ಇದು ಟೀಕೆ ಮಾಡುವ ಸಮಯವಲ್ಲ: ಜನಮತ

Janamatha1
Published on

ಕರೊನಾ ಎಂಬ ಮಾನವೀಯ ಸಂಕಟ ಹಲವು ಬಗೆಯ ಸಮಸ್ಯೆಗಳನ್ನು ತಂದೊಡ್ಡಿದೆ. ಪ್ರಾಣಹಾನಿ, ಆರ್ಥಿಕ ಹಾನಿಯನ್ನು ಸೃಷ್ಟಿಸಿದ್ದು, ಈಗಿನ ತಲ್ಲಣ ಎದುರಿಸಲಾಗದೆ ಅದೆಷ್ಟೋ ಜನರು ಮಾನಸಿಕ ಆಘಾತ ಅನುಭವಿಸಿದ್ದಾರೆ. ಉದ್ಯೋಗ ಕಳೆದುಕೊಂಡ, ಸಂಬಳ ಕಡಿತವಾದವರ ಸಂಕಷ್ಟ ಮತ್ತೊಂದೆಡೆ. ಈ ಬದುಕುಗಳೆಲ್ಲ ಹಳಿಗೆ ಬರಲು ಇನ್ನೆಷ್ಟು ಸಮಯ ಬೇಕು ಎಂಬುದು ನಿಖರವಾಗಿ ಗೊತ್ತಿಲ್ಲ. ಆದರೆ, ಇಂಥ ಬಿಕ್ಕಟ್ಟನ್ನು ಮಾನವೀಯ ಸಂವೇದನೆಯ ನೆಲೆಯಲ್ಲಿ, ಎಲ್ಲರೂ ಒಗ್ಗಟ್ಟಾಗಿ ಎದುರಿಸುವುದೇ ಉತ್ತಮ ಪರಿಹಾರ. ಆದರೆ, ರಾಜಕೀಯ ಪಕ್ಷಗಳು ಮತ್ತು ನಾಯಕರು ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಳ್ಳದೆ ಈಗಲೂ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವುದು ದುರದೃಷ್ಟಕರ.

ರಾಜಕೀಯ ಮಾಡಲು ಬೇಕಾದಷ್ಟು ಸಮಯವಿದೆ. ಈಗ ಜನರ ಸಮಸ್ಯೆಗಳನ್ನು ಪರಿಹರಿಸುವ, ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವ ಹೊತ್ತು. ಹಾಗಾಗಿ, ಎಲ್ಲರೂ ಅವರವರ ಜವಾಬ್ದಾರಿಯನ್ನು ಅರಿತು, ಶಕ್ತಿಮೀರಿ ಕಾರ್ಯನಿರ್ವಹಿಸಬೇಕಿದೆ. ಕರೊನಾ ಸೋಂಕು ನಿಯಂತ್ರಣಕ್ಕೆ ಬಂದ ಮೇಲೂ ಆರ್ಥಿಕತೆ ಸುಧಾರಣೆ, ಉದ್ಯೋಗಸೃಷ್ಟಿ ಸೇರಿದಂತೆ ಹಲವು ಸವಾಲುಗಳಿವೆ. ಹಾಗಾಗಿ, ನಮ್ಮ ನಾಯಕರುಗಳು, ಜನಪ್ರತಿನಿಧಿಗಳು ದೂರದೃಷ್ಟಿಯನ್ನು ಇರಿಸಿಕೊಂಡು ಯೋಜನಾಬದ್ಧವಾಗಿ ಮತ್ತು ಕಳಕಳಿಯಿಂದ ಕಾರ್ಯನಿರ್ವಹಿಸುವಂತಾದರೆ ಮತ್ತೆ ಜನರು ನೆಮ್ಮದಿಯ ಬದುಕು ಕಾಣಲು ಸಾಧ್ಯ.

| ರವಿ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net