ಅವರೆಲ್ಲ ಹೃದಯದಲ್ಲೇ ಭಗವಂತನನ್ನು ಪ್ರತಿಷ್ಠಾಪಿಸಿಬಿಟ್ಟರು..

Jarur Mathu
Published on
ಜೀವನದ ಬಗ್ಗೆ ಗಹನವಾಗಿ ಯೋಚಿಸುತ್ತ ಹೋದಂತೆಲ್ಲ ಅಂತಿಮ ಸತ್ಯವನ್ನು ಕಂಡುಕೊಳ್ಳುವ ಜಿಜ್ಞಾಸೆ ಹೆಚ್ಚುತ್ತ ಹೋಗುತ್ತದೆ. ಲೌಕಿಕ ಪಥದಲ್ಲಿ ಸವೆಸಿದ ಹೆಜ್ಜೆಗಳು ನಿರರ್ಥಕ ಎನಿಸತೊಡಗುತ್ತವೆ. ಇದರ ಅರಿವು ಕೆಲವರಿಗೆ ವಿಳಂಬವಾಗಿಯಾದರೆ, ಮತ್ತೆ ಹಲವರಿಗೆ ಜೀವನದ ಪ್ರಮುಖಘಟ್ಟದಲ್ಲೇ ಆಗುತ್ತದೆ. ಅದಕ್ಕೆಂದೆ ಹಲವರು ತುಂಬು ಯೌವನದ ಘಟ್ಟದಲ್ಲೇ ಎಲ್ಲವನ್ನೂ ತೊರೆದು ಅಧ್ಯಾತ್ಮ ಪಥವನ್ನು, ಸಂನ್ಯಾಸತ್ವವನ್ನು ಸ್ವೀಕರಿಸುತ್ತಿದ್ದಾರೆ. ಮಾಯೆಗಳೆಲ್ಲ ಆವರಿಸಿಕೊಂಡು ಮನಸ್ಸನ್ನು ಆಳುವ ಹೊತ್ತಲ್ಲಿ ಆ ಬಂಧನಗಳನ್ನೆಲ್ಲ ಕಿತ್ತೊಗೆದು, ಇಂದ್ರಿಯನಿಗ್ರಹ ಸಾಧಿಸುವುದಿದೆಯಲ್ಲ ಅದು ಸುಲಭವಾದದ್ದೇನಲ್ಲ. ಜೈನ ಪಂಥದಲ್ಲಿ ಉಚ್ಚಶಿಕ್ಷಿತರು, ಸಿರಿವಂತ ವರ್ಗದವರು ತಾರುಣ್ಯದ ಹಂತದಲ್ಲೇ ಎಲ್ಲವನ್ನೂ ತೊರೆದು ಅಧ್ಯಾತ್ಮದ ಮಾರ್ಗ ತುಳಿಯುತ್ತಿರುವ ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ.

ಹಾಗೆ ನೋಡಿದರೆ, ನಮ್ಮಲ್ಲಿ ಭಕ್ತ-ಸಂತ-ಭಗವಂತ ಎಂಬುದು ತ್ರಿವೇಣಿ ಸಂಗಮದಂತೆ. ಇವರಲ್ಲಿರುವ ಭಾವಬೆಸುಗೆಯೇ ಭೂಲೋಕದ ಕೆಡುಕುಗಳನ್ನು ನಾಶಮಾಡುತ್ತಿದೆ. ಇಲ್ಲೇ ವೈಕುಂಠ ನಿರ್ವಿುಸುತ್ತಿದೆ. ಭಕ್ತನಿಲ್ಲದೆ ಸಂತ ಇರಲಾರ, ಸಂತ ಇಲ್ಲದೆ ಭಗವಂತ ಇಲ್ಲ! ಇದೆಲ್ಲವೂ ಅಂತಃಕರಣದಲ್ಲಿ ಹುಟ್ಟಿ, ಹೃದಯದಲ್ಲಿ ಅರಳಿ, ಮಾನವೀಯ ಮೌಲ್ಯ, ಪ್ರೇಮವನ್ನು ಸಾರುವ ಸಂಬಂಧಗಳು. ಸಂತರ ಬದುಕು, ಅವರ ವಾಣಿ, ಶಕ್ತಿ ನಮ್ಮಲ್ಲಿ ಅಸಂಖ್ಯ ಜನರ ಜೀವನವನ್ನೇ ಬದಲಾಯಿಸಿದೆ. ನಿಜವಾಗಿ ಸಾಗಬೇಕಾದ ಪಥವನ್ನು ದರ್ಶಿಸಿದೆ. ಅಷ್ಟಕ್ಕೂ ಅಧ್ಯಾತ್ಮ ಎಂಬುದು ಜಟಿಲವಾದದ್ದೇನಲ್ಲ. ಜಗತ್ತಿನ ಸಂಪರ್ಕ ಕಳೆದುಕೊಂಡು ಹಿಮಾಲಯದಲ್ಲೇ ಹೋಗಿ ಕುಳಿತು, ತಪಸ್ಸು ಮಾಡಬೇಕು ಅಂತಲ್ಲ. ಯಾರಿಗೂ ನೋವು ಮಾಡದಂತೆ ಆದರ್ಶವಾಗಿ ಬದುಕುವ ಶುದ್ಧ ಪ್ರೇಮ, ಎಲ್ಲರ ಹಿತವನ್ನು ಬಯಸುತ್ತ, ಅದಕ್ಕಾಗಿ ಶ್ರಮಿಸುವ ಸಮರ್ಪಣೆ, ಒಳ್ಳೆಯತನಕ್ಕೆ ಸದಾ ತುಡಿಯುವ ಹೃದಯ... ಈ ಮೌಲ್ಯಗಳಿದ್ದರೆ ನಾವು ಸರಿಯಾದ ಅಥವಾ ಅಧ್ಯಾತ್ಮದ ಪಥದಲ್ಲಿದ್ದೇವೆ ಎಂದರ್ಥ. ಈ ಶುದ್ಧಭಾವವಿದ್ದರೆ ನಾವು ಭಗವಂತನನ್ನು ಅರಸಿ ಹೋಗಬೇಕಿಲ್ಲ, ಭಗವಂತನೇ ನಾವಿದ್ದಲಿಗೆ ಬಂದು, ಕೈಹಿಡಿದು ಮುನ್ನಡೆಸುತ್ತಾನೆ.

ಹೌದು, ಎಲ್ಲರಿಗೂ ಅಧ್ಯಾತ್ಮದ ಎತ್ತರವನ್ನು ತಲುಪಿ ಅಂತಿಮ ಸತ್ಯವನ್ನು ಅರಿಯಲು ಅಥವಾ ಆ ಭಗವಂತನನ್ನು ಕಾಣಲು ಸಾಧ್ಯವಿಲ್ಲ. ಅದಕ್ಕೆಂದೆ, ಭಗವಂತನನ್ನೇ ನಮ್ಮ ಹೃದಯಮಂದಿರಗಳಲ್ಲಿ ಪ್ರತಿಷ್ಠಾಪಿಸುವ, ಆ ಮೂಲಕ ಸದಾ ಆನಂದದ ಬಾಳು ಸಾಗಿಸಲು ಅವಕಾಶ ನೀಡಿರುವ ಸಂಜೀವಿನಿ ಶಕ್ತಿಯೇ ಭಕ್ತಿ! ಭಕ್ತಿ ಹೆಚ್ಚಿದಷ್ಟು ಮನಸ್ಸಿನ, ವ್ಯಕ್ತಿತ್ವದ ಕಲ್ಮಶಗಳು ಒಂದೊಂದಾಗಿ ಮರೆಯಾಗುತ್ತವೆ. ಭಕ್ತಿ ಎಂಬುದು ಬರೀ ಭಾವಾನಂದವಲ್ಲ. ಭಕ್ತಿ ಎಂದರೆ ಬದಲಾವಣೆಯ ದೊಡ್ಡ ಅಸ್ತ್ರ. ಅದರಲ್ಲಿ ಸಮಾಜವಿಜ್ಞಾನವೂ ಇದೆ. ಮನೋವಿಜ್ಞಾನದ ಸಿದ್ಧಾಂತವೂ ಇದೆ. ಆಪ್ತತೆಯ ಸಿಹಿ ಇದೆ, ಭರವಸೆಯ ಬೆಳ್ಳಿಕಿರಣ ಇದೆ. ಹಾಗಾಗಿಯೇ ನಮ್ಮಲ್ಲಿ ಭಕ್ತಿಪರಂಪರೆ ನಿರಂತರ ಪ್ರವಾಹದಂತೆ ಹರಿದುಬರುತ್ತ, ಅಸಂಖ್ಯ ಜನರ ಬದುಕನ್ನು ಸಾರ್ಥಕಗೊಳಿಸಿದೆ.

ಭಕ್ತಿಯ ಬೀಜ ಒಮ್ಮೆ ಹೃದಯದಲ್ಲಿ ಬಿತ್ತಿದರೆ ಸಾಕು... ಮುಂದಿನ ಬದಲಾವಣೆಗಳು ಅದ್ಭುತ. ‘ನಾನು’ ಎಂಬ ಅಹಂ ಕರಗಿ ಹೋಗಿ ‘ನಾವು’ ಎಂಬ ಸಮಷ್ಟಿ ಭಾವ ಆವರಿಸಿಕೊಳ್ಳುತ್ತದೆ. ‘ನನಗಾಗಿ ಬದುಕಬೇಕು’ ಎಂಬ ಸ್ವಾರ್ಥ ಮರೆಯಾಗಿ, ‘ಎಲ್ಲರ ಹಿತಕ್ಕಾಗಿ ಬದುಕಬೇಕು’ ಎಂಬ ಸಂಕಲ್ಪ ಒಡಮೂಡುತ್ತದೆ. ಬರುವಾಗ ಏನೂ ತಂದಿಲ್ಲ, ಹೋಗುವಾಗ ಏನೂ ಕೊಂಡೊಯ್ಯುವುದೂ ಇಲ್ಲ. ಇರುವಷ್ಟು ದಿನ ಪ್ರೀತಿ, ಮಮತೆ, ದಯೆ, ವಾತ್ಸಲ್ಯ, ಕರುಣೆಯಂಥ ಸುಂದರ ಮೌಲ್ಯಗಳನ್ನೇ ಹಂಚಬೇಕು ಹೊರತು ದ್ವೇಷ, ದುರಾಸೆ, ಸ್ವಾರ್ಥವನ್ನಲ್ಲ ಎಂಬ ಅರಿವಿನ ಬೆಳಕು ಕಾಣಿಸಿಕೊಳ್ಳುತ್ತದೆ. ಭಕ್ತಿ ಎಂದರೆ ನಮ್ಮನ್ನು ನಾವು ಅರಿತುಕೊಳ್ಳುವ ಪ್ರಕ್ರಿಯೆಯೂ ಹೌದು, ಈ ಎಲ್ಲ ಸೃಷ್ಟಿಯ ಹಿಂದಿರುವ ಶಕ್ತಿಯ ಉಪಾಸನೆಯೂ ಹೌದು. ಈ ಭಕ್ತಿಗೆ, ಅದು ವ್ಯಕ್ತವಾಗುವ ಭಾವಗಳಿಗೆ ಹಲವು ಹೆಸರುಗಳಿದ್ದರೂ ಭಕ್ತಿ ಎಂಬುದು ಪ್ರೇಮದ ಚೈತನ್ಯವೇ. ಹಾಗಾಗಿ, ನಮ್ಮ ಸಂತಪರಂಪರೆ ಭಕ್ತಿ ಆಂದೋಲನವನ್ನೇ ನಡೆಸಿತು.

ಸಂತ ಜ್ಞಾನೇಶ್ವರರು 1300 ವರ್ಷಗಳ ಹಿಂದೆ ಆರಂಭಿಸಿದ ವಾರಿ ಎಂಬ ಕಾಲ್ನಡಿಗೆಯ ಯಾತ್ರೆ ಇಂದು ಜಗದ ಬೆರಗಾಗಿ, ಸಾಮಾಜಿಕ ಬದಲಾವಣೆಯ ಮಾಧ್ಯಮವಾಗಿ ಬದಲಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಕಾಲ್ನಡಿಗೆಯಲ್ಲಿ ಪಂಢರಪುರ ಪಾಂಡುರಂಗನ ದರ್ಶನಕ್ಕೆ ಹೋಗಬೇಕಾದರೆ ಆ ಭಕ್ತ-ಭಗವಂತನ ಸಮಾಗಮವನ್ನು ನೋಡುವುದೇ ಚೆಂದ (ಈ ವರ್ಷ ಕರೊನಾ ಸೋಂಕಿನ ಹಾವಳಿಯಿಂದ ಸಾಂಕೇತಿಕ ವಾರಿ ಮಾತ್ರ ನಡೆಯುತ್ತಿದೆ). ಒಂದಿಡೀ ವರ್ಷ ಆ ಪಾಂಡುರಂಗನ ಭೇಟಿಗಾಗಿ ಕಾದು, ವಾರಿಯಲ್ಲಿ ಒಟ್ಟಾಗುವ ಲಕ್ಷಾಂತರ ಮನಸ್ಸುಗಳು ಪ್ರೇಮ ಮತ್ತು ವಾತ್ಸಲ್ಯದ ಅತ್ಯಂತ ದೊಡ್ಡ ವಿಶ್ವವಿದ್ಯಾಲಯ. ಇಲ್ಲಿ ಕಲಿಯುವ ಪಾಠ ಲೌಕಿಕ ಬದುಕಿಗೂ, ಅಧ್ಯಾತ್ಮ ಸಾಧನೆಗೂ ದಾರಿದೀಪ. ಇವರ ಜಾತಿ, ಧರ್ಮ, ಹೆಸರು ಒಂದೇ ಅದು ಮಾವುಲಿ. ಮಾವುಲಿ ಅಂದರೆ ಮರಾಠಿಯಲ್ಲಿ ತಾಯಿ. ಮಹಾರಾಷ್ಟ್ರದ ಆರಾಧ್ಯದೈವವಾಗಿರುವ ಪಾಂಡುರಂಗ ವಿಠ್ಠಲನನ್ನು ಅಲ್ಲಿನ ಜನರು ತಂದೆ-ತಾಯಿ ಎಂದೇ ಸಂಬೋಧಿಸುತ್ತಾರೆ. ಸಂತ ಜ್ಞಾನೇಶ್ವರರು ಮೊದಲು ಪಾಂಡುರಂಗನನ್ನು ಮಾವುಲಿ ಎಂದು ಕರೆದರು. ಇದು ಈಗ ಪರಂಪರೆಯಾಗಿಯೇ ಬೆಳೆದಿದ್ದು, ಯಾತ್ರೆಯಲ್ಲಿ ಯಾರೂ ಅವರ ಹೆಸರಿನಿಂದ ಕರೆಯುವುದಿಲ್ಲ. ಎಲ್ಲರೂ ಇಲ್ಲಿ ಮಾವುಲಿಗಳೇ. ನೋಡಿ, ಇಡೀ ಜಗತ್ತು, ಜನರೇ ತಾಯಿಯಾಗಿಬಿಟ್ಟರೆ ಸ್ವಾರ್ಥ, ದುಃಖಕ್ಕೆ ಎಲ್ಲಿದೆ ಜಾಗ!

ಜಗದೊಡೆಯ ಶ್ರೀಕೃಷ್ಣನು ಮಣಿದಿದ್ದು ಇದೇ ಭಕ್ತಿಗಲ್ಲವೇ... ಸುಧಾಮ ನೀಡಿದ ಒಂದು ಹಿಡಿ ಅವಲಕ್ಕಿ ಕೃಷ್ಣನ ಹೃದಯವನ್ನೇ ಗೆದ್ದಿತು. ನೀಡಲು ತನ್ನ ಬಳಿ ಏನಿದೆ ಎಂದು ಯೋಚಿಸುವ ಅಸಂಖ್ಯ ಜನರಿಗೆ- ಶುದ್ಧಭಕ್ತಿಯೇ ಭಗವಂತನಿಗೆ ಸಮರ್ಪಣೆ ಮಾಡಬೇಕು ಎಂಬ ಸಂದೇಶ ಸುಧಾಮ-ಕೃಷ್ಣರ ಸ್ನೇಹಪ್ರಸಂಗದಿಂದ ಹೊಮ್ಮುತ್ತದೆ. ಶ್ರೀಕೃಷ್ಣನ ತುಲಾಭಾರದ ವೇಳೆ ಎಷ್ಟು ಹಾಕಿದರೂ ಸಮನಾಗದ ತಕ್ಕಡಿ ಪಾರಿಜಾತದ ಒಂದು ಹೂವಿನಿಂದ ಮೇಲೇರಿತು. ಮರ್ಯಾದಾ ಪುರುಷೋತ್ತಮ ಶ್ರೀರಾಮನೂ ಅಷ್ಟೇ. ತನ್ನ ವನವಾಸಕ್ಕೆ ಕಾರಣಳಾದ ಮಂಥರೆಯ ಮೋಹವನ್ನು ಮನ್ನಿಸಿದ. ಮಂಥರೆ ಪಶ್ಚಾತಾಪ ಪಟ್ಟು, ರಾಮಭಕ್ತಿ ತೋರಿದಾಗ, ‘ನೀನೂ ನನ್ನ ತಾಯಿಯಂತೆ, ನಿನಗೆ ಕ್ಷಮಿಸಲು ನಾನಾರು...?’ ಎಂದು ಮರುಪ್ರಶ್ನಿಸಿ ಭಕ್ತಿಯ ಶ್ರೇಷ್ಠತೆಯನ್ನು ಎತ್ತಿಹಿಡಿದ. ಶಬರಿ ಕೊಟ್ಟ ಹಣ್ಣನ್ನು ತಿಂದು, ಆ ಮಾತೆಯತ್ತ ಕರುಣಾದೃಷ್ಟಿ ಬೀರಿದಾಗ, ಭಗವಂತನಿರುವುದು ಮಹಲುಗಳಲ್ಲಲ್ಲ, ಬಡವರ ಗುಡಿಸಲುಗಳಲ್ಲೇ ಎಂಬ ಸತ್ಯದರ್ಶನ ಮಾಡಿಸಿದ. ಶ್ರೀರಾಮಕೃಷ್ಣ ಪರಮಹಂಸರಂತೂ ಕಾಳಿಮಾತೆ ಜತೆ ಸಂವಾದ ನಡೆಸಿದರು, ಬಾಲರಾಮನ ಜತೆ ನಡೆದಾಡಿದರು, ಏಸುವಿನ ರೂಪವನ್ನೂ ತಳೆದರು! ಭಕ್ತಿರಸವನ್ನು ಸಾಮಾನ್ಯರಿಗೂ ಉಣಬಡಿಸಿದರು.

ಸಮರ್ಥ ರಾಮದಾಸರು ಶಿವಾಜಿಯನ್ನು ಶಿಷ್ಯನಾಗಿ ಸ್ವೀಕರಿಸಿದ್ದು, ಸಂತ ತುಕಾರಾಮರು ಬಡವರ ಮನೆಯಲ್ಲೇ ಪ್ರಸಾದ ಸ್ವೀಕರಿಸುತ್ತಿದ್ದದ್ದು ಭಕ್ತಿಯನ್ನು ಗಮನಿಸಿಯೇ. ಸ್ವಾಮಿ ಸಮರ್ಥರು ಲೌಕಿಕದ ಅವಮಾನಗಳನ್ನು ಸಹಿಸಿದರೂ, ಸದಾ ಭಕ್ತರ ಬೆನ್ನಿಗೆ ನಿಲ್ಲುತ್ತಿದ್ದರು, ಅವರ ಕಷ್ಟಗಳನ್ನು ನಿವಾರಿಸುತ್ತಿದ್ದರು/ನಿವಾರಿಸುತ್ತಿದ್ದಾರೆ. ಅದಕ್ಕೆಂದೆ ಸ್ವಾಮಿ ಸಮರ್ಥರು ನೀಡಿರುವ ಅಭಯ ವಾಣಿ- ‘ಭೀವು ನಕೋಸ್ ಮೀ ತುಝಾ ಪಾಠೀಶೀ ಆಹೆ’ (ಹೆದರಬೇಡ, ನಾನು ನಿನ್ನ ಜತೆಗಿದ್ದೇನೆ).

ಸಂತ ಗಜಾನನ್ ಮಹಾರಾಜರು, ಸೃಷ್ಟಿಯ ಕಣಕಣದಲ್ಲೂ ದೈವತ್ವದ ಅಂಶವಿದೆ ಎಂದು ಸಾರಿ, ಅದನ್ನು ಜೀವನಮಾರ್ಗವಾಗಿಸಿಕೊಳ್ಳಲು ಭಕ್ತಿಯೇ ಸಾಧನ ಎಂದು ಸಾರಿದರು. ಅನ್ನದ ಅಗುಳಿನಲ್ಲಿ ಪರಬ್ರಹ್ಮನನ್ನು ಕಂಡರು. ಸಂತ ಏಕನಾಥ ಮಹಾರಾಜರು ಭಕ್ತಿಯ ಪಥದಲ್ಲಿ ಮೋಕ್ಷದ ಹಾದಿಯನ್ನು ದರ್ಶಿಸಿದರು. ದಾಸ ಪರಂಪರೆಯ ಪುರಂದರದಾಸರು, ಕನಕದಾಸರು ಭಕ್ತಿಯ ಮತ್ತಷ್ಟು ಮಜಲುಗಳನ್ನು ಪರಿಚಯಿಸಿದರು.

ಸಂತ ಜನಾಬಾಯಿಯ ಭಕ್ತಿಯಂತೂ ಅದೆಷ್ಟು ಗಾಢವಾಗಿತ್ತೆಂದರೆ ಇವಳ ಕಷ್ಟ, ಕೆಲಸದ ಹೊರೆ ನೋಡಲಾರದೆ ಪಾಂಡುರಂಗನೇ ನೆರವಿಗೆ ಧಾವಿಸಿ ಬರುತ್ತಿದ್ದ. ನದಿಯಿಂದ ನೀರು ತರುವುದು, ಬಟ್ಟೆ ತೊಳೆಯುವುದು, ಧಾನ್ಯಗಳನ್ನು ಬೀಸುವುದು, ಅಡುಗೆ ಮಾಡುವುದು... ಹೀಗೆ ಹಲವು ಕೆಲಸಗಳಲ್ಲಿ ಭಗವಂತನೇ ನೆರವಾಗುತ್ತಿದ್ದ. ಇದು ಆಗಿನ ಜನರಿಗೆ ನಂಬಲು ಅಸಾಧ್ಯ ಎನಿಸಿ, ಜನಾಬಾಯಿ ಶಕ್ತಿ ಬಗ್ಗೆ ಅನುಮಾನ ಪಟ್ಟಿದ್ದೂ ಉಂಟು. ಆಗಲೂ, ಭಕ್ತೆಯ ನೆರವಿಗೆ ಧಾವಿಸಿ ಪ್ರಕಟವಾಗುತ್ತಿದ್ದ ಪಾಂಡುರಂಗ ಎಲ್ಲರಿಗೂ ದರ್ಶನ ನೀಡಿ ಅವರ ಆತ್ಮೋದ್ಧಾರಗೈಯುತ್ತಿದ್ದ. ಸಂತ ತುಕಾರಾಮರ ಅಭಂಗಗಳನ್ನು ಹಾಡುತ್ತ ಹಾಡುತ್ತ ಅವರನ್ನು ಸಾಕ್ಷಾತ್ಕರಿಸಿಕೊಂಡ ಬಹಿಣಾಬಾಯಿ ಸ್ತ್ರೀಕುಲಕ್ಕೆ ಹೊಸ ಜೀವನದರ್ಶನ ಮಾಡಿಸಿದರು. ಇಂಥ ಸಂತರನ್ನು, ಗುರುಗಳನ್ನು ಹೊಂದಿದ ಭಾರತದಲ್ಲಿ ಭಕ್ತಿಯ ಪ್ರಭೆ ಎಂದೂ ಮಸುಕಾಗದು. ಯಾಕೋ ಕಾಲ ಕೆಡುತ್ತಿದೆ ಎಂದೆನಿಸಿದಾಗ ಈ ಜೀವರಾಗ ಮತ್ತೆ ಹೊಮ್ಮಬೇಕು. ಭಕ್ತಿ ಕಡಿಮೆಯಾದಾಗ ತಾನೇ ವಿಕೃತಿ ತಲೆದೋರುವುದು. ಹಾಗಾಗಿಯೇ, ಹೃದಯದ ಕಲ್ಮಶಗಳನ್ನೆಲ್ಲ ಕಿತ್ತೆಸೆಯಬೇಕು. ಆಗಲೇ, ಸಂತ-ಮಹಂತರಂತೆ, ಮಹಾನ್ ಸಾಧಕರು, ತಪಸ್ವಿಗಳಂತೆ ನಾವೂ ಹೃದಯದಲ್ಲೇ ಭಗವಂತನನ್ನು ಪ್ರತಿಷ್ಠಾಪಿಸಿಕೊಂಡು, ಲೌಕಿಕ ಬದುಕಿನಲ್ಲೇ ದೈವತ್ವದತ್ತ ಸಾಗಬಹುದು.

ಮನಸ್ಸು ಭಾರವಾದಾಗ, ಸಂಕಷ್ಟಗಳು ದೊಡ್ಡದೆನಿಸಿದಾಗ, ಸಾಂತ್ವನಿಸುವವರು ಯಾರೂ ಇಲ್ಲ ಎಂದೆನಿಸಿದಾಗ ಒಮ್ಮೆ ಆ ಶಕ್ತಿಯೊಡನೆ ತಾದಾತ್ಮ್ಯ ಹೊಂದಲು ಪ್ರಯತ್ನಿಸಿದರೆ ಸಾಕು, ಎಲ್ಲವೂ ಸಲೀಸಾಗುತ್ತದೆ. ಸಮಸ್ಯೆಗಳು ಎಷ್ಟೇ ದೊಡ್ಡದಿರಲಿ ಅದಕ್ಕೆ ಪರಿಹಾರ ಅಧ್ಯಾತ್ಮದಲ್ಲಿ ಇದ್ದೇ ಇದೆ. ಅದಕ್ಕೆಂದೆ, ಭರತಭೂಮಿ ಪುಣ್ಯಭೂಮಿ ಎನಿಸಿಕೊಂಡಿದೆ. ನಮ್ಮ ಮನಸ್ಸು ಹಾಗೆ ನಿರ್ಮಲವಾದಾಗ, ಅದುವೇ ಭಗವಂತನ ಸಾಮೀಪ್ಯ!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net