ಜಿಐ ಉತ್ಪನ್ನಗಳಿಗೆ ಅಮೃತಕಾಲ; ಮೈಸೂರಿಗೆ ದೊರೆಯಲಿದೆ ಹೆಚ್ಚಿನ ಲಾಭ

GI Tag
Published on

ರಾಜ್ಯದಲ್ಲಿಯೇ ಅತಿ ಹೆಚ್ಚು ಜಿಯೋಗ್ರಾಫಿಕಲ್ ಇಂಡಿಕೇಷನ್ (ಜಿಐ ಟ್ಯಾಗ್) ಉತ್ಪನ್ನಗಳನ್ನು ಹೊಂದಿರುವ ಜಿಲ್ಲೆ ಮೈಸೂರು. ಕೆಲವು ಜಿಐ ಉತ್ಪನ್ನಗಳು ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದ್ದರೂ ಇನ್ನೂ ಕೆಲವು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಯಾಗಿಲ್ಲ. ಕೆಲವು ಉತ್ಪನ್ನಗಳಿಗೆ ಬೇಡಿಕೆ ಇದ್ದರೂ ಉತ್ಪಾದನೆ ಪ್ರಮಾಣ ತೀರಾ ಕಡಿಮೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಕಡೆಗೆ ಕೇಂದ್ರ ಸರ್ಕಾರ ಚಿತ್ತ ಹರಿಸಿದೆ. ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ಜಿಐ ಟ್ಯಾಗ್ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ನೀಡುವ ಘೊಷಣೆ ಮಾಡಿರುವುದು ಹೊಸ ಭರವಸೆ ಮೂಡಿಸಿದೆ. ‘ಒಂದು ಜಿಲ್ಲೆ ಒಂದು ಉತ್ಪನ್ನ’ ವಸ್ತುಗಳು ಹಾಗೂ ಜಿಐ ಟ್ಯಾಗ್ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ‘ಅಮೃತಕಾಲ’ದ ಬಜೆಟ್​ನಲ್ಲಿ ಘೊಷಿಸಿದ್ದಾರೆ. ಯೂನಿಟಿ ಮಾಲ್ ಸ್ಥಾಪನೆಗೊಂಡರೆ ಮಾರುಕಟ್ಟೆ ಸಮಸ್ಯೆ ಎದುರಿಸುತ್ತಿರುವ ಜಿಐ ಟ್ಯಾಗ್ ಉತ್ಪನ್ನಗಳ ಮಾರಾಟಕ್ಕೆ ಉತ್ತಮ ವೇದಿಕೆ ದೊರೆಯುವ ನಿರೀಕ್ಷೆ ಇದೆ.

ಏನಿದು ಜಿಐ ಟ್ಯಾಗ್?: ಜಿಐ ಟ್ಯಾಗ್ ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಎಂದರ್ಥ. ಅಂದರೆ, ಇದು ಭೌಗೋಳಿಕ ಸೂಚ್ಯಂಕ ಟ್ಯಾಗ್. ಒಂದು ಉತ್ಪನ್ನದ ಭೌಗೋಳಿಕ ವಿಶೇಷತೆಯನ್ನು ಮಾನ್ಯ ಮಾಡಲು ಜಿಐ ಟ್ಯಾಗ್ ನೀಡಲಾಗುತ್ತದೆ. ಒಂದು ಉತ್ಪನ್ನದ ಮೂಲ ಯಾವ ಪ್ರದೇಶದ್ದು, ಎಂಬುದು ಇದರಿಂದ ತಿಳಿಯುತ್ತದೆ. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಅಂತಾರಾಷ್ಟ್ರೀಯ ಬೌದ್ಧಿಕ ಹಕ್ಕುಗಳನ್ನು ಕಾಪಾಡಲು ಇಂಥದ್ದೊಂದು ವ್ಯವಸ್ಥೆ ರೂಪಿಸಿದೆ. 1999ರಲ್ಲಿ ಸರಕುಗಳ ನೋಂದಣಿ ಮತ್ತು ರಕ್ಷಣೆಗೆ ಭೌಗೋಳಿಕ ಸೂಚನೆಗಳ ಕಾಯ್ದೆ ರೂಪಿಸಿತು. ದೇಶದಲ್ಲಿ 2003ರ ಸೆಪ್ಟೆಂಬರ್​ನಲ್ಲಿ ಈ ಕಾಯ್ದೆ ಜಾರಿಗೆ ಬಂತು. ಕೃಷಿ, ಕರಕುಶಲ, ಆಹಾರ ವಸ್ತು, ಔದ್ಯಮಿಕ ಉತ್ಪನ್ನ, ಮದ್ಯ ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗುತ್ತದೆ. ಒಂದು ಉತ್ಪನ್ನದ ಹಕ್ಕು ಮತ್ತು ಪೇಟೆಂಟ್ ರಕ್ಷಿಸಲು ಈ ಟ್ಯಾಗ್ ಸಹಾಯ ಮಾಡುತ್ತದೆ. ಡಾರ್ಜಿಲಿಂಗ್ ಟೀ ದೇಶದಲ್ಲಿ ಜಿಐ ಟ್ಯಾಗ್ ಪಡೆದ ಮೊದಲ ಉತ್ಪನ್ನ.

ಜಿಐ ಟ್ಯಾಗ್​ನಿಂದ ಲಾಭವೇನು?: ಯಾವುದೇ ಒಂದು ವಸ್ತು ಭೌಗೋಳಿಕ ಸೂಚ್ಯಂಕ ಪಡೆದು ಕೊಂಡರೆ ಅದರ ಜನಪ್ರಿಯತೆ ಹೆಚ್ಚಾಗಿ ಆ ಉತ್ಪನ್ನ ಒಂದು ಬ್ರಾ್ಯಂಡ್ ಆಗಿ ರೂಪುಗೊಳ್ಳುತ್ತದೆ. ಯಾವುದೇ ಉತ್ಪನ್ನ ಬ್ರಾ್ಯಂಡ್ ಆಗಿ ರೂಪುಗೊಂಡಾಗ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗು ತ್ತದೆ. ಅಲ್ಲದೆ, ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ವಿಶಿಷ್ಟ ಸ್ಥಾನ ಪಡೆಯಲು ಸಹಕಾರಿ ಯಾಗುತ್ತದೆ. ಹಾಗಾಗಿ ಆ ಉತ್ಪನ್ನ ಗಳನ್ನು ಬೆಳೆಯುವ, ತಯಾರಿಸುವ ಕೃಷಿಕರು, ಕರಕುಶಲಕರ್ವಿುಗಳಿಗೆ ಉತ್ತಮ ಆದಾಯ ದೊರೆತು ಅವರ ಜೀವನ ಮಟ್ಟ ಸುಧಾರಿಸಲು ಮಹತ್ವದ ಕೊಡುಗೆ ಯನ್ನು ಜಿಐ ಟ್ಯಾಗ್ ನೀಡಲಿದೆ.

ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಬರುವ ಜಿಐ ಉತ್ಪನ್ನಗಳಾದ ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆಗೆ ಉತ್ತಮ ಮಾರುಕಟ್ಟೆ ಇದೆ. ಆದರೆ, ಬೇಡಿಕೆಗೆ ತಕ್ಕಷ್ಟು ಉತ್ಪನ್ನ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಒಂದು ವೇಳೆ ಉತ್ಪಾದನೆ ಪ್ರಮಾಣ ಹೆಚ್ಚಾದರೆ ಹೊಸ ಮಾರುಕಟ್ಟೆ ಕಂಡುಕೊಳ್ಳುವ ಅವಶ್ಯಕತೆ ಇದೆ. ಆ ಸಂದರ್ಭ ಕೇಂದ್ರ ಸರ್ಕಾರ ಘೊಷಿಸಿದ ಯೂನಿಟಿ ಮಾಲ್ ನೆರವಿಗೆ ಬರುವ ನಿರೀಕ್ಷೆ ಇದೆ. | ಕೆ. ರುದ್ರೇಶ್ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಮೈಸೂರು

ಜನಪ್ರಿಯಗೊಳಿಸುವ ಕಾರ್ಯವಾಗಲಿ: ಜಿಐ ಟ್ಯಾಗ್ ಹೊಂದಿರುವ ಉತ್ಪನ್ನಗಳಿಗೆ ತನ್ನದೇ ಆದ ಮಹತ್ವ ಇದ್ದು, ಅದನ್ನು ಇಡೀ ಜಗತ್ತಿಗೆ ತಿಳಿಸುವ ಕಾರ್ಯ ಆಗಬೇಕು. ಚನ್ನಪಟ್ಟಣದ ಗೊಂಬೆ ಮಾರುಕಟ್ಟೆಯನ್ನು ಜಾಗತಿಕವಾಗಿ ವಿಸ್ತರಿಸಲು ನಡೆಯುತ್ತಿರುವ ಪ್ರಯತ್ನದ ಮಾದರಿಯಲ್ಲಿಯೇ ಮೈಸೂರು ಜಿಐ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಸುವ ಅವಶ್ಯಕತೆ ಇದ್ದು, ಇದಕ್ಕೆ ಹೆಚ್ಚಿನ ಪ್ರಚಾರ ನೀಡಿ ಜನರಿಗೆ ಜಿಐ ಉತ್ಪನ್ನಗಳ ಮಹತ್ವ ತಿಳಿಸಿಕೊಡುವ ಕಾರ್ಯ ಆಗಬೇಕು. ಈ ಬಾರಿ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅಮೃತಕಾಲದ ಮೊದಲ ಬಜೆಟ್. ‘ಅಮೃತಕಾಲ’ ಎಂಬುದು ವೇದ ಕಾಲದಿಂದಲೂ ಬಳಕೆಯಲ್ಲಿರುವ ಪದ. ಅಮೃತ ಕಾಲ ಎಂದರೆ ಮಂಗಳಕರ ಸಮಯ ಎಂಬ ಅರ್ಥವಿದೆ. ಜಿಐ ಉತ್ಪನ್ನಗಳ ಪಾಲಿಗೂ ಅಮೃತಕಾಲ ನಿರ್ವಣವಾಗಲಿ ಎಂಬುದು ಎಲ್ಲರ ಆಶಯವಾಗಿದೆ.

ರಾಜ್ಯದ ಪಾಲು ಹೆಚ್ಚು: ದೇಶದಲ್ಲಿ 400ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ನೀಡಲಾಗಿದೆ. ಈ ಪೈಕಿ ದಕ್ಷಿಣ ರಾಜ್ಯಗಳು ಹೆಚ್ಚಿನ ಜಿಐ ಟ್ಯಾಗ್ ಉತ್ಪನ್ನಗಳನ್ನು ಹೊಂದಿವೆ. ಕರ್ನಾಟಕ 42 ಉತ್ಪನ್ನಗಳು ಜಿಐ ಟ್ಯಾಗ್ ಹೊಂದಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ 35, ತಮಿಳುನಾಡು ಹಾಗೂ ಕೇರಳ 30ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ಹೊಂದಿವೆ. ದಕ್ಷಿಣ ರಾಜ್ಯಗಳನ್ನು ಬಿಟ್ಟರೆ ಮಹಾರಾಷ್ಟ್ರ, ಗುಜರಾತ್, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮಬಂಗಾಳ ಹೆಚ್ಚು ಜಿಐ ಟ್ಯಾಗ್​ಗಳನ್ನು ಹೊಂದಿವೆ. ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಮೈಸೂರು ಸಿಲ್ಕ್, ನಂಜನಗೂಡು ರಸಬಾಳೆ, ಮೈಸೂರು ಸ್ಯಾಂಡಲ್ ಆಯಿಲ್, ಮೈಸೂರು ಸ್ಯಾಂಡಲ್ ಸೋಪ್, ಇನ್ಲೆ ಕಲೆ, ಗಂಜೀಫಾ ಕಾರ್ಡ್, ಮೈಸೂರು ಅಗರ್​ಬತ್ತಿ, ಮೈಸೂರು ಸಾಂಪ್ರದಾಯಿಕ ಕಲೆ ಜಿಐ ಟ್ಯಾಗ್ ಪಡೆದುಕೊಂಡಿವೆ. ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಿಐ ಉತ್ಪನ್ನಗಳು ಮೈಸೂರಿನಲ್ಲಿರುವ ಹಿನ್ನೆಲೆಯಲ್ಲಿ ಈ ಯೋಜನೆಯ ದೊಡ್ಡ ಲಾಭವನ್ನು ಮೈಸೂರು ಪಡೆಯಲಿದೆ. ಅದೇ ರೀತಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಮೈಸೂರಿನ ಬಾಳೆ ಬೆಳೆಯನ್ನು ಈಗಾಗಲೆ ಆಯ್ಕೆ ಮಾಡಲಾಗಿದ್ದು, ಇದಕ್ಕೆ ಉತ್ತಮ ಮಾರುಕಟ್ಟೆ ದೊರೆಯುವ ನಿರೀಕ್ಷೆ ಇದೆ.

ಜಿಐ ಟ್ಯಾಗ್ ಹೊಂದಿರುವ ರಾಜ್ಯದ ಉತ್ಪನ್ನಗಳು: ಮೈಸೂರು ರೇಷ್ಮೆ; ಮೈಸೂರು ಅಗರಬತ್ತಿ; ಮೈಸೂರು ವೀಳ್ಯದೆಲೆ; ನಂಜನಗೂಡಿನ ರಸಬಾಳೆ; ಮೈಸೂರು ಮಲ್ಲಿಗೆ; ಮೈಸೂರು ಗಂಧದ ಎಣ್ಣೆ; ಮೈಸೂರು ಸ್ಯಾಂಡಲ್ ಸೋಪ್; ಮೈಸೂರು ಗಂಜಿಫಾ ಕಲೆ; ಬೆಂಗಳೂರು ನೀಲಿ ದ್ರಾಕ್ಷಿ; ಬೆಂಗಳೂರು ಕೆಂಪು ಉಳ್ಳಗಡ್ಡಿ; ಕೊಡಗು ಹಸಿರು ಏಲಕ್ಕಿ; ಕೊಡಗು ಕಿತ್ತಳೆ ಹಣ್ಣು; ರಾಮನಗರ ಚೆನ್ನಪಟ್ಟಣದ ಬೊಂಬೆಗಳು; ದೇವನಹಳ್ಳಿಯ ಚಕ್ಕೋತ ಹಣ್ಣು; ಕಮಲಾಪುರದ ಕೆಂಪು ಬಾಳೆಹಣ್ಣು; ಸಂಡೂರಿನ ಬಂಜಾರ ಕಸೂತಿ; ಧಾರವಾಡ ಪೇಡ; ಬಾಗಲಕೋಟೆಯ ಇಳಕಲ್ ಸೀರೆ; ಬ್ಯಾಡಗಿ ಮೆಣಸಿನಕಾಯಿ; ಕಿನ್ನಾಳದ ಆಟಿಕೆಗಳು; ಶಿವಮೊಗ್ಗದ ಅಪ್ಪೆ ಮಿಡಿ; ಉಡುಪಿ ಮಲ್ಲಿಗೆ; ಮೈಸೂರಿನ ಚಿತ್ರಕಲೆ; ಉಡುಪಿಯ ಮತ್ತಿ ಗುಳ್ಳ ಬದನೇಕಾಯಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net