

1940ರ ಎರಡನೇ ವಿಶ್ವಯುದ್ಧದಲ್ಲಿ ಮಾರಕ ಹೊಡೆತ ತಿಂದ ಬಕಿಂಗ್ಹ್ಯಾಮ್ ಬಾಂಬ್ ದಾಳಿಗೆ ತುತ್ತಾಗಿದ್ದು, ಅದೇ ಕೊನೆಯ ದಾಳಿ ಎನಿಸುತ್ತದೆ. ಆದರೆ ಅರಮನೆ ಮತ್ತು ರಾಜವಂಶದ ಬಗ್ಗೆ ವಿಪರೀತ ಭಾವನಾತ್ಮಕ ಸಂಬಂಧ ಇರುವ ಸೇನೆಯ ಹಲವು ಕಮಾಂಡರ್ಗಳು ಇದಕ್ಕಾಗಿ ಜೀವ ಕೊಟ್ಟು ಅರಮನೆಯ ಹಿತವನ್ನು ಕಾಪಾಡಿದ್ದು ಈಗ ಇತಿಹಾಸ.
ಅರಮನೆಗಳ ವ್ಯಾಮೋಹ ಬಹುಶಃ ಬ್ರಿಟಿಷರಿಗೆ ಇದ್ದಷ್ಟು ಬೇರಾರಿಗೂ ಇದ್ದಿರಲಿಲ್ಲವೇನೋ? ಅದರ ಜೊತೆಗೆ ಆಗಿನ ಪರಿಸ್ಥಿತಿ, ರಾಜಕೀಯ ಪಲ್ಲಟ ಮತ್ತು ಹವಾಮಾನ ವೈಪರೀತ್ಯದ ನೆಲೆಯಲ್ಲಿ ಅದು ಅವರ ಅನಿವಾರ್ಯವೂ ಆಗಿರಲಿಕ್ಕೆ ಸಾಕು. ಹಾಗಾಗಿ ಯುರೋಪ್ನ ಯಾವುದೇ ಪ್ರಮುಖ ನಗರಿಗೆ ಹೋದರೂ ಅಲ್ಲಿ ಮುಖ್ಯ ‘ಕ್ಯಾಸೆಲ್’ ಎನ್ನುವ ಕೋಟೆಗಳು, ನಿಮ್ಮ ಪಟ್ಟಿಗೆ ಸೇರಿ ಬಿಡುತ್ತವೆ. ಆಯಾ ಊರಿನ ಐತಿಹಾಸಿಕ ಮತ್ತು ವರ್ತಮಾನದ ಎಲ್ಲ ಚರ್ಯುಗಳು ಅವುಗಳೊಂದಿಗೆ ತಳುಕು ಹಾಕಿಕೊಂಡಿರುತ್ತವೆ.
ಅದರಲ್ಲೂ ಕೇಂದ್ರ ಲಂಡನ್ ಹಾಗೂ ಪ್ರವಾಸಿಗರ ಯಾದಿಯಲ್ಲಿ ಮೊದಲ ಸಾಲಿಗೆ ಸೇರುವ ಲಂಡನ್ನಿನ ರಾಯಲ್ ಬಕಿಂಗ್ಹ್ಯಾಮ್ ಅರಮನೆ ಆವತ್ತಿನಿಂದ ಇವತ್ತಿನವರೆಗೂ ಹೆಸರುವಾಸಿ. ಮೂಲತಃ ಆರೆಂಟು ಶತಮಾನದ ಇತಿಹಾಸ ಹೊಂದಿರುವ ಬಕಿಂಗ್ಹ್ಯಾಮ್ ಅರಮನೆ ಇವತ್ತಿನ ದಿನಮಾನದಲ್ಲಿ ಲಭ್ಯವಿರೋದು ಹಲವು ಬಾರಿ ಪುನರಾವರ್ತಿತ ಕಟ್ಟಡವೇ ಹೊರತಾಗಿ ಮೂಲ ಯುರೋಪಿಯನ್ ಶೈಲಿಯ ಹೆಚ್ಚಿನ ಭಾಗ ಈಗ ಉಳಿದೇ ಇಲ್ಲ.
ನಮ್ಮಲ್ಲಿ ವಾಘಾ ಸರಹದ್ದಿಗೆ ದಿನವೂ ರೀಟ್ರೀಟ್ ಸೆರಮನಿ ಎಂದು ಜನಸಾಗರವೇ ನೆರೆಯುವಂತೆ ಇಲ್ಲೂ ಸೈನಿಕರ ‘ಗಾರ್ಡ್ ಮೌಂಟಿಂಗ್’ ಕವಾಯಿತು ನೋಡಲು, ಆಗೀಗ ಬದಲಾಗುವ ದೀಪಾಲಂಕಾರ ನೋಡಲು, ಎದುರಿನ ಕಟಾಂಜನದಂತಹ ಸರಳುಗಳ ಮಧ್ಯೆ ಮುಖ ತೂರಿಸಿ ಬದಲಾಗುವ ಬಣ್ಣದ ದೀಪ ಮತ್ತು ಅದರ ಎತ್ತರದೆತ್ತರದ ಕಂಬಗಳನ್ನು ನೋಡಲು, ಕೊನೆಗೆ ಏನಿಲ್ಲದಿದ್ದರೂ ಬಹಳ ದಿನಗಳಾದವು ಸೆಂಟ್ರಲ್ ಲಂಡನ್ಗೆ ಹೋಗದೇ ಎಂದು, ಮಕ್ಕಳು ಮರಿ ಸಂಸಾರ ವ್ಹೀಲ್ೕಚೇರ್ ಸಮೇತ ಬಂದು ಅದರ ಎದುರಿಗಿನ ಹುಲ್ಲು ಹಾಸಿನ ಮೇಲೆ ಅಡ್ಡಡ್ಡ ಉದ್ದುದ್ದ ಕೂತು ಧನ್ಯತೆ ಹೊಂದುವವರ ದಂಡೇ ಇಲ್ಲಿದೆ. ಹಾಗಾಗಿ ಸ್ಥಳೀಯರು ಮತ್ತು ದೇಶಿಯರು ಸೇರಿದಂತೆ ಎಲ್ಲರಿಗೂ ಬಕಿಂಗ್ಹ್ಯಾಮ್ ಅರಮನೆ, ಭಾವನಾತ್ಮಕ ಸಂಬಂಧಿ. ಯಾವಾಗಲೂ ಗಿಜಿಗಿಜಿ.
ಮೂಲತಃ ಬಕಿಂಗ್ ಎನ್ನುವಾತ ಹದಿನಾರನೇ ಶತಮಾನದಲ್ಲಿ ತನ್ನ ವಾಸಕ್ಕಾಗಿ ಒಂದು ಕೋಟೆಯ ರೀತಿಯಲ್ಲಿ ಕಟ್ಟಿಕೊಂಡ, ವಾಸಸ್ಥಳದ ಕಟ್ಟಡ ಕ್ರಮೇಣ ಕೇಂದ್ರಸ್ಥಾನವಾಗಿ ಹೊಮ್ಮಿದ್ದಲ್ಲದೆ, ಜಾಗತಿಕ ಪ್ರವಾಸಿ ಪಟ್ಟಿಯಲ್ಲೂ ಮೊದಲ ಸ್ಥಾನಗಳಿಸಿದ ಖ್ಯಾತಿ ಈ ಬಕಿಂಗ್ಹ್ಯಾಮ್ು. ಅಸಲಿಗೆ ಪ್ರಸ್ತುತ ತಂತ್ರಗಾರಿಕೆಗೆ ಹೋಲಿಸಿದರೆ ಅದ್ಯಾವ ದೊಡ್ಡ ಅರಮನೆ ಎನ್ನುವ ಹಾಗಿದ್ದರೂ ತನಗಿರುವ ಇತಿಹಾಸ ಮತ್ತು ಬದಲಾಗುತ್ತಲೇ ಇರುವ ಇಂಗ್ಲೆಂಡಿನ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತ್ಯಂತರಗಳಿಗೆ ಅದು ಸಾಕ್ಷಿಯಾಗುತ್ತ, ಕೆಲವೊಮ್ಮೆ ಬಿದ್ದೆದ್ದು ನಿಲ್ಲುತ್ತ ಆಕರ್ಷಣೆ ಉಳಿಸಿಕೊಂಡ ಕಾರಣ ಇವತ್ತು ಪೂರ್ತಿ ದಿನದ ಬಕಿಂಗ್ಹ್ಯಾಮ್ ದರ್ಶನಕ್ಕೆ ಏನಿಲ್ಲ ಎಂದರೂ ಹತ್ತಿರ ಹತ್ತಿರ ನಾಲ್ಕು ಸಾವಿರವರೆಗೆ ಪ್ರವೇಶ ದರವಿದೆ. ರಾಣಿವಾಸದವರು ಸಾರ್ವಜನಿಕ ಪ್ರವೇಶದ ಅನುಕೂಲಕ್ಕಾಗಿ ವರ್ಷಕ್ಕೆ ಎರಡು ತಿಂಗಳ ಕಾಲ ಈ ಅರಮನೆಯನ್ನು ತೊರೆದು ವಿಂಡ್ಸರ್ ಕೋಟೆಗೆ ತೆರಳುವುದು ವಾಡಿಕೆ, ಆಗೆಲ್ಲ ಒಂದಷ್ಟು ಒಳಾವರಣ ಸಾರ್ವಜನಿಕರಿಗೆ ನಾಲ್ಕೆ ೖದು ಸಾವಿರ ರೂಪಾಯಿಯ ಪ್ರವೇಶ ದರದಲ್ಲಿ ನೋಡುವ ಲಭ್ಯತೆ ಇದೆ. ಪ್ರಸ್ತುತ ವೆಸ್ಟ್ ಮಿನಿಸ್ಟರ್ ಭಾಗದಲ್ಲಿ ನೆಲೆಗೊಂಡಿರುವ ಬಕಿಂಗ್ಹ್ಯಾಮ್ ಯಾವಾಗ ರಾಣಿ ಇಲ್ಲಿ ವಾಸಕ್ಕೆ ಅಧಿಕೃತವಾಗಿ ಆರಂಭಿಸಿದಳೋ, ಆಗಿನಿಂದ ಇದರ ಶುಕ್ರದೆಸೆಯೇ ಬದಲಾಯಿತು.
ಅಂದ ಹಾಗೆ ಇದನ್ನು ನೋಡಲು ದಿನಗಟ್ಟಲೇ ಬೇಕಾ ಎಂದರೆ ಹೌದು. ಕಾರಣ ಏನಿಲ್ಲ ಎಂದರೂ ಅನಾಮತ್ತು ಎಂಟೂವರೆ ಲಕ್ಷ ಚದರ ಅಡಿ ವಿಸ್ತೀರ್ಣದ ಅರಮನೆಯನ್ನು ಒಂದು ದಿನದಲ್ಲಿ ಸುತ್ತಲಿಕ್ಕೆ ಸಾಧ್ಯವಿಲ್ಲ. ಅದರಲ್ಲೂ ಎಲ್ಲ ಭಾಗ ಸಾರ್ವಜನಿಕರಿಗೆ ತೆರೆದಿರುವುದಿಲ್ಲ, ವಾರದ ಎಲ್ಲ ದಿನಗಳೂ ತೆರೆದಿರುವುದಿಲ್ಲ ಎನ್ನುವುದೂ ಅಷ್ಟೇ ಮುಖ್ಯ. ಜೊತೆಗೆ ಇದರ ನಾಲ್ಕರಷ್ಟು ವಿಸ್ತೀರ್ಣದ ಎಕರೆಗಟ್ಟಲೇ ದೊಡ್ಡದಿರುವ ಕೆರೆಗಳು, ಉದ್ಯಾನಗಳು ಇದರ ದೊಡ್ಡ ಆಕರ್ಷಣೆ ಕೂಡ. ಇಲ್ಲಿನ ಒಂದೊಂದು ಕಾರಿಡಾರ್ಗಳ ಉದ್ದವೇ ಐವತ್ತು ಚಿಲ್ರೆ ಮೀಟರ್ ಉದ್ದ. ಕೋಣೆಯೊಳಗೆ ಪ್ರವೇಶಿಸಿದ ಮೇಲೂ ಮಧ್ಯಕ್ಕೆ ತಲುಪಲು ಕೆಲವು ನಿಮಿಷಗಳ ನಡಿಗೆ ಬೇಕೆನಿಸುವಷ್ಟು ವಿಶಾಲ. ಸಾವಿರದೈನೂರಕ್ಕೂ ಹೆಚ್ಚು ಕೊಠಡಿಗಳ ಇದು ಅರಮನೆ ಎನ್ನುವುದಕ್ಕಿಂತಲೂ ವಸತಿಗೃಹಗಳ ಸಮುಚ್ಛಯ ಎನ್ನುವುದೇ ಉಚಿತ.
ನಗರದ ಯಾವುದೇ ಮೂಲೆಯಿಂದಲೂ ಟ್ಯೂಬ್ ಮೂಲಕ ಲೀಲಾಜಾಲವಾಗಿ ಹೈಡ್ ಪಾರ್ಕ್ವರೆಗೆ ಬಂದರೆ ಅಲ್ಲಿಂದ ಹತ್ತೇ ನಿಮಿಷದ ಕಾಲ್ನಡಿಗೆ, ನಮ್ಮನ್ನು ಇದರ ಹೆಬ್ಬಾಗಿಲಿಗೆ ತಂದು ನಿಲ್ಲಿಸುತ್ತದೆ. ಅಂದ ಹಾಗೆ ಈ ಹೈಡ್ ಪಾರ್ಕ್ ಎನ್ನುವುದೇ ಒಂದು ದೊಡ್ಡ ಇತಿಹಾಸ ಮತ್ತು ಮಾಹಿತಿ ಹೊಂದಿರುವ ಸರ್ವಕಾಲಿಕ ಸರ್ವಋತು ಪಾರ್ಕ. ಈ ಹೈಡ್ ಪಾರ್ಕ್ನ ಯಾವುದೇ ಭಾಗದಿಂದ ಅರಮನೆಯನ್ನು ಪ್ರವೇಶಿಸಬಹುದಾಗಿದ್ದು, ಬಕಿಂಗ್ಹ್ಯಾಮ್ ಅರಮನೆ ಇತಿಹಾಸ ಪ್ರಸಿದ್ಧ ಲಿಯೋನಾರ್ಡ್ ಡಾ ವಿನ್ಸಿಯ ಕಲಾಕೃತಿಗಳಿಂದ ಹಲವು ಕೋಣೆಗಳನ್ನು ಸಿಂಗರಿಸಿಕೊಂಡು ಅದೇ ಕಾರಣಕ್ಕೆ ಕೆಲವು ಭಾಗ ವಿಶೇಷ ಮನ್ನಣೆಗೂ ಪಾತ್ರವಾಗಿದ್ದಿದೆ. ಇವೆಲ್ಲ ರಾಜ ಪರಿವಾರದ ಲೆಕ್ಕದಲ್ಲಿ ಮೀಟಿಂಗ್ ಕೋಣೆಗಳು ಅಥವಾ ಆಗೀಗ ರಾಜಕೀಯ ತಂತ್ರಗಾರಿಕೆಯ ಸಭೆ ಸೇರುವ ಸ್ಥಳಗಳೂ ಹೌದು.
ಇದೆಲ್ಲ ನಮಗೆ ದರ್ಶನಕ್ಕೆ ಲಭ್ಯವಾಗುವುದು ಮೇ ನಿಂದ ಸೆಪ್ಟೆಂಬರ್ವರೆಗೆ ಮಾತ್ರ (ಅಂದಹಾಗೆ ಈ ಬಕಿಂಗ್ಹ್ಯಾಮ್ ಆರಂಭದಿಂದ ಇಲ್ಲಿಯವರೆಗಿನ ಇತಿಹಾಸಕ್ಕೇನಾದರೂ ಕೈ ಹಾಕಿದರೆ ಅದೇ ಒಂದು ಚಿಕ್ಕ ಪುಸ್ತಕವಾಗುವುದರಿಂದ ಅದನ್ನಿಲ್ಲಿ ಪ್ರಸ್ತಾಪಿಸುತ್ತಿಲ್ಲ). ಹಲವು ಬಾರಿ ರಾಜಕೀಯ ದಾಳಿ, ಬೆಂಕಿಯ ಅನಾಹುತ ಮತ್ತು ಇತರ ನೈಸರ್ಗಿಕ ವಿಪತ್ತುಗಳಿಗೆ ಏರವಾದರೂ ಕಾಲಕಾಲಕ್ಕೆ ಬಕಿಂಗ್ಹ್ಯಾಮ್ ಮತ್ತೆ ಮೊದಲಿನಿಗಿಂತಲೂ ಭವ್ಯವಾಗಿ ತಲೆ ಎತ್ತುತ್ತಲೇ ಇದೆ. ಹಾಗಾಗೇ ಈ ಅರಮನೆ ಮೇಲೆ ಆಗಿನಿಂದ ಈಗಿನವರೆಗೂ ಬ್ರಿಟಿಷರಿಗೆ ಅದೇನೋ ಮೋಹ. ಅದರಲ್ಲೂ ರಾಜ ಪರಿವಾರ ಪ್ರಭುತ್ವದ ನೆರಳಲ್ಲೇ ಬದುಕು ಮತ್ತು ಭಾವನೆ ಎರಡೂ ಬೆಸೆದುಕೊಂಡಿರುವ ಇವರನ್ನು ಈ ನಂಬುಗೆಗಳಿಂದ ಕದಲಿಸಲೂ ಸಾಧ್ಯವಿಲ್ಲ. ಕಾರಣ ಇದು ಕೇವಲ ಒಂದು ತಲೆಮಾರಲ್ಲ. ಮಕ್ಕಳಿಗೂ ಅದನ್ನೆ ಹಾಸು ಹೊಕ್ಕಾಗಿ ಅನುಭವಿಸುವಂತೆ ಮಾಡುವಲ್ಲಿ ಈ ಬ್ರಿಟಿಷರು ಸಿದ್ಧಹಸ್ತರು. ಜೊತೆಗೆ ರಾಣಿ ಹದಿನೈದು ಜನ ಸಂತಾನಭಾಗ್ಯದಲ್ಲಿ ಮೊದಲ ಹದಿನಾಲ್ಕು ಮಕ್ಕಳನ್ನು ಇಲ್ಲಿಯೇ ಹಡೆದಿದ್ದಳು ಎನ್ನುವ ಕತೆಯಿದೆಯಲ್ಲ ಅದು ದೊಡ್ಡ ಭಾವನಾತ್ಮಕ ಲಿಂಕು.
ಪ್ರಸ್ತುತ ನೈಟ್ ಪದವಿ, ರಾಯಭಾರಿಗಳ ಸ್ವಾಗತ, ಕೌನ್ಸಿಲ್ ಸಭೆಗಳು, ಗೌರವ ಡಾಕ್ಟರೇಟ್ಗಳು ಸೇರಿದಂತೆ ಅತ್ಯುನ್ನತ ಪದವಿ ಪುರಸ್ಕಾರಗಳನ್ನು ಇಲ್ಲಿ ಪ್ರದಾನ ಮಾಡಲಾಗುತ್ತಿದ್ದು, ಇಲ್ಲಿನ ಸಂಗೀತದ ಗ್ಯಾಲರಿಯಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ಸಿಕ್ಕರೆ ಅದು ಆ ಕಲಾವಿದನ ಜೀವಮಾನದ ಭಾಗ್ಯ ಎನ್ನುವ ಮಾತಿದೆ. ಆದರೂ ಅಧಿಕೃತವಾಗಿ ಈವರೆಗೂ ಇಲ್ಲಿನ ಒಳಾವರಣ ಮತ್ತು ಆಂತರಿಕ ಚಿತ್ರಣದ ಬಗ್ಗೆ ನಿಖರ ಎನ್ನುವ ಪ್ರಕಟಣೆ ಕಂಡುಬಂದದ್ದಿಲ್ಲ. ಆದರೆ ಸುಮಾರು 1999ರಲ್ಲಿ ಅರಮನೆಯ ಪ್ರಕಟಣೆಯಲ್ಲಿ ದಾಖಲಿಸಿರುವಂತೆ 50ಕ್ಕೂ ಹೆಚ್ಚು ವೈಭೋವೋಪೇತ ಶಯ್ಯಾಗೃಹಗಳು, 200 ಸಿಬ್ಬಂದಿ ಗೃಹಗಳು, ಸುಮಾರು 100ರಷ್ಟು ಕಚೇರಿಗಳು, 400ಕ್ಕೂ ಹೆಚ್ಚು ಗಡಿಯಾರಗಳನ್ನು ಅಳವಡಿಸಿದ್ದರೆ, ಎಂಭತ್ತರಷ್ಟು ಸ್ನಾನಗೃಹಗಳು ಲೆಕ್ಕದಲ್ಲಿರುವುದು ಹುಬ್ಬೇರಿಸುವ ಸಂಖ್ಯೆಯ ವಿಶಾಲತೆ, ಅರಮನೆಯ ಕಲ್ಪನೆ ಸುಲಭಕ್ಕೆ ಕೈಗೆಟುಕುವುದೇ ಇಲ್ಲ.
ಉಳಿದದ್ದು ಬಿಡಿ, ಅದರ ಕಿಟಕಿಗಳ ಸಂಖ್ಯೆಯೆ ಎಂಟನೂರಾದರೆ, ಬಾಗಿಲುಗಳು ಸುಮಾರು ಸಾವಿರದೈನೂರಕ್ಕೂ ಹೆಚ್ಚು. ಅಂದಹಾಗೆ ಇದಕ್ಕೆ ಕೆಳಭಾಗದಲ್ಲಿ ರಹಸ್ಯ ಮತ್ತು ರಾಜಕೀಯ ಕಾರಣದ ಸುರಂಗಗಳು ಇದ್ದು, ಸಾರ್ವಜನಿಕವಾಗಿ ಆ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅದನ್ನು ಮಿಲಿಟರಿ ನಿರ್ವಹಿಸುತ್ತಿದ್ದು, ಕಾಲ ಕಾಲಕ್ಕೆ ಅದರ ಚಿತ್ರಣವೂ ಬದಲಾಗುತ್ತಿರುತ್ತದೆಯಂತೆ. ಇಷ್ಟೆಲ್ಲ ಇದ್ದೂ ಸಾರ್ವಜನಿಕರೊಂದಿಗೂ ಬೆರೆಯುವ ಅರಮನೆಯ ಪರಿವಾರ ಪ್ರತಿವರ್ಷ ಸುಮಾರು ಐವತ್ತು ಸಾವಿರ ಜನರಿಗೆ ಉದ್ಯಾನದ ಸಭಾಂಗಣದಲ್ಲಿ ವೈಭವೋಪೇತ ಊಟೋಪಚಾರ ಕೊಟ್ಟು ಸತ್ಕರಿಸಿದರೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಿದ್ದೂ ಇದೆ.
ಬಹುಶಃ 1940ರ ಎರಡನೇ ವಿಶ್ವಯುದ್ಧದಲ್ಲಿ ಮಾರಕ ಹೊಡೆತ ತಿಂದ ಬಕಿಂಗ್ಹ್ಯಾಮ್ ಬಾಂಬ್ ದಾಳಿಗೆ ತುತ್ತಾಗಿದ್ದು ಅದೇ ಕೊನೆಯ ದಾಳಿ ಎನಿಸುತ್ತದೆ. ಆದರೆ ಅರಮನೆ ಮತ್ತು ರಾಜವಂಶದ ಬಗ್ಗೆ ವಿಪರೀತ ಭಾವನಾತ್ಮಕ ಸಂಬಂಧ ಇರುವ ಸೇನೆಯ ಹಲವು ಕಮಾಂಡರ್ಗಳು ಇದಕ್ಕಾಗಿ ಜೀವ ಕೊಟ್ಟು ಅರಮನೆಯ ಹಿತವನ್ನು ಕಾಯ್ದಿದ್ದು ಈಗ ಇತಿಹಾಸ. ಈ ಕತೆಯ ಹಲವು ತುಣುಕುಗಳು ಈಗಲೂ ಲಂಡನ್ ಇಂಪಿರಿಯಲ್ ವಾರ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಅಂದ ಹಾಗೆ ನೀವು ಹೈಡ್ಪಾರ್ಕ್ ತಲುಪಲಾಗಲಿ, ನೇರವಾಗಿ ಬಕಿಂಗ್ಹ್ಯಾಮ್ಗೆ ಹೋಗಿ ಇಳಿಯುವುದಾಗಲಿ ಮಾಡಲು ಟ್ಯಾಕ್ಸಿ ಸೇವೆ ಬಳಸಿದ್ದೇ ಆದರೆ, ಲಂಡನ್ನಿನ ನಿಮ್ಮ ಪ್ರವಾಸ ದುಬಾರಿ ಆಗಬಹುದು. ಕಾರಣ ಟ್ಯೂಬ್ಗಳ ಲೀಲಾಜಾಲದಲ್ಲಿ ಹೆಚ್ಚೆಂದರೆ ಇನ್ನೂರೈವತ್ತು
ರೂ.ಗೆ ತಲುಪಬಹುದಾದ ಜಾಗಕ್ಕೆ, ಟ್ಯಾಕ್ಸಿ ಆರರಿಂದ ಏಳು ಸಾವಿರ ಪೀಕುತ್ತದೆ. ಹಾಗಾಗಿ ಪಿಕಿಡಿಲ್ಲಿ ಲೈನ್ನಲ್ಲಿ ಬಂದರೆ ಕೇವಲ ಹತ್ತು ನಿಮಿಷದ ದಾರಿ ಹೈಡ್ಪಾರ್ಕ್ ಮೂಲಕ ಅರಮನೆಯ ಮುಂಭಾಗಕ್ಕೆ ತಲುಪಿಸಿದರೆ, ಸೆಂಟ್ರಲ್ ಲೈನ್ ಲಾಂಕಸ್ಟರ್ ಗೇಟ್ವರೆಗೂ ತರುತ್ತದೆ. ಮುಖ್ಯ ವಿಕ್ಟೋರಿಯಾ (ಹಳೆಯ ಮಾರ್ಗ ಇದು), ಪೆಡಿಂಗಟನ್ ಮತ್ತು ಮೆರಿಲ್ಬೋನ್ನ ಯಾವುದೇ ಜಾಲದಲ್ಲಿ ಇದ್ದರೂ ಹೈಡ್ಪಾರ್ಕ್ಗೆ ಇಳಿದರೆ ಉಳಿದೆಲ್ಲ ಸಲೀಸು. ಅಂದ ಹಾಗೆ ಈ ಹೈಡ್ ಪಾರ್ಕ್ ಮಾಹಿತಿ ಮುಂದಿನ ಅಂಕಣದಲ್ಲಿ.
(ಲೇಖಕರು ಕತೆಗಾರರು)