ಇದು ಸಿನಿಮಾ ಕಥೆಯಲ್ಲ...: ಆ ಕ್ಷಣ ಅಂಕಣ...

Aa kshana
Published on
ಸಣ್ಣ ಪಟ್ಟಣವೊಂದರ ಬಡಕುಟುಂಬದಲ್ಲಿ ಜನಿಸಿದ್ದ 24 ವರ್ಷದ ವಿನಿತಗೆ ಚಿಕ್ಕಂದಿನಿಂದಲೂ ಸಿನಿಮಾ ನಟಿಯಾಗಬೇಕೆಂಬ ಆಸೆಯಿತ್ತು. ಪ್ರೈಮರಿ ಶಾಲೆಯಲ್ಲಿದ್ದಾಗಿನಿಂದಲೂ ಅಕೆ ನೃತ್ಯ, ನಾಟಕ, ಸಂಗೀತದ ಬಗ್ಗೆ ಆಸಕ್ತಿ ವಹಿಸಿ ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದಳು. ಕಾಲೇಜಿಗೆ ಸೇರಿದ ನಂತರ ಅಂತರ ಕಾಲೇಜು ನಾಟಕಸ್ಪರ್ಧೆಯೊಂದರಲ್ಲಿ ಭಾಗವಹಿಸಿದಳು. ನಾಟಕ ನೋಡಿದ ಸ್ಥಳೀಯ ಕಂಪನಿಯೊಂದರ ಎಂಡಿ ವಿನಿತಳ ಸೌಂದರ್ಯ, ಮತ್ತು ಅಂಗಸೌಷ್ಟವವನ್ನು ನೋಡಿ ತನ್ನ ಕಂಪನಿಗಾಗಿ ರೂಪದರ್ಶಿಯಾಗಲು ಆಹ್ವಾನವಿತ್ತ. ಆಕೆ ಒಂದೆರಡು ಜಾಹೀರಾತುಗಳಲ್ಲಿ ಕಾಣಿಸಿಕೊಂಡ ನಂತರ ಟಿವಿ ಜಾಹೀರಾತುಗಳಲ್ಲಿ ರೂಪದರ್ಶಿಯಾಗಲು ಕರೆಗಳು ಬಂದವು.

ಕೆಲ ಸಮಯದ ನಂತರ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಯ ಚಿತ್ರ ನಿರ್ಮಾಪಕನೊಬ್ಬ ವಿನಿತಳನ್ನು ತನ್ನ ಮುಂದಿನ ಚಲನಚಿತ್ರದಲ್ಲಿ ನಟಿಸಲು ಕೋರಿದಾಗ ತಕ್ಷಣ ಒಪ್ಪಿದ ಆಕೆ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ಹೈದರಾಬಾದ್​ಗೆ ಹೋದಳು. ಆ ಚಿತ್ರ ಹಿಟ್ ಆಗದಿದ್ದರೂ ಬೇರೆ ನಿರ್ಮಾಪಕರಿಂದ ಆಕೆಗೆ ಬೇಡಿಕೆಗಳು ಬರತೊಡಗಿದವು.

ಒಮ್ಮೆ ಆಕೆ ಹೈದರಾಬಾದ್​ನಿಂದ ಬರುವಾಗ ಸಹಪ್ರಯಾಣಿಕನೊಬ್ಬ ಮಾತನಾಡಿಸಿ ‘ನೀನು ವಿನಿತ ಅಲ್ಲವೇ’ ಎಂದು ಕೇಳಿದ. ಆಕೆ ಹೌದೆಂದಾಗ, ‘ನಾನು ವಿಶ್ವಾಸ್. ನಾವಿಬ್ಬರೂ ಪ್ರೈಮರಿ ಶಾಲೆಯಲ್ಲಿ ಒಟ್ಟಿಗೆ ಕಲಿಯುತ್ತಿದ್ದುದನ್ನು ಮರೆತೆಯಾ?’ ನಾನು ನೀವಿದ್ದ ಮನೆಯ ಹಿಂದಿನ ರಸ್ತೆಯಲ್ಲಿಯೇ ವಾಸಿಸುತ್ತಿದ್ದೆ’ ಎಂದಾಗ ವಿನಿತಗೆ ಬಾಲ್ಯದ ದಿನಗಳು ನೆನಪಾದವು.

ವಿನಿತಳಿಗೆ ಎರಡು ವರ್ಷಗಳಾದಾಗ ಆಕೆಯ ತಾಯಿ ಗಂಡನನ್ನು ತೊರೆದು ಬೇರೊಬ್ಬನ ಸಂಗಡ ಲಗ್ನವಾಗಿದ್ದಳು. ಬಟ್ಟೆಯಂಗಡಿಯಿಟ್ಟುಕೊಂಡಿದ್ದ ಎರಡನೆಯ ಗಂಡನಿಂದ ಆಕೆಗೆ ರೂಪೇಶ್ ಎನ್ನುವ ಮಗ ಹುಟ್ಟಿದ. ರೂಪೇಶ್ ಸ್ವಂತ ತಮ್ಮನಲ್ಲದಿದ್ದರೂ ವಿನಿತ ಅವನೊಡನೆ ಅನ್ಯೋನ್ಯವಾಗಿಯೇ ಇದ್ದಳು. ಇಬ್ಬರೂ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಅವರಿಬ್ಬರೂ ಒಟ್ಟಿಗೆ ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದಾಗ ವಿಶ್ವಾಸನೂ ಅದೇ ಬಸ್ಸಿನಲ್ಲಿಯೇ ಬರುತ್ತಿದ್ದುದು ವಿನಿತಗೆ ನೆನಪಾಯಿತು. ಶ್ರೀಮಂತ ಕುಟುಂಬಕ್ಕೆ ಸೇರಿದ್ದ ವಿಶ್ವಾಸನ ಮೇಲೆ ವಿನಿತಳಿಗೆ ಸಲಿಗೆ ಮೂಡಿತ್ತು. ಆತ ಬೇರೆ ಕಾಲೇಜಿಗೆ ಸೇರಿದ ನಂತರ ಇಬ್ಬರ ನಡುವಿನ ಸಂಪರ್ಕ ಕಡಿದುಹೋಗಿತ್ತು.

ಈಗ ಏನು ಮಾಡುತ್ತಿದ್ದೀಯೇ ಎಂದು ವಿನಿತ ಕೇಳಿದಾಗ, ವಿಶ್ವಾಸ್ ತಾನು ಟೈಲ್ಸ್ ಶೋರೂಂ ನಡೆಸುತ್ತಿರುವುದಾಗಿ ಹೇಳಿದ. ಇಬ್ಬರೂ ಇನ್ನು ಮುಂದೆ ಪರಸ್ಪರ ಸಂಪರ್ಕದಲ್ಲಿರೋಣವೆಂದು ಆತ ಹೇಳಿದ. ಇಬ್ಬರೂ ಮೊಬೈಲ್ ನಂಬರ್​ಗಳನ್ನು ಹಂಚಿಕೊಂಡರು. ವಿನಿತ ಸಿನಿಮಾ ರಂಗಕ್ಕೆ ಸೇರಿದ ಕೆಲ ವರ್ಷಗಳ ನಂತರ ಆಕೆಯ ತಾಯಿ, ಆನಂತರ ಸಾಕುತಂದೆ ಆರು ತಿಂಗಳ ಅವಧಿಯಲ್ಲಿ ಅಸುನೀಗಿದರು. ಅವರಿಗೆ ವಿನಿತ ಮತ್ತು ರೂಪೇಶ್​ರ ವಿನಃ ಬೇರೆ ಮಕ್ಕಳಿರದ ಕಾರಣ ಅಕ್ಕ-ತಮ್ಮ ತಂದೆಯ ಮನೆಯಲ್ಲಿಯೇ ವಾಸಿಸುತ್ತಿದ್ದರು. ರೂಪೇಶ್ ಪಿಯುಸಿ ಪಾಸಾದ ನಂತರ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಸಣ್ಣ ಬಿಸಿನೆಸ್ ಮಾಡತೊಡಗಿದ. ವಿನಿತ ತನ್ನ ಕೆಲಸಕಾರ್ಯಗಳಲ್ಲಿ ಮಗ್ನಳಾಗಿರುತ್ತಿದ್ದ ಕಾರಣ ತಮ್ಮನ ಬಗ್ಗೆ ಚಿಂತಿಸಲು ಆಕೆಗೆ ಸಮಯವಿರಲಿಲ್ಲ. ಆದರೆ ಆತ ಕೇಳಿದಾಗಲೆಲ್ಲ ಹಣ ಕೊಡುತ್ತಿದ್ದಳು. ಯಾರ ಅಂಕೆಯೂ ಇಲ್ಲದ ಕಾರಣ ರೂಪೇಶ್ ದುಶ್ಚಟಗಳಿಗೆ ಬಿದ್ದ. ಜೂಜಾಟಗಳ ವ್ಯಸನಿಯಾಗಿ ಹಣವನ್ನು ಪೋಲು ಮಾಡುತ್ತಿದ್ದ. ದುಷ್ಟರ ಸಹವಾಸ ಮಾಡತೊಡಗಿದ್ದ. ಇದು ವಿನಿತಳ ಅರಿವಿಗೆ ಬಂದಿರಲಿಲ್ಲ.

ಕೆಲಕಾಲದ ನಂತರ ವಿನಿತ ಹಾಗೂ ವಿಶ್ವಾಸ್ ಪರಸ್ಪರ ಪ್ರೀತಿಸತೊಡಗಿದರು. ಇಬ್ಬರೂ ಪ್ರತಿದಿನ ಭೇಟಿಯಾಗತೊಡಗಿದರು. ವಿನಿತಳ ಷೂಟಿಂಗ್​ಗಳಿಗೂ ವಿಶ್ವಾಸ್ ಹೋಗತೊಡಗಿದ. ರೂಪೇಶ್​ಗೆ ಇವರ ಸಂಬಂಧದ ಬಗ್ಗೆ ಅರಿವಾದಾಗ ಆತ ಅಕ್ಕನನ್ನು ತರಾಟೆಗೆ ತೆಗೆದುಕೊಂಡ. ‘ನೀನು ಯಾರ ಜತೆಗೆ ಓಡಾಡುತ್ತಿರುವಿಯೋ ಆತನೊಬ್ಬ ಹೆಣ್ಣುಬಾಕ. ನಮ್ಮ ನಗರದಲ್ಲಿ್ಲುೕ ಆತ ಹಲವಾರು ಹೆಣ್ಣು ಮಕ್ಕಳ ಬಾಳು ಹಾಳುಮಾಡಿದ್ದಾನೆ, ಅವನ ಜತೆಗೆ ಸೇರಿದರೆ ನಿನ್ನ ಬಾಳೂ ಹಾಳಾಗುವುದು, ಎಚ್ಚರ’ ಎಂದ.

ವಿನಿತ ತಮ್ಮನ ಮಾತುಗಳನ್ನು ಕೇಳಲಿಲ್ಲ. ಏಕೆಂದರೆ ಅವಳ ಮತ್ತು ವಿಶ್ವಾಸ್​ನ ಪ್ರೇಮ ಆಗಲೇ ಗಾಢವಾಗಿ ಬೆಳೆದು ದೈಹಿಕ ಸಂಪರ್ಕಕ್ಕೂ ತಿರುಗಿತ್ತು. ತಮ್ಮ ಸಂಬಂಧದ ಬಗ್ಗೆ ಸೋದರ ತಕರಾರು ತೆಗೆದಿರುವ ಬಗ್ಗೆ ವಿನಿತ ತಿಳಿಸಿದಾಗ, ರೂಪೇಶ್​ನನ್ನು ಮುಗಿಸಿಬಿಡೋಣವೆಂದು ವಿಶ್ವಾಸ್ ಸೂಚಿಸಿದ. ವಿನಿತ ಹೌಹಾರಿದರೂ ಆ ಸಲಹೆಗೆ ಒಪ್ಪಿಗೆಯನ್ನಿತ್ತಳು.

ಒಂದು ದಿನ ತನ್ನ ಜೊತೆಗೆ ಮದ್ಯಪಾನ ಮಾಡಲು ವಿಶ್ವಾಸ್ ರೂಪೇಶ್​ನನ್ನು ಆಹ್ವಾನಿಸಿ ಬಾರ್​ಗೆ ಕರೆದೊಯ್ದ. ಅಲ್ಲಿ ಅವನಿಗೆ ಕಂಠಪೂರ್ತಿ ಮದ್ಯಪಾನ ಮಾಡಿಸಿದ. ಆನಂತರ ಅವನನ್ನು ಮನೆಗೆ ಬಿಡುತ್ತೇನೆಂದು ತನ್ನ ಕಾರಿನಲ್ಲೇ ಕರೆದೊಯ್ದ. ಹಾದಿಯಲ್ಲಿ ಕಾರನ್ನೇರಿದ ವಿಶ್ವಾಸ್​ನ ಸಂಗಡಿಗರು ಹಿಂದಿನ ಸೀಟಿನಲ್ಲಿ, ಮತ್ತೇರಿ ಕುಳಿತಿದ್ದ ರೂಪೇಶನ ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿದರು. ಆನಂತರ ಶವವನ್ನು ವಿನಿತಳ ಮನೆಗೆ ತಂದರು. ಆಕೆ ಗಾಬರಿಯಾದಳು. ತನ್ನ ಮನೆಗೆ ಶವ ತರದಿರಲು ಆಕೆ ಹೇಳಿದಾಗ ವಿಶ್ವಾಸನ ಸ್ನೇಹಿತನ ಮನೆಗೆ ತೆಗೆದುಕೊಂಡು ಹೋದರು. ವಿನಿತ ಆನಂತರ ತನ್ನ ಕಾರಿನಲ್ಲಿ ಅವರಿದ್ದ ಜಾಗಕ್ಕೆ ಹೋದಳು.

ಮುಂದೇನು ಮಾಡಬೇಕೆಂದು ಎಲ್ಲರೂ ರ್ಚಚಿಸತೊಡಗಿದರು. ರೂಪೇಶ್​ನ ಶವವನ್ನು ಕೊಳದಲ್ಲಿ ಎಸೆದು, ಆತ ಕಾಣೆಯಾಗಿದ್ದಾನೆಂದು ದೂರು ನೀಡಲು ಆರಂಭದಲ್ಲಿ ತೀರ್ಮಾನಿಸಲಾಯಿತು. ಹೀಗೆ ಮಾಡಿದರೆ ಶವವು ತೇಲಿಬರುತ್ತದೆ, ಅದರ ಪೋಸ್ಟ್​ಮಾರ್ಟಂ ಮಾಡಿದಾಗ ಕೊಲೆಯಾದದ್ದು ತಿಳಿದು ತೊಂದರೆಯಾಗಬಹುದೆಂದು ರ್ತಸಿ ಶವವನ್ನು ಛಿದ್ರಛಿದ್ರ ಮಾಡಿ ದೇಹದ ಭಾಗಗಳನ್ನು ಎಸೆಯಲು ನಿರ್ಧರಿಸಿದರು. ರೂಪೇಶ್ ಕಾಣೆಯಾಗಿರುವ ಬಗ್ಗೆ ಯಾರಿಗೂ ತಿಳಿಸುವುದೇ ಬೇಡ ಎಂದಳು ವಿನಿತ. ನಂತರ ಎಲ್ಲರೂ ಸೇರಿಕೊಂಡು ಬಾತ್​ರೂಂನಲ್ಲಿ ದೇಹವನ್ನು ಆರು ಭಾಗಗಳನ್ನಾಗಿ ಕತ್ತರಿಸಿದರು. ಹತ್ತಿರದ ಮಾರುಕಟ್ಟೆಯಿಂದ ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಿ ತಂದು ದೇಹದ ತುಂಡುಗಳನ್ನು ಪ್ಯಾಕ್ ಮಾಡಿ ವಿನಿತಳ ಕಾರಿನಲ್ಲಿ ರಾತ್ರಿ ಊರ ಹೊರಗೆ ಹೋಗಿ ಶವದ ತಂಡುಗಳನ್ನು ಸುಮಾರು 30 ಕಿ.ಮೀ ಫಾಸಲೆಯಲ್ಲಿ ಬೇರೆ ಬೇರೆ ನಿರ್ಜನ ಸ್ಥಳಗಳಲ್ಲಿ ಎಸೆದು ವಾಪಸಾದರು.

ಐದು ದಿನಗಳ ಬಳಿಕ ಸ್ಥಳೀಯ ನ್ಯೂಸ್ ಚಾನೆಲ್​ವೊಂದರಲ್ಲಿ ಅಪರಿಚಿತ ಶವದ ಕಾಲು ಪೊಲೀಸರಿಗೆ ಸಿಕ್ಕಿದೆ ಎಂದು ವರದಿಯಾಯಿತು. ಅದನ್ನು ನೋಡಿದ ಹಂತಕರು ಗಾಬರಿಯಾಗಿ ಅದೇ ರಾತ್ರಿಯೇ ತಾವು ಶವದ ತುಂಡುಗಳನ್ನು ಎಸೆದಿದ್ದ ಜಾಗಗಳಿಗೆ ಹೋದರು. ಒಂದು ಕಾಲು ಹಾಗೂ ತಲೆಯ ಹೊರತಾಗಿ ಬೇರೆ ತುಂಡುಗಳು ಸಿಕ್ಕವು. ಅವನ್ನು ಕಾರಿನಲ್ಲಿ ಹಾಕಿಕೊಂಡು ಅವಕ್ಕೆ ಪೆಟ್ರೋಲ್ ಸುರಿದು ಸುಟ್ಟರು. ಆದರೆ ತಲೆಯ ಭಾಗವು ಸಿಗದ್ದು ಅವರನ್ನು ಚಿಂತೆಗೀಡುಮಾಡಿತ್ತು. ಹೀಗಾಗಿ ಮತ್ತೆ ಹುಡುಕಲು ಹೊರಟರು. ಕಡೆಗೂ ತಲೆ ಸಿಕ್ಕಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ತಲೆಯ ಗುರುತು ಸಿಗದಂತೆ ಮಾಡಿದರೆ ಕೃತ್ಯ ಬೆಳಕಿಗೆ ಬರುವುದಿಲ್ಲ ಎಂದು ಅವರು ಭಾವಿಸಿದ್ದರು. ಆನಂತರ ರೂಪೇಶ್​ನ ತಲೆಯನ್ನು ಸುಡಲು ತರುತ್ತಿರುವಾಗ ಆ ಜಾಗದಲ್ಲಿ ಪೊಲೀಸರು ಇರುವುದನ್ನು ನೋಡಿ ಗಾಬರಿಗೊಂಡು ತಲೆಯನ್ನು ರಸ್ತೆಯ ಪಕ್ಕದ ಪೊದೆಯಲ್ಲೆಸೆದರು. ಮಾರನೆಯ ದಿನವೇ ತಲೆ ಪತ್ತೆಯಾಯಿತು. ನಂತರ ಅದರ ಚಿತ್ರಗಳನ್ನು ತೆಗೆದು ಎಲ್ಲೆಡೆಯಲ್ಲಿಯೂ ಹಂಚಲಾಯಿತು. ಕೆಲ ದಿನಗಳ ನಂತರ ಅದು ರೂಪೇಶ್​ನದು ಎನ್ನುವುದು ಪತ್ತೆಯಾಯಿತು. ರೂಪೇಶ್​ನ ಮನೆಗೆ ಪೊಲೀಸರು ಬಂದು ವಿಚಾರಿಸಿದಾಗ, ವಿನಿತ ಹಾರಿಕೆಯ ಉತ್ತರಗಳನ್ನು ಕೊಟ್ಟಳು. ತಾನು ಶೂಟಿಂಗ್​ಗಾಗಿ ಹೊರಗೆ ಹೋಗಿದ್ದೆ, ಊರಿಗೆ ವಾಪಸಾದಾಗಿನಿಂದಲೂ ರೂಪೇಶ್ ಕಂಡಿಲ್ಲ. ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು ಎಂದಳು. ಪೊಲೀಸರಿಗೆ ಅವಳ ಬಗ್ಗೆ ಸಂಶಯ ಮೂಡಿತು. ಪೊಲೀಸರು ರೂಪೇಶ್​ನ ಸೆಲ್ ಫೋನ್ ಲೊಕೇಷನ್ ಸರ್ಚ್​ಗೆ ಹಾಕಿದಾಗ ಅದು ಸ್ವಿಚ್ ಆಫ್ ಆಗುವ ಮೊದಲು ಅದೇ ಊರಿನ ಬಡಾವಣೆಯೊಂದರಲ್ಲಿತ್ತೆಂದು ತಿಳಿಯಿತು. ವಿನಿತಳ ಸೆಲ್​ಫೋನ್ ವಿವರಗಳನ್ನು ಪರಿಶೀಲಿಸಿದಾಗ ಆಕೆ ಒಂದು ಸೆಲ್ ಫೋನಿನ ಜತೆಗೆ ನಿರಂತರ ಸಂಭಾಷಣೆಯಲ್ಲಿದ್ದುದಾಗಿ ತಿಳಿಯಿತು. ಆ ಫೋನ್ ವಿಶ್ವಾಸ್​ಗೆ ಸೇರಿದ್ದು ಎಂದು ತಿಳಿದು ಆತನನ್ನು ಕರೆಸಿ ವಿಚಾರಣೆ ಮಾಡಿದಾಗ ಸತ್ಯವು ಹೊರಬಂದಿತು.

ವಿಶ್ವಾಸ್​ನ ಮನೆಯನ್ನು ಶೋಧಿಸಿದಾಗ ಅಲ್ಲಿ ರೂಪೇಶ್​ನ ಫೋನ್, ವಾಚ್ ಹಾಗೂ ಬಟ್ಟೆಗಳು ದೊರೆತವು. ವಿಶ್ವಾಸ್​ನ ಮತ್ತು ವಿನಿತಳ ಕಾರುಗಳು ಶವದ ಭಾಗಗಳು ಸಿಕ್ಕ ಜಾಗಗಳ ಆಸುಪಾಸಿನಲ್ಲಿದ್ದುದು ಸಿಸಿಟಿವಿ ದೃಶ್ಯಗಳ ಮೂಲಕ ತಿಳಿಯಿತು. ಒಂದು ದೃಶ್ಯದಲ್ಲಿ ವಿಶ್ವಾಸ್​ನ ಕಾರಿನಿಂದ ಚೀಲವೊಂದನ್ನು ಬಿಸಾಡಿದ್ದು ಕಂಡು ಬಂದಿತು. ತಪ್ಪನ್ನು ಇಬ್ಬರೂ ಒಪ್ಪಿಕೊಂಡು ಷಡ್ಯಂತ್ರದ ಇತರ ಪಾಲುದಾರರ ಹೆಸರುಗಳನ್ನು ಹೇಳಿದರು. ಸುಂದರ್ ಎನ್ನುವವನ ಮನೆಯಿಂದ ರಕ್ತಸಿಕ್ತ ಆಯುಧಗಳನ್ನು ಜಪ್ತಿ ಮಾಡಲಾಯಿತು. ಒಟ್ಟಾರೆ ಐದು ಜನರ ಮೇಲೆ ಆರೋಪಪಟ್ಟಿ ಸಲ್ಲಿಸಲಾಯಿತು. ವಿಚಾರಣೆಯು ಇನ್ನೂ ನಡೆಯುತ್ತಿದೆ. ‘ಕೊಲೆಯ ಉಗಮವಾಗುವುದು ಪ್ರೀತಿಯಿಂದಲೇ, ಪ್ರೀತಿಯು ತನ್ನ ಅತಿ ಹೆಚ್ಚಿನ ತೀವ್ರತೆಯನ್ನು ಕೊಲೆಯಿಂದಲೇ ಪಡೆಯುತ್ತದೆ’ ಎನ್ನುತ್ತಾನೆ ಪ್ರಸಿದ್ಧ ಫ್ರೆಂಚ್ ಲೇಖಕ ಆಕ್ಟೇವ್ ಮೀರ್​ಬೋ. ವಿನಿತ ಹಾಗೂ ವಿಶ್ವಾಸ್​ನ ಪ್ರೀತಿಯೇ ಇದಕ್ಕೆ ನಿದರ್ಶನವೇನೋ...

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net