು ಘರ್ಷಣೆಗಳನ್ನು ತುಂಬಿಕೊಳ್ಳೋಕೆ ಪ್ರಾರಂಭಿಸುತ್ತದೆ. ಇಷ್ಟು ದಿನ ಅಪ್ಪ-ಅಮ್ಮ ಹೇಳಿದ್ದೇ ಸರಿ ಅಂತಿದ್ದ ನೀನು ಇದ್ದಕ್ಕಿದ್ದ ಹಾಗೆ ಗೆಳೆಯರು ಹೇಳೋದೆ ಸರಿ ಅಮ್ಮಂದಿರು ಇನ್ನು ನಮ್ಮನ್ನ ಚಿಕ್ಕ ಮಕ್ಕಳ ತರ ನೋಡ್ತಾರೆ ಅನ್ನಿಸೋಕೆ ಶುರುವಾಗುತ್ತದೆ. ಇದೆಲ್ಲ ಈ ವಯಸ್ಸಲ್ಲಿ ಕಂಡುಬರುವ ಸಾಮಾನ್ಯ ಪ್ರಕ್ರಿಯೆಯಾದರೂ ಇದರಿಂದ ಕೆಲವೊಮ್ಮೆ ತಪ್ಪಿತಸ್ಥ ಭಾವನೆ ಉಂಟಾಗಿ ಕೀಳರಿಮೆ ಶುರುವಾಗಬಹುದು.