ನಮ್ಮ ನಮ್ಮಲ್ಲಿ: ಸುಖದ್ದೂ ಅಲ್ಲದ ದುಃಖವೂ ಇಲ್ಲದ ಮಧ್ಯಕಾಲ!

edit 2
Published on

‘ಆಮೇಲಿಂದ ಅವರು ಸುಖವಾ...ಗಿದ್ರು’ ಅಂತ ಅನೇಕ ಕತೆಗಳು ಮುಗಿಯುತ್ತವೆ. ಏಕೆಂದರೆ, ಒಂದು ಕಷ್ಟ ಕಳೆದ ಮೇಲೆ ನಾವೆಲ್ಲ ಶಾಶ್ವತವಾಗಿ ಸುಖವಾಗಿರ್ತೀವಿ ಅನ್ನೋ ನಂಬಿಕೆ ನಮ್ಮದಾಗಿರುತ್ತದೆ. ನಮ್ಮ ಪರಿಚಯದ ಯಾರೋ ಹುಡುಗಿ. ಅವಳ ಮದುವೆಗೆ ಹೋಗಿರುತ್ತೇವೆ. ಹುಡುಗ ಚೆನ್ನಾಗಿದ್ದಾನೆ, ಒಳ್ಳೇ ನೌಕರಿಯಲ್ಲಿದ್ದಾನೆ ಅಂತೆಲ್ಲ ಕೇಳಿರುತ್ತೇವೆ, ನೋಡಿರುತ್ತೇವೆ. ಆಯ್ತು ಬಿಡು, ಹುಡುಗಿ ಸುಖವಾಗಿರ್ತಾಳೆ ಇನ್ಮೇಲೆ ಅಂದುಕೊಳ್ಳುತ್ತೇವೆ. ಅವಳು ಕಣ್ಣೆದುರಿಗಿರುವುದಿಲ್ಲವಾದ್ದರಿಂದ ‘ಸುಖವಾಗಿದ್ದಿರಬೇಕು ಬಿಡು’ ಅಂತಲೂ ಅಂದುಕೊಳ್ಳುತ್ತೇವೆ. ಸುಖವೆಂಬುದು ಜೀವನಪರ್ಯಂತ ಇರುವ ಸ್ಥಾಯೀ ಸ್ಥಿತಿ ಅಂದುಕೊಳ್ಳುತ್ತೇವೆಯಾದ್ದರಿಂದ ನಮಗೆ ಹೀಗನ್ನಿಸುತ್ತಿರುತ್ತದೆ.

ಆದರೆ, ಪರೀಕ್ಷಿಸಿ ನೋಡಿ. ನಮ್ಮ ಬದುಕಿನ ನಿಜವಾದ ಉನ್ಮತ್ತ ಸುಖದ ಕ್ಷಣಗಳು ಕೆಲವೇ ಇರುತ್ತವೆ. ‘On the top of the world’ ಅಂತ ಚೀತ್ಕರಿಸಿ ಆನಂದಿಸುವ ದಿನಗಳು ತುಂಬ ಇರುವುದಿಲ್ಲ. ಉಲ್ಲಾಸವೆಂಬುದು ಕೂಡ ಬದುಕಿನ ಒಂದು small patch ಅಷ್ಟೆ. ಮನೆ ಕಟ್ಟಿದ ದಿನ, ಮದುವೆಯಾದ ದಿನ, ಕಾರು ಕೊಂಡ ದಿನ, ಮಗಳು ಪಾಸಾದ ದಿನ, ಪ್ರಶಸ್ತಿ ಬಂದ ದಿನ, ಪ್ರಮೋಷನ್ ಸಿಕ್ಕಿದ ದಿನ-ಇಂಥ ಬೆರಳೆಣಿಕೆಯ ದಿನಗಳಷ್ಟೆ ನಮ್ಮನ್ನು ಸುಖ, ಸಂತೋಷದ ತುದಿಗೆ ಒಯ್ದಿರುತ್ತವೆ. ಉಳಿದಂತೆ ಬದುಕು ಒಂದು ದೊಡ್ಡ odd sizeನ ಬೂಟಿನೊಳಕ್ಕೆ ಕಾಲು ಸಿಗೆಹಾಕಿಕೊಂಡಿದೆಯೆಂಬಂತೆ ಕಾಲೆಳೆಯುತ್ತ ಸಾಗುತ್ತಿರುತ್ತದೆ. ಅದೇ ರೂಟೀನು. ಅವೇ ಜನ. ಅವವೇ ಕೆಲಸಗಳá- huge bore!

ಮೊನ್ನೆ ಸಿಕ್ಕ ಹಳೆಯ ಗೆಳತಿ ಇದನ್ನೇ ಹೇಳುತ್ತಿದ್ದಳು. ‘ಏನೂ ಚಾಮ್ರ್ ಇಲ್ಲ ಕಣೋ. ಲೈಫ್ ತುಂಬ ಡ್ರೖೆ ಆಗ್ತಿದೆ ಅನ್ಸುತ್ತೆ. ಏನೂ ಘಟಿಸ್ತಾನೇ ಇಲ್ಲ. ನಿನ್ನೆ ಬೆಳಗ್ಗೆಗೂ, ಹತ್ತು ವರ್ಷಗಳ ಹಿಂದಿನ ಬೆಳಗ್ಗೆಗೂ ವ್ಯತ್ಯಾಸವೇ ಇಲ್ಲ. ಹಾಗೆ ನೋಡಿದರೆ ನಿನ್ನ ಜೀವನ ತುಂಬ ಇವೆಂಟ್​ಫುಲ್ ಅಲ್ವಾ? ಹೊಸ ಸುದ್ದಿ, ಹೊಸ ಬರವಣಿಗೆ, ಹೊಸ ಜನರನ್ನ

ಮೀಟ್ ಮಾಡ್ತೀಯ, ಹೊಸ ಊರುಗಳು, ಕಾರ್ಯಕ್ರಮಗಳು, ಸಾಹಸಗಳು, ಹೊಸ ಜಗಳ- ಪ್ರತೀದಿನ ನಿನ್ನ ಪಾಲಿಗೆ ನಿತ್ಯ ನೂತನವಾಗಿರುತ್ತೆ’ ಅನ್ನೋ ಥರಾ ಮಾತನಾಡಿದಳು.

‘ಒಂದೇ ಒಂದು ಸಲ ಭಾನುವಾರ ಬೆಳಗ್ಗೆ ನನ್ನ ಆಫೀಸಿಗೆ ಬಂದು ನೋಡು. ನನ್ನ ಪುಟ್ಟ ಕ್ಯುಬಿಕಲ್​ನೊಳಕ್ಕೆ ಕೈಲಿ ಪೆನ್ನು ಹಿಡಿದುಕೊಂಡು ಹೋಗಿ ಕುರ್ಚಿಯ ಮೇಲೆ ಸ್ಥಾಪಿತನಾಗುವುದನ್ನು ಗಮನಿಸು. ಆಮೇಲೆ ಪ್ರತೀದಿನ, ಅಂದರೆ ಮುಂದಿನ ಶುಕ್ರವಾರ ಸಾಯಂಕಾಲದ ತನಕ ಯಾವ ಹೊತ್ತಿಗಾದರೂ ಬಂದು ನೋಡು. ಅದೇ ಸ್ಥಿತಿಯಲ್ಲಿ ಇರುತ್ತೇನೆ. ಅದೇ ಭಂಗಿಯಲ್ಲಿ. ಬರೀ... ತಾನೇ ಇರ್ತೀನಿ! ಕೇವಲ ಐದು ಅಡಿ ದೂರದಲ್ಲಿ ಮಂಚವಿದೆ. ಏಳು ಅಡಿ ದೂರದಲ್ಲಿ ಬಾತ್​ರೂಮ್ ಇದೆ. ಇಷ್ಟು ಬಿಟ್ಟರೆ ನೆತ್ತಿಯ ಮೇಲಿನ ಟೆರೇಸಿಗೂ ಹತ್ತಿ ಹೋಗಲು ಬಿಡುವಾಗದೆ ಅನೇಕ ದಿನ ಈ ಕೋಣೆಯಿಂದ ಹೊರಕ್ಕೇ ಬರಲಾಗದೆ ಒಬ್ಬನೇ ಉಳಿದುಬಿಟ್ಟಿರುತ್ತೇನೆ. ಇದನ್ನ ನೀನು ಇವೆಂಟ್​ಫುಲ್ ಬದುಕು ಅನ್ನುತ್ತೀಯಾ? ಇದಕ್ಕಿಂತ ಹಗ್ ಬೋರ್ ಇನ್ನೊಂದಿದ್ದೀತೇ? ಮೈ ಫ್ರೆಂಡ್, ಚೆನ್ನಾಗಿ ಅರ್ಥ ಮಾಡಿಕೋ, ಯಾರ ಬದುಕೂ ರೂಟೀನ್​ನ ಗಾಣಕ್ಕೆ ಸಿಕ್ಕದೆ ಇರಲು ಸಾಧ್ಯವೇ ಇಲ್ಲ’ ಅಂದೆ. She was convinced.

ಈ ಸುಖದ್ದೂ ಅಲ್ಲದ, ದುಃಖದ್ದೂ ಅಲ್ಲದ ಭಯಂಕರ ಏಕತಾನತೆಯ ರೂಟೀನ್ ಇದೆಯಲ್ಲ? ಇದನ್ನು ಸೃಷ್ಟಿಸಿಕೊಂಡವರು ನಾವೇ. ಸಾಕಷ್ಟು ಇಷ್ಟಪಟ್ಟೇ ಸೃಷ್ಟಿಸಿಕೊಂಡಿರುತ್ತೇವೆ. ಆದರೂ ಇದು ಬೋರಾಗುತ್ತಿರುತ್ತದೆ. ತುಂಬ ಪ್ರೀತಿಸಿ ಇಷ್ಟಪಟ್ಟು ಮದುವೆ ಮಾಡಿಕೊಂಡ ಗಂಡ ಕೂಡ ಬೋರಾದಂತೆ. ಕನ್ನಡಿಯ ಮುಂದೆ ತಾಸುಗಟ್ಟಲೆ ಕುಳಿತರೆ, ನಮಗೆ ನಾವೇ ಬೋರಾಗುತ್ತೇವೆ. ಹಾಗಂತ ಈ ರೂಟೀನು ತಪ್ಪಿಸಿಕೊಂಡು ನೋಡಿ? ನಾನು ದೇಶ-ವಿದೇಶ ತಿರುಗಿ ಬಂದಿರುತ್ತೇನಲ್ಲ, ಬೆಂಗಳೂರು ಸಾಕಾಗಿರುತ್ತದೆ. ಎಲ್ಲೋ ದೂರಕ್ಕೆ ಹೋಗಿ ಒಂದು ನಿಶ್ಶಬ್ದದಲ್ಲಿ, ಕತ್ತಲಲ್ಲಿ, ಬೆಟ್ಟದ ತುದಿಯಲ್ಲಿ, ಅದರ ಮೌನದಲ್ಲಿ ಲೀನವಾಗಿ ನಿಂತು ಬಂದಿರುತ್ತೇನೆ. ಏಕ್ದಮ್ ಆರಾಮ್ ಅನ್ನಿಸುವ ಕಡೆ,Excite ಆಗಿಸುವಂಥ ಜಾಗೆಗಳಿಗೆ ಹೋಗಿ ಬಂದಿರುತ್ತೇನೆ. ಆದರೆ ವಿಮಾನ ಇಳಿದು ಬೆಂಗಳೂರಿನ ರಕ್ಕಸ ಬೀದಿಗಳ ಗುಂಟ ಬಂದು ನನ್ನ ಕಾರು ಇನ್ನೇನು ದೇವೇಗೌಡರ ಪೆಟ್ರೋಲ್ ಬಂಕ್ ದಾಟಿ ಪದ್ಮನಾಭನಗರಕ್ಕೆ ತಿರುಗಿಕೊಂಡಿತು ಅಂದಾಗ, ಯಾಕೋ ಗೊತ್ತಿಲ್ಲ ಮನಸ್ಸು ಉಲ್ಲಸಿತ ಗೊಂಡುಬಿಡುತ್ತದೆ. ‘ಸದ್ಯ ಬಂದೆ’ ಅನ್ನಿಸತೊಡಗುತ್ತದೆ. ಇದೇ ಕ್ಯೂಬಿಕಲ್, ಮೇಜು, ಇದೇ ಕೂತು ಬರೆಯುವ ಭಂಗಿ ಇಷ್ಟವಾಗಿಬಿಡುತ್ತದೆ. ‘ಊರೂರು ತಿರುಗಿದರೂ ನಮ್ಮೂರೇ ವಾಸಿ’ ಎಂಬ ಮಾತು ಸತ್ಯವೆನ್ನಿಸುತ್ತದೆ. ರೂಟೀನ್​ನಲ್ಲಿ ಇರುವ ಸೌಖ್ಯವೇ ಅಂತಹುದು. ಬೇಕು ಬೇಕು ಬೇಕು ಅಂದುಕೊಂಡ ಬದಲಾವಣೆ ಕೂಡ ‘ಸಾಕು ಸಾಕು’ ಅನ್ನಿಸಿ ನಮ್ಮನ್ನು ರೂಟೀನಿಗೆ ಹಿಂತಿರುಗುವಂತೆ ಮಾಡುತ್ತದೆ. ಅಂದಮೇಲೆ, ರೂಟೀನ್​ನಲ್ಲಿ ಸುಖವಿದೆ ಅಂತ ತಾನೇ ಅರ್ಥ? ಎಂಥ ಜಗತ್ಪ್ರಸಿದ್ಧ ನಟ ಕೂಡ ಈ ರೂಟೀನಿಗೆ ಬೀಳಲೇಬೇಕು. ಅವನ ಬದುಕು ಪ್ರತಿನಿತ್ಯ ಆಸ್ಕರ್ ಪ್ರಶಸ್ತಿ ಸ್ವೀಕರಿಸುವಷ್ಟು ಇವೆಂಟ್​ಫುಲ್ ಆಗಿರುವುದಿಲ್ಲ. ಪ್ರಧಾನಮಂತ್ರಿಗೂ ಬದುಕಿನ ಏಕತಾನತೆ ಕಾಡುತ್ತದೆ. ಜಗತ್ತು ಸುತ್ತುವ ನಿರಂತರ ಯಾತ್ರಿ ಕೂಡ ರೂಮು, ಹೋಟೆಲು, ಏರ್​ಪೋರ್ಟು, ರೈಲು ನಿಲ್ದಾಣಗಳನ್ನು ಸ್ಥಾವರಗಳಂತೆ ಫೀಲ್ ಮಾಡತೊಡಗುತ್ತಾನೆ. ಜೋಗಿ ಜಂಗಮ, ಇವತ್ತು ಇಲ್ಲಾದರೆ ನಾಳೆ ಎಲ್ಲೋ ಅಂತ ಬದುಕುವ ಮನುಷ್ಯ ಕೂಡ ಈ ಅಲೆಮಾರಿತನದ ಏಕತಾನತೆಗೆ ಬೀಳುತ್ತಾನೆ. ತುಂಬ ಆಸೆಪಟ್ಟು ಏರ್​ಹೋಸ್ಟೆಸ್ ಆದವಳಿಗೂ ವಿಮಾನ ಇಳಿದರೆ ಸಾಕು ಅನ್ನಿಸತೊಡಗುತ್ತದೆ.

ಹೀಗಾಗಿ, ಯಾರೂ ‘ಸುಖವಾ....ಗಿರ್ತಾರೆ’ ಅಂದು ಕೊಳ್ಳಬೇಡಿ. ಸುಖದ ಬೋರಿಗಿಂತ ದೊಡ್ಡ ಬೋರಿಲ್ಲ. ಬದಲಾವಣೆಗಳು ತಾವಾಗೇ ಬರುತ್ತವೆ ಅಂತ ಕಾಯುತ್ತ ಕೂಡಬೇಡಿ. ಬದಲಾವಣೆಗಳನ್ನು ಸಾಕಷ್ಟು ಪ್ಲಾನ್ ಮಾಡಿ, ತಂದಿಟ್ಟುಕೊಳ್ಳಿ. ಇನ್ನು ಒಂದು ವರ್ಷದ ನಂತರ ಈ ಬದುಕು ಹೀಗಿರಬಾರದು ಅಂತ ಇವತ್ತೇ ನಿರ್ಧರಿಸಿ, ಅದಕ್ಕಾಗಿ ಕೆಲಸ ಮಾಡಲಾರಂಭಿಸಿ. ಬೇಕೆನ್ನಿಸಿದಾಗ ಉಲ್ಲಾಸಕ್ಕೆ ತೆರೆದಿಟ್ಟುಕೊಳ್ಳಲು ಸಾಧ್ಯವಾಗುವಂತೆ ಬದುಕಿ. ಖುಷಿ ಕೊಡುವ ಸಂಗೀತ, ಅಪರೂಪದ ಗೆಳೆಯರು, ಚಪ್ಪರಿಸಿಕೊಂಡು ಓದಬಹುದಾದಂಥ ಪುಸ್ತಕ, ಒಂದು ಲಾಂಗ್ ಡ್ರೖೆವ್, ಯಾರೊಂದಿಗೋ ಫೋನಿನಲ್ಲಿ ಹತ್ತು ನಿಮಿಷದ ಮಾತು, ಗೆಳೆಯನಿಗೆ ದೀರ್ಘ ಪತ್ರ ಬರೆಯುವ ಸಂತೋಷ-ಇವು ಸಾಕು ಬದುಕಿನ monotony ಮುರಿಯಲು. ಮೇಲಿಂದ ಮೇಲೆ ಸುಖ ಬರುತ್ತಿರಲಿ ಅಂತ ಆಸೆಪಡುವವರು ಜೂಜಿಗೆ, ಕುಡಿತಕ್ಕೆ, ಹೆಂಗಸರ ಬೇಟೆಗೆ ಬೀಳುತ್ತಾರೆ. ಅದು ಕೂಡ ನಿತ್ಯ ಸುಖವಲ್ಲ. ಕುಡಿತದಂತಹವು ಬಿಡಲಾಗದ ಚಟಗಳಾಗುತ್ತವಾದ್ದರಿಂದ ನಿತ್ಯ ಕುಡಿಯಬೇಕೇ ಹೊರತು, ಅದರಲ್ಲಿನ ‘ಸುಖ’ ಕೂಡ ಸತ್ತುಹೋಗಿ, ಅದೂ ರೂಟೀನ್ ಆಗಿಬಿಟ್ಟಿರುತ್ತದೆ. ಆರಂಭದಲ್ಲಿ ಹೇಳಿದೆನಲ್ಲ: ಮನೆ ಕಟ್ಟುವುದು, ಮದುವೆ, ಕಾರು ತೆಗೆದುಕೊಳ್ಳುವುದು, ಪ್ರಮೋಷನ್ನು ಸಿಗುವುದು-ಇವೆಲ್ಲ ಬದುಕಿನಲ್ಲಿ ಅಪರೂಪಕ್ಕೆ ಘಟಿಸುವ ವಿಶೇಷ ಸಂತಸದ ಘಟನೆಗಳು. ಇವು ದುಃಖದಷ್ಟೇ ಅಪರೂಪದ್ದವು. ದುಃಖ ಕೂಡ ನಮ್ಮ ಬದುಕಿನಲ್ಲಿ ಸದಾ ಇರುವಂಥದ್ದಲ್ಲ. ಸಾವುಗಳು, ಅನಾರೋಗ್ಯ, ನೌಕರಿ ಕಳೆದುಕೊಳ್ಳುವಿಕೆ, ಮೋಸ ಹೋಗುವುದು-ಇವು ಕೂಡ ಯಾವಾಗಲೋ ಒಮ್ಮೆ ಸಂಭವಿಸುತ್ತವೆ. ಇಂಥ ಸುಖ ಮತ್ತು ದುಃಖಗಳ ನಡುವಿನ ‘ಏನೂ ಘಟಿಸದ’ ಕಾಲವಿದೆಯಲ್ಲ ಅದು ತುಂಬ ಸುದೀರ್ಘ, ತುಂಬ ಬೋರಿಂಗ್ ಮತ್ತು ತುಂಬ ಅನಿವಾರ್ಯ ಸ್ಥಿತಿ. ಆ ಸ್ಥಿತಿಯಲ್ಲಿರುವ ನಾವು ಸಣ್ಣಸಣ್ಣ ಸಂತೋಷಗಳನ್ನ, ರೂಟೀನ್​ನಲ್ಲಿರುವ ಮಜವನ್ನ, ರುಚಿಯನ್ನ ಸವಿಯದಿದ್ದರೆ ಬದುಕು ನಿಜಕ್ಕೂ ದುರ್ಭರವಾಗಿಬಿಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net